Yashaswi Talwar Column: ಪಶ್ಚಿಮ ಬಂಗಾಳ ಚುನಾವಣೆ: ಪ್ರಜಾಪ್ರಭುತ್ವದ ಮತ್ತೊಂದು ಅಗ್ನಿಪರೀಕ್ಷೆಯಾ?
ನಮ್ಮ ದೇಶವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆಯುವುದು ನಿಮಗೆ ಗೊತ್ತಿರು ವಂಥದ್ದೇ. ಮಾತ್ರವಲ್ಲದೆ, ಪ್ರಜಾಪ್ರಭುತ್ವದ ತಾಯಿ ಎಂದೂ ಕರೆಯಲ್ಪಡುವ ಚುನಾವಣೆ ಯನ್ನು, ಲೋಕಸಭೆ ಮತ್ತು ವಿಧಾನಸಭೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಬ್ಬವೆಂದೂ ಪರಿಗಣಿಸಲಾಗುತ್ತದೆ
-
ಕದನ ಕುತೂಹಲ
ಯಶಸ್ವಿ ತಲ್ವಾರ್
ಬಹುತೇಕರಿಗೆ ಈಗಾಗಲೇ ಗೊತ್ತಿರುವಂತೆ, ಭಾರತದಲ್ಲೀಗ ಮತ್ತೆ ‘ಚುನಾವಣಾ ಜ್ವರ’ ಕಾಣಿಸಿ ಕೊಂಡಿದೆ. ಭಾರತದ ಚುನಾವಣಾ ಆಯೋಗವು (ಇಸಿಐ) ಮೊನ್ನೆ ಮಾರ್ಚ್ 15ರಂದು, ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಜತೆಜತೆಗೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸಂಬಂಧಿಸಿದಂತೆಯೂ ವಿಧಾನಸಭಾ ಚುನಾವಣೆ ಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಪೈಕಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶ ಮತ್ತು ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಒಂದೇ ಹಂತದ ಚುನಾವಣೆಗೆ ಸಾಕ್ಷಿಯಾಗಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ ಎಂಬುದು ಗಮನಾರ್ಹ.
ಬರೋಬ್ಬರಿ 3 ದಶಕಗಳ ನಂತರ ಪಶ್ಚಿಮ ಬಂಗಾಳ ರಾಜ್ಯವು ಹೀಗೆ ಎರಡು ಹಂತಗಳ ಚುನಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯವು ಕೊನೆಯ ಬಾರಿಗೆ ಎರಡು ಹಂತದ ಚುನಾವಣೆಯನ್ನು ಕಂಡಿದ್ದು 1996ರಲ್ಲಿ; ನಂತರ 2001ರಲ್ಲಿ ಒಂದೇ ಹಂತದ ಚುನಾವಣೆ ನಡೆಯಿತು.
ಹಾಗೆ ನೋಡಿದರೆ, 2006ರ ವಿಧಾನಸಭಾ ಚುನಾವಣೆಯಿಂದ ಪಶ್ಚಿಮ ಬಂಗಾಳದಲ್ಲಿ ಬಹುಹಂತದ ಚುನಾವಣೆಗಳು ಕಾಣತೊಡಗಿದವು; ಅಲ್ಲಿನ ಮತದಾರರು ಐದು ಹಂತಗಳಲ್ಲಿ ಮತದಾನ ಮಾಡಿ ಸಿಪಿಐ (ಎಂ) ನೇತೃತ್ವದ ಎಡರಂಗ ಸರಕಾರವನ್ನು ಸತತ 7ನೇ ಬಾರಿಗೆ ಆಯ್ಕೆಮಾಡಿದರು.
2011ರ ವಿಧಾನಸಭಾ ಚುನಾವಣೆಗಳನ್ನು 6 ಹಂತಗಳಲ್ಲಿ ನಡೆಸಲಾಯಿತು. ಈ ಐತಿಹಾಸಿಕ ಜನಾದೇಶದಲ್ಲಿ ರಾಜ್ಯವು ಹೊಸ ಮುಖ್ಯಮಂತ್ರಿಯನ್ನು ಕಾಣುವಂತಾಯಿತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮೊದಲ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದರ ಜತೆಗೆ, ಎಡಪಂಥೀಯರ 34 ವರ್ಷಗಳ ಆಳ್ವಿಕೆಗೆ ಇತಿಶ್ರೀ ಹಾಡಿದರು.
ಇದನ್ನೂ ಓದಿ: Niranjan Yashaswini: ಎಂಟು ವರ್ಷಗಳ ಬಳಿಕ ಗುಡ್ ನ್ಯೂಸ್ ಕೊಡಲು ಮುಂದಾದ ನಿರಂಜನ್ ದಂಪತಿ
ಇನ್ನು, 2016 ಮತ್ತು 2021ರ ವಿಧಾನಸಭಾ ಚುನಾವಣೆಗಳನ್ನು ಕ್ರಮವಾಗಿ ಏಳು ಮತ್ತು ಎಂಟು ಹಂತಗಳಲ್ಲಿ ನಡೆಸಲಾಯಿತು ಹಾಗೂ ಈ ಎರಡೂ ಬಾರಿಯೂ ‘ಹಾಲಿ’ ಅಧಿಕಾರಾ ರೂಢರೇ ವಿಜಯದ ನಗೆ ಬೀರಿದರು ಎಂಬುದು ಗಮನಾರ್ಹ.
