Dr Vijay Darda Column: ನಮ್ಮ ರಕ್ತ ಕುದಿಯುತ್ತಿದೆ, ಇದಕ್ಕೊಂದು ಅಂತ್ಯ ಹಾಡೋಣ !
ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಮುನಿರ್‌ನ ದ್ವೇಷಮಯ ಮಾತುಗಳನ್ನು ಕೇಳಿದರೆ ಈ ಮನುಷ್ಯ ಕಾಶ್ಮೀರದ ವಿರುದ್ಧ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗುತ್ತದೆ. ಆದರೆ ಅವನ ದುಷ್ಟ ಯೋಚನೆಗಳು ಅವನದೇ ದೇಶವನ್ನು ನಿರ್ನಾಮ ಮಾಡುತ್ತವೆ ಎಂಬುದನ್ನು ಆ ಅಧರ್ಮಿಗೆ ಹೇಳು ವವರು ಯಾರು?


ಸಂಗತ
ಡಾ.ವಿಜಯ್ ದರಡಾ
ಸಾಮಾನ್ಯವಾಗಿ ಎಂಥ ಕಷ್ಟಕರ ಸಂದರ್ಭದಲ್ಲೂ ನಾನು ತುಂಬಾ ತಾಳ್ಮೆಯಿಂದ ಇರುತ್ತೇನೆ. ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಮುನ್ನ ಸಾಕಷ್ಟು ಯೋಚಿಸಿ, ಕಾರ್ಯಕಾರಣ ವಿವೇಚಿಸಿ ಮುಂದಡಿಯಿಡುತ್ತೇನೆ. ಆದರೆ ಕಾಶ್ಮೀರಿ ಕಣಿವೆಯಲ್ಲಿ ದುಷ್ಟ ಪಾಕಿಸ್ತಾನದ ರಾಕ್ಷಸರು ಎಸಗಿದ ಪೈಶಾಚಿಕ ಕೃತ್ಯವನ್ನು ನೋಡಿದ ಮೇಲೆ ನಿಜಕ್ಕೂ ನನ್ನ ರಕ್ತ ಕುದಿಯುತ್ತಿದೆ. ಹೀಗಾಗಿ ಸರಕಾರಕ್ಕೆ ನಾನು ನೀಡುತ್ತಿರುವ ನೇರವಾದ ಸಂದೇಶವಿದು: ಇನ್ನು ಸಾಕು! ಇಲ್ಲಿಯವರೆಗೆ ನೋಡಿದ್ದು ಬೇಕಾ ದಷ್ಟಾಯಿತು. ಏನಾದರೂ ಕಠಿಣ ಕ್ರಮ ಕೈಗೊಳ್ಳಲೇಬೇಕು!
ಈ ಬಾರಿ ನಿಜವಾದ ಅಪರಾಧಿ ಇನ್ನಾರೂ ಅಲ್ಲ, ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಜನರಲ್ ಸೈಯದ್ ಆಸಿಮ್ ಮುನಿರ್. ಬಹಿರಂಗವಾಗಿಯೇ ಆತ ಭಾರತದ ವಿರುದ್ಧ ವಿಷ ಕಾರಿದ್ದಾನೆ. ಕೇವಲ ಆತನ ಮಾತುಗಳಲ್ಲಷ್ಟೇ ವಿಷ ಇಲ್ಲ, ಅವನ ರಕ್ತದಲ್ಲೇ ಅದು ಹರಿಯುತ್ತಿದೆ. ಆತ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪಡೆದ ಜಾಗವೇ ಹಾಗಿತ್ತು. ರಾವಲ್ಪಿಂಡಿಯಲ್ಲಿ ಭಾರತದ ವಿರುದ್ಧ ದ್ವೇಷದ ಬೀಜ ಬಿತ್ತುವ ಮಿಲಿಟರಿ ಶಾಲೆಗಳಲ್ಲಿ ಅವನು ಶಿಕ್ಷಣ ಆರಂಭಿಸಿದ್ದ. ನಂತರ ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐನ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದ. ಅಂದರೆ ಅವನ ನರನಾಡಿ ಗಳಲ್ಲೇ ಭಾರತದ ಕುರಿತು ದ್ವೇಷ ಮತ್ತು ಷಡ್ಯಂತ್ರ ಹರಿಯುತ್ತಿವೆ.
