ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಸವ ಮಂಟಪ ವಿವಾದದ ಹಿಂದಿನ ದುರುದ್ದೇಶದ ಉರಿ

ಇಂದು ರವಿ ಹಂಜ್ ಎಡವಿದ್ದಾರೆ, ಅದು ಸತ್ಯ, ಆದರೆ ಈ ಸಮಯಕ್ಕಾಗಿ ಕಾಯುತ್ತಿದ್ದ ಅವಕಾಶವಾದಿ ಗಳು ಇಂದು ತುಳಿಯಲು ಪ್ರಯತ್ನಿಸುತ್ತಿರುವುದು ಮಾತ್ರ ಬೇರೆಯವರನ್ನು. ಈ ಅವಕಾಶವಾದಿಗಳಿಗೆ ರವಿ ಹಂಜಗಿಮಠ ನೆಪ ಮಾತ್ರ. ಆದರೆ ಇಂದು ಅವರ ಹೆಸರು ಹೇಳಿಕೊಂಡು, ಅವರ ತಪ್ಪಿನ ಅನಾವರಣ ಮಾಡುತ್ತ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಣೆಗೆ ಅಂಟಿಸಲು ಯತ್ನಿಸುತ್ತಿದ್ದಾರೆ.

ಬಸವ ಮಂಟಪ ವಿವಾದದ ಹಿಂದಿನ ದುರುದ್ದೇಶದ ಉರಿ

-

Profile
Ashok Nayak Nov 26, 2026 12:34 PM

ಬಸವಪಥ

ಮಹಾಂತ ವಕ್ಕುಂದ, ಬೆಳಗಾವಿ

ಪ್ರಾಮಾಣಿಕವಾಗಿ ಹೇಳುವುದಾದರೆ, ಇಲ್ಲಿಯವರೆಗೆ ‘ಬಸವ ಮಂಟಪ’ ಪುಸ್ತಕದ ಒಂದಕ್ಷರವನ್ನೂ ನಾವು ಓದಿಲ್ಲ, ಆದರೆ ಆ ಪುಸ್ತಕದ ಹೆಸರು ಹೇಳಿಕೊಂಡು ಇಂದು ನಡೆದಿರುವ ಪ್ರಮಾದ, ಹೋರಾಟ, ಹಾರಾಟ, ತಿಕ್ಕಾಟಗಳನ್ನು ಅರಿಯಲು ಹೊರಟಾಗ ‘ನೆರೆಮನೆಗೆ ಬಿದ್ದ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು’ ಹೊರಟವರ ಕಥೆ ಎದ್ದು ಕಾಣುತ್ತಿದೆ.

ರವಿ ಹಂಜಗಿಮಠರು ಟಿವಿ ಸಂದರ್ಶನದಲ್ಲಿ ಮಾತನಾಡುವಾಗ ಆಡಿದ ಪದಗಳು, ಬಸವಣ್ಣನ ಬಗ್ಗೆ ಅವರ ವಿಮರ್ಶೆ ಈ ಸಂಘರ್ಷಕ್ಕೆ ಕಾರಣವಾಗಿದೆಯೇ ವಿನಃ ‘ಬಸವ ಮಂಟಪ’ ಎಂಬ ಪುಸ್ತಕ ಅಲ್ಲ ಎಂಬುದು ನನ್ನ ಅನಿಸಿಕೆ. ಬಸವ ಮಂಟಪ ಪುಸ್ತಕ ಇದೇ ಮೊದಲ ಬಾರಿ ಪ್ರಕಟವಾಗಿ ಬೆಳಕಿಗೆ ಬಂದದ್ದೇನಲ್ಲ. ‘ವಿಶ್ವವಾಣಿ’ ಪತ್ರಿಕೆಯಲ್ಲಿ ರವಿ ಹಂಜಗಿಮಠರು ಈ ಹಿಂದೆ ಈ ಪುಸ್ತಕದಲ್ಲಿರುವ ಅಂಶಗಳನ್ನೇ ಲೇಖನಗಳಾಗಿ ಬರೆದಿದ್ದಾರೆ ಎನ್ನಲಾಗುತ್ತಿದೆ.

