ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಕಥೆ ಹೇಳುವೇ ನನ್ನ ಕಥೆ ಹೇಳುವೆ...!!

ಹೀಗಾಗಿ ಇಲ್ಲಿ ರಾಘವೇಂದ್ರ ನಾಯ್ಕ್ ಅವರದ್ದು ಅಸಹಾಯಕ ರೋದನೆಯಷ್ಟೇ ಆಗಿದೆ. ಇದರ ಜತೆಗೆ ಅವರಿಗಿರೋ ಇನ್ನೊಂದು ಅಪಾಯವೆಂದರೆ, ಸಾಕ್ಷಿಗಳಿಲ್ಲದೇ ಆರೋಪ ಮಾಡಿದ್ದಕ್ಕೆ ಕೃಷ್ಣ ಅವರಿಂದ ಮಾನನಷ್ಟ ಮೊಕ್ಕದ್ದಮೆ ಬೀಳುವ ಆತಂಕ. ಕಷ್ಟಪಟ್ಟು ಮಾಡಿರುವ ಕಥೆಯನ್ನು ಕಳೆದುಕೊಂಡಿರುವ ನೋವಿನ ಜತೆಗೆ ಕೇಸ್ ಹಾಕಿಸಿಕೊಂಡು ಒದ್ದಾಡುವ ಸಂಕಟ!

Naveen Sagar Column: ಕಥೆ ಹೇಳುವೇ ನನ್ನ ಕಥೆ ಹೇಳುವೆ...!!

-

ಪದಸಾಗರ

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಜೂನ್ ತಿಂಗಳಿಗೆ ಮುಂದೂಡಿ ದಾಗ ಆ ಘೋಷಣೆಯನ್ನು ಸಮರ್ಥಿಸಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದೆ. ಅದೇ ಪೋಸ್ಟಿನ ಭಾಗವಾಗಿ ಒಂದು ಸಾಲು ಬರೆದಿದ್ದೆ- ‘ಧುರಂಧರ್ ಮತ್ತು ಟಾಕ್ಸಿಕ್ ನಡುವೆ ಇರುವ ಗ್ಯಾಪ್‌ನಲ್ಲಿ ಕೆಟ್ಟ ಚಿತ್ರಗಳ ಸ್ಟಾಕ್ ಖಾಲಿಯಾಗಲಿ’ ಎಂದು. ಹಾಗೆ ಬರೆಯಲು ಕಾರಣವಿತ್ತು.

ಧುರಂಧರ್ ಎದುರಲ್ಲಿ ಭರವಸೆಯ ಚಿತ್ರಗಳ್ಯಾವುವೂ ಬಿಡುಗಡೆಯಾಗುವ ಸಾಹಸ ಮಾಡುವುದಿಲ್ಲ. ಧುರಂಧರ್ ಬಿಡುಗಡೆಯಾಗಿ ಎರಡೇ ವಾರದಲ್ಲಿ ಐಪಿಎಲ್ ಶುರುವಾಗು ತ್ತದೆ. ಐಪಿಎಲ್ ಸಮಯದಲ್ಲಿ ಗೆಲ್ಲುವ ಲಕ್ಷಣ ಇರುವ ಸಿನಿಮಾಗಳು ಬಿಡುಗಡೆಯಾಗುವು ದಿಲ್ಲ. ಕಳೆದ ಒಂದು ದಶಕದ ಟ್ರೆಂಡ್ ಗಮನಿಸಿದರೂ ಈ ಅವಧಿಯಲ್ಲಿ ಸ್ಟಾಕ್ ಕ್ಲಿಯರೆನ್ಸೇ ಆಗಿದ್ದು ಹೆಚ್ಚು. ಇಂಥ ಸಮಯದಲ್ಲಿ ಥಿಯೇಟರ್‌ಗೆ ಡಿಮ್ಯಾಂಡ್ ಕಡಿಮೆ ಇರುವುದರಿಂದ ರಿಲೀಸ್ ಶಾಸ್ತ್ರ ಮುಗಿಸಿಕೊಳ್ಳೋಣ, ಬೈ ಚಾನ್ಸ್ ಗೆದ್ದರೆ ಗೆಲ್ಲಲಿ ಎಂಬ ಮನಸ್ಥಿತಿಯ ಸಿನಿಮಾ ಗಳೇ ಹೆಚ್ಚು ರಿಲೀಸ್ ಆಗುವುದು. ಅವು ಸಹಜವಾಗಿಯೇ ಡಬ್ಬ ಸೇರಿವೆ. ‌

ನಾನು ಬರೆದ ಆ ಸಾಲು ಕೆಟ್ಟ ಚಿತ್ರಗಳಿಗೆ ಮಾತ್ರವೇ ಅನ್ವಯವಿತ್ತು. ಒಳ್ಳೆಯ ಚಿತ್ರವೊಂದು ಐಪಿಎಲ್ ಟೈಮಲ್ಲೂ ಬಂದು ಗೆದ್ದರೆ ಅದಕ್ಕಿಂತ ಸಂತಸ ಇನ್ನೇನಿದೆ? ಆದರೆ ಕೆಟ್ಟ ಚಿತ್ರಗಳ ಪರವಾಗಿ ಹೆಗಲು ಮುಟ್ಟಿಕೊಂಡು ಒಂದಷ್ಟು ಮಂದಿ ಆ ಸಾಲಿಗೆ ಕಿಡಿ ಕಾರಿದ್ದರು.

