ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

D K Shivakumar Column: ಎಸ್ʼಐಆರ್‌ ಒಂದು, ಪ್ರಶ್ನೆ ನೂರಾರು

ಮತದಾರರ ಪಟ್ಟಿಯನ್ನು ‘ಶುದ್ಧೀಕರಿಸುವ’ ಹೆಸರಿನಲ್ಲಿ ಯಾವೊಬ್ಬ ಅರ್ಹ ಮತದಾರನ ಹಕ್ಕು ಕಳೆದು ಹೋಗಬಾರದು ಎನ್ನುವುದು ನಮ್ಮ ಸರ್ಕಾರದ ಬದ್ಧತೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ ಐಆರ್) ನಡೆದಿರುವ ಅಕ್ರಮಗಳು ದೊಡ್ಡ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಎಸ್ʼಐಆರ್‌ ಒಂದು, ಪ್ರಶ್ನೆ ನೂರಾರು

-

Profile
Ashok Nayak Oct 7, 2026 8:17 AM

ಅಭಿಮತ

ಡಿ.ಕೆ.ಶಿವಕುಮಾರ್

ಜನರ ಮತವನ್ನು ಕಿತ್ತು ಹಾಕುವುದು ಸುಲಭ ಪ್ರಕ್ರಿಯೆ ಆಗಬಾರದು. ಮತ ಉಳಿಸಿಕೊಳ್ಳುವುದು ಕಷ್ಟವಾಗಬಾರದು. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಮಾನ ಮತದಾರರದ್ದು. ಪಕ್ಷಗಳದ್ದಲ್ಲ. ಆ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು. ಅದೇ ಮೊದಲ ಆದ್ಯತೆ; ಹಕ್ಕು. ಅದೇ ನಮ್ಮೆಲ್ಲರ ಶಕ್ತಿ.‌

‘ಇವನಾರವ, ಇವನಾರವ, ಇವನಾ ರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.’ ನಮ್ಮ ಸರ್ಕಾರ ಬಸವಣ್ಣನವರು ಪ್ರತಿಪಾದಿಸಿದ ಪ್ರಜಾಪ್ರಭುತ್ವದ ಆಶಯ ಗಳನ್ನು ಪರಿಪಾಲಿಸುತ್ತಿದೆ. ಜನರೂ, ವಿರೋಧ ಪಕ್ಷವೂ, ಆಡಳಿತ ಪಕ್ಷದ ಸದಸ್ಯರೂ ಎಲ್ಲರನ್ನೂ ‘ಇವ ನಮ್ಮವರೆಂದೇ’ ತಿಳಿದಿದ್ದೇವೆ. ನಾವೆಲ್ಲ ಸೇರಿಯೇ ‘ಟೀಮ್ ಕರ್ನಾಟಕ’. ಈ ಆಲೋಚನೆ ಮೂಲಕ ನವಭಾರತಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು. ಆದರೆ, ಈ ಕನಸಿಗೆ ಸಂವಿಧಾನದತ್ತ ಚುನಾವಣಾ ಆಯೋಗದ ಅಧಿಕಾರ ವನ್ನು ದುರ್ಬಳಕೆ ಮಾಡಿಕೊಂಡ ಎನ್‌ಡಿಎ ಮೈತ್ರಿಕೂಟ ಪಿತೂರಿ ಹೆಣೆದು, ಮಣ್ಣೆರೆಚುವ ಕೆಲಸ ಮಾಡುತ್ತಿದೆ.

ಇದು ಯಾವತ್ತಿಗೂ ಅಸಾಧ್ಯ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿದ ಕಾಂಗ್ರೆಸ್ ಪಕ್ಷಕ್ಕೆ, ಜನರ ಹಕ್ಕನ್ನು ಉಳಿಸುವ ಸಾಮರ್ಥ್ಯವಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜಂಗಮ. ಮತದಾರ ಪ್ರಭುಗಳು ಸ್ಥಾವರ. ಪಕ್ಷಗಳು ಬದಲಾಗಬಹುದು. ಹಾಗಂತ, ಪ್ರಜೆಯು ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುವುದು ಆ ವ್ಯಕ್ತಿಯ ಧ್ವನಿ ಯನ್ನೇ ದುರ್ಬಲಗೊಳಿಸಿದಂತೆ.