ಕಾಶ್ಮೀರ ಪ್ರಗತಿ ಸಾಧಿಸುತ್ತಿರುವುದು ಮತ್ತು ಕಣಿವೆಯಲ್ಲಿ ಶಾಂತಿ ನೆಲೆಸುತ್ತಿರುವುದನ್ನು ಅವನಿಂದ ನೋಡಲು ಆಗುತ್ತಿಲ್ಲ. ಜಗತ್ತಿನ ಎಲ್ಲೆಡೆಯಿಂದ ಕಾಶ್ಮೀರಕ್ಕೆ ಪ್ರವಾಸಿಗರು ಬರುತ್ತಿರುವುದನ್ನು ಅವನಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರಿಗಳ ಬದುಕು ಕೆಲ ವರ್ಷದಿಂದ ಈಚೆಗೆ ಬದಲಾಗಲು ಆರಂಭಿಸಿತ್ತು. ಕಳೆದ ಒಂದೇ ವರ್ಷದಲ್ಲಿ 2.35 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂಬ ಅಂಕಿ-ಅಂಶಗಳನ್ನು ನೋಡಿದ ಮೇಲೆ ಅವನೊಳಗೆ ದ್ವೇಷ ಮಡುಗಟ್ಟಿತ್ತು.
ಇದನ್ನೂ ಓದಿ: Dr Vijay Darda Column: ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ
ಆದರೆ ತಕ್ಷಣಕ್ಕೆ ಏನೂ ಮಾಡಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಏಕೆಂದರೆ ಅವನದೇ ದೇಶದ ಸಮಸ್ಯೆಗಳ ರಾಶಿ ಅವನ ಕಣ್ಮುಂದೆ ಬಿದ್ದಿತ್ತು. ಮೊದಲಿಗೆ ಅವನು ಇಮ್ರಾನ್ ಖಾನ್‌ರನ್ನು ಎದುರಿಸ ಬೇಕಿತ್ತು. ಅದನ್ನು ಮಾಡಿ ಮುಗಿಸಿದ. ನಂತರ ಇಸ್ಲಾಮಾಬಾದ್‌ನಲ್ಲಿ ನಡೆದ ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶದಲ್ಲಿ ಅವನು ಬಹಿರಂಗವಾಗಿಯೇ ಭಾರತದ ವಿರುದ್ಧ ದ್ವೇಷಕಾರಿ ಕೊಂಡಿದ್ದಾನೆ.
ಅಲ್ಲಿ ಇಮ್ರಾನ್ ಖಾನ್‌ರ ಬೆಂಬಲಿಗರೇ ಹೆಚ್ಚಿದ್ದರು. ‘ನಾವು ಹಿಂದೂಗಳಿಗಿಂತ ಎಲ್ಲಾ ರೀತಿಯಲ್ಲೂ ಭಿನ್ನರಾಗಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ, ಬದುಕಿನ ರೀತಿ-ನೀತಿಗಳು, ಯೋಚನೆ, ಗುರಿಗಳೆಲ್ಲವೂ ಭಿನ್ನ ಎಂದು ಮುನಿರ್ ಹೇಳಿದ್ದಾನೆ. ನಂತರ, ಕಾಶ್ಮೀರವನ್ನು ಪಾಕಿಸ್ತಾನ ಯಾವತ್ತೂ ಒಂಟಿಯಾಗಿ ಬಿಡುವುದಿಲ್ಲ ಎಂದೂ ಬಡಬಡಿಸಿದ್ದಾನೆ.
