Ajith Shetty Column: ಸನಾತನ ಸಂತ ಸಮಾಜವನ್ನು ಒಗ್ಗೂಡಿಸಿದ ಸಿಂಘಾಲ್
ಭಾರತದ ಸನಾತನ ಆಧ್ಯಾತ್ಮಿಕ ಇತಿಹಾಸವನ್ನು ವರ್ತಮಾನದ ಪಾಶ್ಚಾತ್ಯ ರಿಲೀಜಿಯನ್ ಒಳಗಿನ ನಂಬಿಕೆಗಳು, ಪಂಥಗಳು, ಆಚರಣೆಗಳು ಮತ್ತು ಅವುಗಳ ದೈನಂದಿನ ನಿರ್ವಹಣಾ ವ್ಯವಸ್ಥೆಯೊಂದಿಗೆ ಹೋಲಿಸಿ ನೋಡಿದಾಗ, ಸನಾತನ ಆಚರಣೆಗಳು ಅಥವಾ ಅದರೊಳಗಿನ ವ್ಯವಸ್ಥೆಗಳು ಪಾಶ್ಚಾತ್ಯ ರಿಲೀಜಿಯನ್ ವ್ಯವಸ್ಥೆಯಷ್ಟು ಕೇಂದ್ರೀಕೃತ ವ್ಯವಸ್ಥೆಯಾಗಿರಲಿಲ್ಲ ಎಂಬುದು ತಿಳಿಯುತ್ತದೆ
-
ಧರ್ಮರಕ್ಷಕ
ಅಜಿತ್ ಶೆಟ್ಟಿ ಹೆರಂಜೆ
ಹಿಂದೂ ಸಮಾಜದ ಕೆಳಸ್ತರದಲ್ಲಿ ಚಲನಶೀಲತೆಯನ್ನು ತರಬೇಕಾದರೆ ಸಮಾಜದ ಮೇಲ್‌ಸ್ತರ ದಲ್ಲಿ ಅದು ಆಗಬೇಕು, ಅದು ಸಾಧ್ಯವಾಗದೆ ಹಿಂದೂ ಸಮಾಜದ ಸಾಮೂಹಿಕ ಶಕ್ತಿಯ ಮರು ಸ್ಥಾಪನೆಯ ಕಾರ್ಯ ಕಷ್ಟಸಾಧ್ಯ ಎಂಬುವುದನ್ನು ಅರಿತರು. ಈ ಸಮಾಜವನ್ನು ಸಂಘಟಿಸುವ ಜವಾಬ್ದಾರಿಯನ್ನು ತೆಗೆದು ಕೊಳ್ಳಲು ಸಂಘ ಆಯ್ಕೆ ಮಾಡಿಕೊಂಡ ವ್ಯಕ್ತಿಯೇ ದೆಹಲಿ ಪ್ರಾಂತ ಪ್ರಚಾರಕ ಆಗಿದ್ದ ಅಶೋಕ್ ಸಿಂಘಾಲ್.
ಭಾರತದ ಸನಾತನ ಆಧ್ಯಾತ್ಮಿಕ ಇತಿಹಾಸವನ್ನು ವರ್ತಮಾನದ ಪಾಶ್ಚಾತ್ಯ ರಿಲೀಜಿಯನ್ ಒಳಗಿನ ನಂಬಿಕೆಗಳು, ಪಂಥಗಳು, ಆಚರಣೆಗಳು ಮತ್ತು ಅವುಗಳ ದೈನಂದಿನ ನಿರ್ವಹಣಾ ವ್ಯವಸ್ಥೆ ಯೊಂದಿಗೆ ಹೋಲಿಸಿ ನೋಡಿದಾಗ, ಸನಾತನ ಆಚರಣೆಗಳು ಅಥವಾ ಅದರೊಳಗಿನ ವ್ಯವಸ್ಥೆಗಳು ಪಾಶ್ಚಾತ್ಯ ರಿಲೀಜಿಯನ್ ವ್ಯವಸ್ಥೆಯಷ್ಟು ಕೇಂದ್ರೀಕೃತ ವ್ಯವಸ್ಥೆಯಾಗಿರಲಿಲ್ಲ ಎಂಬುದು ತಿಳಿಯುತ್ತದೆ. ಹಿಂದೂ ಸಮಾಜದ ಜೀವಂತಿಕೆಯೇ ಅದರ ಅಪಾರ ವೈವಿಧ್ಯತೆ ಮತ್ತು ಬಹುಮುಖಿ ಜೀವನ ಪದ್ಧತಿಯ ಕಾರಣ.