ಈ ಬಾರಿಯ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಈ ನಡೆಯನ್ನು ಸ್ವಾಗತಿಸಿವೆ. ಸುಗಮ ನಿರ್ವಹಣೆಗಾಗಿ ಸದರಿ ಚುನಾವಣೆಗಳನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ವು ಹೇಳಿಕೊಂಡಿದ್ದರೂ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ನಡೆಸುವುದು ಆಯೋಗದ ಪಾಲಿಗೆ ಒಂದು ಸವಾಲು ಮಾತ್ರವೇ ಅಲ್ಲದೆ ಸತ್ವಪರೀಕ್ಷೆಯೂ ಆಗಿಬಿಡುತ್ತದೆ ಎಂಬುದನ್ನು ತಳ್ಳಿಹಾಕಲಾಗದು.
ಅದೇನೇ ಇರಲಿ, ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳು ಈ ಬಾರಿ ತಮ್ಮದೇ ಆದ ಪ್ರಸ್ತುತತೆ ಮತ್ತು ಪ್ರಭಾವವನ್ನು ಬೀರಲು ತುದಿಗಾಲಲ್ಲಿ ನಿಂತಿವೆ ಎನ್ನಲಡ್ಡಿಯಿಲ್ಲ.
ಪುನರಾವರ್ತಿತ ಸತ್ವಪರೀಕ್ಷೆಯೇಕೆ?
ನಮ್ಮ ದೇಶವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆಯುವುದು ನಿಮಗೆ ಗೊತ್ತಿರುವಂಥದ್ದೇ. ಮಾತ್ರವಲ್ಲದೆ, ಪ್ರಜಾಪ್ರಭುತ್ವದ ತಾಯಿ ಎಂದೂ ಕರೆಯಲ್ಪಡುವ ಚುನಾವಣೆಯನ್ನು, ಲೋಕಸಭೆ ಮತ್ತು ವಿಧಾನಸಭೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಬ್ಬವೆಂದೂ ಪರಿಗಣಿಸಲಾಗುತ್ತದೆ. ಹೀಗಾಗಿ ಚುನಾವಣೆಯನ್ನು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವುದು ನಮ್ಮ ದೇಶದ ಚುನಾವಣಾ ಆಯೋಗದ ಪಾಲಿಗೆ ಒಂದು ಮಹತ್ತರ ಕಾರ್ಯಭಾರವಾಗಿ ಪರಿಣಮಿಸಿಬಿಡುತ್ತದೆ.
ಮಾತ್ರವಲ್ಲ, ಯಾವುದೇ ಚುನಾವಣೆಯಲ್ಲಿ ಪ್ರಮುಖ ಪಾಲುದಾರರು ಎನಿಸಿಕೊಳ್ಳುವ ರಾಜಕೀಯ ಪಕ್ಷಗಳಿಂದಲೂ ಇದನ್ನೇ ನಿರೀಕ್ಷಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿನ ಕಳೆದ ಒಂದಿಷ್ಟು ಚುನಾವಣೆಗಳಲ್ಲಿ, ಮತದಾನಕ್ಕೂ ಮೊದಲು, ಮತದಾನದ ಅವಧಿ ಯಲ್ಲಿ ಹಾಗೂ ನಂತರದಲ್ಲಿ ರಾಜಕೀಯ ಹಿಂಸಾಚಾರದ ಸರಣಿಯೇ ನಡೆದಿರುವುದನ್ನು ಜನರು ಗಮನಿಸಿದ್ದಾರೆ.
2011ರ ವರ್ಷಕ್ಕೂ ಮೊದಲು, ಎಡರಂಗ ಸರಕಾರದ 34 ವರ್ಷಗಳ ಅಧಿಕಾರಾವಧಿಯಲ್ಲಿ, ಹಿಂಸಾಚಾರ, ಮತದಾರರಿಗೆ ಬೆದರಿಕೆಯೊಡ್ಡುವಿಕೆ ಮತ್ತು ಅವರ ಮೇಲೆ ಪ್ರಭಾವ ಬೀರು ವಿಕೆ ಹಾಗೂ ಅಂತಿಮವಾಗಿ, ಮತದಾನದ ಪ್ರಕ್ರಿಯೆಗಳಲ್ಲಿ ಮೋಸಗಳನ್ನು ಎಸಗಿದ್ದರ ಪರಿಣಾಮವಾಗಿ ಚುನಾವಣಾ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿದ್ದವು.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಬಿಐಫ್ಎಂ), ರೆವಲ್ಯೂಷನರಿ ಸೋಷಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಎಫ್ʼಬಿ) ಮುಂತಾದ ವನ್ನು ಒಳಗೊಂಡಿದ್ದ ರಾಜ್ಯದಲ್ಲಿನ ಎಡಪಕ್ಷಗಳು ಮತದಾರರ ಮೇಲೆ ಪ್ರಭಾವ ಬೀರು ವಂಥ ಒಂದು ‘ಅದೃಶ್ಯ ವ್ಯವಸ್ಥೆ’ಯನ್ನು ಅಥವಾ ‘ಚಕ್ರವ್ಯೂಹ’ವನ್ನು ಹೊಂದಿದ್ದವು.
