Gururaj Gantihole Column: ವಿಶೇಷಾಧಿಕಾರ: ಸದನದ ಕವಚವೇ, ಟೀಕೆಯ ವಿರುದ್ಧ ಅಸ್ತ್ರವೇ ?
ಭಾರತೀಯ ಸಂವಿಧಾನದ 105ನೇ ವಿಧಿಯು ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಈ ವಿಶೇಷ ರಕ್ಷಣೆಯನ್ನು ಒದಗಿಸಿದರೆ, ಸಂವಿಧಾನದ 194ನೇ ವಿಧಿಯು ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರಿಗೆ ಇದೇ ಮಾದರಿಯ ಸಾಂವಿಧಾನಿಕ ರಕ್ಷಣೆಯನ್ನು ನೀಡುತ್ತದೆ. ಏನಿದು ವಿಶೇಷಾಧಿ ಕಾರ? ಇದರ ಮೂಲ ಉದ್ದೇಶವೇನು? ಈ ವಿಶೇಷಾಧಿಕಾರವನ್ನು ಸರಳವಾಗಿ ಅರ್ಥಮಾಡಿ ಕೊಳ್ಳಬೇಕೆಂದರೆ, ಅಧಿವೇಶನ ನಡೆಯುತ್ತಿರುವಾಗ ಸದನದ ಒಳಗೆ ಓರ್ವ ಶಾಸಕ ಅಥವಾ ಸಂಸದ ಆಡುವ ಮಾತುಗಳಿಗೆ ಅಥವಾ ಚಲಾಯಿಸುವ ಮತಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ನ್ಯಾಯಾಲಯದಲ್ಲಿ ಸವಾಲು ಹಾಕುವಂತಿಲ್ಲ.
-
ಗಂಟಾಘೋಷ
‘ಸಂಸದೀಯ ಹಾಗೂ ಶಾಸಕಾಂಗದ ವಿಶೇಷಾಧಿಕಾರ’ದ ದುರ್ಬಳಕೆ ತಡೆಯಲು ‘ವಿಶೇಷಾಧಿಕಾರ ಗಳ ಕ್ರೋಡೀಕರಣ’ ಅತ್ಯಂತ ತುರ್ತಾಗಿ ಆಗಬೇಕಿದೆ. ಈ ಹಕ್ಕುಗಳು ಅಲಿಖಿತವಾಗಿರುವುದರಿಂದಲೇ ಇದರ ವ್ಯಾಖ್ಯಾನಗಳು ಆಳುವವರ ಇಚ್ಛೆಗೆ ತಕ್ಕಂತೆ ಬದಲಾಗುತ್ತಿವೆ. ಸಂಸತ್ತು ಮತ್ತು ವಿಧಾನ ಸಭೆಗಳು ಯಾವ ನಿರ್ದಿಷ್ಟ ನಡವಳಿಕೆಗಳು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುತ್ತವೆ, ಯಾವುದಕ್ಕೆ ಎಷ್ಟು ದಂಡನೆ ನೀಡಬಹುದು, ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯದ ಎಗಳೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ ಲಿಖಿತ ಕಾನೂನೊಂದನ್ನು ರೂಪಿಸುವುದು ಅನಿವಾರ್ಯ. ಈ ರೀತಿ ಸ್ಪಷ್ಟ ಕಾನೂನಿನ ಚೌಕಟ್ಟು ನಿರ್ಮಾಣ ವಾದರೆ, ಜನಪ್ರತಿನಿಧಿಗಳಿಗೂ ತಮ್ಮ ಅಧಿಕಾರದ ಮಿತಿಯ ಅರಿವಾಗುತ್ತದೆ ಮತ್ತು ಪತ್ರಕರ್ತರಿಗೂ ಅನಗತ್ಯ ಬೆದರಿಕೆಯಿಂದ ಮುಕ್ತಿ ಸಿಗುತ್ತದೆ.