ಇದನ್ನೂ ಓದಿ: Prakash Shesharaghavachar Column: ವಂದೇ ಮಾತರಂ ವಿವಾದದ ಹಲವು ಕವಲುಗಳು

ಮತದಾರರ ಪಟ್ಟಿಯನ್ನು ‘ಶುದ್ಧೀಕರಿಸುವ’ ಹೆಸರಿನಲ್ಲಿ ಯಾವೊಬ್ಬ ಅರ್ಹ ಮತದಾರನ ಹಕ್ಕು ಕಳೆದುಹೋಗಬಾರದು ಎನ್ನುವುದು ನಮ್ಮ ಸರ್ಕಾರದ ಬದ್ಧತೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ ಐಆರ್) ನಡೆದಿರುವ ಅಕ್ರಮಗಳು ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜೂನ್ 16ರಂದು ರಾಜ್ಯದ ಮತದಾರರ ಪಟ್ಟಿಯಲ್ಲಿ 5.54 ಕೋಟಿಗೂ ಹೆಚ್ಚು ಮತದಾರರಿದ್ದರು. ಈಗ ಎಸ್‌ಐಆರ್‌ನ ಕರಡು ಪಟ್ಟಿಯಲ್ಲಿ ಸುಮಾರು 4.46 ಕೋಟಿ ಮತದಾರರು ಉಳಿದಿದ್ದು, 1.08 ಕೋಟಿಗೂ ಹೆಚ್ಚು ಜನರನ್ನು ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು (ASDDO) ವರ್ಗದಲ್ಲಿ ಗುರುತಿಸಲಾಗಿದೆ. ಹಾಗದರೆ, ಇಷ್ಟು ದೊಡ್ಡ ಮತದಾರರ ಹಕ್ಕಿನ ಗತಿ ಏನು? ದೇಶವವೇ ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಚುನಾವಣಾ ಆಯೋಗದ ಮುಂದೆ ನಾವು ಮಾಡಿದ ಪ್ರತಿಭಟನೆಯ ಫಲ ಈಗ ದೊರೆಯುತ್ತಿದೆ. ಆಯೋಗ ಕೆಲವು ವಿವರಣೆಗಳನ್ನು ನೀಡಿದೆ. ಅವು ರಕ್ಷಣಾತ್ಮಕವಾಗಿದೆ.

ತಪ್ಪುಗಳನ್ನು ಸರಿಪಡಿಸುವ ಮಾತುಗಳನ್ನು ಆಡಿದೆ. ಆದರೆ, ಅವು ತಪ್ಪಲ್ಲ. ಪ್ರಮಾದಗಳು. ಎಸ್‌ಐ ಆರ್ ಪ್ರಕ್ರಿಯೆಯನ್ನು ಪಕ್ಷಸ್ವಾರ್ಥಕ್ಕಾಗಿ ಬಳಸಿಕೊಂಡಿದೆ ಎನ್ನುವುದಕ್ಕೆ ನಾವು ದಾಖಲೆ ಸಮೇತ ಸಾಕ್ಷಿನೀಡಿದ್ದೇವೆ. ಇದು ಯೋಜಿತ ಸಂಚು. ಆಯೋಗ ಈಗ ಘೋಷಿಸಲಾಗಿರುವ ಸರಿಪಡಿಸುವಿಕೆ ಕ್ರಮಗಳು ಆಗಿರುವ ಪ್ರಮಾದಗಳಿಗೆ ಹಿಡಿದಿರುವ ಕನ್ನಡಿ.

