R T Vittalmurthy Column: ರಾಹುಲ್ ಗಾಂಧಿ ಅವರಿಗೆ ಭಿನ್ನರ ಚಿಂತೆ!
ಎರಡನೇ ಕಂತಿನ ಸಂಪುಟ ವಿಸ್ತರಿಸುವಾಗ ಯುವಕರಿಗೆ, ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಅಂತ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಅವರ ಈ ಸೂಚನೆಯ ಪ್ರಕಾರ, ಯುವಕರಿಗೆ, ಹೊಸ ಮುಖ ಗಳಿಗೆ ಆದ್ಯತೆ ಸಿಕ್ಕಿದೆಯಾದರೂ ಫೈನಲ್ ಪಟ್ಟಿಯಿಂದ ಹೊರಗುಳಿಯುವ ಶಾಸಕರು ಮಾತ್ರವಲ್ಲ, ರಾಜ್ಯದ ನಾಯಕರೂ ಕೂಡಾ ಅಪ್‌ಸೆಟ್ ಆಗುವ ಸಾಧ್ಯತೆ ಜಾಸ್ತಿ.
-
ಮೂರ್ತಿ ಪೂಜೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟಕ್ಕೆ ಯಾರ್ಯಾರು ಸೇರಬೇಕು ಎಂಬ ವಿಷಯ ರಾಹುಲ್ ಗಾಂಧಿ ಸುಸ್ತಾಗುವಂತೆ ಮಾಡಿದೆಯಂತೆ. ಕಾರಣ? ಡಿ.ಕೆ. ಶಿವಕುಮಾರ್ ಅವರ ಸಂಪುಟ ದಲ್ಲಿ ಇಪ್ಪತ್ತು ಸ್ಥಾನಗಳು ಖಾಲಿ ಇದ್ದರೆ, ಅದಕ್ಕೆ ಕನಿಷ್ಟ ಎಪ್ಪತ್ತು ಮಂದಿ ಲಗ್ಗೆ ಹಾಕಿದ್ದು.
ಹೀಗಾಗಿ ಮೊನ್ನೆ ಸಂಜೆ, ಮಂತ್ರಿ ಮಂಡಲದ ಪಟ್ಟಿ ಒಂದು ರೂಪ ತಳೆಯುವ ಹೊತ್ತಿಗೆ ರಾಹುಲ್ ಗಾಂಧಿ ಸುಸ್ತಾಗಿದ್ದಷ್ಟೇ ಅಲ್ಲ, ಚಿಂತೆಗೂ ಒಳಗಾಗಿದ್ದರಂತೆ. ಅವರ ಈ ಚಿಂತೆಗೆ ಮುಂದೇನು? ಎಂಬ ಪ್ರಶ್ನೆಯೇ ಕಾರಣ. ಯಾಕೆಂದರೆ ಈ ಬಾರಿ ಮಂತ್ರಿಗಿರಿ ಸಿಗದವರು ಮೌನವಾಗುಳಿಯುತ್ತಾರೆ ಎಂಬ ನಂಬಿಕೆ ಅವರಿಗೆ ಬರುತ್ತಿಲ್ಲ.
ಮೂಲಗಳ ಪ್ರಕಾರ, ‘ನಿಮ್ಮನ್ನು ಮಂತ್ರಿ ಮಾಡಿಸುವುದು ನಮ್ಮ ಜವಾಬ್ದಾರಿ’ ಅಂತ ಹಲವು ಮಧ್ಯವರ್ತಿಗಳು ಪಕ್ಷದ ಹಲವು ಶಾಸಕರಿಗೆ ಪ್ರಾಮಿಸ್ಸು ಮಾಡಿರುವುದು ರಾಹುಲ್ ಗಾಂಧಿಯವರ ಗಮನಕ್ಕೆ ಬಂದಿದೆ. ಹೀಗೆ ಪ್ರಾಮಿಸ್ಸು ಮಾಡಿದವರು ತೆರೆಯ ಹಿಂದೆ ಆಡಿದ್ದಾರಾದರೂ ಪ್ರಾಮಿಸ್ಸು ಪಡೆದ ಶಾಸಕರು ಫ್ರಂಟ್ ಲೈನಿನ ಇರುತ್ತಾರೆ. ಮತ್ತು ತಮಗೆ ಸಿಕ್ಕ ಪ್ರಾಮಿಸ್ಸು ಈಡೇರದೆ ಇದ್ದರೆ ಕೊಸ ಕೊಸ ಅನ್ನತೊಡಗುತ್ತಾರೆ ಎಂಬುದು ರಾಹುಲ್ ಗಾಂಧಿಯವರ ಯೋಚನೆ.