ಆದರೆ ಅದೇ ಬಹುಮುಖಿತ್ವ, ಅದರ ದೌರ್ಬಲ್ಯ ಕೂಡ ಆಗಿದೆ. ವೈವಿಧ್ಯತೆಗಳು ಸನಾತನ ಸಮಾಜದೊಳಗೆ ಒಡಕುಗಳಿಗೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು ಎಂಬುದು ಅಷ್ಟೇ ಕಟುವಾದ ಸತ್ಯ. ಅದ್ವೈತ, ದ್ವೈತ, ವಿಶಿಷ್ಟಾದ್ವೈತಗಳ ನಡುವಿನ ತಾತ್ವಿಕ ಸಂಘರ್ಷ ಒಂದೆಡೆಯಾದರೆ; ಶೈವ, ವೈಷ್ಣವ ಮತ್ತು ಶಾಕ್ತ ಪರಂಪರೆಗಳ ನಡುವಿನ ಆಚಾರ-ವಿಚಾರಗಳ ಅಂತರ ಇನ್ನೊಂದೆಡೆ ಗಟ್ಟಿ ಯಾಗಿ ಬೇರೂರಿತ್ತು.
ಇದನ್ನೂ ಓದಿ: Ajith Shetty Heranje Column: ಅಂಬೇಡ್ಕರ್ ಕನಸು, ಮೋದಿ ಕೈಗಳಲ್ಲಿ ಕೃತಿಯಾಯಿತು
ಇನ್ನು ಉತ್ತರ ಭಾರತದ ಜನ, ನಿರಂಜನಿ, ಮಹಾನಿರ್ವಾಣಿ, ಅಟಲ್, ಆವಾಹನ್, ಆನಂದ, ಅಗ್ನಿ, ನಿರ್ಮೋಹಿ, ದಿಗಂಬರ, ನಿರ್ವಾಣಿ, ಬಡಾ ಉದಾಸಿನ್, ನಯಾ ಉದಾಸಿನ್ ಹಾಗೂ ನಿರ್ಮಲ ಸೇರಿದಂತೆ 13 ಸಾಂಪ್ರದಾಯಿಕ ಅಖಾಡಗಳ ವಿಚಾರಕ್ಕೆ ಬಂದರೆ, ಕುಂಭಮೇಳಗಳಲ್ಲಿ ಪವಿತ್ರ ಶಾಹಿ ಸ್ನಾನದ ಮೊದಲ ಹಕ್ಕು ಯಾರಿಗೆ ಎಂಬ ವಿಷಯದ ಶತಮಾನಗಳ ಕಾಲ ರಕ್ತಸಿಕ್ತ ಕದನಗಳು ನಡೆದ ಇತಿಹಾಸವಿದೆ.
ಶಂಕರಾಚಾರ್ಯರಂತಹ ಸಾಂಪ್ರದಾಯಿಕ ವೈದಿಕ ಪೀಠಾಧಿಪತಿಗಳು, ರಾಮಾನಂದಿ ಪಂಥದ ಬೈರಾಗಿಗಳು, ಅಖಾಡಗಳ ಶಸಧಾರಿ ದಿಗಂಬರ ನಾಗಾ ಸಾಧುಗಳು ಹಾಗೂ ಕಬೀರ್ ಅಥವಾ ನಾಥಪಂಥದ ಸಂತರ ನಡುವೆ ಯಾವುದೇ ಸಾಮಾನ್ಯ ಸಾಮಾಜಿಕ ಸಂವಾದವೇ ಇರಲಿಲ್ಲ. ಈ ರೀತಿ ವಿಭಿನ್ನತೆ ಭಾರತದ ಸಮಾಜದ ಎಲ್ಲ ಆಯಾಮಗಳಲ್ಲಿ, ಸ್ತರಗಳಲ್ಲಿ ಅದದೇ ಆದ ರೀತಿಯಲ್ಲಿ ಬೇರೂರಿದೆ; ಅದು ಜಾತಿ ವ್ಯವಸ್ಥೆಯಿರಲಿ ಅಥವಾ ವರ್ಣ ವ್ಯವಸ್ಥೆಯಿರಲಿ.
