ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಅಮೆರಿಕ ಅಧ್ಯಕ್ಷನ ಮಾತನ್ನು ವಿಶ್ವವೇ ಕೇಳುತ್ತಿತ್ತು, ಈಗ ಕಿವಿ ಮುಚ್ಚಿಕೊಳ್ಳುತ್ತದೆ !

ಅಧಿಕಾರದಲ್ಲಿದ್ದಾಗಲೂ ಮಹಿಳಾ ಸಂಸದರು ಅಥವಾ ಪತ್ರಕರ್ತೆಯರ ಬಗ್ಗೆ ಅವರು ಹೀಯಾಳಿಸುವ ರೀತಿ ಯಾವುದೇ ನಾಗರಿಕ ಸಮಾಜಕ್ಕೆ ಮುಜುಗರ ತರುವಂತಿರುತ್ತದೆ. ಎದುರಾಳಿಗಳ ರಾಜಕೀಯ ನಿಲುವುಗಳನ್ನು ವಿರೋಧಿಸುವ ಬದಲು, ಅವರ ದೈಹಿಕ ಸ್ವರೂಪ ಅಥವಾ ವಯಸ್ಸನ್ನು ಗೇಲಿ ಮಾಡುವುದು ಮಾತಿನ ವರಸೆ ಎಂದು ಅವರು ಭಾವಿಸಿದಂತಿದೆ.

ಅಮೆರಿಕ ಅಧ್ಯಕ್ಷನ ಮಾತನ್ನು ವಿಶ್ವವೇ ಕೇಳುತ್ತಿತ್ತು, ಈಗ..

-

ನೂರೆಂಟು ವಿಶ್ವ

ಮೊನ್ನೆ ಅಮೆರಿಕದ ಟಾಕ್ ಶೋದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಯಿ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತಿತ್ತು. ಒಬ್ಬೊಬ್ಬರು ಒಂದು ರೀತಿಯಲ್ಲಿ ಅವರ ಬಾಯಿ (ಮಾತು)‌ ಯನ್ನು ಬಣ್ಣಿಸುತ್ತಿದ್ದರು. ಕೆಲವರು ಅದನ್ನು ‘ನಿಯಂತ್ರಣವಿಲ್ಲದ ಅಪಾಯಕಾರಿ ಅಂಗ’ ಅಂದರೆ, ಇನ್ನೊಬ್ಬರು ಯಾವ ಕ್ಷಣ ಬೇಕಾದರೂ ಸಿಡಿಯುವ ‘ಲೂಸ್ ಕ್ಯಾನನ್’ ಎಂದು ಹೇಳಿದರು.

ಮತ್ತೊಬ್ಬರು ಅದೊಂದು ’ಕಸದ ತೊಟ್ಟಿ’ ಎಂದು ಜರೆದರು. ಟ್ರಂಪ್ ಬಾಯಿ ಅಂದ್ರೆ ಚರಂಡಿ, ಮೋರಿ, ಟಾಯ್ಲೆಟ್ ಎಂಬ ಮಾತುಗಳೂ ಕೇಳಿ ಬಂದವು. ಯಾವುದೇ ವೇದಿಕೆಯಲ್ಲಿ ಯಾರ ಬಗ್ಗೆಯಾದರೂ ಕೆಟ್ಟ, ಅಶ್ಲೀಲ ಪದಪ್ರಯೋಗ ಮಾಡುವುದನ್ನು ಕಲೆಗಾರಿಕೆಯಾಗಿ ಟ್ರಂಪ್ ರೂಢಿಸಿ ಕೊಂಡಿದ್ದಾರೆ, ಅವರು ಸಭ್ಯತೆಯ ಮಟ್ಟದಲ್ಲಿ ಪಾತಾಳಕ್ಕಿಂತ ಕೆಳಕ್ಕೆ ಜಾರಿದ್ದಾರೆ, ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಮಾತಾಡುವಾಗ ಕನಿಷ್ಠ ‘ಸೌಜನ್ಯ’ ಮತ್ತು ‘ಗಾಂಭೀರ್ಯ’ ಕಾಪಾಡಿಕೊಳ್ಳ ಬೇಕು ಎಂಬುದನ್ನು ಅವರು ಮರೆತಿದ್ದಾರೆಂದು ಎಲ್ಲರೂ ಅಭಿಪ್ರಾಯಪಟ್ಟರು.

ಟ್ರಂಪ್ ಅವರು ಮಹಿಳೆಯರ ಬಗ್ಗೆ ಮಾತಾಡುವಾಗ ಬಳಸುವ ಭಾಷೆ ಅತ್ಯಂತ ಕೀಳುಮಟ್ಟ ದ್ದಾಗಿರುತ್ತದೆ. ಚುನಾವಣಾ ಸಮಯದಲ್ಲಿ ಹೊರಬಂದ ಅವರ ಹಳೆಯ ವಿಡಿಯೋಗಳಲ್ಲಿ ಮಹಿಳೆಯರ ದೈಹಿಕ ಅಂಗಾಂಗಗಳ ಬಗ್ಗೆ ಅವರು ಬಳಸಿದ ಅಸಭ್ಯ ಪದಗಳು ಜಗತ್ತನ್ನೇ ಬೆಚ್ಚಿ ಬೀಳಿಸಿದ್ದವು.

