ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಆ ಕಾಲದ ಚಾರಣ ಹೀಗೂ ಇರುತ್ತಿತ್ತು !

ಬೇಸಗೆಯ ಚಾರಣಕ್ಕಾದರೆ, ಸೀಮೆ ಎಣ್ಣೆ ತುಂಬುವ ಕ್ಯಾನನ್ನು ಹೋಲುವ ಎರಡು ಲೀಟರ್ ಕ್ಯಾನಿನಲ್ಲಿ ನೀರನ್ನು ಕೊಂಡೊಯ್ಯುತ್ತಿದ್ದೆವು. ಆಗೆಲ್ಲಾ, ತೊರೆಯ ನೀರೇ ಕುಡಿಯಲು ಪ್ರಶಸ್ತಿ! ಜತೆಗೆ, ಅಪರೂಪ ಕ್ಕೆಂಬಂತೆ, ಮರದ ಬಳ್ಳಿಗಳೇ ನೀಡುವ ನೀರನ್ನು ಕುಡಿಯುತ್ತಿದ್ದೆವು. ಪರಿಸರಕ್ಕೆ ಹಾನಿ ನಡೆಸದೇ, ನಮ್ಮ ಪಾಡಿಗೆ ನಾವು ನಿರ್ಲಿಪ್ತರಾಗಿ ಚಾರಣ ಮಾಡಿದ ಒಂದು ಅನುಭವ ದೊಂದಿಗೆ, ಆಗಿನ ದಿನಗಳಲ್ಲಿ ನಡೆಯುತ್ತಿದ್ದ ನಮ್ಮ ಚಾರಣದ ಕಿರುಪರಿಚಯವನ್ನು ಮಾಡಿಕೊಡಲೆತ್ನಿಸುತ್ತೇನೆ.

Shashidhara Halady Column: ಆ ಕಾಲದ ಚಾರಣ ಹೀಗೂ ಇರುತ್ತಿತ್ತು !

-

ಶಶಾಂಕಣ

ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಈ ವರ್ಷ ಮಳೆ ಕಡಿಮೆ ಎನ್ನುತ್ತಿದ್ದಾರೆ; ಎಲ್ ನಿನೋ ಪ್ರಭಾವದಿಂದಾಗಿ, ಶೇ.೫೦ರಷ್ಟು ಮಳೆಯೂ ಬರುವುದಿಲ್ಲ ಎಂಬ ಸುದ್ದಿ ತೀರಾ ಬೇಸರ ಹುಟ್ಟಿಸು ವಂತಹದ್ದು; ಈ ನಡುವೆ, ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ, ಅಲ್ಲಲ್ಲಿ ಮಳೆ ಬರುತ್ತಿದೆ, ಬೆಟ್ಟ ಗುಡ್ಡಗಳು ಹಸಿರಿನಿಂದ ತುಂಬಿಕೊಳ್ಳಲು ಆರಂಭಿಸಿವೆ. ಆ ಹಸಿರನ್ನು, ರಭಸದಿಂದ ಹರಿಯುವ ತೊರೆಗಳನ್ನು, ನೊರೆಯುಗುಳುವ ಜಲಪಾತಗಳನ್ನು ನೋಡಲೆಂದು, ಅತಿ ಉತ್ಸಾಹದಿಂದ ಕೆಲವು ಚಾರಣಿಗರು, ಪಶ್ಚಿಮಘಟ್ಟಗಳ ಸಂದಿಗೊಂದಿಗಳಲ್ಲಿ ಅಡ್ಡಾಡತೊಡಗಿದ್ದಾರೆ, ಚಾರಣ ಮಾಡು ತ್ತಿದ್ದಾರೆ, ಬ್ಯಾಕ್‌ಪ್ಯಾಕ್‌ನಲ್ಲಿ ನಾನಾ ತಿಂಡಿ ತಿನಿಸುಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಕೊಂಡು, ದಟ್ಟಕಾಡಿನ ನಡುವೆ ಪಾರ್ಟಿ ಮಾಡಬೇಕೆಂದು ಹವಣಿಸುತ್ತಿದ್ದಾರೆ. ಆದರೆ, ಮಳೆ ಸುರಿಯುವ ಸೂಚನೆಯನ್ನು ಕಂಡ ನಮ್ಮ ಅರಣ್ಯ ಇಲಾಖೆಯವರು, ದಟ್ಟ ಕಾಡಿನ ಕೆಲವು ಭಾಗಗಳಿಗೆ ಚಾರಣವನ್ನೇ ನಿಷೇಧಿಸಲು ತೊಡಗಿದ್ದಾರೆ!

