Vishweshwar Bhat Column: ವ್ಯಕ್ತಿತ್ವವಿರುವುದು ಮನಸ್ಸಿನ ವಿಸ್ತಾರದಲ್ಲಿ, ದೇಹದ ಗಾತ್ರದಲ್ಲಲ್ಲ
ದುರ್ಲಭಜೀ ಹೇಳಿದಂತೆ, ದಪ್ಪವಾಗಿರುವುದೇ ಅಪರಾಧ ಎಂದು ಎಲ್ಲರೂ ಭಾವಿಸಿದಂತಿದೆ. ಸ್ಲಿಮ್ ಆಗಲು ವಿವಿಧ ಕೋರ್ಸ್ ಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಉಪವಾಸ ಬೀಳುತ್ತಿದ್ದಾರೆ. ಮಾತ್ರೆ ಸೇವಿಸುತ್ತಿದ್ದಾರೆ. ಜಿರೋ ಫಿಗರ್ ಖಯಾಲಿ ಹಿಡಿಸಿಕೊಂಡಿದ್ದಾರೆ. ಜನರ ಆಹಾರ ಪದ್ಧತಿ ಬದಲಾಗುತ್ತಿದೆ. Thin is beautiful, Fat is ugly ಎಂದು ಜನ ಭಾವಿಸಲಾರಂಭಿಸಿದ್ದಾರೆ.


ನೂರೆಂಟು ವಿಶ್ವ
vbhat@me.com
ಹಲವು ತಿಂಗಳುಗಳಾದರೂ ಯೋಗಿ ದುರ್ಲಭಜೀ ಮಾತಿಗೆ ಸಿಕ್ಕಿರಲಿಲ್ಲ. ನಾನು ವಿದೇಶ ಪ್ರವಾಸ, ತಿರುಗಾಟ, ಫೋಟೋಗ್ರಫಿ, ಡ್ರೋನ್, ಬರವಣಿಗೆ, ಆಫೀಸು ಮಧ್ಯೆ ಕಳೆದು ಹೋಗಿದ್ದೆ. ಈ ಸಮಯದಲ್ಲಿ ಎಂಟಕ್ಕೂ ಹೆಚ್ಚು ದೇಶಗಳಿಗೆ ಹೋಗಿ ಬಂದೆ. ಒಂದೆರಡು ಸಲ ದುರ್ಲಭಜೀ ಯವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಕಳೆದ ವಾರ ಫೋನ್ ಮಾಡಿದಾಗ ಯೋಗಿಜೀ ಮೌನವ್ರತದಲ್ಲಿದ್ದಾರೆ ಅಂತ ಅವರ ಶಿಷ್ಯರು ಹೇಳಿದರು.
“ಯೋಗಿ ದುರ್ಲಭಜೀ ಡಾ. ಮನಮೋಹನಸಿಂಗ್ ಅವರ ವ್ರತಾಚರಣೆಯಲ್ಲಿದ್ದಾರಾ?" ಎಂದು ರೇಗಿಸಿದೆ. ಅವರ ಚಾಲಾಕಿ ಶಿಷ್ಯ ನಿಶ್ಚಿಂತಜೀ, “ಯೋಗಿಜೀ ವರ್ಷದಲ್ಲಿ ಹದಿನೈದು ದಿನ ಮಾತ್ರ ಮೌನವ್ರತವನ್ನು ಆಚರಿಸುತ್ತಾರೆ. ಡಾ.ಮನಮೋಹನ ಸಿಂಗ್‌ರಂತೆ ಹತ್ತು ವರ್ಷಗಳ ಕಠೋರ ಮೌನವ್ರತ ಅಲ್ಲ" ಎಂದ.
“ಯೋಗಿಜಿ ಜತೆ ಎಸ್ಸೆಮ್ಮೆಸ್‌ನಲ್ಲಿ ಮಾತಾಡಬಹುದಾ?" ಎಂದು ಕೇಳಿದೆ. “ಯೋಗಿಜೀ ಈಗ ಏನನ್ನೂ ಬಳಸುವುದಿಲ್ಲ. ನೆಲದ ಮೇಲೆಯೇ ಮಲಗುತ್ತಾರೆ. ಮೊಬೈಲ್ ರಿಂಗ್ ಸದ್ದು ಕೇಳಿದರೆ ಸಿಡಿಮಿಡಿಗೊಳ್ಳುತ್ತಿದ್ದರು. ಈಗ ಅವರೊಂದೇ ಅಲ್ಲ, ಅವರು ವಾಸಿಸುವ ಮನೆಯಲ್ಲಿ ಕಠೋರ ಮೌನ" ಎಂದ ನಿಶ್ಚಿತಂಜೀ.
ದುರ್ಲಭಜೀ ಈ ವರಸೆಗಳೆಲ್ಲ ನನಗೆ ಹೊಸತಲ್ಲ. ಕಳೆದ ಕೆಲವು ತಿಂಗಳ ಹಿಂದೆ ವ್ಯವಹಾರದಲ್ಲಿ ಯೋಗಿಜೀ ಅವರಿಗೆ ನೂರಾರು ಕೋಟಿ ರುಪಾಯಿ ಲಾಭವಾಯಿತು. ಆ ಎಲ್ಲ ಹಣವನ್ನು ಮುಂಬೈನ ಕೊಳಗೇರಿ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಕೊಟ್ಟು ಬಂದರು. ಮನೆಯಲ್ಲಿನ ಪೀಠೋ ಪಕರಣಗಳನ್ನೆಲ್ಲ ಎತ್ತಿಕೊಂಡು ಹೋಗುವಂತೆ ಶಿಷ್ಯರಿಗೆ ಹೇಳಿದರು.