ಪ್ರತಿಯೊಂದು ಚುನಾವಣೆಯಲ್ಲೂ ಗೆಲ್ಲಲು ಇಂಥದೊಂದು ವ್ಯವಸ್ಥೆಯು ಆ ಪಕ್ಷಗಳಿಗೆ ನೆರವಾಯಿತು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, 1977ರಿಂದ ಶುರುವಾಗಿ ಸತತ 7 ಬಾರಿ ಗೆಲುವು ಸಾಧಿಸಲು ಈ ವ್ಯವಸ್ಥೆಯು ಸದರಿ ಪಕ್ಷಗಳಿಗೆ ಒತ್ತಾಸೆಯಾಗಿ ನಿಂತು ಅವನ್ನು ಒಂದು ‘ಅಜೇಯ ಶಕ್ತಿ’ಯಾಗಿ ಮಾಡಿಬಿಟ್ಟಿತ್ತು!
ಅದೇನೇ ಇರಲಿ, ‘ಪರಂಪರೆ’ ಎಂಬುದನ್ನು ಹೊರತುಪಡಿಸಿ ಮಿಕ್ಕಾವ ಕಸರತ್ತುಗಳೂ ಶಾಶ್ವತವಾಗಿ ಉಳಿಯುವುದಿಲ್ಲ ಎನ್ನಿ!
ಈ ‘ಚಕ್ರವ್ಯೂಹ’ ವ್ಯವಸ್ಥೆ, ಆಡಳಿತದ ವೈಫಲ್ಯ ಮತ್ತು ಎಡರಂಗದ ದುರಾಡಳಿತ ಮುಂತಾದ ಅಂಶಗಳನ್ನು ಮುಂದುಮಾಡಿಕೊಅಡು ತಮ್ಮದೇ ಆದ ನಿರೂಪಣೆಗೆ ಮುಂದಾದ ಕೇಂದ್ರದ ಮಾಜಿ ಸಚಿವೆ ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಎಡಪಂಥೀಯರ ಆಡಳಿತವನ್ನು 2011ರಲ್ಲಿ ಕಿತ್ತೆಸೆದರು.
ತನ್ಮೂಲಕ, ಸರಕಾರದ ಐತಿಹಾಸಿಕ ಬದಲಾವಣೆ ಅಥವಾ ‘ಪೊರಿಬರ್ತನ್’ (ಪರಿವರ್ತನೆ) ಎಂಬುದಾಗಿ ಅವರು ಆ ವರ್ಷವನ್ನು ಗುರುತಿಸಿದರು. ಈ ಬೆಳವಣಿಗೆಯಿಂದಾಗಿ ಮಮತಾ ಅವರು ರಾಜ್ಯದ 8ನೇ ಹಾಗೂ ಮೊದಲ ಮಹಿಳಾ ಮುಖ್ಯಮಂತ್ರಿ ಎನಿಸಿಕೊಳ್ಳು ವಂತಾಯಿತು.
ಆದರೆ, ‘ಪೊರಿಬರ್ತನ್’ ಎಂಬುದು ಕೇವಲ ಕಾಗದದ ಉಳಿಯುವಂತಾಯಿತು. ‘ಕನ್ಯಾಶ್ರೀ’ ಯಂಥ ಪ್ರಮುಖ ಯೋಜನೆಗಳನ್ನು ಪರಿಚಯಿಸಿ, ಹೆಣ್ಣು ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಷರತ್ತುಬದ್ಧ ನಗದು ವರ್ಗಾವಣೆಯನ್ನು ಒದಗಿಸುವ ಹಾಗೂ ಬಾಲ್ಯ ವಿವಾಹದ ಪಿಡುಗಿಗೆ ಸಿಲುಕದಂತೆ ಅವರನ್ನು ತಡೆಯುವ ಕ್ರಮಕ್ಕೆ ಸರಕಾರ ಮುಂದಾದರೂ ಅಲ್ಲಿ ಕ್ರಾಂತಿ ಯೇನೂ ಕಂಡುಬರಲಿಲ್ಲ; ಏಕೆಂದರೆ, ಎಡಪಂಥೀಯರು ಹುಟ್ಟು ಹಾಕಿದ್ದ ‘ಚಕ್ರವ್ಯೂಹ’ ಸಂಪ್ರದಾಯವನ್ನೇ ಈ ಸರಕಾರವು ಹೊಸ ಅವತಾರದಲ್ಲಿ ಅನುಸರಿಸಿತಷ್ಟೇ!
ಅಂದರೆ ಹಿಂಸಾಚಾರದ ಮಾರ್ಗ ಮತ್ತು ಮತದಾರರಲ್ಲಿ ಭಯ ಹುಟ್ಟಿಸುವ ನಡೆಗಳಿಗೆ ಒಡ್ಡಿಕೊಂಡ ತೃಣಮೂಲ ಕಾಂಗ್ರೆಸ್ಸಿಗರು, ಬಿಹಾರದಲ್ಲಿ ಕಾಣಬರುತ್ತಿದ್ದ ಚುನಾವಣಾ ವಾತಾವರಣವನ್ನು ನೆನಪಿಸುವ ಕೆಲಸವನ್ನು ಮಾಡಿದರು. ಬಹುತೇಕರಿಗೆ ಗೊತ್ತಿರುವಂತೆ ‘ಗೂಂಡಾರಾಜ್’ ಎಂಬುದು ಅಲ್ಲಿನ ಚುನಾವಣಾ ನಿರ್ವಹಣೆಯ ಹೆಗ್ಗುರುತಾಗಿತ್ತು.