ನಾನು ಹಿಂದೆ ಅವರ ಕೆಲ ಲೇಖನಗಳನ್ನು ವಿಮರ್ಶಿಸಿದ್ದೆ. ಯಾವಾಗ ಅವರ ಅನಿಸಿಕೆ ಮಾತಿನ ರೂಪದಲ್ಲಿ ಟಿವಿ ಮಾಧ್ಯಮಗಳಲ್ಲಿ ಆಚೆ ಬಂದಿತೋ ಆಗ ಅದು ಜ್ವಾಲೆಯಾಯಿತು. ಈ ವಿಷಯ ದಲ್ಲಿ ಹೇಳುವುದಿಷ್ಟೇ, ರವಿಯವರು ಮಾಡಿದ್ದು ತಪ್ಪು. ಆದರೆ ರವಿ ಹಂಜಗಿಮಠರು ಹಚ್ಚಿರುವ ಈ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಮಹಾನ್ ಸತ್ಕಾರ್ಯವನ್ನು ಕೆಲವು ಅವಕಾಶವಾದಿಗಳು ಇಂದು ಅತೀ ಆಸಕ್ತಿಯಿಂದ ಮಾಡುತ್ತಿದ್ದಾರೆ.

ಇದನ್ನೂ ಓದಿ: K V Chandramouli Column: ಲೇಖಕನ ಬರಹಕ್ಕೆ ಸಂಪಾದಕ ಹೊಣೆಗಾರನೇ ?

ಹಂಜಗಿಮಠರು ಬರೆಯುತ್ತಿದ್ದ ಲೇಖನಗಳಲ್ಲಿ ವೀರಶೈವ ಲಿಂಗಾಯತ ಸಮಾಜಗಳನ್ನು ಬೆಸೆಯುವ ಪ್ರಯೋಗ ನಡೆಯುತ್ತಿದೆ ಎಂದು ಈ ಹಿಂದೆ ಹೇಳಿದಾಗ ಅದನ್ನು ಬಹಿರಂಗವಾಗಿ ವಿರೋಧಿಸ ಲಾಗದ ಕೆಲವರು ಬಹುಶಃ ಈ ದಿನಕ್ಕಾಗಿ ಎದುರು ನೋಡುತ್ತಿದ್ದರೇನೋ. ‘ರವಿ ಹಂಜ ಒಂದೇ ಒಂದು ಬಾರಿ ಮುಗ್ಗರಿಸಲಿ, ಹಾಕಿ ತುಳಿದು ಬಿಡೋಣ’ ಎಂದು ಕಾಯುತ್ತಿದ್ದರೋ ಗೊತ್ತಿಲ್ಲ.

ಇಂದು ರವಿ ಹಂಜ್ ಎಡವಿದ್ದಾರೆ, ಅದು ಸತ್ಯ, ಆದರೆ ಈ ಸಮಯಕ್ಕಾಗಿ ಕಾಯುತ್ತಿದ್ದ ಅವಕಾಶ ವಾದಿಗಳು ಇಂದು ತುಳಿಯಲು ಪ್ರಯತ್ನಿಸುತ್ತಿರುವುದು ಮಾತ್ರ ಬೇರೆಯವರನ್ನು. ಈ ಅವಕಾಶ ವಾದಿಗಳಿಗೆ ರವಿ ಹಂಜಗಿಮಠ ನೆಪ ಮಾತ್ರ. ಆದರೆ ಇಂದು ಅವರ ಹೆಸರು ಹೇಳಿಕೊಂಡು, ಅವರ ತಪ್ಪಿನ ಅನಾವರಣ ಮಾಡುತ್ತ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಣೆಗೆ ಅಂಟಿಸಲು ಯತ್ನಿಸುತ್ತಿದ್ದಾರೆ.

ಅವನ್ಯಾರೋ ಇನ್ನೊಬ್ಬ ಮಹಾನುಭಾವ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಲಿಂಗಾಯತ ಸಮಾಜಕ್ಕೆ ಆತನೇ ಅಧಿಪತಿ ಎಂಬಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿzನೆ- ‘ಲಿಂಗಾಯತರು ಸಂಘದ ಶಾಖೆಗೆ ಹೋಗಿ ಹೀಗಾಗುತ್ತಿದ್ದಾರೆ, ನಿಮ್ಮ ಮಕ್ಕಳನ್ನು ಆರೆಸ್ಸೆಸ್‌ಗೆ ಸೇರಿಸಬೇಡಿ’ ಎಂದೆಲ್ಲ ಮಾತನಾಡುತ್ತಿದ್ದಾನೆ.