ಈ ವೈವಿಧ್ಯತೆ ಭಾರತದ ಶಕ್ತಿಯೂ ಆಯಿತು ಮತ್ತು ಭಾರತದ ದೌರ್ಬಲ್ಯವೂ ಆಯಿತು. ಆದರೆ ಬರಬರುತ್ತಾ ಸಮಾಜದೊಳಗೆ ಈ ಚಲಾವಣೆಗೆ ನಿರ್ಬಂಧ ಹೇರಲಾಯಿತು. ಇದರಲ್ಲಿ ಬ್ರಿಟಿಷ್ ಆಡಳಿತದ ಕೊಡುಗೆ ಬಹಳ ದೊಡ್ಡದು. ಭಾರತ ಬೇರೆ ಬೇರೆ ಭೂಭಾಗಗಳಲ್ಲಿ ಇದ್ದ ಇಂತಹ ಅನೇಕ ವಿಭಿನ್ನ ಆಚರಣೆ ವ್ಯವಸ್ಥೆಗಳನ್ನು ಒಂದೇ ವ್ಯವಸ್ಥೆಯಡಿ ಪಟ್ಟಿ ಮಾಡಿ, ಅದಕ್ಕೆ ಆಡಳಿತಾತ್ಮಕ ಮಾನದಂಡಗಳನ್ನು ಹೇರಿ ಸಮಾಜದಲ್ಲಿ ಈ ವ್ಯವಸ್ಥೆಯೊಳಗಿದ್ದ ಆಂತರಿಕ ಚಲನಶೀಲತೆಗೆ ಸಂಪೂರ್ಣವಾಗಿ ತಡೆ ಹಿಡಿದರು.
ಇದನ್ನೇ ಬಂಡವಾಳ ಮಾಡಿಕೊಂಡ ಬ್ರಿಟಿಷರ ಜತೆಗೆ ಬಂದ ಕ್ರೈಸ್ತ ಹಾಗೂ ಪೋರ್ಚುಗೀಸ್ ಮಿಷನರಿಗಳು ಭಾರತದಲ್ಲಿ ಮಾಡಿದ ದೊಡ್ಡ ಪ್ರಮಾಣದ ಮತಾಂತರದ ಕೆಲಸವನ ಭಾರತದ ಏಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆತ್ಮವನ್ನು ಜಾಗೃತಗೊಳಿಸಿದ್ದು 1981ರ ತಮಿಳುನಾಡಿನ ಮೀನಾಕ್ಷಿಪುರಂ ಸಾಮೂಹಿಕ ಮತಾಂತರದ ಘಟನೆ.
ಮೀನಾಕ್ಷಿಪುರಂನಲ್ಲಿ ನೂರಾರು ದಲಿತ ಕುಟುಂಬಗಳು ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡವು. ಹಿಂದೂ ಭಾರತೀಯ ಸಮಾಜದ ಸಾಮಾಜಿಕ ನ್ಯೂನತೆಗಳನ್ನು ನೆಪ ಮಾಡಿಕೊಂಡು ಹಿಂದೂಗಳ ಮತಾಂತರವಾಗುತ್ತಿರುವುದನ್ನು ಸಂಘದ ಮೂರನೇ ಸರಸಂಘ ಚಾಲಕ ಬಾಳಾಸಾಹೇಬ್ ದೇವರಸ್, ಸರಕಾರ್ಯವಾಹ ಪ್ರೊಫೆಸರ್ ರಾಜೇಂದ್ರ ಸಿಂಗ್ ಹಾಗೂ ಹಿರಿಯ ಪ್ರಚಾರಕ ಮೊರೋಪಂತ್ ಪಿಂಗಳೆ ಗುರುತಿಸಿದರು.
ಹಿಂದೂ ಸಮಾಜವನ್ನು ಒಳಗಿನಿಂದ ಜಾಗೃತಗೊಳಿಸಬೇಕಾದರೆ ಕೇವಲ ಸಾಮಾಜಿಕ ಅಥವಾ ರಾಜಕೀಯ ಪ್ರಚಾರ ಸಾಲದು; ಭಾರತೀಯ ಜನಮನವನ್ನು ಶತಮಾನಗಳಿಂದ ಪ್ರಭಾವಿಸುತ್ತಿರುವ ಮಠಾಧೀಶರು, ಅಖಾಡಗಳ ಮಹಾಂತರು ಮತ್ತು ಸನ್ಯಾಸಿ ಪರಂಪರೆಯ ಸಾತ್ವಿಕ ಶಕ್ತಿಯನ್ನು ಒಂದೇ ವೇದಿಕೆಗೆ ತರುವುದು ಅನಿವಾರ್ಯ ಎಂಬ ಐತಿಹಾಸಿಕ ತೀರ್ಮಾನಕ್ಕೆ ಸಂಘದ ಕೇಂದ್ರೀಯ ಕಾರ್ಯಕಾರಿ ಮಂಡಳಿ ಬಂದಿತು.