ಇದು, ನೆಗಡಿಯಾದರೆ, ಮೂಗು ಕೊಯ್ದಂತೆಯೇ ಅಲ್ಲವೆ? ಆದರೆ, ನಗರದ ಉತ್ಸಾಹಿಗಳು, ಹಸಿರಿನ ಸಿರಿ ತುಂಬಿದ ಕಾಡುಗಳಲ್ಲಿ ಮಾಹಿತಿಯ ಕೊರತೆಯಿಂದ ಹುಚ್ಚಾಟ ನಡೆಸದಂತೆ ಎಚ್ಚರ ವಹಿಸಲು, ಇದು ಸರಿ ಎಂಬ ಅಭಿಪ್ರಾಯವೂ ಸಾರ್ವತ್ರಿಕವಾಗಿದೆ. ಇದನ್ನು ಕಂಡಾಗ, ಕೆಲವು ದಶಕಗಳ ಹಿಂದೆ, ಯುವಕರ ಚಾರಣ ಹೇಗಿರುತ್ತಿತ್ತು ಎಂಬ ನೆನಪಾಯಿತು. ಅಂದು, ಪ್ಲಾಸ್ಟಿಕ್ ಕವರುಗಳ ಹಾವಳಿ ಇರಲಿಲ್ಲ, ಅಷ್ಟೇಕೆ, ನೀರನ್ನು ಕೊಂಡೊಯ್ಯುವ ಪ್ಲಾಸ್ಟಿಕ್ ಬಾಟಲಿಗಳೇ ಇರಲಿಲ್ಲ!

ಬೇಸಗೆಯ ಚಾರಣಕ್ಕಾದರೆ, ಸೀಮೆ ಎಣ್ಣೆ ತುಂಬುವ ಕ್ಯಾನನ್ನು ಹೋಲುವ ಎರಡು ಲೀಟರ್ ಕ್ಯಾನಿನಲ್ಲಿ ನೀರನ್ನು ಕೊಂಡೊಯ್ಯುತ್ತಿದ್ದೆವು. ಆಗೆಲ್ಲಾ, ತೊರೆಯ ನೀರೇ ಕುಡಿಯಲು ಪ್ರಶಸ್ತಿ! ಜತೆಗೆ, ಅಪರೂಪಕ್ಕೆಂಬಂತೆ, ಮರದ ಬಳ್ಳಿಗಳೇ ನೀಡುವ ನೀರನ್ನು ಕುಡಿಯುತ್ತಿದ್ದೆವು. ಪರಿಸರಕ್ಕೆ ಹಾನಿ ನಡೆಸದೇ, ನಮ್ಮ ಪಾಡಿಗೆ ನಾವು ನಿರ್ಲಿಪ್ತರಾಗಿ ಚಾರಣ ಮಾಡಿದ ಒಂದು ಅನುಭವ ದೊಂದಿಗೆ, ಆಗಿನ ದಿನಗಳಲ್ಲಿ ನಡೆಯುತ್ತಿದ್ದ ನಮ್ಮ ಚಾರಣದ ಕಿರುಪರಿಚಯವನ್ನು ಮಾಡಿಕೊಡ ಲೆತ್ನಿಸುತ್ತೇನೆ.

ಇದನ್ನೂ ಓದಿ: Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು

ನಮ್ಮ ಹಳ್ಳಿಮನೆಯಿಂದ ಪಶ್ಚಿಮ ದಿಕ್ಕಿನಲ್ಲಿದ್ದ ಪುಟ್ಟ ಬೆಟ್ಟ, ಕಲ್ಲುಕಟ್ರ ಅಣೆಯ ತುದಿಯಲ್ಲಿ ನಿಂತರೆ, ದೂರಪೂರ್ವದಲ್ಲಿ, ಸಹ್ಯಾದ್ರಿಯ ಸಾಲು ಕಾಣಿಸುತ್ತದೆ. ವಾತಾವರಣ ತಿಳಿಯಾಗಿದ್ದಾಗ ಆ ಪರ್ವತಗಳಲ್ಲಿ ಒಂದೆರಡು ಜಲಪಾತಗಳನ್ನು ಕಾಣಬಹುದು; ಅದೇ ರೀತಿ ಹಲವು ‘ಬರೆ’ಗಳೂ ಕಾಣಿಸುತ್ತವೆ. ನಮ್ಮೂರಿನ ಭಾಷೆಯಲ್ಲಿ ಬರೆ ಎಂದರೆ ಎತ್ತರದ ಬೆಟ್ಟ. ಕಲ್ಲುಕಟ್ರ ಅಣೆಯ ತುದಿ ಯಲ್ಲಿ ನಿಂತು ಪಶ್ಚಿಮ ಘಟ್ಟಗಳ ಸಾಲನ್ನು ಗಮನಿಸಿದರೆ, ಇಡೀ ಪರ್ವತ ಶ್ರೇಣಿಯು ಹಸಿರು ಕಾಡಿನಿಂದ ತುಂಬಿದ್ದರೂ, ಒಂದೆಡೆ ಹುಲ್ಲು ಬೆಳೆದಂತಹ ಜಾಗ ಕಾಣಿಸುತ್ತದೆ. ದೂರದಿಂದ ನೋಡಲು ಉಮಿಯನ್ನು (ಅಕ್ಕಿ ಮಾಡಿದಾಗ ಉಳಿವ ಬತ್ತದ ಹೊಟ್ಟು) ರಾಶಿ ಹಾಕಿದಂತಿದೆ.