ಅಧಿಕಾರದಲ್ಲಿದ್ದಾಗಲೂ ಮಹಿಳಾ ಸಂಸದರು ಅಥವಾ ಪತ್ರಕರ್ತೆಯರ ಬಗ್ಗೆ ಅವರು ಹೀಯಾ ಳಿಸುವ ರೀತಿ ಯಾವುದೇ ನಾಗರಿಕ ಸಮಾಜಕ್ಕೆ ಮುಜುಗರ ತರುವಂತಿರುತ್ತದೆ. ಎದುರಾಳಿಗಳ ರಾಜಕೀಯ ನಿಲುವುಗಳನ್ನು ವಿರೋಧಿಸುವ ಬದಲು, ಅವರ ದೈಹಿಕ ಸ್ವರೂಪ ಅಥವಾ ವಯಸ್ಸನ್ನು ಗೇಲಿ ಮಾಡುವುದು ಮಾತಿನ ವರಸೆ ಎಂದು ಅವರು ಭಾವಿಸಿದಂತಿದೆ.

ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !

ಉದಾಹರಣೆಗೆ, ಎದುರಾಳಿಗಳ ಮುಖದ ಲಕ್ಷಣಗಳ ಬಗ್ಗೆ ಹಾಸ್ಯ ಮಾಡುವುದು, ವಿಕಲಚೇತನ ಪತ್ರಕರ್ತರೊಬ್ಬರ ದೈಹಿಕ ಚಲನೆಯನ್ನು ವೇದಿಕೆಯ ಮೇಲೆ ಅಣಕಿಸಿದ್ದು, ಬೇರೆ ದೇಶಗಳ ನಾಯಕರನ್ನು ‘ಕುಳ್ಳ’ (Little Rocket Man - ಕಿಮ್ ಜೊಂಗ್ ಉನ್ ಬಗ್ಗೆ) ಎಂದು ಕರೆಯು ವುದು ಅಥವಾ ಸ್ನೇಹಿ ರಾಷ್ಟ್ರಗಳ ಮುಖ್ಯಸ್ಥರನ್ನು ಏಕವಚನದಲ್ಲಿ ಅಥವಾ ಅವಹೇಳನಕಾರಿಯಾಗಿ ಸಂಬೋಧಿಸುವುದು ಅವರ ಅತಿರೇಕದ ವರ್ತನೆಗೆ ಸಾಕ್ಷಿ.

ಇದು ಇಡೀ ಜಗತ್ತು ಅವರನ್ನು ಅತ್ಯಂತ ತಾತ್ಸರ, ಹೇವರಿಕೆಯಿಂದ ನೋಡುವಂತೆ ಮಾಡಿದೆ. ತಮ್ಮನ್ನು ಟೀಕಿಸುವ ಪತ್ರಿಕೆಗಳ ವರದಿಗಾರರನ್ನು ಫೇಕ್ ರಿಪೋರ್ಟರ್, ಫೇಕ್ ನ್ಯೂಸ್ , ನಾಚಿಕೆ ಇಲ್ಲದವನು ಎಂದು ಹೀಯಾಳಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಕೊನೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೇಳಿದ್ದೇನೆಂದರೆ - ‘ಟ್ರಂಪ್ ಏನು ಬೇಕಾದರೂ ಮಾತಾಡಬಹುದು. ಕನಸು-ಮನಸಿನಲ್ಲಿಯೂ ನೀವು ನಿರೀಕ್ಷಿಸದ ಪದ ಅಥವಾ ಮಾತು ಅವರ ಬಾಯಿಂದ ಹೊರಬರಬಹುದು. ಅವರು ಏನೇ ಹೇಳಿದರೂ ಅಚ್ಚರಿಪಡಬೇಕಿಲ್ಲ. ನಿಮ್ಮ ನಿರೀಕ್ಷೆ ಯನ್ನು ಸುಳ್ಳು ಮಾಡಿ, ಟ್ರಂಪ್ ಮಾತಾಡುತ್ತಾರೆ.

ನೀವು ಅಂದುಕೊಂಡಿದ್ದಕ್ಕಿಂತ, ನಿಮ್ಮ ಕಣ್ಣಲ್ಲಿ ಪಾತಾಳಕ್ಕಿಂತ ಕೆಳಗಿಳಿಯುವ ಸಾಮರ್ಥ್ಯ ಅವರಿಗಿದೆ. ಟ್ರಂಪ್ ಅವರ ಬಾಯಲ್ಲಿ ಒಳ್ಳೆಯ ಮಾತುಗಳನ್ನು ನಿರೀಕ್ಷಿಸುವುದು ಮೂರ್ಖತನ ವಾದೀತು.’

