ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜ ವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

-

ಅಶ್ವತ್ಥಕಟ್ಟೆ

ಸರಕಾರ ಯಾವ ಪಕ್ಷದ್ದೇ ಇರಲಿ, ಸರಕಾರಿ ಯಂತ್ರವನ್ನು ನಡೆಸುವುದು ಮಾತ್ರ ಅಧಿಕಾರಿ ಗಳು. ಯಾವುದೇ ಸರಕಾರ ಯಶಸ್ವಿಯಾಗಿ ನಡೆಯಬೇಕಾದರೆ ರಾಜಕೀಯ ಇಚ್ಛಾಶಕ್ತಿಯ ಜತೆಗೆ ಆಡಳಿತ ಯಂತ್ರವೂ ಚುರುಕಾ ಗಿರಬೇಕು. ಕಾರಣವಿಷ್ಟೇ- ಸರಕಾರಗಳು ತೆಗೆದು ಕೊಳ್ಳುವ ತೀರ್ಮಾನ ತಳಮಟ್ಟಕ್ಕೆ ಹೋಗಬೇಕಾದರೆ, ಸಾರ್ವಜನಿಕರಿಗೆ ಈ ತೀರ್ಮಾನ ಗಳ ಲಾಭ ಲಭಿಸಬೇಕಾದರೆ ಸರಕಾರಿ ಅಧಿಕಾರಿ, ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ.

ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಜನರು ಹಾಗೂ ಸರಕಾರದ ನಡುವಿನ ಸೇತುವೆ ಯಾಗಿ ಅಧಿಕಾರಿಗಳಿರುತ್ತಾರೆ. ಆದರೆ ಇತ್ತೀಚಿನ ವರ್ಷದಲ್ಲಿ ಸೇತುವೆಗಳಾಗಿ ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆಯಲ್ಲಿಯೇ ಗಣನೀಯ ಕುಸಿತವಾಗಿರುವುದು ಆತಂಕಕಾರಿ ವಿಷಯವಾಗಿದೆ.

ಕರ್ನಾಟಕದಲ್ಲಿ ಪದೇ ಪದೆ ಬಹುಚರ್ಚೆಯಾಗುವ ವಿಷಯವೆಂದರೆ ಸರಕಾರದ ವಿವಿಧ ಇಲಾಖೆಯಲ್ಲಿರುವ ಹುದ್ದೆಗಳು ಖಾಲಿಯಾಗುತ್ತಿರುವುದು. ಈ ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳಲು ಸರಕಾರ ಹತ್ತು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದರೂ, ಆರ್ಥಿಕ, ಕಾನೂನಾತ್ಮಕ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಖಾಲಿ ಹುದ್ದೆಗಳ ಭರ್ತಿಯ ಬದಲಿಗೆ ವರ್ಷದಿಂದ ವರ್ಷಕ್ಕೆ ಖಾಲಿಯಾಗುವ ಹುದ್ದೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

ಇದನ್ನೂ ಓದಿ: Ranjith H Ashwath Column: ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ಸರಕಾರ ಈ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ‘ಗುತ್ತಿಗೆ ಆಧಾರಿತ’ ನೌಕರರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಕೆಲ ವರ್ಷದಿಂದ ಆರಂಭಿಸಿದೆ. ಆದರೆ ಇಂಥ ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸಲು ಸಾಧ್ಯವಿಲ್ಲ.

ಇದರೊಂದಿಗೆ, ಗುತ್ತಿಗೆ ಆಧಾರದಲ್ಲಿ ಬಂದ ಬಹುತೇಕ ಸಿಬ್ಬಂದಿಗೆ, ಕಾಯಂ ಸಿಬ್ಬಂದಿಗೆ ಇರುವಷ್ಟು ಅನುಭವ, ತರಬೇತಿ ಇಲ್ಲದಿರುವುದರಿಂದ, ಕೆಲವೊಮ್ಮೆ ಇಡೀ ವ್ಯವಸ್ಥೆಯೇ ಹಾಳಾಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದು ಕೊಳ್ಳುವ ಸಿಬ್ಬಂದಿ ಯಾರಿಗೆ ‘ಉತ್ತರದಾಯಿಗಳು’ ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ.

