Surendra Pai Column: 6ನೇ ತರಗತಿಯಿಂದಲೇ ನೀಟ್ʼಗೆ ತಯಾರಿ, ಅಯ್ಯೋ...
ಕಳೆದ 4-5 ವರ್ಷದಲ್ಲಿಂದ ಪ್ರಾಥಮಿಕ ಶಾಲಾ ಶಿಕ್ಷಣದ ಅವಿಭಾಜ್ಯವೆಂಬಂತೆ ಬಹಳ ಟ್ರೆಂಡಿಂಗ್ ನಲ್ಲಿರುವ ಈ ಪೌಂಡೇಶನ್ ಕೋರ್ಸ್‌ಗಳು ಸಣ್ಣ ವಯಸ್ಸಿನ ಮಕ್ಕಳ ಸರ್ವಾಂಗೀಣ ವಿಕಾಸದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳ ಕುರಿತು ನಾವಿಂದು ಗಂಭೀರವಾಗಿ ಆಲೋಚಿಸಬೇಕಿದೆ.
-
ಅಭಿಮತ
ಸುರೇಂದ್ರ ಪೈ., ಭಟ್ಕಳ
ಸದ್ಯ ದೇಶಾದ್ಯಂತ ನೀಟ್ ಪರೀಕ್ಷಾ ಅಕ್ರಮ ಹಾಗೂ ಬದಲಾಗಬೇಕಿರುವ ಶಿಕ್ಷಣ ವ್ಯವಸ್ಥೆ ಕುರಿತೇ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ನೀಟ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ ಎಂಬ ವಿಷಯವು ಮುನ್ನೆಲೆಗೆ ಬರುತ್ತಿದೆ. ಕಳೆದ ಹಲವು ವರ್ಷಗಳ ನೀಟ್ ಫಲಿತಾಂಶವಾಗಲಿ, ಇನ್ನಿತರ ನೇಮಕಾತಿ ಗಳ ಅಂಕಿಅಂಶಗಳನ್ನು ಗಮನಿಸಿದಾಗ ಇದು ಸತ್ಯ ಎಂದು ತಿಳಿದುಬರುತ್ತದೆ. ಈ ಸಂಗತಿಗಳು ಇದೀಗ ದಕ್ಷಿಣ ಭಾರತದಲ್ಲಿ ಒಂದು ರೀತಿಯ ಆತಂಕ ಮತ್ತು ಧಾವಂತದ ವಾತಾವರಣ ಸೃಷ್ಟಿಸಿದೆ.
ಈ ಧಾವಂತದ ಪರಿಣಾಮವಾಗಿ, ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಆರನೇ ತರಗತಿಯ ಶಾಲಾ ಪಠ್ಯಕ್ರಮವನ್ನು ಬದಿಗೊತ್ತಿ, ಸಂಪೂರ್ಣವಾಗಿ ನೀಟ್ ಕೇಂದ್ರಿತ ತರಬೇತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಂಸ್ಕೃತಿಯೊಂದು ಶಾಲಾ ಹಂತದ ತಲೆಯೆತ್ತುತ್ತಿದೆ. ಈ ತರಗತಿಗೆ ‘ ಫೌಂಡೇಶನ್ ಕೋರ್ಸ್’ ತರಗತಿಗಳು ಎಂದು ಹೆಸರಿಟ್ಟಿವೆ. ಕಳೆದ 4-5 ವರ್ಷದಲ್ಲಿಂದ ಪ್ರಾಥಮಿಕ ಶಾಲಾ ಶಿಕ್ಷಣದ ಅವಿಭಾಜ್ಯವೆಂಬಂತೆ ಬಹಳ ಟ್ರೆಂಡಿಂಗ್‌ನಲ್ಲಿರುವ ಈ ಪೌಂಡೇಶನ್ ಕೋರ್ಸ್‌ಗಳು ಸಣ್ಣ ವಯಸ್ಸಿನ ಮಕ್ಕಳ ಸರ್ವಾಂಗೀಣ ವಿಕಾಸದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳ ಕುರಿತು ನಾವಿಂದು ಗಂಭೀರವಾಗಿ ಆಲೋಚಿಸಬೇಕಿದೆ.