‘ಅಮೆರಿಕದಲ್ಲಿ ದಾನ ಮಾಡುವ, ತಮ್ಮ ಕುಟುಂಬಗಳನ್ನು ಪ್ರೀತಿಸುವ, ಹೆಂಡತಿಯರಿಗೆ ಮೋಸ ಮಾಡದ, ಕೆಂಪು ದೀಪಗಳ ಮುಂದೆ ಸಿಗ್ನಲ್ ಜಂಪ್ ಮಾಡದ, ಇತರರ ನಂಬಿಕೆಗಳನ್ನು ಗೌರವಿಸುವ ಮತ್ತು ಮಕ್ಕಳಿಗೆ ಓದಿ ಹೇಳುವ ಒಳ್ಳೆಯ ಜನರಿದ್ದಾರೆ - ಈ ದಿನಗಳಲ್ಲಿ ಅಧ್ಯಕ್ಷರ ಮಾತುಗಳನ್ನು ಓದಿದರೆ ಅವರು ತೀವ್ರ ಮುಜುಗರಕ್ಕೊಳಗಾಗುತ್ತಾರೆ, ಅದರಲ್ಲೂ ತಮ್ಮ ಮಕ್ಕಳು ಸುತ್ತಮುತ್ತ ಇದ್ದರೆ ಇನ್ನೂ ಹೆಚ್ಚು’ ಎಂದು ಇತ್ತೀಚೆಗೆ ಪತ್ರಕರ್ತ ಆರ್.ಪ್ರಸನ್ನನ್ ಬರೆದಿದ್ದರು.

donad T

ಅಮೆರಿಕದಲ್ಲಿ ಮನೆ-ಮಂದಿಯೆಲ್ಲ ಒಂದೆಡೆ ಕುಳಿತು ಟಿವಿ ನೋಡುವಾಗ ಹಠಾತ್ ಟ್ರಂಪ್ ಅವರನ್ನು ಕಂಡರೆ ಚಾನೆಲ್ ಬದಲಿಸುತ್ತಾರಂತೆ, ಇಲ್ಲವೇ ಟಿವಿ ಆಫ್ ಮಾಡುತ್ತಾರಂತೆ. ಮಕ್ಕಳ ಜತೆ ಇರುವಾಗ ಅವರ ಮಾತುಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದರು. ‌

ಇರಾನ್ ಯುದ್ಧದ ಸಂದರ್ಭದಲ್ಲಿ ಟ್ರಂಪ್ ಇಡೀ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗಿರುವುದು ಸುಳ್ಳಲ್ಲ. ಮೊನ್ನೆ ಈಸ್ಟರ್ ಭಾನುವಾರ ಏನಾಯಿತು ಗೊತ್ತಾ? ‘ಅಮೆರಿಕದ ಆ ಒಳ್ಳೆಯ ಜನ’ರು ಬೆಳಗಿನ ಪ್ರಾರ್ಥನೆಗೆ ಚರ್ಚ್‌ʼಗೆ ಹೋಗುತ್ತಿದ್ದಾಗ, ಅಧ್ಯಕ್ಷರು ಮಾತಾಡುತ್ತಿರುವುದು ಟಿವಿಯಲ್ಲಿ ಪ್ರಸಾರವಾಗುತ್ತಿತ್ತು.

ಇರಾನಿನ ಅಯತೊಗಳನ್ನು ಉದ್ದೇಶಿಸಿ, You crazy bastards.. Open the fucking Hormuz Straits.. Or else praise be to Allah ಎಂದು ಟ್ರಂಪ್ ಅಬ್ಬರಿಸುತ್ತಿದ್ದರು. ಚರ್ಚಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದವರೆಲ್ಲ ಆ ಮಾತುಗಳನ್ನು ಕೇಳಿ ಕಿವಿ ಮುಚ್ಚಿಕೊಂಡರು.

ಇದನ್ನು ಕೇಳಿದ ಟಿವಿ ನಿರೂಪಕಿ, If children are watching, be warned. The President didnot use polite language ಎಂದು ಹೇಳಿದಳಂತೆ. ಜಗತ್ತಿನಾದ್ಯಂತ ಸಭ್ಯ ನಾಗರಿಕ ನಡವಳಿಕೆಗಳನ್ನು ಇಷ್ಟಪಡುವವರು, ‘ಟ್ರಂಪ್ ಮಾತಾಡುತ್ತಿದ್ದಾರೆ, ದಯವಿಟ್ಟು ಕಿವಿ ಮುಚ್ಚಿಕೊಳ್ಳಿ’ ಎಂದು ಹೇಳುವುದು ಸಾಮಾನ್ಯವಾಗಿದೆಯಂತೆ.

ಇಂದು ಪಾಶ್ಚಿಮಾತ್ಯ ಜಗತ್ತಿನ ಅತ್ಯಂತ ಹೇಸಿಗೆಯ ಮತ್ತು ಅಸಹ್ಯಕರವೆನಿಸುವ ಎಲ್ಲವುಗಳ ಸಾರಾಂಶವಾಗಿ ಡೊನಾಲ್ಡ್‌ ಟ್ರಂಪ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಮಹಾಪ್ರಾಮಾಣಿಕನಂತೆ ಪ್ರಮಾಣ ಮಾಡುತ್ತಾರೆ, ಆದರೆ ಮಾತು ಮಾತಿಗೆ ಸುಳ್ಳು ಹೇಳುತ್ತಾರೆ, ಅಸಹ್ಯ ಹುಟ್ಟಿಸುವಷ್ಟು ತನ್ನನ್ನೇ ಹೊಗಳಿಕೊಳ್ಳುತ್ತಾರೆ, ಕಾನೂನುಗಳನ್ನು ಮನಸೋ ಇಚ್ಛೆ ಮುರಿಯುತ್ತಾರೆ, ವೇಶ್ಯೆ ಯರೊಂದಿಗೆ ಮಲಗುತ್ತಾರೆ, ಬೇರೆ ದೇಶಗಳ ಮುಖ್ಯಸ್ಥರ ವಿರುದ್ಧ ಅಶ್ಲೀಲವಾಗಿ ಮಾತನಾಡುತ್ತಾರೆ ಮತ್ತು ಸಭ್ಯ ಜನರು ‘ಛೀ’ ಎನ್ನುವ ಎಲ್ಲವನ್ನೂ ಮಾಡುತ್ತಾರೆ.