ಪ್ರಜಾಪ್ರಭುತ್ವದ ಅತ್ಯುನ್ನತ ಹಾಗೂ ಪವಿತ್ರ ದೇಗುಲಗಳೆಂದರೆ ನಮ್ಮ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು. ಈ ಶಾಸನ ಸಭೆಗಳಲ್ಲಿ ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳು ಜನಸಾಮಾನ್ಯ ರ ಪರವಾಗಿ ದನಿ ಎತ್ತುತ್ತಾರೆ, ಆಡಳಿತದಲ್ಲಿರುವ ಸರ್ಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ ಹಾಗೂ ನಾಡಿಗೆ ಅಗತ್ಯವಿರುವ ಹೊಸ ಕಾನೂನುಗಳನ್ನು ರೂಪಿಸುತ್ತಾರೆ. ಈ ಬಹುಮುಖ್ಯವಾದ ಜವಾಬ್ದಾರಿಯನ್ನು ಯಾವುದೇ ಭಯ, ಮುಲಾಜು, ಅಥವಾ ಭವಿಷ್ಯದಲ್ಲಿ ಬೆದರಿಕೆ ಅಥವಾ ಪ್ರತೀಕಾರದ ಭಯವಿಲ್ಲದೆ ಮಾತನಾಡಲು ಶಾಸಕರಿಗೆ ಕೆಲವು ಸಂವಿಧಾನಾತ್ಮಕ ರಕ್ಷಣೆಗಳಿವೆ.
ತಮ್ಮ ವಿರುದ್ಧ ಕಾನೂನು ಕ್ರಮ ಜರುಗಬಹುದು ಎಂಬ ಅಂಜಿಕೆಯಿಲ್ಲದೆ ನಿರ್ವಹಿಸಲು ಭಾರತದ ಸಂವಿಧಾನವು ಅವರಿಗೆ ಕೆಲವು ವಿಶೇಷ ರಕ್ಷಣೆಗಳನ್ನು ನೀಡಿದೆ. ಇದನ್ನೇ ನಾವು ಕಾನೂನಿನ ಭಾಷೆಯಲ್ಲಿ ‘ಸಂಸದೀಯ ಹಾಗೂ ಶಾಸಕಾಂಗದ ವಿಶೇಷಾಧಿಕಾರ’ (Parliamentary and Legislative Privilege) ಎಂದು ಕರೆಯುತ್ತೇವೆ.
ಇದನ್ನೂ ಓದಿ: Gururaj Gantihole Column: ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ: ಗತವೈಭವ ಮತ್ತು ಕಾಪಾಡಿಕೊಳ್ಳಲಾಗದ ದಾರಿದ್ರ್ಯ
ಭಾರತೀಯ ಸಂವಿಧಾನದ 105ನೇ ವಿಧಿಯು ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಈ ವಿಶೇಷ ರಕ್ಷಣೆಯನ್ನು ಒದಗಿಸಿದರೆ, ಸಂವಿಧಾನದ 194ನೇ ವಿಧಿಯು ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರಿಗೆ ಇದೇ ಮಾದರಿಯ ಸಾಂವಿಧಾನಿಕ ರಕ್ಷಣೆಯನ್ನು ನೀಡುತ್ತದೆ. ಏನಿದು ವಿಶೇಷಾಧಿಕಾರ? ಇದರ ಮೂಲ ಉದ್ದೇಶವೇನು? ಈ ವಿಶೇಷಾಧಿಕಾರವನ್ನು ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅಧಿವೇಶನ ನಡೆಯುತ್ತಿರುವಾಗ ಸದನದ ಒಳಗೆ ಓರ್ವ ಶಾಸಕ ಅಥವಾ ಸಂಸದ ಆಡುವ ಮಾತುಗಳಿಗೆ ಅಥವಾ ಚಲಾಯಿಸುವ ಮತಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ನ್ಯಾಯಾಲಯದಲ್ಲಿ ಸವಾಲು ಹಾಕುವಂತಿಲ್ಲ.
