ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vinayaka V Bhat Column: ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಅಂದಿನ ಸಭೆಯ ಪ್ರಸ್ತುತತೆಯನ್ನು ಗಮನದಲ್ಲಿಟ್ಟು, ತನ್ನನ್ನು ಯಾತಕ್ಕೆ ಕರೆಸಿದ್ದಾರೆ ಎನ್ನುವು ದನ್ನು ಮರೆಯದೇ ಹಾಗೂ ಸಮಯ ಸಂದರ್ಭಗಳನ್ನು ಪರಾಂಬರಿಸಿ, ಇನ್ನೂ ಸ್ವಲ್ಪ ಹೊತ್ತು ಇವರು ಮಾತನಾಡಬಹುದಿತ್ತು ಎನ್ನುವ ಭಾವ ಪ್ರೇಕ್ಷಕರಲ್ಲಿರುವಾಗಲೇ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿ ಮುಗಿಸುವವನೇ ನಿಜವಾದ ಭಾಷಣಕಾರ ಎನ್ನಬಹುದು.

ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

-

ವಿದ್ಯಮಾನ

ಸಾಮಾನ್ಯವಾಗಿ ಭಾಷಣಗಳನ್ನು ಕೇಳುವುದು ಅಂದರೆ ಅದು ತುಂಬಾ ಬೋರಿಂಗ್ ಕೆಲಸ. ಯಾಕಪ್ಪ ಈತ ಇನ್ನೂ ಮುಗಿಸುತ್ತಿಲ್ಲ ಎಂದೆನಿಸುತ್ತದೆ. ಆದರೆ ಒಳ್ಳೆಯ ಭಾಷಣಗಳನ್ನು ಕೇಳುವುದೆಂದರೆ ಅದು ಒಂದು ರೀತಿ ಸಂಗೀತ ಕೇಳಿದಂತೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ, ‘ಅಯ್ಯೋ ಮುಗಿಸಿ ಬಿಟ್ಟರ, ಇನ್ನೂ ಸ್ವಲ್ಪ ಹೊತ್ತು ಮಾತಾಡಬಹುದಿತ್ತು’ ಅನಿಸುತ್ತದೆ. ಅದಕ್ಕೇ ಹೇಳುವುದು ‘ವಕ್ತಾ ದಶಸಹಸ್ರೇಷು’ ಎಂದು (ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪಂಡಿತಃ ವಕ್ತಾ ದಶಸಹಸ್ರೇಷು ದಾತಾ ಭವತಿ ವಾ ನ ವಾ).

ನೂರು ಜನರಲ್ಲಿ ಒಬ್ಬ ವೀರ ಹುಟ್ಟುತ್ತಾನೆ, ಸಾವಿರ ಜನರಲ್ಲಿ ಒಬ್ಬ ವಿದ್ವಾಂಸ ಹುಟ್ಟು ತ್ತಾನೆ. ಹತ್ತು ಸಾವಿರ ಜನರಲ್ಲಿ ಒಬ್ಬ ವಾಗ್ಮಿ ಹುಟ್ಟುತ್ತಾನೆ, ಆದರೆ ಒಬ್ಬ ದಾನಿ ಹುಟ್ಟು ತ್ತಾನೋ ಇಲ್ಲವೋ ಎನ್ನುವುದನ್ನು ಖಚಿತವಾಗಿ ಹೇಳಲಾಗದು ಎನ್ನುತ್ತಾನೆ ಶ್ಲೋಕಕಾರ.

ಮಾತನಾಡುವುದು ಸುಲಭದ ಕೆಲಸವಲ್ಲ, ಏನೇನೋ ಹೇಳುವ ತಯಾರಿ ಮಾಡಿಕೊಂಡು ಮಾತನಾಡಲು ನಿಂತರೆ, ಹೇಳಬೇಕಾದ್ದೆಲ್ಲ ಮರೆತು, ನಮ್ಮ ಗಮನಕ್ಕೇ ಇಲ್ಲದ ಅನೇಕ ಸಂಗತಿಗಳನ್ನು ಹೇಳಿಬಿಡುವ ಸಂದರ್ಭವೇ ಹೆಚ್ಚು. ಇನ್ನು ಶಬ್ದಗಳಿಗಾಗಿ ಹುಡುಕಾಟ, ಕೆಟ್ಟ ಶಬ್ದಗಳ ಬಳಕೆ ಸಭಾಗಾಂಭೀರ್ಯ ಹಾಗೂ ಸಮಯದ ಪರಿಜ್ಞಾನವಿಲ್ಲದಿರುವುದು, ‘ತಮ್ಮನು ತಾವೇ ಹೊಗಳಿಕೊಂಬರು ಹೇಯವಿಲ್ಲದೆ ಜರಿವರು ಪರರಾ’ ಎಂದು ದಾಸರು ಹೇಳಿದಂತೆ ಭಾಷಣದುದ್ದಕೂ ತಮ್ಮ ಹೆಚ್ಚುಗಾರಿಕೆಯನ್ನೇ ಕೊಚ್ಚಿಕೊಳ್ಳುವುದು, ಅನ್ಯರನ್ನು ದೂಷಿಸಲು ವೇದಿಕೆಯನ್ನು ಬಳಸಿಕೊಳ್ಳುವುದು ಹೀಗೆ ಅನೇಕ ಅಸಂಗತ ಸಂದರ್ಭಗಳನ್ನು ನಾವು ನೋಡುತ್ತಲೇ ಇರುತ್ತೇವೆ.