ಉದಾಹರಣೆಗೆ, ಬಿಎಂಟಿಸಿ ಪರಿಚಯಿಸಿರುವ ಇಲೆಕ್ಟ್ರಿಕ್ ಬಸ್ʼಗಳಿಗೆ ಚಾಲಕರು, ಖಾಸಗಿ ಕಂಪನಿಯಿಂದ ನೇಮಕವಾಗಿರುವವರು; ಅವರು ತಮಗೂ ಸಾರಿಗೆ ನಿಗಮಕ್ಕೂ ಸಂಬಂಧ ವಿಲ್ಲ ಎನ್ನುವ ರೀತಿಯಿದ್ದಾರೆ. ಸಾರಿಗೆ ಇಲಾಖೆಯಿಂದ ನೇಮಕವಾಗಿರುವ ಸಿಬ್ಬಂದಿಗೂ, ಇಲೆಕ್ಟ್ರಿಕ್ ಬಸ್‌ಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಸಿಬ್ಬಂದಿಗೂ ಅಜಗಜಾಂತರ ವಿದೆ.

Vidhana Soudha

ಈ ರೀತಿಯಾಗಲು ಪ್ರಮುಖವಾಗಿ, ಕಾಯಂ ನೌಕರರು ಪಡೆಯುವ ತರಬೇತಿ, ಗುತ್ತಿಗೆ ನೌಕರರು ಪಡೆಯುವುದಿಲ್ಲ. ಇದರಿಂದ ಕೌಶಲದಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಾಸ ವಿರುತ್ತದೆ. ಇದೇ ರೀತಿ ಸರಕಾರಿ ಶಾಲಾ-ಕಾಲೇಜುಗಳಿಗೆ ನೇಮಿಸಿಕೊಳ್ಳಲಾಗುವ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೂ, ಕಾಯಂ ಶಿಕ್ಷಕರಿಗೂ ಭಾರಿ ವ್ಯತ್ಯಾಸವಿರುತ್ತದೆ.

ಈ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದ್ದರೂ, ಖಾಲಿಯಾಗುತ್ತಿರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವಲ್ಲಿ ಸರಕಾರ ಕಳೆದ ಮೂರ್ನಾಲ್ಕು ವರ್ಷದಿಂದ ಮುಂದಾಗದೇ ಇರುವು ದರಿಂದ ಭಾರಿ ಪ್ರಮಾಣದ ಹುದ್ದೆಗಳಿಗೆ ನಿರ್ವಾಹಕರೇ ಇಲ್ಲ.

ಸರಕಾರವೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ ಒಟ್ಟು 7.9 ಲಕ್ಷ ಹುದ್ದೆಗಳು ಮಂಜೂರಾಗಿ ದ್ದರೆ, ಹಾಲಿ ಕಾರ್ಯನಿರ್ವಹಿಸುತ್ತಿರುವವರು ಕೇವಲ 5.1 ಲಕ್ಷ ಮಂದಿ. ಇನ್ನುಳಿದಂತೆ 2.7 ಲಕ್ಷ ಹುದ್ದೆಗಳು ಖಾಲಿಯಾಗಿವೆ. ಅಂದರೆ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಭರ್ತಿಯಾಗದೇ ಇವರು ಕಾಯುತ್ತಿದ್ದಾರೆ.

ಭರ್ತಿಯಾಗದೇ ಇರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಸಿಗದೇ ನಿರುದ್ಯೋಗಿ ಗಳಾಗಿದ್ದರೆ, ಇನ್ನೊಂದೆಡೆ ಇರುವ ಸಿಬ್ಬಂದಿಯ ಮೇಲಿನ ಒತ್ತಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗೆ ನೋಡಿದರೆ, ಸರಕಾರಿ ವಲಯದಲ್ಲಿ ಪ್ರತಿ ವರ್ಷ 17 ರಿಂದ 18 ಸಾವಿರ ನೌಕರರು, ಸಿಬ್ಬಂದಿ ಸರಾಸರಿ ನಿವೃತ್ತಿಯಾಗುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಪ್ರತಿ ವರ್ಷ 10ರಿಂದ 15 ಸಾವಿರ ಮಂದಿಯ ನೇಮಕ ಪ್ರಕ್ರಿಯೆ ನಡೆಯುತ್ತವೆ (ಕಳೆದ ಮೂರ್ನಾಲ್ಕು ವರ್ಷದಿಂದ ಇನ್ನೂ ಕಡಿಮೆಯಾಗಿದೆ).

ನಿವೃತ್ತಿ ಹೊಂದುವವರ ಸಂಖ್ಯೆಗಿಂತ ನೇಮಕವಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ಐದು ವರ್ಷದಲ್ಲಿ ಬರೋಬ್ಬರಿ 86 ಸಾವಿರ ನೌಕರರು ವಯೋನಿವೃತ್ತಿ ಹೊಂದು ತ್ತಾರೆ. ಪ್ರಸಕ್ತ ಸಾಲಿನಲ್ಲಿಯೇ 16,513 ಮಂದಿ ನಿವೃತ್ತಿಯಾಗುತ್ತಿದ್ದಾರೆ.