ಇದು ಎಲ್ಲಿಯವರೆಗೆ ಕೊಂಡೊಯ್ದಿತೆಂದರೆ, ರಾಜಕೀಯ ಹಿಂಸಾಚಾರದ ಕಾರಣದಿಂದಾಗಿ ಮತದಾರರ ಸಾವು ಸಂಭವಿಸಿತು ಮತ್ತು ಎದುರಾಳಿ ಅಭ್ಯರ್ಥಿಗಳ ಮೇಲೆ ದಾಳಿಗಳಾದವು; ಈ ಬೆಳವಣಿಗೆಯಿಂದಾಗಿ ಒಂದಿಡೀ ಪಶ್ಚಿಮ ಬಂಗಾಳ ರಾಜ್ಯ ಮತ್ತು ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯಲ್ಪಡುವ ಚುನಾವಣಾ ಪ್ರಕ್ರಿಯೆ ಎರಡೂ ತಲೆ ತಗ್ಗಿಸುವಂತಾಯಿತು.
ಎಲ್ಲಾ ಮತಗಟ್ಟೆಗಳ ‘ವೆಬ್‌ಕಾಸ್ಟಿಂಗ್’ ಮತ್ತು ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಕೇಂದ್ರೀ ಯ ಪಡೆಗಳನ್ನು ನಿಯೋಜಿಸುವಿಕೆಯಂಥ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಈ ಸಮಸ್ಯೆಯು ತಳಮಟ್ಟದಲ್ಲಿ ಬಗೆಹರಿಯದೆ ಉಳಿದುಬಿಟ್ಟಿತು. ಇದು ಚುನಾವಣಾ ಆಯೋಗದ ಪಾಲಿಗೆ ಒಂದು ಪ್ರಮುಖ ಸವಾಲಾಯಿತು.
ಹಾಗೆ ನೋಡಿದರೆ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯೆಂಬುದು ಪಶ್ಚಿಮ ಬಂಗಾಳದ ಪಾಲಿಗೆ ಒಂದು ಪ್ರಮುಖ ಕಳವಳವೇ ಆಗಿಬಿಟ್ಟಿದೆ. ಹೇಳಿ ಕೇಳಿ ಇದೊಂದು ಗಡಿರಾಜ್ಯ, ಬಾಂಗ್ಲಾದೇಶದೊಂದಿಗೆ ತನ್ನ ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ.
ಭೂ-ಗಡಿಗಳಲ್ಲಿ ಮತ್ತು ಸುಂದರ್‌ಬನ್ ಪ್ರದೇಶದಲ್ಲಿನ ಸಮುದ್ರಗಡಿಗಳಲ್ಲಿ ಬೇಲಿಯ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ, ಬಾಂಗ್ಲಾದೇಶದಿಂದ ಅಕ್ರಮ ನುಸುಳುಗಾರರು ಭಾರಿ ಸಂಖ್ಯೆಯಲ್ಲಿ ಒಳನುಗ್ಗುವಂಥ ಸಮಸ್ಯೆಯನ್ನು ರಾಜ್ಯವು ಅನುಭವಿಸಿಕೊಂಡೇ ಬಂದಿದೆ. ಇದಕ್ಕೆ ಸ್ಥಳೀಯ ಪ್ರಭಾವಿ ನಾಯಕರ ಕುಮ್ಮಕ್ಕೂ ಸೇರಿಕೊಂಡು, ಜನಸಂಖ್ಯಾಶಾಸ್ತ್ರದಲ್ಲಿ ಬದಲಾವಣೆಯಾಗುವುದಕ್ಕೆ ಕಾರಣವಾಯಿತು.
2025ರಲ್ಲಿ ನಡೆದ ಮುರ್ಷಿದಾಬಾದ್ ಗಲಭೆಯಂತೆ ಕೋಮು ಹಿಂಸಾಚಾರಗಳಿಗೆ ಇದು ಅನುವುಮಾಡಿಕೊಡುತ್ತದೆ. ಮಾತ್ರವಲ್ಲದೆ, ಇದು ನೆರೆಹೊರೆಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಯಾವುದೇ ಪೊಲೀಸ್ ಕ್ರಮದಿಂದ ತಪ್ಪಿಸಿಕೊಳ್ಳಲು ಅಂತಾರಾಷ್ಟ್ರೀಯ ಗಡಿಯನ್ನು ದಾಟುವ ಕಳವಳಕ್ಕೆ ಕೂಡ ಕಾರಣವಾಗಿದೆ. ಆದ್ದರಿಂದ, ಈ ಒತ್ತಡದಾಯಕ ಸಮಸ್ಯೆಗಳ ಮೇಲೆ ನಿಗಾ ಇರಿಸಿ, ನಿಜಾವಧಿಯಲ್ಲಿ ಅವನ್ನು ತಗ್ಗಿಸಬೇಕಾಗುತ್ತದೆ; ಮುಕ್ತ, ನ್ಯಾಯಸಮ್ಮತ ಹಾಗೂ ಹಿಂಸಾಚಾರಹಿತ ಚುನಾವಣೆಯನ್ನು ನಡೆಸುವಲ್ಲಿ ಈ ಅಂಶಗಳು ಚುನಾವಣಾ ಆಯೋಗದ ಪಾಲಿಗೆ ನಿಜವಾದ ಸವಾಲಾಗಿ ಬಿಟ್ಟಿವೆ.
