ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಶಾಪದ ಅಗ್ನಿಕುಂಡದಲ್ಲಿ ಅರಳಿದ ಕೆಂಡಗಳು

ಬ್ರಹ್ಮಲೋಕದಲ್ಲಿ ಬ್ರಹ್ಮನ ಸಭೆ ನಡೆದಿತ್ತು. ಸೂರ್ಯವಂಶ ಚಂದ್ರವಂಶಗಳ ಹಿಂದಿನ ರಾಜರು, ಪುಣ್ಯ ಮಾಡಿ ಬ್ರಹ್ಮಲೋಕ ಸೇರಿದವರೂ, ನಾನಾ ದೇವತೆಗಳೂ ಅಲ್ಲಿದ್ದರು. ಹಾಗಿದ್ದವನೊಬ್ಬ ಮಹಾಭಿಷ. ಇವನು ಇಕ್ಷ್ವಾಕು ವಂಶದ ರಾಜ. ಸಾವಿರಾರು ರಾಜಸೂಯ, ಅಶ್ವಮೇಧ ಮಾಡಿ ಸ್ವರ್ಗ ಸೇರಿದ್ದವನು. ಅಂದು ಅವನ ಗ್ರಹಚಾರ ಕೆಟ್ಟಿತ್ತು.

Harish Kera Column: ಶಾಪದ ಅಗ್ನಿಕುಂಡದಲ್ಲಿ ಅರಳಿದ ಕೆಂಡಗಳು

ಹರೀಶ್‌ ಕೇರ ಹರೀಶ್‌ ಕೇರ Aug 14, 2025 7:59 AM

ಕಾಡುದಾರಿ

ಮಹಾಭಾರತವನ್ನು ನೀವು ಆದಿಯಿಂದ ನೋಡುತ್ತ ಹೋದರೆ ಕೊನೆಯವರೆಗೂ ನೂರಾರು ಶಾಪ ಗಳೂ, ನೂರಾರು ವರಗಳೂ ಕಾಣಸಿಗುತ್ತವೆ. ಮಹಾಭಾರತ ಕತೆಯ ಮೊದಲ ರಾಜ ಶಂತನು ವಿನ ಜನನ ಆದುದು ಒಂದು ಶಾಪದಿಂದ. ಕೊನೆಯಲ್ಲಿ ಪಾಂಡವರ ಮೊಮ್ಮಗ ಪರೀಕ್ಷಿತನ ಅಂತ್ಯ ವಾದುದೂ ಒಂದು ಶಾಪದಿಂದ. ಈ ಶಾಪ ಮತ್ತು ವರಗಳ ಇತಿವೃತ್ತ ನೋಡುತ್ತ ಹೋದರೆ ನಮಗೆ ಸಾಕಷ್ಟು ಒಳನೋಟಗಳು ಸಿಕ್ಕುತ್ತವೆ.

ಬ್ರಹ್ಮಲೋಕದಲ್ಲಿ ಬ್ರಹ್ಮನ ಸಭೆ ನಡೆದಿತ್ತು. ಸೂರ್ಯವಂಶ ಚಂದ್ರವಂಶಗಳ ಹಿಂದಿನ ರಾಜರು, ಪುಣ್ಯ ಮಾಡಿ ಬ್ರಹ್ಮಲೋಕ ಸೇರಿದವರೂ, ನಾನಾ ದೇವತೆಗಳೂ ಅಲ್ಲಿದ್ದರು. ಹಾಗಿದ್ದವನೊಬ್ಬ ಮಹಾಭಿಷ. ಇವನು ಇಕ್ಷ್ವಾಕು ವಂಶದ ರಾಜ. ಸಾವಿರಾರು ರಾಜಸೂಯ, ಅಶ್ವಮೇಧ ಮಾಡಿ ಸ್ವರ್ಗ ಸೇರಿದ್ದವನು. ಅಂದು ಅವನ ಗ್ರಹಚಾರ ಕೆಟ್ಟಿತ್ತು. ದೇವನದಿ ಗಂಗೆ ಸಭೆಯಲ್ಲಿ ನಡೆದು ಬಂದಳು. ಗಾಳಿ ಬೀಸಿತು, ಆಕೆಯ ಸೆರಗು ಸರಿಯಿತು. ಎಲ್ಲರೂ ಆಕೆಯನ್ನು ನಗ್ನವಾಗಿ ನೋಡಬಾರದು ಎಂಬ ಎಚ್ಚರದಿಂದ ಕಣ್ಣು ಮುಚ್ಚಿಕೊಂಡರು. ಗಂಗೆಯ ಸೌಂದರ್ಯದಲ್ಲಿ ಕಣ್ಣು ನೆಟ್ಟಿದ್ದ ಮಹಾಭಿಷ ರೆಪ್ಪೆ ಮುಚ್ಚಲಿಲ್ಲ. ಇದು ಬ್ರಹ್ಮನಿಗೆ ಗೊತ್ತಾಯಿತು. ಸಿಟ್ಟಿನಿಂದ ʼನೀನು ಭೂಮಿಯಲ್ಲಿ ಮತ್ತೆ ಜನಿಸುʼ ಎಂದು ಶಾಪ ಕೊಟ್ಟ. ಹಾಗೆ ಚಂದ್ರವಂಶದ ದೊರೆ ಪ್ರತೀಪನಲ್ಲಿ ಜನಿಸಿದವನು ಶಂತನು.