ಕಳೆದ 3 ವರ್ಷದಲ್ಲಿ ಕೆಪಿಎಸ್‌ಸಿ ಮತ್ತು ಕೆಇಎ ಮೂಲಕ ಕೇವಲ 8157 ಹುದ್ದೆಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ; ಆದರೆ ನಿವೃತ್ತಿ ಹೊಂದಿದವರ ಸಂಖ್ಯೆ 35 ಸಾವಿರದ ಆಸುಪಾಸಿನಲ್ಲಿದೆ. ಅಂದರೆ, ಸರಕಾರಿ ಕೆಲಸಕ್ಕೆ ಬರುವವರಿಗಿಂತ ನಿವೃತ್ತಿ ಹೊಂದುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈ ಪ್ರಮಾಣದ ಅಂತರವನ್ನು ಸರಿಪಡಿಸುವುದಕ್ಕಾಗಿಯೇ ರಾಜ್ಯ ಸರಕಾರ 2026-27ನೇ ಸಾಲಿನಲ್ಲಿ ವಿವಿಧ ಇಲಾಖೆಯ 56 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವು ದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಆದರೆ ಒಳಮೀಸಲು ಗೊಂದಲ, ಆರ್ಥಿಕ ಇಲಾಖೆಯ ಹಲವು ಅಕ್ಷೇಪಣೆಗಳನ್ನು ಮೀರಿ ವರ್ಷದ ಅವಧಿಯಲ್ಲಿ ಈ ಪ್ರಮಾಣದಲ್ಲಿ ನೇಮಕ ಸಾಧ್ಯವೇ ಎನ್ನುವುದು ಅನೇಕರಲ್ಲಿರುವ ಪ್ರಶ್ನೆ.

ಕಳೆದ ವರ್ಷವೂ ಶಿಕ್ಷಕರು, ಉಪನ್ಯಾಸಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಹಂತ ದಲ್ಲಿ ನೇಮಕ ಪ್ರಕ್ರಿಯೆ ಮಾಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ಪೂರ್ಣ ಪ್ರಮಾಣ ದಲ್ಲಿ ಅದು ಸಾಧ್ಯವಾಗಲಿಲ್ಲ.

ಇದರೊಂದಿಗೆ ಇಂದೇ ಸಿಬ್ಬಂದಿಯನ್ನು ಭರ್ತಿ ಮಾಡಲು ಮುಂದಾದರೂ ಅವರು ಕೆಲಸ ಆರಂಭಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಏಕೆಂದರೆ, ಅರ್ಜಿ ಆಹ್ವಾನಿಸಿ, ಪರೀಕ್ಷೆ ನಡೆಸಿ, ಅಂತಿಮ ಪಟ್ಟಿ, ಅದಕ್ಕೆ ಕೆಲವೊಂದಷ್ಟು ತಕರಾರು, ಬಳಿಕ ಸಂದರ್ಶನ, ತರಬೇತಿ, ಪೋಸ್ಟಿಂಗ್ ಸೇರಿದಂತೆ ಸರಕಾರಿ ವ್ಯವಸ್ಥೆಯಲ್ಲಿರುವ ಹತ್ತಾರು ಪ್ರಕ್ರಿಯೆ ಪೂರ್ಣಗೊಳಿಸಿ ವ್ಯಕ್ತಿಯನ್ನು ಅಧಿಕಾರಿ ಸ್ಥಾನದಲ್ಲಿ ಕೂರಿಸಲು ವರ್ಷಗಟ್ಟಲೇ ಬೇಕಾಗುತ್ತದೆ.

ಗೃಹ ಇಲಾಖೆ ಸೇರಿದಂತೆ ಕೆಲ ಇಲಾಖೆಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ, ಕೆಲಸ ಆರಂಭಿಸಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸಬರನ್ನು ಕುರ್ಚಿಯ ಮೇಲೆ ಕೂರಿಸುವ ವೇಳೆಗೆ ಪುನಃ 15 ರಿಂದ 17 ಸಾವಿರ ಸಿಬ್ಬಂದಿ ವಯೋನಿವೃತ್ತಿ ಹೊಂದುವುದರಿಂದ ಈ ಅಂತರ ಪುನಃ ಅಷ್ಟೇ ಪ್ರಮಾಣಕ್ಕೆ ಬಂದಿರುತ್ತದೆ. ಏಕೆಂದರೆ, ಹೊಸದಾಗಿ ಸೇರಿಸಿಕೊಳ್ಳುವುದು ಸರಕಾರದ ಕೈಯಲ್ಲಿ ಇರುತ್ತದೆಯೇ ಹೊರತು, ನಿವೃತ್ತಿಯಾಗುವವರನ್ನು ತಡೆದಿಟ್ಟುಕೊಳ್ಳಲು ಸಾಧ್ಯ ವಿಲ್ಲ.