ಹಿಂದೂ ಸಮಾಜದ ಕೆಳಸ್ತರದಲ್ಲಿ ಚಲನಶೀಲತೆಯನ್ನು ತರಬೇಕಾದರೆ ಸಮಾಜದ ಮೇಲಸ್ಥರದಲ್ಲಿ ಅದು ಆಗಬೇಕು, ಅದು ಸಾಧ್ಯವಾಗದೆ ಹಿಂದೂ ಸಮಾಜದ ಸಾಮೂಹಿಕ ಶಕ್ತಿಯ ಮರುಸ್ಥಾಪನೆಯ ಕಾರ್ಯ ಕಷ್ಟಸಾಧ್ಯ ಎಂಬುವುದನ್ನು ಅರಿತರು. ಈ ಸಮಾಜವನ್ನು ಸಂಘಟಿಸುವ ಜವಾಬ್ದಾರಿ ಯನ್ನು ತೆಗೆದುಕೊಳ್ಳಲು ಸಂಘ ಆಯ್ಕೆ ಮಾಡಿಕೊಂಡ ವ್ಯಕ್ತಿಯೇ ದೆಹಲಿ ಪ್ರಾಂತ ಪ್ರಚಾರಕ ಆಗಿದ್ದ ಅಶೋಕ್ ಸಿಂಘಾಲ್ ಅವರನ್ನು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್ ಪದವಿ ಪಡೆದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೂ ಆಳವಾದ ಪ್ರಾವೀಣ್ಯ ಹೊಂದಿದ್ದ ಅವರನ್ನು ವಿಶ್ವ ಹಿಂದೂ ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಯಿತು. ಅಶೋಕ್ ಸಿಂಘಾಲ್ ಅವರ ಮುಂದೆ ಹಿಮಾಲಯದಷ್ಟು ಸಮಾಲುಗಳಿದ್ದವು. ಯಾವುದೇ ಏಕೀಕೃತ ನಿರ್ವಹಣಾ ವ್ಯವಸ್ಥೆ ಇರದ ಸಮಾಜದಲ್ಲಿ, ಪರಸ್ಪರ ಮುಖಾಮುಖಿ ಕುಳಿತು ಮಾತನಾಡದ, ತಮ್ಮದೇ ಆದ ಮಠದ ಪದ್ಧತಿ ಮತ್ತು ಕಟ್ಟುನಿಟ್ಟಿನ ನಿಯಮಾವಳಿಗಳಿಗೆ ಬದ್ಧರಾಗಿದ್ದ ಸಾಧು ಸಂತರನ್ನು ಒಟ್ಟಿಗೆ ತರುವುದು ಹೇಗೆ ಎಂಬುದು ಮೊದಲ ಪ್ರಶ್ನೆಯಾಗಿತ್ತು.
1982ರಿಂದ 1984ರವರೆಗೆ ಸಿಂಘಾಲ್ ಅವರು ದೇಶದಾದ್ಯಂತ ನಿರಂತರ ಪ್ರವಾಸಗಳನ್ನು ಕೈಗೊಂಡರು. ಕಾಶಿ, ಅಯೋಧ್ಯೆ, ಹರಿದ್ವಾರ, ಮಥುರಾ, ಪ್ರಯಾಗ್‌ರಾಜ್, ಋಷಿಕೇಶ ಸೇರಿದಂತೆ ಉತ್ತರದ ಪ್ರಮುಖ ಧಾರ್ಮಿಕ ಕೇಂದ್ರಗಳಿಂದ ಹಿಡಿದು ದಕ್ಷಿಣದ ಶೃಂಗೇರಿ ಹಾಗೂ ಕಂಚಿ ಕಾಮಕೋಟಿ ಪೀಠಗಳವರೆಗೆ ಎಲ್ಲ ಮಠಾಧೀಶರನ್ನು ಅವರು ವೈಯಕ್ತಿಕವಾಗಿ ಭೇಟಿ ಮಾಡಿದರು. ಈ ಸುದೀರ್ಘ ಸಂಧಾನದ ವೇಳೆ ಸಿಂಘಾಲ್ ಎದುರಿಸಿದ ಅತಿದೊಡ್ಡ ಅಡ್ಡಿ ಸವಾಲು ಎಂದರೆ ಅದು ಪಂಥಗಳ ತಾತ್ವಿಕ ಭಿನ್ನಾಭಿಪ್ರಾಯಗಳಿಗಿಂತಲೂ ಹೆಚ್ಚಾಗಿ ಪೀಠಗಳ ನಿಯಮಗಳು ಮತ್ತು ಸಾಮಾಜಿಕ ಕಟ್ಟುಕಟ್ಟಳೆಗಳ ಬಿಕ್ಕಟ್ಟು.
