ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rashmi Baralu Column: ಒತ್ತಡ ಕಳೆವ ಪ್ರಯೋಗ, ನೆಮ್ಮದಿಯ ಯೋಗ

ಯುವಕರು ಮೊದಲು ದೈಹಿಕವಾಗಿ ಶಕ್ತಿವಂತರಾಗಬೇಕು, ಆಗ ಮಾತ್ರ ಮಾನಸಿಕ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಾಧಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಯುವ ಪೀಳಿಗೆ ಜಿಮ್‌ಗಳಲ್ಲಿ ಬೆವರಿಳಿಸಿ ಕಸರತ್ತು ಮಾಡಿ ಕೇವಲ ಬಾಹ್ಯ ಸ್ನಾಯುಗಳನ್ನು ಬೆಳೆಸಲಷ್ಟೇ ಆದ್ಯತೆ ನೀಡುತ್ತಿದ್ದಾರೆ. ಅದನ್ನೇ ದೈಹಿಕ ಶಕ್ತಿ ವರ್ಧನೆ, ಆರೋಗ್ಯ ಎಂದುಕೊಂಡಿದ್ದಾರೆ.

Rashmi Baralu Column: ಒತ್ತಡ ಕಳೆವ ಪ್ರಯೋಗ, ನೆಮ್ಮದಿಯ ಯೋಗ

-

Profile
Ashok Nayak Jun 20, 2026 10:57 AM

ಯೋಗಾ ಯೋಗ

ರಶ್ಮಿ ಬರಾಳು

ಆಧುನಿಕ ಜೀವನಶೈಲಿಯೇ ಹಾಗೆ; ಎಲ್ಲದರಲ್ಲೂ ಹರಿಬಿರಿ, ಎಲ್ಲದಕ್ಕೂ ಗಡಿಬಿಡಿ. ಇಲ್ಲಿ ನಿಧಾನ, ಸಮಾಧಾನಗಳಿಗೆ ವ್ಯವಧಾನವೇ ಇಲ್ಲದ ಅವಸರ ಮತ್ತು ಆತುರ. ನೆಂಟರಿಷ್ಟರು, ಪರಿಚಯಸ್ಥರ ಜೊತೆಗೆ ಹೋಗಲಿ, ಸ್ವಂತ ಕುಟುಂಬದವರ ಜೊತೆಗೂ ಹತ್ತು ನಿಮಿಷ ಸಂಯಮದಿಂದ, ಸಂತೋಷ ದಿಂದ ಕಾಲ ಕಳೆಯುವಷ್ಟು ಸಮಯ ಯಾರ ಬಳಿಯೂ ಇಲ್ಲ.

ಆಧುನಿಕ ಯಂತ್ರಗಳ ಯುಗದಲ್ಲಿ ಮನುಷ್ಯರೂ ಯಂತ್ರಗಳಂತೆಯೇ ಆಗಿಹೋಗಿದ್ದಾರೇನೋ ಎನ್ನಿಸಿ ಬಿಡುತ್ತದೆ. ಮಾನವನ ಸಹಜ ಭಾವನೆಗಳ ಅಭಿವ್ಯಕ್ತಿಗೂ ಇಲ್ಲಿ ಸಮಯದ ಅಭಾವ. ಇಂತಹ ಯಾಂತ್ರಿಕ ಬದುಕಿನ ನೇರ ಪರಿಣಾಮಕ್ಕೆ ಒಳಗಾಗುತ್ತಿರುವುದು ಇಂದಿನ ಯುವ ಪೀಳಿಗೆ.

ತಂತ್ರಜ್ಞಾನದ ಅತಿಯಾದ ಬಳಕೆ, ಉದ್ಯೋಗದ ಪೈಪೋಟಿ, ಮತ್ತು ಭವಿಷ್ಯದ ಆತಂಕಗಳು ಯುವಕರಲ್ಲಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಹಾಗೂ ದೈಹಿಕ ಆಯಾಸವನ್ನು ಸೃಷ್ಟಿಸುತ್ತಿವೆ. ಇದು ಅವರ ದೈಹಿಕ ಆರೋಗ್ಯವಷ್ಟೇ ಅಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ.

