Hari Paraak Column: ವಿಲ್ ಪವರಿಗಿಂತ ವಿಲ್ಸ್ ಪವರ್ ದೊಡ್ಡದು
ಇದೇನೂ ಹೊಸದಲ್ಲ ಬಿಡಿ, ಮೇರು ನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇಂದಿನ ಯುವ ಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ. ಕನ್ನಡದ ನಟರು ಸಮಸ್ಯೆ ಪೀಡಿತರಿಗೆ ಸಹಾಯ ಮಾಡ ಬೇಕು, ಪರಿಹಾರ ಕೊಡಬೇಕು, ಒಂದೇ ಸಲ ಎಲ್ಲ ಸಮಸ್ಯೆಗಳನ್ನೂ ತಮ್ಮ ಸಿನಿಮಾಗಳಲ್ಲಿ ವಿಲನ್ ಗಳನ್ನು ಹೊಡೆದೋಡಿಸಿದಂತೆ ಓಡಿಸಬೇಕು ಎಂಬೆಲ್ಲ ಪ್ರಲಾಪಗಳು ಶುರುವಾಗುತ್ತವೆ.
-
ತುಂಟರಗಾಳಿ
ಸಿನಿಗನ್ನಡ
ನಮ್ ಸಿನಿಮಾ ನಟರು ಏನ್ ಮಾಡ್ತಾ ಇದ್ದಾರೆ? ರಾಜ್ಯದಲ್ಲಿ ಏನಾದರೂ ತೊಂದರೆ ಆದ ಕೂಡಲೇ ಇಂಥದೊಂದು ಪ್ರಶ್ನೆ ನಮ್ಮ ಜನಗಳ ಬಾಯಲ್ಲಿ ಬರೋದು ತೀರಾ ಕಾಮನ್. ಸಿನಿಮಾ ನಟರು ನಮಗಾಗಿ ಏನು ಮಾಡಿದ್ದಾರೆ, ಅಂತ ಕೇಳೋ ಈ ಖಾಯಿಲೆ, ರಾಜ್ಯದಲ್ಲಿ ಬರ, ಪ್ರವಾಹ, ಕಾವೇರಿ ಸಮಸ್ಯೆ ಏನೇ ಬಂದರೂ ಅವುಗಳ ಜೊತೆಗೇ ಬರುತ್ತೆ.
ಇದೇನೂ ಹೊಸದಲ್ಲ ಬಿಡಿ, ಮೇರು ನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇಂದಿನ ಯುವಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ. ಕನ್ನಡದ ನಟರು ಸಮಸ್ಯೆ ಪೀಡಿತರಿಗೆ ಸಹಾಯ ಮಾಡ ಬೇಕು, ಪರಿಹಾರ ಕೊಡಬೇಕು, ಒಂದೇ ಸಲ ಎಲ್ಲ ಸಮಸ್ಯೆಗಳನ್ನೂ ತಮ್ಮ ಸಿನಿಮಾಗಳಲ್ಲಿ ವಿಲನ್‌ಗಳನ್ನು ಹೊಡೆದೋಡಿಸಿದಂತೆ ಓಡಿಸಬೇಕು ಎಂಬೆಲ್ಲ ಪ್ರಲಾಪಗಳು ಶುರುವಾಗುತ್ತವೆ.
ಅಂದಹಾಗೆ ನಮ್ಮ ಜನಗಳಿಗೆ ಪಾಪ, ಈ ಸಿನಿಮಾ ನಟರು ತುಂಬಾ ಸುಲಭಕ್ಕೆ ಸಿಗುವ ಮಿಕಗಳಾಗಿ ಬಿಡುತ್ತಾರೆ. ಈ ಸಿನಿಮಾ ನಟರು ನಮಗೇನೂ ಮಾಡಿಲ್ಲ ಎಂದು ಮುಲುಗುವ ಈ ಜನ, ತಾವು ಅವರನ್ನು ಉದ್ಧಾರ ಮಾಡಿದ್ದೇವೆ, ಅವರ ಸಿನಿಮಾಗಳನ್ನು ಹಣ ಕೊಟ್ಟು ನೋಡಿದ್ದೇವೆ, ಹಾಗಾಗಿ ಅವರು ನಮಗೆ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ಮಾತನಾಡುತ್ತಾರೆ. ಆದರೆ ಒಂದು ವರ್ಷದಲ್ಲಿ ಒಬ್ಬ ಸ್ಟಾರ್ ನಟನ ಒಂದು ಚಿತ್ರಕ್ಕೆ ಹೆಚ್ಚೆಂದರೆ 200 ರುಪಾಯಿ ಕೊಟ್ಟು ಸಿನಿಮಾ ನೋಡುವ ಇವರು ತಮ್ಮ ಮಕ್ಕಳನ್ನು ಮಿನಿಮಮ್ ಎಂದರೂ ವರ್ಷಕ್ಕೆ 50 ಸಾವಿರ, 1 ಲಕ್ಷ ಕೊಟ್ಟು ಓದಿಸುವ ಸ್ಕೂಲ್ ಮ್ಯಾನೇಜ್‌ಮೆಂಟ್‌ನವರನ್ನು ಈ ರೀತಿ ಕೇಳುವುದಿಲ್ಲ, ಇವರಿಂದಲೇ ಲಕ್ಷಾಂತರ ಹಣ ಪೀಕುವ ಆಸ್ಪತ್ರೆ ಕಟ್ಟಿಸಿದವನನ್ನಾಗಲೀ ಅಥವಾ ನಮ್ಮ ಸಮಾಜದ ಇನ್ಯಾವುದೇ ಉದ್ಯಮಿ ಗಳನ್ನಾಗಲೀ ಇವರು ಕೇಳುವುದಿಲ್ಲ.
