ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ

ಕೆವಟನ ಈ ಪ್ರೇಮಪೂರ್ವಕ ಹಠವನ್ನು ಕಂಡು ಭಕ್ತವತ್ಸಲನಾದ ರಾಮನು ಮಂದಹಾಸ ಬೀರುತ್ತಾನೆ. “ಸರಿ ಕೆವಟ, ನನ್ನ ಪಾದಧೂಳಿನಿಂದ ನಿನ್ನ ದೋಣಿಗೆ ತೊಂದರೆಯಾಗುವುದು ಬೇಡ, ನೀನು ಮೊದಲು ಪಾದಗಳನ್ನು ತೊಳೆ" ಎಂದು ಅನುಮತಿ ನೀಡುತ್ತಾನೆ. ಕೆವಟನು ಒಂದು ಮರದ ಪಾತ್ರೆಯಲ್ಲಿ ನೀರನ್ನು ತಂದು, ಪರಮಾತ್ಮನ ಪಾದಗಳನ್ನು ಭಕ್ತಿಯಿಂದ ತೊಳೆದು, ಆ ಪವಿತ್ರ ಜಲವನ್ನು ತಾನು ಕುಡಿದು ತನ್ನ ಪಿತೃಗಳಿಗೂ ಅರ್ಪಿಸುತ್ತಾನೆ.

ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ

-

ಒಂದೊಳ್ಳೆ ಮಾತು

ದಶರಥನ ಆeಯಂತೆ ವನವಾಸಕ್ಕೆ ಹೊರಟ ರಾಮ, ಲಕ್ಷ್ಮಣ ಮತ್ತು ಸೀತೆಯರು ಗಂಗಾನದಿಯ ತೀರಕ್ಕೆ ಬರುತ್ತಾರೆ. ವಿಶಾಲವಾದ ಗಂಗೆಯನ್ನು ದಾಟಲು ಅವರಿಗೆ ದೋಣಿಯ ಅವಶ್ಯಕತೆ ಯಿರುತ್ತದೆ. ಅಲ್ಲಿ ದೋಣಿ ನಡೆಸುತ್ತಿದ್ದವನೇ ಕೆವಟ. ರಾಮನು ಅವನನ್ನು ಅಕ್ಕರೆಯಿಂದ ಕರೆದು ದೋಣಿಯಲ್ಲಿ ಕರೆದೊಯ್ಯಲು ಕೇಳುತ್ತಾನೆ. ಆದರೆ ಕೆವಟನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಅವನು ರಾಮನಿಗೆ ಒಂದು ವಿಚಿತ್ರವಾದ ಷರತ್ತನ್ನು ವಿಧಿಸುತ್ತಾನೆ: “ಪ್ರಭು, ನಿಮ್ಮ ಪಾದದ ಧೂಳಿನ ಮಹಿಮೆ ನನಗೆ ತಿಳಿದಿದೆ. ಕಲ್ಲಿನ ಮೇಲೆ ನಿಮ್ಮ ಪಾದದ ಧೂಳು ಬಿದ್ದಾಗ ಅದು ಸುಂದರ ಹೆಣ್ಣಾಗಿ (ಅಹಲ್ಯೆ) ಬದಲಾಯಿತು.

ಒಂದು ವೇಳೆ ಆ ಧೂಳು ನನ್ನ ಮರದ ದೋಣಿಗೆ ತಗುಲಿ ಅದು ಹೆಣ್ಣಾಗಿ ಬದಲಾದರೆ ನಾನೇನು ಮಾಡಲಿ? ನನ್ನ ಇಡೀ ಸಂಸಾರ ನಡೆಯುವುದೇ ಈ ದೋಣಿಯಿಂದ. ಹಾಗಾಗಿ, ನಾನು ನಿಮ್ಮ ಪಾದಗಳನ್ನು ತೊಳೆದು ಆ ಧೂಳನ್ನು ಸಂಪೂರ್ಣವಾಗಿ ತೆಗೆಯುವವರೆಗೂ ನಿಮ್ಮನ್ನು ದೋಣಿಗೆ ಹತ್ತಿಸಿಕೊಳ್ಳುವುದಿಲ್ಲ".