ಅವರು ಕೇವಲ ನೀತಿಗಳ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ವ್ಯಕ್ತಿಗಳ ರೂಪ, ಬಣ್ಣ, ಬುದ್ಧಿ ವಂತಿಕೆ ಅಥವಾ ಅವರ ದೈಹಿಕ ವ್ಯತ್ಯಾಸಗಳ ಬಗ್ಗೆ ಹೀಯಾಳಿಸುತ್ತಾರೆ. ಮಹಿಳಾ ಪತ್ರಕರ್ತರನ್ನು ಅಥವಾ ರಾಜಕಾರಣಿಗಳನ್ನು ‘ಕಡಿಮೆ ಐಕ್ಯೂ ಇರುವವರು’, ‘ಹಂದಿ’ ಎಂದು ಕರೆದ ಉದಾಹರಣೆ ಗಳಿವೆ.

ತಮ್ಮ ಎದುರಾಳಿಗಳಿಗೆ ‘ಸ್ಲೀಪಿ ಜೋ’, ’ಕ್ರೂಕ್ಡ್ ಹಿಲರಿ’ ಎಂಬ ಅಡ್ಡ ಹೆಸರುಗಳನ್ನು ಇಟ್ಟು ಗೇಲಿ ಮಾಡುತ್ತಾರೆ. ಟ್ರಂಪ್ ಎಂದೂ, ಯಾವುದನ್ನೂ ಯೋಚಿಸಿ ಮಾತನಾಡುವುದಿಲ್ಲ. ಅವರ ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹಲಬುತ್ತಾರೆ. ಅವರ ಭಾಷಣದಲ್ಲಿ, ಶಿಟ್, ಫಕ್, ಹೆಲ್... ಪದಗಳು ಸಾಮಾನ್ಯ. ಯಾರು ತಮ್ಮನ್ನು ಒಪ್ಪುವುದಿಲ್ಲವೋ ಅವರು ‘ದೇಶದ್ರೋಹಿ’ಗಳು ಅಥವಾ ‘ಕಸ’ ( Garbage) ಎಂಬಂತೆ ಬಿಂಬಿಸುವುದು ಅವರ ಶೈಲಿ. ರಾಜತಾಂತ್ರಿಕ ಭಾಷೆಯನ್ನು ಬೀದಿಜಗಳದ ಮಟ್ಟಕ್ಕೆ ಇಳಿಸಿರುವುದು ಅವರ ಅಗ್ಗಳಿಕೆ.

ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲಿ ‘Reading Presidential Lips ’ ಎಂಬ ಮಾತಿದೆ. ಅಂದರೆ ಅಧ್ಯಕ್ಷರ ತುಟಿಗಳ ಚಲನೆಯನ್ನು ಓದುವುದು. ಇದು ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಅಷ್ಟೇ ವಿವಾದಾತ್ಮಕವಾದ ಒಂದು ನುಡಿಗಟ್ಟು. ಈ ಪರಿಕಲ್ಪನೆಯು ಕೇವಲ ದೈಹಿಕ ಕ್ರಿಯೆಯಲ್ಲ. ಅಧ್ಯಕ್ಷರು ಅಥವಾ ಪ್ರಭಾವಿ ನಾಯಕರು ಸಾರ್ವಜನಿಕವಾಗಿ ಆಡುವ ಮಾತುಗಳ ಹಿಂದೆ ಇರುವ ಗುಪ್ತ ಅರ್ಥ ಅಥವಾ ಅವರು ಹೇಳದೇ ಬಿಟ್ಟ ವಿಷಯಗಳನ್ನು ಅರ್ಥೈಸಿ ಕೊಳ್ಳುವುದನ್ನು ಇದು ಸೂಚಿಸುತ್ತದೆ.

ಪತ್ರಕರ್ತರು ಮತ್ತು ರಾಜಕೀಯ ಪಂಡಿತರು ಅಧ್ಯಕ್ಷರ ಪ್ರತಿಯೊಂದು ಮಾತು, ಹಾವಭಾವ ಮತ್ತು ಶಬ್ದಗಳ ಬಳಕೆಯನ್ನು ಸೂಕ್ಷ್ಮವಾಗಿ ಗಮನಿಸುವುದಕ್ಕೆ Reading Presidential Lips ಅಂತಾರೆ. ಅಧ್ಯಕ್ಷರಾದವರು ಎಲ್ಲವನ್ನೂ ಹೇಳಬೇಕಿಲ್ಲ. ಅವರ ಹಾವಭಾವದಿಂದ ಕೆಲವನ್ನು ಅರ್ಥ ಮಾಡಿ ಕೊಳ್ಳಬೇಕು, ಅವರ ಮಾತುಗಳನ್ನು ಕೇಳಿಸಿಕೊಳ್ಳದಿದ್ದರೂ, ಅವರ ತುಟಿಗಳ ಚಲನೆಯಿಂದ ಅವರೇನು ಹೇಳಿದ್ದಾರೆಂದು ಅರ್ಥೈಸಿಕೊಳ್ಳಬೇಕು ಎಂಬುದು ಈ ನುಡಿಗಟ್ಟಿನ ತಾತ್ಪರ್ಯ.