ಇದನ್ನೂ ಓದಿ: Hari Paraak Column: ಟೈಟ್ ಫಿಟ್ಟಿಂಗ್ ಇರೋ ಬಟ್ಟೆ-ಹಾರ್ಡ್ ವೇರ್
ತಮ್ಮ ಮನೆಯ ಬಳಿಯ ಇರುವ ಕಿರಾಣಿ ಅಂಗಡಿಗೂ ಇವರು ಸಾವಿರಾರು ರುಪಾಯಿ ಬ್ಯುಸಿನೆಸ್ ಕೊಟ್ಟರೂ ಅವನನ್ನೂ ಕೇಳುವುದಿಲ್ಲ. ಅವರೆಲ್ಲರೂ ಜನಗಳಿಂದಲೇ ಅಷ್ಟು ಶ್ರೀಮಂತರಾಗಿದ್ದರೂ ಅವರ ಗಳಿಕೆಯಲ್ಲಿ ನಮ್ಮ ಪಾಲಿದೆ ಎಂದು ಜನಗಳಿಗೆ ಅನ್ನಿಸೋದಿಲ್ಲ. ಅವರನ್ನು ಬಿಡಿ, ಸಿನಿಮಾ ಮಾಡಿ ನೂರಾರು ಕೋಟಿಗಟ್ಟಲೆ ಹಣ ಮಾಡುವ ನಿರ್ಮಾಪಕರನ್ನೂ ಇವರು ಕೇಳೋದಿಲ್ಲ. ಬದಲಾಗಿ ಅದರಲ್ಲಿ ಒಂದು ಪಾಲು ತೆಗೆದುಕೊಳ್ಳುವ ನಟರು ಇವರಿಗೆ ಬಲಿ ಕಾ ಬಕ್ರಾ ಆಗುತ್ತಾರೆ. ವಿಚಿತ್ರ ಅಂದ್ರೆ, ಈ ಜನಗಳು ನಮಗೆ ಯಾಕೆ ಏನೂ ಮಾಡಿಲ್ಲ ಅಂತ ಕೇಳಬೇಕಾದ ಸರ್ಕಾರಗಳನ್ನೇ ಕೇಳೋದಿಲ್ಲ. ಇವರಿಗೆ ಕೇಳಬೇಕಾದ ಒಂದೇ ಪ್ರಶ್ನೆ ಅಂದ್ರೆ, ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ?
ಲೂಸ್ ಟಾಕ್- ವಾಟಾಳ್ ನಾಗರಾಜ್
ಏನ್ ಸಾರ್ ಕಾವೇರಿ ವಿಷಯದಲ್ಲಿ ಮತ್ತೆ ಬಂದ್ ಮಾಡ್ತಾ ಇದ್ದೀರಂತೆ?
- ಹೌದು ಮತ್ತೆ. ನಾನ್ ಬಂದೆ ಅಂದ್ರೆ ಬಂದೇ. ಬಂದೇ ನಮ್ಮ ತಾಯಿ ತಂದೆ.
ತಮಿಳುನಾಡು ಮುಖ್ಯಮಂತ್ರಿ ಕರ್ನಾಟಕಕ್ಕೆ ಬರಂಗಿಲ್ಲ ಅಂತ ಒತ್ತಡ ಹಾಕ್ತಾ ಇದ್ದೀರಂತೆ? - ಮತ್ತೆ, ಮೇಕೆದಾಟು ವಿಷಯದಲ್ಲಿ ನಮ್ಮ ಪರವಾಗಿ ಆದೇಶ ಬಂದು ವಿಜಯ ನಮ್ಮದಾಗಿರುವಾಗ ಆ ವಿಜಯನ ಜೊತೆ ಮಾತಾಡೋದು ಏನಿರುತ್ತೆ?
ನೀವು ಮಾತಾಡೋ ಶೈಲಿ ನೋಡಿ ಜನ ಏನಂತಾರೆ?
- ಇವನು ವಾಟಾಳ್ ಅಲ್ಲ ವಾಚಾಳ್ ನಾಗರಾಜ್ ಅಂತಾರೆ
ಬಂದ್ ಮಾಡಿದ್ದು ಸಕ್ಸಸ್ ಫುಲ್ ಆದ್ರೆ ಸರಿ, ಫ್ಲಾಪ್ ಆದ್ರೆ?