ಆ ಭಾಷಣದಲ್ಲಿ ಅವನು ಭಾರತ ಮತ್ತು ಹಿಂದೂಗಳ ಬಗ್ಗೆ ಮಾತನಾಡಿದ್ದು ಏಕೆಂದರೆ ಇನ್ನೇನೂ ಪ್ರಮುಖವಾದ ವಿಷಯ ಅವನ ಮುಂದಿರಲಿಲ್ಲ! ಅವನ ದೇಶವನ್ನು ಅಲ್ಲಿಯದೇ ಸೇನೆ ಮತ್ತು ಐಎಸ್‌ಐಗಳು ಸೇರಿಕೊಂಡು ಭಯೋತ್ಪಾದನೆಯ ಕಾರ್ಖಾನೆಯನ್ನಾಗಿ ಮಾಡಿದ್ದವು. ಹಿಟ್ಟು ಖರೀದಿ ಸುವುದಕ್ಕೂ ದೇಶದ ಜನರು ಉದ್ದಾನುದ್ದ ಕ್ಯೂಗಳಲ್ಲಿ ನಿಲ್ಲುತ್ತಿದ್ದರು. ಪಾಕಿಸ್ತಾನದ ಜನರಲ್ಲಿ ದೇಶದ ಆಡಳಿತ ವ್ಯವಸ್ಥೆಯ ವಿರುದ್ಧ ಮಡುಗಟ್ಟುತ್ತಿದ್ದ ಆಕ್ರೋಶವನ್ನು ಹತ್ತಿಕ್ಕಲು ಧರ್ಮ ಮತ್ತು ಕಾಶ್ಮೀರದ ವಿಷಯಕ್ಕಿಂತ ಪರಿಣಾಮಕಾರಿ ಅಸ ಇನ್ನೇನು ತಾನೇ ಇತ್ತು? ಮಿಸ್ಟರ್ ಮುನಿರ್, ನಾನೊಂದು ಪ್ರಶ್ನೆ ಕೇಳುತ್ತೇನೆ.
ನೀನು ಮಾತನಾಡುತ್ತಿರುವುದು ಯಾವ ಧರ್ಮದ ಬಗ್ಗೆ? 1971ರಲ್ಲಿ ಪಾಕಿಸ್ತಾನಿ ಸೇನೆಯು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಅಸಂಖ್ಯಾತ ಜನರ ಮಾರಣಹೋಮ ಮತ್ತು ಅತ್ಯಾಚಾರ ಗಳನ್ನು ನಡೆಸಿತಲ್ಲವೇ, ಆಗ ಸಂತ್ರಸ್ತರಾದವರು ಯಾವ ಧರ್ಮದವರಾಗಿದ್ದರು? ಅವರೆಲ್ಲರೂ ಮುಸ್ಲಿಮರೇ ಆಗಿದ್ದರು. ದಶಕಗಳಿಂದ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ 10 ಲಕ್ಷ ಆಫ್ಘನ್ ನಿರಾಶ್ರಿತರನ್ನು ನಿಮ್ಮದೇ ಸೇನೆಯೀಗ ದೇಶದಿಂದ ಹೊರಹಾಕುತ್ತಿದೆಯಲ್ಲವೇ, ಅವರು ಯಾವ ಧರ್ಮಕ್ಕೆ ಸೇರಿದವರು? ಜಗತ್ತಿಗೇ ನೀವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದೀರಿ. ಇದನ್ನು ಯಾವ ಧರ್ಮವೂ ಒಪ್ಪುವುದಿಲ್ಲ!
ಹಫೀಜ್ ಸಯೀದ್ ಮತ್ತು ಅವನಂಥ ಅಸಂಖ್ಯಾತ ಭಯೋತ್ಪಾದಕರನ್ನು ಸಾಕಿ ಬೆಳೆಸಿದವರು ನಿನ್ನಂಥ ಜನರೇ ಹೊರತು ಇನ್ನಾರೂ ಅಲ್ಲ. ಈಗ ನಿಮ್ಮದೇ ಪಾಪದ ಕೃತ್ಯಗಳ ಫಲವನ್ನು ನೀವೆ ಲ್ಲರೂ ಉಣ್ಣುತ್ತಿದ್ದೀರಿ. ಆದ್ದರಿಂದಲೇ ಹಿಲರಿ ಕ್ಲಿಂಟನ್, “ನೀವು ಹಾವು ಸಾಕಿದರೆ ಒಂದು ದಿನ ಅದು ನಿಮ್ಮನ್ನೇ ಕಚ್ಚುತ್ತದೆ!" ಎಂದು ಹೇಳಿದ್ದರು. ಆದರೆ ನಾವು ಅಂಥ ಹಾವುಗಳಿಗೆ ಹೆದರುವುದಿಲ್ಲ. ಹಾವನ್ನು ಸಾಯಿಸುವುದು ಹೇಗೆಂಬುದು ನಮಗೆ ಗೊತ್ತು. ಮೈಯೊಳಗೆ ವಿಷ ಸೇರಿಕೊಂಡರೆ ಅದನ್ನು ನಿವಾರಿಸಿಕೊಳ್ಳುವುದು ಹೇಗೆಂಬುದೂ ನಮಗೆ ತಿಳಿದಿದೆ.