ಅದೇ ಉಮಿಗುಡ್ಡೆ ಬರೆಯ ಹತ್ತಿರ, ಸಹ್ಯಾದ್ರಿ ಶ್ರೇಣಿಯಿಂದ ತುಸು ಬೇರ್ಪಟ್ಟಂತೆ ಕಾಣಿಸುವ, ಏಕಾಂಗಿ ಪರ್ವತವೊಂದಿದೆ. ಅದು ನೇರವಾಗಿ ಏರಿ ಹೋಗಿದ್ದ, ಸುಮಾರು 2000 ಅಡಿ ಎತ್ತರದ ಶಿಖರ; ಆದರೆ ಬುಡದಿಂದ ತುದಿಯ ತನಕ ಒಂದಿಂಚೂ ಬಿಡದಂತೆ ಬೆಳೆದಿರುವ ದಟ್ಟವಾದ ಕಾಡು; ನಮ್ಮೂರಿನಿಂದ ಹರನಗುಡ್ಡದ ಮೇಲೆ ನಡೆಯುತ್ತಾ ಹೈಕಾಡಿಗೋ, ಹಿಲಿಯಾಣಕ್ಕೋ, ತಾರಿಕಟ್ಟೆ ಗೋ ಹೊರಟಾಗ, ನೇರವಾಗಿ ಎತ್ತರಕ್ಕೆ ಏರಿಕೊಂಡಿರುವ ಆ ಪರ್ವತ ಕಾಣಿಸುತ್ತಾ, ಬಹು ದಿನಗಳಿಂದ ನನ್ನ ಗಮನ ಸೆಳೆದಿತ್ತು. ಆ ಪರ್ವತದ ಹೆಸರು ‘ಹಂದಿಮನೆ ಬರೆ’ ಎಂದಿದ್ದರು, ಗೆಳೆಯ ವಿಶ್ವನಾಥ ಹೆಬ್ಬಾರರು. ಅದು ಅವರ ಮನೆಗೆ ತುಸು ಹತ್ತಿರ; ಹಾಗಿದ್ದರೆ ಅದರ ತುದಿಗೆ ಕರೆದು ಕೊಂಡು ಹೋಗಿ ಎಂದೆ. ಸರಿ, ದಿನ ನಿಗದಿಯಾಯಿತು.

ಹೆಬ್ಬಾರರ ಮನೆಯಿರುವ ರಟ್ಟಾಡಿಯು, ಕಾಡಿನ ನಡುವೆ ಹುದುಗಿರುವ, ಬತ್ತದ ಗದ್ದೆ ಮತ್ತು ಅಡಿಕೆ ತೋಟಗಳ ಹರಹನ್ನು ಹೊಂದಿರುವ ಸುಂದರ ಹಳ್ಳಿ. ಅಲ್ಲಿಂದಾಚೆ, 2 ಕಿ.ಮೀ. ಸಾಗಿದರೆ ಅಮಾಸೆ ಬೈಲು ಎಂಬ ಅಪರೂಪದ ಹೆಸರಿನ ಹಳ್ಳಿಯಿದೆ. ಅಲ್ಲಿಯ ತನಕ ಬಸ್ ರಸ್ತೆಯಿದೆ; ಅಲ್ಲಿಂದಾಚೆ ಮೂರು ಕಿ.ಮೀ. ನಡೆದರೆ ಹಂದಿಮನೆ ಬರೆಯ ಬುಡ ತಲುಪಬಹುದು. ಆ ಮುಂಜಾನೆ ನಸುಕಿನಲ್ಲೇ ನಾವಿಬ್ಬರೂ, ಕೈಬೀಸಿ ಕೊಂಡು ಹೊರಟು, ನಡೆಯುತ್ತಲೇ ಹೋಗಿ, ಹಂದಿಮನೆ ಬರೆಯಿರುವ ಬೈಲನ್ನು ತಲುಪಿದೆವು.