ಆದರೆ ಹಾಗೆ ಭೂಮಿಗೆ ಬರುವಾಗ ಮಹಾಭಿಷ ಗಂಗೆಯನ್ನೂ ಬಿಡಲಿಲ್ಲ. 'ನನ್ನದು ತಪ್ಪಾಯಿತು, ನಿಜ. ಒಪ್ಪಿಕೊಳ್ಳುತ್ತೇನೆ. ನನ್ನ ಶಿಕ್ಷೆಯನ್ನು ಸ್ವೀಕರಿಸುತ್ತೇನೆ. ಆದರೆ ಇದರಲ್ಲಿ ಗಂಗೆಯದೂ ಸ್ವಲ್ಪ ಪಾಲಿದೆ. ಅವಳೂ ಮೈಮರೆತಿದ್ದಳು. ಆಕೆಯೂ ನನ್ನ ಜೊತೆ ಭೂಮಿಗೆ ಬರಲಿ. ನನ್ನ ಜೊತೆ ಸಂಸಾರ ಮಾಡಲಿ' ಎಂದ. ಬ್ರಹ್ಮ ಯಾವ ಮೂಡ್‌ನಲ್ಲಿದ್ದನೋ, ಗಂಗೆಗೂ 'ನೀನೂ ಭೂಮಿಗೆ ಹೋಗು' ಎಂದು ಆದೇಶಿಸಿದ. ಗಂಗೆ ದಾರಿಯಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಎಂಟು ಮಂದಿ ವಸುಗಳು ಸಿಕ್ಕಿದರು. ಇವರು ದೇವತೆಗಳ ಒಂದು ವರ್ಗ.

ಇದನ್ನೂ ಓದಿ: Harish Kera Column: ಬಾಳುವಂಥ ಹೂವೇ, ಬಾಡುವಾಸೆ ಏಕೆ ?

ಸಂಜೆಗತ್ತಲಲ್ಲಿ ನಡೆಯುವಾಗ ವಸಿಷ್ಠರನ್ನು ಕಾಣದೆ ತುಳಿದು, 'ಮನುಷ್ಯರಾಗಿ ಹುಟ್ಟಿ' ಎಂದು ಅವರಿಂದ ಶಪಿತರಾಗಿದ್ದವರು ಅವರು. ಗಂಗೆ ಮತ್ತು ಅವರ ನಡುವೆ ಸಂವಾದ ನಡೆಯಿತು. 'ನಾವು ಯಾವುದೋ ಮನುಷ್ಯರ ಗರ್ಭದಲ್ಲಿ ಜನಿಸಲು ಒಲ್ಲೆವು. ಹುಟ್ಟಿದರೆ ನಿನ್ನಂಥ ಪವಿತ್ರಾತ್ಮಳ ಗರ್ಭದಲ್ಲಿ ಹುಟ್ಟುವೆವು. ಒಪ್ಪಿಗೆ ನೀಡು' ಎಂದರು. ಗಂಗೆ ಒಪ್ಪಿದಳು. ಜೊತೆಗೇ ಒಂದು ಶರತ್ತು ಹಾಕಿದರು- 'ನಮಗೆ ಭೂಮಿಯಲ್ಲಿ ನರಳುತ್ತಾ ಬದುಕಲು ಇಷ್ಟವಿಲ್ಲ. ಹುಟ್ಟಿದ ಕೂಡಲೇ ನಮ್ಮನ್ನು ನೀರಿನಲ್ಲಿ ಮುಳುಗಿಸಿ ಸಾಯಿಸು.' ಗಂಗೆ ಅದಕ್ಕೂ ಒಪ್ಪಿದಳು.