SIR

ಅಕ್ಟೋಬರ್ 5ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ನೀಡಿದ ಮಾಹಿತಿಯ ಪ್ರಕಾರ, No Mapping ಮತ್ತು Anomalies ವಿಭಾಗಕ್ಕೆ ಸೇರಿದ ಮತದಾರರಿಗೆ 43,82,313 ನೋಟಿಸ್‌ಗಳನ್ನು ನೀಡಲಾಗಿದೆ. ಅದರಲ್ಲಿ 43,55,818 ನೋಟಿಸ್‌ಗಳು ತಲುಪಿವೆ. 36.89 ಲಕ್ಷ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಇನ್ನೂ 6.66 ಲಕ್ಷ ಪ್ರಕರಣಗಳು ಬಾಕಿ ಇವೆ.

ಇದರಲ್ಲಿ ರಾಜ್ಯದ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಮನೆ ಬದಲಾಯಿಸಿದ ಕುಟುಂಬಗಳು, ವಯೋವೃದ್ಧರು, ದಾಖಲೆಗಳ ಕೊರತೆಯಿರುವವರು ಇಂತಹ ಪ್ರಕ್ರಿಯೆಯಲ್ಲಿ ಎಷ್ಟು ತೊಂದರೆ ಅನುಭವಿಸಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ನಾನು ಮೊದಲಿ ನಿಂದಲೂ ಕೇಳುತ್ತಿರುವ ಪ್ರಶ್ನೆ ಒಂದೇ, ಎಸ್‌ಐಆರ್ ಪ್ರಕ್ರಿಯೆಗೆ ಸಾಕಷ್ಟು ಸಮಯ ನೀಡಲಾಗಿ ದೆಯೇ? ಒಬ್ಬ ಮತದಾರನ ಹೆಸರು ಪ್ರಶ್ನೆಗೆ ಒಳಗಾದಾಗ, ದಾಖಲೆಗಳನ್ನು ಹುಡುಕಲು, ತಪ್ಪು ಗಳನ್ನು ಸರಿಪಡಿಸಲು, ಹಾಗೇ, ತನ್ನ ಪರವಾಗಿ ಹೇಳಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ನೀಡಬೇಕು.

ಕೆಲಸಕ್ಕಾಗಿ ಹೊರಗೆ ಹೊರಗಿರುವವರು, ವಲಸೆ ಕಾರ್ಮಿಕರು, ವಯೋವೃದ್ಧರು ಮತ್ತು ವಿವಿಧ ಕಾರಣಗಳಿಂದ ತಮ್ಮ ಊರಿನಲ್ಲಿ ಇಲ್ಲದವರು ಕೂಡ ಮತದಾರರೇ. ತಮ್ಮ ಮತದಾನದ ಹಕ್ಕನ್ನು ತಾವೇ ಉಳಿಸಿಕೊಳ್ಳುವ ವಾತಾವರಣ ನಿರ್ಮಾಣ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅರ್ಜಿ ನಮೂನೆ- 7 ಪ್ರಕರಣವೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಅಕ್ಟೋಬರ್ 4ರವರೆಗೆ ಕರ್ನಾಟಕದಲ್ಲಿ 91,278 ನಮೂನೆ- 7 ಅರ್ಜಿಗಳು ಬಂದಿವೆ. ಕೆಲವು ಕಡೆ ಬೃಹತ್ ಪ್ರಮಾಣದಲ್ಲಿ ಅರ್ಜಿ ನಮೂನೆ- 7ನ್ನು ಸಲ್ಲಿಸಿ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ. ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಮತದಾರರನ್ನು ಗುರಿಯಾಗಿಸಲಾಗಿದೆ.

ಮೈಸೂರು, ಬೆಳಗಾವಿ, ಭಾಲ್ಕಿ ಸೇರಿದಂತೆ ವಿವಿಧ ಪ್ರದೇಶಗಳ ದಾಖಲೆಗಳು ಮತ್ತು ವೀಡಿಯೊ ಗಳನ್ನು ಚುನಾವಣಾ ಆಯೋಗಕ್ಕೆ ನಾವೇ ನೀಡಿದ್ದೇವೆ. ಕೆಲವು ಪ್ರಕರಣಗಳಲ್ಲಿ ಎಫ್ಐಆರ್‌ಗಳೂ ದಾಖಲಾಗಿವೆ. ಇವುಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ರಾಜ್ಯ ಮುಖ್ಯ ಚುನಾವಣಾಧಿ ಕಾರಿಗಳು, ನಮೂನೆ- 7 ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಇದುವರೆಗೆ ಒಂದೇ ಒಂದು ಮತದಾರನ ಹೆಸರನ್ನೂ ಅಳಿಸಿಲ್ಲ.

