ಪ್ರಶ್ನಿಸುವ ಹಕ್ಕಿದೆ; ಬೆದರಿಸುವ ಅಧಿಕಾರವಿಲ್ಲ
‘ಬಸವ ಮಂಟಪ’ ಪುಸ್ತಕದ ಕುರಿತು ಎದ್ದಿರುವ ವಿವಾದವನ್ನೂ ಇದೇ ದೃಷ್ಟಿಯಿಂದ ನೋಡಬೇಕಿದೆ. ಹಲವು ಕೃತಿಗಳನ್ನು ಪ್ರಕಟಿಸಿರುವ ರವಿ ಹಂಜ್ ಅವರ ಬರಹವನ್ನು ವಿಮರ್ಶಿಸುವಾಗ ಅದರಲ್ಲಿರುವ ನಿರ್ದಿಷ್ಟ ವಿಚಾರಗಳನ್ನು ಆಧಾರವಾಗಿಟ್ಟುಕೊಳ್ಳಬೇಕು. ಲೇಖಕರನ್ನಾಗಲಿ, ಅವರ ಲೇಖನಗಳನ್ನು ಪ್ರಕಟಿಸಿದ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರನ್ನಾಗಲಿ ವೈಯಕ್ತಿಕ ವಾಗಿ ದೂಷಿಸುವುದು ಸಮರ್ಥನೀಯವಲ್ಲ.
-
ಪ್ರಸ್ತುತ
ಕೆ.ರಾಧಾಕೃಷ್ಣ ಹೊಳ್ಳ
ಸಚಿವರಾಗಲಿ, ಸ್ವಾಮೀಜಿಗಳಾಗಲಿ, ಯಾರೇ ಆಗಲಿ- ಬರಹದಲ್ಲಿನ ತಪ್ಪುಗಳನ್ನು ಪ್ರಶ್ನಿಸಲು, ವಿಮರ್ಶಿಸಲು ಮತ್ತು ತಿದ್ದುಪಡಿ ಆಗಬೇಕೆಂದು ಒತ್ತಾಯಿಸಲು ಹಕ್ಕಿದೆ. ಆದರೆ ಆ ಹಕ್ಕು ಯಾರನ್ನಾದರೂ ವೈಯಕ್ತಿಕವಾಗಿ ಬೆದರಿಸಲು, ನಿಂದಿಸಲು ಅಥವಾ ಅವಹೇಳನ ಮಾಡಲು ಅವಕಾಶ ನೀಡುವುದಿಲ್ಲ. ಭಿನ್ನಾಭಿಪ್ರಾಯಕ್ಕೆ ಉತ್ತರ ವಿಚಾರಗಳ ಮೂಲಕ ಬರಬೇಕು.
‘ಬಸವ ಮಂಟಪ’ ಪುಸ್ತಕದ ಕುರಿತು ಎದ್ದಿರುವ ವಿವಾದವನ್ನೂ ಇದೇ ದೃಷ್ಟಿಯಿಂದ ನೋಡಬೇಕಿದೆ. ಹಲವು ಕೃತಿಗಳನ್ನು ಪ್ರಕಟಿಸಿರುವ ರವಿ ಹಂಜ್ ಅವರ ಬರಹವನ್ನು ವಿಮರ್ಶಿಸುವಾಗ ಅದರಲ್ಲಿರುವ ನಿರ್ದಿಷ್ಟ ವಿಚಾರಗಳನ್ನು ಆಧಾರವಾಗಿಟ್ಟುಕೊಳ್ಳಬೇಕು. ಲೇಖಕರನ್ನಾಗಲಿ, ಅವರ ಲೇಖನಗಳನ್ನು ಪ್ರಕಟಿಸಿದ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರನ್ನಾಗಲಿ ವೈಯಕ್ತಿಕ ವಾಗಿ ದೂಷಿಸುವುದು ಸಮರ್ಥನೀಯವಲ್ಲ.
ಲೇಖಕರ ವಿದ್ಯಾಭ್ಯಾಸ ಅಥವಾ ಧಾರ್ಮಿಕ ಹಿನ್ನೆಲೆಯೊಂದೇ ಬರಹದ ಸತ್ಯಾಸತ್ಯತೆಯನ್ನು ನಿರ್ಧರಿಸುವು ದಿಲ್ಲ; ಅದನ್ನು ನಿರ್ಧರಿಸಬೇಕಾದದ್ದು ಆಧಾರ, ಅಧ್ಯಯನ ಮತ್ತು ತರ್ಕ. ಈ ಬರಹಗಳು ಈ ಹಿಂದೆಯೇ ಪತ್ರಿಕೆಯಲ್ಲಿ ಹಲವು ಕಂತುಗಳಾಗಿ ಪ್ರಕಟವಾಗಿದ್ದವು ಎನ್ನುವಾಗ, ಅವುಗಳಲ್ಲಿ ಧರ್ಮದ ತಪ್ಪು ವ್ಯಾಖ್ಯಾನವೋ, ಯಾವುದೇ ಸಮುದಾಯದ ಘನತೆಗೆ ಧಕ್ಕೆ ತರುವ ಅಂಶಗಳೋ ಕಂಡಿದ್ದರೆ ಆಗಲೇ ಆಧಾರಸಹಿತ ಆಕ್ಷೇಪ ವ್ಯಕ್ತಪಡಿಸಬಹುದಿತ್ತು.