- ಮಾಡಿದ್ದೆಲ್ಲ ಕಾವೇರಿ ನೀರಲ್ಲಿ ಹೋಮ ಮಾಡಿದ ಹಾಗೆ ಅಷ್ಟೇ
ಆಯ್ತು ಸರ್, ಒಂದ್ ಕೊನೆ ಪ್ರಶ್ನೆ. ಕಾವೇರಿ ಹೋರಾಟದಲ್ಲಿ ಈ ಬಂದ್ ಕಾನ್ಸೆಪ್ಟ್ ಯಾವಾಗ ಶುರು ಆಯ್ತು?
- ತುಂಬಾ ಸಿಂಪಲ್ ಕಣ್ರೀ. ಹಿಂದೆ ಒಂದ್ ಸಲ ತಮಿಳುನಾಡಿನವ್ರು ನೀವು ನಮಗೆ ನೀರು ಕೊಡ್ಲೇಬೇಕು ಅಂದ್ರು. ನಾವು ಅದಕ್ಕೆ ಹ್ಞೂ, ಬಿಟ್ಬುಡ್ತೀವಿ, ‘ಬಂದ್’ಬುಡಿ ಅಂದ್ವಿ. ಅದನ್ನ ಕೇಳಿ ಅವ್ರು ಕರ್ನಾಟಕದವ್ರು ಬಂದ್ ಮಾಡ್ತಾರೆ ಅಂತ ಗುಬ್ಬಿಸಿದ್ರು. ನಾವು ಸಿಕ್ಕಿದ್ದೇ ಛಾನ್ಸ್ ಅಂತ ಬಂದ್ ಮಾಡೋಕೆ ಶುರು ಹಚ್ಕೊಂಡ್ವಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು.
ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವ ನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನ ನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು.
ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿ ಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮುನನ್ನು ಕೇಳಿದ. ಅದಕ್ಕೆ ಖೇಮು ಹೇಳಿದ, ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಕಳಕಳಿ, ಉದ್ದೇಶ, ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ್ ಮಾತ್ರ ಮುಖ್ಯ. ಗೊತ್ತಾಯ್ತಾ?’
ಲೈನ್ ಮ್ಯಾನ್
ನಡುರಾತ್ರಿ ಜ್ಞಾನೋದಯ
- ನಿಮ್ಮ ಕನಸುಗಳನ್ನು ಆರ್ಕೈವ್ ಮಾಡಬೇಡಿ ಅಚೀವ್ ಮಾಡಿ
ನಮ್ಮವರಿಗೆ ಟಿಕೆಟ್ ಕೊಡದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅನ್ನೋದು ಯಾವ ಮಠದ ಸ್ವಾಮೀಜಿ?
- ಮುತ್ತಿಗೆ ಮಠ
ಇಂದಿನ ರಾಜಕಾರಣದಲ್ಲಿ ಟಿಕೆಟ್ ಸಿಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
- ಅವ್ರ್ ಯಾವ್ ಜನ ಅನ್ನೋದೂ ಮುಖ್ಯ ಆಗುತ್ತೆ.
ರಾಜಕೀಯ ರಹಸ್ಯ
- ‘ಎಕ್ಸ್’ ಸಿಎಂ ಗಳಾದ ಮೇಲೂ ಅವರಿಗೆ ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ?’ ಅಂತ ಕೇಳಲ್ಲ.
ಕುಡುಕರ ಪರ ಹೋರಾಟಕ್ಕೆ ಬೇಕಿರೋದು
- ಸ್ಪಿರಿಟ್
ನೀರಿನಲ್ಲಿ ಮುಳುಗುತ್ತಿರುವ ಜನರನ್ನು ದಡ ಸೇರಿಸಲು ಹರಸಾಹಸ ಮಾಡುವ ಅಂಬಿಗ
- ‘ಹುಟ್ಟು’ ಹೋರಾಟಗಾರ
ನಾನು ಬೀಡಿ ಸೇದೋದು ಬಿಟ್ಟಿದೀನಿ ಅಂತ ಸುಳ್ಳು ಹೇಳುವವರದು
- ‘ಬೀಡಿ’ ನಾಟಕ ಸಿಗರೇಟ್ ಬಿಟ್ಟೆ ಅಂತ ಹೇಳಿದ್ಯ ಮತ್ತೆ ಸೇದ್ತಾ ಇದ್ದೀಯಾ?
- Sorry, I said it on a 'lighter' note
ಸಿಗರೇಟು ಬಿಡಬೇಕು ಅಂದ್ರೂ ಬಿಡೋಕಾಗದೇ ಇರೋನಿಗೆ ಕಿವಿಮಾತು
- ವಿಲ್ ಪವರ್‌ಗಿಂತ ‘ವಿಲ್ಸ್’ ಪವರ್ ದೊಡ್ಡದು.