ಉದಾಹರಣೆಗೆ, ಸದನದಲ್ಲಿ ನಡೆಯುವ ಚರ್ಚೆಯ ವೇಳೆ ಸರ್ಕಾರದ ಭಾರಿ ಭ್ರಷ್ಟಾಚಾರದ ಬಗ್ಗೆ ಅಥವಾ ಒಂದು ವಿವಾದಾತ್ಮಕ ವಿಷಯದ ಬಗ್ಗೆ ಓರ್ವ ಜನಪ್ರತಿನಿಧಿಯು ಅತ್ಯಂತ ಕಠಿಣ ಹಾಗೂ ವಿಮರ್ಶಾತ್ಮಕ ಪದಗಳಿಂದ ಟೀಕಿಸಿದರೂ, ಆತನ ವಿರುದ್ಧ ಹೊರಗಿನ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಮಾನನಷ್ಟ ಮೊಕದ್ದಮೆ ಹೂಡಲು ಬರುವುದಿಲ್ಲ. ಅಷ್ಟೇ ಅಲ್ಲದೆ, ಸದನ ಅಥವಾ ಅದರ ಯಾವುದೇ ಸಮಿತಿಯ ವರದಿಗಳು, ಚರ್ಚೆಗಳು, ಮತದಾನ ಅಥವಾ ಅಧಿಕೃತ ಪ್ರಕಟಣೆಗಳಿಗೂ ಈ ವಿಧಿಗಳ ಅಡಿಯಲ್ಲಿ ಸಂಪೂರ್ಣ ಕಾನೂನಾತ್ಮಕ ರಕ್ಷಣೆ ಸಿಗುತ್ತದೆ.
ಇದರ ಮೂಲ ಉದ್ದೇಶ ಜನಪ್ರತಿನಿಧಿಗಳಿಗೆ ಕೇವಲ ವೈಯಕ್ತಿಕ ರಕ್ಷಣೆ ಅಥವಾ ವಿಐಪಿ ಸೌಲಭ್ಯ ನೀಡುವುದಲ್ಲ. ಬದಲಾಗಿ, ಸಂಸದೀಯ ಹಾಗೂ ಶಾಸಕಾಂಗವು ಯಾವುದೇ ಬಾಹ್ಯ ಒತ್ತಡವಿಲ್ಲದೆ, ಸ್ವತಂತ್ರವಾಗಿ ಮತ್ತು ನಿರ್ಭೀತಿಯಿಂದ ತನ್ನ ಕಾರ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡುವುದಾಗಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನು ಸದನದಲ್ಲಿ ಧೈರ್ಯವಾಗಿ ಮಂಡಿಸಲು, ಸರ್ಕಾರದ ಪ್ರಮಾದಗಳ ಮೇಲೆ ನಿರಂತರ ನಿಗಾ ಇಡಲು ಮತ್ತು ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಜೀವಂತವಾಗಿಡಲು ಇದು ಅತ್ಯಂತ ಅವಶ್ಯಕವಾದ ಸೌಲಭ್ಯವಾಗಿದೆ. ಈ ತತ್ವವು, ಶಾಸಕಾಂಗದ ಘನತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.