ಅಂದಹಾಗೆ, ಟಾಕ್ಸಿಕ್ ಜಾಗದಲ್ಲಿ ಬಿಡುಗಡೆಯಾದದ್ದು ಡಾರ್ಲಿಂಗ್ ಕೃಷ್ಣ ನಿರ್ದೇಶನ-ನಿರ್ಮಾಣ-ನಟನೆಯ ‘ಲವ್ ಮಾಕ್ಟೇಲ್-3’. 2019ರಲ್ಲಿ ಬಿಡುಗಡೆಯಾದ ‘ಲವ್ ಮಾಕ್ಟೇಲ್’ ಒಂದು ಕ್ಯೂಟ್ ಸಿನಿಮಾ. ನಗು-ಅಳುಗಳನ್ನು ತುಂಬಿಕೊಂಡ, ‌ಕಥೆ ಹೇಳುವಿಕೆ ಯಲ್ಲಿ ತಾಜಾತನ ಇದ್ದ ಎಮೋಷನಲ್ ಚಿತ್ರ.

ಇದನ್ನೂ ಓದಿ: Naveen Sagar Column: ಸೋತಾಗ ಗಂಭೀರನಾಗಿ...ಗೆದ್ದಾಗ ಗೌತಮನಾಗಿ...!

ಪ್ರೇಕ್ಷಕರಿಂದಲೇ ಪ್ರಚಾರ ಪಡೆದು ಗೆದ್ದಿತ್ತು. ಆದರೆ ಆ ಗೆಲುವನ್ನು ಎನ್‌ಕ್ಯಾಶ್ ಮಾಡಿ ಕೊಳ್ಳಲೆಂದೇ ಕಷ್ಟಪಟ್ಟು ಕಥೆ ಹೆಣೆದು ಪ್ರೇಕ್ಷಕರ ಮೇಲೆ ಹೇರಿದ್ದ ಭಾಗ-2 ನಿರಾಸೆ ಗೊಳಿಸಿತ್ತು. ಆ ನಂತರ ಮೂರನೇ ಭಾಗ ಮಾಡ್ತೇನೆಂದು ಹೇಳಿದಾಗಲಂತೂ, ಇದು ಬೇಕಿತ್ತಾ? ಎರಡನೇ ಭಾಗಕ್ಕೇ ಖಾಲಿಯಾಗಿದ್ದ ಕೃಷ್ಣ-ಮಿಲನ ಜೋಡಿ ಇದ್ಯಾಕೆ ಲವ್ ಮಾಕ್ಟೇಲ್ ಹಿಡಿದು ಎಳೆದಾಡ್ತಿದ್ದಾರೆ ಎಂದನಿಸಿತ್ತು. ಆದರೆ ಲವ್ ಮಾಕ್ಟೇಲ್ ಮೊದಲ ದಿನದಿಂದಲೇ ಹೌಸ್ʼಫುಲ್ ಆಯ್ತು.

ಚಿತ್ರದ ಬಗ್ಗೆ ‘ವಾಹ್’ ಎಂಬಂಥ ವಿಮರ್ಶೆಗಳು ಬಂದವು. ಸೆಕೆಂಡ್ ಹಾಫ್‌ʼನ ಕೋರ್ಟ್ ಡ್ರಾಮಾ ಮತ್ತು ಭಾವುಕ ಅಂಶಗಳು ಸಿನಿಮಾವನ್ನು ಗೆಲ್ಲಿಸಿಬಿಟ್ಟಿದ್ದವು. ಸಿನಿಮಾ ಇಷ್ಟ ವಾಗಿದ್ದರ ಜತೆಗೆ ಗೆಲುವು ಕಂಡು ಖುಷಿಯಾಯ್ತು. ಅಂದು ನಾನು ಬರೆದ ಸಾಲಿಗೆ ಅಪವಾದ ವಾಗಿ ಒಂದು ಒಳ್ಳೆಯ ಚಿತ್ರ ಬಂತಲ್ಲ, ಮನಸಾರೆ ಚಿತ್ರವನ್ನು ಹೊಗಳಿ ಇತರ ಚಿತ್ರಪ್ರೇಮಿ ಗಳಿಗೆ ರೆಕಮೆಂಡ್ ಮಾಡೋಣ ಎಂದು ಬರೆಯಲು ಕೂತೆ. ಆಗ ಹೊರ ಬಂತು ಕೃತಿ ಚೌರ್ಯದ ಆರೋಪ.

