Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್ ಮಾಡೋಕಲ್ಲ !
ಫಲಿತಾಂಶ ಹೆಚ್ಚಾಗಿರುವಷ್ಟೇ ಪ್ರಮಾಣದಲ್ಲಿ ಪಿಯುಸಿ ಪ್ರವೇಶವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ಸರಕಾರ ಸಿಲುಕಿದೆ. ಹಾಗೆಂದು, ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆ ಏರಿಸುವುದಕ್ಕೆ ಉಪನ್ಯಾಸಕರ ಕೊರತೆ ಸಹಜವಾಗಿಯೇ ಕಾಡುತ್ತದೆ. ಈಗಲೇ ಅನೇಕ ಕಾಲೇಜು ಗಳು ಅತಿಥಿ ಉಪನ್ಯಾಸಕರ ಮೇಲೆ ನಡೆಯುತ್ತಿದೆ.
-
ಅಶ್ವತ್ಥಕಟ್ಟೆ
ಬದಲಾವಣೆ ಜಗದ ನಿಯಮ. ಆದರೆ ಯಾವುದೇ ಬದಲಾವಣೆ ನೈಜವಾಗಿ ಆಗಬೇಕಾದ ಕನಿಷ್ಠ ಸಮಯ ಸರ್ವೇ ಸಾಮಾನ್ಯ. ಆದರೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಂದಿರುವ ಐತಿಹಾಸಿಕ ಫಲಿತಾಂಶ ನೈಜವಾಗಿ ಆಗಿರುವ ಪ್ರಕ್ರಿಯೆಯೇ ಎನ್ನುವ ಪ್ರಶ್ನೆ ಯನ್ನು ಕೇಳಿದಾಗ ಸರಕಾರ, ಸಚಿವ ಮಧು ಬಂಗಾರಪ್ಪ, ಇಲಾಖೆ ಅಧಿಕಾರಿಗಳು ಹೌದು ಎನ್ನುವ ಉತ್ತರ ನೀಡುತ್ತಿದ್ದಾರೆ ಹೊರತು, ಶಿಕ್ಷಕರು ಹಾಗೂ ಶೈಕ್ಷಣಿಕ ಕ್ಷೇತ್ರದ ತಜ್ಞರನ್ನು ಕೇಳಿದಾಗ ಇಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ.
ಕಳೆದ ವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶವೇ ಸದ್ಯ ರಾಜ್ಯದ ಹಾಟ್ ಟಾಪಿಕ್ ಎಂದರೆ ತಪ್ಪಾಗುವುದಿಲ್ಲ. ತೃತೀಯ ಭಾಷಾ ಪರೀಕ್ಷೆ ಎರಡು ದಿನ ಬಾಕಿ ಯಿರುವಾಗ ಅಂಕದ ಬದಲು ಗ್ರೇಡಿಂಗ್ ವ್ಯವಸ್ಥೆಯ ಘೋಷಣೆ, ಬಳಿಕ ಹೈಕೋರ್ಟ್ ಮಧ್ಯಪ್ರವೇಶ, ಪುನಃ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಸೂಚನೆ, ಅದಕ್ಕೆ ಸರಕಾರದ ಮೇಲ್ಮನವಿಯ ಸರ್ಕಸ್ ಎಲ್ಲದರ ಹೊರತಾಗಿ ಫಲಿತಾಂಶ ಪ್ರಕಟವಾಗಿದೆ.
ಈ ಎಲ್ಲ ಗೊಂದಲಗಳ ಹೊರತಾಗಿಯೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ.94ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಘೋಷಿಸಿದರು.
ಇನ್ನೊಂದು ರೀತಿ ಹೇಳುವುದಾದರೆ ಪರೀಕ್ಷೆ ಬರೆದಿದ್ದ 7.70 ಲಕ್ಷ ವಿದ್ಯಾರ್ಥಿಗಳ ಪೈಕಿ 45 ಸಾವಿರ ಚಿಲ್ಲರೆ ವಿದ್ಯಾರ್ಥಿಗಳು ಮಾತ್ರ ಫೇಲಾಗಿದ್ದಾರೆ ಎನ್ನುವುದು. ಅದರಲ್ಲಿಯೂ ಮೊದಲ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಯಲ್ಲಿ ಪರೀಕ್ಷೆ ಬರೆದಿದ್ದ 27,707 ವಿದ್ಯಾರ್ಥಿ ಗಳ ಪೈಕಿ 400 ಚಿಲ್ಲರೆ ವಿದ್ಯಾರ್ಥಿಗಳು ಫೇಲಾಗಿದ್ದಾರೆ.