ಹೀಗೆ ಮಹಾಭಿಷ ಶಂತನುವಾಗಿ ಜನಿಸಿದ. ಗಂಗೆ ಅವನಿಗಿಂತ ಮೊದಲು ನದಿಯಾಗಿ ಭೂಮಿಗೆ ಬಂದಳು. ಒಂದು ಸಲ ಶಂತನು ನದಿದಡದಲ್ಲಿ ಸಂಚರಿಸುತ್ತಿದ್ದಾಗ ಆಕೆಯನ್ನು ಕಂಡು, ಮೋಹ ಗೊಂಡ. ಮದುವೆಯಾಗುತ್ತೇನೆ ಎಂದ, 'ಆಗಲಿ, ಆದರೆ ನಾನು ಏನೇ ಮಾಡಿದರೂ ನೀನು ಅದನ್ನು ಪ್ರಶ್ನಿಸಬಾರದು. ಪ್ರಶ್ನಿಸಿದರೆ ಈ ಸಂಬಂಧ ಕಡಿದುಕೊಳ್ಳುವ ಹಕ್ಕು ನನ್ನದಾಗಿ ಇರುತ್ತದೆ' ಎಂದು ಶರತ್ತು ಹಾಕಿದಳು. ಶಂತನು ಸರಿ ಎಂದ. ಹೀಗೆ ಮದುವೆಯಾಯಿತು.

ಒಂದೊಂದಾಗಿ ಮಕ್ಕಳು ಜನಿಸಿದವು. ಏಳು ಮಕ್ಕಳು, ಹುಟ್ಟಿದ ಕೂಡಲೇ ಗಂಗೆ ಅವುಗಳನ್ನು ತೆಗೆದುಕೊಂಡು ಹೋಗಿ ನದಿಯಲ್ಲಿ ಮುಳುಗಿಸಿ ಕೊಂದಳು. ಈ ಉಲ್ಲೇಖಕ್ಕೆ ಏನೇನು ಅರ್ಥ ಗಳಿವೆಯೋ. ಗಂಗೆ, ಶಿಶುಗಳನ್ನು ಗಂಗಾನದಿಯಲ್ಲೇ ಮುಳುಗಿಸಿ ಕೊಲ್ಲುವುದು ಎಂದರೇನರ್ಥ? ಬಹುಶಃ ಅವು ಹುಟ್ಟುವಾಗಲೇ ಸತ್ತಿರಬೇಕು. ಬಹುಶಃ ಶಂತನು- ಗಂಗೆಯರದು ಅನುರೂಪ ದಾಂಪತ್ಯ ಆಗಿರಲಿಲ್ಲ. ಅದು ಗಂಗೆ- ಶಂತನುಗಳಿಬ್ಬರ ಅಗತ್ಯಕ್ಕೆ ದಕ್ಕಿದ ದಾಂಪತ್ಯ. ಇಬ್ಬರ ಶಾಪದಿಂದ, ನೋವು ಸಂಕಟಗಳಿಂದ ಮುಕ್ತಿ ಪಡೆಯಲು ಮಾಡಿಕೊಂಡ ದಾಂಪತ್ಯ. ಬಹುಶಃ ಅದರಲ್ಲಿ ಸಿಹಿಗಿಂತ ಕಹಿಯೇ ಅಧಿಕ ಇದ್ದಿರಬೇಕು. ಇಬ್ಬರೂ ಮುಕ್ತವಾಗಿ ಮಾತಾಡಿಕೊಳ್ಳು ತ್ತಿರಲಿಲ್ಲ. ಹಾಗೆ ಮಾತಾಡಿಕೊಂಡಿದ್ದರೆ ಅವಳು ಶಿಶುಗಳನ್ನು ನೀರಿಗೆ ಎಸೆಯುವ ಹಿನ್ನೆಲೆ ಅವನಿಗೆ ತಿಳಿದಿರುತ್ತಿತ್ತು. ಆಕೆಯನ್ನು ಖಂಡಿಸುವ ಯೋಚನೆ ಹುಟ್ಟುತ್ತಿರಲಿಲ್ಲ.