ಗಾಳಿ ಬಿಟ್ಟಾಗ ತೂರಿಕೊಳ್ಳುವ ಇಂತಹವರಿಂದಲೇ ಈ ದೇಶಕ್ಕೆ 350 ವರ್ಷ ಗುಲಾಮಗಿರಿ ಬಂದದ್ದು ಎಂಬುದು ಇವರಿಗೆಲ್ಲ ಮರೆತು ಹೋದಂತಿದೆ. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೆಸರಿನ ಮೇಲೆಯೂ ಇವರ ಹಾರಾಟ, ಚೀರಾಟಗಳು ಎಗ್ಗಿಲ್ಲದೆ ಸಾಗಿವೆ. ಯಾವ ಜಾತಿ, ಯಾವ ಊರು, ಯಾವ ಪ್ರದೇಶ, ಯಾವ ಚಿಂತನೆಯ ಲೇಖನ ಎಂಬುದನ್ನು ಅವಲೋಕಿಸಿ ದ್ವೇಷಿಸದೆ/ ತ್ಯಜಿಸದೆ ಅದೆಷ್ಟೋ ಬರಹಗಾರರಿಗೆ, ತೆರೆ ಮರೆಯ ಕಾಯಿಗಳಿಗೆ ಅವಕಾಶ ಕಲ್ಪಿಸಿದ ವಿಶ್ವೇಶ್ವರ ಭಟ್ಟರ ವಿರುದ್ಧ ಕೂಡ ಈ ವಿಚಾರದಲ್ಲಿ ಹಲವು ಜನ ಉರಿದು ಬೀಳುತ್ತಿದ್ದಾರೆ.

WhatsApp Image 2026-11-25 at 23.15.47 ok

ಬಹುಶಃ ವಿಶ್ವೇಶ್ವರ ಭಟ್ಟರು ಇದೇ ಲಿಂಗಾಯತ ಮಠಾಧೀಶರ ಜೊತೆ ನಡೆಸಿದ ಚಿಂತನೆಗಳನ್ನು, ಚರ್ಚೆಗಳನ್ನು ಅರಿಯದೆ, ಅವರ ಜೊತೆ ವಿದೇಶ ಸುತ್ತಿರುವುದನ್ನು ಕಾಣದೆ ಮಾತನಾಡುತ್ತಿದ್ದಾ ರೋ ಗೊತ್ತಿಲ್ಲ. ಬಸವಣ್ಣ ಇಡೀ ತಮ್ಮ ಜೀವಿತಾವಧಿಯಲ್ಲಿ, ನಾ ಬೇರೆ, ತಾ ಬೇರೆ ಎನ್ನಲಿಲ್ಲ. ಎಲ್ಲರನ್ನೂ ಒಗ್ಗೂಡಿಸಿ, ಎಲ್ಲ ನೊಂದ ಬೆಂದ ಜೀವಗಳ ಬಾಳಿಗೆ ಬೆಳಕಾದ ಪುಣ್ಯಾತ್ಮನಾತ. ಮಾಡಿದ ಕಾಯಕ ದಾಸೋಹದಿಂದ, ಆಡಿದ ಮಾತು ವಚನಗಳಿಂದ, ನಡೆದ ರೀತಿ ಬದುಕಿದ ದಾರಿಯಿಂದ ಮಾನವನಾಗಿ ಹುಟ್ಟಿ ದೇವರಾಗಿ ಮಿಂಚಿ ಮರೆಯಾದ ಮಹಾನ್ ಮಾನವತಾವಾದಿ. ಬಸವಣ್ಣ ತಾವು ಮಾಡಿದ ಸತ್ಕರ್ಮದಿಂದ ಇಂದು ಈ ನಾಡಿನ, ಈ ದೇಶದ ಮಹಾನ್ ಸತ್ಪುರುಷ ರಾಗಿ ಗುರುತಿಸಲ್ಪಡುತ್ತಾರೆ, ಜಗತ್ತಿಗೆ ಸಂವಿಧಾನವನ್ನು ಪರಿಚಯಿಸಿ, ಅನುಭವ ಮಂಟಪ ನಡೆಸಿದ ಸಕಲ ಶರಣರ ನಾಯಕನಾಗಿ, ಪ್ರಜಾಪ್ರಭುತ್ವದ ಮುನ್ನುಡಿ ಬರೆದ ಮಹಾತ್ಮರಾಗಿ ಕಂಗೊಳಿಸು ತ್ತಾನೆ.