ಇನ್ನು ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರಕಾರ 56 ಸಾವಿರದಿಂದ 58 ಸಾವಿರ ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಆದರೆ ಘೋಷಿಸಿದಷ್ಟು ಭರ್ತಿ ಮಾಡಿ ಕೊಂಡಿದ್ದೇ ಆದರೆ, ಸರಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊಡೆತ ಬೀಳುವುದು ನಿಶ್ಚಿತ ಎನ್ನಲಾಗುತ್ತಿದೆ. ಏಕೆಂದರೆ, 58 ಸಾವಿರ ಜನರನ್ನು ಭರ್ತಿ ಮಾಡಿಕೊಂಡರೆ, ಅವರಿಗೆ ವೇತನ, ಭತ್ಯೆಗಳಿಗೂ ಹಣ ಹೊಂದಿಸಬೇಕಾದ ಅನಿರ್ವಾಯತೆಗೆ ಸರಕಾರ ಸಿಲುಕಲಿದೆ.

ಈಗಿರುವ ವೇತನ ಶ್ರೇಣಿಯಲ್ಲಿ ಒಟ್ಟಿಗೆ ಈ ಪ್ರಮಾಣದ ಸಿಬ್ಬಂದಿಯನ್ನು ನೇಮಿಸಿಕೊಂಡರೆ, ವೇತನ ನೀಡಲು ಸರಕಾರಕ್ಕೆ ವಾರ್ಷಿಕವಾಗಿ ಕನಿಷ್ಠ ಎರಡು ಸಾವಿರ ಕೋಟಿ ರು. ಹೆಚ್ಚು ವರಿ ಅನುದಾನದ ಅಗತ್ಯವಿದೆ. ಈಗಾಗಲೇ ಬದ್ಧತಾ ವೆಚ್ಚ ಮಿತಿ ಮೀರಿರುವ ಈ ಸಮಯ ದಲ್ಲಿ ಈ ಹೊರೆಯನ್ನು ಸರಕಾರ ಯಾವ ರೀತಿಯಲ್ಲಿ ಹೊರುತ್ತದೆ ಎನ್ನುವ ಪ್ರಶ್ನೆಯೂ ಇಲ್ಲಿ ಮೂಡುವುದು ಸಹಜ.

ಹಾಗೆಂದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಬಿಟ್ಟರೆ ವರ್ಷದಿಂದ ವರ್ಷಕ್ಕೆ ನಿವೃತ್ತಿ ಹೊಂದುವವರ ಸಂಖ್ಯೆಯೂ ಏರಿಕೆಯಾಗುತ್ತಾ ಹೋಗುತ್ತದೆ. ಈಗಲೇ ಎರಡು ಲಕ್ಷ ಚಿಲ್ಲರೆ ಖಾಲಿ ಹುದ್ದೆಗಳು ಸರಕಾರಿ ವ್ಯವಸ್ಥೆಯ ವಿವಿಧ ಹಂತದಲ್ಲಿದ್ದು, ಇನ್ನು ಮೂರು ವರ್ಷ ಕಳೆದರೆ ಈ ಪ್ರಮಾಣವು ಮೂರು ಲಕ್ಷವನ್ನು ದಾಟಲಿದೆ. ಈ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರಕಾರವು ಬದ್ಧತಾ ವೆಚ್ಚವೂ ಕೈಮೀರದಂತೆ, ಸರಕಾರದ ಆಡಳಿತ ಯಂತ್ರಕ್ಕೂ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಾಗಿದೆ.

ಈ ಇಕ್ಕಟ್ಟಿನಿಂದ ಹೊರಬರಲು ಸರಕಾರದ ಮುಂದಿರುವ ಏಕೈಕ ಮಾರ್ಗವೆಂದರೆ, ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿರುವ ಅನಗತ್ಯ ಹುದ್ದೆಗಳ ಬಗ್ಗೆ ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಿ, ಅನಗತ್ಯವಾಗಿರುವ ಸಾವಿರಾರು ಹುದ್ದೆಗಳಿಗೆ ಕತ್ತರಿ ಪ್ರಯೋಗ ಮಾಡಬೇಕಿದೆ.