ಇದನ್ನೂ ಓದಿ: Vishweshwar Bhat Column: ವಿಮಾನದ ರೆಕ್ಕೆಗಳು ಬಾಗಿದರೆ...
ಕುಳಿತುಕೊಳ್ಳಲು ಮಣೆ ಹೊರತಾಗಿ ಏನೂ ಇರಲಿಲ್ಲ. ಎರಡು ದಿನಗಳ ಬಳಿಕ ಅದನ್ನೂ ಬೇರೆ ಯವರಿಗೆ ಕೊಡುವಂತೆ ಹೇಳಿದರು. “ಈಗ ಮನೆ ಭರ್ತಿಯಾಗಿ ತುಂಬಿಕೊಂಡಿದೆ. ಫರ್ನೀಚರ್ ಗಳನ್ನೆಲ್ಲ ತಂದು ಖಾಲಿ ಖಾಲಿ ಮಾಡಬೇಡಿ" ಎಂದು ಶಿಷ್ಯರಿಗೆ ತಾಕೀತು ಮಾಡಿದ ಯೋಗಿಜೀ ತಮ್ಮ ಕೋಣೆಯೊಳಗೆ ಇಟ್ಟಿದ್ದ ಲಾಕರನ್ನೂ ಕೊಟ್ಟು ಬಿಡುವಂತೆ ಹೇಳಿದರು.
ಇಡೀ ಮನೆಯಲ್ಲಿ ಹುಡುಕಿದರೂ ಒಂದು ಬಿಲ್ಲಿ ಕಾಸು ಸಿಗದಷ್ಟು ಬರಿಗೈದಾಸರಾಗಿದ್ದರು. ದುರ್ಲಭಜೀ ಇಂಥ ಸ್ಥಿತಿಯನ್ನು ಅದೆಷ್ಟು ಸಲ, ತಲುಪಿದ್ದಾರೋ ಏನೋ? ಅವರು ಹಣ ಇರುವ ಹಾಗೂ ಇಲ್ಲದಿರುವ ಸ್ಥಿತಿ ಮಧ್ಯೆ ವ್ಯತ್ಯಾಸವನ್ನೇ ಕಾಣುವುದಿಲ್ಲ. ಅವರಿಗೆ ನೂರು ಕೋಟಿ ಗಳಿಸು ವುದೂ ಗೊತ್ತು. ಗಳಿಸಿದ್ದೆಲ್ಲವನ್ನೂ ತನ್ನದಲ್ಲವೇ ಅಲ್ಲ ಎಂದು ಬೇರೆಯವರಿಗೆ ಕೊಟ್ಟು ಕೆಲ ಕಾಲ ಪರಮಾನಂದವನ್ನು ಅನುಭವಿಸುವುದೂ ಗೊತ್ತು.
“ಹಣವಿದ್ದರೆ ನಿದ್ದೆ ಬರೊಲ್ಲ. ಹಣ ಮಾಡಲಾರಂಭಿಸಿದರೆ ಸಮಾಧಾನವಿಲ್ಲ. ಸಾಕು ಎಂಬುದಿಲ್ಲ. ಎಷ್ಟು ಹಣ ಮಾಡಿದರೂ ತೃಪ್ತಿಯೆಂಬುದಿಲ್ಲ. ಹಣ ಎಂಥ ಕೆಲಸವನ್ನಾದರೂ ಮಾಡಿಸುತ್ತದೆ. ಆಗ ನೆಮ್ಮದಿಯಿಂದ ಇರುವುದಾದರೂ ಹೇಗೆ? ನಾನು ಆಗ ಗಳಿಸಿದ್ದೆಲ್ಲವನ್ನೂ ಕೊಟ್ಟು ಶೂನ್ಯವಾಗಲು ಪ್ರಯತ್ನಿಸುತ್ತೇನೆ. ಮೊದಮೊದಲು ಒಂದು ಪೈಸೆಯನ್ನು ಬೇರೆಯವರಿಗೆ ಕೊಡಬೇಕಾದ ಸಂದರ್ಭದಲ್ಲಿ ಕರುಳು ಕಿತ್ತುಬಂದಷ್ಟು ವೇದನೆ, ಸಂಕಟವಾಗುತ್ತಿತ್ತು, ನನ್ನ ದೇಹದ ಅಂಗವನ್ನಾ ದರೂ ಕೊಟ್ಟೇನು ಆದರೆ ಹಣವನ್ನು ಮಾತ್ರ ಕೊಡಲಾರೆ ಎಂಬ ಮನಸ್ಥಿತಿ ನನ್ನದಾಗಿತ್ತು.