ಹೀಗಾಗಿ ಮಂತ್ರಿ ಮಂಡಲದ ಪಟ್ಟಿಗೆ ಅಂತಿಮ ಮುದ್ರೆ ಒತ್ತುವ ಮುನ್ನ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದು ವಿಷಯವನ್ನು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಅದೆಂದರೆ, ‘ಸಂಪುಟ ವಿಸ್ತರಣೆಯ ನಂತರ ಬಂಡಾಯ ಮೇಲೇಳದಂತೆ ನೋಡಿಕೊಳ್ಳಿ’ ಎಂಬುದು.
ಇದನ್ನೂ ಓದಿ: R T Vittalmurthy Column: ಡಿಚ್ಚಿ ಹೊಡೆಯುತ್ತಿದೆ ರಾಹುಲ್ ಪಟ್ಟಿ?
ಅರ್ಥಾತ್, ಎರಡನೇ ಕಂತಿನ ಸಂಪುಟ ವಿಸ್ತರಣೆಯ ಕ್ಷಣ ಹತ್ತಿರವಾಗುತ್ತಿದ್ದಂತೆಯೇ ಅವರು ಈ ನಾಯಕರ ಮೇಲೆ ಗುರುತರವಾದ ಜವಾಬ್ದಾರಿಯನ್ನು ಹೇರಿದ್ದಾರೆ. ಆದರೆ ಏನೇ ಮಾಡಿದರೂ ಬಹುತೇಕ ಆಕಾಂಕ್ಷಿಗಳು ಮತ್ತು ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದು ಈ ಬಾರಿ ಅವಕಾಶ ಪಡೆಯದೆ ಇರುವವರು ಅಸಮಾಧಾನಗೊಳ್ಳುವುದು ಸಹಜ.
ಹೀಗಾಗಿ ಈಗ ಮಂತ್ರಿ ಮಂಡಲ ವಿಸ್ತರಣೆಯಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತದ ಬೀಜ ಮೊಳಕೆ ಒಡೆಯುತ್ತದೆ ಮತ್ತು ಅದನ್ನು ತಕ್ಷಣ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸ ವಾಗದಿದ್ದರೆ ಮುಂದಿನ ದಿನಗಳಲ್ಲಿ ಅದು ಕರ್ನಾಟಕದ ರಾಜಕಾರಣವನ್ನು ಧ್ರುವೀಕರಣದ ನೆಲೆಗಟ್ಟಿನ ಮೇಲೆ ನಿಲ್ಲಿಸುತ್ತದೆ.
ಸಂಪುಟ ಸರ್ಕಸ್ಸು ಹೇಗಿತ್ತು?
ಇನ್ನು ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಎರಡನೇ ಕಂತಿನ ಸಂಪುಟ ವಿಸ್ತರಿಸುವಾಗ ಯುವಕ ರಿಗೆ, ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಅಂತ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಅವರ ಈ ಸೂಚನೆಯ ಪ್ರಕಾರ, ಯುವಕರಿಗೆ, ಹೊಸ ಮುಖಗಳಿಗೆ ಆದ್ಯತೆ ಸಿಕ್ಕಿದೆಯಾದರೂ ಫೈನಲ್ ಪಟ್ಟಿಯಿಂದ ಹೊರಗುಳಿಯುವ ಶಾಸಕರು ಮಾತ್ರವಲ್ಲ, ರಾಜ್ಯದ ನಾಯಕರೂ ಕೂಡಾ ಅಪ್‌ಸೆಟ್ ಆಗುವ ಸಾಧ್ಯತೆ ಜಾಸ್ತಿ.