ಸದೃಢ ದೇಹದಲ್ಲಿ ಸದೃಢ ಮನಸ್ಸು

‘ನಾಯಮಾತ್ಮಾ ಬಲಹೀನೇನ ಲಭ್ಯಃ’ ಅಂದರೆ ಬಲಹೀನರಿಗೆ ಆತ್ಮಸಾಕ್ಷಾತ್ಕಾರ ಸಾಧ್ಯವಿಲ್ಲ ಎನ್ನು ತ್ತದೆ ಉಪನಿಷತ್ತಿನ ಒಂದು ಶ್ಲೋಕ. ಆರೋಗ್ಯವಂತ ದೇಹದ ಆರೋಗ್ಯವಂತ ಮನಸ್ಸು ನೆಲೆಸಲು ಸಾಧ್ಯ ಎಂದಿದ್ದರು ಸ್ವಾಮಿ ವಿವೇಕಾನಂದರು.

ಇದನ್ನೂ ಓದಿ: Mohan Vishwa Column: ಬ್ರಿಟಿಷರ ಪಕ್ಷದಿಂದ ಆರ್‌ʼಎಸ್‌ʼಎಸ್‌ ಬಗ್ಗೆ ಪ್ರಶ್ನೆ

ಯುವಕರು ಮೊದಲು ದೈಹಿಕವಾಗಿ ಶಕ್ತಿವಂತರಾಗಬೇಕು, ಆಗ ಮಾತ್ರ ಮಾನಸಿಕ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಾಧಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಯುವ ಪೀಳಿಗೆ ಜಿಮ್‌ಗಳಲ್ಲಿ ಬೆವರಿಳಿಸಿ ಕಸರತ್ತು ಮಾಡಿ ಕೇವಲ ಬಾಹ್ಯ ಸ್ನಾಯುಗಳನ್ನು ಬೆಳೆಸಲಷ್ಟೇ ಆದ್ಯತೆ ನೀಡುತ್ತಿದ್ದಾರೆ. ಅದನ್ನೇ ದೈಹಿಕ ಶಕ್ತಿ ವರ್ಧನೆ, ಆರೋಗ್ಯ ಎಂದುಕೊಂಡಿದ್ದಾರೆ.

ಇದರಿಂದ ಆಧುನಿಕ ಜೀವನ ಶೈಲಿ ಮನಸ್ಸಿನ ಮೇಲೆ ಬೀರುತ್ತಿರುವ ಒತ್ತಡದ ಪರಿಣಾಮ ಕಡಿಮೆ ಆಗುತ್ತಿದೆಯೇ ಅಥವಾ ಇನ್ನು ಹೆಚ್ಚಾಗುತ್ತಿದೆಯೇ ಎಂಬುದನ್ನು ಯೋಚಿಸಬೇಕಲ್ಲವೇ? ಮನುಷ್ಯನ ಸದೃಢ ಬದುಕಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಆತ್ಮ ಶಕ್ತಿ ಕೂಡ ಅಷ್ಟೇ ಪ್ರಮುಖ ವಾದುದು. ಇವೆಲ್ಲದರ ಸಮತೋಲಿತ ಸಮ್ಮಿಲನ ಯೋಗದಿಂದ ಮಾತ್ರ ಸಾಧ್ಯವಾಗುವಂತದ್ದು.

ದೇಹ- ಮನಸ್ಸು- ಆತ್ಮ ಸಂಯೋಜನೆ

ಪ್ರಾಚೀನ ಗ್ರಂಥಗಳ ಪ್ರಕಾರ, ಯೋಗ ಎಂಬ ಪದವು ಸಂಸ್ಕೃತದ ‘ಯುಜ’ ಎಂಬ ಧಾತುವಿನಿಂದ ಬಂದಿದ್ದು, ‘ಜೋಡಿಸುವುದು’ ಅಥವಾ ‘ಸಂಯೋಜಿಸುವುದು’ ಎಂಬ ಅರ್ಥವನ್ನು ನೀಡುತ್ತದೆ. ಯೋಗ ಎಂದರೆ ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿ ಸುವ ಮಹಾನ್ ಕಲೆ. ಇಂದಿನ ಯುವ ಪೀಳಿಗೆಯ ದೊಡ್ಡ ಸಮಸ್ಯೆ ಏನೆಂದರೆ, ಅವರ ದೇಹ ಎಲ್ಲೋ ಇರುತ್ತದೆ, ಮನಸ್ಸು ಇನ್ಯಾವುದೋ ಆಲೋಚನೆಯಲ್ಲಿ ತೇಲುತ್ತಿರುತ್ತದೆ. ಈ ಅಸಮತೋಲನವೇ ಒತ್ತಡಕ್ಕೆ ಪ್ರಮುಖ ಕಾರಣ. ಭಗವದ್ಗೀತೆಯು ಸಮತ್ವಂ ಯೋಗ ಉಚ್ಯತೇ ಅಂದರೆ ಮನಸ್ಸಿನ ಸಮಸ್ಥಿತಿಯೇ ಯೋಗ ಎಂದು ಹೇಳುತ್ತದೆ. ಯೋಗಾಭ್ಯಾಸದ ಮೂಲಕ ಯುವಕರು ತಮ್ಮ ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಏರ್ಪಡಿಸಿಕೊಂಡಾಗ, ಓದಿನಲ್ಲಿ ಅಥವಾ ಅವರು ಮಾಡುವ ಕೆಲಸದಲ್ಲಿ ಅದ್ಭುತವಾದ ಏಕಾಗ್ರತೆ ಮತ್ತು ನೈಪುಣ್ಯ ತಾನಾಗಿಯೇ ಮೂಡಿಬರುತ್ತದೆ. ಅದರಿಂದಾಗಿ ಮನಸ್ಸಿನ ಒತ್ತಡ ಕೂಡ ತಾನಾಗಿಯೇ ಕಡಿಮೆ ಯಾಗುತ್ತದೆ.