ರಾಘವೇಂದ್ರ ನಾಯ್ಕ್ ಎಂಬ ನಿರ್ದೇಶಕರು ಬರೆದು, ಡಾರ್ಲಿಂಗ್ ಕೃಷ್ಣನಿಗೆ ನೆರೇಟ್ ಮಾಡಿದ್ದ ಕಥೆಯನ್ನೇ, ಕೃಷ್ಣ ತಮ್ಮ ಸಿನಿಮಾಗೆ ಬೇಕಾದಂತೆ ಅಲ್ಲಲ್ಲಿ ಬದಲಿಸಿಕೊಂಡು ಲವ್ ಮಾಕ್ಟೇಲ್ ಮಾಡಿದ್ದಾರೆ ಎಂಬ ಆರೋಪ ಇವತ್ತಿಗೆ ಸೋಷಿಯಲ್ ಮೀಡಿಯಾದ ಹಾಟ್ ಕಂಟೆಂಟ್. ಈ ಸಿನಿಮಾ ಬರುವ ಮುನ್ನವೇ ರಾಘವೇಂದ್ರ ನಾಯ್ಕ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದದ್ದಕ್ಕೆ, ಅದನ್ನು ಹಲವರ ಬಳಿ ಹೇಳಿದ್ದಕ್ಕೆ, ಡಾರ್ಲಿಂಗ್ ಕೃಷ್ಣ ಅವರಿಗೂ ಕಥೆ ಹೇಳಿದ್ದಕ್ಕೆ ಒಂದಷ್ಟು ಸಡಿಲ ಸಾಕ್ಷಿಗಳೇನೋ ಇವೆ. ಆದರೆ ಇಂದು ಗಟ್ಟಿಯಾಗಿ ನಿಂತು ವಾದ ಮಾಡಲು, ಲೀಗಲಿ ಸಾಬೀತುಮಾಡಲು ಅವರ ಬಳಿ ಯಾವ ಆಡಿಯೋ/ವಿಡಿಯೋ/ಡಿಜಿಟಲ್ ಅಥವಾ ಬರವಣಿಗೆಯಲ್ಲಿರುವ ಸಾಕ್ಷಿಗಳಿಲ್ಲ.

lovemocktail 3

ಹೀಗಾಗಿ ಇಲ್ಲಿ ರಾಘವೇಂದ್ರ ನಾಯ್ಕ್ ಅವರದ್ದು ಅಸಹಾಯಕ ರೋದನೆಯಷ್ಟೇ ಆಗಿದೆ. ಇದರ ಜತೆಗೆ ಅವರಿಗಿರೋ ಇನ್ನೊಂದು ಅಪಾಯವೆಂದರೆ, ಸಾಕ್ಷಿಗಳಿಲ್ಲದೇ ಆರೋಪ ಮಾಡಿದ್ದಕ್ಕೆ ಕೃಷ್ಣ ಅವರಿಂದ ಮಾನನಷ್ಟ ಮೊಕ್ಕದ್ದಮೆ ಬೀಳುವ ಆತಂಕ. ಕಷ್ಟಪಟ್ಟು ಮಾಡಿರುವ ಕಥೆಯನ್ನು ಕಳೆದುಕೊಂಡಿರುವ ನೋವಿನ ಜತೆಗೆ ಕೇಸ್ ಹಾಕಿಸಿಕೊಂಡು ಒದ್ದಾಡುವ ಸಂಕಟ!

ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ಕಥೆ ರಿಜಿಸ್ಟರ್ ಮಾಡಿಸಿದರೆ ಈ ರೀತಿ ಕೃತಿ ಚೌರ್ಯ ಆಗುವುದಿಲ್ಲ ಎಂಬ ಒಂದು ವಾದವೇನೋ ನಡೆಯುತ್ತಿದೆ. ಆದರೆ ಸಿನಿಮಾದಲ್ಲಿ ಕೃತಿಚೌರ್ಯ ತಡೆಗಟ್ಟುವುದು ಅಸಾಧ್ಯ. ಜಾಣಕಳ್ಳರು ತಾವು ಸಿಕ್ಕಿಕೊಳ್ಳದಂತೆ ಕದಿಯುವ ಕಳ್ಳದಾರಿಗಳನ್ನು ಕಂಡುಕೊಳ್ಳುತ್ತಾರೆ.

ಇಷ್ಟಕ್ಕೂ ಕೃತಿಚೌರ್ಯ ಇಂದು ನಿನ್ನೆಯದಲ್ಲ. ಸಿನಿಮಾರಂಗದಲ್ಲಿ ಕೃತಿಚೌರ್ಯಕ್ಕೊಂದು ಬೃಹತ್ ಇತಿಹಾಸವೇ ಇದೆ. ರೀಮೇಕ್ ರೈಟ್ಸ್ ತೆಗೆದುಕೊಳ್ಳದೇ ‘ಸ್ಪೂರ್ತಿ’ ಎಂದು ಸಿನಿಮಾ ಮಾಡುವುದು, ನಾಲ್ಕೈದೋ ಹತ್ತಾರೋ ಸಿನಿಮಾಗಳ ಸೀನ್ ಕದ್ದು ರೀಮಿಕ್ಸ್ ಮಾಡುವುದು, ಬರಹಗಾರನಿಂದ ಕಥೆ ಕದ್ದು, ಅಲ್ಲಲ್ಲಿ ಬದಲಿಸಿ ಸಿನಿಮಾ ಮಾಡುವುದು, ಮ್ಯೂಸಿಕ್ ಕಾಪಿ ಮಾಡುವುದು, ಪೋಸ್ಟರ್ ಡಿಸೈನ್ ಕದಿಯುವುದು, ಹೀಗೆ ಸಾಕಷ್ಟಿವೆ.‌