ಭಾಷಣದಲ್ಲಿ ಸಾಮಾನ್ಯವಾಗಿ ಇಣುಕುವ ಇನ್ನೂ ಒಂದು ಅಸಂಗತ ಸಂಗತಿಯೆಂದರೆ ಅದು ಉಪದೇಶಾತ್ಮಕತೆ. ನಾನು ವೇದಿಕೆಯ ಮೇಲಿನಿಂದ ಭಾಷಣ ಮಾಡುತ್ತಿದ್ದೇನೆ, ಹಾಗಾಗಿ ಶ್ರೇಷ್ಠ, ಸರ್ವಜ್ಞ; ಕೆಳಗೆ ಕುಳಿತು ಕೇಳುತ್ತಿರುವವರು ನಿಕೃಷ್ಠರು, ಅಜ್ಞರು ಎನ್ನುವ ಭಾವನೆಯಿಂದ ಉಪದೇಶ ಮಾಡುವುದು ಒಳ್ಳೆಯ ಭಾಷಣಕಾರನ ಲಕ್ಷಣವಲ್ಲ.

ಇದನ್ನೂ ಓದಿ: Vinayak V Bhat Column: ಸುಪ್ರಭಾತವು ನಿನಗೆ ಬೆಳಗಾಯಿತೇಳಯ್ಯ

ಅಂದಿನ ಸಭೆಯ ಪ್ರಸ್ತುತತೆಯನ್ನು ಗಮನದಲ್ಲಿಟ್ಟು, ತನ್ನನ್ನು ಯಾತಕ್ಕೆ ಕರೆಸಿದ್ದಾರೆ ಎನ್ನುವುದನ್ನು ಮರೆಯದೇ ಹಾಗೂ ಸಮಯ ಸಂದರ್ಭಗಳನ್ನು ಪರಾಂಬರಿಸಿ, ಇನ್ನೂ ಸ್ವಲ್ಪ ಹೊತ್ತು ಇವರು ಮಾತನಾಡಬಹುದಿತ್ತು ಎನ್ನುವ ಭಾವ ಪ್ರೇಕ್ಷಕರಲ್ಲಿರುವಾಗಲೇ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿ ಮುಗಿಸುವವನೇ ನಿಜವಾದ ಭಾಷಣಕಾರ ಎನ್ನಬಹುದು.

ಇನ್ನು ಆಶಯಭಾಷಣ ಮಾಡಬೇಕಾದವನು ವಿಷಯದ ಕುರಿತು ಅಧ್ಯಯನ ಮಾಡಿರ ಬೇಕಾಗುತ್ತದೆ. ಹಾಗೆ ಅಧ್ಯಯನ ಮಾಡಿರುವ ವಿಷಯಗಳಲ್ಲಿ ಎಷ್ಟನ್ನು ಹೇಳಬೇಕು ಎನ್ನುವ ಪರಿಜ್ಞಾನ ಆತನಿಗಿರಬೇಕಾಗುತ್ತದೆ. ಬಹಳ ತಿಳಿದಿರುವವರೆಲ್ಲ ಉತ್ತಮ ಭಾಷಣ ಕಾರರಾಗಲಾರರು; ಆದರೆ ವಿಷಯ ಜ್ಞಾನವಿಲ್ಲದಿದ್ದರೂ ಮಾತು ಕೊಡಕಳು ಮೊಸರಾಗಿ ಬಿಡುತ್ತದೆ.

ಒಬ್ಬಾತನಿಗೆ ಒಂದು ವಿಷಯದ ಕುರಿತು ಎಷ್ಟು ಜ್ಞಾನವಿದೆಯೋ ಅದರಲ್ಲಿ ಸೋಸಿ ಸೋಸಿ ಹತ್ತು ಪ್ರತಿಶತದಷ್ಟನ್ನು ಮಾತ್ರ ಮಾತಾಗಿ ಪರಿವರ್ತಿಸಬಹುದಂತೆ. ಅದೇ ವಿಷಯವನ್ನು ಅಕ್ಷರಕ್ಕಿಳಿಸಬೇಕಾದರೆ ಮಾತನಾಡಿದ್ದರಲ್ಲಿ ಹತ್ತು ಪ್ರತಿಶತ ಮಾತ್ರ ಸಾಧ್ಯವಂತೆ. ಆಲೋಚನೆ ಮಾಡಿ!

ಅತ್ಯಂತ ಪಾಂಡಿತ್ಯ ಪೂರ್ಣವಾಗಿ ತಾಸು, ಎರಡು ತಾಸು ಮಾತನಾಡುವವರನ್ನೂ ನಾವು ನೋಡುತ್ತೇವೆ. ಅಂಥವರ ಜ್ಞಾನದ ಆಳ ಎಷ್ಟಿರಬೇಡ. ಎಷ್ಟೇ ದೊಡ್ಡ ಸಂಗೀತಗಾರ ನಾದರೂ ಸಭೆಗೆ ಬರುವ ಮೊದಲು ಚೌಕಿಯಲ್ಲಿ ಸ್ವಲ್ಪ ತಯಾರಿ ಮಾಡಿಕೊಂಡೇ ವೇದಿಕೆಯೇರುವಂತೆ, ಎಷ್ಟೇ ಪ್ರೌಢ ಭಾಷಣಕಾರನಾದರೂ, ವಾಗ್ಮಿ-ಪಂಡಿತನಾದರೂ ಅಂದಿನ ತನ್ನ ಭಾಷಣದ ಒಂದು ರೂಪುರೇಷೆಯನ್ನು ಮನಸ್ಸಿನಲಾದರೂ ಮಾಡಿಕೊಂಡಿರುತ್ತಾನೆ.