ಪತ್ರಕರ್ತರನ್ನು ಹತ್ತಿಕ್ಕುವ ಅಸ!: ಸಂವಿಧಾನ ಶಿಲ್ಪಿಗಳು ಶಾಸಕಾಂಗದ ಕೆಲಸವನ್ನು ಸುಗಮಗೊಳಿಸಲು ಈ ಕವಚವನ್ನು ನೀಡಿದ್ದರೂ, ಭಾರತದಲ್ಲಿ ಇದನ್ನು ನಿರ್ದಿಷ್ಟವಾಗಿ ಲಿಖಿತ ಕಾನೂನಿನ ಚೌಕಟ್ಟಿನಲ್ಲಿ (Codified laws)) ಇಂದಿಗೂ ತಂದಿಲ್ಲ. ಹೀಗಾಗಿ ಯಾವುದು ಹಕ್ಕುಚ್ಯುತಿ, ಯಾವುದು ಹಕ್ಕುಚ್ಯುತಿಯಲ್ಲ ಎಂಬುದರ ನಿಖರ ವ್ಯಾಖ್ಯಾನವು ಬಹುತೇಕ ಸಂದರ್ಭಗಳಲ್ಲಿ ಆಯಾ ಸದನದ ಇಚ್ಛೆಗೆ ಬಿಟ್ಟ ವಿಚಾರ ವಾಗಿ ಬಿಡುತ್ತದೆ. ಕಾನೂನು ಸ್ಪಷ್ಟವಾಗಿ ಲಿಖಿತ ರೂಪದಲ್ಲಿಲ್ಲದ ಕಾರಣ, ಹಕ್ಕುಚ್ಯುತಿ ಸಮಿತಿಯೇ ದೂರುದಾರನಾಗಿ, ತನಿಖಾಧಿಕಾರಿಯಾಗಿ ಹಾಗೂ ಶಿಕ್ಷೆ ನೀಡುವ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದು ಅನೇಕ ಬಾರಿ ಭಾರತದ ಪತ್ರಿಕಾ ಸ್ವಾತಂತ್ರ್ಯದೊಂದಿಗೆ ನೇರ ಸಂಘರ್ಷಕ್ಕೆ ಇಳಿದಿದೆ. ಇದಕ್ಕೆ ಒಂದು ಅತ್ಯಂತ ಜ್ವಲಂತ ಹಾಗೂ ಆಘಾತಕಾರಿ ಉದಾಹರಣೆಯೆಂದರೆ ಕರ್ನಾಟಕ ವಿಧಾನಸಭೆ ಯಲ್ಲಿ 2017ರಲ್ಲಿ ನಡೆದ ಐತಿಹಾಸಿಕ ಘಟನೆ. 2017ರ ಜೂನ್ ತಿಂಗಳಲ್ಲಿ, ಕರ್ನಾಟಕ ವಿಧಾನ ಸಭೆಯು ಮಾಧ್ಯಮ ಲೋಕವೇ ಬೆಚ್ಚಿಬೀಳುವಂತಹ ಒಂದು ನಿರ್ಣಯವನ್ನು ಅಂಗೀಕರಿಸಿತ್ತು.
‘ಹಾಯ್ ಬೆಂಗಳೂರು’ ಪತ್ರಿಕೆಯ ಅಂದಿನ ಪ್ರಧಾನ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ’ ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಎಂಬಿಬ್ಬರು ಪತ್ರಕರ್ತರಿಗೆ ತಲಾ ಒಂದು ವರ್ಷದ ಜೈಲು ಶಿಕ್ಷೆ ಹಾಗೂ 10000 ರೂಪಾಯಿಗಳ ದಂಡ ವಿಧಿಸಿ ವಿಧಾನಸಭೆಯು ಕಠಿಣ ನಿರ್ಣಯ ಕೈಗೊಂಡಿತ್ತು.
ಕೆಲವು ಶಾಸಕರು ನೀಡಿದ ದೂರಿನ ಆಧಾರದ ಮೇಲೆ, ಈ ಪತ್ರಕರ್ತರು ತಮ್ಮ ಬಗ್ಗೆ ಮಾನಹಾನಿಕರ ಹಾಗೂ ಆಧಾರರಹಿತ ಲೇಖನಗಳನ್ನು ಬರೆದು ಶಾಸಕರ ಘನತೆಗೆ ಕುಂದು ತಂದಿದ್ದಾರೆ (ಹಕ್ಕುಚ್ಯುತಿ ಮಾಡಿದ್ದಾರೆ) ಎಂದು ವಿಧಾನಸಭೆಯ ಹಕ್ಕುಚ್ಯುತಿ ಸಮಿತಿಯು ಈ ಕಠಿಣ ಶಿಕ್ಷೆಯನ್ನು ಶಿಫಾರಸು ಮಾಡಿತ್ತು. ಈ ಘಟನೆಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಬಹುದೊಡ್ಡ ಪ್ರಹಾರ ಎಂದು ದೇಶಾದ್ಯಂತ ತೀವ್ರ ಖಂಡನೆಗೆ ಗುರಿಯಾಯಿತು.