ಕ್ರಮೇಣ ನನ್ನ ಈ ಗುಣದಿಂದ ಮೀರಿ ಬೆಳೆಯಬೇಕು ಎಂದು ಅನಿಸಲಾರಂಭಿಸಿತು. ಕೊಡುವು ದರಲ್ಲಿರುವ ಸಂತೃಪ್ತಿ ಯಾವುದರಲ್ಲೂ ಇಲ್ಲ ಎಂಬುದು ಮನವರಿಕೆಯಾಗತೊಡಗಿತು. ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಕೊಡಲಾರಂಭಿಸಿದೆ, ಕ್ರಮೇಣ ಸ್ವಲ್ಪ ಇಟ್ಟುಕೊಂಡು ಉಳಿದುದೆಲ್ಲವನ್ನೂ ಕೊಡಲಾರಂಭಿಸಿದೆ. ಈಗ ಎಲ್ಲವನ್ನೂ ಕೊಡುತ್ತಿದ್ದೇನೆ. ಇದರಲ್ಲಿರುವ ಸುಖ ಅನುಭವಿಸಿದವನಿಗೇ ಗೊತ್ತು" ಎಂದರು ಯೋಗಿ ದುರ್ಲಭಜೀ.

“ಯೋಗಿಜೀ, ಮುಂದೇನು?" ಎಂದು ಕೇಳಿದೆ.
“ಮುಂದೇನೂ ಇಲ್ಲ. ಜೀವನದಲ್ಲಿ ಸುಖವಾಗಿರಲು ಹಲವು ದಾರಿಗಳಿವೆ. ಹಣ ಗಳಿಕೆಯೊಂದೇ ಅಲ್ಲ. ಅದು ಒಂದು ಉಪಾಯವಾಗಬೇಕೇ ಹೊರತು ಜೀವನೋಪಾಯವಾಗಬಾರದು. ಪ್ರತಿದಿನ ನಾವು ಮಾಡುವ ಕೆಲಸಗಳನ್ನೆಲ್ಲ ದುಡ್ಡು ಮಾಡುವ ಉದ್ದೇಶವನ್ನಿಟ್ಟುಕೊಂಡೇ ಮಾಡುತ್ತೇವಾ ಎಂದು ಅನಿಸಲಾರಂಭಿಸಿದೆ. ತನಗೇನು ಸಿಗುತ್ತದೆ, ತನಗೆಷ್ಟು ಕಮಿಷನ್ ಸಿಗುತ್ತದೆ, ತನಗೆಷ್ಟು ಲಂಚ ಸಿಗುತ್ತದೆ ಎಂದೇ ಯೋಚಿಸುತ್ತಾರೆ. ಸಂಬಂಧಗಳನ್ನು ದುಡ್ಡಿನ ಆಧಾರದಲ್ಲಿಯೇ ನಿರ್ಧರಿಸ ಲಾಗುತ್ತಿದೆ. ಇವರ ಸಂಪರ್ಕ ಮಾಡುವುದರಿಂದ ತನಗೇನು ಸಿಗುತ್ತದೆಯೆಂದೇ ಜನ ಯೋಚಿಸುತ್ತಾರೆ. ಇದರಿಂದ ಕ್ಷಣಿಕ ಲಾಭವಾಗಬಹುದಷ್ಟೆ" ಎಂದರು ಯೋಗಿಜೀ.
ಅವರೇ ಮುಂದುವರಿಸಿದರು- “ನಾನು ಕಳೆದ ತಿಂಗಳು ಕಾಶಿಯಲ್ಲಿ ಇಪ್ಪತ್ತೆರಡು ದಿನವಿದ್ದೆ. ಅಲ್ಲಿನ ಬೀಡಾಡಿ ದನಕರುಗಳಿಗೆ ನೀರು, ಆಹಾರ ಹಾಕಿದೆ. ನನಗೆ ಸಿಕ್ಕ ಸಂತಸ, ಸಮಾಧಾನವನ್ನು ಹಣ ದಲ್ಲಿ ಅಳೆಯಲು ಸಾಧ್ಯವೇ? ಅದರ ಮುಂದೆ ನೂರು ಕೋಟಿ ರುಪಾಯಿ ಏನೇನೂ ಅಲ್ಲ. ನಾನು ಮಾಡಿದಂತೆ ಎಲ್ಲರೂ ಮಾಡಬೇಕೆಂದು ಹೇಳುತ್ತಿಲ್ಲ. ಅದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಹಾಗೆಂದು ಕಷ್ಟವೂ ಅಲ್ಲ. ನನ್ನದು ಆದರ್ಶ ಅಲ್ಲ. ನೆಮ್ಮದಿ ಅರಸುವ ಮಾರ್ಗವಷ್ಟೆ. ಎಲ್ಲ ಆನಂದವೂ ಹಣದಲ್ಲಿಯೇ ಇದೆ ಎಂದು ಭಾವಿಸಿದವರಿಗೆ, ಹಣ ಹೇರಳವಾಗಿ ಬಂದ ಬಳಿಕ ಅರಿವಾಗುತ್ತದಲ್ಲ, ಹಣದಲ್ಲಿ ಅದಿಲ್ಲ ಎಂಬುದು, ನನಗೆ ಅರಿವಾದುದನ್ನಷ್ಟೇ ಹೇಳಿದೆ ನಿಮಗೆ".