ರಾಜಕಾರಣದ ಮೇಲಿನ ಪರಿಣಾಮ
ರಾಜ್ಯದ ಚುನಾವಣೆಯನ್ನು ಗೆಲ್ಲುವ ಯಾವುದೇ ರಾಜಕೀಯ ಪಕ್ಷವು ಸಾಮಾನ್ಯವಾಗಿ ಆ ರಾಜ್ಯದ ಭೌಗೋಳಿಕ ಗಡಿಯೊಳಗೆ ತನ್ನ ಕಾರ್ಯಸೂಚಿಯನ್ನು ನಿರೂಪಿಸುತ್ತದೆ. ಪಶ್ಚಿಮ ಬಂಗಾಳದ ವಿಷಯದಲ್ಲಿ ಹೇಳುವುದಾದರೆ, ಇಂಥ ನಿರೂಪಣೆಗಳು ಕೇವಲ ಭೌಗೋಳಿಕ ಗಡಿಗಳಿಗೆ ಸೀಮಿತವಾಗುವುದಿಲ್ಲ, ಬದಲಾಗಿ ಅವು ಒಂದು ರಾಷ್ಟವ್ಯಾಪಿ ಪರಿಣಾಮವನ್ನು ಸೃಷ್ಟಿಸುತ್ತವೆ.
ಗಡಿರಾಜ್ಯವಾಗಿರುವ ಪಶ್ಚಿಮ ಬಂಗಾಳವು ಲೋಕಸಭೆಗೆ 42 ಮಂದಿ ಸದಸ್ಯರನ್ನು ಕಳಿಸಿ ಕೊಡುವ ಮೂಲಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟದ ನಂತರ ಈ ಬಾಬತ್ತಿನಲ್ಲಿ ಅತಿಹೆಚ್ಚಿನ ಕೊಡುಗೆಯನ್ನು ನೀಡುತ್ತದೆ, ಆದರೆ 294 ಶಾಸಕರನ್ನಷ್ಟೇ ಚುನಾಯಿಸುವ ಮೂಲಕ ಅದು ಉತ್ತರ ಪ್ರದೇಶದ ನಂತರದ ಸ್ಥಾನದಲ್ಲಿದೆ. ಆದಾಗ್ಯೂ, ಹಿಂದಿನ ಕಾಲ ಘಟ್ಟಗಳಿಗಿಂತ ಭಿನ್ನವಾಗಿ, ಪಶ್ಚಿಮ ಬಂಗಾಳದ ಈ ಚುನಾವಣೆ ಹಾಗೂ ಮೇ 4ರಂದು ಹೊರಬೀಳಲಿರುವ ಅದರ ಫಲಿತಾಂಶ ಇವುಗಳು, ರಾಷ್ಟ್ರೀಯ ರಾಜಕಾರಣದ ಮೇಲೆ ಭಾರಿ ಪರಿಣಾಮವನ್ನು ಬೀರುವುದರ ಜತೆಗೆ, ಸ್ಥಳೀಯ ರಾಜಕೀಯಕ್ಕೂ ಒಂದು ಆಕಾರವನ್ನು ನೀಡಲಿವೆ.
2009ಕ್ಕಿಂತ ಮೊದಲು, ಪಶ್ಚಿಮ ಬಂಗಾಳದಲ್ಲಿನ ಎಡಪಕ್ಷಗಳು ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳೆರಡರಲ್ಲೂ ಗಣನೀಯ ಸ್ಥಾನಗಳನ್ನು ದಕ್ಕಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲ ಶಕ್ತಿಯಾಗಿದ್ದವು.
2009ರ ಸಾರ್ವತ್ರಿಕ ಚುನಾವಣೆಯು ತೃಣಮೂಲ ಕಾಂಗ್ರೆಸ್ ಎಂಬ 11 ವರ್ಷಗಳಷ್ಟು ಹಳೆಯ ಪಕ್ಷವು ಪ್ರವರ್ಧಮಾನಕ್ಕೆ ಬರುವುದಕ್ಕೆ ಸಾಕ್ಷಿಯಾಯಿತು; ಇದು ಒಂದು ಕಾಲಕ್ಕೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಮಮತಾ ಬ್ಯಾನರ್ಜಿಯವರು ಅಲ್ಲಿಂದ ಹೊರ ಬಂದು ತಮ್ಮ ನೇತೃತ್ವದಲ್ಲಿ ಹುಟ್ಟುಹಾಕಿದ ರಾಜಕೀಯ ಪಕ್ಷ ಎಂಬುದು ಗೊತ್ತಿರುವ ಸಂಗತಿಯೇ. ಈ ಪಕ್ಷವು 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜತೆಯಲ್ಲಿ ಮೈತ್ರಿ ಮಾಡಿಕೊಂಡು ಬಹುಪಾಲು ಸ್ಥಾನಗಳನ್ನು ಗಳಿಸಿತು.
ಈ ಮೈತ್ರಿಕೂಟವು 2011ರ ವಿಧಾನಸಭಾ ಚುನಾವಣೆಯಲ್ಲಿ 226 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಪೈಕಿ ತೃಣಮೂಲ ಕಾಂಗ್ರೆಸ್‌ಗೆ 184 ಮತ್ತು ಕಾಂಗ್ರೆಸ್‌ಗೆ 42 ಸ್ಥಾನಗಳು ಸಿಕ್ಕವು. ಪಶ್ಚಿಮ ಬಂಗಾಳ ರಾಜ್ಯವನ್ನು ಬರೋಬ್ಬರಿ 34 ವರ್ಷಗಳವರೆಗೆ ಆಳಿದ ನಂತರ ಎಡಪಕ್ಷಗಳು ಭಾರಿ ಹಿನ್ನಡೆಯನ್ನು ಅನುಭವಿಸುವಂತಾಯಿತು, ಅಧಿಕಾರದ ಗದ್ದುಗೆ ಯಲ್ಲಿದ್ದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡರು.