ಹಂದಿಮನೆ ಬರೆಯ ಶಿಖರದಲ್ಲಿ ತಿನ್ನಲೆಂದು ಹೆಬ್ಬಾರರು ನಾಲ್ಕಾರು ಹಲಸಿನ ಹಣ್ಣಿನ ಕಡುಬು ಗಳನ್ನು, ಬಾಳೆ ಎಲೆಯಲ್ಲಿ ಭದ್ರವಾಗಿ ಪ್ಯಾಕ್ ಮಾಡಿ,ಹಿಡಿದುಕೊಂಡಿದ್ದರು!

charana ok

ಹಂದಿ ಮನೆ ಬರೆಯ ಬುಡದಲ್ಲಿ ಪುಟ್ಟದು ಎನಿಸುವ, ಬತ್ತ ಬೆಳೆಯುವ ಬೈಲು; ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಾಲು; ಅದರಿಂದ ಪ್ರತ್ಯೇಕವಾಗಿ ತಲೆ ಎತ್ತಿ ನಿಂತಿತ್ತು ಹಂದಿಮನೆ ಬರೆ. ಹಸಿರು ತುಂಬಿದ ಬತ್ತದ ಬಯಲಿನ ತುದಿಯಲ್ಲಿ ನೇರವಾಗಿ ಮೇಲೇರಿದ್ದ ಆ ಪರ್ವತದ ಮೈತುಂಬಾ ಮರಗಳು; ಒತ್ತೊತ್ತಾಗಿ ಬೆಳೆದಿದ್ದ ಆ ಬೃಹದಾಕಾರದ ಮರಗಳನ್ನು ಸಸ್ಯ ಸಂಕುಲವನ್ನು ನೋಡು ವುದೇ ಕಣ್ಣಿಗೆ ಹಬ್ಬ. ಆ ಬಯಲಿನ ತುದಿಯಲ್ಲಿ, ಹಂದಿಮನೆ ಬರೆಯ ಬುಡದಲ್ಲಿ ಏಕಾಂಗಿ ಮನೆ ಯಿತ್ತು. ‘ಈ ಮನೆಯಲ್ಲಿ ವಿಚಾರಿಸುವಾ! ಅವರು ಮಹಾಬಲ ಶೆಟ್ಟಿಗಾರರು, ನನಗೆ ಪರಿಚಯ! ಅಲ್ಲಿ ನಮ್ಮನ್ನು ಹಂದಿಮನೆ ಬರೆಗೆ ಕರೆದೊಯ್ಯುವ ಯಾರಾದರೂ ಸಿಗಬಹುದು’ ಎಂದರು ಹೆಬ್ಬಾರರು.

ಕಾಡಿನ ದಾರಿಯಲ್ಲೋ, ಬೆಟ್ಟದ ತುದಿಗೋ ಹೋಗಬೇಕೆನಿಸಿದಾಗ, ಈ ರೀತಿ, ಸ್ಥಳಕ್ಕೆ ಬಂದು ಮಾರ್ಗದರ್ಶಕರನ್ನು ಹುಡುಕುವ ಈ ಪರಿ, ಅಂದಿನ ಗ್ರಾಮೀಣ ಪ್ರದೇಶದಲ್ಲಿ ತೀರಾ ಸಾಮಾನ್ಯ. ಮುಂಚಿತವಾಗಿ ಮಾಹಿತಿ ತಿಳಿಸಲು ಮೊಬೈಲ್ ಇರಲಿಲ್ಲವಲ್ಲ!

ನಮ್ಮ ಸೀಮೆಯ ಹಳ್ಳಿಯ ಜನರು ಸಜ್ಜನರು, ಅಮಾಯಕರು. ಸದಾ ಬೇರೆಯವರಿಗೆ ಸಹಾಯ ಮಾಡಲು ಸಿದ್ಧರಿರುವವರು. ಈ ರೀತಿ ನಾವಿಬ್ಬರು ಅಪರಿಚಿತರು ಬಂದು ಬೆಟ್ಟ ಹತ್ತಬೇಕು ಎಂದೋ, ಜಲಪಾತ ನೋಡಬೇಕು ಎಂದೋ ಕೇಳಿಕೊಂಡರೆ, ತಕ್ಷಣ ಕರೆದೊಯ್ಯುವ ಪರೋಪ ಕಾರಿಗಳು. ಅಂದೂ ಹಾಗೆಯೇ ಆಯ್ತು. ಬೆಟ್ಟವೇರುವ ನಮ್ಮ ಹುರುಪನ್ನು, ಆಸಕ್ತಿಯನ್ನು ಕಂಡು ಆ ಮನೆಯ ಯುವಕ ಮಹಾಬಲ ಶೆಟ್ಟಿಗಾರರು ಮತ್ತು ದಯಾನಂದ ಎಂಬ ಇಬ್ಬರು, ಕೈಲೊಂದು ಕತ್ತಿ ಹಿಡಿದು ನಮ್ಮ ಜತೆ ಹೊರಟರು. ಈ ನಡುವೆ, ಪುಟ್ಟ ಪಂಚೆ ಉಟ್ಟ ಒಬ್ಬ ಯುವಕ ನಮ್ಮ ಬಳಿ ಬಂದು ನಗುತ್ತಾ ನಿಂತ! ಅವನನ್ನು ಎಲ್ಲೋ ಕಂಡಂತಿತ್ತು. ‘ಹೆಸರೆಂತ?’ ಕೇಳಿದೆ. ‘ಭೋಜ’ ಎಂದನಾತ. ಅರೆ! ಇವನು ನನ್ನ ಕ್ಲಾಸ್‌ಮೇಟ್ ಅಲ್ಲವೆ!