Screenshot_3 R

ಎಂಟನೇ ಮಗು ಆಗುವ ಹೊತ್ತಿಗೆ ಶಂತನುವಿನ ಸಹನೆ ಸತ್ತಿತ್ತು. ಶಂತನು ಆಕೆಯ ರಟ್ಟೆ ಹಿಡಿದು 'ಯಾಕೆ ಹೀಗೆ?' ಎಂದು ಅಬ್ಬರಿಸಿದ. ಅಷ್ಟೇ ಸಾಕಾಯಿತು. ಗಂಗೆಗೂ ಈ ಮನುಷ್ಯ ಬದುಕು, ಸಂಸಾರ ಸಾಕೆನಿಸಿತ್ತು. 'ಸರಿ, ನಿನಗೆ ಮಗು ಬೇಕು ತಾನೆ? ನೀನೇ ಇಟ್ಟುಕೋ. ಆದರೆ ನೀನು ನನ್ನನ್ನು ಪ್ರಶ್ನಿಸಿದೆ, ತಡೆದೆ, ಖಂಡಿಸಿದೆ. ಹೀಗಾಗಿ ನಾನು ಹೊರಟೆ' ಎಂದು ಹೇಳಿ, ತಮ್ಮಿಬ್ಬರ ಪೂರ್ವಜನ್ಮದ ಕತೆ ಯನ್ನೂ ಆವನಿಗೆ ಹೇಳಿ, ಅಲ್ಲಿಂದ ಹೊರಟಳು. ಹೊರಡುವಾಗ ಮಗನಿಗೆ ಶಿಕ್ಷಣ ಕಲಿಸಿ ಮರಳಿ ಕಳಿಸುತ್ತೇನೆ ಎಂದು ತಿಳಿಸಿ ಅವನನ್ನೂ ಕರೆದೊಯ್ದಳು. ಅವನು ದೇವವ್ರತ. ನಂತರ ಭೀಷ್ಮ ನಾದವನು. ಅವನೂ ಶಪಿತ ವಸು.

ಮಹಾಭಾರತದ ಕೊನೆಗೆ ಬನ್ನಿ. ಕುರುಕ್ಷೇತ್ರ ಯುದ್ಧವೆಲ್ಲ ಮುಗಿದು, ಧರ್ಮರಾಯ ಮೂವತ್ತಾರು ವರ್ಷಗಳ ಸುಭಿಕ್ಷ ಆಡಳಿತ ನಡೆಸಿದ. ನಂತರ ಅಭಿಮನ್ಯುವಿನ ಪುತ್ರ, ಉತ್ತರೆಯ ಮಗ ಪರೀಕ್ಷಿತನಿಗೆ ಪಟ್ಟ ಕಟ್ಟಿ ಪಾಂಡವರು ಸ್ವರ್ಗಾರೋಹಣಕ್ಕೆ ಹೊರಟುಹೋದರು. ಇವನೂ ಹುಟ್ಟುವ ಮೊದಲೇ ಸಾಯಬೇಕಿತ್ತು. ಅಶ್ವತ್ಥಾಮನ ಬ್ರಹ್ಮಾಸ್ತ್ರಕ್ಕೆ ತುತ್ತಾಗಿದ್ದ. ಆದರೆ ಕೃಷ್ಣನ ಹಸ್ತಕ್ಷೇಪದಿಂದ ಬದುಕಿದ. ಹರಿಭಕ್ತ ಪರೀಕ್ಷಿತ ಹಲವಾರು ವರ್ಷ ಸೊಗಸಾದ ಆಡಳಿತ ನಡೆಸಿದ. ಆಗಷ್ಟೇ ದ್ವಾಪರ ಮುಗಿದು, ಕಲಿ ಕಾಲೂರಲು ಹವಣಿಸುತ್ತಿದ್ದ. ಆದರೆ ಧರ್ಮರಾಯನಂತೆಯೇ ಪರೀಕ್ಷಿತನೂ ಕಲಿಯನ್ನು ಭೂಮಿಯ ಮೇಲೆ ಕಾಲಿಡದಂತೆ ಗದರಿಸಿ ಆಚೆ ಇಟ್ಟಿದ್ದ.