ಬೇರೆ ಯಾವುದನ್ನಾದರೂ ಸಾಕ್ಷೀಕರಿಸಬಹುದೇನೋ, ಎದುರು ಬದುರು ಕೂತು ಕಥೆ ಹೇಳಿದ್ದನ್ನು ಕದ್ದುಬಿಟ್ಟರೆ, ಸಾಬೀತುಪಡಿಸುವುದಾದರೂ ಹೇಗೆ? ನಿಮ್ಮೊಂದಿಗಿನ ಈ ಭೇಟಿ ಯನ್ನು ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತೇನೆ ಅಂದರೆ ಅನುಮತಿಸುತ್ತಾರಾ? ಇಲ್ಲ. ‘ನಮ್ಮ ಮೇಲೆ ನಂಬಿಕೆ ಇಲ್ಲವೇ?’ ಎಂಬಂಥ ಪ್ರತಿಕ್ರಿಯೆಗಳು ಬರುತ್ತವೆ.

ಪ್ರೊಫೆಷನಲಿಸಂ ಇಲ್ಲದ ಚಿತ್ರರಂಗ ನಿಂತಿರುವುದು ನಂಬಿಕೆಯ ಮೇಲೆ. ಆ ನಂಬಿಕೆಗೆ ಈ ರೀತಿ ಹೊಡೆತ ಬಿದ್ದರೆ? ಡಾರ್ಲಿಂಗ್ ಕೃಷ್ಣ ತಾವೀ ಕಥೆಯನ್ನು ಕೇಳಿದ್ದೇ ನೆನಪಿಲ್ಲ ಅಂತಾ ರಂತೆ. ಹಾಗಾದರೆ ಅದೇ ಕಥೆ ಕೃಷ್ಣ ಅವರಿಗೂ ಹೊಳೆದಿದೆ ಅಂದರೆ ಇದೆಂಥ ಕಾಕತಾಳೀಯವಿದ್ದಿರಬೇಕು.

‘ನಾನೂ ಅಪ್ಪ-ಮಗು ಕಥೆ ಇಟ್ಕೊಂಡು ಲವ್ ಮಾಕ್ ಟೇಲ್ 3 ಮಾಡ್ತಾ ಇದೀನಿ, ನಿಮ್ಮ ಕಥೇನೂ ಅಪ್ಪ-ಮಗೂದೇ ಇದೆ, ಅದಕ್ಕೇ ಬೇಡ’ ಅಂತ ಕೃಷ್ಣ ಹೇಳಿದ್ದರಂತೆ. ಕೃಷ್ಣ ಅವರು ಕಥೆ ಕೇಳುವ ಮುನ್ನವೇ ಹಾಗೆ ಹೇಳಿದ್ದಾಗಿದ್ರೆ, ಯೆಸ್, ಅವರು ಕಥೆ ಕದ್ದಿರೋ ಚಾನ್ಸೇ ಇಲ್ಲ ಅನ್ನಬಹುದಿತ್ತು. ಪೂರ್ತಿ ಕಥೆ ಕೇಳಿದ ಮೇಲೆ ಈ ಮಾತು ಬಂದಿದೆ ಅಂದರೆ ಅದು ಅನುಮಾನಕ್ಕೆ ಕಾರಣವಾಗುತ್ತದೆ ಅಥವಾ ಅನುಮಾನ ಪರಿಹರಿಸುತ್ತದೆ.

ಲವ್ ಮಾಕ್ಟೇಲ್-3ರ ಕಥೆ ನಿಜಕ್ಕೂ ಕದ್ದದ್ದಲ್ಲವೆಂದರೆ, ರಾಘವೇಂದ್ರ ನಾಯ್ಕ್ ಅವರು ಮಾಡಿರುವ ಕಥೆಗೂ ಅದಕ್ಕೂ ಹೋಲಿಕೆ ಇದೆ ಅಂದರೆ ಅದರರ್ಥ, ಇವರಿಬ್ಬರಿಗೂ ಇನ್ಯಾವುದೋ ಕಥೆ ಸ್ಪೂರ್ತಿಯಾಗಿದೆ ಅಥವಾ ಇವರಿಬ್ಬರೂ ಇನ್ನೆಲ್ಲಿಂದಲೋ ಪ್ರತ್ಯೇಕ ವಾಗಿ ಕಥೆ ಎತ್ತಿದ್ದಾರೆ ಎಂದಾಗುತ್ತದೆ. ಅದು ಇನ್ನೂ ಅಸಹ್ಯಕರ ಟ್ವಿಸ್ಟ್.‌ ಅದು 1990. ವಿಷ್ಣುವರ್ಧನ್ ಒಬ್ಬ ಗಾಯಕ. ಅವನಿಗೆ ಸಿರಿವಂತ ಉದ್ಯಮಿಯ ಮಗಳು ರೂಪಿಣಿ ಜತೆ ಲವ್. ಮದುವೆಗೆ ವಿರೋಧ ಹುಟ್ಟಿ, ಆಕೆಯನ್ನು ಇನ್ನೊಬ್ಬ ಸಿರಿವಂತ ಉದ್ಯಮಿಯ ಮಗ ಅನಂತನಾಗ್ ಮದುವೆಯಾಗುತ್ತಾರೆ.

