Mohan Vishwa Column: ಮತಬ್ಯಾಂಕ್ ರಾಜಕಾರಣಕ್ಕೆ ಆರೆಸ್ಸೆಸ್ ಟೀಕೆ
ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮೆಚ್ಚುಗೆಗೆ ತಾವು ಪಾತ್ರರಾಗಬಹುದು ಎಂಬ ತಿಕ್ಕಲು ಯೋಚನೆ ಪ್ರಿಯಾಂಕ್ ಖರ್ಗೆಯವರದ್ದು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧವಿರುವ ಕಾಂಗ್ರೆಸ್, ದೇಶವಿರೋಧಿಗಳ ಜತೆ ಕೈಜೋಡಿಸಲು ಸದಾ ಸಿದ್ಧವಾಗಿರುತ್ತದೆ.


ವೀಕೆಂಡ್ ವಿತ್ ಮೋಹನ್
camohanbn@gmail.com
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹೆಸರನ್ನು ದಿನದಲ್ಲಿ ಒಮ್ಮೆಯಾದರೂ ಹೇಳದಿದ್ದರೆ ಕಾಂಗ್ರೆಸ್ಸಿಗರಿಗೆ ಮುಸಲ್ಮಾನರ ಮತ ಬೀಳುವುದಿಲ್ಲ. ಮುಸಲ್ಮಾನರನ್ನು ಓಲೈಸಲು ಸಂಘದ ಹೆಸರನ್ನು ಮುನ್ನೆಲೆಗೆ ತರುವ ಕೆಲಸವು ಕಾಂಗ್ರೆಸ್ ಮತ್ತು ಎಡಚರರಲ್ಲಿ ಸದಾ ನಡೆಯು ತ್ತಿರುತ್ತದೆ.
ಒಂದು ದಿನವಾದರೂ ಶಾಖೆಯ ಬಾಗಿಲು ತಟ್ಟದ ಪ್ರಿಯಾಂಕ್ ಖರ್ಗೆ ಮತ್ತು ಹರಿಪ್ರಸಾದ್, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮಾತುಮಾತಿಗೂ ಮನುಸ್ಮೃತಿಯನ್ನು ತಮ್ಮ ಭಾಷಣದಲ್ಲಿ ಬಳಸಿಕೊಳ್ಳುವ ಕಾಂಗ್ರೆಸ್ಸಿಗರಿಗೆ ಮನುಸ್ಮೃತಿಯ ಮುನ್ನುಡಿಯೂ ತಿಳಿದಿರಲಿಕ್ಕಿಲ್ಲ.
ಹಿಂದೂ ಸಮಾಜದಲ್ಲಿದ್ದಂಥ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಸಮಸ್ತ ಹಿಂದೂಗಳನ್ನು ಒಂದೆಡೆ ಸೇರಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಾಪಿತವಾದಂಥ ಅಪ್ಪಟ ದೇಶಭಕ್ತ ಸಂಘಟನೆ ‘ಆರೆಸ್ಸೆಸ್’. ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿನ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಾಗಪುರದ ಶಿಬಿರದಲ್ಲಿ ಜಾತಿಯನ್ನು ಮೀರಿ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡುವುದನ್ನು ಕಂಡು ಸ್ವತಃ ಮಹಾತ್ಮ ಗಾಂಧಿ ಸಂತಸ ವ್ಯಕ್ತಪಡಿಸಿದ್ದರು. ಸಂಘದ ಶಾಖೆಗಳಲ್ಲಿ ಇಂದಿಗೂ ಜಾತಿ ಯೆಂಬ ವಿಷಯ ಚರ್ಚೆಗೆ ಬರುವುದಿಲ್ಲ, ಸಮಾಜಸೇವೆ ಹಾಗು ಸದೃಢ ರಾಷ್ಟ್ರ ನಿರ್ಮಾಣ ಕಾರ್ಯಗಳು ಮಾತ್ರ ಚರ್ಚೆಯಲ್ಲಿರುತ್ತವೆ.