ಕನ್ನಡ ನಾಡಿನ ಕಣ್ಮಣಿಯಾಗಿ ಹುಟ್ಟಿ ಬೆಳೆದು ಇಷ್ಟೆ ಧಾರೆ ಎರೆದ ಮಹಾತ್ಮನ ಬಗ್ಗೆ ಇಲ್ಲಿಯವ ರೆಗೂ ಇದೇ ಕನ್ನಡ ನಾಡಿನಿಂದ ಆಯ್ಕೆಯಾದ ಅದೆಷ್ಟೋ ಮಹಾನ್ ರಾಜಕಾರಣಿಗಳು ಒಂದೊಮ್ಮೆಯೂ ಮಾತನಾಡಲಿಲ್ಲ. ಬಸವಣ್ಣನ ಕೀರ್ತಿಯನ್ನು ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಲಿಲ್ಲ, ಇಲ್ಲಿಯವರೆಗೆ ಆತನ ಚರಿತ್ರೆ, ತತ್ವ, ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲಲಿಲ್ಲ. ಇದಕ್ಕೆಲ್ಲ ವ್ಯತಿರಿಕ್ತವೆಂಬಂತೆ ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಾರಿಯಲ್ಲಿ ಬೆಳೆದು ಬಂದ, ಸನಾತನ ಧರ್ಮದ ರಾಯಭಾರಿಯಾಗಿ ಕಂಗೊ ಳಿಸುವ, ಕನ್ನಡವನ್ನರಿಯದ, ಲಿಂಗಾಯತನಲ್ಲದ, ಗುಜರಾತಿನಿಂದ ಬಂದ ಪುಣ್ಯಾತ್ಮನೊಬ್ಬ ಪ್ರಧಾನಿಯಾದ ನಂತರ ನಮ್ಮ ಬಸವಣ್ಣನವರ ಕೀರ್ತಿಯನ್ನು ಜಗದಗಲ ಸಾರಿದ, ಅಂತಾ ರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಂಡ.

ಇದನ್ನೆ ಲ್ಲ ಅರಿಯದೇ, ಗಮನಿಸದೆ, ರವಿ ಹಂಜ್‌ರನ್ನು ವಿರೋಧಿಸುವ ನೆಪ ಮಾಡಿಕೊಂಡು ಕೆಲವರು ಉದ್ದೇಶಪೂರ್ವಕವಾಗಿ ಸಂಘ, ಹಿಂದುತ್ವ, ಸನಾತನ ಧರ್ಮವನ್ನು ತೆಗಳುತ್ತಿದ್ದಾರೆ. ಎಂತಹ ವಿಪರ್ಯಾಸ, ಅಲ್ಲವೇ? ವಿವೇಕಿಯಾದವ ವಿಷಯಕ್ಕೆ ಸೀಮಿತವಾಗಿ ಹೋರಾಟ ಮಾಡುವುದನ್ನು ಕಲಿಯಬೇಕೆ ವಿನಃ ಈ ರೀತಿ ಸಂದರ್ಭಕ್ಕೆ ತಕ್ಕಂತೆ ದುರ್ವರ್ತನೆ ತೋರುವ ಗುಣವನ್ನಲ್ಲ. ಅದರಲ್ಲೂ ಬಸವ ತತ್ವವನ್ನ ಆಚರಿಸುವವರು ಬಸವಣ್ಣನವರ ವಚನದಂತೆ ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ’ ಎಂದುದನ್ನು ಅರಿಯಬೇಕು.

ಹಂಜಗಿಮಠರಂತವರು ನಮ್ಮ ಬಸವಣ್ಣನನ್ನು ಬಿಂಬಿಸಿದ ರೀತಿಯನ್ನು ಅತ್ಯುಗ್ರವಾಗಿ ಖಂಡಿಸಿದರೆ ತಪ್ಪಿಲ್ಲ. ವಿನಃ ವಿಷಯಾಂತರಗೊಂಡು ಕೇವಲ ಅನ್ಯರನ್ನು ತೆಗಳುತ್ತ ಸಾಗಿದರೆ ಅದು ಲಿಂಗಾಯತ ಕ್ಕೂ, ಬಸವಣ್ಣನವರಿಗೂ ಎರಡಕ್ಕೂ ಮಾಡುವ ಅಪಮಾನ. ಈ ಎಲ್ಲ ದೊಂಬರಾಟಗಳ ನಡುವೆ ಜಾತಿ ಮರೆತು, ಬಸವಣ್ಣ ತೋರಿದ ದಾರಿಯಲ್ಲಿ ಬದುಕುತ್ತಿರುವ ನಮ್ಮಂತವರು ಹೇಳುವುದಿಷ್ಟೇ. ಬಸವಣ್ಣ ಯಾರಪ್ಪನ ಮನೆ ಆಸ್ತಿಯಲ್ಲ, ಹಂಜಗಿಗೂ ನಮ್ಮ ಬಸವಣ್ಣನ ಬಗ್ಗೆ ಚಕಾರ ಎತ್ತುವ ಅರ್ಹತೆ ಇಲ್ಲ. ಯಾವ ಅಯೋಗ್ಯನೂ ಬಸವಣ್ಣನವರ ಬಗ್ಗೆ ಇನ್ನು ಮುಂದೆ ಒಂದೇ ಒಂದು ತಪ್ಪಾಡಿದರೂ ಬುದ್ಧಿ ಕಲಿಸಬೇಕು.