ಒಮ್ಮೆ ಇವನು ಬೇಟೆಗೆ ಕಾಡಿಗೆ ಹೋದ. ಸುತ್ತಾಡಿ ಬಳಲಿ, ಶಮೀಕರೆಂಬ ಮುನಿಯ ಆಶ್ರಮದ ಹತ್ತಿರ ಬಂದ. ರಾಜ ಬಂದದ್ದನ್ನು ಧ್ಯಾನದಲ್ಲಿ ಇದ್ದ ಮುನಿ ಗಮನಿಸಲಿಲ್ಲ. ಪರೀಕ್ಷಿತನಿಗೆ ಅವಮಾನವೆನಿಸಿತು. ವಿವೇಕ ಕೈಕೊಟ್ಟಿತು. ಅವಿವೇಕವೇ ನಾಶದ ಮೂಲ. ಕೋಪ ಬಂತು. ಅಲ್ಲಿಯೇ ಸತ್ತು ಬಿದ್ದಿದ್ದ ಒಂದು ಹಾವನ್ನು ತಂದು 'ರಾಜ ಬಂದರೂ ಸತ್ತಂತೆ ಸುಮ್ಮನಿರುವ ನಿನಗೆ ಸತ್ತ ಸರ್ಪವೇ ಸಮ್ಮಾನ' ಎಂದು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. ಸ್ವಲ್ಪ ಹೊತ್ತಿನಲ್ಲಿ ಮುನಿಯ ಮಗ ಶೃಂಗಿ ಅಲ್ಲಿಗೆ ಬಂದು ನೋಡಿದ.

ತಂದೆಯ ಕೊರಳಲ್ಲಿ ಹಾವು ನೋಡಿ ಕ್ರೋಧ ವಶನಾದ. ʼನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇಂದಿನಿಂದ ಏಳು ದಿನಗಳೊಳಗಾಗಿ ತಕ್ಷಕ ಸರ್ಪ ಕಚ್ಚಿ ಸಾಯಲಿ' ಎಂದು ಶಾಪ ನೀಡಿದ. ಎಚ್ಚರಗೊಂಡ ಶಮೀಕರಿಗೆ ಅನಾಹುತದ ಅರಿವಾಯಿತು. ಪರೀಕ್ಷಿತನ ಅವಿವೇಕಕ್ಕೂ ಮಗನ ದುಡುಕಿಗೂ ಬೇಸರಿಸಿದರು. ಹೀಗೊಂದು ಶಾಪ ರಾಜನಿಗೆ ಬಿದ್ದಿದೆ ಎಬ ವಾರ್ತೆಯನ್ನು ರಾಜನಿಗೆ ಕಳುಹಿಸಿದ.

ಈಗ ಪರೀಕ್ಷಿತನಿಗೆ ನಿಶ್ಚಿತವಾದ ಸಾವನ್ನು ಗೆಲ್ಲುವ ಹಠ ಮೂಡಿತು. ಸಾವು ಹೇಗೆ ಬಳಿ ಬರುವುದೋ ನೋಡೋಣ ಎಂಬ ಹಠವೂ ಮೂಡಿತು. ಸಮುದ್ರದ ನಡುವೆ ಒಂದು ಎತ್ತರವಾದ ಸ್ತಂಭವನ್ನು ರಚಿಸಿ, ಅದರ ಮೇಲುಗಡೆ ರಾಜಭವನ ಕಟ್ಟಿಸಿ, ಸುತ್ತಲೂ ಬಿಚ್ಚುಗತ್ತಿಯ ಭಟರ ಕಾವಲು ಇಟ್ಟು, ತಾನು ಭವನದ ಒಳಗೆ ಬಚ್ಚಿಟ್ಟುಕೊಂಡ. ಸರ್ಪಗಳು ಸಮುದ್ರದ ಉಪ್ಪು ನೀರಿನಲ್ಲಿ ಬರಲಾರವು, ಬಂದರೂ ಭಟರು ಕೊಲ್ಲುತ್ತಾರೆ ಎಂಬ ಯೋಚನೆ.