ಅವರಿಗೊಂದು ಮಗುವಾಗುತ್ತದೆ. ಆದರೆ ತಾಯಿ ಸಾವನ್ನಪ್ಪುತ್ತಾಳೆ. ಅನಂತನಾಗ್ ಇನ್ನೊಂದು ಮದುವೆಯಾಗುತ್ತಾರೆ. ಎರಡನೇ ಪತ್ನಿಗೆ ಈ ಮಗುವನ್ನು ಸಾಕಲು ಇಷ್ಟ ವಿರುವುದಿಲ್ಲ. ತನ್ನ ಪ್ರೇಯಸಿಯ ಆ ಮಗುವನ್ನು ವಿಷ್ಣುವರ್ಧನ್ ಸಾಕಿಕೊಳ್ಳುತ್ತಾರೆ. ಅದು ಚುರುಕಾಗಿ ಮುದ್ದಾಗಿ ಬೆಳೆಯುತ್ತದೆ. ವಿಷ್ಣು ಮತ್ತು ಮಗು ಮಧ್ಯೆ ಅಪ್ಪ-ಮಗಳ ಥರದ ಅಟ್ಯಾಚ್ಮೆಂಟ್ ಬೆಳೆಯುತ್ತದೆ.

ಇತ್ತ ಅನಂತ್ ಮತ್ತು ಎರಡನೇ ಪತ್ನಿಗೆ ಮಕ್ಕಳಾಗುವುದೇ ಇಲ್ಲ. ಮಗು ಬೇಕೆಂಬ ಹಂಬಲ ಹೆಚ್ಚುತ್ತದೆ. ಚುರುಕಾದ ಮುದ್ದಾದ ಈ ಮಗುವನ್ನು ನೋಡುತ್ತಾರೆ. ಆಗ ಬೇಡವಾಗಿದ್ದ ಮಗು ಈಗ ಬೇಕೆನಿಸುತ್ತದೆ. ತಮ್ಮದೇ ಮಗು ಎಂಬ ಹಕ್ಕಿನಿಂದ ಕೇಳಿ ಪಡೆಯುತ್ತಾರೆ. ವಿಷ್ಣು ಹೃದಯ ಭಾರವಾಗಿಸಿಕೊಂಡು ತ್ಯಾಗ ಮಾಡುತ್ತಾರೆ. ಆದರೆ ಅಂತಿಮವಾಗಿ ಮಗು ವಿಷ್ಣು ವನ್ನು ಬಿಟ್ಟು ಹೋಗಲು ಒಪ್ಪದೇ ಬಯಾಲಾಜಿಕಲ್ ತಂದೆಯನ್ನು ಬಿಟ್ಟು ಸಾಕಿದ ತಂದೆಯನ್ನು ಸೇರುತ್ತದೆ.

ಚಿತ್ರದ ಹೆಸರು ‘ಮತ್ತೆ ಹಾಡಿತು ಕೋಗಿಲೆ’. ನಿರ್ದೇಶಕ ಭಾರ್ಗವ. ಕಥೆ ಬರೆದವರು ಚಿ.ಉದಯಶಂಕರ್. ಕೃಷ್ಣ ಮತ್ತು ರಾಘವೇಂದ್ರ ನಾಯ್ಕ್ ಇಬ್ಬರಿಗೂ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರ ಸ್ಪೂರ್ತಿಯಾಯ್ತೇ? ಕೃತಿಚೌರ್ಯವೆಂದು ಕ್ಲೈಮ್ ಮಾಡೋಕೆ ಚಿ.ಉದಯ ಶಂಕರ್ ಅವರೇ ಇಲ್ಲ. ರಾಘವೇಂದ್ರ ನಾಯ್ಕ್ ಅವರ ಸಂಕಟಕ್ಕೆ ಸಹಾನು ಭೂತಿ ಇದೆ.