ಈ ಪ್ರಕರಣವು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ, ನ್ಯಾಯಾಲಯವು ಮಧ್ಯಪ್ರವೇಶಿಸಿ ಈ ಬಂಧನವನ್ನು ತಡೆ ಹಿಡಿಯುವ ಮೂಲಕ ಪತ್ರಕರ್ತರಿಗೆ ರಿಲೀಫ್ ನೀಡಿತ್ತು. ಇದೇ ರೀತಿಯ ಮತ್ತೊಂದು ಹೈ-ಪ್ರೊಫೈಲ್ ಪ್ರಕರಣವು ನೆರೆಯ ಮಹಾರಾಷ್ಟ್ರದಲ್ಲಿ ನಡೆಯಿತು. ಮಹಾರಾಷ್ಟ್ರ ದಲ್ಲಿ ಅಸ್ತಿತ್ವದಲ್ಲಿದ್ದ ಮಹಾ ವಿಕಾಸ್ ಅಘಾದಿ (MVA) ಸರ್ಕಾರದ ಅವಧಿಯಲ್ಲಿ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ವಿರುದ್ಧವೂ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲಾಗಿತ್ತು.
ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದಕ್ಕಾಗಿ ಓರ್ವ ಸುದ್ದಿ ವಾಹನಿ ಸಂಪಾದಕನ ಮೇಲೆ ಸದನದ ವಿಶೇಷಾಧಿಕಾರವನ್ನು ಪ್ರಯೋಗಿಸಿದ್ದು ಭಾರಿ ರಾಜಕೀಯ ಹಾಗೂ ಕಾನೂನು ಚರ್ಚೆಗೆ ಗ್ರಾಸವಾಗಿತ್ತು. ಈ ಎರಡೂ ಪ್ರಕರಣಗಳು, ಆಡಳಿತದಲ್ಲಿರುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ತಮಗೆ ಇರಿಸುಮುರಿಸು ಉಂಟುಮಾಡುವ ಮಾಧ್ಯಮಗಳನ್ನು ಹತ್ತಿಕ್ಕಲು ಸಂಸದೀಯ ಹಾಗೂ ಶಾಸಕಾಂಗದ ವಿಶೇಷಾಧಿಕಾರವನ್ನು ಹೇಗೆ ತಮ್ಮ ಅಧಿಕಾರದ ಗುರಾಣಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.
ಸುಪ್ರೀಂ ಕೋರ್ಟ್ ತೀರ್ಪುಗಳು: ಶಾಸಕಾಂಗದ ವಿಶೇಷಾಧಿಕಾರದ ವ್ಯಾಪ್ತಿ ಹಾಗೂ ನ್ಯಾಯಾಂಗದ ಮಿತಿಗಳ ಕುರಿತು ಭಾರತದ ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಮಹತ್ವದ ತೀರ್ಪುಗಳನ್ನು ನೀಡುತ್ತಾ ಬಂದಿದೆ. ಈ ಪೈಕಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎರಡು ತೀರ್ಪುಗಳು ದೇಶದ ಗಮನ ಸೆಳೆದಿವೆ.