ಆದರೆ ಸರ್ಪರಾಜ ತಕ್ಷಕನಿಗೆ ಋಷಿಗಳ ಶಾಪವನ್ನು ಈಡೇರಿಸಲೇಬೇಕಾದ ವಿಧಿಯಿತ್ತು. ಅವನು ಪರೀಕ್ಷಿತ ಮಹಾರಾಜನನ್ನು ಕಾಣಲು ಬರುವ ಋಷಿಗಳ ಗುಂಪಿನಲ್ಲಿ, ಅವರು ತಂದ ಹಣ್ಣು ಹಂಪಲಿನಲ್ಲಿ ಒಂದು ಹುಳವಾಗಿ ಸೇರಿಕೊಂಡ. ಪರೀಕ್ಷಿತ ಅರಮನೆಯಲ್ಲಿ ಒಂಟಿಯಾಗಿದ್ದ. ಹುಳ ಹಣ್ಣಿನಿಂದ ಹೊರಬಂದು ಬೃಹದಾಕಾರವಾಗಿ ಬೆಳೆದು ಹೆಡೆ ತೆರೆದ. ಕೊನೆ ಬಂತೆಂದು ಪರೀಕ್ಷಿತನಿಗೆ ಅರ್ಥವಾಯಿತು. ಸಾವನ್ನು ತೆರೆದ ಕೈಗಳಿಂದ ಸ್ವಾಗತಿಸಿದ.

ಇಲ್ಲಿಗೆ ಶಾಪದ ಸರಣಿ ಮುಗಿಯಿತು ಎಂದುಕೊಂಡಿರಾ? ಇಲ್ಲ. ಮುಂದೆ ಪರೀಕ್ಷಿತನ ಮಗ ಜನಮೇಜಯ ರಾಜನಾದ. 'ನಿನ್ನ ತಂದೆಯ ಮರಣಕ್ಕೆ ಕಾರಣನಾದವನು ತಕ್ಷಕ. ಅವನು ಸರ್ಪ. ಸರ್ಪಗಳಿಗೆ ಕೃತಜ್ಞತೆಯಿಲ್ಲ, ಅವು ಕ್ಷುದ್ರಜೀವಿಗಳು. ಅವುಗಳನ್ನು ಬಿಡಬೇಡ' ಎಂದು ಯಾರೋ ಅವನಿಗೆ ಚಾಡಿ ಹೇಳಿದರು. ಅವನು ಸಿಟ್ಟಿನಿಂದ, ಸರ್ಪಕುಲದ ಮೇಲೆಯೇ ಸೇಡು ತೀರಿಸಿಕೊಳ್ಳಲು ಮುಂದಾದ. ಸರ್ಪಯಜ್ಞವನ್ನು ಸಂಕಲ್ಪಿಸಿ, ಅದಕ್ಕೆ ಸೂಕ್ತ ಋತ್ವಿಜರನ್ನು ಕರೆಸಿ ಆರಂಭಿಸಿಯೇ ಬಿಟ್ಟ. ಇವನು ಆರಂಭಿಸಿದ ಯಜ್ಞಕ್ಕೆ ಸರ್ಪಗಳು, ನಾಗಗಳು ತಾವಾಗಿ ಬಂದು ತುಪತುಪನೆ ಯಜ್ಞಕುಂಡಕ್ಕೆ ಬಿದ್ದು ಬೆಂದುಹೋದವು.

ಸರ್ಪಗಳು ಹೀಗೆ ಯಜ್ಞಕ್ಕೆ ಆಹುತಿಯಾಗಲು ಕಾರಣವೇನು? ಅದರ ಹಿನ್ನೆಲೆಯಲ್ಲೂ ಒಂದು ಶಾಪದ ಕತೆಯಿದೆ. ಕದ್ರು ಹಾಗೂ ವಿನತೆಯರು ಮುನಿ ಕಶ್ಯಪರ ಪತ್ನಿಯರು. ಕದ್ರು ಸರ್ಪಗಳ ತಾಯಿಯಾದರೆ, ವಿನತೆಯ ಮಗ ಗರುಡ. ಒಮ್ಮೆ ಕದ್ರು ಮತ್ತು ವಿನತೆಯರ ನಡುವೆ ಇಂದ್ರನ ಕುದುರೆಯಾದ ಉಚ್ಚೈಶ್ರವಸ್ಸಿನ ಬಾಲದ ಬಣ್ಣದ ಬಗ್ಗೆ ತಗಾದೆಯಾಯಿತು. ಅದು ಸಂಪೂರ್ಣವಾಗಿ ಬಿಳಿಯೇ. ವಿನತೆ ಹಾಗೇ ಹೇಳಿದಳು. ಆದರೆ ಕದ್ರು ಅದು ಕಪ್ಪು ಎಂದು ಹಠ ಹಿಡಿದಳು. ಪಂಥ ಉಂಟಾಯಿತು. ಪಂಥದಲ್ಲಿ ಸೋತವರು ಇನ್ನೊಬ್ಬರಿಗೆ ಗುಲಾಮರಾಗಬೇಕು. ಕದ್ರು ತನ್ನ ಮಕ್ಕಳಾದ ಸರ್ಪಗಳನ್ನು ಕರೆದು ಕುದುರೆಯ ಬಾಲದಲ್ಲಿ ನೇತಾಡಿ ಅದನ್ನು ಕಪ್ಪಾಗಿ ಕಾಣಿಸಲು ಆದೇಶಿಸಿದಳು. ಸರ್ಪಗಳು ಒಪ್ಪಲಿಲ್ಲ. ಕದ್ರು ಅವರೆಲ್ಲರಿಗೂ, ಜನಮೇಜಯನ ಸರ್ಪ ಯಾಗದಲ್ಲಿ ಸುಟ್ಟುಹೋಗುವಂತೆ ಶಪಿಸಿದಳು.