ಆದಾಗ್ಯೂ, 2012ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ‘ಯುಪಿಎ 2’ ಸರಕಾರವನ್ನು ತೊರೆದ ಕಾರಣಕ್ಕೆ ಆಡಳಿತಾರೂಢ ಮೈತ್ರಿಕೂಟವು ಅಲ್ಪಕಾಲಿಕ ಎನಿಸಿಕೊಳ್ಳುವಂತಾಯಿತು. ಅಲ್ಲಿಂದೀಚೆಗೆ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಏಕಮಾತ್ರ ಪ್ರಬಲ ದನಿ ಎನಿಸಿಕೊಂಡಿದೆ.
ಎಡಪಕ್ಷಗಳ ಸೋಲಿನ ಸರಣಿಯು 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಮುಂದು ವರಿಯಿತು, ಕಾರಣ 42 ಸ್ಥಾನಗಳ ಪೈಕಿ ಅವು ಗೆದ್ದಿದ್ದು 2ನ್ನು ಮಾತ್ರ; 1977ರ ಕಾಲಘಟ್ಟ ಕ್ಕೂ ಮುನ್ನ ರಾಜ್ಯದಲ್ಲಿ ತನ್ನದೇ ಆದ ಭದ್ರಕೋಟೆಯನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಕೂಡ 2014ರಲ್ಲಿ ಗಳಿಸಿದ್ದು ಇಷ್ಟೇ ಸ್ಥಾನವನ್ನು.
ತೃಣಮೂಲ ಕಾಂಗ್ರೆಸ್ ಪಕ್ಷವು 34 ಸ್ಥಾನಗಳನ್ನು ದಕ್ಕಿಸಿಕೊಂಡಿದ್ದರೂ, ಕೇವಲ 2 ಸ್ಥಾನಗಳನ್ನು ಗೆದ್ದುಕೊಂಡ ಬಿಜೆಪಿಯ ಉದಯವು ಜನರ ಪಾಲಿಗೆ ಒಂದು ಪರ್ಯಾಯ ಆಯ್ಕೆಯಾಗಿ ಕಾಣಿಸಿಕೊಂಡಿದೆ. 2016ರಲ್ಲಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸ ಲೆಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿಕೊಂಡು ಒಂದು ಮೈತ್ರಿಕೂಟವನ್ನು ರಚಿಸಿದರೂ ಈ ಯತ್ನದಲ್ಲಿ ಅವು ಯಶಸ್ಸನ್ನು ಕಾಣಲಿಲ್ಲ.
2021ರ ಚುನಾವಣೆಯಲ್ಲಿ ಕೂಡ ಈ ಮೈತ್ರಿಕೂಟವು ನಿರಂತರತೆಯನ್ನು ಕಂಡಿತಾದರೂ, ತಂತಮ್ಮ ಖಾತೆಯನ್ನು ತೆರೆಯುವಲ್ಲಿ ಮೈತ್ರಿ ಪಕ್ಷಗಳು ವಿಫಲವಾದವು. 215 ಸ್ಥಾನಗಳ ಗೆಲುವಿನೊಂದಿಗೆ ತೃಣಮೂಲ ಕಾಂಗ್ರೆಸ್ ಮೂರನೇ ಬಾರಿಗೆ ಗದ್ದುಗೆ ಏರುವುದಕ್ಕೆ ಇದು ಅನುವು ಮಾಡಿಕೊಟ್ಟಿತು ಹಾಗೂ 77 ಸ್ಥಾನಗಳನ್ನು ಮಡಿಲಿಗೆ ಹಾಕಿಕೊಂಡ ಬಿಜೆಪಿ ಏಕಮಾತ್ರ ವಿಪಕ್ಷ ಎನಿಸಿಕೊಂಡಿತು.
ಪ್ರಸ್ತುತ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿಕೂಟದಲ್ಲಿ ಇಲ್ಲವಾದರೂ, ಸ್ಥಳೀಯ ರಾಜಕೀಯದಲ್ಲಿ ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೆಂದು ಹಾಗೂ ರಾಜಕೀಯ ಪ್ರಸ್ತುತತೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ. ಈ ಚುನಾವಣೆಯಲ್ಲಿ ಪ್ರಬಲ ಶಕ್ತಿಗಳೆನಿಸಿ ಕೊಂಡಿರುವ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ, ಅಧಿಕಾರದ ಗದ್ದುಗೆಯನ್ನು ದಕ್ಕಿಸಿಕೊಳ್ಳುವುದರ ಕಡೆಗೆ ಈಗ ಗುರಿಯಿಟ್ಟಿವೆ.
ಈ ಬಾರಿಯ ಹಣಾಹಣಿಯಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಸಂಸದೀಯ ರಾಜಕಾರಣದ ಸಂದರ್ಭದಲ್ಲಿ ಅದು ವಿರೋಧ ಪಕ್ಷಗಳ ಪಾಲಿಗೆ ಒಂದು ಪ್ರಶ್ನಾತೀತವಾದ ಅಥವಾ ನಿರ್ವಿವಾದದ ಸಹಭಾಗಿ ಎನಿಸಿಕೊಳ್ಳಲಿದೆ ಹಾಗೂ ‘ಇಂಡಿಯ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಪಲ್ಲಟಗೊಳಿಸುವ ಶಕ್ತಿಯಾಗಿ ಅದು ಬಿಂಬಿತ ವಾಗಲಿದೆ, ಜತೆಗೆ ಬಿಜೆಪಿಯ ಪ್ರಾಬಲ್ಯಕ್ಕೂ ಅದು ಸಡ್ಡು ಹೊಡೆಯಲಿದೆ.