ಇದನ್ನೂ ಓದಿ: Ranjith H Ashwath Column: ಮೀಸಲು ವಿಧೇಯಕದ ಸೋಲು ಯಾರ ಗೆಲುವು ?
ಇನ್ನು ಕಳೆದ ವರ್ಷ ಶೇ.60ರಷ್ಟು ಪಾಸಿಂಗ್‌ನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಯಾದಗಿರಿ ಯಲ್ಲಿ ಏಕಾಏಕಿ ಶೇ.30ರಷ್ಟು ಪಾಸಿಂಗ್ ಪರ್ಸೆಂಟ್ ಹೆಚ್ಚಾಗಿದೆ. ಈ ಬಾರಿ ಕೊನೆಯ ಸ್ಥಾನಕ್ಕೆ ಕುಸಿದಿರುವ ಕಲಬುರಗಿಯೂ ಶೇ.86ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ!
ಇನ್ನು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಫಲಿತಾಂಶವನ್ನು ಗಮನಿಸುವುದಾದರೆ 625ಕ್ಕೆ 625 ಅಂಕ ಪಡೆದವರ ಸಂಖ್ಯೆ ಏಳರಲ್ಲಿದೆ. 624 ಅಂಕವನ್ನು 32 ವಿದ್ಯಾರ್ಥಿಗಳು, 623 ಅಂಕ ವನ್ನು 28 ವಿದ್ಯಾರ್ಥಿಗಳು, 622 ಅಂಕವನ್ನು 74 ವಿದ್ಯಾರ್ಥಿಗಳು, 621 ಅಂಕವನ್ನು 98 ವಿದ್ಯಾರ್ಥಿಗಳು, 620 ಅಂಕವನ್ನು 150 ವಿದ್ಯಾರ್ಥಿಗಳು ಪಡೆದಿದ್ದಾರೆ.
ಮಧು ಬಂಗಾರಪ್ಪನವರು ಈ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ರಾಜ್ಯದ ಬಹುತೇಕರು ಖುಷಿ ಪಡುವುದಕ್ಕಿಂತ ಅಚ್ಚರಿಗೆ ಒಳಗಾದರು. ಏಕೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಹೆಚ್ಚುವರಿ ಫಲಿತಾಂಶ ಪ್ರಕಟವಾಗಿದೆ. ಈ ಪ್ರಮಾಣದಲ್ಲಿ ಫಲಿತಾಂಶದ ಏರಿಕೆಗೆ ಸುಮಾರು 10 ಪುಟಗಳ ಸುದೀರ್ಘ ಆಕ್ಷನ್ ಪ್ಲಾನ್‌ಅನ್ನು ಸಚಿವರು ಹಾಗೂ ಇಲಾಖೆ ನೀಡಿದೆ. ಆದರೆ, ಈ ಪ್ಲಾನ್ ತಳಮಟ್ಟದಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ. ಅಷ್ಟಾದರೂ, ಭಾರಿ ಫಲಿತಾಂಶ ಸಿಕ್ಕಿರುವ ಹಿಂದಿನ ಮರ್ಮವೇನು? ಎನ್ನುವುದು ಬಹುತೇಕರ ಕುತೂಹಲ!
ಫಲಿತಾಂಶವನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡುವುದಾದರೆ, ತೀವ್ರ ಗೊಂದಲಕ್ಕೆ ಕಾರಣವಾಗಿರುವ ತೃತೀಯ ಭಾಷಾ -ಲಿತಾಂಶವನ್ನು ಹೈಕೋರ್ಟ್ ಸೂಚನೆಯಂತೆ ಅಂಕದ ಆಧಾರದಲ್ಲಿ ನೀಡಲಾಗಿದೆ. ಒಂದು ವೇಳೆ ಗ್ರೇಡಿಂಗ್ ನಲ್ಲಿಯೇ ಮುಂದುವರೆ ದಿದ್ದರೆ ಮತ್ತೆ 16ರಿಂದ 17 ಸಾವಿರ ವಿದ್ಯಾರ್ಥಿಗಳು ಪಾಸಾಗುತ್ತಿದ್ದರು.