ನೋಟಿಸ್, ವಿಚಾರಣೆ ಮತ್ತು ದಾಖಲೆ ಪರಿಶೀಲನೆಯ ನಂತರವೇ ಹೆಸರು ಅಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಈಗ ನಮಗೆ ಬೇಕಿರುವುದು ಆರೋಪ-ಪ್ರತ್ಯಾರೋಪವಲ್ಲ. ಹೆಸರು ತೆಗೆಸಲು ಪ್ರತಿ ಅರ್ಜಿ ನಮೂನೆ 7 ಯಾರು ಸಲ್ಲಿಸಿದರು? ಒಂದೇ ವ್ಯಕ್ತಿಯಿಂದ ದೊಡ್ಡ ಪ್ರಮಾಣದ ಅರ್ಜಿಗಳು ಏಕೆ ಬಂದವು? ಅರ್ಜಿಗಳ ಹಿಂದೆ ನಿಜವಾದ ಕಾರಣವೇನು? ಇಷ್ಟೆ ನಡೆಯುತ್ತಿರ ಬೇಕಾದರೆ ಚುನಾವಣಾ ಆಯೋಗ ಏನು ಮಾಡುತ್ತಿತ್ತು ಎಂಬುದರ ಬಗ್ಗೆ ದಾಖಲೆ ಸಹಿತ ನಾಡಿನ ಜನರಿಗೆ ಉತ್ತರಿಸಬೇಕು.

ದೇಶದಲ್ಲಿ ‘ವೋಟ್ ಚೋರಿ’ ಅಲೆಯೇ ಎದ್ದಿದೆ. ಇದನ್ನು ರಾಜಕೀಯ ಘೋಷಣೆಯಾಗಿ ನೋಡದೇ ಇದ್ದಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ದೇಶದಲ್ಲಿ ಬೀಸುತ್ತಿರುವ ಆಡಳಿತವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರಕಾರ ಈ ಕೆಲಸ ಮಾಡುತ್ತಿದೆಯೇ ಎನ್ನುವ ಕಟು ಸತ್ಯ ಹೊರಬರಬೇಕು.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಉಜ್ಜಲ್ ಭುಯಾನ್ ಅವರು ಮತದಾನದ ಹಕ್ಕಿನ ಸಾಂವಿಧಾನಿಕ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನಾಗರಿಕರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಯಾವುದೇ ಪ್ರಕ್ರಿಯೆ ಆರ್ಟಿಕಲ್ 14 ಮತ್ತು ಆರ್ಟಿಕಲ್ 326ರ ಪ್ರಶ್ನೆಯನ್ನು ಎಬ್ಬಿಸಬಹುದು ಎಂಬ ಎಚ್ಚರಿಕೆ ನೀಡಿ ದ್ದಾರೆ. ಆದರೆ, ಮತದಾನದ ಹಕ್ಕು ಎಷ್ಟು ಮಹತ್ವದ್ದು ಎಂಬುದನ್ನು ನೆನಪಿಸುವ ಮಾತುಗಳು.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಸೇರಿದಂತೆ ಹಲವರು ಎಸ್‌ಐಆರ್‌ನಲ್ಲಿ ದಾಖಲೆಗಳ ಹೊರೆ, ಹೆಸರು ತೆಗೆದುಹಾಕುವ ವಿಧಾನ ಮತ್ತು ಸಾಮಾನ್ಯ ಮತದಾರರಿಗೆ ಎದುರಾಗ ಬಹುದಾದ ತೊಂದರೆಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ಇರಬಾರದು. ನಕಲಿ ಹೆಸರು ಇರಬಾರದು.

