ಭಾರತದಾದ್ಯಂತ ಮೊಬೈಲ್ ಸದ್ದು ಬೀಪ್ ಸೌಂಡ್ ಮಾಡಿದ ಮೊಬೈಲ್ ಫೋನ್: ಕೇಂದ್ರ ಸರ್ಕಾರದ ತುರ್ತು ವಿಪತ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷೆ ಯಶಸ್ವಿ
ಭಾರತ ಸರ್ಕಾರವು ‘ಸೆಲ್ ಬ್ರಾಡ್‌ಕಾಸ್ಟ್’ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಪ್ರಾರಂಭಿಸಿದ್ದು, ದೇಶದಾದ್ಯಂತ ಲಕ್ಷಾಂತರ ಮೊಬೈಲ್‌ಗಳಿಗೆ ʼಅತ್ಯಂತ ತೀವ್ರ ಎಚ್ಚರಿಕೆʼ ಸಂದೇಶ ರವಾನಿಸಲಾಗಿದೆ. ಇದು ಕೇವಲ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಗಾಬರಿಯಾಗಬೇಕಾಗಿಲ್ಲ. ಈ ವ್ಯವಸ್ಥೆಯು ಭೂಕಂಪ, ಸುನಾಮಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 2: ಇಂದು ನಿಮ್ಮ ಮೊಬೈಲ್ ಫೋನ್ ಹಠಾತ್ತನೆ ವಿಚಿತ್ರ ಸದ್ದಿನೊಂದಿಗೆ ಕಂಪಿಸಿದ್ದರೆ ಗಾಬರಿಯಾಗಬೇಡಿ. ಭಾರತ ಸರ್ಕಾರವು ಇಂದು (ಶನಿವಾರ, ಮೇ 2) ತನ್ನ ಸ್ವದೇಶಿ ತಂತ್ರಜ್ಞಾನದ 'ಸೆಲ್ ಬ್ರಾಡ್‌ಕಾಸ್ಟ್' (Cell Broadcast) ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಅಧಿಕೃತವಾಗಿ ಪರೀಕ್ಷಾರ್ಥವಾಗಿ ಪ್ರಾರಂಭಿಸಿದೆ. ದೇಶದಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ 'ಅತ್ಯಂತ ತೀವ್ರ ಎಚ್ಚರಿಕೆ' (Extremely Severe Alert) ಎಂಬ ಸಂದೇಶವು ರವಾನೆಯಾಗಿದ್ದು, ಇದು ಕೇವಲ ವ್ಯವಸ್ಥೆಯ ಪರೀಕ್ಷೆಯಾಗಿದ್ದರಿಂದ ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮೇ 2ರಂದು ಈ ಸುಧಾರಿತ ವ್ಯವಸ್ಥೆಗೆ ಚಾಲನೆ ನೀಡಿದರು. ಈ ಯೋಜನೆಯ ಕೇಂದ್ರಬಿಂದು 'ಸಚೇತ್' ಎಂಬ ಸಮಗ್ರ ಎಚ್ಚರಿಕೆ ವೇದಿಕೆ. ಇದನ್ನು ದೂರಸಂಪರ್ಕ ಇಲಾಖೆಯ ಸಂಶೋಧನಾ ಕೇಂದ್ರವಾದ ಸಿ-ಡಾಟ್ ಅಭಿವೃದ್ಧಿಪಡಿಸಿದ್ದು, ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಶಿಫಾರಸಿನ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಈ ಸೇವೆಯು ಭಾರತದ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿದೆ.
ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ಈ ವ್ಯವಸ್ಥೆಯು ಸಾಮಾನ್ಯ ಎಸ್‌ಎಂಎಸ್ ಸಂದೇಶಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಸಾಮಾನ್ಯ ಸಂದೇಶಗಳು ಸದ್ದಿಲ್ಲದೆ ಬರುತ್ತವೆ. ಆದರೆ 'ಸೆಲ್ ಬ್ರಾಡ್‌ಕಾಸ್ಟ್' ಎಚ್ಚರಿಕೆಗಳು ಫೋನ್ ಸೈಲೆಂಟ್ ಅಥವಾ 'ಡು ನಾಟ್ ಡಿಸ್ಟರ್ಬ್' ಮೋಡ್‌ನಲ್ಲಿದ್ದರೂ ಸಹ, ಕರ್ಕಶ ಧ್ವನಿಯ ಅಲಾರಾಂನೊಂದಿಗೆ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತವೆ. ಇದರಿಂದ ತುರ್ತು ಸಂದರ್ಭದಲ್ಲಿ ಜನರ ಗಮನವನ್ನು ತಕ್ಷಣ ಸೆಳೆಯಲು ಸಾಧ್ಯವಾಗುತ್ತದೆ. ಇದುವರೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಈ ವ್ಯವಸ್ಥೆಯ ಮೂಲಕ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು 134 ಬಿಲಿಯನ್ ಎಚ್ಚರಿಕೆಗಳನ್ನು ರವಾನಿಸಿವೆ.
ಭೂಕಂಪ, ಸುನಾಮಿ, ಸಿಡಿಲು ಅಪ್ಪಳಿಸುವಿಕೆ ಅಥವಾ ಅನಿಲ ಸೋರಿಕೆಯಂತಹ ನೈಸರ್ಗಿಕ ಮತ್ತು ಮಾನವನಿರ್ಮಿತ ವಿಪತ್ತುಗಳ ಸಮಯದಲ್ಲಿ ಈ ತಂತ್ರಜ್ಞಾನವು ಜೀವ ರಕ್ಷಕವಾಗಿ ಕೆಲಸ ಮಾಡಲಿದೆ. ಈ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಾಗ, ಯಾವುದೇ ಮೊಬೈಲ್ ಸೆಟ್ಟಿಂಗ್‌ಗಳ ಹಂಗಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯನ್ನೂ ತಲುಪಲು ಸಾಧ್ಯವಾಗುತ್ತದೆ, ಇದು ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಸರ್ಕಾರದ ಈ ಮಹತ್ವದ ಹೆಜ್ಜೆಯು ಡಿಜಿಟಲ್ ಇಂಡಿಯಾದ ಸುರಕ್ಷತಾ ದೃಷ್ಟಿಕೋನದಲ್ಲಿ ಹೊಸ ಮೈಲಿಗಲ್ಲಾಗಿದೆ.