ಯಾಕೆಂದರೆ ಒಂದು ಮಂತ್ರಿ ಸ್ಥಾನಕ್ಕೆ ಎಲ್ಲರೂ ತಮ್ಮ ತಮ್ಮ ಕ್ಯಾಂಡಿಡೇಟುಗಳ ಹೆಸರು ಹೇಳಿದ್ದು ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲವಲ್ಲ? ಹೀಗಾಗಿ ಈ ವಿಷಯ ಎಲ್ಲ ನಾಯಕರ ಇರುಸು ಮುರಿಸಿಗೆ ಕಾರಣವಾಗಬಹುದು.
ಉದಾಹರಣೆಗೆ, ಮಹಿಳೆಯರ ಕೋಟಾದಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ವಿಷಯ ಬಂದಾಗ ಮಲ್ಲಿಕಾರ್ಜುನ ಖರ್ಗೆಯವರು ಕನೀಜ್ ಫಾತಿಮಾ ಹೆಸರು ಹೇಳಿದ್ದರೆ, ಡಿಕೆ ಕ್ಯಾಂಪಿನ ಕಡೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪವಾಗಿದೆ.
ಈ ಮಧ್ಯೆ ಸಿದ್ದರಾಮಯ್ಯ ಅವರು ಅನ್ನಪೂರ್ಣ ತುಕಾರಾಂ ಅವರ ಹೆಸರು ಹೇಳಿದ್ದರೆ, ನನ್ನ ಬದಲು ನನ್ನ ಮಗಳು ರೂಪಕಲಾ ಶಶಿಧರ್ ಅವರಿಗೆ ಮಂತ್ರಿಗಿರಿ ಕೊಡಿ ಅಂತ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದರಂತೆ.
ಅಂದ ಹಾಗೆ ಕೆ.ಹೆಚ್. ಮುನಿಯಪ್ಪ ಅವರು ತುಂಬ ಸೀನಿಯರ್ ಲೀಡರು, ಈ ಹಿಂದೆ ಹಲವು ಬಾರಿ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾದವರು. ಹೀಗಾಗಿ ಡಿಕೆ ಸರಕಾರದಲ್ಲಿ ಮಂತ್ರಿಯಾದಾಗ, ‘ನನಗೆ ಆಹಾರ ಖಾತೆ ಬೇಡ. ಬದಲಿಗೆ ಬೇರೆ ಖಾತೆ ಕೊಡಿ’ ಎಂದಿದ್ದರು. ಅದರೆ ತಮ್ಮ ಆಸೆ ಈಡೇರದೆ ಇರುವುದರಿಂದ ನಿರಾಶರಾದ ಮುನಿಯಪ್ಪ ಈಗ ವರಸೆ ಬದಲಿಸಿ ಮಗಳ ಹೆಸರು ಹೇಳಿzರೆ.
ಇದೇ ರೀತಿ ಮುಸ್ಲಿಂ ಕೋಟಾದ ವಿಷಯ ಬಂದಾಗ ಡಿಕೆ ಕ್ಯಾಂಪು ತನ್ವೀರ್ ಸೇಠ್ ಹೆಸರು ಹೇಳಿದ್ದರೆ, ಸಿದ್ದರಾಮಯ್ಯ ರಿಜ್ವಾನ್ ಆರ್ಷದ್ ಹೆಸರು ಹೇಳಿದ್ದಾರೆ. ಇನ್ನು ಸ್ವತಃ ರಾಹುಲ್ ಗಾಂಧಿಯವರು ಸಲೀಂ ಅಹ್ಮದ್ ಅವರು ಸಂಪುಟಕ್ಕೆ ಬಂದ್ರೆ ಒಳ್ಳೆಯದು ಅಂತ ಹೇಳಿದ್ದಾರೆ. ಈ ವಿಷಯದಲ್ಲಿ ಖರ್ಗೆಯವರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಸೂತ್ರ ಮಂಡಿಸಿ, ಕನೀಜ್ ಫಾತಿಮಾ ಹೆಸರು ಹೇಳಿದರೆ ಕೆ.ಸಿ. ವೇಣುಗೋಪಾಲ್ ಅವರು ಜಮೀರ್ ಅಹ್ಮದ್ ಹೆಸರು ಹೇಳಿದ್ದಾರೆ.