1993ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯದ ವೇಳೆ, ಕೆಲವು ಸಂಸದರು ಲಂಚ ಪಡೆದು ಸರ್ಕಾರವನ್ನು ಉಳಿಸಲು ಮತ ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ 1998ರ ಬಹುಚರ್ಚಿತ ‘ಪಿ.ವಿ. ನರಸಿಂಹ ರಾವ್ ಲಂಚ ಪ್ರಕರಣ’ದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂವಿಧಾನದ 105ನೇ ವಿಧಿಯನ್ನು ಉಲ್ಲೇಖಿಸಿ, ಸಂಸದರು ಲಂಚ ಪಡೆದರೂ ಸಹ, ಅವರು ಸದನದಲ್ಲಿ ಒಪ್ಪಂದದಂತೆ ಮತ ಹಾಕಿದ್ದರೆ ಅವರಿಗೆ ನ್ಯಾಯಾಲಯದ ವಿಚಾರಣೆಯಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ ಎಂಬ ವಿವಾದಾತ್ಮಕ ತೀರ್ಪನ್ನು ನೀಡಿತ್ತು.
ಇದು ಲಂಚಕೋರರಿಗೆ ಒಂದು ರೀತಿಯಲ್ಲಿ ಕಾನೂನಿನ ರಕ್ಷಣೆಯನ್ನೇ ಒದಗಿಸಿದಂತಾಗಿತ್ತು. ಆದರೆ, 26 ವರ್ಷಗಳ ನಂತರ ಈ ಕಳಂಕವನ್ನು ಸುಪ್ರೀಂ ಕೋರ್ಟ್ ಅಳಿಸಿ ಹಾಕಿತು. 2024ರ ಮಾರ್ಚ್ ತಿಂಗಳಲ್ಲಿ ಹೊರಬಿದ್ದ ‘ಸೀತಾ ಸೋರೇನ್ ವರ್ಸಸ್ ಭಾರತ ಒಕ್ಕೂಟ’ ಎಂಬ ಐತಿಹಾಸಿಕ ಪ್ರಕರಣದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 7 ನ್ಯಾಯ ಮೂರ್ತಿಗಳ ಸಂವಿಧಾನ ಪೀಠವು ಈ ಹಳೆಯ 1998ರ ತೀರ್ಪನ್ನು ಸರ್ವಾನುಮತದಿಂದ ತಿರಸ್ಕರಿಸಿತು.
2012ರ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಲು ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಶಾಸಕಿ ಸೀತಾ ಸೋರೇನ್ ಅವರ ಪ್ರಕರಣದಲ್ಲಿ, ಲಂಚ ಪಡೆಯುವುದಕ್ಕೂ ಶಾಸಕಾಂಗದ ಕರ್ತವ್ಯಕ್ಕೂ ಯಾವುದೇ ಸಂಬಂಧವಿಲ್ಲ. ಭ್ರಷ್ಟಾಚಾರವು ಪ್ರಜಾಪ್ರಭುತ್ವದ ಬೇರನ್ನೇ ನಾಶ ಮಾಡುತ್ತದೆ; ಹೀಗಾಗಿ ಲಂಚ ಪಡೆಯುವ ಯಾವುದೇ ಜನಪ್ರತಿನಿಧಿಗೆ ಸಂವಿಧಾನದ 105 ಅಥವಾ 194ನೇ ವಿಧಿಯ ಅಡಿಯಲ್ಲಿ ಲವಲೇಶವೂ ರಕ್ಷಣೆ ಸಿಗುವುದಿಲ್ಲ ಎಂದು ಕೋರ್ಟ್ ಖಡಕ್ ಆಗಿ ಹೇಳಿತು.