ಪ್ರತಿಲೇಖನ, ಸಾರ್ವಜನಿಕ ಚರ್ಚೆ ಅಥವಾ ಸ್ಪಷ್ಟೀಕರಣದ ಮೂಲಕ ವಿಷಯವನ್ನು ಜನರ ಮುಂದಿಡಬಹುದಿತ್ತು. ಅಗತ್ಯವೆನಿಸಿದರೆ ಸೂಕ್ತ ಕಾನೂನು ಪರಿಹಾರವನ್ನೂ ಕೋರಬಹುದಿತ್ತು. ಪ್ರಕಟಿತ ಲೇಖನಗಳು ಪುಸ್ತಕ ರೂಪ ಪಡೆದ ಬಳಿಕ ವೈಯಕ್ತಿಕ ನಿಂದನೆಗೆ ಇಳಿಯುವುದು ವಿಚಾರಪೂರ್ಣ ಚರ್ಚೆಗೆ ನೆರವಾಗುವುದಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಮತ್ತು ವೀರಶೈವ ಧಾರ್ಮಿಕ ವಿಷಯಗಳು ಸಾಮಾಜಿಕವಾಗಿಯೂ ರಾಜಕೀಯವಾಗಿಯೂ ಬಹಳ ಪ್ರಭಾವ ಹೊಂದಿವೆ. ಆದ್ದರಿಂದ ಇಂತಹ ವಿಷಯಗಳ ಕುರಿತು ಮಾತನಾಡುವ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಲೇಖಕರು ಹೆಚ್ಚಿನ ಸಂಯಮ ಹಾಗೂ ಹೊಣೆಗಾರಿಕೆ ತೋರಬೇಕು.
ಧಾರ್ಮಿಕ ಭಾವನೆಗಳನ್ನು ಗೌರವಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಶ್ನಿಸುವ ಹಕ್ಕನ್ನೂ ಗೌರವಿಸಬೇಕು. ಅಷ್ಟೊಂದು ಪುಸ್ತಕಗಳ ಓದಿ ಅದ್ಯಯನ ಮಾಡಿ ಬರೆದಿರುವ ಪುಸ್ತಕವನ್ನು ನ್ಯಾಯಲಯದಲ್ಲಿ ವಾದ ವಿವಾದ ನಡೆಯುವತನಕ ಅವಮಾನಿಸುವುದು ತಪ್ಪು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅತಿಥಿಗಳು ಸರ್ವಧರ್ಮ ಸಮಭಾವ, ಮಾನವೀಯತೆ ಮತ್ತು ದಯೆಯ ಮಹತ್ವವನ್ನು ಪ್ರಸ್ತಾಪಿಸಿದ್ದರೆ, ಆ ಸಂದೇಶದ ಹಿನ್ನೆಲೆಯಲ್ಲಿ ಸಂವಾದ ಮುಂದುವರಿಯಬೇಕು.
ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎನ್ನುವವರು ಸಂಬಂಧಿಸಿದ ಪುಟ, ಹೇಳಿಕೆ ಮತ್ತು ಅದಕ್ಕೆ ವಿರುದ್ಧವಾದ ಆಧಾರಗಳನ್ನು ಮುಂದಿಡಲಿ. ಆಗ ಚರ್ಚೆಗೆ ಸ್ಪಷ್ಟತೆಯೂ, ತಪ್ಪಿದ್ದರೆ ತಿದ್ದುಪಡಿಗೂ ಅವಕಾಶ ಸಿಗುತ್ತದೆ. ವಿವಿಧ ಗ್ರಂಥಗಳು ಮತ್ತು ವಿದ್ವಾಂಸರ ವಿಚಾರಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಕೃತಿಯನ್ನು ನೋಡಬಹುದೆಂಬುದು ನನ್ನ ಅನಿಸಿಕೆ. ಆ ಪ್ರಯತ್ನದಲ್ಲಿಯೂ ತಪ್ಪುಗಳಿರಬಹುದು; ಅವನ್ನು ತಿದ್ದಲು ವಿಮರ್ಶೆ ಅಗತ್ಯ. ಆದರೆ ವಿಮರ್ಶೆಯ ಉದ್ದೇಶ ತಿಳಿವಳಿಕೆ ಹೆಚ್ಚಿಸುವುದಾಗಿರಬೇಕು, ವ್ಯಕ್ತಿಯನ್ನು ನೋಯಿಸುವುದಾಗಬಾರದು.
ಸ್ವಾತಂತ್ರ್ಯದ ಎಂಟನೇ ದಶಕದಲ್ಲಿರುವ ನಾವು ಜಾತಿ ಭೇದಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬದಲು, ಅವುಗಳನ್ನು ಮೀರಿ ಸಮಾನತೆ ಮತ್ತು ಮಾನವ ಘನತೆಯ ಕುರಿತು ಚಿಂತಿಸಬೇಕಿದೆ. ಬಸವಣ್ಣನವರ ಸಮಾನತೆಯ ಆಶಯವನ್ನು ಗೌರವಿಸುವುದು ನಮ್ಮ ಮಾತು ಮತ್ತು ನಡವಳಿಕೆಯಲ್ಲಿಯೂ ಕಾಣಿಸಬೇಕು.
ಕೊನೆಯದಾಗಿ ಸರ್ವಜ್ಞನ ಮಾತು ನೆನಪಿಸಿಕೊಳ್ಳೋಣ: ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ, ನಡುವೆ ಎತ್ತಣದು ಸರ್ವಜ್ಞ.’ ನಾವು ನಡೆಯುವ ಭೂಮಿ, ಕುಡಿಯುವ ನೀರು ಮತ್ತು ಸುಡುವ ಬೆಂಕಿ ಒಂದೇ ಆಗಿರುವಾಗ, ನಮ್ಮ ನಡುವೆ ಜಾತಿ-ಕುಲಗೋತ್ರಗಳ ಭೇದವೇಕೆ? ಮಾನವೀಯತೆ ನಮ್ಮೆಲ್ಲರನ್ನೂ ಒಂದಾಗಿಸಲಿ ಎನ್ನುವುದು ಮೂಲತತ್ವ.