ಯೋಗಿಜೀ ಮಾತು ಬದಲಿಸಿದರು. “ನೀವೆಂದಾದರೂ ಒಂದು ದಿನ, ಒಂದು ತಾಸು ಮೌನ ವಾಗಿದ್ದೀರಾ?" ಎಂದು ಕೇಳಿದರು. “ಇಲ್ಲ" ಎಂದೆ. “ಹಾಗಾದರೆ ನೀವು ನಿಮ್ಮ ಜೀವನವನ್ನು ವ್ಯರ್ಥಗೊಳಿಸಿದಿರಿ, ಮೌನಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ನಮ್ಮ ಜತೆಗೆ ನಾವಿರುವುದು ಸಾಧ್ಯವಾಗುವುದಾದರೆ ಅದು ಮೌನದಲ್ಲಿ ಮಾತ್ರ, ಮೌನದ ಮಹತ್ವ ಅರ್ಥವಾದರೆ ಮಾತು ವ್ಯರ್ಥ ಎಂದೆನಿಸುತ್ತದೆ.
ಪ್ರಾಣಿಗಳಲ್ಲಿನ ಸಹಜತೆ, ಅಕೃತಿಮತೆ ವ್ಯಕ್ತವಾಗುವುದು ಅವುಗಳ ಮೌನದಲ್ಲಿ, ಮೂಕಸ್ವಭಾವ ದಲ್ಲಿ. ಮಾತು ಸುಳ್ಳಿಗೆ, ಕೃತ್ರಿಮತೆಗೆ ರಹದಾರಿ. ಹತ್ತು ದಿನ ಮೌನವಾಗಿರಿ, ಅದರಿಂದ ನಿಮ್ಮ ಪಾಲಿನ ಜಗತ್ತು ಮುಳುಗಿಹೋಗುವುದಿಲ್ಲ. ಅಷ್ಟರಮಟ್ಟಿನ ನಿಮ್ಮ ಅಹಂ ಕಡಿಮೆಯಾಗಿರುತ್ತದೆ.
ಜೀವನದಲ್ಲಿ ನೀವು ಯಾರ‍್ಯಾರೋ ಜತೆಗೆ ಇರುತ್ತೀರಿ. ಮೌನದಲ್ಲಿ ನಿಮ್ಮೊಂದಿಗೆ ಮಾತ್ರ ಇರಲು ಸಾಧ್ಯ. ಆರಂಭದ ಕಷ್ಟ ಕೊನೆಯಲ್ಲಿ ಬ್ರಹ್ಮಾನಂದವಾಗಿ ಪರಿವರ್ತಿತವಾಗಿರುತ್ತದೆ" ಎಂದರು ದುರ್ಲಭಜೀ. “ಮೌನದ ಮಹತ್ವ ಸಾರಿದರೆ ಮೊಬೈಲ್ ಕಂಪನಿಗಳೆಲ್ಲ ನಿಮ್ಮ ವಿರುದ್ಧವೂ ಕಾರಸ್ಥಾನ ಹೂಡಬಹುದು, ಹುಷಾರು" ಎಂದೆ.
“ಅಂದ ಹಾಗೆ, ನನ್ನ ಬಳಿಯಿರುವ ಮೊಬೈಲನ್ನು ನೀರಿಗೆ ಎಸೆದೆ" ಅಂದರು ದುರ್ಲಭಜೀ, “ಅದಕ್ಕಾಗಿಯೇ ಸೋನಿ ಕಂಪನಿಯವರು ನೀರಿಗೆ ಎಸೆದರೂ ಹಾಳಾಗದ ಮೊಬೈಲನ್ನು ಬಿಡುಗಡೆ ಮಾಡಿರೋದು" ಅಂದೆ. ಜೋರಾಗಿ ನಕ್ಕರು. ಯೋಗಿಜೀ ದಿನದ ಮೌನವ್ರತಕ್ಕೆ ಜಾರುವ ಸಮಯ ಸನ್ನಿಹಿತವಾಗುತ್ತಿರಬಹುದೆಂದು ಅನಿಸಿತು.
ಕೊನೆಯಲ್ಲಿ ಹೇಳಿದರು- “ಚೊಂಗ್ ಶಿಯುಚಿಂಗ್ ಬರೆದ The fat lady ಎಂಬ ಪುಟ್ಟ ಪ್ರಬಂಧ ವನ್ನು ಇತ್ತೀಚೆಗೆ ಓದಿದೆ. ಅದನ್ನು ನಿಮಗೆ ಕಳಿಸಿಕೊಡುತ್ತೇನೆ. ಸಾಧ್ಯವಾದರೆ ನಿಮ್ಮ ಓದುಗರಿಗೆ ತಿಳಿಸಿ. ದಢೂತಿ ದೇಹದ ವ್ಯಕ್ತಿಗಳು ಒಳಗೊಳಗೆ ತೀವ್ರ ಹಿಂಸೆ ಅನುಭವಿಸುತ್ತಿರುತ್ತಾರೆ. ದಪ್ಪಗಿರು ವುದು ಅಪರಾಧ ಎಂಬ ಮನೋಭಾವ ಬೆಳೆಯುತ್ತಿದೆ.
ಎಲ್ಲರೂ ಸ್ಲಿಮ್ ಆಗಲು ಹಂಬಲಿಸುತ್ತಾರೆ. ಸ್ಲಿಮ್ ಇಲ್ಲದವರು ಕುರೂಪಿಗಳು ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ದಢೂತಿ ಕಾಯದವರಿಗೆ ಮನೋಬಲ ತುಂಬುವ ಕೆಲಸ ಆಗಬೇಕಿದೆ".