1988ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಜಾರ್ಜ್ ಹೆಚ್.ಡಬ್ಲ್ಯೂ.ಬುಷ್ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದರು. ಅಂದು ಅವರು,’Read my lips: no new taxes’ (ನನ್ನ ತುಟಿಗಳನ್ನು ಓದಿ: ಯಾವುದೇ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ) ಎಂದು ಹೇಳಿದರು.

ಅಂದಿನ ಮತದಾರರಿಗೆ ತೆರಿಗೆ ಏರಿಕೆಯ ಭಯವಿತ್ತು. ಬುಷ್ ಅತ್ಯಂತ ಆತ್ಮವಿಶ್ವಾಸದಿಂದ, ಜನರ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ಈ ಮಾತನ್ನು ಜನ ನಂಬಿದರು.

ಈ ‘ನುಡಿಗಟ್ಟಿನ’ ಜನಪ್ರಿಯತೆ ಎಷ್ಟಿತ್ತೆಂದರೆ, ಅದು ಬುಷ್ ಅವರನ್ನು ಶ್ವೇತಭವನದ ಗದ್ದುಗೆಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಧಿಕಾರಕ್ಕೆ ಬಂದ ನಂತರ ಬುಷ್ ಅವರಿಗೆ ವಾಸ್ತವದ ಅರಿವಾಯಿತು. ಅಮೆರಿಕದ ಬಜೆಟ್ ಕೊರತೆ ವಿಪರೀತವಾಗಿತ್ತು. ಅಂದಿನ ಕಾಂಗ್ರೆಸ್‌ನಲ್ಲಿ (ಸಂಸತ್ತು) ಡೆಮೊಕ್ರಾಟ್ ಪಕ್ಷದವರ ಬಹುಮತವಿತ್ತು. ಬಜೆಟ್ ಅಂಗೀಕಾರವಾಗಬೇಕಾದರೆ ಡೆಮೊಕ್ರಾಟ್ ನಾಯಕರೊಂದಿಗೆ ರಾಜಿ ಮಾಡಿಕೊಳ್ಳುವುದು ಬುಷ್ ಅವರಿಗೆ ಅನಿವಾರ್ಯವಾಯಿತು.

1990ರಲ್ಲಿ ದೇಶದ ಆರ್ಥಿಕತೆಯನ್ನು ಉಳಿಸಲು ಮತ್ತು ಸರಕಾರಿ ಸೇವೆಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಬುಷ್ ತೆರಿಗೆ ಹೆಚ್ಚಳದ ಮಸೂದೆಗೆ ಸಹಿ ಹಾಕಬೇಕಾಯಿತು. ತಾವು ನೀಡಿದ ’ No new taxes ’ ಎಂಬ ಭರವಸೆಯನ್ನು ಅವರೇ ಮುರಿದರು. ಇದು ರಾಜಕೀಯವಾಗಿ ಅವರು ಮಾಡಿದ ಅತಿ ದೊಡ್ಡ ತಪ್ಪು ಎಂದು ಇಂದಿಗೂ ವಿಶ್ಲೇಷಿಸಲಾಗುತ್ತದೆ.

ಒಮ್ಮೆ ಒಬ್ಬ ನಾಯಕ ‘ನನ್ನ ತುಟಿಗಳನ್ನು ಓದಿ’ ಎಂದು ಹೇಳಿದಾಗ, ಜನರು ಅವರ ಪ್ರತಿ ನಡೆ ಯನ್ನೂ ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದರು. ಬುಷ್ ತೆರಿಗೆ ಹೆಚ್ಚಿಸಿದಾಗ, ಪ್ರತಿಪಕ್ಷದವರು ಮತ್ತು ಮಾಧ್ಯಮಗಳು ಅದೇ ’ Read my lips ’ ವಿಡಿಯೋವನ್ನು ಪದೇ ಪದೆ ಪ್ರಸಾರ ಮಾಡಿ ಅವರನ್ನು ವ್ಯಂಗ್ಯವಾಡಿದವು. ಇಲ್ಲಿ ‘ತುಟಿಗಳನ್ನು ಓದುವುದು’ ಎಂದರೆ ಕೇವಲ ಶಬ್ದಗಳನ್ನು ಅರ್ಥೈಸಿಕೊಳ್ಳುವುದಲ್ಲ, ಬದಲಿಗೆ ನಾಯಕನ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದು ಎಂದರ್ಥ.

ಬುಷ್ ಅವರ ವಿಷಯದಲ್ಲಿ, ಜನರು ಅವರ ತುಟಿಗಳನ್ನು ಓದಿದ್ದರು. ಆದರೆ ಆ ತುಟಿಗಳು ಸುಳ್ಳು ಹೇಳಿದ್ದವು ಎಂಬ ಭಾವನೆ ಜನರಲ್ಲಿ ಮನೆ ಮಾಡಿತು. ಇದು ಅವರ ‘ವಿಶ್ವಾಸಾರ್ಹತೆ’ಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿತು. 1992ರ ಚುನಾವಣೆಯಲ್ಲಿ ಬುಷ್ ಎರಡನೇ ಬಾರಿಗೆ ಸ್ಪರ್ಧಿಸಿದಾಗ, ಅವರ ಈ ಹಳೆಯ ಭರವಸೆ ಅವರ ಪಾಲಿಗೆ ಶಾಪವಾಗಿ ಪರಿಣಮಿಸಿತು.