ಅಂದರೆ, ಫೇಲಾದವರ ಸಂಖ್ಯೆ 30 ಸಾವಿರದ ಆಸುಪಾಸಿಗೆ ಬಂದು ನಿಲ್ಲುತ್ತಿತ್ತು. ಅಂದರೆ ಪರೀಕ್ಷೆ ನಡೆಸುವ ಉದ್ದೇಶ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚುವುದೇ ಅಥವಾ ಪಾಸ್ ಮಾಡುವುದೇ? ಪಾಸ್ ಮಾಡುವುದೇ ಉದ್ದೇಶವಾದರೆ, ಈ ಪ್ರಮಾಣದಲ್ಲಿ ಕಷ್ಟಪಟ್ಟು ಪರೀಕ್ಷೆಗಳನ್ನು ನಡೆಸುವುದೇಕೆ? ಎನ್ನುವ ಪ್ರಶ್ನೆಗಳು ಏಳುತ್ತಿವೆ.
ಹಾಗೆ ನೋಡಿದರೆ, 10 ರಿಂದ 15 ವರ್ಷದ ಹಿಂದಿನ ಫಲಿತಾಂಶವನ್ನು ಗಮನಿಸಿದರೆ ಭಾರಿ ಪ್ರಮಾಣದಲ್ಲಿ ಬದಲಾವಣೆಯಾಗಿದೆ ಎನ್ನುವುದು ಸ್ಪಷ್ಟ. ಒಟ್ಟಾರೆ ರಾಜ್ಯದ ಫಲಿತಾಂಶ ಶೇ.65ರಷ್ಟು ದಾಟಿದರೆ ಬಹುದೊಡ್ಡ ಸಾಧನೆ ಎನ್ನಲಾಗುತ್ತಿತ್ತು. ಇದಿಷ್ಟೇ ಅಲ್ಲದೇ, ವೈಯಕ್ತಿಕವಾಗಿಯೂ ವಿದ್ಯಾರ್ಥಿಗಳು ಶೇ.70ರಷ್ಟು ಅಥವಾ ಪ್ರಥಮ ಶ್ರೇಣಿ ಪಾಸಾದರೆ ಬಹುದೊಡ್ಡ ಸಾಧನೆ ಎನ್ನುವಂತಾಗಿತ್ತು.
ಆದರೀಗ ಉತ್ತಮ ಶ್ರೇಣಿ(ಶೇ.75ರಷ್ಟು ಮೇಲ್ಪಟ್ಟು) ಪಡೆದ ವಿದ್ಯಾರ್ಥಿಗಳ ಸಂಖ್ಯೆಯೇ ಶೇ.25ರಿಂದ 30ರ ಆಸುಪಾಸಿನಲ್ಲಿದೆ. ಇನ್ನು ಪ್ರಥಮ ಶ್ರೇಣಿಯಲ್ಲಿ ಶೇ.40ರಿಂದ 45ರಷ್ಟಿದೆ. ಹಾಗೆಂದು, ಈ ಪ್ರಮಾಣದಲ್ಲಿ ಫಲಿತಾಂಶ ಸುಧಾರಿಸಲು, ಶೈಕ್ಷಣಿಕವಾಗಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಅಥವಾ ಕ್ವಾಲಿಟಿಯಲ್ಲಿ ಬಹುದೊಡ್ಡ ಬದಲಾವಣೆ ಎನ್ನುವ ಮಾತನ್ನು ಈಗಲೂ ಶಿಕ್ಷಕರಾಗಲಿ, ಶಿಕ್ಷಣ ತಜ್ಞರಾಗಲಿ ಒಪ್ಪುತ್ತಿಲ್ಲ.