ಕೃಷ್ಣ ಅವರ ಲವ್ ಮಾಕ್ಟೇಲ್ ಚಿತ್ರ ಮನಗೆದ್ದದ್ದಕ್ಕೆ ಸಂತಸವೂ ಇದೆ. ಆದರೆ ಕಥೆಯ ಈ ತಕರಾರಿಗೆ ನ್ಯಾಯ ಸಿಗುವುದಾದರೂ ಹೇಗೆ? ಕಥೆ ಸೃಷ್ಟಿಸುವುದು ಸುಲಭದ ಕೆಲಸವಲ್ಲ. ಆದರೆ ಸಿಕ್ಕಿರುವ ಕಥೆಯನ್ನು ಗುರುತು ಸಿಗದಂತೆ ಬದಲಿಸುವುದು ಬಹಳ ಸುಲಭದ ಕೆಲಸ. ಮೂಲ ಕಥೆಗಾರನಿಗೆ ಇದು ತನ್ನದೇ ಕಥೆಯ ರೂಪಾಂತರ ಅಂತ ಗೊತ್ತಾಗುತ್ತದೆ.

ಅಷ್ಟೊತ್ತಿಗೆ ಆ ಕಥೆ ಬೇರೆಯವರದ್ದಾಗಿ ಹೋಗಿರುತ್ತದೆ. ಕ್ಯಾಶು-ಕ್ರೆಡಿಟ್ಟು ಏನೂ ಸಿಗದೆ, ಮೇಲಾಗಿ ಆರೋಪ ಮಾಡಿದ ಕಾರಣಕ್ಕೆ ಕೇಸ್ ಹಾಕಿಸಿಕೊಳ್ಳುವ ಸ್ಥಿತಿ. ಹಿಂದೊಮ್ಮೆ ಕಿರುತೆರೆಯಲ್ಲಿ ನಡೆಯುವ ಇಂಥ ಕಥೆ ಕಳ್ಳತನದ ಬಗ್ಗೆ ಒಂದು ಲೇಖನ ಬರೆದಿದ್ದೆ. ಅಲ್ಲಿ ಇಲ್ಲಿಗಿಂತ ಬೃಹತ್ ಕಳ್ಳಜಾಲವಿದೆ.

ಕಿರುತೆರೆಯಲ್ಲಿ ಯಾವ ವಾಹಿನಿಯೂ ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ರೀಮೇಕ್ ಜಮಾನದಲ್ಲಿರುವ ಚಾನೆಲ್‌ʼಗಳು, ಬೇರೆ ಭಾಷೆಗಳಲ್ಲಿ ಪ್ರಸಾರ ಮಾಡುತ್ತಿರುವ ಯಶಸ್ವಿ ಧಾರಾವಾಹಿಗಳನ್ನು ನೇರವಾಗಿ ರೀಮೇಕ್ ಮಾಡುತ್ತವೆ. ಇಲ್ಲಿ ಹೊಸ ಕಥೆ ಬರೆಯುವವರಿಗೆ ಕೆಲಸವಿಲ್ಲ. ಆದರೂ ಚಾನೆಲ್ ತಲೆಗಳು ಕಥೆ ಬರೆಸುತ್ತವೆ. ಬರೆಯುವ ಪ್ರತಿಭಾವಂತ ಕೈಗಳಿಂದ ಬರೆಸುತ್ತವೆ. ಕಥೆ ಕೊಳ್ಳುತ್ತೇವೆ, ಸ್ಲಾಟ್ ಕೊಡುತ್ತೇವೆ ಅಂತ ಆಸೆ ಹುಟ್ಟಿಸುತ್ತವೆ.

ಆಮೇಲೆ? ಕಥೆ ಬರೆದು ಬರೆದು ಕಳಿಸುತ್ತಾರೆ. ವಾಹಿನಿಗೆ ಹೋಗಿ ಕಥೆ ಹೇಳುತ್ತಾರೆ. ಸಿನಾಪ್ಸಿಸ್ ಮಾತ್ರವಲ್ಲದೆ ಐವತ್ತು ಎಪಿಸೋಡ್‌ಗೆ ಆಗುವಷ್ಟು ಚಿತ್ರಕಥೆ-ಸಂಭಾಷಣೆ ಗಳನ್ನು ಬರೆದು, ಅವನ್ನು ಹೇಗೆ ಚಿತ್ರೀಕರಿಸಬೇಕು ಎಂಬ ಮಾಹಿತಿಯನ್ನೂ ಸೇರಿಸಿ ಕಳಿಸುತ್ತಾರೆ.

ತಮ್ಮ ಕಥೆ ಓಕೆ ಆಗಿ... ನೀವೇ ನಿರ್ದೇಶಿಸಿ ಬಿಡಿ ಎಂದೂ ಚಾನೆಲ್ನವರು ಹೇಳಬಹುದೆಂಬ ಭ್ರಮೆಯಲ್ಲಿ! ಆದರೆ ಹಾಗೆಲ್ಲ ಆಮಂತ್ರಣ ಬರುವುದಿಲ್ಲ, ಕಥೆಗಾರರು ಚಾನೆಲ್‌ಗಳ ಬಾಗಿಲ ಬಳಿ ನಿಂತು, ತಾವು ಕಳಿಸಿದ ಕಥೆ ಏನಾಯಿತೆಂದು ಕೇಳಿ ಬಳಲುತ್ತಾರೆ. ‘ಇನ್ನೂ ಓದಿಲ್ಲ, ಇನ್ನೂ ಅಪ್ರೂವ್ ಆಗಿಲ್ಲ’ ಎಂಬ ಉತ್ತರಗಳು ಮೊದಲು ಬರುತ್ತವೆ. ಆ ನಂತರ ಉತ್ತರವೇ ಸಿಗುವುದಿಲ್ಲ, ತೀರಾ ದುಂಬಾಲು ಬಿದ್ದಾಗ ‘ನಿಮ್ಮ ಕಥೆ ರಿಜೆಕ್ಟ್ ಆಗಿದೆ’ ಎಂಬ ಉತ್ತರ ಬರುತ್ತದೆ.