ಮಾತ್ರವಲ್ಲದೆ, ತೃಣಮೂಲ ಕಾಂಗ್ರೆಸ್‌ನ ಗೆಲುವು, ಆ ಪಕ್ಷವು ಸಾಮಾಜಿಕ ವಲಯದಲ್ಲಿ ಜಾರಿಗೆ ತಂದ ‘ಲಖೀರ್ ಭಂಡಾರ್’, ‘ಯುವ ಸಾಥಿ’ ಮುಂತಾದ ಅನೇಕ ಪ್ರಮುಖ ಯೋಜನೆಗಳನ್ನು ಜನರು ಅನುಮೋದಿಸಿzರೆ ಎಂಬ ಅರ್ಥವನ್ನೂ ಧ್ವನಿಸಲಿದೆ. ಈ ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದ್ದರೂ, ಉದ್ದೇಶಿತ ಫಲಾನುಭವಿಗಳಿಗೆ ‘ನೇರ ನಗದು ವರ್ಗಾವಣೆ’ ಸೌಲಭ್ಯಗಳನ್ನು ಒದಗಿಸಿವೆ ಎಂಬುದನ್ನು ಮರೆಯಲಾಗದು.
ಎಲ್ಲಕ್ಕಿಂತ ಮುಖ್ಯವಾಗಿ, ನಿರೂಪಣೆಗಳು ಮತ್ತು ಕಾರ್ಯಕ್ರಮಗಳ ಮೇಲಿನ ಹಿಡಿತದಲ್ಲಿ ಯಾರು ಪ್ರಾಬಲ್ಯವನ್ನು ಹೊಂದುತ್ತಾರೆ ಎಂಬ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ಏರ್ಪಡುವ ಪೈಪೋಟಿಯು ಇನ್ನೂ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಆದರೆ, ಹತ್ತು ಹಲವು ರಾಜಕೀಯ ಹಿಂಸಾಚಾರಗಳಿಗೆ ಮಡಿಲಾಗುವ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯು ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದು ಇಲ್ಲಿ ಆತಂಕದ ಸಂಗತಿಯಾಗಿದೆ.
ಕೆಲವೆಡೆಯಂತೂ ಈ ಹಿಂಸಾಚಾರಗಳು ಎದುರಾಳಿಗಳ ತಲೆಗಳನ್ನೇ ಉರುಳಿಸುವಷ್ಟರ ಮಟ್ಟಿಗೆ ತೀವ್ರವಾಗಬಹುದು ಎಂಬ ತಲ್ಲಣ ಕಾಡುತ್ತಿದೆ. ಮತ್ತೊಂದೆಡೆ, ಈ ಚುನಾವಣೆ ಯಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದರೆ, ದೇಶದಲ್ಲಿ ಅದು ‘ಅದಮ್ಯಪಕ್ಷ’ ಎನಿಸಿಕೊಳ್ಳು ತ್ತದೆ; ದೇಶದ ಪೂರ್ವಭಾಗದ 4 ರಾಜ್ಯಗಳ ಪೈಕಿ 3ನ್ನು ಅದು ತನ್ನ ತೆಕ್ಕೆಗೆ ತೆಗೆದುಕೊಂಡಂತೆ ಆಗುತ್ತದೆ.
ಹಿಂದಿ ಭಾಷಿಕ ರಾಜ್ಯಗಳು ಮತ್ತು ಪಶ್ಚಿಮ ಕರಾವಳಿ ರಾಜ್ಯಗಳ ಕಡೆಗೇ ಮುಖ್ಯವಾಗಿ ಗಮನವನ್ನು ಕೇಂದ್ರೀಕರಿಸಿದ್ದ ಬಿಜೆಪಿಯ ಪಾಲಿಗೆ ಇದು ನಿಜಾರ್ಥದಲ್ಲಿ ‘ಪೂರ್ವೋದಯ’ ವಾಗಲಿದೆ. ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ‘ಅಭಿವೃದ್ಧಿ’ ಮತ್ತು ‘ಹಿಂದುತ್ವ’ ಈ ಎರಡರ ಮುನ್ಸೂಚಕ ಎಂಬಂತೆ ಪ್ರಧಾನಿ ಮೋದಿಯವರನ್ನು ಬಿಂಬಿಸುವಲ್ಲಿಯೂ ಇದು ಯಶ ಕಾಣಲಿದೆ.
ಆದಾಗ್ಯೂ, ಕೇವಲ ಸಾಮಾಜಿಕ ಕಲ್ಯಾಣದ ಮೇಲೆ ಗಮನ ಹರಿಸುವುದರ ಬದಲಿಗೆ, ಹೊಸ ಮತ್ತು ಹಳೆಯ ಕೈಗಾರಿಕೆಗಳನ್ನು ತೆರೆಯುವುದು ಸೇರಿದಂತೆ ಸರ್ವಾಂಗೀಣ ಬೆಳವಣಿಗೆಯ ಕಡೆಗೂ ಸರಕಾರವು ಒತ್ತುನೀಡುವಂತಾಗುವ ಒಂದು ‘ರೂಪಾಂತರ’ಕ್ಕೆ ರಾಜ್ಯವು ಸಾಕ್ಷಿ ಯಾಗಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ, 1977ರ ನಂತರದಲ್ಲಿ, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಒಂದೇ ಆಡಳಿತಾರೂಢ ಪಕ್ಷವು ಮೊದಲ ಬಾರಿಗೆ ಗದ್ದುಗೆ ಅಲಂಕರಿಸುವಂತಾಗುವುದಕ್ಕೆ ಈ ಸಂದರ್ಭ ಸಾಕ್ಷಿಯಾಗಲಿದೆ.