ಕೇವಲ ಬಸವಣ್ಣನಲ್ಲ ಈ ದೇಶದ ಯಾವುದೇ ದೇವರ ಬಗ್ಗೆ, ದಾರ್ಶನಿಕರ ಬಗ್ಗೆ, ಧರ್ಮ ಗುರುಗಳ ಬಗ್ಗೆ, ಮಹಾತ್ಮರ ಬಗ್ಗೆ ಮಾತನಾಡಿದಾಗಲೂ ಇದೇ ಆಗಬೇಕು. ಅದೇ ರೀತಿ ಹಂಜಗಿಮಠ ಮಾಡಿದ ತಪ್ಪನ್ನು ನೆಪ ಮಾಡಿಕೊಂಡು ಸಂಘ, ಹಿಂದುತ್ವ, ಸನಾತನ ಧರ್ಮದ ವಿಷಯಕ್ಕೆ ಬಂದು ಯಾರಾದರೂ ಒಂದೇ ಒಂದು ಅಡ್ಡ ಮಾತು ಆಡಿದರೂ ಅವನಿಗೂ ತಕ್ಕ ಶಾಸ್ತಿ ಆಗಲೇಬೇಕು. ಬಸವಣ್ಣನವರ ನಿಂದನೆಯ ಬಗ್ಗೆ ಹುಟ್ಟಿರುವ ಜನಾಕ್ರೋಶ ನಮ್ಮ ಶಿವ-ಪಾರ್ವತಿ, ಲಕ್ಷ್ಮಿ ಸರಸ್ವತಿಯರನ್ನು ನಿಂದಿಸಿದಾಗಲೂ ಹೊರ ಹೊಮ್ಮಲೇಬೇಕು.

ಯಾವುದೋ ಲಾಭಕ್ಕಾಗಿ, ‘ಲಿಂಗಾಯತ ಎಂಬುದು ನಮ್ಮ ಸ್ವಂತ ಆಸ್ತಿ, ನಾವು ಅದನ್ನು ಹೇಗೆ ಬೇಕೋ ಹಾಗೆ ತಿದ್ದಬಹುದು, ಹೇಳಬಹುದು, ಏನೂ ಅರಿಯದವರ ಕಿವಿ ಮೇಲೆ ಹೂ ಇಡಬಹುದು’ ಎಂದುಕೊಂಡಿರುವವರು ಅರ್ಥ ಮಾಡಿಕೊಳ್ಳಬೇಕಾದ್ದು ಇಷ್ಟೆ. ಬಹುಪಾಲು ಬಸವನ ಬಳಗಕ್ಕೆ ಅರಿವಿರುವುದೊಂದೇ, ನಾವೆ ಭೌಗೋಳಿಕವಾಗಿ ಭಾರತೀಯರು, ಕನ್ನಡ ನಮ್ಮ ತಾಯ್ನುಡಿ, ಆಚರಣೆಯಿಂದ ನಾವೆ ಹಿಂದೂಗಳು, ನಮ್ಮ ಧರ್ಮಗುರು/ಮಾರ್ಗದರ್ಶಕ ಬಸವಣ್ಣ. ಪೂಜೆ ಪ್ರಾರ್ಥನೆ ಆಚರಣೆಯಲ್ಲಿ ನಾವು ಸನಾತನ ಧರ್ಮದ ಭಾಗವೇ’ ಎಂಬುದು. ಇದನ್ನರಿತು ನಡೆದಾಗಲೇ ಈ ಸಮಾಜ ಉಳಿಯುವುದು, ಬೆಳೆಯುವುದು. ಓಂ ಶ್ರೀ ಗುರು ಬಸವ ಲಿಂಗಾಯ ನಮಃ.