Screenshot_1 ಋ

ಕಾರಣ, ವೇದಿಕೆಯ ಮೇಲಿನಿಂದ ಆಡುವ ಮಾತಿಗೆ ಅನೇಕರು ಕಿವಿಯಾಗುವ ಕಾರಣದಿಂದ ಅದ ಜವಾಬ್ದಾರಿಯ ಕೆಲಸವಾಗುತ್ತದೆ. ಹಿಂದೊಮ್ಮೆ ಬರೆದಿದ್ದೆ, ಸರ್ ಎಂ. ವಿಶ್ವೇಶ್ವರಯ್ಯ ನವರು ತಮ್ಮ ಹುಟ್ಟೂರಿನ ಶಾಲಾ ಮಕ್ಕಳ ಮುಂದೆ ಮಾತನಾಡಬೇಕಾದ ಸಂದರ್ಭ ದಲ್ಲೂ “ನನಗೆ ಒಂದು ದಿನದ ತಯಾರಿಬೇಕು" ಎಂದಿದ್ದರಂತೆ.

ಭಾರತ ರತ್ನ ಪಂಡಿತ ಭೀಮಸೇನ ಜೋಶಿಯವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಪುಣೆಯಲ್ಲಿ ಅವರಿಗೊಂದು ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಆ ಸಮಾರಂಭದಲ್ಲಿ, ಭೀಮಸೇನ ಜೋಶಿಯವರ ಜತೆಗೆ ಸಂಗೀತ ಕಲಿತಿದ್ದ ಫಿರೋಜ್ ದಸ್ತೂರ್ ಅವರು, ಖ್ಯಾತ ಗಾಯಕ ಜಿತೇಂದ್ರ ಅಭಿಷೇಕಿಯವರು, ನೌಷಾದ್, ಸಾಹಿತಿ ಚಿಂತಕ ಅಶೋಕ್ ಬಾಜಪೇಯಿ ಮುಂತಾದ ಗಣ್ಯಾತಿಗಣ್ಯರೆಲ್ಲ ವೇದಿಕೆಯ ಮೇಲಿದ್ದರು.

75 ತುಂಬಿದ ಭೀಮಸೇನ ಜೋಶಿಯವರನ್ನು ಸನ್ಮಾನಿಸಿ ಅಂದು ಅಭಿನಂದನಾ ಭಾಷಣ ಮಾಡಿದವರು ಅಟಲ್ ಬಿಹಾರಿ ವಾಜಪೇಯಿಯವರು. ಅದು ವಾಜಪೇಯಿಯವರು ರಾಜಕೀಯದಲ್ಲಿ ಯಾವುದೇ ಅಧಿಕಾರಸ್ಥಾನದಲ್ಲಿ ಇಲ್ಲದ ಕಾಲ, ಪ್ರಾಯಶಃ ಅಭಿನಂದನಾ ಸಮಿತಿಯವರು ಆಮಂತ್ರಿಸಿದ್ದು ರಾಜಕಾರಣಿ ವಾಜಪೇಯಿಯವರನ್ನಾಗಿರಲಿಲ್ಲ; ಕವಿ, ಸಂಗೀತ ಪ್ರಿಯ ವಾಜಪೇಯಿಯವರನ್ನಾಗಿತ್ತು ಅಂತ ಕಾಣುತ್ತದೆ.

ಅಂದು ಅವರು ಪ್ರಸ್ತುತಪಡಿಸಿದ ಅಭಿನಂದನಾಪೂರ್ವಕ ಭಾಷಣವನ್ನು ನಾನು ಕನಿಷ್ಠ ಪಕ್ಷ ನಾಲ್ಕಾರು ಬಾರಿಯದರೂ ಕೇಳಿದ್ದೇನೆ. ವಾಜಪೇಯಿಯವರ ಭಾಷಣ ನಮಗೆ ಹೊಸದಲ್ಲ, ಅವರ ಎಲ್ಲ ಭಾಷಣಗಳೂ ಕೇಳಲು ಲಾಯಕ್ಕಾದವುಗಳೇ. ಕೆಂಪುಕೋಟೆಯ ಮೇಲಿನ ಭಾಷಣಗಳು, ಪಾರ್ಲಿಮೆಂಟಿನ ವಿದಾಯ ಭಾಷಣ ಇತ್ಯಾದಿ. ಅವರಾಡುವ ಹಿಂದಿ ಭಾಷೆಯ ಸೌಂದರ್ಯ, ಎರಡು ಮಾತುಗಳ ನಡುವೆ ಕಣ್ಣು ಮಿಟುಕಿಸುತ್ತ ನೀಡುವ ದೀರ್ಘವಿರಾಮ, ಹಸ್ತಾಭಿನಯ, ಎಲ್ಲಕ್ಕಿಂತ ಮಿಗಿಲಾಗಿ ಅನುಭವ-ಅಧ್ಯಯನದ ಮೂಸೆ ಯಿಂದ ಬರುವ ಅವರ ಮಾತುಗಳು, ಇವೆಲ್ಲ ಕಾರಣಗಳಿಂದ ವಾಜಪೇಯಿಯವರ ಭಾಷಣ ಎಲ್ಲರಿಗೂ ಅಚ್ಚುಮೆಚ್ಚು. ಉತ್ತಮ ಭಾಷಣ ಹೇಗಿರಬೇಕು ಎನ್ನುವುದಕ್ಕೆ ಅವರ ಈ ಅಭಿನಂದನಾ ಭಾಷಣವನ್ನು ಉದಾಹರಣೆಯಾಗಿ ನಾನು ಸದಾ ನೋಡುತ್ತೇನೆ.