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಶಬರಿಗೆ ಶ್ರೀರಾಮನ ದರ್ಶನ

ಇದು ಮೇಲ್ನೋಟಕ್ಕೆ ಕೆವಟನ ಮುಗ್ಧತೆ ಎನಿಸಿದರೂ, ಅದರ ಹಿಂದೆ ರಾಮನ ಪಾದಪೂಜೆ ಮಾಡುವ ಮತ್ತು ಪಾದೋದಕವನ್ನು ಸ್ವೀಕರಿಸುವ ಪರಮ ಹಂಬಲವಿತ್ತು. ರಾಮಚರಿತ ಮಾನಸ ದಲ್ಲಿ ತುಳಸೀದಾಸರು ಈ ಸನ್ನಿವೇಶವನ್ನು ಹೀಗೆ ಬರೆಯುತ್ತಾರೆ:

ಪದ ಕಮಲ ಧೋಇ ಚಢಾಇ ನಾವ ನ ನಾಥ

ಉತರಾಯಿ ಚಹೌಂ |

ಮೋಹಿ ರಾಮ ರಾಉರಿ ಆನ ದಸರಥ ಸಪಥ ಸಾಚೀ

ಕಹೌಂ ||

ಬರು ತೀರ ಮಾರಹು ಲಖನು ಪೈ ಜಬ ಲಗಿ ನ ಪಾಯ

ಪಖಾರಿಹೌಂ |

ತಬ ಲಗಿ ನ ತುಲಸೀದಾಸ ನಾಥ ಕೃಪಾಲ ಪಾರು

ಉತಾರಿಹೌಂ ||

ಭಾವಾರ್ಥ: ಪಾದಕಮಲಗಳನ್ನು ತೊಳೆಯದೆ ನಿಮ್ಮನ್ನು ದೋಣಿಗೆ ಹತ್ತಿಸಿಕೊಳ್ಳುವುದಿಲ್ಲ, ನನಗೆ ನಿಮ್ಮ ಮೇಲೆಯೇ ಆಣೆ. ಬೇಕಿದ್ದರೆ ಲಕ್ಷ್ಮಣನು ನನ್ನನ್ನು ಬಾಣದಿಂದ ಹೊಡೆಯಲಿ, ಆದರೆ ಪಾದ ಗಳನ್ನು ತೊಳೆಯುವ ತನಕ ನಾನು ನಿಮ್ಮನ್ನು ಗಂಗೆ ದಾಟಿಸುವುದಿಲ್ಲ ಎಂದು ಕೆವಟನು ಹಠ ಹಿಡಿಯುತ್ತಾನೆ.

ಕೆವಟನ ಈ ಪ್ರೇಮಪೂರ್ವಕ ಹಠವನ್ನು ಕಂಡು ಭಕ್ತವತ್ಸಲನಾದ ರಾಮನು ಮಂದಹಾಸ ಬೀರು ತ್ತಾನೆ. “ಸರಿ ಕೆವಟ, ನನ್ನ ಪಾದಧೂಳಿನಿಂದ ನಿನ್ನ ದೋಣಿಗೆ ತೊಂದರೆಯಾಗುವುದು ಬೇಡ, ನೀನು ಮೊದಲು ಪಾದಗಳನ್ನು ತೊಳೆ" ಎಂದು ಅನುಮತಿ ನೀಡುತ್ತಾನೆ. ಕೆವಟನು ಒಂದು ಮರದ ಪಾತ್ರೆ ಯಲ್ಲಿ ನೀರನ್ನು ತಂದು, ಪರಮಾತ್ಮನ ಪಾದಗಳನ್ನು ಭಕ್ತಿಯಿಂದ ತೊಳೆದು, ಆ ಪವಿತ್ರ ಜಲವನ್ನು ತಾನು ಕುಡಿದು ತನ್ನ ಪಿತೃಗಳಿಗೂ ಅರ್ಪಿಸುತ್ತಾನೆ.

ಇದು ಸಾಮಾನ್ಯ ಕೆವಟನಿಗೆ ದೊರೆತ ಅತಿದೊಡ್ಡ ಭಾಗ್ಯ. ಬ್ರಹ್ಮದೇವನು ಯಾವ ಪಾದಗಳನ್ನು ಪೂಜಿಸುತ್ತಾನೋ, ಅಂಥ ಪಾದಗಳನ್ನು ತೊಳೆಯುವ ಅವಕಾಶ ಒಬ್ಬ ಸಾಮಾನ್ಯ ನಾವಿಕನಿಗೆ ಲಭಿಸಿತ್ತು.