ಈ ಮಧ್ಯೆ ಈಡಿಗರ ಕೋಟಾದಲ್ಲಿ ಸಾಗರದ ಬೇಳೂರು ಗೋಪಾಲಕೃಷ್ಣ ಅವರ ಬೆನ್ನಿಗೆ ಒಬ್ಬರು ನಿಂತರೆ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಅವರ ಹೆಸರು ಸುರ್ಜೇವಾಲ ಅವರಿಂದ ಪ್ರಸ್ತಾಪವಾಗಿದೆ. ಈ ಮಧ್ಯೆ ಪಕ್ಷ ಮತ್ತು ಸರಕಾರಕ್ಕೆ ಹೊಸಪೇಟೆಯ ಗವಿಯಪ್ಪ ಕಮಿಟ್ ಆಗಿರುತ್ತಾರೆ. ಹೀಗಾಗಿ ಅವರನ್ನೇ ಮಂತ್ರಿ ಮಾಡಬೇಕು ಎಂಬ ಪ್ರಪೋಸಲ್ಲು ಇನ್ನೊಬ್ಬ ನಾಯಕರಿಂದ ವ್ಯಕ್ತವಾಗಿದೆ. ಅಂದ ಹಾಗೆ ಈ ಮೂವರಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಫ್ರಂಟ್ ಲೈನಿ ನಲ್ಲಿದೆಯಾದರೂ ಅಂತಿಮ ಪಟ್ಟಿಯಲ್ಲಿ ಜಾಗ ಪಡೆಯುವವರನ್ನು ಬಿಟ್ಟು ಉಳಿದಿಬ್ಬರು ಅಸಮಾಧಾನ ಗೊಳ್ಳುವುದು ಸಹಜ.
ಈ ಮಧ್ಯೆ ಮಂಡ್ಯ, ಕೋಲಾರ ಸೇರಿದಂತೆ ಹಲ ಜಿಗಳ ಕೆಲ ಶಾಸಕರು, ‘ನಮಗೆ ಮಂತ್ರಿ ಪದವಿ ಕೊಡಲು ಹೈಕಮಾಂಡ್ ಕಮಿಟ್ ಆಗಿದೆ’ಎನ್ನುತ್ತಿದ್ದರೂ ಫೈನಲ್ ಪಟ್ಟಿಯ ನಂತರ ಈ ಬ್ಯಾಚಿ ನಿಂದಲೂ ಅತೃಪ್ತರು ಮೇಲೇಳಲಿzರೆ.
ಇನ್ನು ಸರಕಾರದಲ್ಲಿ ಯುವಕರು ಇದ್ದರೆ ಸಾಲದು, ಬದಲಿಗೆ ಒಂದಷ್ಟು ಹಿರಿಯರೂ ಇರಬೇಕು ಅಂತ ಖರ್ಗೆ ಅವರು, ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್ ಮತ್ತು ಹೆಚ್.ಸಿ. ಮಹದೇವಪ್ಪ ಅವರಂತಹ ನಾಯಕರ ಹೆಸರು ಹೇಳಿದ್ದರೂ ಈ ಪ್ರಪೋಸಲ್ಲು ಫುಲ್‌ಫಿಲ್ ಆಗುವುದು ಕಷ್ಟ.
ಹೀಗಾಗಿ ಅತೃಪ್ತರ ಪಾಳಯದಲ್ಲಿ ಹಲವು ಹಿರಿಯ ನಾಯಕರ ಹೆಸರುಗಳು ಕಾಣಬಹುದು. ಆದ್ದರಿಂದಲೇ ಶನಿವಾರ ಸಂಜೆಯ ಹೊತ್ತಿಗೆ ಡಿಕೆ ಸಂಪುಟದ ಎರಡನೇ ಕಂತಿನ ಪಟ್ಟಿಗೆ ಗ್ರೀನ್ ಸಿಗ್ನಲ್ಲು ಕೊಟ್ಟ ರಾಹುಲ್ ಇನ್ನೂ ಚಿಂತೆಯಲ್ಲಿದ್ದಾರೆ.