ಒಂದೇ ವ್ಯಕ್ತಿಯ ಹೆಸರು ಹಲವು ಕಡೆ ಇರಬಾರದು. ಸ್ಥಳಾಂತರಗೊಂಡವರ ವಿವರ ಸರಿಯಾಗ ಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಈ ಮತಪಟ್ಟಿ ಶುದ್ಧೀಕರಣದ ವೇಳೆ ತಪ್ಪಾಗಿ ಒಬ್ಬ ಅರ್ಹ ಮತದಾರನ ಹೆಸರೂ ಹೊರಗುಳಿಯದಂತೆ ಮಾಡುವ ವ್ಯವಸ್ಥೆ ಇನ್ನಷ್ಟು ಬಲವಾಗಬೇಕು. ಚುನಾವಣಾ ಆಯೋಗ ಈಗ ಎಸ್‌ಐಆರ್ ಪೂರ್ಣಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರಿಸಲು ವಿಶೇಷ ಅಭಿಯಾನ ನಡೆಸುವಂತೆ ಸೂಚಿಸಿರುವುದು ಚುನಾವಣಾ ಆಯೋಗ ಅಂಗೈ ಹುಣ್ಣಿಗೆ ತಾನೇ ಕನ್ನಡಿ ಹಿಡಿದುಕೊಂಡಂತಾಗಿದೆ.

ಕರ್ನಾಟಕದಲ್ಲಿಯೂ ಅಂತಿಮ ಪಟ್ಟಿಯ ನಂತರ ಇಂತಹ ವಿಶೇಷ ಅಭಿಯಾನ ನಡೆಯಲಿದೆ. ಈ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಮೊದಲ ಹಂತದ ತಪ್ಪುಗಳು ಘಟಿಸದಂತೆ ಎಚ್ಚರ ವಹಿಸಬಹುದಿತ್ತಲ್ಲವೇ? ತಪ್ಪುಗಳು ಘಟಿಸಬೇಕು, ಅದರ ಲಾಭ ಪಡೆಯಬೇಕು ಎನ್ನುವ ಪಿತೂರಿ ಇದರ ಹಿಂದೆ ಅಡಗಿದೆ. ಚುನಾವಣಾ ಆಯೋಗ ಸಂವಿಧಾನಾತ್ಮಕ ಸಂಸ್ಥೆ. ಅದರ ಸ್ವಾಯತ್ತತೆ ಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಸ್ವಾಯತ್ತತೆ ಎಂದರೆ ಪ್ರಶ್ನೆ ಕೇಳಬಾರದು ಎಂದಲ್ಲ.

ಚುನಾವಣಾ ಆಯೋಗದ ಪ್ರತಿಯೊಂದು ಕ್ರಮವೂ ಸಂವಿಧಾನ, ಮತದಾರರ ಹಕ್ಕಿನ ಪರಿಧಿಯಲ್ಲಿ ಪರಿಶೀಲನೆಗೆ ಒಳಪಡಬಹುದು. ಎಸ್‌ಐಆರ್‌ನಿಂದ ಅರ್ಹ ಮತದಾರರೇ ಹೊರಗುಳಿಯುವ ಪರಿಸ್ಥಿತಿ ಬಂದರೆ, ಅದನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶದ ಅಂತರಂಗದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈ ಮೇಲ್ನೋಟಕ್ಕೆ ಕಣ್ಣಿಗೆ ಕಾಣದೇ ಇರಬಹುದು. ಆದರೂ, ಇಂತಹ ಸಂದರ್ಭದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಾದರೂ, ಚುನಾವಣೆ ಗೆಲ್ಲಬೇಕು ಎಂಬ ಕುತಂತ್ರ ನಡೆಯುತ್ತಿದೆ ಎನ್ನುವ ಕೂಗು ಆರೋಪವಾಗಿ ಉಳಿದಿಲ್ಲ.