ಕಥೆಗಾರ ನಿರಾಶನಾಗುತ್ತಾನೆ. ಸ್ವಲ್ಪ ದಿನಗಳ ನಂತರ ಮತ್ತೆ ನಿರಾಶೆ ಬದಿಗೊತ್ತಿ ಇನ್ನೊಂದು ಒಳ್ಳೆ ಕಥೆ ಮಾಡೋ ನಿರ್ಧಾರಕ್ಕೆ ಬಂದು ಕೂರುತ್ತಾನೆ. ಅಷ್ಟೊತ್ತಿಗೆ ಅದೇ ವಾಹಿನಿಯ ಅಥವಾ ಇನ್ನೊಂದು ವಾಹಿನಿಯ ಹೊಸದೊಂದು ಸೀರಿಯಲ್ ಶುರುವಾಗು ತ್ತದೆ.

ಪ್ರೊಮೋ ನೋಡಿದರೆ, ‘ಆರೆ ಇದು ನನ್ನ ಕಥೆ ಅಲ್ವೇ?’ ಅನಿಸಲಾರಂಭಿಸುತ್ತದೆ. ಮೊದಲ ಎಪಿಸೋಡ್ ನೋಡೋ ಹೊತ್ತಿಗೆ ಅದು ನೀವು ಕೊಟ್ಟ ಕಥೆಯೇ ಎಂದು ಕನರ್ಮ್ ಕೂಡ ಆಗಿಬಿಡುತ್ತದೆ. ಆದರೆ ಹಾಗೆಂದು ವಾದ ಮಾಡುವುದಕ್ಕೆ ನಿಮ್ಮಲ್ಲಿ ಯಾವುದೇ ಪುರಾವೆ ಗಳೂ ಇರುವುದಿಲ್ಲ, ವಾಹಿನಿಯ ಕೈಗಳು ನೀವು ಕೊಟ್ಟ ಕಥೆಯನ್ನು ಅತಿ ಚಾಣಾಕ್ಷತನ ದಿಂದ ರೂಪಾಂತರಗೊಳಿಸಿ ಬಿಟ್ಟಿರುತ್ತವೆ.

ನೀವು ಬರೆದಿರೋ ಹೆಣ್ಣು ಪಾತ್ರಗಳು ಗಂಡಾಗಿರುತ್ತವೆ. ಕಿವುಡು ಪಾತ್ರ ಮೂಗನ ಪಾತ್ರ ವಾಗಿ ಬದಲಾಗಿರುತ್ತದೆ. ಹಳ್ಳಿ ಬ್ಯಾಕ್ ಡ್ರಾಪ್ ಸಿಟಿಯಾಗಿರುತ್ತದೆ. ಒಟ್ಟಾರೆ ನೀವು ಮಾಡಿದ ಮೆಯ್ಲು, ಪೋಸ್ಟು, ಕಥೆ ಹೇಳೋಕೆ ಮೀಟ್ ಮಾಡಿದ ವ್ಯಕ್ತಿಗಳು, ಆಫೀಸಿನ ಮೆಟ್ಟಿಲ ಮೇಲಿನ ನಿಮ್ಮ ಹೆಜ್ಜೆ ಗುರುತು, ಸ್ಕ್ರಿಪ್ಟ್ ಮೇಲೆ ಕೈ ಇರಿಸಿದವರ ಬೆರಳಚ್ಚು ಏನೇ ತಂದರೂ ಈ ಕಳ್ಳತನವನ್ನು ಪ್ರೂವ್ ಮಾಡಲಾಗುವುದೇ ಇಲ್ಲ!

ಅಲ್ಲಿ ವಾಹಿನಿಯ ಕಥಾಕಣಜ ಅಂತಲೋ, ಕಥಾಬಳಗ ಎಂದೋ ಇನ್ನೇನೋ ಹೆಸರು ಮೂಲ ಕಥೆಗಾರರ ಬದಲು ಕಾಣಿಸುತ್ತದೆ. ಇನ್ನು ಕೆಲವೊಮ್ಮೆ ಇನ್ನೂ ವಿಚಿತ್ರ ಪರಿಸ್ಥಿತಿ. ಬಂದಿರುವ ರಾಶಿಕಥೆಗಳಲ್ಲಿ ಮೂರೋ ನಾಲ್ಕೂ ಕಥೆಗಳನ್ನು ಸೇರಿಸಿ ಒಂದು ಕಥೆ ಮಾಡಿ ಕೊಂಡು ಸೀರಿಯಲ್ ಮಾಡಿಬಿಡುವ ಜಾಣತನಗಳನ್ನೂ ವಾಹಿನಿಗಳು ತೋರಿಸೋದಿದೆ.