ಯೋಗವು ದೇಹದ ಒಳಗಿನ ಅಂಗಾಂಗಗಳನ್ನು ಮತ್ತು ನರಮಂಡಲವನ್ನು ಸದೃಢಗೊಳಿಸುತ್ತದೆ. ಯೋಗದ ಮೂಲಕ ಸಿಗುವ ದೈಹಿಕ ಶಕ್ತಿಯೇ ಮನಸ್ಸನ್ನು ಶಾಂತವಾಗಿಡಲು ಇರುವ ಅಡಿಪಾಯ. ‘ಯೋಗ’ ಎಂದರೆ ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಜೋಡಿ ಸುವ ಅದ್ಭುತ ಕಲೆ. ಯೋಗದಲ್ಲಿನ ಪ್ರಾಣಾಯಾಮ ಮತ್ತು ಧ್ಯಾನವು ಚದುರಿ ಹೋಗುವ ಯುವ ಮನಸ್ಸನ್ನು ಏಕಾಗ್ರತೆಯತ್ತ ತರುತ್ತದೆ. ಪ್ರತಿದಿನ ಕೇವಲ ಇಪ್ಪತ್ತು ನಿಮಿಷಗಳ ಯೋಗಾಭ್ಯಾಸವು ಮೆದುಳಿಗೆ ರಕ್ತಸಂಚಲನವನ್ನು ಹೆಚ್ಚಿಸಿ, ಧನಾತ್ಮಕ ಆಲೋಚನೆಗಳನ್ನು ಜಾಗೃತಗೊಳಿಸುತ್ತದೆ. ಇದು ಯುವಕರಲ್ಲಿ ತಾಳ್ಮೆ ಮತ್ತು ಸಮಾಧಾನವನ್ನು ಬೆಳೆಸುವ ಮೂಲಕ ಅವರ ಬದುಕಿನ ಸರ್ವತೋಮುಖ ಏಳಿಗೆಗೆ ದಾರಿದೀಪವಾಗುತ್ತದೆ.

62 ok

ಯೋಗಕ್ಕೆ ಜಾಗತಿಕ ಮನ್ನಣೆ

ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. ‘ಯೋಗ’ ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ಮತ್ತು ಯೋಗಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ಜೀವನ ವಿಜ್ಞಾನ. ಆದರೆ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆ ಮಾತಿ ನಂತೆ, ನಮ್ಮದೇ ಆದ ಈ ಅಮೂಲ್ಯ ಕೊಡುಗೆಯ ಮಹತ್ವವನ್ನು ಅರಿಯದೆ ನಾವುಗಳೇ ಯೋಗ ವನ್ನು ಕಡೆಗಣಿಸುತ್ತಾ ಬಂದಿದ್ದೇವೆ. ನಾವು ನಿರ್ಲಕ್ಷಿಸಿದ ಇದೇ ಯೋಗದ ಶಕ್ತಿಯನ್ನು ಇಂದು ಪಾಶ್ಚಿಮಾತ್ಯ ದೇಶಗಳು ಮುಕ್ತಕಂಠದಿಂದ ಒಪ್ಪಿಕೊಂಡಿವೆ.