ಡಿಕೆಶಿ ಲಕ್ಕು ಚೆನ್ನಾಗಿದೆ
ಅಂದ ಹಾಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಲಕ್ಕು ಚೆನ್ನಾಗಿದ್ದಂತಿದೆ. ಯಾಕೆಂದರೆ ಜುಲೈ ಅಂತ್ಯದವರೆಗೂ ಉತ್ತಮ ಮಳೆಯಾಗದೆ ಕಾವೇರಿ ವಿವಾದ ಭುಗಿಲೇಳುವ ಲಕ್ಷಣ ಕಾಣಿಸಿತಲ್ಲ?
ಈ ಸಂದರ್ಭದಲ್ಲಿ ಹಲವರು, ‘ಇದ್ಯಾಕೋ ಎಸ್.ಎಂ. ಕೃಷ್ಣ ಕಾಲದ ರಿಪಿಟೇಶನ್ನು’ ಅಂತ ಲೆಕ್ಕ ಹಾಕತೊಡಗಿದ್ದರು. ಅಂದ ಹಾಗೆ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂರು ವರ್ಷ ಉತ್ತಮ ಮಳೆಯಾಗದೆ ಕಾವೇರಿ ನೀರಿಗಾಗಿ ತಮಿಳುನಾಡಿನ ಜತೆ ಸಂಘರ್ಷ ನಡೆಸಬೇಕಾದ ಸ್ಥಿತಿಗೆ ತಲುಪಿದ್ದರು. ಈಗ ಡಿಕೆ ಕೂಡಾ ಅಂತಹ ಚಕ್ರಸುಳಿಯಲ್ಲಿ ಸಿಲುಕಬಹುದು ಎಂಬುದು ಹಲವರ ಅನುಮಾನವಾಗಿತ್ತು.
ಈ ಮಧ್ಯೆ ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೋರಾಟಗಳು ಆರಂಭವಾದ ನಂತರವಂತೂ ಅದು ತಲುಪುವ ಉತ್ತುಂಗ ಹೇಗಿರಬಹುದು ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾವೇರಿ ನದಿಪಾತ್ರದಲ್ಲಿ ಬೀಳುತ್ತಿರುವ ಮಳೆ ಕಾವೇರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆಯಲ್ಲದೆ, ಜೆ.ಹೆಚ್. ಪಟೇಲರ ಕಾಲವನ್ನು ನೆನಪಿಸಿದೆ.
ಅಂದ ಹಾಗೆ ಜೆ.ಹೆಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಮಳೆ ಕೈ ಕೊಟ್ಟು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರೀ ಹೋರಾಟಗಳಿಗೆ ವೇದಿಕೆ ಅಣಿಯಾಗಿತ್ತು. ಆದರೆ ಇದು ವಿಕೋಪಕ್ಕೆ ಹೋಗುವ ಮುನ್ನ ರಾಜ್ಯದಲ್ಲಿ ಭಾರೀ ಮಳೆ ಸುರಿದಿತ್ತಲ್ಲದೆ ಎರಡೇ ವಾರಗಳಲ್ಲಿ ಆಣೆಕಟ್ಟುಗಳು ತುಂಬಿ ಕಾವೇರಿ ವಿವಾದ ತಣ್ಣಗಾಗಿತ್ತು.
ಈಗ ಡಿಕೆ ವಿಷಯದಲ್ಲೂ ಪಟೇಲರ ಕಾಲದ ಇತಿಹಾಸ ರಿಪೀಟ್ ಆಗುವಂತೆ ಕಾಣುತ್ತಿದೆ. ಇವತ್ತು ಹಲವು ಭಾಗಗಳಲ್ಲಿ ಬೀಳುತ್ತಿರುವ ಮಳೆಯನ್ನು ಗಮನಿಸಿದರೆ ಕರ್ನಾಟಕ, ಬರಗಾಲದ ಸಂಕಟ ದಿಂದ ಬಚಾವಾಗ ಬಹುದು ಎಂಬ ನಂಬಿಕೆ ಮೂಡುತ್ತಿದೆ.