ಇದೇ ವರ್ಷದ ಉದಾಹರಣೆ ಕೊಟ್ಟು ಹೇಳುವುದಾದರೆ, ಖಾಸಗಿ ಶಾಲೆಯೊಂದರಲ್ಲಿ ಅಭ್ಯಾಸ ಮಾಡಿದ್ದ ವಿದ್ಯಾರ್ಥಿ ಆ ಶಾಲೆಯ ನಾಲ್ಕು ಆಂತರಿಕ ಪೂರ್ವಸಿದ್ಧತಾ ಪರೀಕ್ಷೆ ಯಲ್ಲಿ ಫೇಲಾಗಿದ್ದ. ಆದ್ದರಿಂದ ಆ ಶಾಲೆಯ ಆಡಳಿತ ಮಂಡಳಿ ಆ ವಿದ್ಯಾರ್ಥಿಯ ಫಲಿತಾಂಶದಲ್ಲಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಕಳೆದ ವಾರದ ಪ್ರಕಟ ವಾದ ಫಲಿತಾಂಶದಲ್ಲಿ ಅದೇ ವಿದ್ಯಾರ್ಥಿ ಶೇ.92-93ರ ಆಸುಪಾಸಿನಲ್ಲಿ ಪಾಸಾಗಿ ದ್ದಾನೆ!
ಈ ವಿಷಯವನ್ನು ಸ್ವತಃ ಆ ಶಾಲೆಯ ಮುಖ್ಯಸ್ಥರೇ ಹಂಚಿಕೊಂಡಿದ್ದರು. ಮುಖ್ಯ ಪರೀಕ್ಷೆಯ ಹಿಂದಿನ ವಾರ ನಡೆದ ಪರೀಕ್ಷೆಯಲ್ಲಿಯೂ ಫೇಲಾಗಿದ್ದ ವಿದ್ಯಾರ್ಥಿ ಪರೀಕ್ಷೆ ಯಲ್ಲಿ ಶೇ.50-60ರಷ್ಟು ಅಂಕ ಪಡೆದಿದ್ದಾನೆ ಎಂದರೆ ಅದು ಆ ವಿದ್ಯಾರ್ಥಿ, ಪೋಷಕರ ಶ್ರಮ ಎನ್ನಬಹುದು. ಆದರೆ ಏಕಾಏಕಿ ಶೇ.90ರಷ್ಟು ಫಲಿತಾಂಶ ಬಂದಿದೆ ಎಂದರೆ ಅದು ಇಡೀ ಪ್ರಕ್ರಿಯೆಯ ಮೇಲೆ ಅನುಮಾನ ತರುವುದು ಸಹಜ. ಇಂತಹ ಹತ್ತಾರು ಅಚ್ಚರಿಯ ಫಲಿತಾಂಶಗಳು ಈ ಬಾರಿಯ ಪರೀಕ್ಷೆಯಲ್ಲಿ ಉದಾಹರಣೆ ಕೊಟ್ಟು ಹೇಳಬಹುದು.
ಹಾಗಾದರೆ, ನಾಲ್ಕು ಬಾರಿ ಫೇಲಾಗಿದ್ದ ವಿದ್ಯಾರ್ಥಿ ಉತ್ತಮ ಅಂಕ ಪಡೆಯುವುದು ತಪ್ಪೇ? ಎನ್ನುವ ಪ್ರಶ್ನೆ ಬರಬಹುದು. ಶಾಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿ ಎಷ್ಟು ಅಂಕ ಗಳಿಸಬಹುದು ಎಂದು ವಿದ್ಯಾರ್ಥಿಗಿಂತ ಹೆಚ್ಚಾಗಿ ಆ ಶಾಲೆಯ ಶಿಕ್ಷಕರಿಗೆ, ಆಡಳಿತ ಮಂಡಳಿಗೆ ಸ್ಪಷ್ಟ ಚಿತ್ರಣವಿರುತ್ತದೆ.
ಶಿಕ್ಷಕರ ನಿರೀಕ್ಷೆಯನ್ನು ಮೀರಿ ಆ ವಿದ್ಯಾರ್ಥಿ ಉತ್ತಮ ಅಂಕ ಪಡೆದಿದ್ದರೆ ನಿಜಕ್ಕೂ ಶಹಬಾಸ್‌ಗಿರಿ ಕೊಡೋಣ. ಆದರೆ ಈ ಪ್ರಮಾಣದಲ್ಲಿ ಅಜಗಜಾಂತರ ಅಂಕಗಳು ಪರೀಕ್ಷಾ ಪ್ರಕ್ರಿಯೆಯಿಂದ ಸಿಗುವುದು ಸರಿಯಲ್ಲ ಎನ್ನುವುದಷ್ಟೇ ಎಲ್ಲರ ಕಾಳಜಿ. ಏಕೆಂದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪಡೆಯುವ ಅಂಕದ ಆಧಾರದಲ್ಲಿ ಪಿಯುಸಿಯಲ್ಲಿ ಯಾವ ವಿಭಾಗ ಪಡೆಯ ಬೇಕು ಎನ್ನುವುದನ್ನು ಬಹುತೇಕ ಸನ್ನಿವೇಶದಲ್ಲಿ ನಿರ್ಧಾರವಾಗುತ್ತದೆ.