ಇನ್ನು, ಕಾಶ್ಮೀರವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ನೀವು ಹೇಳಿದ್ದೀರಲ್ಲವೇ? ಇಲ್ಲಿ ಕೇಳಿಸಿಕೊಳ್ಳಿ, ನಿಮ್ಮದು ಬರೀ ಭ್ರಮೆ. ಕನಸಿನ ಲೋಕದಿಂದ ಒಮ್ಮೆ ಹೊರಗೆ ಬನ್ನಿ. ಕಾಶ್ಮೀರವು ಹಿಂದೆಯೂ ಭಾರತದ ಭಾಗವಾಗಿತ್ತು, ಈಗಲೂ ಭಾರತದ್ದಾಗಿದೆ ಮತ್ತು ಯಾವತ್ತೂ ಭಾರತದಲ್ಲೇ ಇರುತ್ತದೆ. ನಿಮ್ಮ ಕಪಿಮುಷ್ಟಿಯಲ್ಲಿರುವ ಕಾಶ್ಮೀರದ ಒಂದು ಭಾಗದಲ್ಲೂ ಈಗ ಜನರು ಪಾಕಿಸ್ತಾನದ ವಿರುದ್ಧ ಬಂಡೆದಿದ್ದಾರೆ. ಅವರ ಬಂಡಾಯವನ್ನು ಎಷ್ಟು ದಿನ ದಮನಿಸಿ ಇಡುತ್ತೀರಿ ಮಿಸ್ಟರ್ ಮುನಿರ್? ಆ ಭಾಗ ಕೂಡ ತನ್ನಿಂತಾನೇ ಬಂದು ಭಾರತಕ್ಕೆ ಸೇರಿಕೊಳ್ಳುತ್ತದೆ.
ಅದಕ್ಕೆ ಯಾವುದೇ ಬಾಹ್ಯ ಬಲಪ್ರಯೋಗ ಬೇಕಿಲ್ಲ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಾವು 24 ಸ್ಥಾನಗಳನ್ನು ಮೀಸಲು ಇರಿಸಿರುವುದು ಅದೇ ಕಾರಣಕ್ಕೆ. ಸದ್ಯಕ್ಕೆ ಅಕ್ರಮವಾಗಿ ನಿಮ್ಮ ವಶದಲ್ಲಿರುವ ಕಾಶ್ಮೀರದ ಭಾಗಕ್ಕೆಂದೇ ಆ ಕುರ್ಚಿಗಳು ಕಾದು ಕುಳಿತಿವೆ.
ಮಿಸ್ಟರ್ ಮುನಿರ್, ಬಲೂಚಿಸ್ತಾನ ಕೂಡ ಕ್ರಮೇಣ ಪಾಕಿಸ್ತಾನದಿಂದ ಬೇರೆಯಾಗಲಿದೆ. ಹಿಂದೆ ಬಾಂಗ್ಲಾದೇಶದಲ್ಲಿ ನಿಮ್ಮ ಸೇನಾಪಡೆ ನಡೆಸಿದ ದೌರ್ಜನ್ಯಗಳ ವಿರುದ್ಧ ಬಂಡೆದ್ದು ಹೇಗೆ ಬಂಗಾಳಿ ಮುಸ್ಲಿಮರು ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದುಕೊಂಡರೋ ಹಾಗೆಯೇ ಬಲೂಚಿಗಳೂ ನಿಮ್ಮಿಂದ ದೂರವಾಗಲಿದ್ದಾರೆ. ನೀವೇನೋ ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುತ್ತೀರಿ.