ಇದೇ ರೀತಿ ಡಿಕೆ ಪಾಲಿಗೆ ಪ್ಲಸ್ ಅಗಿರುವ ಮತ್ತೊಂದು ಸಂಗತಿ ಎಂದರೆ ಕೇಂದ್ರ ಸರಕಾರದ ಜತೆಗಿನ ಅವರ ಬಾಂಧವ್ಯ ಉತ್ತಮವಾಗುತ್ತಿರುವುದು. ಅಂದ ಹಾಗೆ ಈ ಹಿಂದೆ ಡಿಕೆ ಸಿಎಂ ಆದರೆ ಏನಾಗುತ್ತದೆ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾಜಕೀಯ ವಲಯಗಳು ಡಿ-ರೆಂಟ್ ಆಗಿ ಚರ್ಚಿಸುತ್ತಿದ್ದವು.
ಅವುಗಳ ಪ್ರಕಾರ, ಡಿಕೆ ಸಿಎಂ ಆಗುವುದನ್ನೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಯುತ್ತಿದ್ದಾರೆ. ಡಿಕೆ ಸಿಎಂ ಆದ ತಕ್ಷಣ ದಾಳ ಉರುಳಿಸಿ ಸರಕಾರ ಅಲುಗಾಡುವಂತೆ ಮಾಡಲಿದ್ದಾರೆ. ಹೀಗಾಗಿ ಡಿಕೆ ಸಿಎಂ ಆದರೆ ಸರಕಾರ ಬಹುಕಾಲ ಉಳಿಯುವುದಿಲ್ಲ ಎನ್ನುತ್ತಿದ್ದವು.
ಆದರೆ ಡಿಕೆ ಸಿಎಂ ಪಟ್ಟದ ಮೇಲೆ ಕುಳಿತು ಬರೋಬ್ಬರಿ ಎರಡು ತಿಂಗಳು ಕಳೆದಿದೆ. ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳು, ಮೋದಿ-ಶಾ ಜೋಡಿಗೆ ಡಿಕೆ ಕ್ಲೋಸಾಗುತ್ತಿದ್ದಾರೆ ಎನ್ನುವ ಮಾಹಿತಿ ಯನ್ನು ತರುತ್ತಿವೆ.
ಅರ್ಥಾತ್, ಸಿಎಂ ಪಟ್ಟದ ಮೇಲೆ ಕುಳಿತ ಡಿಕೆ ತಾವು ಮಾತ್ರವಲ್ಲ, ರಾಜ್ಯ ಮತ್ತು ಕೇಂದ್ರದ ಬಾಂಧವ್ಯ ಸುಧಾರಿಸುವಂತೆ ಮಾಡಿದ್ದಾರೆ. ಈ ಮಧ್ಯೆ ಅವರು ದಿಲ್ಲಿಯಲ್ಲಿ ನಡೆಸಿದ ಸಂಸದರ ಸಭೆ ಮತ್ತು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆಸಿದ ಸರ್ವಪಕ್ಷಗಳ ಸಭೆ ಅವರ ಇಮೇಜು ಬಿಲ್ಡ್ ಆಗುವಂತೆ ಮಾಡಿದೆ. ಇದೇ ರೀತಿ ಕರ್ನಾಟಕದಲ್ಲಿ ಜೆನ್ ಜಿ ಬಿರುಗಾಳಿ ಬೀಸುವ ಅಪಾಯವನ್ನು ಗ್ರಹಿಸಿ ಸರಕಾರಿ ಉದ್ಯೋಗಗಳ ಭರ್ತಿಗೆ ಅವರು ನೀಡಿರುವ ಸೂಚನೆ ಕೂಡಾ ಎಲ್ಲರ ಗಮನ ಸೆಳೆದಿದೆ.
ಬಿಜೆಪಿ ಭಿನ್ನರಿಗೆ ‘ಕಾಕ್ರೋಚ್’ ಅಡ್ಡಿ
ಇನ್ನು ಜುಲೈ ಅಂತ್ಯದ ಹೊತ್ತಿಗೆ ರಾಜ್ಯ ಬಿಜೆಪಿಯಲ್ಲಿ ಕ್ರಾಂತಿ ಆಗುವುದು ನಿಶ್ಚಿತ ಎಂದು ಭಾವಿಸಿದ್ದ ವಿಜಯೇಂದ್ರ ವಿರೋಧಿ ಪಡೆಗೆ ನಿರಾಸೆಯಾಗಿದೆ. ಅದರ ಈ ನಿರಾಸೆಗೆ ಕಾಕ್ರೋಚ್ ಪಾರ್ಟಿಯೇ ಕಾರಣ.