ಒಂದು ದಶಕದ ಹಿಂದೆ ಖಾಸಗಿ ಶಾಲೆಯ ದಾಖಲಾತಿ ಸಮಯದ ಪೋಸ್ಟರ್, ಜಾಹೀರಾತು ಗಮನಿಸಿ: ನಮ್ಮ ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನವಿದೆ, ಒಳಾಂಗಣ ಹಾಗೂ ಹೊರಾಂ ಗಣ ಕ್ರೀಡೆಗೆ ವಿಶೇಷ ಆದ್ಯತೆ ನೀಡಲಾಗುವುದು. ನಾಟಕ, ಸಂಗೀತ, ಭರತನಾಟ್ಯ, ಚಿತ್ರಕಲೆ, ಅಬಾಕಸ್ ತರಬೇತಿ ನೀಡಲಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು.
ಇದನ್ನೂ ಓದಿ: Surendra Pai Column: ಪಶ್ಚಿಮಘಟ್ಟದ ಆಕ್ರಂದನ: ಮತ್ತೆ ನೆನಪಾಗುವ ಪ್ರೊ. ಗಾಡ್ಗೀಳ್
ಇದೀಗ 4-5 ವರ್ಷಗಳ ಜಾಹೀರಾತು ಗಮನಿಸಿದರೆ ನಮ್ಮಲ್ಲಿ ಎಐ, ಕೋಡಿಂಗ್ ಹಾಗೂ 6ನೇ ತರಗತಿಯಿಂದಲೇ ನೀಟ್, ಜೆಇಇ, ಸಿಇಟಿ, ಐಐಟಿ ಫೌಂಡೇಶನ್ ಕೋರ್ಸ್ ತರಬೇತಿ ನೀಡಲಾಗುತ್ತದೆ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ಪ್ರಚಾರ ಮಾಡುವುದು ಸಾಮಾನ್ಯವಾಗಿದೆ. ಒಪ್ಪಿಕೊ ಳ್ಳೋಣ ಆಧುನಿಕತೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯು ತೆರೆದುಕೊಳ್ಳಬೇಕು ನಿಜ.
ಆದರೆ ಅದಕ್ಕೆ ತಕ್ಕಂತೆ ನಮ್ಮ ತಯಾರಿ ಹಾಗೂ ಮಕ್ಕಳ ಮನೋವೈಜ್ಞಾನಿಕ ಸಾಮರ್ಥ್ಯವನ್ನು ನಾವು ಎಷ್ಟರಮಟ್ಟಿಗೆ ಅರಿತು ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದೇವೆ ಎಂಬುದು ಮುಖ್ಯ ವಾಗುತ್ತದೆ. ಸಾಧನೆಯ ತುಡಿತ ಒಳ್ಳೆಯದೇ, ಆದರೆ ಅದು ಬಾಲ್ಯದ ಸಹಜತೆಯನ್ನು ಹೊಸಕಿ ಹಾಕುವಂತಿರಬಾರದು. ಪ್ರಾಥಮಿಕ ಹಂತದಿಂದಲೇ ತಯಾರಿ ನಡೆಸುವುದು ತಪ್ಪಲ್ಲ. ಆದರೆ ಶೈಕ್ಷಣಿಕ ಪಠ್ಯವಿಷಯವನ್ನು ಸಂಪೂರ್ಣವಾಗಿ ಗ್ರಹಿಸದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಿಲ್ಲ.
10 ತಿಂಗಳ ಕಲಿಕೆಯನ್ನು ಅರ್ಧ ವರ್ಷದ ಮುಗಿಸುವುದು ಅವೈಜ್ಞಾನಿಕ. 6ನೇ ತರಗತಿ ಮಗುವಿಗೆ ಪಠ್ಯವಿಷಯದ ಗ್ರಹಿಕೆ ಇಲ್ಲದೇ ಅದು ಹೇಗೆ 10ನೇ ತರಗತಿಯ ವಿಷಯ ಅರಿಯಲು ಸಾಧ್ಯ? ಮುಖ್ಯವಾಗಿ ಈ ಬೆಳವಣಿಗೆ ಮಕ್ಕಳಲ್ಲಿ 6ರಿಂದ 10ನೇ ತರಗತಿಯ ಶಾಲಾ ಶಿಕ್ಷಣ ಕಲಿಕೆ ಕೇವಲ ‘ಪಾಸ್’ ಆಗುವುದಕ್ಕಷ್ಟೇ ಸೀಮಿತ ಎಂಬ ಭಾವನೆ ಮೂಡುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ. 6ನೇ ತರಗತಿಯ ಮಗುವಿಗೆ ಜಗತ್ತನ್ನು ಗ್ರಹಿಸುವ, ಸಾಹಿತ್ಯ, ಕಲೆ, ಸಮಾಜ ವಿಜ್ಞಾನ, ಪರಿಸರ ಹಾಗೂ ಕ್ರೀಡೆಗಳ ಮೂಲಕ ವಿಕಸನಗೊಳ್ಳುವ ಅಗತ್ಯವಿರುತ್ತದೆ.