ಮರುದಿನವೇ ಸ್ಪೀಡ್ ಪೋಸ್ಟ್‌ನಲ್ಲಿ ‘ಫ್ಯಾಟ್‌ಲೇಡಿ’ ಪ್ರಬಂಧ ಕೈಸೇರಿತು. ದುರ್ಲಭಜೀ ಹೇಳಿದಂತೆ, ದಪ್ಪವಾಗಿರುವುದೇ ಅಪರಾಧ ಎಂದು ಎಲ್ಲರೂ ಭಾವಿಸಿದಂತಿದೆ. ಸ್ಲಿಮ್ ಆಗಲು ವಿವಿಧ ಕೋರ್ಸ್ ಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಉಪವಾಸ ಬೀಳುತ್ತಿದ್ದಾರೆ. ಮಾತ್ರೆ ಸೇವಿಸುತ್ತಿದ್ದಾರೆ. ಜಿರೋ ಫಿಗರ್ ಖಯಾಲಿ ಹಿಡಿಸಿಕೊಂಡಿದ್ದಾರೆ. ಜನರ ಆಹಾರ ಪದ್ಧತಿ ಬದಲಾಗುತ್ತಿದೆ. Thin is beautiful, Fat is ugly ಎಂದು ಜನ ಭಾವಿಸಲಾರಂಭಿಸಿದ್ದಾರೆ. ದಢೂತಿ ವಿರೋಧಿ ಅಲೆ ವಿಶ್ವದಾದ್ಯಂತ ಬೀಸುತ್ತಿದೆ. ದುರ್ಲಭಜೀ ಕಳಿಸಿದ ‘ಫ್ಯಾಟ್ ಲೇಡಿ’ ಪ್ರಸಂಗ ಮುದ ನೀಡಿತು. ಅನುಭವ ನಿಮ್ಮದೂ ಆಗಲೆಂದು ಸಂಕ್ಷಿಪ್ತವಾಗಿ ಕೊಡುತ್ತಿದ್ದೇನೆ.
* * *
“ಹಾಯ್, ಹೌ ಆರ್ ಯು? ಐ ಆಮ್ ಲಾರಾ, ಹೌ ನೈಸ್ ಟು ಮೀಟ್ ಯು" ಎಂದಳು ಆ ದಢೂತಿ ಕಾಯದ ಮಹಿಳೆ. ತನ್ನ ಬ್ಯಾಗನ್ನು ಕ್ಯಾಬಿನ್‌ನಲ್ಲಿಡುತ್ತಾ, ನನ್ನನ್ನು ಸರಿಸಿಕೊಂಡು, ಕಿಟಕಿ ಬಳಿಯ ಸೀಟಿನಲ್ಲಿ ಹೋಗಿ ದೊಪ್ಪ್ ಎಂದು ಕುಳಿತಳು. ಅವಳ ದೇಹದ ಕಾಲುಭಾಗ ನನ್ನ ಮೇಲೆ ಜಮಾ ಆಗಿತ್ತು. ‘ಬಂತಲ್ಲಪ್ಪ ಗ್ರಹಚಾರ’ ಎಂದು ಸಿಡಿಮಿಡಿಗೊಂಡೆ. ಬಾಳೆದಿಂಡಿನಂಥ ಅವಳ ಬಾಹುಗಳು ನನ್ನ ಭುಜವನ್ನು ಸವರಿ ನನ್ನನ್ನು ಪಕ್ಕಕ್ಕೆ ತಳ್ಳುವಂತೆ ಮಾಡಿತ್ತು.
ಅವಳ ದೇಹದ ಆಕಾರ, ಆ ಪರ್ವತದಂಥ ಶರೀರ, ಅವಳ ಪೃಷ್ಟ ನೋಡಿ ನನಗೆ ತುಸು ವಾಕರಿಕೆ ಬಂದಂತಾಯಿತು. ಸಾಲದ್ದಕ್ಕೆ ನನ್ನ ಸೀಟನ್ನು ಬೇರೆ ಆಕ್ರಮಣ ಮಾಡಿಕೊಂಡಿದ್ದಳು. ಅವಳು “ಹೌ ಆರ್ ಯು?" ಎಂದು ಕೇಳಿದರೂ ನನಗೆ ಉತ್ತರಿಸಲು ಮನಸ್ಸಾಗಲಿಲ್ಲ. ಇಂದು ಯಾರ ಮುಖ ನೋಡಿ ಎದ್ದೆನೋ ಎಂದು ನನ್ನನ್ನೇ ಹಳಿದುಕೊಂಡೆ.
ಆ ದಢೂತಿ ಬಿಡಬೇಕಲ್ಲ? “ನಾನು ಲಾರಾ, ಬ್ರಿಟನ್ ನವಳು. ನೀವು ಜಪಾನಿನವರಾ?" ಎಂದು ಕೇಳಿದಳು. “ಇಲ್ಲ ಮಲೇಷಿಯಾದವನು" ಎಂದೆ. “ಹೌದಾ? ಐ ಆಮ್ ಸಾರಿ, ಒಮ್ಮೆ ನನ್ನ ಕೈಕುಲುಕಿ, ಮುಂದಿನ ಆರು ತಾಸುಗಳ ಕಾಲ ನಾವು ಅಕ್ಕಪಕ್ಕ ಕುಳಿತಿರುತ್ತೇವೆ. ಯಾವ ಋಣಾನುಬಂಧವೋ ಗೊತ್ತಿಲ್ಲ. ಇಬ್ಬರೂ ಸ್ನೇಹಿತರಾಗೋಣ, ಏನಂತೀರಾ?" ಎಂದಳು ಲಾರಾ.