ಇದನ್ನೂ ಓದಿ: Mohan Vishwa Column: ಪ್ಯಾಲಿಸ್ತೀನಿಯರ ನರಮೇಧ ನಡೆಸಿದ್ದ ಪಾಕಿಸ್ತಾನ
ತಮ್ಮ ಮನೆಯ ಮಕ್ಕಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಕಳುಹಿಸಿದರೆ ಶಿಸ್ತಿನ ಸಿಪಾಯಿಗಳಾಗುತ್ತಾರೆಂಬ ಆಲೋಚನೆ ಇಂದಿಗೂ ಪೋಷಕರಲ್ಲಿದೆ. ಚೆನ್ನೈ ನಗರದಲ್ಲಿ ಹಿಂದೆಂದೂ ಕಂಡರಿಯದ ಜಲ ಪ್ರವಾಹ ಉಂಟಾದಾಗ ಜನರ ಸೇವೆಗೆಂದು ಮೊದಲು ರಸ್ತೆಗಿಳಿದಿದ್ದು ಆರೆಸ್ಸೆಸ್. ಕೊಡಗಿನಲ್ಲಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಕ್ಕಿಂತಲೂ ಮೊದಲು ಜನರ ಬಳಿ ತಲುಪಿದ್ದು ಆರೆಸ್ಸೆಸ್.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಜನರ ನೆರವಿಗೆ ಮೊದಲು ಹೋದದ್ದು ಆರೆಸ್ಸೆಸ್. ಅಷ್ಟೇ ಯಾಕೆ, ಕರೋನ ಸಂದರ್ಭದಲ್ಲಿ ಜನರ ಮನೆಮನೆಗೆ ಭೇಟಿ ನೀಡಿ ಊಟ, ಪಡಿತರ, ಔಷಧಿಗಳನ್ನು ತಲುಪಿಸುವ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಂಡಿದ್ದು ಆರೆಸ್ಸೆಸ್. ವಿಶಾಖಪಟ್ಟಣದಲ್ಲಿ ಉಂಟಾಗಿದ್ಧ ಪ್ರವಾಹದಲ್ಲಿ ಸಿಲುಕಿದ್ದ ಜನರ ಮನೆಗೆ ಮೊದಲು ತಲುಪಿದ್ದು ಆರೆಸ್ಸೆಸ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು ತಮ್ಮ ಮನೆಗಳನ್ನು ತೊರೆದು ಇಂದಿಗೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ದೇಶದ ಮೂಲೆಮೂಲೆಗಳಲ್ಲಿ ದಿನನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ.
1975ರಲ್ಲಿ ಕಾಂಗ್ರೆಸ್ಸಿನ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸರ್ವನಾಶಗೊಳಿಸಿದ್ದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿದ್ದು ಆರೆಸ್ಸೆಸ್. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಅಟ್ಟಹಾಸವನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ದೇಶದಾದ್ಯಂತ ಹೋರಾಟ ನಡೆಸಿದ್ದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧ ಮಾಡಲಾಗಿತ್ತು.
1992ರ ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ಆರೆಸ್ಸೆಸ್ ನಿಷೇಧವಾಗಿತ್ತು. ನಂತರ ನ್ಯಾಯಾಲಯ ನೀಡಿದ ತೀರ್ಪಿನನ್ವಯ ಅದೇ ಜಾಗದಲ್ಲಿ ಇಂದು ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥಕ್ಕಾಗಿ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಸಂಘವನ್ನು ಈ ಹಿಂದೆ ನಿಷೇಧ ಮಾಡಲಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘವೆಂಬುದು ಆನೆಯಿದ್ದಂತೆ, ಸದೃಢ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ತನ್ನ ಸಮಾಜಮುಖಿ ಕೆಲಸ ಮಾಡಿಕೊಂಡು ಅದು ಮುನ್ನುಗ್ಗುತ್ತಿರುತ್ತದೆ. ರಸ್ತೆಯಲ್ಲಿ ನಿಂತು ಸಂಘದ ವಿರುದ್ಧ ಮಾತನಾಡುವವರಿಗೆ ಅದು ಎಂದೂ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಎಂದಿನಂತೆ ಮುಸಲ್ಮಾನರ ಓಲೈಕೆಯ ರಾಜಕಾರಣದ ಪರಮಾವಧಿಯಾಗಿ ಸಂಘವನ್ನು ದೇಶ ವಿರೋಧಿ ಸಂಘಟನೆಗಳ ಜತೆ ತಾಳೆಮಾಡುವ ಕೆಲಸವನ್ನು ಮಾಡುತ್ತದೆ.
ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮೆಚ್ಚುಗೆಗೆ ತಾವು ಪಾತ್ರರಾಗಬಹುದು ಎಂಬ ತಿಕ್ಕಲು ಯೋಚನೆ ಪ್ರಿಯಾಂಕ್ ಖರ್ಗೆಯವರದ್ದು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧವಿರುವ ಕಾಂಗ್ರೆಸ್, ದೇಶವಿರೋಧಿಗಳ ಜತೆ ಕೈಜೋಡಿಸಲು ಸದಾ ಸಿದ್ಧವಾಗಿರುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ನಡುವಿನ ಸೈದ್ಧಾಂತಿಕ ಸಂಬಂಧ ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಸಂಘದ ನೂರಾರು ಕಾರ್ಯಕರ್ತರು ಸಂಸದ-ಶಾಸಕರಾಗಿದ್ದಾರೆ, ಮಂತ್ರಿ-ಮುಖ್ಯಮಂತ್ರಿಗಳಾಗಿದ್ದಾರೆ. ಭಾರತದ ನಾಲ್ಕು ದಿಕ್ಕುಗಳನ್ನು ಸೇರಿಸುವ ‘ಸುವರ್ಣ ಚತುಷ್ಪಥ’ ರಸ್ತೆಯನ್ನು ನಿರ್ಮಿಸಿ ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ ಅಟಲ್ ಬಿಹಾರಿ ವಾಜಪೇಯಿಯವರು ಸಂಘದ ಕಾರ್ಯಕರ್ತರಾಗಿದ್ದವರು.
ಜಗಮೆಚ್ಚಿದ ನಾಯಕ ನರೇಂದ್ರ ಮೋದಿಯವರೂ ಸಂಘದ ಕಾರ್ಯಕರ್ತರಾಗಿದ್ದವರು. ಇವರೆಲ್ಲರೂ ಹಗಲು ರಾತ್ರಿಯೆನ್ನದೆ ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಿಟ್ಟಿರುವವರು. ದೇಶಕಟ್ಟುವ ಕೆಲಸ ಮಾಡುವ ಚಿಂತನೆಯ ಸಂಘವೆಲ್ಲಿ, ಮತಬ್ಯಾಂಕಿಗಾಗಿ ದೇಶವಿರೋಧಿಗಳ ಜತೆ ಸೇರಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ಎಲ್ಲಿ? ಸದೃಢ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ದೇಶಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ವರ್ಷದಲ್ಲಿ 100 ವರ್ಷಗಳನ್ನು ಪೂರೈಸುತ್ತದೆ.
ಒಂದು ಶತಮಾನದ ಸುದೀರ್ಘ ಪಯಣದಲ್ಲಿ ಆರೆಸ್ಸೆಸ್ ಎಲ್ಲಿಯೂ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಉದಾಹರಣೆಯಿಲ್ಲ. ಸಂಘದಲ್ಲಿ ಸ್ವಯಂ ರಕ್ಷಣೆಯಡಿಯಲ್ಲಿ ದಂಡಗಳನ್ನು ಬಳಸುವ ತರಬೇತಿಯನ್ನು ಬ್ರಿಟಿಷರ ಕಾಲದಿಂದಲೂ ಹೇಳಿಕೊಡಲಾಗುತ್ತದೆ. ಈ ರಕ್ಷಣಾ ತರಬೇತಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್ ತನ್ನ ಮುಸಲ್ಮಾನ್ ಮತಬ್ಯಾಂಕನ್ನು ಓಲೈಸುವಲ್ಲಿ ನಿರತವಾಗಿರುತ್ತದೆ.