ಹೀಗಿರುವಾಗ ಶಾಲಾಪಠ್ಯವನ್ನು ನಿರ್ಲಕ್ಷಿಸಿ ಕೇವಲ ವಿಜ್ಞಾನ ಮತ್ತು ಗಣಿತದ ಬಹುಆಯ್ಕೆಯ ಪ್ರಶ್ನೆ ಗಳನ್ನು ಬಿಡಿಸುವುದಕ್ಕಷ್ಟೇ ತರಬೇತಿ ನೀಡುವುದರಿಂದ, ಮಕ್ಕಳಲ್ಲಿ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ ಮೊಳಕೆಯೊಡೆಯುವುದೇ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿಷಯದ ಸಂಪೂರ್ಣ ಗ್ರಹಿಕೆ, ಮನವರಿಕೆ ಆಗದ ಹೊರತು ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಾಗಲಿ, ಅದಕ್ಕೆ ಸೂಕ್ತ ಬಹುಆಯ್ಕೆಯ ಉತ್ತರ ನೀಡಲು ಸಾಧ್ಯವಿಲ್ಲ.
ಎಳೆಯ ವಯಸ್ಸಿನಲ್ಲಿಯೇ ಪ್ರಾಯೋಗಿಕ ಜ್ಞಾನ, ವಿಷಯ ಜ್ಞಾನದ ಕೊರತೆಯಿಂದ ಸ್ಪರ್ಧೆಗೆ ತಳ್ಳಲ್ಪಡುವ ಮಕ್ಕಳು ನಿರಂತರ ಪರೀಕ್ಷೆಗಳು ಮತ್ತು ಪೋಷಕರ ನಿರೀಕ್ಷೆಗಳ ಭಾರದಿಂದ ಚಿಕ್ಕಂದಿನ ಮಾನಸಿಕ ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಶಾಲಾ ಪಠ್ಯಕ್ರಮವು ಒಂದು ಮಗುವಿನ ಭಾಷಾ ಸಾಮರ್ಥ್ಯ, ಭಾವನಾತ್ಮಕ ಪ್ರಬುದ್ಧತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲು ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನು ಕಡೆಗಣಿಸಿ ಕೇವಲ ‘ನೀಟ್’ ತಯಾರಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಭವಿಷ್ಯದಲ್ಲಿ ಆ ಮಕ್ಕಳು ಉನ್ನತ ಶಿಕ್ಷಣಕ್ಕೆ ತಲುಪಿದಾಗ ಸಂವಹನ ಹಾಗೂ ವೈಚಾರಿಕ ಸಾಮರ್ಥ್ಯದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳೇ ಹೆಚ್ಚು.
ಪ್ರಾಥಮಿಕ ಶಿಕ್ಷಣವನ್ನು ನಿರ್ಲಕ್ಷಿಸಿ ಫೌಂಡೇಶನ್ ಕೋರ್ಸ್‌ಗಳ ಕಡೆಗೆ ಧಾವಿಸುವುದು, ತಳಪಾಯ ವೇ ಇಲ್ಲದೆ ಬೃಹತ್ ಕಟ್ಟಡವನ್ನು ನಿರ್ಮಿಸಲು ಹೊರಟಂತೆ. ಮೂಲಭೂತ ಜ್ಞಾನವಿಲ್ಲದೆ ಕಠಿಣ ಪಠ್ಯವನ್ನು ಎದುರಿಸುವಾಗ ಮಕ್ಕಳಿಗೆ ವಿಷಯದ ಮೇಲೆ ಪ್ರೀತಿ ಬರುವ ಬದಲು ಭಯ, ತಾತ್ಸಾರ ಹುಟ್ಟುತ್ತದೆ. ಇದು ಮಗುವಿನಲ್ಲಿ ತಾನು ಕಲಿಯಲು ಅಸಮರ್ಥನೆಂಬ ಕೀಳರಿಮೆಯನ್ನು ಸೃಷ್ಟಿಸುವ ಅಪಾಯವನ್ನು ಹೊಂದಬಹುದು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಅಗತ್ಯ, ಆದರೆ ಅದಕ್ಕೊಂದು ಸೂಕ್ತ ವಯಸ್ಸು ಮತ್ತು ಕಾಲವಿದೆ. ಸಾಮಾನ್ಯವಾಗಿ 9 ಅಥವಾ 10ನೇ ತರಗತಿಯ ನಂತರ ತಯಾರಿ ಮಾಡುವುದು ಸೂಕ್ತ. ಇಲ್ಲ 6ನೇ ತರಗತಿಗೆ -ಫೌಂಡೇಶನ್ ಕೋರ್ಸ್ ನೀಡುತ್ತೀರಿ ಎಂದಾದರೆ ಶಾಲಾಹಂತದಲ್ಲಿ ಮೂಲ ಶಿಕ್ಷಣಕ್ಕೆ ಧಕ್ಕೆ ಬಾರದಂತೆ ನಿರ್ವಹಿಸಬೇಕು.