‘ಶ್ರದ್ದೆಯ ಪಂಡಿತ ಭೀಮಸೇನಜಿ ಜೋಶಿ ಹಾಗೂ ಶ್ರೀಮತಿ ಜೋಶಿ’ ಎಂದು ಅವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ. ಗಮನಿಸಬೇಕು, ‘ಜಿ’ ಎಂದು ಬಹುವಚನವಿರುವುದು ಭೀಮಸೇನ ಎನ್ನುವ ಹೆಸರಿಗೆ, ಜೋಶಿ ಎನ್ನುವ ಅಡ್ಡಹೆಸರಿಗಲ್ಲ. ವೇದಿಕೆಯ ಮೇಲಿರುವ ಆರೆಂಟು ಮಹನೀಯರುಗಳ ಹೆಸರುಗಳನ್ನು ಮರೆಯದೇ ಕರೆದು ಗೌರವಿಸುತ್ತಾರೆ, ತಪ್ಪಿಲ್ಲದೇ, ಆದರಣೀಯ ನೌಷಾದ್ ಸಾಬ್, ಅಶೋಕ್ ಜಿ ವಾಜಪೇಯಿ, ಪಂಡಿತ ದಸ್ತೂರ್, ಶ್ರೀಮತಿ ಕಿರ್ಲೋಸ್ಕರ್, ಅಭಿಶೇಕಿ ಎಂದು ಸಂಬೋಧಿಸಿರುವುದು ಇನ್ನೂ ವಿಶೇಷ.

ಕೈಯಲ್ಲಿ ಕಾಗದವನ್ನು ಹಿಡಿಯದೇ ತಮ್ಮ ಭಾಷಣದುದ್ದಕ್ಕೂ ಅಸ್ಖಲಿತವಾಗಿ ಮಾತ ನಾಡಿರುವುದು ಇನ್ನೂ ಹೆಚ್ಚು ವಿಷೇಷ. ‘ಪುಣೆಯಲ್ಲಿ ನಾನು ಅನೇಕ ಸಂಜೆಗಳನ್ನು ಕಳೆದಿದ್ದೇನೆ, ಆದರೆ ಇಂದಿನ ಸಂಜೆ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಸಂಗೀತ ಮಯ ಸಂಜೆಯಾಗಿದೆ’ ಎಂದು ಕವಿತ್ವದ ಭಾಷೆಯಿಂದ ತಮ್ಮ ಅಭಿನಂದನಾ ಭಾಷಣಕ್ಕೆ ಮುಂದಡಿ ಇಡುತ್ತಾರೆ.

ಮುಂದೆ ಸಂಗೀತದ ಹಿನ್ನೆಲೆ, ಕಲಾವಿದನ ಸಾಧನೆ, ರಾಜಕಾರಣಿಗಳ ಸಂವೇದನಾರಾಹಿತ್ಯ ಹಾಗೂ ಭೀಮಸೇನ ಜೋಶಿಯವರ ಅನನ್ಯತೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ.

“ನಮ್ಮ ಜೀವನದ ಮೇಲೆ ಹಾಗೂ ಸಂಸ್ಕೃತಿಯ ಮೇಲೆ ಸಂಗೀತದ ಪ್ರಭಾವ ಬಹಳವಿದೆ. ಸನಾತನ ಸಂಸ್ಕೃತಿಯಲ್ಲಿ ನಾದವನ್ನು ಬ್ರಹ್ಮ ಎಂದು ಕರೆಯಲಾಗಿದೆ, ಹಾಗೆ ನಾದವನ್ನು ಹೊರತುಪಡಿಸಿದರೆ ಸೃಷ್ಟಿಯ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ.

ಗೀತೆಯ ಗಾಯನದ ಮೂಲಕ ಭಗವಂತನನ್ನು ಸುಲಭವಾಗಿ ಸಿದ್ಧಿಸಿಕೊಳ್ಳಬಹುದು. ಪ್ರತಿ ಅಕ್ಷರಗಳನ್ನು ಬೇರೆ ಬೇರೆ ರೀತಿಯಿಂದ ಹಾಡುವ ಕಲೆಯನ್ನು ನಮ್ಮ ಪೂರ್ವಜರು ಹಸ್ತಗತ ಮಾಡಿಕೊಂಡಿದ್ದರು, ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಭಕ್ತಿ ಸಂಗೀತವಂತೂ ದೇಶದಲ್ಲಿ ಸಂಜೀವಿನಿಯ ಕಾರ್ಯ ಮಾಡಿದೆ.