ಆಯುಧ ಪೂಜೆಯಂದು ಮನೆಯಲ್ಲಿರುವ ಆಯುಧಗಳನ್ನು ಪೂಜಿಸುವ ಸಂಪ್ರದಾಯ ಇಂದು ನಿನ್ನೆಯದಲ್ಲ, ಮೈಸೂರಿನ ಮಹಾರಾಜರು ಆಯುಧಪೂಜೆಯಂದು ತಮ್ಮ ಆಯುಧವನ್ನು ಶತಮಾನಗಳಿಂದ ಪೂಜಿಸುತ್ತಾ ಬಂದಿದ್ದಾರೆ. ಆಯುಧ ಪೂಜೆಯಂದು ನಡೆಸುವ ಕತ್ತಿ, ಗುರಾಣಿ, ಚೂರಿಯ ಪೂಜೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಾಮಾನ್ಯ ಜನರ ಆಚರಣೆಯನ್ನೂ ಭಯೋತ್ಪಾದನೆಗೆ ಹೋಲಿಸಿ, ಹಿಂದೂಗಳ ಆಚರಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತಳಕು ಹಾಕಿ ಸಮಸ್ತ ಹಿಂದೂಗಳಿಗೆ ಅವಮಾನ ಮಾಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಮುನ್ನೆಲೆಗೆ ತಂದು ತಮ್ಮ ಮತಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವ ಕಾಂಗ್ರೆಸ್ಸಿನ ನಾಯಕರು ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ನಡೆದುಕೊಂಡ ರೀತಿಯನ್ನೊಮ್ಮೆ ಜನರಿಗೆ ತಿಳಿಸಲೇ ಬೇಕು. ಬಾಬಾಸಾಹೇಬರು ಭಾರತಕ್ಕೆ ನೀಡಿದ ಸಂವಿಧಾನದ ವಿರುದ್ಧವಾಗಿ, ನೆಹರು ಅವರು ಅಬ್ದುಲ್ಲಾನನ್ನು ಓಲೈಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದ ಮೂಲಕ ಬೇರೆ ಸಂವಿಧಾನವನ್ನು ನೀಡಿದ್ದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪರಿಚ್ಛೇದ 370ನ್ನು ರದ್ದತಿ ಮಾಡಿದಾಗ, ಪಾಕಿಸ್ತಾನಕ್ಕಿಂತಲೂ ಮೊದಲು ವಿರೋಧ ವ್ಯಕ್ತಪಡಿಸಿದವರು ಕಾಂಗ್ರೆಸ್ಸಿನವರು. ನಂತರ, ತಾನು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ತರುವುದಾಗಿ ಹೇಳಿದ್ದು ಕಾಂಗ್ರೆಸ್ ಪಕ್ಷ. ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಲ್ಪಸಂಖ್ಯಾತ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸುವುದನ್ನು ಮೊದಲು ವಿರೋಧಿಸಿದ್ದು ಪಾಕಿಸ್ತಾನ, ನಂತರ ವಿರೋಧಿಸಿದ್ದು ಕಾಂಗ್ರೆಸ್ ಪಕ್ಷ.
ಹಿಜಾಬ್ ಗಲಾಟೆಯ ವಿಷಯದಲ್ಲಿ ಮೊದಲು ವಿರೋಧಿಸಿ ಭಾರತದ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆಯೆಂದು ಹೇಳಿದ್ದು ಪಾಕಿಸ್ತಾನ, ನಂತರ ವಿರೋಧಿಸಿದ್ದು ಕಾಂಗ್ರೆಸ್. ಬಾಲಾ ಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲಿ ದಾಳಿಯೇ ನಡೆದಿಲ್ಲವೆಂದು ಹೇಳಿ ಮೊದಲು ಸಾಕ್ಷ್ಯ ಕೇಳಿದ್ದು ಪಾಕಿಸ್ತಾನ, ನಂತರ ಸಾಕ್ಷ್ಯ ಕೇಳಿ ಭಾರತೀಯ ಸೈನಿಕರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವಿಚಾರವಾಗಿ ನಮ್ಮ ಸೈನಿಕರನ್ನು ಪ್ರಶ್ನೆ ಮಾಡಿ, ಸರಿಯಾದ ದಾಳಿ ನಡೆದಿಲ್ಲವೆಂದು ಹೇಳಿದ್ದು ಕಾಂಗ್ರೆಸ್ ಪಕ್ಷ.
ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಪಿಎಫ್ ಐ ಸಂಘಟನೆ ನಿಷೇಧಕ್ಕೊಳಗಾದಾಗ ಮೊದಲು ಪ್ರತಿಕ್ರಿಯಿಸಿದ್ದು ಪಾಕಿಸ್ತಾನ, ನಂತರ ಕಾಂಗ್ರೆಸ್ ಪಕ್ಷ. ಭಾರತದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೇಕಿರುವುದು ಕಾಂಗ್ರೆಸ್ ಪಕ್ಷಕ್ಕೂ ಬೇಕಾಗಿರುತ್ತದೆ. ಮಗ್ಗುಲ ಮುಳ್ಳು ಪಾಕಿಸ್ತಾನ ವನ್ನು ಸೃಷ್ಟಿ ಮಾಡಿದ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಮುಸಲ್ಮಾನರ ಹೆಸರಿನಲ್ಲಿ ದೊಡ್ಡ ಮಟ್ಟದ ರಾಜಕೀಯ ಮಾಡಿಕೊಂಡು ಬಂದಿದೆ. ಮುಸಲ್ಮಾನರ ಓಲೈಕೆಯ ಪರಮಾವಧಿಯಾಗಿ ಕಾಂಗ್ರೆಸ್, ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯ ವಿಷಯದಲ್ಲಿ ಹೊಂದಾಣಿಕೆಯ ರಾಜಕೀಯವನ್ನೇ ಮಾಡಿಕೊಂಡು ಬಂದಿದೆ. 2004ರಿಂದ 2014ರ ನಡುವೆ ತಿಂಗಳಿಗೊಮ್ಮೆ ದೇಶದ ಯಾವುದಾದ ರೊಂದು ಮೂಲೆಯಲ್ಲಿ ಭಯೋತ್ಪಾದಕರ ದಾಳಿಗಳು ನಡೆಯುತ್ತಿದ್ದವು.
ಮುಂಬೈ ನಗರದ ರಸ್ತೆಗಳಲ್ಲಿ ಸಾರ್ವಜನಿಕರ ಮೇಲೆ ಸಿಕ್ಕ ಸಿಕ್ಕಲ್ಲಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ಪ್ರಚೋದಿತ ಉಗ್ರ ಸಂಘಟನೆಗಳ ಮೇಲೆ ಒಂದು ದಿಟ್ಟ ಕ್ರಮ ಕೈಗೊಳ್ಳದ ಸೈಲೆಂಟ್ ಪ್ರೇಕ್ಷಕ ಪ್ರಧಾನಿಯನ್ನು ಕಾಂಗ್ರೆಸ್ ನೀಡಿತ್ತು. ಸಮಾಜದಲ್ಲಿ ಸಾಮರಸ್ಯವನ್ನು ಸಾಧಿಸುವ ಪ್ರಮುಖ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದೆ.
ಸಂಘದ ಕಾರ್ಯಕರ್ತರು ಎಂದೂ ಪ್ರಚಾರ ಬಯಸುವುದಿಲ್ಲ. ಕರ್ನಾಟಕದಲ್ಲಿಯೇ ಸಂಘದ ಸಾಮರಸ್ಯ ವೇದಿಕೆಯ ಮೂಲಕ ದಲಿತರ ಪರವಾಗಿ ಹಲವು ಕೆಲಸಗಳನ್ನು ಮಾಡುತ್ತಿರುವ ನೂರಾರು ಕಾರ್ಯಕರ್ತರಿದ್ದಾರೆ. ತಮ್ಮ ಕುಟುಂಬವನ್ನು ತ್ಯಾಗ ಮಾಡಿ ಇಡೀ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿರುವ ಸಾವಿರಾರು ಪೂರ್ಣ ಪ್ರಮಾಣದ ಪ್ರಚಾರಕರಿದ್ದಾರೆ.
ಸಂಘವು ಎಂದೂ ಆನೆಯಂತೆ, ತಾನು ನಡೆದು ಹೋಗುತ್ತಿರುವಾಗ ರಸ್ತೆಯಲ್ಲಿ ನಿಂತು ಮಾತನಾಡು ವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ತನ್ನ ಪಾಡಿಗೆ ತಾನು ದೇಶ ಕಟ್ಟುವ ಕೆಲಸದಲ್ಲಿ ನಿರತ ವಾಗಿರುತ್ತದೆ.