ಇಂದು ಜಗತ್ತಿನಾದ್ಯಂತ ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ಯನ್ನು (International Yoga Day) ಆಚರಿಸುವ ಮೂಲಕ ಇಡೀ ವಿಶ್ವವೇ ಭಾರತದ ಈ ಜ್ಞಾನಕ್ಕೆ ತಲೆಬಾಗಿದೆ. ವಿದೇಶಿಗರು ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳುತ್ತಿದ್ದಾರೆ. ಆದರೆ, ಮೂಲ ಧೀಮಂತ ಸಂಸ್ಕೃತಿ ಯನ್ನು ಹೊಂದಿರುವ ಭಾರತದ ಯುವ ಪೀಳಿಗೆ ಮಾತ್ರ ಪಾಶ್ಚಿಮಾತ್ಯರ ಜಂಕ್ ಫುಡ್ ಹಾಗೂ ಯಾಂತ್ರಿಕ ಸಂಸ್ಕೃತಿಗೆ ಮರುಳಾಗಿ ನೆಮ್ಮದಿ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಯಾಗಿದೆ. ನಮ್ಮದೇ ನೆಲದ ನಮ್ಮದೇ ಸಂಸ್ಕೃತಿಯ ಮನುಕುಲಕ್ಕೆ ಅತ್ಯಗತ್ಯವಾದ ಈ ಯೋಗ ಸಂಸ್ಕೃತಿ ಎಂಬ ಸಂಜೀವಿನಿಯನ್ನು ಯುವಕರು ಇನ್ನು ಮುಂದಾದರೂ ಗುರುತಿಸಿ, ಹೆಮ್ಮೆಯಿಂದ ಅಳವಡಿಸಿಕೊಳ್ಳಬೇಕಿದೆ.

ಯುವ ಪೀಳಿಗೆಯೇ ದೇಶದ ನಿಜವಾದ ಶಕ್ತಿ ಮತ್ತು ಭವಿಷ್ಯ. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಯುವಕರು ಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ. ಮನಶಾಂತಿಗಾಗಿ ಹಂಬಲಿಸುತ್ತಿದ್ದಾರೆ. ಯೋಗದ ಬಗ್ಗೆ ನಮ್ಮ ಸಮಾಜದಲ್ಲಿ ಹತ್ತು ಹಲವು ತಪ್ಪು ಕಲ್ಪನೆಗಳಿವೆ. ಮಧ್ಯವಯಸ್ಕರು, ವಯೋವೃದ್ಧರು ಅಥವಾ ರೋಗಿಗಳಿಗೆ ಮಾತ್ರ ಯೋಗ ಸೂಕ್ತ, ಯೋಗ ಎಂಬುದು ಕೇವಲ ಹಿಮಾಲಯದ ಯೋಗಿ ಗಳಿಗೆ ಅಥವಾ ಸನ್ಯಾಸಿಗಳಿಗೆ ಮಾತ್ರ ಸೀಮಿತ, ಅದು ಗೃಹಸ್ಥರಿಗಲ್ಲ, ಮಹಿಳೆಯರಿಗಲ್ಲ ಎಂಬೆಲ್ಲ ರೀತಿಯ ತಪ್ಪು ಅಭಿಪ್ರಾಯಗಳಿವೆ.

ಕೆಲವರಂತೂ ಸಣ್ಣಗಿರುವವರು (ಕೃಶವಾಗಿರುವವರು) ಯೋಗ ಮಾಡಿದರೆ ಮತ್ತಷ್ಟು ಕೃಶರಾಗು ತ್ತಾರೆ ಎಂದೂ, ಯೋಗವನ್ನು ಒಮ್ಮೆ ಆರಂಭಿಸಿ ನಂತರ ಬಿಟ್ಟರೆ ಅತಿಯಾಗಿ ದಪ್ಪಗಾಗುತ್ತಾರೆ ಎಂದೂ ನಂಬಿದ್ದಾರೆ. ಆದರೆ ಇವೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಕಲ್ಪನೆಗಳು. ಯೋಗ ಎಂಬುದು ಯಾವುದೇ ಒಂದು ವಯಸ್ಸು, ಲಿಂಗ ಅಥವಾ ವರ್ಗಕ್ಕೆ ಸೀಮಿತವಾದ ಧಾರ್ಮಿಕ ಆಚರಣೆಯಲ್ಲ; ಅದು ಇಡೀ ಮಾನವಕುಲಕ್ಕೆ ಭಾರತೀಯ ಜ್ಞಾನ ಪರಂಪರೆ ನೀಡಿರುವ ವೈಜ್ಞಾನಿಕ ಜೀವನ ಪದ್ಧತಿ.