‘13 ಲಕ್ಷ ಬಲಿಷ್ಠ ಯೋಧರಿರುವ ಭಾರತದ ಸೇನೆಗೇ ಪಾಕಿಸ್ತಾನವನ್ನು ಹೆದರಿಸಲು ಆಗಲಿಲ್ಲ, ಇನ್ನು ಬಲೂಚಿಗಳು ಹೇಗೆ ನಮ್ಮನ್ನು ಹೆದರಿಸುತ್ತಾರೆ’ ಎಂದು ಕೇಳಿದ್ದೀರಿ. ನಿಮ್ಮ ನೆನಪಿನ ಶಕ್ತಿ ತುಂಬಾ ದುರ್ಬಲವಾಗುತ್ತಿದೆ ಎಂಬುದರ ಸೂಚನೆಯಿದು. ಹಿಂದಿನದನ್ನು ಒಮ್ಮೆ ನೆನಪಿಸಿಕೊಳ್ಳಿ. ಅದು 1971ರ ಡಿಸೆಂಬರ್ 16ನೇ ತಾರೀಖು, ಮಧ್ಯಾಹ್ನ 4.31. ಪಾಕಿಸ್ತಾನದ ಸೇನೆಯ ಪೂರ್ವ ಕಮಾಂಡ್ ನ ಚೀಫ್ ಲೆಫ್ಟಿನೆಂಟ್ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ 93000 ಪಾಕಿಸ್ತಾನಿ ಯೋಧ ರೊಂದಿಗೆ ಢಾಕಾದಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಮುಂದೆ ನಡುಬಗ್ಗಿಸಿ ಶರಣಾಗಿದ್ದನ್ನು ಮರೆತುಬಿಟ್ಟಿರಾ? ಅದು ಹೋಗಲಿ, ಕಾರ್ಗಿಲ್ ಯುದ್ಧವೂ ಮರೆತು ಹೋಯಿತೆ? ನಿಮ್ಮನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ.
ನೀವೇ ಕಳುಹಿಸಿದ ಯಮದೂತರು ಕಾಶ್ಮೀರಿ ಕಣಿವೆಯ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಬಳಿ ಹೆಸರು, ಧರ್ಮ ಕೇಳಿ, ಬಟ್ಟೆ ಬಿಚ್ಚಿಸಿ ನೋಡಿ ಒಬ್ಬೊಬ್ಬರನ್ನೇ ಕೊಂದು ಹಾಕಿದರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಭಾರತದೊಳಗಿರುವ ಕೆಲ ಮತೀಯ ದ್ವೇಷಿ ಗಳನ್ನು ಪ್ರಚೋದಿಸಲು ನೀವು ಹೀಗೆ ಮಾಡಿದ್ದೀರಿ ಎಂಬುದೂ ನಮಗೆ ತಿಳಿದಿದೆ.
ಆದರೆ ನೆನಪಿಡಿ, ನಾವು ನಿಮಗಿಂತ ಬುದ್ಧಿವಂತರು ಮತ್ತು ತಾಳ್ಮೆಯ ಜನ. ನಾವು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿದಂತೆಯೇ ದರ್ಗಾಗಳಲ್ಲಿ ಚಾದರವನ್ನೂ ಅರ್ಪಿಸುತ್ತೇವೆ. ನಾವು ನಿಮ್ಮಂತೆ ಸಂಕುಚಿತವಾಗಿ ಯೋಚಿಸುವುದಿಲ್ಲ! ನಿಮ್ಮ ದುಷ್ಟ ಕೃತ್ಯಗಳು ಯಾವತ್ತೂ ನಮ್ಮ ಶಿಷ್ಟ ಶಕ್ತಿಯ ಮುಂದೆ ಗೆಲ್ಲಲಾರವು. ಸೈಯದ್ ಆದಿಲ್ ಹುಸೇನ್ ಶಾ ಎಂಬ ಹೆಸರು ಕೇಳಿದ್ದೀರಾ? ನಿಮ್ಮ ಜನರು ಕಾಶ್ಮೀರದಲ್ಲಿ ನರಮೇಧ ನಡೆಸಿದಾಗ ಧೈರ್ಯವಾಗಿ ಆ ರಾಕ್ಷಸರ ಎದುರು ನಿಂತು, “ಪ್ರವಾಸಿಗರನ್ನು ಕೊಲ್ಲಬೇಡಿ, ಅವರು ನಮ್ಮ ಅತಿಥಿಗಳು" ಎಂದು ಹೇಳಿದ ಮನುಷ್ಯ ಆತ.