ಅವರ ಎದುರಾಳಿ ಬಿಲ್ ಕ್ಲಿಂಟನ್ ಅವರು ಬುಷ್ ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಈ ವಾಕ್ಯವನ್ನೇ ಅಸ್ತ್ರವಾಗಿ ಬಳಸಿಕೊಂಡರು. ‘ತೆರಿಗೆ ಹಾಕುವುದಿಲ್ಲ ಎಂದು ತುಟಿ ಓದಿ ಎಂದವರು ಈಗ ಏನು ಹೇಳುತ್ತಾರೆ?’ ಎಂಬ ಪ್ರಶ್ನೆಯನ್ನು ಮತದಾರರ ಮುಂದಿಟ್ಟರು. ಅಂತಿಮವಾಗಿ, ಈ ಒಂದು ಭರವಸೆಯ ಉಲ್ಲಂಘನೆಯು ಬುಷ್ ಸೋಲಿಗೆ ಪ್ರಮುಖ ಕಾರಣವಾಯಿತು.

ಆಧುನಿಕ ಯುಗದಲ್ಲಿ ’Presidential lip reading’ ಎಂಬುದು ತಂತ್ರಜ್ಞಾನದ ಮೂಲಕವೂ ಬೆಳೆದಿದೆ. ಶ್ವೇತಭವನದ ಹುಲ್ಲು ಹಾಸಿನ ಮೇಲೆ ಅಥವಾ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಧ್ಯಕ್ಷರು ತಮ್ಮ ಸಹೋದ್ಯೋಗಿಗಳೊಂದಿಗೆ ಪಿಸುಮಾತಿನಲ್ಲಿ ಆಡುವ ಮಾತುಗಳನ್ನು ‘ಲಿಪ್ ರೀಡರ್ಸ್’ ವಿಶ್ಲೇಷಿಸುತ್ತಾರೆ.

ಮೈಕ್ರೋಫೋನ್ ಆಫ್ ಆಗಿದ್ದಾಗಲೂ ಅಧ್ಯಕ್ಷರು ಏನು ಮಾತನಾಡುತ್ತಿರಬಹುದು ಎಂದು ತಿಳಿಯಲು ಜಗತ್ತು ಕುತೂಹಲದಿಂದ ಇರುತ್ತದೆ. ಇದು ಕೇವಲ ಕುತೂಹಲವಲ್ಲ, ಬದಲಿಗೆ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಅಧ್ಯಕ್ಷರ ನಿಜವಾದ ನಿಲುವು ಏನು ಎಂಬುದನ್ನು ಪತ್ತೆಹಚ್ಚುವ ಒಂದು ಮಾರ್ಗವೂ ಹೌದು.

ಕೆಮರಾ ಮುಂದೆ ಒಂದು ಮಾತನಾಡಿ, ನಂತರ ಬೇರೆಯದೇ ನಿರ್ಧಾರ ತೆಗೆದುಕೊಳ್ಳುವ ನಾಯಕರ ಮಾತುಗಳನ್ನು ಹಿಡಿಯಲು ಈ ಕಲೆ ಬಳಕೆಯಾಗುತ್ತದೆ. ಆದರೆ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ Presidential lip reading ನುಡಿಗಟ್ಟು ಅರ್ಥ ಕಳೆದುಕೊಂಡಿದೆ. ಕಾರಣ ಟ್ರಂಪ್ ಜಗತ್ತಿಗೆ ಕೇಳುವಂತೆ ಅಬ್ಬರಿಸುತ್ತಿದ್ದಾರೆ, ಅಸಹ್ಯವಾಗಿ ಕಿರುಚುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರ ಸುತ್ತ ಆವರಿಸಿದ್ದ ಶಿಷ್ಟಾಚಾರ, ಸಭ್ಯತೆಗೆ ಎಳ್ಳು-ನೀರು ಬಿಡುತ್ತಿದ್ದಾರೆ. ರಿಚರ್ಡ್ ನಿಕ್ಸನ್ ಅಮೆರಿಕದ ಅಧ್ಯಕ್ಷರಾಗಿದ್ದ ಕಾಲದಲ್ಲಿ (1969-1974) ನಡೆಸಿದ ಖಾಸಗಿ ಸಂಭಾಷಣೆಗಳು, ನಂತರದ ದಿನಗಳಲ್ಲಿ ‘ನಿಕ್ಸನ್ ಟೇಪ್ಸ್ ’ ಮೂಲಕ ಬಹಿರಂಗಗೊಂಡು ಜಗತ್ತನ್ನೇ ಬೆಚ್ಚಿಬೀಳಿಸಿದ ಘಟನೆ ನೆನಪಿರಬಹುದು.

ಒಬ್ಬ ರಾಷ್ಟ್ರದ ನಾಯಕ ಇತರ ದೇಶದ ನಾಯಕರ ಬಗ್ಗೆ ಮತ್ತು ವಿವಿಧ ಸಮುದಾಯಗಳ ಬಗ್ಗೆ ಎಂಥ ಕೀಳುಮಟ್ಟದ ಆಲೋಚನೆ ಹೊಂದಿರಬಹುದು ಎಂಬುದಕ್ಕೆ ಇದು ಸಾಕ್ಷಿ. 1971ರ ಬಾಂಗ್ಲಾ ದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಅತ್ಯಂತ ಕಹಿಯಾಗಿತ್ತು.