ಕೆಲವು ಬಾರಿ ಖುದ್ದು ಬರಹಗಾರನಿಗೇ ತಾನು ಹೀಗೊಂದು ಕಥೆ ಬರೆದು ಕಳಿಸಿದ್ದೆ ಎಂದು ಮರೆತುಹೋಗುವಷ್ಟು ಕಾಲದ ನಂತರ ಆತನ ಕಥೆ ಧಾರಾವಾಹಿಯಾಗಿ ಬರುತ್ತದೆ! ಇನ್ನು ಕೆಲವೊಮ್ಮೆ ವಾಹಿನಿಗಳಿಂದ ವಾಹಿನಿಗೆ ಜಂಪ್ ಆಗುವ ತಲೆಗಳು ತಮ್ಮೊಂದಿಗೆ ಕಥೆಗಳನ್ನೂ ವಲಸೆ ಕರೆದೊಯ್ಯುತ್ತಾರೆ. ಆಗ ಒಂದು ವಾಹಿನಿಗೆ ಕಳಿಸಿದ್ದ ಕಥೆ ಇನ್ನೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಅಲ್ಲಿಗೆ ನಿಮ್ಮ ವಾದ ತಂತಾನೆ ಸೋತುಬಿಡುತ್ತದೆ.

ಇದೆಲ್ಲಕ್ಕಿಂತ ಭಾರಿ ಮೋಸವೆಂದರೆ, ನಿಮ್ಮ ಕಥೆ ಸೀದಾ ಅವರದೇ ಬೇರೆ ಭಾಷೆಯ ಸಿಸ್ಟರ್ ಕನ್ಸರ್ನ್ ಚಾನೆಲ್‌ಗಳಿಗೆ ಹೋಗಿ ಸೀರಿಯಲ್ ಆಗಿಬಿಡುತ್ತದೆ. ಅಲ್ಲಿಂದ ರೀಮೇಕ್ ಎಂಬ ಹೆಸರಲ್ಲಿ ಕನ್ನಡಕ್ಕೆ ಬರುತ್ತದೆ. ಕಥೆಗಾರ ಪ್ರಶ್ನಿಸಿದರೆ, ‘ಇದು ಬೇರೆ ಭಾಷೆಯಿಂದ ಅಧಿಕೃತ ವಾಗಿ ರೀಮೇಕ್ ಆಗುತ್ತಿರುವ ಸೀರಿಯಲ್.

ನಿಮ್ಮ ಕಥೆ ಆ ಭಾಷೆಯಲ್ಲಿ ಬಂದಿರೋಕೆ ಹೇಗೆ ಸಾಧ್ಯ?’ ಎಂಬ ಗದರಿಕೆ ಬರುತ್ತದೆ. ಅಲ್ಲಿಗೆ ಕಥೆಗಾರ ಫಿನಿಷ್. ಎಳೆ ಸಿಕ್ಕರೆ ಸಾಕು ಕಥೆ ಮಾಡಿಕೊಳ್ಳಬಲ್ಲ ಜಾಣ ಹಾಗೂ ಅನುಭವಿ ಕೈಗಳು ವಾಹಿನಿಗಳಲ್ಲಿದ್ದಾಗ ಪೂರ್ತಿ ಕಥೆ ಕೊಟ್ಟರೆ ಅದನ್ನು ಬದಲಾಯಿಸೋದೇನು ಕಷ್ಟದ ಕೆಲಸವೇ? ‘ಕನ್ನಡದಲ್ಲಿ ಕಥೆಗಳು ಬರುತ್ತಿಲ್ಲ.. ಕಥೆ ಬರೆಯುವವರಿಲ್ಲ..’ ಇವೆಲ್ಲ ಶುದ್ಧ ಸುಳ್ಳು.

ಬರೆಯುವ ಕೈಗಳಿಗೆ ಬೆಲೆ ಇಲ್ಲ ಎಂಬುದಷ್ಟೇ ಸತ್ಯ. ಇಂದಿಗೂ ಬರವಣಿಗೆ ಎಂಬುದು ನಿರ್ಲಕ್ಷಿಸುವ ಅಥವಾ ಕದಿಯುವ ವಸ್ತುವಾಗಿದೆಯೇ ಹೊರತು, ಮರ್ಯಾದೆ ಕೊಟ್ಟು ಕೊಳ್ಳುವ ವಸ್ತುವಾಗಿಲ್ಲ. ಹೀಗಾಗಿ ಕನ್ನಡ ದೃಶ್ಯಮಾಧ್ಯಮ ಸೊರಗುತ್ತಿದೆ, ನಲುಗುತ್ತಿದೆ...