ಬ್ರಿಟಿಷ್ ಆಡಳಿತದಲ್ಲಿ ನಮ್ಮ ಅನೇಕ ಸಂತ ಗಾಯಕರು ಭಕ್ತಿಗಾಯನದ ಪ್ರವಾಹ ಹರಿಸಿದ್ದರಿಂದ ಭಾರತೀಯ ಜನಜೀವನದಲ್ಲಿ ಹೊಸ ಉತ್ಸಾಹ ಹೊಮ್ಮಿತ್ತು" ಎಂದು ಭಾರತೀಯತೆಯ ಮೇಲೆ ಆಗಿರುವ ಸಂಗೀತದ ಪ್ರಭಾವವನ್ನು ವರ್ಣಿಸುತ್ತಾರೆ.

“ಪಂಡಿತ್ ಜಿ ಅವರ ಗಾಯನದಲ್ಲಿ ಕರುಣೆಯೂ ಇದೆ, ಶಕ್ತಿಯೂ ಇದೆ, ಮಾಧುರ್ಯವೂ ಇದೆ, ಮಾರ್ದವತೆಯೂ ಇದೆ. ಅವರ ಧೀರ ಗಂಭೀರ ಧ್ವನಿ, ವೈವಿಧ್ಯಮಯ ತಾನ್‌ಗಳು, ರಾಗದ ಮುಳುಗಿದ್ದರೂ ಅದರಿಂದ ಈಚೆ ಬಂದು ಹೊಸದೊಂದು ಜಾದೂವಿನ ವಾತಾ ವರಣ ಉಂಟುಮಾಡುವ ಅವರ ಸ್ವರದ ಸೌಂದರ್ಯ ಅನುಪಮವಾದದ್ದು.

ಕಷ್ಟ ಕಂಟಕಗಳನ್ನು ದಾಟಿ ಪರಿಶ್ರಮದ ದಾರಿಯಿಂದ ಸಂಗೀತಕ್ಕೆ ಸಾಧನೆಯ ರೂಪ ಕೊಟ್ಟು ಸಂಗೀತ ಕ್ಷೇತ್ರದಲ್ಲಿ ಇಂದು ಸರ್ವಮಾನ್ಯವಾದ ಸ್ಥಾನವನ್ನು ಅವರು ಗಳಿಸಿದ್ದಾ ಗಿದೆ. ಅನೇಕ ವರ್ಷಗಳ ಗುರುವಿನ ಹುಡುಕಾಟದ ಮಧ್ಯೆಯೂ ಸ್ವಂತ ಸಾಧನೆಯನ್ನು ಬಿಡದಿದ್ದ ಕಾರಣದಿಂದ, ಭೀಮಸೇನ ಎನ್ನುವುದು ಇಂದು ಕೇವಲ ಒಂದು ವ್ಯಕ್ತಿಯ ಹೆಸರು ಮಾತ್ರವಲ್ಲ; ಸಂಗೀತದ ಸಾಧನೆ, ಆರಾಧನೆ ಮತ್ತು ವಂದನೆಯ ಹೆಸರಾಗಿದೆ.

ಕಿರಾನಾ ಘರಾನೆಯ ಕೀರ್ತಿಯನ್ನು ದೇಶದ ಒಳಗೆ ಹಾಗೂ ಹೊರಗೆ ಅವರು ಪಸರಿಸಿದ್ದಾರೆ. ಪ್ರೇಕ್ಷಕರನ್ನು 3-4 ತಾಸು ಹಿಡಿದಿಟ್ಟುಕೊಳ್ಳುವ ತಾಕತ್ತು ಅವರ ಧ್ವನಿಗಿದೆ" ಎಂದು ಕಲಾವಿದ ಭೀಮಸೇನ ಜೋಶಿಯವರ ಸಂಗೀತಕ್ಕೆ ಮಂಗಳಾಶಾಸನ ಮಾಡುತ್ತಾರೆ.

“ಪ್ರಕೃತಿಯ ಸಂಗೀತವಿದೆ, ಭೂಮಿಗೆ ಕಿವಿಕೊಟ್ಟು ಕೇಳಿ ಅದೂ ಹಾಡುತ್ತದೆ, ಹಾರುವ ಹಕ್ಕಿ ಪಕ್ಷಿಗಳು ಹಾಡುತ್ತವೆ, ಅದನ್ನು ಅನುಭವಿಸುವ ರಸಿಕತೆ ಬೇಕಷ್ಟೆ. ಶಾಸ್ತ್ರೀಯ ಸಂಗೀತವು ನಮ್ಮ ದೇಶದ ರಸಜ್ಞ ಶ್ರೋತೃಗಳನ್ನು ಆಕರ್ಷಿಸುತ್ತಾ ಸಾಗುವುದು ಇಂದಿನ ಅಗತ್ಯವಾಗಿದೆ. ಹಾಗೆಯೇ ಹೊಸ ತಲೆಮಾರು ಕೂಡಾ ಇಂದು ಶಾಸ್ತ್ರೀಯ ಸಂಗೀತದ ಆಳಕ್ಕೆ ಇಳಿದು ಅಭ್ಯಾಸ ಮಾಡಬೇಕಾದ ಅಗತ್ಯವಿದೆ.

ಸಂಗೀತದ ಆಧುನಿಕ ವಿಧಾನಗಳಿಗೆ ಶಾಸ್ತ್ರೀಯ ಸಂಗೀತದ ವಿರೋಧವಿಲ್ಲ. ಎಲ್ಲಿ ಗಾಯಕ ನೇ ಸ್ವಯಂ ಗಾಯನವಾಗುತ್ತಾ ತನ್ನನ್ನೇ ಕಳೆದುಕೊಳ್ಳುತ್ತಾನೋ, ಅಂಥ ಶಾಸ್ತ್ರೀಯ ಸಂಗೀತ ಕಲಾವಿದರ ಅನುಭವ ಶ್ರೋತೃಗಳಿಗೆ ಆಗುತ್ತದೆ. ಪಂಡಿತ್ ಭೀಮ್‌ಸೇನ ಜೋಶಿ ಯವರು ಕಳೆದ 50 ವರ್ಷಗಳಿಂದ ಸಂಗೀತದ ಸಾಧನೆ ಮಾಡುತ್ತಾ, ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರಾಗಿದ್ದಾರೆ.

ಇಂದಿನ ರಾಜಕಾರಣದಲ್ಲಿ ಶ್ರುತಿ ತಪ್ಪಿಹೋಗಿದೆ, ಸ್ವರದ ಆರೋಹಗಳಿಗಿಂತ ಸ್ಥಾನದ ಆರೋಹಾವರೋಹಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತಿದೆ. ಸಂಗೀತವನ್ನು ಗೌರವಿಸುವ ಈ ಕಾರ್ಯಕ್ರಮಕ್ಕೆ ನನ್ನನ್ನು ಯಾಕೆ ಆಮಂತ್ರಿಸಿದ್ದಾರೆ ಎಂದು ಆಲೋಚಿಸಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ, ಈಗತಾನೆ ಹುಟ್ಟಿದ ಮಗು ಅಳುವುದಾದರೂ ಅದು ಶ್ರುತಿಯ ಅಳುತ್ತದೆ ಎನ್ನುವ ಪ್ರತೀತಿ ಇದೆ. ನಾನು ಹುಟ್ಟಿದಾಗ ಶ್ರುತಿಯಿಂದ ಅತ್ತಿದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೂ ನಾನು ಹುಟ್ಟಿರುವುದು ಗ್ವಾಲಿಯರ್‌ನ ಆಗಿರುವುದರಿಂದ ನನ್ನನ್ನು ಈ ಸಮಾರೋಹಕ್ಕೆ ಕರೆದಿರಲಿಕ್ಕೆ ಸಾಕು" ಎಂದು ತಮಗೆ ಸಿಕ್ಕ ಗೌರವವನ್ನು ಹುಟ್ಟೂರಿಗೆ ವರ್ಗಾಯಿಸುತ್ತಾರೆ.

“ಹಾಗೆ ನೋಡಿದರೆ ನಾನು ‘ಅಸುರ’, ನನಗೆ ‘ಸುರ್’ನ ಕಲ್ಪನೆಯಿಲ್ಲದಿರುವುದರಿಂದ ನಾನು ಅಸುರನಿದ್ದೇನೆ; ‘ಸಸುರ್’ ಆಗಲು ಸಾಧ್ಯವಾಗಲಿಲ್ಲ, ನನಗೆ ಮದುವೆಯಾಗದಿರುವು ದರಿಂದಲೂ ನಾನು ‘ಸಸುರ್’ ಆಗಲೂ ಸಾಧ್ಯವಾಗಲಿಲ್ಲ" ಎನ್ನುವ ಮೂಲಕ ಸಂಗೀತದ ‘ಸುರ್’ ಎನ್ನುವ ಶಬ್ದವನ್ನು ಅತ್ಯಂತ ಚಾಕಚಕ್ಯತೆಯಿಂದ ಬಳಸುತ್ತಾರೆ ವಾಜಪೇಯಿ.

ಅವರು ‘ಬೇಸುರ್’ ಅನ್ನು ‘ಅಸುರ್’ ಮಾಡಿ, ‘ಸುರ್’ ಅನ್ನು ‘ಸಸುರ್’ ಮಾಡಿ ಭಾಷಣದಲ್ಲಿ ಪ್ರಸ್ತುತಪಡಿಸಿದ ರೀತಿ ಅನನ್ಯವಾಗಿತ್ತು (ಹಿಂದಿ ಭಾಷೆಯ ‘ಸಸುರ್’ ಎನ್ನುವ ಶಬ್ದಕ್ಕೆ ‘ಹೆಣ್ಣು ಕೊಟ್ಟ ಮಾವ’ ಎನ್ನುವ ಅರ್ಥವಾಗುತ್ತದೆ). ಭಾಷಣದಲ್ಲಿ ಇಂಥ ತಿಳಿಹಾಸ್ಯ ಮಾಡುತ್ತಾ ಬಹಳ ಹೊತ್ತು ನಿಲ್ಲದೇ ಮತ್ತೆ ಮೂಲ ಗಂಭೀರ ವಿಷಯಕ್ಕೆ ಮರಳುವ ಅವರ ಜಾಣ್ಮೆ ಅನುಸರಣೀಯವಾದದ್ದಾಗಿದೆ.