ಪಹಲ್ಗಾಮ್‌ನಲ್ಲಿ ನಡೆದ ನರಮೇಧವನ್ನು ನೋಡಿ ಇಡೀ ಕಾಶ್ಮೀರಿ ಕಣಿವೆ ರೊಚ್ಚಿಗೆದ್ದಿದೆ. ಅಲ್ಲಿನ ದಿನಪತ್ರಿಕೆಗಳು ಕಣ್ಣೀರು ಹಾಕಿವೆ. ಅವು ತಮ್ಮ ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ನೀವು ‘ಕೌಮ್’ ಅಥವಾ ಸಮುದಾಯದ ಬಗ್ಗೆ ಮಾತನಾಡುತ್ತೀರಿ. ನಮ್ಮ ಧರ್ಮದವರು ಚೆನ್ನಾಗಿರಬೇಕು ಎನ್ನುತ್ತೀರಿ.
ಆದರೆ ಪ್ರವಾಸೋದ್ಯಮವಿಲ್ಲದೆ ಕಾಶ್ಮೀರಿಗರು ಉಪವಾಸ ಬೀಳಬೇಕಾಗುತ್ತದೆ ಎಂಬುದು ನಿಮಗೆ ಗೊತ್ತಿಲ್ಲವೇ? ಪಾಕಿಸ್ತಾನದ ದುಷ್ಕೃತ್ಯಗಳಿಗೆ ತಿರುಗೇಟು ನೀಡಲು ನಾವು ಈವರೆಗೆ ಸಿಂಧೂ ನದಿಯ ನೀರು ನಿಲ್ಲಿಸುವ ಬಗ್ಗೆ, ವಾಘಾ ಗಡಿ ಮುಚ್ಚುವ ಬಗ್ಗೆ ಮತ್ತು ಪಾಕಿಸ್ತಾನೀಯರಿಗೆ ವೀಸಾ ನೀಡುವು ದನ್ನು ಸ್ಥಗಿತಗೊಳಿಸುವ ಬಗ್ಗೆ ಮಾತ್ರ ಮಾತನಾಡಿದ್ದೇವೆ.
ನಮ್ಮ ಶತ್ರುಗಳಿಗೆ ಅವರ ಜಾಗವನ್ನು ತೋರಿಸುವುದು ಹೇಗೆಂಬುದು ನಮಗೆ ಗೊತ್ತಿದೆ ಮಿಸ್ಟರ್ ಮುನಿರ್. ಪಾಕಿಸ್ತಾನದಲ್ಲಿ ಸರಿಯಾದ ವೈದ್ಯಕೀಯ ಸೌಕರ್ಯಗಳು ಇಲ್ಲದೆ ಭಾರತಕ್ಕೆ ಬಂದು ಚಿಕಿತ್ಸೆ ಪಡೆದು ವಾಪಸಾಗುವ ಬಡಪಾಕಿಸ್ತಾನೀಯರ ಬಗ್ಗೆಯೂ ಒಮ್ಮೆ ಯೋಚಿಸಿ. ಇನ್ನು ಮುಂದೆ ಅವರಿಗೂ ಭಾರತದ ಬಾಗಿಲು ಬಂದ್ ಆಗಲಿದೆ!
ಅದಕ್ಕೂ ನೀವೇ ಜವಾಬ್ದಾರರು ಮಿಸ್ಟರ್ ಮುನಿರ್! ಹಾಂ ಇನ್ನೊಂದು ಮಾತು. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಯಾವತ್ತೂ ಹೆದರುವುದಿಲ್ಲ. ಅದನ್ನು ಕೊನೆಯ ಪಕ್ಷ ನಾವು ಕಿವಿಗೂ ಹಾಕಿ ಕೊಳ್ಳುವುದಿಲ್ಲ. ನಮ್ಮ ಮಂತ್ರ ಒಂದೇ. ನಮ್ಮ ನಂಬಿಕೆ ಒಂದೇ. ಅದನ್ನೇ ನಾವು ಹೆಮ್ಮೆಯಿಂದ ಪಠಿಸುತ್ತೇವೆ: ಜೈ ಹಿಂದ್! ಜೈ ಜವಾನ್!
(ಲೇಖಕರು ಹಿರಿಯ ಪತ್ರಿಕೋದ್ಯಮಿ)