ಪಶ್ಚಿಮ ಬಂಗಾಳದ ಮೊದಲ ಚುನಾಯಿತ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರ ಮರಣದ ನಂತರ, ಅಂದರೆ 1962ರಿಂದೀಚೆಗೆ ರಾಜ್ಯವು ಸ್ಥಿರವಾದ ಆದರೆ ಪ್ರಕ್ಷುಬ್ಧ ವೆನಿಸಿರುವ ಅವಧಿಯನ್ನು ಬಹುತೇಕವಾಗಿ ಕಂಡಿದೆ. ಈಗ ಸನ್ನಿಹಿತವಾಗಿರುವ ವಿಧಾನ ಸಭಾ ಚುನಾವಣೆಯು, ಅದರ ಎಲ್ಲ ಸಹಭಾಗಿಗಳ ಪಾಲಿಗೆ ಒಂದು ಇತಿಹಾಸವನ್ನು ಸೃಷ್ಟಿಸಲಿದೆ.
ಅದರಲ್ಲೂ ನಿರ್ದಿಷ್ಟವಾಗಿ, ಚುನಾವಣೆಯನ್ನು ನಿರ್ವಹಿಸುವ ಹೊಣೆಹೊತ್ತಿರುವ ದೇಶದ ಚುನಾವಣಾ ಆಯೋಗದ ಪಾಲಿಗೆ ಇದೊಂದು ಸತ್ವಪರೀಕ್ಷೆಯಾಗಲಿದೆ; ಏಕೆಂದರೆ ಈ ರಾಜ್ಯದಲ್ಲಿ ಚುನಾವಣೆಯನ್ನು ಮುಕ್ತವಾಗಿ, ನ್ಯಾಯಸಮ್ಮತವಾಗಿ ಮತ್ತು ಶಾಂತಿಯುತ ವಾಗಿ ನಡೆಸುವುದು ಹುಡುಗಾಟದ ವಿಷಯವಲ್ಲ. ತೃಣಮೂಲ ಕಾಂಗ್ರೆಸ್ ಪಾಲಿಗೆ ಇದು ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರುವ ಬಾಬತ್ತಾಗಿದ್ದರೆ, ಬಿಜೆಪಿಯ ಪಾಲಿಗಿದು ತನ್ನನ್ನು ‘ಅಖಿಲ ಭಾರತೀಯ ಮಟ್ಟದ’ ಪಕ್ಷವಾಗಿ ಬಿಂಬಿಸಿಕೊಳ್ಳುವುದಕ್ಕಿರುವ ಒಂದು ಮಹತ್ತರ ಭೂಮಿಕೆಯಾಗಿದೆ ಎನ್ನಲಡ್ಡಿಯಿಲ್ಲ.
ಆದರೆ ಜನಗಳ ಪಾಲಿಗಿದು, ತಮ್ಮನ್ನು ಹಾಗೂ ತಮ್ಮ ಮಹತ್ವಾಕಾಂಕ್ಷೆಗಳನ್ನು ನಿಜಾರ್ಥ ದಲ್ಲಿ ಗ್ರಹಿಸಿ, ಆ ನಿಟ್ಟಿನಲ್ಲಿ ಕಾಳಜಿ ವಹಿಸುವ ಸರಕಾರವನ್ನು ಚುನಾಯಿಸುವ ಒಂದು ಹೊಣೆಗಾರಿಕೆಯಾಗಿದೆ ಎನ್ನಬೇಕು. “ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ರಾಜಕೀಯ ಪಕ್ಷಗಳು ರೂಪುಗೊಳ್ಳುತ್ತವೆ ಮತ್ತು ನಾಶವಾಗುತ್ತವೆ. ಆದರೆ ಈ ದೇಶವು ಉಳಿಯಲೇಬೇಕು" ಎಂದಿದ್ದರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು. ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಇದು ಪ್ರತಿಧ್ವನಿಸುವಂತೆ ತೋರುತ್ತಿದೆ.
ಈ ಚುನಾವಣೆಯಲ್ಲಿ ಯಾವ ತೆರನಾದ ಫಲಿತಾಂಶ ಹೊಮ್ಮಲಿದೆ ಎಂಬುದನ್ನು ಕಾಲವೇ ಹೇಳಬಲ್ಲದು, ಆದರೆ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವ ಜನರ ಹೆಬ್ಬಯಕೆಗಳು ನಿರ್ಲಕ್ಷಿಸಲ್ಪಡಬಾರದು. ಇದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ. ಈ ಚುನಾವಣೆ ಯಲ್ಲಿ ಗೆದ್ದವರು ಇದನ್ನು ಗಮನದಲ್ಲಿ ಇರಿಸಿಕೊಂಡರೆ ಒಳಿತು.
(ಲೇಖಕಿ ಹಿರಿಯ ರಾಜಕೀಯ ಸಲಹೆಗಾರ್ತಿ)