ತಂತ್ರಜ್ಞಾನ ಯುಗದಲ್ಲಿ ಹೊರೆ ಎನಿಸಿರುವ, ಇಂದಿನ ದಿನಮಾನಕ್ಕೆ ‘ಪ್ರಸ್ತುತ’ ಎನಿಸದ ಹುದ್ದೆಗಳನ್ನು ಕಡಿತಗೊಳಿಸುವ ಮೂಲಕ ಅಲ್ಲಿ ಪೋಲಾಗುತ್ತಿರುವ ಕೋಟ್ಯಂತರ ರುಪಾಯಿ ವೇತನವನ್ನು ಅತ್ಯಗತ್ಯವಿರುವ ಹುದ್ದೆಗಳಿಗೆ ನೀಡಬೇಕಿದೆ.

ಏಕೆಂದರೆ ಮೊದಲೇ ಹೇಳಿದಂತೆ ಯಾವುದೇ ಸರಕಾರದ ಆಡಳಿತ ಯಂತ್ರ ಗಟ್ಟಿಯಾಗಿರ ಬೇಕೆಂದರೆ, ಅಲ್ಲಿ ಅಧಿಕಾರಿ, ಸಿಬ್ಬಂದಿಯ ಸಂಖ್ಯಾಬಲ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಖ್ಯಾಬಲವನ್ನು ಗುತ್ತಿಗೆ ಆಧಾರದಲ್ಲಿಯೋ, ಅತಿಥಿ ನೌಕರರ ರೂಪದಲ್ಲಿಯೋ ತುಂಬಿ ಕೊಳ್ಳುವುದರಿಂದ ಕುರ್ಚಿಗಳು ಭರ್ತಿಯಾಗಬಹುದೇ ಹೊರತು, ನಿರೀಕ್ಷಿತ ವೇಗದಲ್ಲಿ ಸರಕಾರದ ಕೆಲಸಗಳು ನಡೆಯುವುದಿಲ್ಲ.

ಅಧಿಕಾರದ ಚುಕ್ಕಾಣಿಯಲ್ಲಿರುವವರು ಇನ್ನಾದರೂ ಭರ್ತಿ ಮಾಡಿಕೊಳ್ಳುವತ್ತ ಗಮನಿಸ ಬೇಕಿದೆ. ಕೇವಲ ತುಂಬಿಸಿಕೊಳ್ಳುವುದಷ್ಟೇ ಅಲ್ಲದೆ, ಅಗತ್ಯವೆಷ್ಟಿದೆ ಎನ್ನುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು. ಇಷ್ಟು ದಿನ, ನಿವೃತ್ತಿ ಹೊಂದಿದ ಬಳಿಕವೂ ನೇಮಕಕ್ಕೆ ಹತ್ತಾರು ವಿಘ್ನಗಳಾಗಿರುವುದನ್ನು ಗಮನದಲ್ಲಿಟ್ಟುಕೊಂಡು, ನಿವೃತ್ತಿಯಿಂದ ಖಾಲಿ ಯಾಗುವ ಜಾಗಕ್ಕೆ ‘ಆಟೋ ಪೈಲಟ್’ ರೀತಿ ಭರ್ತಿಗೆ ಕ್ರಮವಹಿಸಬೇಕು.

ಹುದ್ದೆ ಭರ್ತಿಗೆ ಈಗಿರುವ ಹತ್ತಾರು ಪ್ರಕ್ರಿಯೆಗಳ ಬದಲಿಗೆ, ಕೇಂದ್ರದ ಯುಪಿಎಸ್‌ಸಿಯಲ್ಲಿರು ವಂತೆ ಪ್ರತಿವರ್ಷ ಹುದ್ದೆ ಭರ್ತಿ ಕಾರ್ಯವು ಯಾವುದೇ ಅಡ್ಡಿ ಆತಂಕವಿಲ್ಲದೇ ನಡೆಯು ವಂತೆ ನೋಡಿಕೊಂಡರೆ ಮಾತ್ರ ಇಂಥ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ದೊರೆಯಬಹುದು. ಇಲ್ಲದೇ ಹೋದರೆ, ಖಾಲಿ ಹುದ್ದೆ ಎನ್ನುವುದು ನಿತ್ಯ ಗೋಳಾಗುವುದರಲ್ಲಿ ಅನುಮಾನ ವಿಲ್ಲ.