ನಾನು 5 ರಿಂದ 7ನೆಯ ತರಗತಿಯ ತನಕ ಓದುತ್ತಿದ್ದಾಗ, ಈತ ನನ್ನ ಸಹಪಾಠಿಯಾಗಿದ್ದ; ಆತನು, ತನ್ನ ಸಹಪಾಠಿಗಳಿಗೆ ಜುಮ್ಮನ ಮುಳ್ಳುಗಳನ್ನು ಇದೇ ಸುತ್ತಲಿನ ಕಾಡಿನಿಂದ ತಂದುಕೊಡುತ್ತಿದ್ದ; ಅಗಲ ವಿನ್ಯಾಸದ ಆ ಮುಳ್ಳುಗಳ ಒಂದು ಭಾಗದ ತೆಳು ಕಾಂಡವನ್ನು ಬ್ಲೇಡಿನಿಂದ ಎಬ್ಬಿ ತೆಗೆದು, ನಮ್ಮ ಇನಿಷಿಯಲ್‌ನ್ನು ರಿವರ್ಸ್‌ನಲ್ಲಿ ಕೆತ್ತಿ, ನಾವು ಮೊಹರುಗಳನ್ನು ಮಾಡಿಕೊಂಡು, ಅದಕ್ಕೆ ಬರೆಯುವ ಶಾಯಿ ಹಚ್ಚಿ, ನೋಟ್ ಪುಸ್ತಕದ ತುಂಬಾ ಛಾಪಿಸುತ್ತಿದ್ದೆವು!

ನನ್ನ ಪರಿಚಯವನ್ನು ಭೋಜನ ಬಳಿ ಹೇಳಿಕೊಂಡೆ. ಭೋಜನಿಗೂ ನನ್ನ ಗುರುತಾಗಿ, ಬಹಳ ಖುಷಿಯಾಯ್ತು. ಸುಮಾರು ಎಂಟು ವರ್ಷಗಳ ನಂತರ ನಾವಿಬ್ಬರು ಸಹಪಾಠಿಗಳು ಭೇಟಿ ಯಾಗಿದ್ದೆವು. ಅದೇ ಕೊನೆಯ ಭೇಟಿ. ಆ ನಂತರ ಇದು ತನಕ ಪುನಃ ನಮ್ಮ ಭೇಟಿಯಾಗಿದ್ದೇ ಇಲ್ಲ! ಬದುಕು ಎಂದರೆ ಹೀಗೇ ತಾನೆ!

‘ನೀವು ಅಷ್ಟು ದೂರದಿಂದ ಬಂದಿರುವಿರಿ, ನಮ್ಮ ಹಂದಿಮನೆ ಬರೆ ಕಾಂಬುಕೆ. ಇಷ್ಟರವರೆಗೆ ಈ ಬರೆ ಕಾಂಬುಕೆ ಅಂತ ಹೇಳಿ, ನಿಮ್ಮ ಥರ ಯಾರೂ ಬಂದದ್ದೇ ಇಲ್ಲ ಮಾರಾಯರೆ. ಬಹಳ ಖುಷಿ. ಬನ್ನಿ, ಅಲ್ಲಿಗೆ ದಾರಿ ತೋರಿಸುತ್ತೇನೆ’ ಎಂದು ಮಹಾಬಲ ಶೆಟ್ಟಿಗಾರರು ಮುಂದೆ ನಡೆದರು. ಅವರ ಮನೆಯ ಹಿಂದೆಯೇ ಕಡಿದಾದ ಏರುದಾರಿ ಆರಂಭವಾಯಿತು. ದಾರಿ ಎಂಬ ವಿಶೇಷ, ವಿಶೇಷಣ ಏನೂ ಅಲ್ಲಿಲ್ಲ. ಕಾಡುಪ್ರಾಣಿಗಳು ಓಡಾಡಿದ ಜಾಡು ಅದು. ನೆಲದ ಮೇಲೆ ದಟ್ಟವಾದ ತರಗೆಲೆ; ಕಾಲಿಟ್ಟರೆ ತರಗೆಲೆಯೇ ಜಾರುವ, ಅದರ ಜತೆ ನಾವೂ ಜಾರುವ ಅನುಭವ. ಕಡಿದಾದ ಏರಿನ ತೀವ್ರತೆ ಎಷ್ಟಿತ್ತೆಂ ದರೆ ಕೆಲವು ಕಡೆ ಆಚೀಚೆ ಬೆಳೆದ ಗಿಡಗಳನ್ನು ಬಳ್ಳಿಗಳನ್ನು ಆಸರೆಯಾಗಿ ಹಿಡಿದುಕೊಂಡು, ಮೇಲೇರಬೇಕಿತ್ತು. ಕಾಲಡಿ ಏನಾದರೂ ಹರಿಯುವ (ತೆವಳುವ) ಜೀವಿಗಳಿವೆಯೇ ಎಂದು ನೋಡು ವಷ್ಟು ವ್ಯವಧಾನವೂ ಇರಲಿಲ್ಲ.