ಹೀಗಿರುವಾಗ, ವಿದ್ಯಾರ್ಥಿ ಭಾರಿ ಅಂಕ ಪಡೆದ ಎನ್ನುವ ಉತ್ಸಾಹದಲ್ಲಿ ಆತನಿಗೆ ಇಷ್ಟವೇ ಇಲ್ಲದ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದು ಅಲ್ಲಿ ಅನಿರ್ವಾಯವಾಗಿ ಓದಬೇಕಾದ ಸ್ಥಿತಿ ನಿರ್ಮಾಣವಾಗಬಾರದು. ಇದರೊಂದಿಗೆ ಯಾವುದೋ ಕಾರಣಕ್ಕೆ ಭಾರಿ ಅಂಕ ಪಡೆದ ವಿದ್ಯಾರ್ಥಿಯಿಂದ ಇನ್ನೊಬ್ಬ ಅರ್ಹ ವಿದ್ಯಾರ್ಥಿಗೆ ಸೀಟು ತಪ್ಪುವ ಸಾಧ್ಯತೆಯಿರುತ್ತದೆ.
ಈ ಎರಡರಲ್ಲಿ ಯಾವುದೇ ಆದರೂ ಅದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹುದೊಡ್ಡ ಹೊಡೆತ ಎನ್ನುವುದು ಸತ್ಯ. 10ನೇ ತರಗತಿಯಲ್ಲಿ ಈ ಪ್ರಮಾಣದ ಫಲಿತಾಂಶ ಬಂದಿರುವು ದರ ಮತ್ತೊಂದು ಸೈಡ್ ಎಫೆಕ್ಟ್ ಬಗ್ಗೆ ಸರಕಾರವಾಗಲಿ, ಸಚಿವರಾಗಲಿ ಆಲೋಚನೆ ಮಾಡಿದಂತಿಲ್ಲ.
ಅದೇನೆಂದರೆ, ಈ ಬಾರಿ ಪರೀಕ್ಷೆ ಬರೆದಿದ್ದ 7.70 ಲಕ್ಷ(ಮೊದಲ ಬಾರಿಗೆ ಬರೆದವರು) ವಿದ್ಯಾರ್ಥಿಗಳ ಪೈಕಿ 7.24 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರೆ, 45 ಸಾವಿರ ವಿದ್ಯಾರ್ಥಿಗಳು ಫೇಲಾದರು. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಕ್ಕೂ ಮೊದಲು ಪ್ರಕಟವಾದ ಪಿಯುಸಿ ಫಲಿತಾಂಶದ ಅಂಕಿ-ಅಂಶ ನೋಡಬೇಕಿದೆ.
ಪಿಯುಸಿಯಲ್ಲಿ ಈ ಬಾರಿ ಸುಮಾರು 6.3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, ಪಾಸಾದವರ ಸಂಖ್ಯೆ 4.6 ಲಕ್ಷದ ಆಸುಪಾಸಿನಲ್ಲಿ. ಅಂದರೆ, ಕಳೆದ ವರ್ಷ ಕರ್ನಾಟಕದಲ್ಲಿ ಪಿಯುಸಿ ಕಾಲೇಜಿನಲ್ಲಿದ್ದ ಸೀಟುಗಳ ಸಂಖ್ಯೆಯೇ 6.3 ಲಕ್ಷ ಚಿಲ್ಲರೆ. ಆದರೆ ಈ ಬಾರಿ ಸುಮಾರು 7.20 ಲಕ್ಷ ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಪಾಸಾಗಿದ್ದರೆ. ಇದರೊಂದಿಗೆ ಸಿಬಿಎಸ್‌ಸಿ ಪರೀಕ್ಷೆ ಬರೆದವರು, ಒಂದು ವರ್ಷ ಫೇಲಾಗಿ ಈ ಬಾರಿ ಪಾಸಾ ಗಿರುವವರು, ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಲೆಕ್ಕ ಹಾಕಿದರೆ ಸರಿಸುಮಾರು ಎಂಟು ಲಕ್ಷಕ್ಕೆ ಬಂದು ತಲುಪಲಿದೆ.
ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಪಿಯುಸಿ ಸೀಟುಗಳನ್ನು ಈ ಬಾರಿ ಹೆಚ್ಚಿಸಬೇಕಿದೆ. ಈ ಹೆಚ್ಚುವರಿ ಸೀಟುಗಳನ್ನು ಎಲ್ಲಿಂದ ಹೊಂದಾ ಣಿಕೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಇಲಾಖೆಯ ಬಳಿ ಉತ್ತರವಿಲ್ಲ.
ಫಲಿತಾಂಶ ಹೆಚ್ಚಾಗಿರುವಷ್ಟೇ ಪ್ರಮಾಣದಲ್ಲಿ ಪಿಯುಸಿ ಪ್ರವೇಶವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ಸರಕಾರ ಸಿಲುಕಿದೆ. ಹಾಗೆಂದು, ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆ ಏರಿಸುವುದಕ್ಕೆ ಉಪನ್ಯಾಸಕರ ಕೊರತೆ ಸಹಜವಾಗಿಯೇ ಕಾಡುತ್ತದೆ. ಈಗಲೇ ಅನೇಕ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ನಡೆಯುತ್ತಿದೆ.
ಹೀಗಿರುವಾಗ, ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ ಯಾವ ರೀತಿಯ ಶಿಕ್ಷಣ ನೀಡಲು ಸಾಧ್ಯ? ಅದರಲ್ಲಿಯೂ ವಿಜ್ಞಾನ ವಿಭಾಗದಲ್ಲಿರುವ ಪ್ರಾಕ್ಟಿಕಲ್ ಕ್ಲಾಸ್‌ಗಳನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದಕ್ಕೆ ಉತ್ತರವಿಲ್ಲ. ಇದರಿಂದಾಗಿ ಸರಕಾರವೂ ಅನಿವಾರ್ಯವಾಗಿ ಹೆಚ್ಚುವರಿ ಪ್ರವೇಶ ಪಡೆಯುವುದಕ್ಕೆ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಲೇಬೇಕಾಗುತ್ತದೆ.
ಸಹಜವಾಗಿಯೇ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಏರಿಸಿದಷ್ಟೇ ಪ್ರಮಾಣದಲ್ಲಿ ಉಪನ್ಯಾಸಕರ ಸಂಖ್ಯೆ ಏರಿಸಲು ಸಾಧ್ಯವೇ? ಏಕಾಏಕಿ ಮೂರು ತಿಂಗಳಲ್ಲಿ ಅರ್ಹ ಉಪನ್ಯಾಸಕರು ಸಿಗಲು ಸಾಧ್ಯವೇ? ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಮೌನವಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾಗಲಿ, ದ್ವಿತೀಯ ಪಿಯುಸಿ ಯಾಗಲಿ ಪರೀಕ್ಷೆಯನ್ನು ನಡೆಸುವುದೇ ವಿದ್ಯಾರ್ಥಿಗಳನ್ನು ಪಾಸು ಮಾಡುವುದಕ್ಕೆ ಎನ್ನುವ ಅರ್ಥದಲ್ಲಿ ಶಿಕ್ಷಣ ಸಚಿವರು ಹಲವು ಬಾರಿ ಮಾತನಾಡಿzರೆ. ದೇಶದಲ್ಲಿಯೇ ಮೊದಲ ಬಾರಿಗೆ ಮೂರನೇ ಪರೀಕ್ಷೆಯ ಪರಿಕಲ್ಪನೆಯನ್ನು ಜಾರಿಗೊಳಿಸಿದಾಗಲೂ, ಮಕ್ಕಳು ಫೇಲಾಗಿ ಮನೆಯಲ್ಲಿರುವು ದಕ್ಕಿಂತ ಪಾಸಾಗಲು ಹೆಚ್ಚುವರಿ ಅವಕಾಶ ನೀಡುತ್ತೇವೆ ಎನ್ನುವ ಸಮರ್ಥನೆಯನ್ನು ನೀಡಿದ್ದರು.