ವಿಶೇಷಾಧಿಕಾರವೆಂದರೆ ಸದನದ ಒಳಗೆ ಏನನ್ನಾದರೂ ಮಾಡಲು ಇರುವ ಮುಕ್ತ ಪರವಾನಗಿ ಅಲ್ಲ ಎಂಬುದನ್ನು 2015ರ ಕೇರಳ ವಿಧಾನಸಭೆಯ ಘಟನೆಯೂ ಸ್ಪಷ್ಟಪಡಿಸಿದೆ. 2015ರಲ್ಲಿ ಕೇರಳ ವಿಧಾನಸಭೆಯಲ್ಲಿ ಅಂದಿನ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಿದ್ದಾಗ, ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಶಾಸಕರು ನೇರವಾಗಿ ಸ್ಪೀಕರ್ ಪೀಠದ ಬಳಿ ನುಗ್ಗಿ ಅಲ್ಲಿನ ಕಂಪ್ಯೂಟರ್, ಪೀಠೋಪಕರಣಗಳು ಮತ್ತು ಮೈಕ್ಗಳನ್ನು ಎಸೆದು ಧ್ವಂಸಗೊಳಿಸಿದ್ದರು. ಈ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಶಾಸಕರು ಇದು ಸದನದ ಒಳಗೆ ನಡೆದ ಘಟನೆ, ನಮಗೆ ವಿಶೇಷಾಧಿಕಾರದ ರಕ್ಷಣೆ ಇದೆ, ನಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತಿಲ್ಲ ಎಂದು ವಾದಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿತು.
ಸದನದ ಒಳಗೆ ನಡೆದಿದೆ ಎಂಬ ಒಂದೇ ಕಾರಣಕ್ಕೆ ವಿಧ್ವಂಸಕ ಕೃತ್ಯಗಳಿಗೆ, ಸಾರ್ವಜನಿಕ ಆಸ್ತಿ ಹಾನಿಗೆ ಅಥವಾ ಯಾವುದೇ ಕ್ರಿಮಿನಲ್ ಅಪರಾಧಗಳಿಗೆ ‘ಸಂಸದೀಯ ಹಾಗೂ ಶಾಸಕಾಂಗದ ವಿಶೇಷಾಧಿಕಾರ’ದ ರಕ್ಷಣೆ ಸ್ವಯಂಚಾಲಿತವಾಗಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ಜನಪ್ರತಿನಿಧಿಗಳೂ ಸಹ ಸಾಮಾನ್ಯ ಕಾನೂನಿಗೆ ಅತೀತರಲ್ಲ ಎಂಬುದನ್ನು ಎಚ್ಚರಿಸಿತು.
ದುರ್ಬಳಕೆಯ ಅಪಾಯ ಮತ್ತು ಆಡಳಿತಗಾರರಿಗೆ ಎಚ್ಚರಿಕೆ: ಈ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕಗೊಳಿಸಲು ಹಾಗೂ ಇದರ ದುರ್ಬಳಕೆಯನ್ನು ಶಾಶ್ವತವಾಗಿ ತಡೆಯಲು ‘ವಿಶೇಷಾಧಿಕಾರ ಗಳ ಕ್ರೋಡೀಕರಣ’ (Codification of Privileges) ಅತ್ಯಂತ ತುರ್ತಾಗಿ ಆಗಬೇಕಿದೆ.