ಮಹಾಬಲ ಶೆಟ್ಟಿಗಾರರು ಸರಸರನೆ ಮೇಲೇರುತ್ತಾ, ಮುಂದು ಹೋಗಿ ನಿಂತು ‘ಬನ್ನಿ ಬೇಗ-ಯಾಕಿಷ್ಟು ನಿಧಾನ!’ ಎಂದು ಸಣ್ಣಗೆ ನಗುತ್ತಾ, ಸರಸರನೆ ಮೇಲೇರುವಂತೆ ಹುರಿದುಂಬಿಸುತ್ತಿದ್ದರು. ಅವರಿಗೆ ನಗೆ, ನಮಗೆ ಧಗೆ! ನಮ್ಮಿಬ್ಬರಿಗೂ ಅಕ್ಷರಶಃ ಏದುಸಿರು ಬರುತ್ತಿತ್ತು!

ನಮ್ಮ ಸುತ್ತಲೂ ಬೃಹದಾಕಾರದ ಮತ್ತು ಹಸಿರು ತುಂಬಿದ ಎಲೆಗಳನ್ನೇ ಹೊದ್ದಿದ್ದ ಹಲವು ಮರಗಳಿದ್ದುದರಿಂದ ಬಿಸಿಲಿನ ಬೇಗೆ ಇರಲಿಲ್ಲ. ದಟ್ಟವಾದ ಮರಗಿಡಗಳು, ಪೊದೆಗಳು, ಬಳ್ಳಿಗಳ ನಡುವೆ ನುಸುಳಿ ಸಾಗುವಂತಹ ತೀವ್ರ ಏರಿನ ದಾರಿ; ಅಂತಹದೊಂದು ದಾರಿಯಲ್ಲಿ ನಾನು ಹಿಂದೆಂದೂ ಏರಿರಲಿಲ್ಲ!

ಸುಮಾರು ಒಂದು ಗಂಟೆ ಏರಿದ ನಂತರ ಮಟ್ಟಸ ಜಾಗಕ್ಕೆ ಬಂದೆವು. ಅದೂ ಶಿಖರದ ಜಾಗ. ಅಲ್ಲೂ ದಟ್ಟವಾದ ಮರಗಿಡಗಳಿದ್ದರೂ, ನಾವು ಏರಿ ಬಂದ ಇಳಿಜಾರಿನಲ್ಲಿ ಬೆಳೆದಷ್ಟು ದಟ್ಟಣೆ ಇರಲಿಲ್ಲ. ಆದರೆ, ಎತ್ತರವಾದ ಮರಗಿಡಗಳಿದ್ದುದರಿಂದ, ದೂರದ ನಿಸರ್ಗ ದೃಶ್ಯ ಪೂರ್ತಿಯಾಗಿ ಕಾಣುತ್ತಿರ ಲಿಲ್ಲ. ಮರಗಿಡಗಳು ತೆರವಾದ ಭಾಗದಲ್ಲಿ, ದೂರದ ಪರ್ವತಗಳು, ಕಾಡು, ಪಶ್ಚಿಮ ಘಟ್ಟ, ಸ್ವಲ್ಪ ಸ್ವಲ್ಪ ಕಾಣುತ್ತಿದ್ದವು. ಮಟ್ಟಸ ಶಿಖರದ ಆ ಜಾಗದಿಂದ, ನಮ್ಮ ಹಳ್ಳಿಯ ಕಲ್ಲುಕಟ್ರ ಅಣೆ ಬೆಟ್ಟ ಕಾಣಿಸುತ್ತದಾ ಎಂದು ಹುಡುಕಿದೆ; ಆದರೆ, ಮರಗಳ ದಟ್ಟಣೆಯನ್ನು ದಾಟಿ ನಮ್ಮ ದೃಷ್ಟಿ ಸಾಗುತ್ತಿರಲಿಲ್ಲ.