“ನಾನು ಭೀಮಸೇನ ಅವರನ್ನು ಸನ್ಮಾನಿಸಿದಾಗ ಅವರು ನನ್ನ ಕಾಲನ್ನು ಮುಟ್ಟಿ ನಮಸ್ಕರಿಸಿದರು, ಆ ಮೂಲಕ ನನ್ನನ್ನು ಲಜ್ಜಿತನನ್ನಾಗಿಸಿಬಿಟ್ಟರು" ಎಂದು ತಮ್ಮ ವಿನಯವಂತಿಕೆಯನ್ನು ತೋರುತ್ತಾರೆ. ರಸಜ್ಞತೆ, ವಿದ್ವತ್ತು ತುಂಬಿದ ಮತ್ತು ವಿನಯವಂತ ರಾದ ಅಟಲ್ ಬಿಹಾರಿಯವರು, ತಮಗಿಂತ ಎರಡು ವರ್ಷ ಚಿಕ್ಕವರಾಗಿದ್ದರೂ ಭೀಮಸೇನ ಜೋಶಿಯವರು ತಮ್ಮ ಪಾದ ನಮಸ್ಕಾರ ಮಾಡಿರುವುದನ್ನು ಮರೆಯದೇ ಉಲ್ಲೇಖಿಸು ತ್ತಾರೆ.

“ಜೋಶಿಯವರು ನನಗೆ ನಮಸ್ಕರಿಸಿದರು ಅಂದಮಾತ್ರಕ್ಕೆ ನಾನು ದೊಡ್ಡವನಾಗಲಿಲ್ಲ, ನನಗೆ ನನ್ನ ಇತಿಮಿತಿಯ ಅರಿವಿದೆ; ಆದರೆ ಅದು ಜೋಶಿಯವರ ವಿನಮ್ರತೆಯ ದರ್ಶನ ವಾಗಿತ್ತು" ಎನ್ನುತ್ತಾ, “ರಾಷ್ಟ್ರಕವಿ ಮೈಥಿಲಿಶರಣ್ ಗುಪ್ತಾ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಲು ಹೋದಾಗ ಆಯೋಜಕರು ಅವರಿಗಿಂತ ನನ್ನನ್ನೇ ಜಾಸ್ತಿ ಹೊಗಳುತ್ತಿದ್ದರು, ಅದು ನನಗೆ ಮುಜುಗರವಾಗುತ್ತಿತ್ತು.

ಹಾಗಾಗಿ ನಾನೇ ಆ ಕುರಿತು ಆಯೋಜಕರನ್ನು ಎಚ್ಚರಿಸಿ, ‘ದಯಮಾಡಿ ಇಂದು ಪಂ.ಮೈಥಿಲಿ ಶರಣ್ ಗುಪ್ತಾ ಅವರ ಹಾಗೂ ಅವರ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡಿ’ ಎಂದು ಪ್ರೇರೇಪಿಸಿದ್ದೆ, ಅದಕ್ಕುತ್ತರವಾಗಿ ರಾಮ್ ಕಿಂಕರ್ ಉಪಾಧ್ಯಾಯ ಎನ್ನುವ ಅಲ್ಲಿ ಉಪಸ್ಥಿತರಿದ್ದ ವಿದ್ವಾಂಸರೊಬ್ಬರು ಹೇಳಿದ ಮಾತು ‘ವಾಜಪೇಯಿಯವರೇ ಬೇಸರಿಸಿ ಕೊಳ್ಳಬೇಡಿ, ಶತಮಾನಗಳ ಮೇಲೆ ಶತಮಾನ ಕಳೆದರೂ ಪಂ.ಮೈಥಿಲಿ ಶರಣ್ ಗುಪ್ತಾ ಅವರ ಕುರಿತ ಪ್ರಶಂಸನೆಯ ಮಾತುಕತೆಗಳು ಈ ದೇಶದಲ್ಲಿ ನಡೆಯುತ್ತಲೇ ಇರುತ್ತವೆ.

ಅಷ್ಟು ಶಾಶ್ವತವಾದ ಕೆಲಸಗಳನ್ನು ಅವರು ಮಾಡಿದ್ದಾರೆ. ಹಾಗಾಗಿ ಅವರನ್ನು ಇಂದು ಮಾತ್ರ ಹೊಗಳಬೇಕಾಗಿಲ್ಲ. ರಾಜಕಾರಣಿಗಳಿಗೆ ಹಾಗಲ್ಲ, ಹೊಗಳಿಕೆ ಎನ್ನುವುದು ವೇದಿಕೆ ಯ ಮೇಲೆ ಇರುವಷ್ಟು ಹೊತ್ತು ಮಾತ್ರ ಆಗುವುದರಿಂದ ನಿಮ್ಮ ಬಗ್ಗೆಯೇ ಇಲ್ಲಿ ಹೆಚ್ಚು ಹೇಳುತ್ತಿದ್ದೇವೆ’ ಎನ್ನುವ ಮೂಲಕ ರಾಜಕಾರಣಿಗಳಾದ ನಮ್ಮ ಸ್ಥಾನ ಏನು ಎನ್ನುವುದನ್ನು ತೋರಿಸಿದ್ದರು.