ನಾನು ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಆದರೂ ಅವಳಿಗೆ ಏನೂ ಅನಿಸಿರಲಿಲ್ಲ. ಒಲ್ಲದ ಮನಸ್ಸಿನಿಂದ ಕೈ ಕುಲುಕಿದೆ. ಹಾಗೆಂದು ಸಲುಗೆ ಕೊಡಲಿಲ್ಲ. ಆದರೆ ಆ ಘಟವಾಣಿ ಹೆಂಗಸು ಬಿಡಬೇಕಲ್ಲ, ತಾನು ಹಾಂಗ್‌ಕಾಂಗ್‌ಗೆ ಯಾಕೆ ಬಂದೆ, ಅಲ್ಲಿ ಏನೇನು ಮಾಡಿದೆ ಎಂಬುದನ್ನೆಲ್ಲ ವಿವರಿಸಿದಳು. ಬೋರ್ಡಿಂಗ್ ಸ್ಕೂಲಿನಲ್ಲಿರುವ ಮಕ್ಕಳಿಗಾಗಿ ತಾನು ಏನೇನು ಖರೀದಿಸಿದೆ ಎಂಬುದರ ದೊಡ್ಡ ಪಟ್ಟಿಯನ್ನೇ ಕೊಟ್ಟಳು. ಆಕೆ ಒಬ್ಬ ಟೀಚರ್ ಎಂದು ಗೊತ್ತಾಯಿತು.
ಆಕೆಯ ಪ್ರಶ್ನೆಗಳಿಗೆಲ್ಲ ನಾನು ಹೂಂ, ಹಾಂ ಅಥವಾ ಒಂದು ಸಾಲಿನ ಉತ್ತರ ಕೊಡುತ್ತಿದ್ದೆ. ಅವಳ ಮಾತುಗಳಲ್ಲಿ ಕಾಳಜಿ, ಕಳಕಳಿಯಿದೆಯೆಂದು ಅನಿಸಲಾರಂಭಿಸಿತು. ಅಷ್ಟೊತ್ತಿಗೆ ವಿಮಾನದಲ್ಲಿ ಊಟ ಬಂತು. “ನನ್ನ ಈ ದಢೂತಿ ದೇಹ ನನಗೆ ಮಾತ್ರ ಚೆಂದ, ನಿಮಗೆ ಹೊರೆಯಾದಾಗ ನನ್ನನ್ನು ಹಿಡಿದು ತಳ್ಳುವ ಅಧಿಕಾರ ನಿಮಗಿದೆ" ಅಂದಳು.
“ನನ್ನ ಗಂಡನಿಗೆ ಸಂಸಾರದ ಭಾರ ಅಂದ್ರೆ ನನ್ನ ಭಾರವೇ ಆಗಿದೆ. ಆತ ನನ್ನ ಭಾರವನ್ನು ಸಹಿಸಿಕೊಂಡಿದ್ದಾನಲ್ಲ, ನಿಜಕ್ಕೂ ದೊಡ್ಡ ಮನುಷ್ಯ" ಎಂದು ನಕ್ಕಳು. ತನ್ನ ಮಾತುಗಳಿಂದ, ನೇರಾನೇರ ಸ್ವಭಾವದಿಂದ ಲಾರಾ ಹತ್ತಿರವಾಗಲಾರಂಭಿಸಿದಳು. ಅವಳು ಚೆನ್ನಾಗಿ ಓದಿಕೊಂಡಿ ದ್ದಳು.
ಫಿಲಾಸಫಿಯಿಂದ ಹಿಡಿದು ಸೈನ್ಸ್ ತನಕ ಅನೇಕ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಳು. ಅವಳ ಪ್ರತಿ ಮಾತಿನಲ್ಲೂ ತೀಕ್ಷ್ಣ ಪ್ರತಿಕ್ರಿಯೆ ಅಡಕವಾಗಿರುತ್ತಿತ್ತು. ಅವಳ ಗ್ರಹಿಕೆ ಭಿನ್ನವಾಗಿತ್ತು. ಹಾಸ್ಯ, ವಿಡಂಬನೆಯಿಲ್ಲದೇ ಮಾತು ಮುಗಿಸುತ್ತಿರಲಿಲ್ಲ. “ನನ್ನಂಥ ಆನೆ ಗಾತ್ರದವರು ವಿಮಾನದಲ್ಲಿ ಹಾರುವುದು ಗುರುತ್ವಾಕರ್ಷಣ ನಿಯಮಗಳಿಗೆ ಸವಾಲು. ಆದರೆ ಸತ್ಯ ಕೂಡ. ಇದು ಫಿಲಾಸಫಿಯೂ ಹೌದು, ಸೈನ್ಸ್ ಸಹ" ಎಂದಳು. ನಾನು ಅವಳ ಮಾತುಗಳಿಗೆ ಪ್ರತಿಕ್ರಿಯಿಸಲಾರಂಭಿಸಿದೆ.