ಯೋಗವು ದೇಹದ ತೂಕವನ್ನು ಕೇವಲ ಇಳಿಸುವುದಿಲ್ಲ, ಬದಲಿಗೆ ದೇಹದ ಅಗತ್ಯಕ್ಕೆ ತಕ್ಕಂತೆ ತೂಕವನ್ನು ಸಮತೋಲನದಲ್ಲಿಡುತ್ತದೆ (Balanced Weight). ಸಣ್ಣಗಿರುವವರಿಗೆ ದೈಹಿಕ ಶಕ್ತಿ ನೀಡಿ ಸದೃಢಗೊಳಿಸಿದರೆ, ದಪ್ಪಗಿರುವವರಿಗೆ ದೈಹಿಕ ಚಟುವಟಿಕೆ ನೀಡಿ ಆರೋಗ್ಯ ಕಾಪಾಡುತ್ತದೆ. ಹೀಗಾಗಿ, ಯೋಗವನ್ನು ಮಕ್ಕಳು, ಯುವಕರು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರೂ ತಮ್ಮ ಶಕ್ತಿಗೆ ಅನುಗುಣವಾಗಿ ಸುಲಭವಾಗಿ ಮಾಡಬಹುದು.

ಸ್ಥಿರಂ ಸುಖಂ ಆಸನಂ

‘ಯೋಗ’ಎಂದರೆ ದೇಹವನ್ನು ವಿಚಿತ್ರವಾಗಿ ಬಗ್ಗಿಸುವ ಕಷ್ಟದ ಸರ್ಕಸ್ ಎಂದು ಇಂದಿನ ಯುವಕ ರು ಭಾವಿಸಿದ್ದಾರೆ. ಆದರೆ ಮಹರ್ಷಿ ಪತಂಜಲಿ ಅವರು ‘ಸ್ಥಿರಂ ಸುಖಂ ಆಸನಂ’ ಅಂದರೆ ‘ಯಾವ ಭಂಗಿ ದೇಹಕ್ಕೆ ಸ್ಥಿರತೆ ಮತ್ತು ಸುಖವನ್ನು ನೀಡುತ್ತದೆಯೋ ಅದೇ ಆಸನ’ ಎಂದು ಸರಳವಾಗಿ ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಕಠಿಣ ಆಸನಗಳ ಅಗತ್ಯವಿಲ್ಲದೆ, ಸರಳ ಭಂಗಿಗಳಿಂದಲೇ ಯೋಗ ವನ್ನು ಆರಂಭಿಸಬಹುದು.

ಯೋಗ ಧರ್ಮವಲ್ಲ, ಅದೊಂದು ಜೀವ ವಿಜ್ಞಾನ; ಅದು ಆರೋಗ್ಯದ ವಿಜ್ಞಾನ, ಯೌವನದ ವಿಜ್ಞಾನ ಮತ್ತು ದೇಹ-ಮನಸ್ಸುಗಳನ್ನು ಜೋಡಿಸುವ ವಿಜ್ಞಾನ. ಜಗತ್ತಿಗೆ ಯೋಗವನ್ನು ಪರಿಚಯಿಸಿದ ಸನಾತನ ಸಂಸ್ಕೃತಿಯ ಭಾರತ ಭೂಮಿಯ ಯುವಕರಾದ ನಾವು, ನಮ್ಮ ಪೂರ್ವಜರ ಜ್ಞಾನದ ಮೌಲ್ಯವನ್ನು ಅರಿತುಕೊಳ್ಳಬೇಕಿದೆ.

ದಿನದ 24 ಗಂಟೆಗಳ ಬಿಡುವಿರದ ಬದುಕಿನಲ್ಲಿ ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷಗಳನ್ನು ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕಾಗಿ ಮೀಸಲಿಟ್ಟರೆ ಸಾಕು. ಅದ್ಭುತ ಆರೋಗ್ಯದ ಜೊತೆಗೆ ನೆಮ್ಮದಿಯಿಂದ ಕೂಡಿದ ಒತ್ತಡರಹಿತ ಯಶಸ್ವೀ ಜೀವನ ನಮ್ಮದಾಗುತ್ತದೆ. ಇಂದಿನಿಂದಲೇ ಯೋಗವನ್ನು ನಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳೋಣ. ಒತ್ತಡಮುಕ್ತ, ಆರೋಗ್ಯವಂತ ಮತ್ತು ಸಶಕ್ತ ಭಾರತದ ನಿರ್ಮಾಣಕ್ಕೆ ನಮ್ಮಿಂದಲೇ ಮುನ್ನುಡಿ ಬರೆಯೋಣ. ‘ಆರೋಗ್ಯಕರ ವಯಸ್ಸಿಗೆ ಯೋಗ’ ಎಂಬ 2026 ಜೂನ್ 21ರ ಯೋಗ ದಿನದ ಧ್ಯೇಯ ವಾಕ್ಯದೊಂದಿಗೆ ಯೋಗ ವನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸದೃಢರಾಗಿ, ಒತ್ತಡ ಮುಕ್ತರಾಗಿ ಬಾಳೋಣ.