ಹಾಗಾಗಿ ನನ್ನಂಥವರು ನೂರಾರು ಜನ ಬರುತ್ತಾರೆ ಹೋಗುತ್ತಾರೆ. ಆದರೆ ಪಂಡಿತ್ ಭೀಮಸೇನ ಜೋಶಿಯಂಥ ಸಾಧಕರು ಅಮರರಾಗುಳಿಯುತ್ತಾರೆ" ಎಂದಿದ್ದರು. ಭಾರತೀಯ ರಲ್ಲಿ ಸಂಗೀತವು ವಹಿಸಿದ ಪಾತ್ರದ ಬಗ್ಗೆ ವಾಜಪೇಯಿ ಮಾತನಾಡುತ್ತಾರೆ, ಗಾಯನದ ಮೂಲವಾದ ಹಾಗೂ ಭಗವಂತನಿಗೆ ಅತ್ಯಂತ ಪ್ರಿಯವಾದ ಸಾಮವೇದದ ಬಗ್ಗೆ ಮಾತನಾ ಡುತ್ತಾರೆ, ಶಾಸ್ತ್ರೀಯ ಸಂಗೀತವು ಸಂಸ್ಕೃತಿಯ ಮೇಲೆ ಬೀರುವ ಪ್ರಭಾವದ ಕುರಿತು ಮಾತನಾಡುತ್ತಾರೆ.

ಹಿಂದಿ ಭಾಷೆಯ ಜತೆಗೆ ಅಲ್ಲಲ್ಲಿ ಮರಾಠಿಯನ್ನೂ ಬಳಸುತ್ತಾರೆ. ಅವರಿಗೆ ಉದ್ಧಂಡ ಆಯುಷ್ಯ ದೊರೆಯಲಿ ಎಂದು ಹರಸಿ ತಮ್ಮ ಮಾತನ್ನು ವಾಜಪೇಯಿಯವರು ಮುಗಿಸು ತ್ತಾರೆ. ಸುಮಾರು 20 ನಿಮಿಷಗಳ ಭಾಷಣದಲ್ಲಿ ಸಂಗೀತ ಮತ್ತು ಅದರ ಪ್ರಸ್ತುತತೆ, ಗಾಯನ, ಗಾಯಕನ ಸಾಧನೆ ಹಾಗೂ ಯಾವುದು ಶಾಶ್ವತ, ಯಾವುದು ಕ್ಷಣಿಕ ಎನ್ನುವ ಎಲ್ಲ ವಿಷಯ ಗಳನ್ನು ಪ್ರಸ್ತುತಪಡಿಸಿರುವ ರೀತಿಯಿಂದಾಗಿ ಇದು ಒಂದು ಉತ್ತಮ ಭಾಷಣದ ನಮೂನೆ ಯಾಗಿ ನಿಲ್ಲುತ್ತದೆ. ಅವರ ಭಾಷಣದಲ್ಲಿ ನ್ಯೂನಾತಿರೇಕಗಳಿಗೆ ಜಾಗವೇ ಇರಲಿಲ್ಲ. ಯಾವುದೂ ಅತಿಯಿಲ್ಲ, ಯಾವುದನ್ನೂ ಬಿಟ್ಟೂ ಇಲ್ಲ, ನಾಟಕೀಯತೆಯಂತೂ ಇಲ್ಲವೇ ಇಲ್ಲ.

ಇಂಥದ್ದೇ ಇನ್ನೊಂದು ಉತ್ತಮ ಭಾಷಣವನ್ನು ಉದಾಹರಿಸಬಹುದಾದರೆ ಅದು ಸುಷ್ಮಾ ಸ್ವರಾಜ್ ಅವರು ಕಂಚಿ ಕಾಮ ಕೋಟಿ ಪೀಠದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಸಂಸ್ಕೃತ ವಿದ್ವಾಂಸರುಗಳ ಸಮ್ಮುಖದಲ್ಲಿ ಸಂಸ್ಕೃತ ಸಾಹಿತ್ಯದ ಬಗ್ಗೆ ಅತ್ಯಂತ ಆತ್ಮವಿಶ್ವಾಸದಿಂದ ಮಾಡಿದ ಸ್ಮರಣೀಯವಾದ ಪ್ರೌಢ ಭಾಷಣ.

ಸ್ವತಃ ವಿದ್ವಾಂಸರಾಗಿದ್ದ ಕಂಚೀ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಜಯೇಂದ್ರ ಸರಸ್ವತಿ ಗಳೂ ಅವರ ವಾಣಿಯನ್ನು ಮಂತ್ರಮಗ್ಧರಾಗಿ ಕುಳಿತು ಆಲಿಸಿದ್ದರು. ಇವರ ಭಾಷಣ ಗಳನ್ನು ಕೇಳುವಾಗ, ಸಂಗೀತ ಸಾಹಿತ್ಯಗಳಲ್ಲಿ ಇವರುಗಳಿಗಿರುವ ಆಸಕ್ತಿ, ಅಧ್ಯಯನದ ಆಳವನ್ನು ಗಮನಿಸಿ ಆಶ್ಚರ್ಯವಾಗುತ್ತದೆ. ಇಂಥವರ ಮಾತುಗಳು ಸಂಗೀತದಂತೆ ಕಿವಿಗೆ ಇಂಪನ್ನೂ ಮನಸ್ಸಿಗೆ ತಂಪನ್ನೂ ತರುತ್ತವೆ. ಹಾಗಾಗಿ ಇನ್ನೂ ಕೇಳೋಣ ಎನಿಸುತ್ತದೆ.