ಮಧ್ಯೆ ಮಧ್ಯೆ ಗಗನಸಖಿಯರು ಬಂದು ಹೋಗುತ್ತಿದ್ದರು. ಅವರ ಜತೆಯಲ್ಲೂ ಲಾರಾ ಜೋಕು ಮಾಡುತ್ತಿದ್ದಳು. “ನನ್ನನ್ನು ನೋಡಿ ಹೆದರಬೇಡಿ. ನನ್ನ ಆಕಾರ ನೋಡಿ ನನ್ನ ಆಹಾರ ಸೇವನೆಯ ಪ್ರಮಾಣ ಅಳೆಯಬೇಡಿ. ನೀವು ನಿಮ್ಮ ದೇಹವನ್ನು ಪ್ರೀತಿಸುತ್ತೀರಿ. ಹಾಗಾಗಿ ಉಪವಾಸ ಬೀಳುತ್ತೀರಿ. ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ.
ಹಾಗಾಗಿ ಚೆನ್ನಾಗಿ ತಿನ್ನುತ್ತೇನೆ. ನಾನೇ ಪರಮಸುಖಿ" ಎಂದಳು. ಗಗನಸಖಿಯೂ ಜೋರಾಗಿ ನಕ್ಕಳು. ಆಕೆಯ ಜತೆ ಮಾತಿಗಿಳಿಯಬೇಕೆನಿಸಿತು. “ಲಾರಾ, ನೀವು ಎಂದಾದರೂ ನಿಮ್ಮ ತೂಕ ಕಡಿಮೆ ಮಾಡುವ ಬಗ್ಗೆ ಯೋಚಿಸಿದ್ದೀರಾ?" ಎಂದು ಕೇಳಿದೆ. “ಬಹಳ ಶ್ರಮಪಟ್ಟು ಇಷ್ಟು ಸಂಪಾದಿಸಿದ್ದೇನೆ. ಅದನ್ಯಾಕೆ ಕಡಿಮೆ ಮಾಡಿಕೊಳ್ಳಲಿ" ಎಂದಳು.
“ಬೊಜ್ಜು ಕರಗಿಸದಿದ್ದರೆ ಹೃದಯ ಸಂಬಂಧಿ ಕಾಯಿಲೆ ಬರುವುದಂತಲ್ಲಾ?" ಎಂದೆ. “ಹಾಗೇನಿಲ್ಲ, ನಿಮಗ್ಯಾರು ಹೇಳಿದರು? ನಿಮ್ಮ ತೂಕದ ಬಗ್ಗೆಯೇ ಚಿಂತಿಸಿದರೆ ನೀವು ಮಾನಸಿಕರಾಗಬಹುದಷ್ಟೆ. ಅಷ್ಟಕ್ಕೂ ನನಗೆ ಬೊಜ್ಜಿನ ಬಗ್ಗೆ ಯೋಚಿಸಲು ಟೈಮೇ ಇಲ್ಲ. ನಾನು ಜೀವನದಲ್ಲಿ ಎಷ್ಟೆಲ್ಲಾ ಸುತ್ತಬೇಕು. ಎಷ್ಟೊಂದು ಜನರ ಸ್ನೇಹ ಮಾಡಬೇಕು, ನನಗೆ ಗೊತ್ತಿರುವುದೆಲ್ಲ ನನ್ನ ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು, ಅಷ್ಟಕ್ಕೂ ನನಗೆ ಯಾವುದೇ ದೈಹಿಕ ತೊಂದರೆಯಿಲ್ಲ, ನಾನು ಆರೋಗ್ಯ ವಾಗಿದ್ದೇನೆ.
ದಢೂತಿ ಶರೀರ ಕೆಲವರಿಗೆ ಅಸಹ್ಯವಾಗಿ ಕಾಣಬಹುದು. ಆದರೆ ಅದು ಅನಾರೋಗ್ಯ ಅಲ್ಲ. ನನಗೆ ಬೊಜ್ಜಿನ ಬಗ್ಗೆ ಚಿಂತಿಸುವುದಕ್ಕಿಂತ ಇನ್ನೂ ಪ್ರಮುಖ ವಿಷಯಗಳಿವೆ. ಅಷ್ಟಕ್ಕೂ ಆಹಾರ ಅಂದ್ರೆ ದೇವರ ಸೃಷ್ಟಿ" ಎಂದ ಲಾರಾ ವೈನ್ ಗ್ಲಾಸನ್ನು ತುಟಿಗಿಟ್ಟುಕೊಂಡಳು.
