ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ವಿದೇಶವಾಸಿಗೆ ಆರು ವರುಷ, ಚರ್ಚಾವಾಸಿಗೆ ಒಂದು ನಿಮಿಷ...!

ಇತ್ತೀಚೆಗೆ ಕೆಲವು ಚರ್ಚೆಗಳನ್ನು ನೀವು ನೋಡಬೇಕು, ಚರ್ಚೆಯ ವಿಷಯವೇ ಒಂದು, ಚರ್ಚೆ ಸಾಗುವುದೇ ಇನ್ನೊಂದು ದಿಕ್ಕಿನಲ್ಲಿ. ಗಂಟೆಗಟ್ಟಲೆ ನಡೆಯುವ ಚರ್ಚೆಯ ನಂತರ ಫಲಿತಾಂಶ ಏನು ಎಂದರೆ, ದೊಡ್ಡ ಸೊನ್ನೆ. ಚರ್ಚೆಯ ಕೊನೆಯಲ್ಲಿ ಯಾವುದೇ ನಿರ್ಣಯವಾಗದಿದ್ದರೂ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ‘ನಾವೇ ಗೆದ್ದೆವು’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಂಡು ಸಮಾಧಾನಪಟ್ಟುಕೊಳ್ಳುತ್ತಾರೆ.

ವಿದೇಶವಾಸಿಗೆ ಆರು ವರುಷ, ಚರ್ಚಾವಾಸಿಗೆ ಒಂದು ನಿಮಿಷ...!

-

ವಿದೇಶವಾಸಿ

ಕೆಲವರು ಚರ್ಚೆಯಲ್ಲಿ ಭಾಗವಹಿಸುವುದು ತಮ್ಮ ಆತ್ಮರತಿಗಾಗಿ. ಇನ್ನು ಕೆಲವರಿಗೆ, ತಾವೂ ಈ ಸಮಾಜದಲ್ಲಿ ಇದ್ದೇವೆ, ಇನ್ನೂ ಬದುಕಿದ್ದೇವೆ, ಪ್ರಸ್ತುತರಾಗಿದ್ದೇವೆ ಎಂದು ತೋರಿಸಿ ಕೊಳ್ಳುವುದಕ್ಕಾಗಿ. ಅದೂ ಅವರಿಗೆ ನೆನಪಾದಾಗ ಮಾತ್ರ. ಅವರು ಕರೆದಾಗ, ಅವರು ಕೊಟ್ಟ ವಿಷಯದ ಕುರಿತು, ಚರ್ಚಿಸಬೇಕು ಅಥವಾ ಅಭಿಪ್ರಾಯ ಹೇಳಬೇಕು. ಅದೂ ಅವರಿಗೆ ಸಮಾಧಾನವಾಗುವಂತೆ! ಕತ್ತೆ ಬಾಲ, ಕುದುರೆ ಜುಟ್ಟು.

ಚರ್ಚೆ, ಚರ್ಚೆ ಚರ್ಚೆ... ಎಲ್ಲಿ ನೋಡಿದರೂ ಚರ್ಚೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು, ಸುದ್ದಿ ವಾಹಿನಿಗಳು, ಅಂಗಡಿ-ಮುಂಗಟ್ಟು, ಊರು ಬಾಗಿಲಿನಲ್ಲಿರುವ ಅಶ್ವತ್ಥಮರದ ಕಟ್ಟೆ, ಎಲ್ಲ ಕಡೆಯೂ ಚರ್ಚೆಯೋ ಚರ್ಚೆ. ಫಲಿತಾಂಶ, ಪರಿಣಾಮ ಏನು? ಲೋಕಸಭೆಯಾಗಲಿ, ರಾಜ್ಯಸಭೆಯಗಲಿ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಆಗಲಿ, ಅಷ್ಟೆಲ್ಲ ಯಾಕೆ? ಯಾವುದೇ ಸಂಘ-ಸಂಸ್ಥೆಯಲ್ಲಿ ನಡೆಯುವ ಚರ್ಚೆಯೇ ಆದರೂ ಕೊನೆಗೆ ನಿರ್ಣಯವಾಗುವುದು ಸಂಖ್ಯಾಬಲದ ಮೇಲೆಯೇ. ಒಂದು ವಿಷಯ ಮಂಡಿಸಿ ಅದರ ಮೇಲೆ ಒಂದು ಗಂಟೆ ಚರ್ಚೆ ನಡೆದರೂ ಅಷ್ಟೇ, ಒಂದು ವರ್ಷ ಚರ್ಚೆ ನಡೆದರೂ ಅಷ್ಟೇ, ಬಹುತೇಕ ಚರ್ಚೆಗಳಲ್ಲಿ ನಿರ್ಣಾಯಕರುಗಳೇ ಇಲ್ಲ, ಸಂಖ್ಯಾಬಲವೇ ನಿರ್ಣಾಯಕ.

ಇತ್ತೀಚೆಗೆ ಕೆಲವು ಚರ್ಚೆಗಳನ್ನು ನೀವು ನೋಡಬೇಕು, ಚರ್ಚೆಯ ವಿಷಯವೇ ಒಂದು, ಚರ್ಚೆ ಸಾಗುವುದೇ ಇನ್ನೊಂದು ದಿಕ್ಕಿನಲ್ಲಿ. ಗಂಟೆಗಟ್ಟಲೆ ನಡೆಯುವ ಚರ್ಚೆಯ ನಂತರ ಫಲಿತಾಂಶ ಏನು ಎಂದರೆ, ದೊಡ್ಡ ಸೊನ್ನೆ. ಚರ್ಚೆಯ ಕೊನೆಯಲ್ಲಿ ಯಾವುದೇ ನಿರ್ಣಯ ವಾಗದಿದ್ದರೂ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ‘ನಾವೇ ಗೆದ್ದೆವು’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಸಮಾಧಾನಪಟ್ಟುಕೊಳ್ಳುತ್ತಾರೆ.

ಅದೆಷ್ಟೋ ಬಾರಿ ಚರ್ಚೆಯ ನಂತರ, ಆ ಒಂದು ವಿಷಯಕ್ಕೆ ಅಷ್ಟೇಲ್ಲ ಚರ್ಚೆಯ ಅಗತ್ಯ ವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಯಾವುದೋ ಒಂದು ಕಾನೂನು ತಿದ್ದುಪಡಿಗೆ ಸದನದ ಒಳಗೆ ಚರ್ಚೆ, ಆ ಕುರಿತಾಗಿ ಬೆಳಗಿಂದ ರಾತ್ರಿಯವರೆಗೆ ಸುದ್ದಿವಾಹಿನಿಯಲ್ಲಿ ಚರ್ಚೆ, ಅದೇ ವಿಷಯದ ಕುರಿತಾಗಿ, ಕೀಳುಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಾರ ಚರ್ಚೆ.

ಇದನ್ನೂ ಓದಿ:Kiran Upadhyay Column: ಅನ್ವೇಷಕರು ಯಾರೋ, ಅನುಭವಿಸೋರು ಯಾರೋ...

ಚರ್ಚೆಯ ಹೆಸರಿನಲ್ಲಿ ಬೈಗಳು. ಇದಕ್ಕೆಲ್ಲ ಏನಾದರೂ ಅರ್ಥವಿದೆಯೇ? ಯಾವ ಪ್ರಯೋ ಜನ ಇಲ್ಲದಿದ್ದರೂ ಈ ರೀತಿಯ ಚರ್ಚೆ ಸಾಕಷ್ಟು ಜನರ ಅಹಂಕಾರವನ್ನಂತೂ ತೃಪ್ತಿ ಪಡಿಸುತ್ತದೆ. ಇವರೆಲ್ಲ ಚರ್ಚಾಸುರರು ಅಥವಾ ಚರ್ಚೆಯಲ್ಲಿಯೇ ಬದುಕು ಕಳೆಯುವ ‘ಚರ್ಚಾವಾಸಿ’ಗಳು.

ಕೆಲವರು ಚರ್ಚೆಯಲ್ಲಿ ಭಾಗವಹಿಸುವುದು ತಮ್ಮ ಆತ್ಮರತಿಗಾಗಿ. ಇನ್ನು ಕೆಲವರಿಗೆ, ತಾವೂ ಈ ಸಮಾಜದಲ್ಲಿ ಇದ್ದೇವೆ, ಇನ್ನೂ ಬದುಕಿದ್ದೇವೆ, ಪ್ರಸ್ತುತರಾಗಿದ್ದೇವೆ ಎಂದು ತೋರಿಸಿ ಕೊಳ್ಳುವುದಕ್ಕಾಗಿ. ಅದೂ ಅವರಿಗೆ ನೆನಪಾದಾಗ ಮಾತ್ರ. ಅವರು ಕರೆದಾಗ, ಅವರು ಕೊಟ್ಟ ವಿಷಯದ ಕುರಿತು, ಚರ್ಚಿಸಬೇಕು ಅಥವಾ ಅಭಿಪ್ರಾಯ ಹೇಳಬೇಕು. ಅದೂ ಅವರಿಗೆ ಸಮಾಧಾನವಾಗುವಂತೆ!

ಕತ್ತೆ ಬಾಲ, ಕುದುರೆ ಜುಟ್ಟು. ಇತ್ತೀಚೆಗೆ ಫೇಸ್‌ಬುಕ್, ಯೂಟ್ಯೂಬ್‌ನಂಥ ಸೋಷಿಯಲ್ ಮೀಡಿಯಾದ ಹಾವಳಿ ಹೆಚ್ಚಾದ ನಂತರವಂತೂ ಇದು ಅತಿರೇಕಕ್ಕೆ ಹೋಗಿದೆ. ಸಾಲದು ಎಂಬಂತೆ ಈ ಚಾಳಿ ವಾಟ್ಸಾಪ್ ಗ್ರೂಪ್‌ಗಳಿಗೂ ಪಸರಿಸಿದ್ದು, ಅನವಶ್ಯಕ ಚರ್ಚೆಗಳಿಂದಾಗಿ ಗ್ರೂಪ್‌ಗಳೂ ಅಸ್ತಿತ್ವ ಕಳೆದುಕೊಂಡಿವೆ. ಒಬ್ಬರೋ-ಇಬ್ಬರೋ ಕಾಂಜಿ-ಪೀಂಜಿ ಕೊತ್ವಾಲ ರಿಂದಾಗಿ ಒಳ್ಳೊಳ್ಳೆ ಗ್ರೂಪ್‌ಗಳೂ ಹಳ್ಳ ಹಿಡಿದ ಉದಾಹರಣೆಗಳಿವೆ.

ಹಾಗಾದರೆ ಚರ್ಚೆ ನಡೆಯಲೇಬಾರದೇ? ಯಾವುದೇ ಒಂದು ವಿಷಯದ ಕುರಿತಾಗಿ ಪರ-ವಿರೋಧಗಳು ಇರಲೇಬಾರದೇ? ಖಂಡಿತ ಬೇಕು. ಈ ಜಗತ್ತು ಇಷ್ಟು ಮುಂದುವರಿದಿರುವು ದಕ್ಕೆ ಕಾರಣಗಳಲ್ಲಿ ಚರ್ಚೆಯೂ ಒಂದು. ಸಿದ್ಧಾಂತ, ಅವಶ್ಯಕತೆ, ಅನ್ವೇಷಣೆ, ಪ್ರಯೋಗ, ಫಲಿತಾಂಶ, ಬಳಕೆ, ತರ್ಕ, ತರ್ಕದ ಒಂದು ಭಾಗವಾಗಿ ಚರ್ಚೆ, ಇವೆಲ್ಲವುಗಳಿಂದ ಜಗತ್ತು ಇಂದು ಈ ಮಟ್ಟಕ್ಕೆ ಬಂದು ನಿಂತಿದೆ.

Debate

ಆದರೆ ಇವೆಲ್ಲ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ಅದಕ್ಕೊಂದು ಬೆಲೆ, ಒಂದು ನೆಲೆ. ಅದಕ್ಕೊಂದು ಗಾಂಭೀರ್ಯ, ಘನತೆ. ಹೇಗೆ, ಏಕೆ ಎಂದು ಹೇಳುತ್ತೇನೆ. ಅದಕ್ಕೂ ಮೊದಲು, ‘ವಿದೇಶವಾಸಿ’ ಅಂಕಣ ಬರೆಯಲು ಆರಂಭಿಸಿ ಆರು ವರ್ಷಗಳಾದವು. ಈ ನಡುವೆ ಏನಿಲ್ಲ ವೆಂದರೂ ಐವತ್ತು ಬೇರೆ ಬೇರೆ ವಿಷಯಗಳ ಕುರಿತಾಗಿ ಬರೆಯುವಂತೆ ಜನರು ಸೂಚಿಸಿ ದ್ದಾರೆ.

ಅವರ ಪ್ರೀತಿ, ವಿಶ್ವಾಸಕ್ಕೆ ಋಣಿ. ಆದರೆ, ನನಗೆ ಸ್ವಲ್ಪವೂ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಬರೆಯಲು ಸಾಧ್ಯವಿಲ್ಲ ಎಂಬುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ಭೂಮಿಯ ಮೇಲಿರುವ ಪ್ರತಿಯೊಬ್ಬನಿಗೂ ಪ್ರತಿಯೊಂದು ವಿಷಯವೂ ತಿಳಿದಿರಬೇಕೆಂದೇನೂ ಇಲ್ಲ.

ಅಂಕಣ ಎಂದರೆ ಪತ್ರಿಕೆಯಲ್ಲಿ ಒಬ್ಬ ಬರಹಗಾರನಿಗೆ ನಿಯತವಾಗಿ ಸಿಗುವ ಜಾಗ. ‘ಅಂಕಣ’ ಎಂಬ ಪದಕ್ಕೆ ಎರಡು ಕಂಬಗಳ ನಡುವಿನ ಸ್ಥಳ ಎಂಬ ಅರ್ಥವೂ ಇದೆ. ನನ್ನ ಪಾಲಿಗೆ ಅಂಕಣ ಎಂದರೆ ಅದು ನನ್ನ ಮನೆಯ ಅಂಗಳದಂತೆ. ನನ್ನ ಮನೆಯ ಅಂಗಳವನ್ನು ನಾನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇನೆಯೋ, ಅಂಕಣವನ್ನೂ ಅಷ್ಟೇ ಶುದ್ಧವಾಗಿ ಇಟ್ಟುಕೊಳ್ಳಬೇಕು.

ಮನೆಯಂಗಳದಲ್ಲಿ ಯಾವ ಗಿಡವಿರಬೇಕು, ಎಷ್ಟಿರಬೇಕು, ಎಲ್ಲಿರಬೇಕು ಎಂದು ನಿರ್ಣಯಿಸಬೇಕಾದವನು ನಾನು. ಯಾರದ್ದೋ ಒತ್ತಾಯಕ್ಕೆ, ಯಾವುದನ್ನೋ ತಂದು ನಮ್ಮ ಮನೆಯ ಅಂಗಳದಲ್ಲಿ ನೆಡುವುದಿಲ್ಲ, ನೆಡಲೂಬಾರದು ಅಲ್ಲವೇ? ಹಾಗೆಯೇ ಯಾರೋ ಹೇಳಿದರು ಎಂದು ಯಾವುದೋ ವಿಷಯವನ್ನು ಸ್ವಲ್ಪವೂ ತಿಳಿಯದೇ, ಮನಸ್ಸಿಲ್ಲದೇ ಬರೆಯಲೂಬಾರದು.

ಹಾಗೆಯೇ, ಒಳ್ಳೆಯ ವಿಷಯ ಸಿಕ್ಕರೆ ಬಿಡಲೂಬಾರದು. ಅದರೊಂದಿಗೆ, ಅಂಕಣಕ್ಕೆ ಸಂಬಂಧಿಸಿದಂತೆ ನನ್ನದೇ ಆದ ಒಂದಷ್ಟು ನಿಯಮಗಳನ್ನು ನನಗೆ ನಾನೇ ವಿಧಿಸಿ ಕೊಂಡಿದ್ದೇನೆ. ಇಲ್ಲಿಯವರೆಗೂ ಆ ಚೌಕಟ್ಟಿನ ಪರಿಧಿಯನ್ನು ಮೀರದೆಯೇ ತ್ರಿಶತಕದ ಹೊಸ್ತಿಲಲ್ಲಿದ್ದೇನೆ.

ಅಂಕಣ ಬರಹಗಳು ಅಂಕಣಕಾರನ ಅನಿಸಿಕೆ ಅಥವಾ ಅಭಿಪ್ರಾಯವಾಗಿರುತ್ತವೆ. ಅದಕ್ಕೆ ಪ್ರತಿಯಾಗಿ ಓದುಗರೂ ತಮ್ಮ ಅಭಿಪ್ರಾಯ ತಿಳಿಸುತ್ತಾರೆ, ಅನಿಸಿಕೆಗಳನ್ನು ವ್ಯಕ್ತಪಡಿಸು ತ್ತಾರೆ, ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ, ಕೆಲವು ಪ್ರಶ್ನೆ ಉದ್ಭವಿಸಿದರೆ ಅದನ್ನೂ ಕೇಳುತ್ತಾರೆ.

ಅದು ಸಹಜ. ಒಂದು ಮಿತಿಯ ಒಳಗಿದ್ದರೆ, ಭಾಷೆ ಸಾಧುವಾಗಿದ್ದರೆ, ಪ್ರಾಮಾಣಿಕ ಕಳಕಳಿ ಯಿಂದ ಯಾರು ಏನೇ ಕೇಳಿದರೂ, ತಿಳಿದುಕೊಳ್ಳಬೇಕೆಂದಿದ್ದರೂ ಒಳ್ಳೆಯದೇ, ಅದಕ್ಕೆ ಸ್ವಾಗತ. ಸಾಧ್ಯವಾದಷ್ಟೂ ನಾನು ಪ್ರತಿಕ್ರಿಯಿಸುತ್ತೇನೆ. ಆದರೆ ಕೆಲವೊಮ್ಮೆ ಕಾರಣಾಂತರ ದಿಂದ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ.

ಅದಕ್ಕಾಗಿ ವಿಷಾದವೂ ಇದೆ. ಇನ್ನು ಕೆಲವೊಮ್ಮೆ ಬೇಕೆಂದೇ ಉತ್ತರಿಸದೇ ಇದ್ದದ್ದೂ ಇದೆ. ನನ್ನ ಅಭಿಪ್ರಾಯವನ್ನು ಹೇಳಲು ನಾನು ಹೇಗೆ ಮುಕ್ತನೋ, ಹಾಗೆಯೇ ಉಳಿದವರೂ ಅವರ ಅಭಿಪ್ರಾಯ ಹೇಳಲು ಮುಕ್ತರು ಎಂದು ನಂಬಿದವ ನಾನು. ಹಾಗಾಗಿ ಅಂಥವರ ಕುರಿತಾಗಿ ಯಾವ ದ್ವೇಷವಾಗಲಿ, ಬೇಸರವಾಗಲಿ ಇಲ್ಲ.

ನಾನು ಅಂತಲ್ಲ, ಯಾರೂ ಇಟ್ಟುಕೊಳ್ಳಬಾರದು. ಅಸಭ್ಯ ಭಾಷೆ ಬಳಸಿದರೆ, ವಿತಂಡ ವಾದಕ್ಕಿಳಿದರೆ, ಅನವಶ್ಯಕ ಚರ್ಚೆಗೆ ಎಳೆದರೆ, ಹೆಚ್ಚಾಗಿ ಉತ್ತರಿಸುವುದಿಲ್ಲ, ಪ್ರತಿಕ್ರಿಯಿಸು ವುದೂ ಇಲ್ಲ. ಏಕೆಂದರೆ ಅಂಥವರನ್ನು ಸಮಾಧಾನಪಡಿಸಲು ಬ್ರಹ್ಮನಿಂದಲ್ಲ, ಯಾವ ಸಾಮಾಜಿಕ ಜಾಲತಾಣದ ಮಾಲೀಕನಿಂದಲೂ ಸಾಧ್ಯವಿಲ್ಲ!

ಅಂಥವರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಜನ ತಮ್ಮ ಇರುವಿಕೆ ತೋರಿಸಲು ಮತ್ತು ತಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸಲು ಹಾತೊರೆಯುತ್ತಿರುವವರು. ಯಾವುದೇ ರೀತಿಯ ಸಮಜಾಯಿಷಿ ನೀಡಿದರೂ ಅವರು ಒಪ್ಪುವುದಿಲ್ಲ. ಕಾರಣ, ಅಂಥವರು ತಮಗೆ ತಿಳಿದಿದ್ದೇ ನಿಜ, ತಾವು ಹೇಳಿದ್ದೇ ಸರಿ, ಯಾವ ಕಾರಣಕ್ಕೂ ತಾವು ಸೋಲಬಾರದು ಎಂದೇ ಇರುವವರು. ಅಂಥವರಿಗೆ ನಾನು ಬಳಸುವ ಸೂತ್ರ ಒಂದೇ, ’ಅಹಂಕಾರಕ್ಕೆ ಉದಾಸೀನದ ಮದ್ದು!’ ಅಂಥವರು ನನ್ನನ್ನು ಚರ್ಚೆಗೆ ಬಾರದ ಹೇಡಿ ಅಂದುಕೊಂಡರೂ ಅಡ್ಡಿಯಿಲ್ಲ.

ಅಂಥವರೊಂದಿಗೆ ವಾದಕ್ಕೆ, ಚರ್ಚೆಗೆ ಇಳಿಯುವುದು ಎಂದರೆ, ಸಗಣಿಯೊಂದಿಗೆ ಸರಸ ವಾಡಿದಂತೆ ಎಂಬುದು ನನ್ನ ಅನಿಸಿಕೆ. ಇದು ಅವರಿಗೆ ಅರ್ಥವಾಗದಿದ್ದರೂ ಸರಿ. ಅಂಥವರ ಅಹಂಕಾರಕ್ಕೆ ಒಂದು ನಿಮಿಷದ ಮೌನ!

ಹಾಗಾದರೆ ಚರ್ಚೆ ಎನ್ನುವುದು ನಿನ್ನೆ ಮೊನ್ನೆ ಹುಟ್ಟಿಕೊಂಡದ್ದೇ? ಫೇಸ್‌ಬುಕ್, ವಾಟ್ಸಾಪ್ ನಂತರ ಆರಂಭವಾದದ್ದೇ? ಖಂಡಿತ ಅಲ್ಲ. ಚರ್ಚೆಗಳು ಎಂದು ಆರಂಭವಾದವು ಎಂದು ಹುಡುಕುತ್ತ ಹೋದರೆ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚರ್ಚೆಗಳಾಗುತ್ತಿದ್ದ ವಿಷಯ ತಿಳಿದುಬರುತ್ತದೆ. ಬಹುತೇಕ ಚರ್ಚೆಗಳು ಧಾರ್ಮಿಕ, ನೈತಿಕ, ತಾತ್ತ್ವಿಕ, ಸೈದ್ಧಾಂತಿಕ ವಿಷಯಗಳ ಮೇಲೆ ನಡೆಯುತ್ತಿತ್ತಂತೆ. ಆ ಚರ್ಚೆಗಳೆಲ್ಲ ಜ್ಞಾನ ಸಂಗ್ರಹಕ್ಕಾಗಿ ಅಥವಾ ಜ್ಞಾನವೃದ್ಧಿಗಾಗಿ ನಡೆಯುತ್ತಿದ್ದಂಥವು. ಇದನ್ನು ‘ವಾದವಿದ್ಯೆ’ ಎಂದು ಕರೆಯ ಲಾಗುತ್ತಿತ್ತಂತೆ.

ಅವೆಲ್ಲವೂ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಚರ್ಚೆಗಳು. ಆ ಕಾಲದಲ್ಲಿಯೇ ಇಂಥ ಚರ್ಚೆಯಲ್ಲಿ ಮಹಿಳೆಯರೂ ಭಾಗವಹಿಸುತ್ತಿದ್ದರಂತೆ. ಗಾರ್ಗಿಯಂಥ ಮಹಿಳಾ ವಿದ್ವಾಂಸರು ಇದಕ್ಕೆ ಉದಾಹರಣೆ. ಅಂದರೆ, ಆ ಕಾಲದಿಂದಲೂ ಚರ್ಚೆಯ ವಿಷಯ ಬಂದಾಗ ಲಿಂಗಭೇದವಿರಲಿಲ್ಲ ಎಂದು ಸಾಬೀತಾಯಿತು.

ಇನ್ನೊಂದು, ಆಗ ನಡೆಯುತ್ತಿದ್ದ ಚರ್ಚೆಗಳನ್ನೆಲ್ಲ ದಾಖಲಿಸಿ, ಆಯಾ ವಿಭಾಗಗಳೊಂದಿಗೆ ವ್ಯವಹರಿಸಲು ಕೈಪಿಡಿ ತಯಾರಿಸಲಾಗುತ್ತಿತ್ತು. ಇಂಥ ಚರ್ಚೆಗಳಿಂದಲೇ ಭಾರತದ ತರ್ಕ ಮತ್ತು ಸಂಶೋಧನೆಗಳ ಸಂಪ್ರದಾಯ ವಿಕಸನಗೊಂಡಿತು, ಅಭಿವೃದ್ಧಿಹೊಂದಿತು ಎಂದರೆ ತಪ್ಪಾಗಲಿಕ್ಕಿಲ್ಲ.

ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿಯೇ ಸನ್ಯಾಸಿಗಳು ಮತ್ತು ಪುರೋಹಿತರು ಚರ್ಚೆ ನಡೆಸುವ ಕಲೆಯಲ್ಲಿ ನಿಪುಣರಾಗಿದ್ದರು ಎಂದು ತಿಳಿದುಬರುತ್ತದೆ. ಆ ಕಾಲದ ಹಲವಾರು ಚರ್ಚಾ ಕೈಪಿಡಿಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ. ಆಯುರ್ವೇದದ ಎರಡು ಪಠ್ಯಗಳಾದ ‘ಚರಕ ಸಂಹಿತ’ ಮತ್ತು ‘ಸುಶ್ರುತ ಸಂಹಿತ’ ಗ್ರಂಥಗಳು ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಉಳಿದುಕೊಂಡಿವೆ.

ಚರಕ ಸಂಹಿತದಲ್ಲಿ ವೈದ್ಯರ ತರಬೇತಿ, ರೋಗ, ಆಹಾರ, ಪೋಷಣೆ, ಔಷಧಿ ಇತ್ಯಾದಿಗಳ ಜತೆ ನೀತಿಶಾಸ ಮತ್ತು ಚರ್ಚೆಯ ತತ್ವಗಳ ಕುರಿತಾದ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ ಚರ್ಚೆಯಲ್ಲಿ ಎರಡು ವಿಧಗಳು. ಒಂದು, ಶಾಂತಿಯುತ ಚರ್ಚೆ, ಇನ್ನೊಂದು ಪ್ರತಿಕ್ರಿಯಾಶೀಲ ಚರ್ಚೆ.

ಶಾಂತಿಯುತ ಚರ್ಚೆ ಎಂದರೆ, ಒಂದು ವಿಷಯದ ಕುರಿತಾದ ಮಂಡನೆ. ಪ್ರತಿಕ್ರಿಯಾಶೀಲ ಚರ್ಚೆ ಎಂದರೆ, ಆ ಮಂಡನೆಗೆ ಪ್ರತಿಕ್ರಿಯಿಸುವ ಬಗೆ. ಪ್ರತಿಕ್ರಿಯೆ ನೀಡುವ ವರ್ಗದವರನ್ನು ಶ್ರೇಷ್ಠ, ಸಮಾನ ಮತ್ತು ಕೀಳು ಹೀಗೆ ವರ್ಗೀಕರಿಸಲಾಗುತ್ತಿತ್ತಂತೆ. ಇದರೊಂದಿಗೆ ಚರ್ಚಿಸು ವವರನ್ನಷ್ಟೇ ಅಲ್ಲದೆ, ವೀಕ್ಷಿಸುವ ಸಭೆಯ ಕುರಿತಾಗಿಯೂ ಅದರಲ್ಲಿ ಉಲ್ಲೇಖವಿದೆ.

ಸಭೆಯಲ್ಲಿ, ಕಲಿತವರು ಅಥವಾ ಜ್ಞಾನಿಗಳು ಮತ್ತು ಅಜ್ಞಾನಿಗಳು ಎಂದು ಎರಡು ರೀತಿಯಲ್ಲಿ ವರ್ಗೀಕರಿಸಲಾಗುತ್ತಿತ್ತಂತೆ. ಇವುಗಳಲ್ಲಿಯೂ ಸ್ನೇಹಪರ, ಪ್ರತಿಕೂಲ ಅಥವಾ ಅಸಡ್ಡೆ ವರ್ಗದ ಜನರು ಎಂದು ಪುನಃ ವರ್ಗೀಕರಿಸಲಾಗುತ್ತಿತ್ತಂತೆ. ಪ್ರತಿಕ್ರಿಯಿಸುವವರ ಸ್ವರೂಪವನ್ನು ಅವಲಂಬಿಸಿ ಸಭೆಯಲ್ಲಿ ಚರ್ಚೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸಲಹೆಗಳೂ ಇವೆಯಂತೆ. ಈ ಕುರಿತಾಗಿಯೇ ಗ್ರಂಥದಲ್ಲಿ ನಲವತ್ತನಾಲ್ಕು ಅಂಶಗಳ ಪಟ್ಟಿ ಇದೆ ಎಂದು ತಿಳಿದುಬರುತ್ತದೆ. ಅಂದರೆ ಚರ್ಚೆಗೆ ಆ ಕಾಲದಲ್ಲಿ ನೀಡುತ್ತಿದ್ದ ಮಹತ್ವ ಏನು, ಎಷ್ಟು ಎಂಬುದರ ಅರಿವಾಗುತ್ತದೆ.

ಹಾಗೆಯೇ ಚರ್ಚೆಯಾಗಲಿ, ಅಭಿಪ್ರಾಯವಾಗಲಿ, ಉಪದೇಶವೇ ಆಗಲಿ ವಿಷಯ, ಸ್ಥಳ ಮತ್ತು ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ನ್ಯಾಯಾಲಯದಲ್ಲಿ ನಡೆಯುವ ಚರ್ಚೆಯೇ ಬೇರೆ, ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಚರ್ಚೆಯೇ ಬೇರೆ, ವಿಜ್ಞಾನದ ಚರ್ಚೆಯೇ ಬೇರೆ. ಚರ್ಚೆಯ ಕುರಿತು ಒಂದು ಲೇಖನದ, ವಾಟ್ಸಾಪ್‌ನ, ಫೇಸ್‌ಬುಕ್‌ನ ಹೇಳಿ ಮುಗಿಸಲು ಸಾಧ್ಯವಿಲ್ಲ.

ಚರ್ಚೆ ಎನ್ನುವುದು ಘನವಾದ ವಿಷಯವೇ ಹೊರತು ಮಕ್ಕಳಾಟಿಕೆಯಲ್ಲ. ಆದರೆ ಈಗ? ಎಲ್ಲರೂ ವಿದ್ವಾಂಸರು, ಎಲ್ಲರೂ ಸ್ವಯಂಘೋಷಿತ ಪಂಡಿತೋತ್ತಮರು. ನಿಮಗೆ ಹಾಗನ್ನಿ ಸುವುದಿಲ್ಲವೇ? ಒಮ್ಮೆ ಫೇಸ್ ಬುಕ್, ಎಕ್ಸ್‌ (ಟ್ವಿಟರ್) ತೆಗೆದು ನೋಡಿ. ಸ್ವಯಂ ಘೋಷಿತ, ಮುಸುಕುಧಾರಿ ಪಂಡಿತರ ಹಾವಳಿ, ತನ್ನದೊಂದು ತೂರಿಸುವ ತೆವಲು. ಅದೂ ಫೇಕ್ ಐಡಿಯಲ್ಲಿ. ತನ್ನ ಪರಿಚಯವನ್ನೇ ಹೇಳಿಕೊಳ್ಳಲಾಗದವರಲ್ಲಿ ಯಾವ ಚರ್ಚೆ? ಅವರಿಂದ ಏನು ಉಪದೇಶ? ಇತಿಹಾಸದ ಘಟನೆಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ.

ನನ್ನ ಬಾಲ್ಯದಿಂದಲೂ ಕೇಳಿಕೊಂಡು ಬಂದ ಚರ್ಚೆ, ಚಹಾ-ಕಾಫಿ ಆರೋಗ್ಯಕ್ಕೆ ಒಳ್ಳೆಯ ದೋ ಕೆಟ್ಟದ್ದೋ, ಕೋಳಿ ಮೊಟ್ಟೆ ದೇಹಕ್ಕೆ ಒಳ್ಳೆಯದೋ ಕೆಟ್ಟದ್ದೋ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಆಯುರ್ವೇದವೋ, ಅಲೋಪತಿಯೋ ಎನ್ನುವುದೇ ಇನ್ನೂ ಬಗೆಹರಿದಿಲ್ಲ.

ನಾನು ಸಾಯುವುದರೊಳಗೆ ಇದಕ್ಕೆಲ್ಲ ಉತ್ತರ ಸಿಗುವ ಯಾವ ಲಕ್ಷಣವೂ ಕಾಣುವುದಿಲ್ಲ. ಹಾಗಿರುವಾಗ, ಯಾವುದೋ ಚಿತ್ರನಟಿ ಸಾವಿರ ವರ್ಷದ ಹಿಂದಿನ ಇತಿಹಾಸದ ಕುರಿತು ಹೇಳಿಕೆ ನೀಡಿದ್ದರ ಬಗ್ಗೆಯಾಗಲಿ, ಕ್ರೀಡಾಪಟುವೊಬ್ಬ ಅಂತರಿಕ್ಷದ ಬಗ್ಗೆ ಆಡಿದ ಮಾತಿಗಾ ಗಲಿ ಅಥವಾ ಯಾವುದೋ ಊರಿನ ಯಾವುದೋ ಓಣಿಯಲ್ಲಿ ಕೈಗಾಡಿ ದೂಡುವವನೊಬ್ಬ ಯಾವುದೋ ದೇಶದ ನೀತಿಯ ಬಗ್ಗೆ ನೀಡಿದ ಹೇಳಿಕೆಯ ಕುರಿತು ಅಭಿಪ್ರಾಯ ತಿಳಿಸಿ ಎಂದರೆ, ಚರ್ಚೆಗೆ ಬನ್ನಿ ಎಂದು ಕರೆದರೆ, ಆಗಲೇ ಹೇಳಿದ್ದಾನಲ್ಲ- ಕತ್ತೆ ಬಾಲ, ಕುದುರೆ ಜುಟ್ಟು!