ಪ್ರಸ್ತುತ ಈ ಹಕ್ಕುಗಳು ಅಲಿಖಿತವಾಗಿರುವುದರಿಂದಲೇ ಇದರ ವ್ಯಾಖ್ಯಾನಗಳು ಆಳುವವರ ಇಚ್ಛೆಗೆ ತಕ್ಕಂತೆ ಬದಲಾಗುತ್ತಿವೆ. ಆದ್ದರಿಂದ, ಸಂಸತ್ತು ಮತ್ತು ವಿಧಾನಸಭೆಗಳು ಯಾವ ನಿರ್ದಿಷ್ಟ ನಡವಳಿಕೆಗಳು ಹಕ್ಕುಚ್ಯುತಿಯ ವ್ಯಾಪ್ತಿಗೆ ಬರುತ್ತವೆ, ಯಾವುದಕ್ಕೆ ಯಾವ ಪ್ರಮಾಣದ ದಂಡನೆ ನೀಡಬಹುದು ಮತ್ತು ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯದ ಎಗಳೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ ಲಿಖಿತ ಕಾನೂನೊಂದನ್ನು ರೂಪಿಸುವುದು ಅನಿವಾರ್ಯ. ಈ ರೀತಿ ಸ್ಪಷ್ಟವಾದ ಕಾನೂನಿನ ಚೌಕಟ್ಟು ನಿರ್ಮಾಣವಾದರೆ, ಜನಪ್ರತಿನಿಧಿಗಳಿಗೂ ತಮ್ಮ ಅಧಿಕಾರದ ಮಿತಿಯ ಅರಿವಾಗುತ್ತದೆ ಮತ್ತು ಸಾಮಾನ್ಯ ನಾಗರಿಕರು ಹಾಗೂ ಪತ್ರಕರ್ತರಿಗೂ ಅನಗತ್ಯ ಬೆದರಿಕೆಯಿಂದ ಮುಕ್ತಿ ಸಿಗುತ್ತದೆ. ಇದರ ಜೊತೆಗೆ, ಹಕ್ಕುಚ್ಯುತಿ ಸಮಿತಿಗಳ (Privileges Committee) ಕಾರ್ಯವೈಖರಿ ಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ವಿಚಾರಣಾ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರದ ಆಡಳಿತಾತ್ಮಕ ನೀತಿಗಳ ಮೇಲಿನ ವಿಮರ್ಶೆ, ಪತ್ರಿಕಾ ವರದಿಗಳು ಅಥವಾ ರಾಜಕೀಯ ವ್ಯಂಗ್ಯಗಳನ್ನು ಸದನದ ಕಲಾಪಕ್ಕೆ ಅಡ್ಡಿಪಡಿಸುವ ಕೃತ್ಯಗಳೆಂದು ಪರಿಗಣಿಸದಂತೆ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಬೇಕು.
ಯಾರಾದರೂ ಹಕ್ಕುಚ್ಯುತಿ ದೂರು ದಾಖಲಿಸಿದರೆ, ಅದನ್ನು ಕೇವಲ ಸದನದ ರಾಜಕೀಯ ಬಹುಮತದ ಆಧಾರದ ಮೇಲೆ ತೀರ್ಮಾನಿಸದೆ, ನಿವೃತ್ತ ನ್ಯಾಯಾಧೀಶರು ಅಥವಾ ಸ್ವತಂತ್ರ ಕಾನೂನು ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯ ಮೂಲಕ ಪ್ರಾಥಮಿಕ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆ ರೂಪುಗೊಳ್ಳಬೇಕು.
ಇಂತಹ ಕಟ್ಟುನಿಟ್ಟಿನ ಹಾಗೂ ಪಾರದರ್ಶಕ ಹೆಜ್ಜೆಗಳನ್ನು ಇಟ್ಟಾಗ ಮಾತ್ರ, ಟೀಕಾಕಾರರನ್ನು ಹತ್ತಿಕ್ಕುವ ಪ್ರವೃತ್ತಿಗೆ ಕಡಿವಾಣ ಬಿದ್ದು, ಶಾಸಕಾಂಗದ ವಿಶೇಷಾಧಿಕಾರವು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಸಂಸದೀಯ ಹಾಗೂ ಶಾಸಕಾಂಗದ ವಿಶೇಷಾಧಿಕಾರವು ಪ್ರಜಾಪ್ರಭುತ್ವದ ಅತ್ಯಂತ ಸೂಕ್ಷ್ಮವಾದ ಪರಿಕರವಾಗಿದೆ. ಅದು ಸದನದ ಸಾಮೂಹಿಕ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಹಾಗೂ ಶಾಸಕರ ಸಾಂಸ್ಥಿಕ ಕರ್ತವ್ಯಗಳನ್ನು ನಿರ್ವಹಿಸಲು ನೀಡಲಾದ ಪವಿತ್ರ ರಕ್ಷಣೆಯೇ ಹೊರತು, ವೈಯಕ್ತಿಕ ಗುರಾಣಿಯಲ್ಲ.