ಅಂದ ಹಾಗೆ ಈ ಪಡೆಯ ಮಾಹಿತಿಯ ಪ್ರಕಾರ, ಜುಲೈ ಇಪ್ಪತ್ತೈದರ ಹೊತ್ತಿಗೆ ರಾಜ್ಯ ಬಿಜೆಪಿಯ ಗೊಂದಲವನ್ನು ಪರಿಹರಿಸಲು ಮೂವರು ವೀಕ್ಷಕರನ್ನು ಕರ್ನಾಟಕಕ್ಕೆ ಕಳಿಸಲು ಬಿಜೆಪಿ ವರಿಷ್ಟರು ತೀರ್ಮಾನಿಸಿದ್ದರು. ಅವರ ಈ ತೀರ್ಮಾನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುವ ವೀಕ್ಷಕರ ಪಡೆ ನಾಯಕತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದೆ ಅಂತ ವಿಜಯೇಂದ್ರ ವಿರೋಧಿಗಳು ಭಾವಿಸಿದ್ದರು.
ಆದರೆ ಈ ಲೆಕ್ಕಾಚಾರ ಶುರುವಾಗುತ್ತಿದ್ದಂತೆಯೇ ದಿಲ್ಲಿಯಲ್ಲಿ ಆರಂಭವಾದ ಕಾಕ್ರೋಚ್ ಪಾರ್ಟಿಯ ‘ನೀಟ’ ದಂಗೆ ಬಿಜೆಪಿ ವರಿಷ್ಟರ ತಳಮಳಕ್ಕೆ ಕಾರಣವಾಯಿತು. ಯಾವಾಗ ವರಿಷ್ಟರಿಗೆ ಈ ತಳಮಳ ಶುರುವಾಯಿತೋ? ಆಗ ಅವರ ಗಮನ ಸಂಪೂರ್ಣವಾಗಿ ಕಾಕ್ರೋಚ್ ಹೋರಾಟದ ಕಡೆ ಸರಿದು ರಾಜ್ಯ ಬಿಜೆಪಿಯ ಎಪಿಸೋಡು ಹಿಂದೆ ಸರಿಯಿತು. ಪರಿಣಾಮ? ಜುಲೈ ಇಪ್ಪತ್ತೈದರ ಹೊತ್ತಿಗೆ ಕರ್ನಾಟಕಕ್ಕೆ ಬರಬೇಕಿದ್ದ ವೀಕ್ಷಕರು ಬರಲೇ ಇಲ್ಲ.
ಹೀಗೆ ಕಾಕ್ರೋಚ್ ಪಾರ್ಟಿಯ ಹೋರಾಟ ರಾಜ್ಯ ಬಿಜೆಪಿಯ ಸರ್ಜರಿ ದಿನಾಂಕವನ್ನು ಮುಂದೆ ಹಾಕಿತಲ್ಲ? ಇದಾದ ನಂತರ ಬಿಜೆಪಿ ವರಿಷ್ಟರ ಗಮನ ಸಂಸತ್ ಅಧಿವೇಶನದ ಕಡೆ ಸರಿಯಿತು. ಇನ್ನು ಅಧಿವೇಶನದ ನಂತರವಾದರೂ ಸರ್ಜರಿ ದಿನಾಂಕ ಫಿಕ್ಸಾಗುತ್ತದಾ ಎಂದರೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಕಡೆ ಮೋದಿ- ಅಮಿತ್ ಶಾ ಗಮನ ಸರಿಯಲಿರುವುದರಿಂದ ಅದೂ ಕಷ್ಟ ಎಂಬ ಮಾಹಿತಿ ಲಭ್ಯವಾಗತೊಡಗಿದೆ.
ಪರಿಣಾಮ? ವಿಜಯೇಂದ್ರ ಹಟಾವೋ ಯೋಜನೆಯ ಬೆನ್ನು ಬಿದ್ದಿರುವ ವಿರೋಧಿ ಪಡೆಗೆ ನಿರಾಸೆಯಾಗಿದೆ.