ಭಾರತವು ಸೋವಿಯತ್ ಒಕ್ಕೂಟದೊಂದಿಗೆ ಕೈಜೋಡಿಸುತ್ತಿದೆ ಎಂಬುದು ನಿಕ್ಸನ್ ಕೋಪಕ್ಕೆ ಕಾರಣವಾಗಿತ್ತು. ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಜತೆ ಮಾತನಾಡುತ್ತಾ ನಿಕ್ಸನ್, ಇಂದಿರಾ ಗಾಂಧಿಯವರನ್ನು ಅತ್ಯಂತ ಅಸಭ್ಯವಾಗಿ ‘ಬಿಚ್’ ಎಂದು ಕರೆದಿದ್ದರು.

ಭಾರತೀಯರನ್ನು ‘ನಾಲಾಯಕ್ ಜನ’ ಮತ್ತು ‘ಕಪಟಿಗಳು’ ಎಂದು ಜರೆದಿದ್ದರು. ಕಿಸ್ಸಿಂಜರ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯರನ್ನು ‘ಬಾಸ್ಟರ್ಡ್ಸ್ ’ ಎಂದು ಕರೆದಿದ್ದರು. ಈ ಸಂಭಾ ಷಣೆಗಳು ಹೊರಬಂದಾಗ ಅಮೆರಿಕದ ರಾಜತಾಂತ್ರಿಕ ಇತಿಹಾಸದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿತ್ತು. ಇಂದಿರಾ ಗಾಂಧಿಯವರು ಅತ್ಯಂತ ಪ್ರಬಲ ನಾಯಕಿಯಾಗಿ ಹೊರ ಹೊಮ್ಮಿದ್ದನ್ನು ಸಹಿಸಲಾಗದ ನಿಕ್ಸನ್, ತಮ್ಮ ಅಸಹಾಯಕತೆಯನ್ನು ಇಂಥ ಕೀಳುಮಟ್ಟದ ಪದಗಳ ಮೂಲಕ ಹೊರಹಾಕಿದ್ದರು.

ಅನೇಕರಿಗೆ ಅಮೆರಿಕ ಅಧ್ಯಕ್ಷರ ಬಗ್ಗೆ ಭಾರಿ ಭ್ರಮೆ ಇದೆ. ಅವರು ಮಹಾ ಸುಸಂಸ್ಕೃತರು, ಸುಬುಗರು, ಸಭ್ಯರು, ಸುಶೀಲವಂತರು, ಸಂಭಾವಿತರು ಎಂಬ ಭಾವನೆಯಿದೆ. ಅಮೆರಿಕದ ಅಧ್ಯಕ್ಷರು ಮುಂದೆ ಮಾತಾಡುವುದೇ ಒಂದು, ಹಿಂದೆ ನಡೆದುಕೊಳ್ಳುವುದು ಇನ್ನೊಂದು ಎಂಬುದು ರಾಜತಾಂತ್ರಿಕ ವಲಯದಲ್ಲಿ ರಹಸ್ಯವೇನಲ್ಲ.

ಹಿಂದಿನ ಅಮೆರಿಕದ ಅಧ್ಯಕ್ಷರು ವೈಯಕ್ತಿಕ ಜೀವನದಲ್ಲಿ ಎಷ್ಟೇ ಅಸಭ್ಯವಾಗಿ ನಡೆದುಕೊಂಡಿ ದ್ದರೂ, ಸಾರ್ವಜನಿಕವಾಗಿ ಮಾತ್ರ ಅತ್ಯಂತ ಸುಸಂಸ್ಕೃತವಾಗಿ ಮಾತನಾಡುತ್ತಿದ್ದರು. ವೈಯಕ್ತಿಕ ಜೀವನದಲ್ಲಿ ಎಷ್ಟೇ ಲೋಪದೋಷಗಳಿದ್ದರೂ, ಜನರ ಮುಂದೆ ಮಾತನಾಡುವಾಗ ಒಂದು ರೀತಿಯ ಘನತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಈ ವಿಷಯದಲ್ಲಿ ಎಲ್ಲ ಸಭ್ಯತೆಯನ್ನು ಗಾಳಿಗೆ ತೂರುವುದರಲ್ಲಿ ಟ್ರಂಪ್ ಗೆ ಪೈಪೋಟಿ ನೀಡುವ ಇನ್ನೊಬ್ಬ (ಅಧ್ಯಕ್ಷ)ರೆಂದರೆ ದಿವಂಗತ ಲಿಂಡನ್ ಬಿ. ಜಾನ್ಸನ್. ಅವರು ಸಹ ತಮ್ಮ ಅತಿರೇಕದ ನಡೆವಳಿಕೆಗೆ ಹೆಸರಾಗಿದ್ದರು.