ವಿದ್ಯಾರ್ಥಿಗಳು ಫೇಲಾಗಿ ಒಂದು ವರ್ಷ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಮುಂದಿನ ಶಿಕ್ಷಣದ ದಾರಿಯಲ್ಲಿ ಸಾಗುವುದಕ್ಕೆ ಅವಕಾಶ ನೀಡುವುದು ಕೆಟ್ಟ ಆಲೋಚನೆಯಲ್ಲ. ಆದರೆ ವಿದ್ಯಾರ್ಥಿಗಳ ಜೀವನ ಎನ್ನುವ ನೆಪದಲ್ಲಿ ಪಾಸ್ ಮಾಡಿಸಲೇಬೇಕೆಂಬ ಹಠಕ್ಕೆ ಬಿದ್ದು ಪಾಸ್ ಮಾಡುವ, ಕಷ್ಟಬಿದ್ದು ಫೇಲಾಗಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸುವುದು ಸರಿಯಲ್ಲ.
ಎಸ್‌ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಗೆ ಬೇಕಿರುವಷ್ಟು ಕೌಶಲ, ವಿಷಯದ ಮೇಲಿನ ಹಿಡಿತ, ಅಧ್ಯಯನವಿಲ್ಲದ ವಿದ್ಯಾರ್ಥಿಗಳನ್ನು ಸರಕಾರಿ ಪಾಸ್ ಕೋಟದಲ್ಲಿ ಮುಂದಕ್ಕೆ ತಳ್ಳುವು ದರಿಂದ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿ ಪಾಸಾಗಿರುತ್ತಾನೆ ಹೊರತು, ಆತನ ಬುದ್ಧಿಮತ್ತೆಯಲ್ಲಿ ಅಲ್ಲ. ಆದ್ದರಿಂದ ಸರಕಾರ, ಇಲಾಖೆ ಹಾಗೂ ಶಿಕ್ಷಣ ಸಚಿವರು ತಮ್ಮ ಸಾಧನೆಯನ್ನು ತೋರಿಸಲು ಹೋಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗುವಂತಹ ತೀರ್ಮಾನಗಳತ್ತ ನೋಡುವುದು ಸರಿಯಲ್ಲ.
ಕೊನೆಯದಾಗಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡುವುದು ಒಂದು ನಿರಂತರ ಪ್ರಕ್ರಿಯೆ. ಒಂದೇ ವರ್ಷದಲ್ಲಿ ಮ್ಯಾಜಿಕ್ ಮಾಡಿ ಭಾರಿ ಫಲಿತಾಂಶ ಪಡೆದರೆ, ಮುಂದಿನ ವರ್ಷವೂ ಅದೇ ಮ್ಯಾಜಿಕ್‌ನ ನಿರೀಕ್ಷೆಯಲ್ಲಿ ಮಕ್ಕಳಿರುತ್ತಾರೆ. ಇದರೊಂದಿಗೆ, ಎಸ್‌ಎಸ್ಎಲ್‌ಸಿ ಫಲಿತಾಂಶ ಹೆಚ್ಚಳವಾಗಲು ವಿದ್ಯಾರ್ಥಿಗಳಿಗೆ ನೀಡಬೇಕಾದ ಹೆಚ್ಚುವರಿ ತರಬೇತಿ, ಶೈಕ್ಷಣಿಕ ನೆರವನ್ನು ನೀಡುವುದರೊಂದಿಗೆ, ಪಿಯು ಕಾಲೇಜುಗಳಲ್ಲಿನ ಮೂಲಸೌಕರ್ಯ, ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾದರೂ ಮೌಲ್ಯ ಶಿಕ್ಷಣ ನೀಡುವುದಕ್ಕೆ ಬೇಕಾಗಿರುವ ಹೆಚ್ಚುವರಿ ಸಿಬ್ಬಂದಿ ನೇಮಕ ಸೇರಿದಂತೆ ಹತ್ತು ಹಲವು ಕ್ರಮಗಳಿಗೆ ಇಲಾಖೆ ಸಜ್ಜಾಗಬೇಕಿದೆ. ಇದಾಗದೇ ಹೋದರೆ, ಫಲಿತಾಂಶ ನೂರಕ್ಕೆ ನೂರು ಬಂದರೂ, ಒಟ್ಟಾರೆ ಶಿಕ್ಷಣ ಪದ್ಧತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.