ಅಲ್ಲಿ ಸ್ವಲ್ಪ ಹೊತ್ತು ನಿಂತಿದ್ದು, ಅದೂ ಇದೂ ಮಾತನಾಡಿ, ಹೆಬ್ಬಾರರ ಮನೆಯಿಂದ ತಂದಿದ್ದ ಹಲಸಿನ ಕಡುಬುಗಳನ್ನು ತಿಂದು, ವಾಪಸ್ ಇಳಿಯಲು ಆರಂಭಿಸಿದೆವು. ಸಣ್ಣಗೆ ಬಾಯಾರ ತೊಡಗಿತು! ಈಗಂತೂ ಪೂರ್ತಿ ಜಾರುದಾರಿ; ನಿಲ್ಲಲು ಕಷ್ಟ-ಓಡಿಕೊಂಡೇ ಇಳಿಯತೊಡಗಿದೆವು. ಅಷ್ಟು ವೇಗವಾಗಿ ನಾನು ಹೇಗೆ ತಾನೆ ಇಳಿದೆ ಎಂದು ನೆನಪಿಸಿಕೊಂಡರೆ, ಈಗಲೂ ವಿಸ್ಮಯ ಎನಿಸುತ್ತದೆ!

ಬರಬರುತ್ತಾ ವಿಪರೀತ ಬಾಯಾರಿಕೆ ಕಾಡತೊಡಗಿತು; ವೇಗವಾಗಿ ನಡೆದು, ನಡೆದು, ನನಗೆ ಬಾಯಿ ಒಣಗತೊಡಗಿತು. ನಾವು ಕುಡಿಯುವ ನೀರನ್ನು ತಂದಿರಲಿಲ್ಲವಲ್ಲ! ಶೆಟ್ಟಿಗಾರರತ್ತ ಮುಖ ಮಾಡಿ, ‘ಬಾಯಾರಿಕೆ ಆಗ್ತಾ ಉಂಟು ಏನು ಮಾಡೋದು’ ಎಂದೆ. ‘ನೀವೇನೂ ಚಿಂತೆ ಮಾಡುವುದು ಬೇಡಿ, ಬಾಯಾರಿಕೆಗೆ ನನ್ನ ಹತ್ತಿರ ಒಂದು ಉಪಾಯ ಉಂಟು!’ ಎಂದರು ಅವರು.

ಆದರೆ, ಅವರ ಕೈಯಲ್ಲಿ ಒಂದು ಕತ್ತಿ ಬಿಟ್ಟರೆ ಏನೂ ಇಲ್ಲ; ಇವರದ್ದೇನು ಉಪಾಯ ಎಂಬ ಅಚ್ಚರಿ ನನಗೆ! ಅವರು ಒಂದೆಡೆ ನಿಂತು, ತನ್ನ ಕೈಯಲ್ಲಿದ್ದ ಕತ್ತಿಯನ್ನು ರಭಸವಾಗಿ ಬೀಸಿದರು! ಎದುರಿಗೆ ಬೆಳೆದುಕೊಂಡಿದ್ದ, ಅವರೇ ಆರಿಸಿದ್ದ ಒಂದು ಬಳ್ಳಿಯನ್ನು ಕತ್ತರಿಸಿದರು. ಸುಮಾರು ೨ ಇಂಚು ದಪ್ಪದ ಕಾಂಡ ಹೊಂದಿದ್ದ ಆ ಬಳ್ಳಿ, ಬಹಳ ಉದ್ದದ ತನಕ ಒಂದು ಮರದಿಂದ ಇನ್ನೊಂದು ಮರಕ್ಕೆ ಹಬ್ಬಿಕೊಂಡು ಹೋಗಿತ್ತು.