ವೇದಿಕೆಯ ಮೇಲೆ ಯಾರ ಆಸನ ಯಾರ ಪಕ್ಕದಲ್ಲಿರಬೇಕು, ಯಾರಿಗೆ ಹೆಚ್ಚಿನ ಪ್ರಾಶಸ್ಯ ನೀಡಬೇಕು, ಪರಸ್ಪರ ದರ್ಶನವನ್ನೇ ನಿಷೇಧಿಸಿಕೊಂಡಿದ್ದ ಪಂಥಗಳ ಸಾಧುಗಳನ್ನು ಹೇಗೆ ಮುಖಾಮುಖಿ ಕೂರಿಸಬೇಕು ಎಂಬ ಜಟಿಲ ಪ್ರಶ್ನೆಗಳು ಎದುರಾದವು. ಈ ಸಂದರ್ಭದಲ್ಲಿ ಸಿಂಘಾಲ್ ಅವರು ಸಂಘಟನಾ ಜಾಣ್ಮೆಯನ್ನು ಪ್ರದರ್ಶಿಸಿದರು. ಅವರು ಯಾವುದೇ ಸಾಂಪ್ರದಾಯಿಕ ಪೀಠದ ಮೇಲೆ ಇನ್ನೊಬ್ಬರ ಸಿದ್ಧಾಂತವನ್ನು ಹೇರಲಿಲ್ಲ.
ಬದಲಿಗೆ, ವೇದಿಕೆಯ ಮೇಲೆ ಯಾವುದೇ ಒಬ್ಬ ವ್ಯಕ್ತಿ ಅಥವಾ ಪೀಠಕ್ಕೆ ಪ್ರತ್ಯೇಕ ಪೀಠ ಅಥವಾ ಉನ್ನತ ಆಸನವಿರುವುದಿಲ್ಲ; ಉಪಸ್ಥಿತರಿರುವ ಎಲ್ಲ ಸನ್ಯಾಸಿಗಳು, ಮಹಾಂತರು ಮತ್ತು ಆಚಾರ್ಯ ರಿಗೆ ಸಂಪೂರ್ಣ ಸಮಾನ ಸ್ಥಾನಮಾನದ ಆಸನ ವ್ಯವಸ್ಥೆ ಇರಲಿದೆ ಎಂಬ ಸಮಾನತೆಯ ಸೂತ್ರ ವನ್ನು ರೂಪಿಸಿದರು. ನಿಮ್ಮ ಆಂತರಿಕ ಪೂಜಾ ಪದ್ಧತಿ, ಶಾಸ್ತ್ರೀಯ ವಿಧಿವಿಧಾನಗಳು ನಿಮ್ಮ ವೈಯಕ್ತಿಕ ಪರಂಪರೆಗೆ ಸೇರಿದವು. ಆದರೆ ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಯ ಪ್ರಶ್ನೆ ಬಂದಾಗ ಭಿನ್ನಾಭಿಪ್ರಾಯ ಮರೆತು ಮಾರ್ಗದರ್ಶನ ನೀಡುವುದು ಸಮಗ್ರ ಸಂತ ಸಮಾಜದ ಕರ್ತವ್ಯ ಎಂಬ ಅವರ ವಿವೇಕಯುತ ವಾದವನ್ನು ಮಠಾಧೀಶರು ಒಪ್ಪಿಕೊಂಡರು.
ಈ ಸತತ ಪರಿಶ್ರಮದ ಫಲವಾಗಿ 1984ರ ಏಪ್ರಿಲ್ 7 ಮತ್ತು 8ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸಮಾವೇಶಗೊಂಡ ಪ್ರಥಮ ಧರ್ಮ ಸಂಸತ್ ನೆರವೇರಿತು. ಭಾರತದ ವಿವಿಧ ಪರಂಪರೆಗಳ 500ಕ್ಕೂ ಹೆಚ್ಚು ಪ್ರಮುಖ ಸಾಧುಗಳು, ಪೀಠಾಧಿಪತಿಗಳು, ಜೈನ ಮುನಿಗಳು, ಬೌದ್ಧ ಭಿಕ್ಕುಗಳು ಮತ್ತು ಸಿಖ್ಖರ ನಿರ್ಮಲ ಹಾಗೂ ಉದಾಸಿ ಪಂಥದ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ಶಿವರಾಮಾಚಾರ್ಯ, ಗೋರಕ್ಷಕ ಪೀಠದ ಮಹಾಂತ್ ಅವೈದ್ಯನಾಥ್, ಸ್ವಾಮಿ ವಾಮದೇವ್, ಪರಮಹಂಸ ರಾಮಚಂದ್ರ ದಾಸ್, ಸ್ವಾಮಿ ಸತ್ಯಮಿತ್ರಾ ನಂದ ಗಿರಿ, ಮಹಾಂತ್ ನೃತ್ಯಗೋಪಾಲ್ ದಾಸ್, ಆಚಾರ್ಯ ಧರ್ಮೇಂದ್ರ, ಜೈನ ಮುನಿ ಆಚಾರ್ಯ ಸುಶೀಲ್ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕರಾಗಿದ್ದ ಸ್ವಾಮಿ ಚಿನ್ಮಯಾ ನಂದ ಸೇರಿದಂತೆ ಭಾರತದ ಆಧ್ಯಾತ್ಮಿಕ ಲೋಕದ ದಿಗ್ಗಜರು ಒಂದೇ ವೇದಿಕೆಯಲ್ಲಿ ಸಮಾನವಾಗಿ ಆಸೀನರಾಗಿದ್ದರು.
ನೈಜ ಪ್ರಜಾತಂತ್ರ ಪರಿಕಲ್ಪನೆಯ ಸಂಸತ್ ಮಾದರಿಯಲ್ಲಿ ಮುಕ್ತ ಸಂವಾದ ಮತ್ತು ಸರ್ವಾನು ಮತದ ನಿರ್ಣಯದ ಸಂಸ್ಕೃತಿಯನ್ನು ಸಾಂಪ್ರದಾಯಿಕ ಸಂತರ ವಲಯದಲ್ಲಿ ಮೂಡಿಸಿದ್ದು ಸಿಂಘಾಲ್ ಅವರ ಪ್ರಬುದ್ಧ ಸಂಘಟನಾ ಕೌಶಲ್ಯದ ನಡೆಯಾಗಿತ್ತು.
ವಿಶ್ವ ಹಿಂದೂ ಪರಿಷತ್ತಿನ ಸಂಸ್ಥಾಪನಾ ಧ್ಯೇಯವಾಕ್ಯವಾದ ‘ಹಿಂದವಃ ಸೋದರಾಃ ಸರ್ವೇ, ನ ಹಿಂದೂ ಪತಿತೋ ಭವೇತ್’ ಎಂಬ ಉಕ್ತಿಗೆ ಅನುಗುಣವಾಗಿ, ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಸಂತರೇ ಸ್ವತಃ ಮುಂಚೂಣಿಯಲ್ಲಿ ನಿಂತು ಕರೆ ನೀಡುವಂತೆ ಧರ್ಮ ಸಂಸದ್ ವೇದಿಕೆಯನ್ನು ರೂಪಿಸಲಾಯಿತು. ಆ ಮೂಲಕ ಸನ್ಯಾಸಿಗಳನ್ನು ಕೇವಲ ಮಠಗಳ ಏಕಾಂತ ಆವರಣದಿಂದ ಹೊರತಂದು, ಸಮಾಜದ ಮುಖ್ಯವಾಹಿನಿಯ ಸವಾಲುಗಳಿಗೆ ಮುಖಾ ಮುಖಿಯಾಗುವಂತೆ ಪ್ರೇರೇಪಿಸಲಾಯಿತು.
1984ರ ಏಪ್ರಿಲ್ 8ರಂದು ಈ ಧರ್ಮ ಸಂಸತ್ ಅಂಗೀಕರಿಸಿದ ನಿರ್ಣಯಗಳು ಹಿಂದೂ ಸಮಾಜದ ಆಂತರಿಕ ಸುಧಾರಣೆಯ ಇಡೀ ದಿಕ್ಕನ್ನೇ ಬದಲಿಸಿದವು. ಧರ್ಮ ಸಂಸತ್ತಿನಲ್ಲಿ ಮೊದಲ ಬಾರಿಗೆ ದೇಶದ ಪ್ರಮುಖ ಪೀಠಾಽಪತಿಗಳು ಮತ್ತು ಅಖಾಡಗಳ ಮಹಾಂತರು ಒಕ್ಕೊರಲಿನಿಂದ, ಹುಟ್ಟಿನ ಆಧಾರದ ಮೇಲೆ ಸನಾತನ ಧರ್ಮದಲ್ಲಿ ಯಾರೂ ಅಸ್ಪೃಶ್ಯರಲ್ಲ; ಅಸ್ಪೃಶ್ಯತೆಯನ್ನು ಆಚರಿಸು ವುದು ಧರ್ಮದ್ರೋಹಕ್ಕೆ ಸಮಾನ ಎಂದು ಅಧಿಕೃತ ಧರ್ಮಾದೇಶ ಹೊರಡಿಸಿದರು.
ಜಾತಿ ತಾರತಮ್ಯದ ಕಳಂಕವನ್ನು ತೊಡೆದು ಹಾಕಲು ಮತ್ತು ಮತಾಂತರಕ್ಕೆ ಒಳಗಾಗುತ್ತಿದ್ದ ದುರ್ಬಲ ವರ್ಗಗಳನ್ನು ರಕ್ಷಿಸಲು ಸ್ವತಃ ಸಂತರ ಸಮುದಾಯವೇ ಮುಂದೆ ನಿಲ್ಲಬೇಕು ಎಂಬ ತೀರ್ಮಾನಕ್ಕೆ ಇಡೀ ಸಂತ ಲೋಕದ ಬಂತು. ಧರ್ಮ ಸಂಸತ್ತಿನ ಈ ನಿರ್ಣಯವನ್ನು ಸಮಾಜದ ಮುಂದೆ ಆಚರಣೆಗೆ ತರಲು ಅಶೋಕ್ ಸಿಂಘಾಲ್ ತಕ್ಷಣವೇ ಸಂತರ ದೇಶವ್ಯಾಪಿ ಜಾಗೃತಿ ಪ್ರವಾಸ ಮತ್ತು ಪಾದಯಾತ್ರೆಗಳನ್ನು ಸಂಘಟಿಸಿದರು.
ಉತ್ತರ ಭಾರತದ ಅಖಾಡಗಳ ನಾಗಾ ಸಾಧುಗಳಿಂದ ಹಿಡಿದು ದಕ್ಷಿಣದ ಮಠಾಧೀಶರವರೆಗೆ ಎಲ್ಲರೂ ತಮ್ಮ ಆಶ್ರಮಗಳ ಆಚೆಗೆ ಸಂಚರಿಸುವ ವಾತಾವರಣ ನಿರ್ಮಾಣವಾಯಿತು.
ಶತಮಾನಗಳಿಂದ ಮಠಗಳ ಬಾಗಿಲು ನೋಡದಿದ್ದ ದಲಿತ ಮತ್ತು ಹಿಂದುಳಿದ ವರ್ಗಗಳ ಕೇರಿಗಳಿಗೆ ಸಂತರೇ ಸ್ವತಃ ಕಾಲಿಟ್ಟರು. ಕರ್ನಾಟಕದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಂತಹ ಹಿರಿಯ ಯತಿಗಳು ದಲಿತ ಕೇರಿಗಳಿಗೆ ಭೇಟಿ ನೀಡಿ ಸಾಮೂಹಿಕ ಮಂತ್ರದೀಕ್ಷೆ ನೀಡಿದರೆ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿ ರಾಮಾನಂದಿ ಸಂತರು ಹಾಗೂ ಅಖಾಡಗಳ ಮುಖಂಡರು ಅಸ್ಪೃಶ್ಯರೆನಿಸಿಕೊಂಡವರ ಮನೆಗಳಿಗೆ ತೆರಳಿ, ಅವರ ಜತೆ ಕುಳಿತು ಸಹಪಂಕ್ತಿ ಭೋಜನ ಮಾಡುವ ಮೂಲಕ ಶತಮಾನಗಳ ಸಾಮಾಜಿಕ ಅಂತರವನ್ನು ತಗ್ಗಿಸು ವವನ್ನು ಕೆಲಸ ಮಾಡಿದರು.