ದೋಣಿ ಹತ್ತಿದ ನಂತರ ರಾಮ, ಸೀತೆ ಮತ್ತು ಲಕ್ಷ್ಮಣರು ಗಂಗೆಯನ್ನು ದಾಟುತ್ತಾರೆ. ದೋಣಿಯಿಂದ ಇಳಿದ ಮೇಲೆ ರಾಮನು ಕೆವಟನಿಗೆ ದೋಣಿ ನಡೆಸಿದ ಕೂಲಿಯನ್ನು (ಉತರಾಯಿ) ಕೊಡಲು ಮುಂದಾಗುತ್ತಾನೆ. ತನ್ನ ಬಳಿ ಹಣವಿಲ್ಲದ್ದನ್ನು ಕಂಡು ಸಂಕೋಚಪಟ್ಟ ರಾಮನ ಮನಸ್ಸನ್ನು ಅರಿತ ಸೀತಾಮಾತೆಯು ತನ್ನ ರತ್ನಖಚಿತ ಉಂಗುರವನ್ನು ನೀಡುತ್ತಾಳೆ.

ಆದರೆ ಕೆವಟನು ಅದನ್ನು ಸ್ವೀಕರಿಸಲು ನಿರಾಕರಿಸುತ್ತಾನೆ. ಅವನು ಹೇಳುತ್ತಾನೆ, “ಪ್ರಭು, ಇಂದು ನಮ್ಮಿಬ್ಬರ ಜಾತಿ ಒಂದೇ ಆಯಿತು. ನಾನು ನಾವಿಕ, ನೀವು ನಾವಿಕ (ಭವಸಾಗರವನ್ನು ದಾಟಿಸು ವವರು). ಒಬ್ಬ ನಾವಿಕ ಇನ್ನೊಬ್ಬ ನಾವಿಕನಿಂದ ಕೂಲಿ ಪಡೆಯುವುದಿಲ್ಲ. ನಾನು ನಿಮ್ಮನ್ನು ಈ ಚಿಕ್ಕ ನದಿಯನ್ನು ದಾಟಿಸಿದ್ದೇನೆ, ನೀವು ನನ್ನನ್ನು ಈ ಜೀವನವೆಂಬ ಸಂಸಾರ ಸಾಗರದಿಂದ ದಾಟಿಸಿಬಿಡಿ, ಅದೇ ನನಗೆ ನೀವು ನೀಡುವ ಕೂಲಿ".

ಕೆವಟನ ಈ ಅತೀವ ಭಕ್ತಿ ಮತ್ತು ನಿಸ್ವಾರ್ಥ ಬುದ್ಧಿಯನ್ನು ಕಂಡು ರಾಮನು ಗದ್ಗದಿತನಾಗುತ್ತಾನೆ. ಅವನಿಗೆ ತಾನು ನೀಡಬಹುದಾದ ಶ್ರೇಷ್ಠವಾದ ‘ಅಮಲ ಭಕ್ತಿ’ಯನ್ನು ಅನುಗ್ರಹಿಸಿ ಹರಸುತ್ತಾನೆ. ಸಾಮಾಜಿಕ ಸ್ಥಿತಿಗತಿಯಲ್ಲಿ ಕೆವಟನು ಕೆಳವರ್ಗದವನಾಗಿ ಕಂಡರೂ, ಭಕ್ತಿಯ ಸಾಮ್ರಾಜ್ಯದಲ್ಲಿ ಅವನು ಚಕ್ರವರ್ತಿಯಾಗಿ ರಾಮನ ಹೃದಯ ಗೆಲ್ಲುತ್ತಾನೆ.

ದೇವರು ಪಾಂಡಿತ್ಯಕ್ಕಾಗಲೀ, ಐಶ್ವರ್ಯಕ್ಕಾಗಲೀ ಸೋಲುವುದಿಲ್ಲ; ಅವನು ಭಕ್ತನ ನಿಷ್ಕಪಟವಾದ ‘ಪ್ರೇಮ’ಕ್ಕೆ ಮಾತ್ರ ಸೋಲುತ್ತಾನೆ. ನಾವು ನೀಡುವ ವಸ್ತುಗಳಿಗಿಂತ ನಮ್ಮಲ್ಲಿರುವ ಸಮರ್ಪಣಾ ಭಾವವು ದೇವರನ್ನು ತಲುಪಲು ಸುಲಭವಾದ ದಾರಿ. ಕೆವಟನಂತೆ ನಾವು ನಮ್ಮ ಅಹಂಕಾರವನ್ನು ಪಕ್ಕಕ್ಕಿಟ್ಟು ದೈವದ ಪಾದಕ್ಕೆ ಶರಣಾದರೆ, ಆ ಭಗವಂತನೇ ನಮ್ಮ ದೋಣಿಯ ಚುಕ್ಕಾಣಿ ಹಿಡಿಯುತ್ತಾನೆ.