‘ಈ ಬಳ್ಳಿಯಲ್ಲಿ ನೀರು ಉಂಟು, ಕುಡಿಲಕ್’ ಎಂದರವರು. ಆ ಬಳ್ಳಿಯ ಸುಮಾರು ಮೂರು ಅಡಿ ಉದ್ದದ ಭಾಗವನ್ನು ಪ್ರತ್ಯೇಕವಾಗಿ ಕತ್ತರಿಸಿ ಕೈಲಿ ಹಿಡಿದರು. ಒಂದು ತುದಿಯನ್ನು ನನ್ನಡೆಗೆ ಚಾಚಿ ‘ಆ ತುದಿಯಲ್ಲಿ ನಿಮ್ಮ ಕೈ ಹಿಡಿದುಕೊಳ್ಳಿ, ನೀರು ಬರುತ್ತೆ’ ಎಂದರು. ನನಗೆ ಅಚ್ಚರಿ; ಬಳ್ಳಿಯಿಂದ ಕುಡಿಯುವ ನೀರು ಸಿಗುವುದಾದರೂ ಹೇಗೆ? ಸಾಕಷ್ಟು ಕಾಡಿನಿಂದ ಸುತ್ತುವರಿದಿರುವ ಹಳ್ಳಿಯಲ್ಲೇ ನಾನು ವಾಸವಿದ್ದರೂ, ಈ ರೀತಿ ಬಳ್ಳಿಯಿಂದ ಬರುವ ನೀರಿನಿಂದ ಬಾಯಾರಿಕೆ ನೀಗಿಸುವ ವಿಚಾರ ವನ್ನು ಕಂಡಿರಲಿಲ್ಲ. ಶೆಟ್ಟಿಗಾರರು ಹೇಳಿದಂತೆ, ಆ ಹಸಿ ಬಳ್ಳಿಯ ಒಂದು ತುದಿಗೆ ಬೊಗಸೆ ಹಿಡಿದು ನಿಂತೆ. ಬಳ್ಳಿಯ ತುಂಡಿನ ಮೇಲೆ ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ಆತ ತನ್ನ ಕತ್ತಿಯಿಂದ ಒಂದೇಟು ಹಾಕಿದರು. ತಕ್ಷಣ, ನಾನು ನನ್ನ ಬೊಗಸೆಗೆ ಬಳ್ಳಿಯ ಕೆಳ ತುದಿಯಿಂದ ಜಳಜಳನೆ ನೀರು ಸುರಿಯಲು ಆರಂಭಿಸಿತು!

ಸುಮಾರು 2 ಲೋಟ ನೀರನ್ನು ಆ ಬಳ್ಳಿಯ ತುಂಡು ನೀಡಿತು. ನಾನು ಚಪ್ಪರಿಸಿ ಕುಡಿದೆ. ಇನ್ನೊಂದು ಅಂತಹದ್ದೇ ಬಳ್ಳಿಯ ತುಂಡಿನಿಂದ ವಿಶ್ವನಾಥ ಹೆಬ್ಬಾರರ ಬಾಯಾರಿಕೆ ನೀಗಿತು. ದಟ್ಟ ಕಾಡಿನ ನಡುವೆ, ಬಳ್ಳಿಯನ್ನು ಕತ್ತರಿಸಿ ಬಾಯಾರಿಕೆ ತಣಿಸುವ ಈ ಪರಿಸರ ಜ್ಞಾನವನ್ನು ಕಂಡು ವಿಸ್ಮಯಗೊಂಡೆ. ಆ ಬಳ್ಳಿ ಸ್ವರೂಪದ ಸಸ್ಯದ ಹೆಸರು ಕುಸುಬಲು ಎಂದು ಅವರು ಹೇಳಿದ ನೆನಪು. ಬಳ್ಳಿಯಿಂದ ಸುರಿದ ಶುದ್ಧ ನೀರನ್ನು ಕುಡಿದು, ಪುನಃ ವೇಗವಾಗಿ ಇಳಿಯ ತೊಡಗಿದೆವು.

ಓಡುತ್ತಲೇ, ತಳ ಮುಟ್ಟಿ, ಶೆಟ್ಟಿಗಾರರಿಗೆ ಧನ್ಯವಾದ ಹೇಳಿದೆವು; ಆದರೆ ಅವರು ನಮ್ಮನ್ನು ಅಷ್ಟಕ್ಕೇ ಬಿಡಲಿಲ್ಲ, ತಮ್ಮ ಮನೆಗೆ ಕರೆದೊಯ್ದು, ಚಹ ಮತ್ತು ಗಜನಿಂಬೆಯ ಪಾನಕವನ್ನು ಮಾಡಿಸಿ ಕೊಟ್ಟರು. ಪಾನಕವನ್ನು ತಂದಿತ್ತ ಅವರ ಮನೆಯ ಮಹಿಳೆಯರಿಗೆ, ನಮ್ಮನ್ನು ಕಂಡು ನಿಜಕ್ಕೂ ಅಚ್ಚರಿ, ನಮ್ಮ ಹುಚ್ಚನ್ನು ಕಂಡು ವಿಸ್ಮಯ; ಕಾಲೇಜು ಕಲಿತ ಈ ಇಬ್ಬರು ಹುಡುಗರು, ತಮ್ಮ ಮನೆಯ ಹಿಂದಿರುವ, ದಟ್ಟವಾಗಿ ಗಿಡಮರಗಳು ಬೆಳೆದಿದ್ದ ಆ ಗುಡ್ಡೆಯನ್ನು ಏರುವ ಉದ್ದೇಶ ವಾದರೂ ಏನು ಎಂದು ಅವರಿಗೆ ಕೊನೆಗೂ ಅರ್ಥವಾಗಲಿಲ್ಲ!