ಏಕಂದರೆ ಶಾಲಾ ಅವಧಿಯ ನೀಟ್ ಕೋಚಿಂಗ್‌ಗೆ ಪ್ರಾಧಾನ್ಯತೆ ನೀಡುವುದರಿಂದ ಪಠ್ಯವಿಷಯದ ಅವಧಿಗಳನ್ನು ಹೇಗೆ ಸರಿದೂಗಿಸಬೇಕು? ಈ ಫೌಂಡೇಶನ್ ತರಗತಿ ನಡೆಸುವ ಶಿಕ್ಷಕರು ಯಾರು? ಇದಕ್ಕೆಂದು ಹೆಚ್ಚುವರಿ ಶುಲ್ಕ ಏನಾದರೂ ನಿಗದಿ ಇದೆಯಾ? ಹೌದು ಎಂದಾದರೆ ಎಷ್ಟು? ಇಲ್ಲವೇ ಶಾಲಾ ಅವಧಿಯ ಬಳಿಕ ಆಯ್ದ ಮಕ್ಕಳಿಗೆ ಮಾತ್ರ ಪ್ರತ್ಯೇಕ ತರಗತಿ ವ್ಯವಸ್ಥೆ ಮಾಡುತ್ತೀರಿ ಎಂದಾದರೆ ಅದರ ಮಾನದಂಡವೇನು? ಅದು ಮಕ್ಕಳ ಶೈಕ್ಷಣಿಕ ಮನೋವಿಜ್ಞಾನಕ್ಕೆ ಪೂರಕವೇ? ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬರಬೇಕಾಗುತ್ತವೆ.
ಇವುಗಳಿಗೆ ಸಮರ್ಪಕ ಉತ್ತರ ಸಿಗದಿದ್ದರೆ ಶಾಲೆಗಳು ಪಾಲಕರ ದಿಕ್ಕು ತಪ್ಪಿಸಿ ಲೂಟಿ ಮಾಡುವ ಸಾಧ್ಯತೆ ಹೆಚ್ಚು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ವ್ಯವಸ್ಥೆ, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಎಳವೆಯಲ್ಲಿ ಮಕ್ಕಳ ಸಹಜ ಅನ್ವೇಷಣಾ ಮನೋಭಾವಕ್ಕೆ ನೀರೆರೆಯುವ ಕೆಲಸ ಮಾಡಬೇಕಿದೆ. ಶಿಕ್ಷಣ ಸಂಸ್ಥೆಗಳು ಕೋಚಿಂಗ್ ಸೆಂಟರ್‌ಗಳಾಗಿ ಬದಲಾಗುವು ದನ್ನು ತಡೆಯದಿದ್ದರೆ, ನಾವು ಉನ್ನತ ಅಂಕಗಳಿಸುವ ಯಂತ್ರಗಳನ್ನು ತಯಾರಿಸಬಹುದೇ ವಿನಃ, ಪರಿಪೂರ್ಣ ಮತ್ತು ಮಾನವೀಯ ಗುಣವುಳ್ಳ ಪ್ರಜೆಗಳನ್ನು ರೂಪಿಸಲು ಸಾಧ್ಯವಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೂಲಭೂತ ಸಿದ್ಧತೆ ಬೇಕು ನಿಜ. ಆದರೆ ಆ ‘ಫೌಂಡೇಶನ್’ ಇರಬೇಕಿರು ವುದು ಪ್ರಾಥಮಿಕ ಶಿಕ್ಷಣದ ಬಲವರ್ಧನೆಯಲ್ಲಿಯೇ ಹೊರತು, ಶಾಲಾಪಠ್ಯವನ್ನು ಬದಿಗೊತ್ತಿ ನೀಡುವ ಕೃತಕ ಕೋಚಿಂಗ್‌ನಲ್ಲಿ ಅಲ್ಲ. ಮಗುವಿನ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ಸಮೃದ್ಧ ವಾಗಿಜ್ಞಾಗ ಮಾತ್ರ, ಮುಂದಿನ ಯಾವುದೇ ಸ್ಪರ್ಧಾತ್ಮಕ ಸವಾಲನ್ನು ಅದು ಆತ್ಮವಿಶ್ವಾಸದಿಂದ ಎದುರಿಸಬಲ್ಲದು.