ಮತಾಂತರದ ಪ್ರಭಾವ ಅತಿಯಾಗಿದ್ದ ಗಿರಿಜನ, ವನವಾಸಿ ಮತ್ತು ಈಶಾನ್ಯ ಭಾರತದ ಗಡಿ ಪ್ರದೇಶ ಗಳಲ್ಲಿ ಸಂತ ಸಮಾಜದ ಈ ಸಂಘಟಿತ ಪ್ರವಾಸವು ಹೊಸ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿತು. ಮೀನಾಕ್ಷಿಪುರಂನಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಿಂಘಾಲ್ ರೂಪಿಸಿದ ‘ಪರಿವರ್ತನ್’ (ಘರ್ ವಾಪಸಿ) ಅಭಿಯಾನಕ್ಕೆ ಧರ್ಮ ಸಂಸತ್ತಿನ ಸಂತರು ಸಂಪೂರ್ಣ ಧಾರ್ಮಿಕ ಮಾನ್ಯತೆ ನೀಡಿದರು.
ಹಿಂದೆ ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿಕೊಳ್ಳಲು ಅತ್ಯಂತ ಸರಳ ವ್ಯವಸ್ಥೆಯನ್ನು ಆಚರಣೆಗೆ ತಂದರು. ಈ ಕ್ರಾಂತಿಕಾರಕ ನಿಲುವಿನಿಂದಾಗಿ ಮಧ್ಯಪ್ರದೇಶ, ಒಡಿಶಾ, ಬಿಹಾರ ಮತ್ತು ರಾಜಸ್ಥಾನದ ಬುಡಕಟ್ಟು ಪ್ರದೇಶಗಳಲ್ಲಿ ಮತಾಂತರಗೊಂಡಿದ್ದ ನೂರಾರು ಕುಟುಂಬಗಳು ಯಾವುದೇ ಸಾಮಾಜಿಕ ಬಹಿಷ್ಕಾರದ ಭಯವಿಲ್ಲದೆ ಮರಳಿ ತಮ್ಮ ಮೂಲ ಸಂಸ್ಕೃತಿಗೆ ಮರಳುವ ಪ್ರಕ್ರಿಯೆಯು ವ್ಯವಸ್ಥಿತವಾಗಿ ಆರಂಭವಾಯಿತು.
ಭಾರತೀಯ ಸಮಾಜದ ನ್ಯೂನತೆಗಳನ್ನೇ ಬಳಸಿಕೊಂಡು ಸಮಾಜವನ್ನು ಬೇಧಿಸುವ ಶಕ್ತಿಗಳ ವಿರುದ್ಧದ ಸಮರ ಒಂದು ಕಡೆಯಾದರೆ, ಭಾರತೀಯ ಸಮಾಜದಲ್ಲಿರುವ ಅನೇಕ ಕೆಟ್ಟ ಆಚರಣೆಗಳ ಮೂಲಕ ಸಮಾಜದೊಳಗೆ ಸೃಷ್ಟಿಯಾಗಿರುವ ಕಂದಕವನ್ನು ಮುಚ್ಚಿ ಸಮಾಜದ ಕೆಳವರ್ಗದ ನಂಬಿಕೆ ಉಳಿಸಿಕೊಳ್ಳುವುದು ಮತ್ತೊಂದು ರೀತಿಯ ಸವಾಲಾಗಿತ್ತು. ಎಲ್ಲಿಯ ತನಕ ಹಿಂದೂ ಸಮಾಜ ಒಟ್ಟಾಗಿ ಕಾರ್ಯೋನ್ಮುಖವಾಗುವುದಿಲ್ಲವೋ ಅಲ್ಲಿಯ ತನಕ ಈ ಇಬ್ಬಗೆ ಸವಾಲನ್ನು ಯಾವುದೇ ಸಮಾಜ ಎದುರಿಸಲು ಸಾಧ್ಯವಿಲ್ಲ.
ಅಶೋಕ್ ಸಿಂಘಾಲ್ ಅವರು ಭಾರತವನ್ನು ಅಂತಹ ಸವಾಲಿನ ವಿರುದ್ಧ ಸಂಘಟಿಸಲು ಮಾಡಿದ ಅವರ ಐತಿಹಾಸಿಕ ಕೆಲಸಕ್ಕೆ ಸನಾತನ ಭಾರತ ಅವರಿಗೆ ಯಾವತ್ತಿಗೂ ಚಿರಋಣಿ.