ಒಮ್ಮೆ ಲಿಂಡನ್ ಜಾನ್ಸನ್ ಪತ್ರಕರ್ತರೊಂದಿಗೆ ಖಾಸಗಿ ಸಂಭಾಷಣೆಯಲ್ಲಿ ನಿರತರಾಗಿದ್ದಾಗ, ಪತ್ರಕರ್ತನೊಬ್ಬ ‘ವಿಯೆಟ್ನಾಂನಲ್ಲಿ ಸಾವಿರಾರು ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಳ್ಳು ತ್ತಿದ್ದಾರೆ. ಅಷ್ಟಕ್ಕೂ ಅಮೆರಿಕ ಯಾಕಾಗಿ ಅಲ್ಲಿ ಯುದ್ಧದಲ್ಲಿ ತೊಡಗಿಸಿಕೊಂಡಿದೆ?’ ಎಂದು ಪ್ರಶ್ನಿಸಿದ.

ವಿಯೆಟ್ನಾಂನಲ್ಲಿ ಅಮೆರಿಕದ ಹಸ್ತಕ್ಷೇಪದ ಹಿಂದಿರುವ ಭೌಗೋಳಿಕ ಅಥವಾ ರಾಜಕೀಯ ಕಾರಣ ಗಳನ್ನು ತಿಳಿದುಕೊಳ್ಳುವುದು ಆ ಪತ್ರಕರ್ತನ ಆಶಯವಾಗಿತ್ತು. ಆರು ಅಡಿ ನಾಲ್ಕು ಇಂಚು ಎತ್ತರ ವಿದ್ದ ಜಾನ್ಸನ್, ಆ ಪ್ರಶ್ನೆಗೆ ತರ್ಕಬದ್ಧ ಉತ್ತರ ನೀಡುವ ಬದಲು, ಎಲ್ಲರೆದುರೇ ತಮ್ಮ ಪ್ಯಾಂಟ್‌ನ ಜಿಪ್ ತೆಗೆದು, ತಮ್ಮ ಗುಪ್ತಾಂಗವನ್ನು (ಅದನ್ನು ಅವರು ಪ್ರೀತಿಯಿಂದ ‘ಜಂಬೋ’ ಎಂದು ಕರೆಯುತ್ತಿದ್ದರು) ಹೊರತೆಗೆದು ತೋರಿಸಿ, ‘ಇದಕ್ಕಾಗಿಯೇ ನಾವು ಅಲ್ಲಿದ್ದೇವೆ! (This is why!)’ ಎಂದು ಉದ್ಧಟತನದಿಂದ ಹೇಳಿ ಬಿಟ್ಟರು!

ಅಧ್ಯಕ್ಷರ ಈ ವರ್ತನೆ ಕಂಡು ಪತ್ರಕರ್ತರು ಹೌಹಾರಿ ಹೋದರು. ಅಮೆರಿಕದ ಶಕ್ತಿ ಮತ್ತು ಪುರುಷತ್ವವನ್ನು ಪ್ರದರ್ಶಿಸುವುದೇ ಈ ಯುದ್ಧದ ಹಿಂದಿನ ಉದ್ದೇಶ ಎಂಬರ್ಥದಲ್ಲಿ ಅವರು ಆ ರೀತಿ ನಡೆದುಕೊಂಡಿದ್ದರು. ಸಾರ್ವಜನಿಕ ಜೀವನದಲ್ಲಿ ಒಬ್ಬ ಉನ್ನತ ನಾಯಕ ಇಷ್ಟು ಅಸಭ್ಯವಾಗಿ ವರ್ತಿಸಿದ್ದು ಇತಿಹಾಸದಲ್ಲಿ ಒಂದು ವಿಚಿತ್ರ ಪ್ರಸಂಗವಾಗಿ ಉಳಿದು ಹೋಯಿತು.

ವಿಯೆಟ್ನಾಂ ಯುದ್ಧವು ಕೇವಲ ರಾಜಕೀಯ ಹಿತಾಸಕ್ತಿಯಾಗಿರದೇ, ಒಬ್ಬ ನಾಯಕನ ಅಹಂಕಾರದ ಪ್ರದರ್ಶನವಾಗಿತ್ತೇ ಎಂಬ ಪ್ರಶ್ನೆಯನ್ನು ಈ ಘಟನೆ ಇಂದಿಗೂ ಎತ್ತುತ್ತದೆ. ಜಾನ್ಸನ್ ತಮ್ಮ ಕೈಕೆಳ ಗಿನ ಅಧಿಕಾರಿಗಳೊಂದಿಗೆ ಶೌಚಾಲಯದಲ್ಲಿ ಕುಳಿತೇ ಸಭೆ ನಡೆಸುತ್ತಿದ್ದ ಘಟನೆಗಳೂ ಇತಿಹಾಸದಲ್ಲಿ ದಾಖಲಾಗಿವೆ. ಅಮೆರಿಕ ಅಧ್ಯಕ್ಷರ ಕೆಟ್ಟ ವರ್ತನೆಗಳು ಒಂದೆರಡಲ್ಲ.

ಒಮ್ಮೊಮ್ಮೆ ಈ ವಿಷಯದಲ್ಲಿ ನಮ್ಮ ರಾಜಕಾರಣಿಗಳೇ ಎಷ್ಟೋ ವಾಸಿ ಎನಿಸಿಬಿಡುತ್ತಾರೆ. ಒಂದು ಕಾಲವಿತ್ತು, ಅಮೆರಿಕ ಅಧ್ಯಕ್ಷರು ಮಾತಾಡಿದರೆ ಇಡೀ ಜಗತ್ತು ಕೇಳುತ್ತಿತ್ತು. ಈಗ ಕಿವಿ ಮುಚ್ಚಿಕೊಳ್ಳು ವಂತಾಗಿದೆ!