ಕೊನೆಯದಾಗಿ ಇದೆ ನಿಜ, ಆದರೆ ಇದು ಉತ್ತರ ಭಾರತ ರಾಜ್ಯದ ಮಕ್ಕಳಿಗೆ ಅನ್ವಯವಾಗುವು ದಿಲ್ಲವೇ ಎಂಬ ಪ್ರಶ್ನೆ ಉಳಿಯಬಹುದು. ಇದು ಎಲ್ಲರಿಗೂ ಅನ್ವಯ. ಕೇವಲ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ‘ಪಾಸ್ ಸರ್ಟಿಫಿಕೇಟ್’ಗಾಗಿ ಕಲಿಯಬೇಕು ಎಂಬ ಮನಸ್ಥಿತಿ ಇzಗ ಒಂದೋ ಸುಳ್ಳು (ಡಮ್ಮಿ) ದಾಖಲಾತಿ ಪಡೆಯುವುದೋ ಅಥವಾ ಇಡೀ ವ್ಯವಸ್ಥೆಯೇ (ಶಿಕ್ಷಣ ಇಲಾಖೆ) ಮಕ್ಕಳಿಗೆ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಅಂಕ ನೀಡಿ ಅರ್ಹರು ಎಂದು ಅಂಕಪಟ್ಟಿ ನೀಡಬೇಕಾ ಗುವ ಅಕ್ರಮ ಮಾರ್ಗದ ಆಯ್ಕೆ ಮಾಡಬೇಕಾಗಬಹುದು.
ಇಂದು ಉತ್ತರ ಭಾರತದಲ್ಲಿ ಸುದ್ದಿಯಾಗುವ ಡಮ್ಮಿ ದಾಖಲಾತಿಗಳು, ಪರೀಕ್ಷಾ ಅಕ್ರಮಗಳಿಗೆ ಇದುವೇ ಒಂದು ಕಾರಣ. ಇದರ ಹೊರತಾಗಿಯೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಡತನ, ಹಸಿವು, ನಿರುದ್ಯೋಗ, ಮುಂತಾದ ಅಂಶಗಳು ಅಲ್ಲಿಯ ಜನರನ್ನು ದಶಕಗಳಿಂದಲೂ ಬಾಽಸುತ್ತಿವೆ. ಇವುಗಳಿಂದ ಮುಕ್ತಿ ಪಡೆಯಲೇಬೇಕೆಂದರೆ ಶೈಕ್ಷಣಿಕವಾಗಿ ಸಾಧನೆ ಮಾಡಲೇಬೇಕು, ಉತ್ತಮ ಉದ್ಯೋಗ ಪಡೆಯಬೇಕೆಂಬ ಪ್ರಜ್ಞೆ, ಹಠ, ತುಡಿತ ಜಾಗೃತವಾಗಿರುತ್ತದೆ.
ಹಾಗಾಗಿ ಅಲ್ಲಿಯ ಜನರು ಬೇರೆ ವಿಷಯದಲ್ಲಿ ಹಿಂದುಳಿದರೂ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬರುತ್ತಿರುವುದು. ಹೇಗೆ ಉತ್ತರ ಕರ್ನಾಟಕದ ಜನರು ಮಲೆನಾಡು, ಕರಾವಳಿ ಜಿಗಳಿಗೆ ಬಂದು ನೆಲೆಸಲು ಇಷ್ಟಪಡುತ್ತಾರೋ ಹಾಗೇ ಇದು ಕೂಡ. ಆದರೆ ಇವರ ಪ್ರಮಾಣ ಎಷ್ಟು ಎಂಬುದನ್ನು ಖಚಿತವಾಗಿ ಹೇಳಲಾಗದು. ಆದರೆ ನೀಟ್, ನೇಮಕಾತಿ ಪರೀಕ್ಷೆಯ ತಯಾರಿಗೆ ಮಕ್ಕಳನ್ನು ಅಣಿಗೊಳಿಸಲು ಮಕ್ಕಳ ಮನೋವಿಕಾಸ ಹಾಗೂ ವ್ಯವಸ್ಥಿತ ರೂಪರೇಷೆಯ ಅಗತ್ಯತೆ ಯ ಅಗತ್ಯವಿದೆ. ಇಲ್ಲದಿದ್ದರೆ ಶಿಕ್ಷಣ ವ್ಯವಸ್ಥೆ ಹಾದಿ ತಪ್ಪುವುದು ಖಚಿತ.