ಇಷ್ಟಕ್ಕೂ ಶಾಪ ಎಂದರೇನು? ಹಾಗೊಂದು ನಿಜಕ್ಕೂ ಉಂಟೇ ಎಂಬ ವಿಚಾರ ಎತ್ತಿಕೊಂಡು ತರ್ಕಕ್ಕೆ ಹೊರಟರೆ ನಾವು ತುದಿ ಮುಟ್ಟಲಾರೆವು. ನೊಂದ ಹೃದಯದ ಸಿಟ್ಟಿನ ಮಾತೇ ಶಾಪ ಎಂದು ಬೇಕಿದ್ದರೆ ಸರಳವಾಗಿ ಹೇಳಿಬಿಡಬಹುದು. ಮೈಸೂರು ಅರಸರ ಸಂಬಂಧವಾಗಿ ಒಂದು ಶಾಪದ ಕತೆ ಹೇಳುತ್ತಾರೆ. ಅಲಮೇಲಮ್ಮನ ಶಾಪದ ಫಲ ಇಂದಿಗೂ ಕಾಣಸಿಗುತ್ತದೆ ಎನ್ನುತ್ತಾರೆ. ಮೈಸೂರು ಅರಸು ವಂಶದ ಕುಡಿಗಳಲ್ಲಿ ಯಾರಿಗೂ ಮಕ್ಕಳಿಲ್ಲ ಎನ್ನುವುದೂ, ದತ್ತು ತೆಗೆದು ಕೊಂಡವರಿಗೆ ಮಾತ್ರ ಮಕ್ಕಳಾಗಿದೆ ಎನ್ನುವುದನ್ನೂ ಆಧಾರವಾಗಿ ಒದಗಿಸುತ್ತಾರೆ.

ತನ್ನ ಮೇಲೆ ಒಂದು ಶಾಪವಿದೆ ಎಂದು ಪ್ರತಿ ಮನುಷ್ಯನೂ ನಂಬುತ್ತಾನೆ. 'ನೀನು ಉದ್ಧಾರ ಆಗಲ್ಲ' 'ನೀನು ಚೆನ್ನಾಗಿಲ್ಲ' 'ನೀನು ನಾಶ ಆಗ್ತೀಯ' 'ನಿನಗೆ ಇಂಗ್ಲಿಷ್ ಬರೋಲ್ಲ' ಹೀಗೆಲ್ಲ ಈ ಶಾಪಗಳು. ಇವು ತಂದೆ ತಾಯಿಯಿಂದಲೋ, ಶಿಕ್ಷಕರಿಂದಲೋ ಬಂದಿರುತ್ತವೆ. ಪ್ರತಿಯೊಬ್ಬನೂ ಅದನ್ನು ಮೀರಲೂ ಹೇಗೆಹೇಗೋ ಯತ್ನಿಸುತ್ತಾ ಇರುತ್ತಾನೆ. ನಮ್ಮ ಬದುಕಿನಲ್ಲೂ ಇಂಥ ಶಾಪದ ಮಹಾ ಭಾರತಗಳಿರುತ್ತವೆ. ಅಲ್ಲಿರುವ ಇನ್ನಷ್ಟು ಶಾಪದ ಕತೆಗಳನ್ನು ಇನ್ನೊಮ್ಮೆ ನೋಡೋಣ.