ಈ ಕಾರಣದಿಂದಲೇ ಎಸ್‌ಐಆರ್ ಪ್ರಕ್ರಿಯೆಯನ್ನು ಇಡೀ ದೇಶವೇ ಅನುಮಾನದಿಂದ ನೋಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿದರೆ, ಅದರ ಪರಿಣಾಮ ಚುನಾವಣೆಯ ಮೇಲೆ ಬೀರುವ ಆತಂಕ ಸಹಜ. ನಾನು ಈ ವಿಚಾರವನ್ನು ಕೇವಲ ಪಕ್ಷದ ಚುನಾವಣಾ ಲಾಭ-ನಷ್ಟದ ದೃಷ್ಟಿಯಿಂದ ನೋಡಲು ಬಯಸುವುದಿಲ್ಲ.

ಯಾವ ಪಕ್ಷದ ಮತದಾರನಾಗಿದ್ದರೂ ಸರಿ, ಮತದಾರ ಮೊದಲು, ಪಕ್ಷ ನಂತರ. ಯಾವ ಪಕ್ಷ ಗೆಲ್ಲಬೇಕು ಎಂಬ ಪ್ರಶ್ನೆಗಿಂತ ಮೊದಲು ಯಾರ ಮತವೂ ಅನ್ಯಾಯವಾಗಿ ಕಳೆದು ಹೋಗಬಾರದು. ಎಸ್‌ಐಆರ್ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕು. ಪ್ರತಿ ನೋಟಿಸ್‌ಗೆ ಕಾರಣ ತಿಳಿಸಬೇಕು. ಮತದಾರನಿಗೆ ಸಮರ್ಪಕ ವಿಚಾರಣೆಯ ಅವಕಾಶ ನೀಡಬೇಕು.

ಅರ್ಜಿ ನಮೂನೆ 7ರ ದುರ್ಬಳಕೆಯ ಬಗ್ಗೆ ಸ್ವತಂತ್ರ ಮತ್ತು ಸಮಯಬದ್ಧ ತನಿಖೆ ನಡೆಯಬೇಕು. ಅಸಾಮಾನ್ಯ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದವರನ್ನು ಪರಿಶೀಲಿಸಬೇಕು. ಬಿಎಲ್‌ಓ ಮತ್ತು ಇಆರ್‌ಓ ಮಟ್ಟದಲ್ಲಿ ಹೊಣೆಗಾರಿಕೆ ಸ್ಪಷ್ಟವಾಗಬೇಕು. ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರಿಸುವ ಪ್ರಕ್ರಿಯೆ ಸರಳವಾಗಬೇಕು. ಮತ್ತು ಎಸ್‌ಐಆರ್ ಅಂತಿಮ ಫಲಿತಾಂಶದ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಪಾರದರ್ಶಕ ಮಾಹಿತಿ ನೀಡಬೇಕು.

ನನ್ನ ಮತ ನನ್ನದೇ ಎಂಬುದನ್ನು ಯಾರು ಖಚಿತಪಡಿಸುತ್ತಾರೆ? ಎಂಬುದು ಕಟ್ಟ ಕಡೆಯ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ನೀಡುವ ಜವಾಬ್ದಾರಿ ಚುನಾವಣಾ ಆಯೋಗಕ್ಕಿದೆ. ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ನಮ್ಮೆಲ್ಲರ ಹೊಣೆಗಾರಿಕೆ ಕೂಡ. ಜನರ ಮತವನ್ನು ಕಿತ್ತು ಹಾಕುವುದು ಸುಲಭ ಪ್ರಕ್ರಿಯೆ ಆಗಬಾರದು. ಮತ ಉಳಿಸಿಕೊಳ್ಳುವುದು ಕಷ್ಟವಾಗಬಾರದು. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಮಾನ ಮಾಡುವುದು ಮತದಾರ. ಪಕ್ಷಗಳಲ್ಲ. ಆ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು. ಅದೇ ಮೊದಲ ಆದ್ಯತೆ; ಹಕ್ಕು. ಅದೇ ನಮ್ಮೆಲ್ಲರ ಶಕ್ತಿ.