“ದೇವರು ನನಗೆ ಕೊಟ್ಟಿರುವ ಈ ದೇಹದಿಂದ ನಾನು ಆನಂದ ಹೊಂದಿದ್ದೇನೆ. ನನಗೆ ನನ್ನ ದೇಹ ಭಾರ ಎಂದೆನಿಸಿಲ್ಲ. ಇರುವೆಗೆ ತನ್ನ ದೇಹ ಭಾರ ಎಂದೆನಿಸಿಲ್ಲ. ಇರುವೆಗೆ ಆನೆ ದಢೂತಿ ಎನಿಸಬಹುದು. ಆನೆಗೆ ಆನೆ ದಢೂತಿ ಅಲ್ಲ" ಎನ್ನುತ್ತಾ ನಕ್ಕಳು ಲಾರಾ. ನಾನು ನಗೆಗೂಡಿಸಿದೆ. “ನಾನು ಕಾಣಲು ದಢೂತಿಯಿರಬಹುದು, ಆದರೆ ನಾನು ಹೂವಿನಷ್ಟೆ ಹಗುರ, ನನ್ನ ಮನಸ್ಸು ಬಹಳ ಸ್ಲಿಮ್. ದಪ್ಪಗಿದ್ದವರ ಹೃದಯ ವಿಶಾಲವಾಗಿರುತ್ತಂತೆ. ದಢೂತಿ ದೇಹದವರನ್ನು ಕಂಡರೆ ಚೇಷ್ಟೆ ಮಾಡುತ್ತಾರೆ. ಕನಿಕರ ಪಡುತ್ತಾರೆ.
ದಪ್ಪಗಿರುವಂತೆ, ತೆಳ್ಳಗಿರುವುದೂ ದೇಹದ ಆಕಾರವೇ ಹೊರತು ಅದೇ ವ್ಯಕ್ತಿತ್ವ ಅಲ್ಲ. ನನ್ನ ಪತಿ ನನ್ನನ್ನು ಪ್ರೀತಿಸುವ ಪರಿ ನೋಡಿದರೆ ಅಚ್ಚರಿಯಾಗುತ್ತದೆ ನಿಮಗೆ" ಎಂದವಳೇ ಗಗನಸಖಿಯರನ್ನು ಕರೆದು, “ನಿಮ್ಮ ಪಾಲಿನ ದನ್ನು ತಿನ್ನದೇ ತೆಳುವಾಗುತ್ತೀರಿ. ಅದನ್ನು ನಮಗೆ ಕೊಟ್ಟು ನಮ್ಮನ್ನು ದಪ್ಪ ಮಾಡುತ್ತೀರಿ. ಇನ್ನು ಮುಂದೆ ಚೆನ್ನಾಗಿ ತಿನ್ನಿ. ದಪ್ಪಗಿರುವವರು ಹಾಗೂ ತೆಳ್ಳಗಿರುವವರಿಗೆ ಇರುವ ಏಕಮಾತ್ರ ವ್ಯತ್ಯಾಸ ಅಂದ್ರೆ ಆಹಾರ, ಮತ್ತೇನಲ್ಲ" ಎಂದಳು.
ಅಷ್ಟು ಹೊತ್ತಿಗೆ ನಾವು ಕುಳಿತಿರುವ ಕಡೆ ಎಲ್ಲ ಗಗನಸಖಿಯರು, ಸಹಪ್ರಯಾಣಿಕರು ಬಂದು ಲಾರಾ ಮಾತುಗಳನ್ನು ಕೇಳುತ್ತಿದ್ದರು. ಲಾರಾ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಳು. ಕೆಲವರಂತೂ ಆಕೆಯ ಜತೆ ನಿಂತು ಫೋಟೋ ತೆಗೆಸಿಕೊಂಡರು.
ನಾವು ವಿಮಾನದಿಂದ ಇಳಿದೆವು. “ಜೀವನದಲ್ಲಿ ದಢೂತಿ ವ್ಯಕ್ತಿಗಳನ್ನು ಕಂಡಾಗಲೆಲ್ಲ ನನ್ನನ್ನೂ ನೆನಪಿಸಿಕೊಳ್ತೀರಿ ಅಲ್ವಾ?" ಎಂದು ಕೇಳಿದಳು. ನನಗೆ ತಡೆದುಕೊಳ್ಳಲಾಗಲಿಲ್ಲ. ಆಕೆಯನ್ನು ಬಿಗಿದಪ್ಪಿದೆ. “ಉಹುಂ ಹೀಗಲ್ಲ. ನನ್ನನ್ನು ತಬ್ಬಿಕೊಳ್ಳುವುದು ಕಷ್ಟ. ನಿಮ್ಮ ಎರಡೂ ಕೈಗಳು ಸಿಗಬೇಕೆಂದರೆ ಇನ್ನಷ್ಟು ಬಿಗಿಯಾಗಿ ಅಪ್ಪಿಕೊಳ್ಳಿ" ಎಂದಳು ತಮಾಷೆಯಿಂದ. ಅವಳನ್ನು ಸ್ವಾಗತಿಸಲು ನೂರಾರು ವಿದ್ಯಾರ್ಥಿಗಳು ನಿಲ್ದಾಣಕ್ಕೆ ಬಂದಿದ್ದರು. ಎಲ್ಲರೂ ಆಕೆಯನ್ನು ಮುಗಿಬಿದ್ದು ಅಪ್ಪಿಕೊಂಡರು.
ಆ ದೃಶ್ಯವನ್ನು ನಾನು ನೋಡುತ್ತಾ ಹಾಗೇ ನಿಂತಿದ್ದೆ. ನಾನು ನನ್ನ ಜೀವನದಲ್ಲಿ ನೋಡಿದ ಅತ್ಯಂತ ಸುಂದರ ಹೆಂಗಸು ಅಂದ್ರೆ ಈಕೆಯೇ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು...