Prakash Shesharaghavachar Column: ಅಂತೂ ಇಂತೂ ಅಂತ್ಯ ಕಾಣುತ್ತಿರುವ ರಕ್ತಸಿಕ್ತ ನಕ್ಸಲ್ ವಾದ
2014ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಈಗ ದಿನನಿತ್ಯ ನಕ್ಸಲೀಯರು ಶರಣಾಗು ತ್ತಿರುವುದು, ಇಲ್ಲವಾದರೆ ಪೊಲೀಸರ ಗುಂಡಿಗೆ ತರಗೆಲೆಗಳಂತೆ ಉದುರುತ್ತಿರುವುದು ಪ್ರಮುಖ ಸುದ್ದಿಯಾಗಿದೆ. 12 ವರ್ಷಗಳಲ್ಲಿ ಸರಕಾರವು ಕೈಗೊಂಡ ಕಠಿಣ ಕ್ರಮದಿಂದಾಗಿ ನಕ್ಸಲರ ಪ್ರಭಾವವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ನಕ್ಸಲರ ಬಗ್ಗೆ ದಯೆ-ದಾಕ್ಷಿಣ್ಯ ತೋರದ ಬಿಜೆಪಿಯು, ನಕ್ಸಲರನ್ನು ಮುಲಾಜಿಲ್ಲದೆ ಮಟ್ಟ ಹಾಕುವ ಕೆಲಸಕ್ಕೆ ಮುಂದಾಗಿದ್ದರ ಪರಿಣಾಮವಾಗಿ, ನಕ್ಸಲ್ ನಾಯಕರು ಪೊಲೀಸರ ಗುಂಡಿಗೆ ಬಲಿಯಾದರು ಅಥವಾ ಶರಣಾದರು. ನಕ್ಸಲರಿಗೆ ಗುರಾಣಿಯಂತಿದ್ದ ‘ನಗರ ನಕ್ಸಲರ ಪಡೆ’ಯ ವಿರುದ್ಧ ರಾಜಿಯಿಲ್ಲದ ಕ್ರಮಗಳನ್ನು ಕೈಗೊಳ್ಳಲಾಯಿತು.
ಶಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದ ನಕ್ಸಲರನ್ನು ತೆಲಂಗಾಣ ಸರಕಾರವು ಡಿಸೆಂಬರ್ 25ರಂದು ಹೈದರಾಬಾದ್ ಹೈಟೆಕ್ ಸಿಟಿ, ಶಿಕ್ಷಣ ಸಂಸ್ಥೆಗಳ ಭೇಟಿ, ಚಲನಚಿತ್ರಗಳ ವೀಕ್ಷಣೆಗೆಂದು ಕರೆದೊ ಯ್ದಿತು. ಮುಖ್ಯವಾಹಿನಿಯಿಂದ ದೂರವಿದ್ದು, ಬದಲಾದ ಜಗತ್ತಿನ ಅರಿವೇ ಇಲ್ಲದೆ ಕಾಡಿನಲ್ಲಿ ನಿರರ್ಥಕ ಬದುಕನ್ನು ಸಾಗಿಸುತ್ತಿದ್ದವರಿಗೆ, ಕಾಡಿನ ಹೊರಗಿನ ಜಗತ್ತಿನ ದರ್ಶನವಾಯಿತು. ಈ ಬೆಳವಣಿಗೆಯು ನಕ್ಸಲ್ ಸಿದ್ಧಾಂತದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯೆಂದರೆ ತಪ್ಪಾಗ ಲಾರದು.
2026ರ ಮಾರ್ಚ್‌ನೊಳಗಾಗಿ ದೇಶದಲ್ಲಿನ ನಕ್ಸಲೀಯರನ್ನು ಮೂಲೋತ್ಪಾಟನೆ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಅದನ್ನು ಸಾಧಿಸಲು ಅಗತ್ಯವಾದ ಕಾರ್ಯ ತಂತ್ರದ ಯೋಜನೆಯೂ ಜಾರಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಶೇ.90ರಷ್ಟು ಗುರಿ ಸಾಧಿಸಲಾಗಿರುವುದು ಅಮಿತ್ ಶಾ ಅವರ ಛಲಕ್ಕೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.
2014ರ ಮೊದಲು, ಭದ್ರತಾ ಪಡೆಗಳು ಮತ್ತು ಮಾಹಿತಿದಾರರು ನಕ್ಸಲರ ದಾಳಿಗೆ ಸಿಲುಕಿ ಹತ್ಯೆ ಯಾಗುತ್ತಿದ್ದ ಸುದ್ದಿಗಳು ಸಾಮಾನ್ಯವಾಗಿದ್ದವು. ಶರಣಾಗುವಂತೆ ನಕ್ಸಲರಿಗೆ ಯುಪಿಎ ಸರಕಾರದ ಗೃಹ ಸಚಿವರು ಅಂಗಲಾಚಿ ಕೇಳುತ್ತಿದ್ದ ದಿನಗಳವು.
2014ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಈಗ ದಿನನಿತ್ಯ ನಕ್ಸಲೀಯರು ಶರಣಾಗು ತ್ತಿರುವುದು, ಇಲ್ಲವಾದರೆ ಪೊಲೀಸರ ಗುಂಡಿಗೆ ತರಗೆಲೆಗಳಂತೆ ಉದುರುತ್ತಿರುವುದು ಪ್ರಮುಖ ಸುದ್ದಿ ಯಾಗಿದೆ. 12 ವರ್ಷಗಳಲ್ಲಿ ಸರಕಾರವು ಕೈಗೊಂಡ ಕಠಿಣ ಕ್ರಮದಿಂದಾಗಿ ನಕ್ಸಲರ ಪ್ರಭಾವವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಇದನ್ನೂ ಓದಿ: Prakash Shesharagavachar Column: ಕುಲದೀಪ್ ಸಿಂಗ್ ಸೆಂಗಾರ್ ಬಿಜೆಪಿಯ ಪಾಪದ ಕೂಸಲ್ಲ
2014ರ ಮುನ್ನ ದೇಶದ 126 ಜಿಲ್ಲೆಗಳು ‘ನಕ್ಸಲ್ ಪೀಡಿತ’ ಎಂದು ಘೋಷಿತವಾಗಿದ್ದವು. ಈ ಪೈಕಿ 11 ಜಿಲ್ಲೆಗಳು ಅತಿಹೆಚ್ಚು ಪೀಡಿತವಾಗಿದ್ದವು. ನಕ್ಸಲ್ ಪ್ರಭಾವಿತ ಪ್ರದೇಶಗಳು ‘ರೆಡ್ ಕಾರಿಡಾರ್’ ಎಂಬ ಕುಖ್ಯಾತಿಯನ್ನು ಪಡೆದಿದ್ದವು. ನಕ್ಸಲರ ಸ್ವಾಯತ್ತ ಪ್ರದೇಶವಾಗಿದ್ದ ಈ ವಲಯದಲ್ಲಿ ನಕ್ಸಲ್ ಆಡಳಿತ ವ್ಯವಸ್ಥೆ ಜಾರಿಯಲ್ಲಿತ್ತು!
‘ನಕ್ಸಲಿಸಂ’ ಎಂಬುದು ಭಾರತದಲ್ಲಿ ಮಾವೋವಾದಿಗಳಿಂದ ಪ್ರೇರಿತವಾದ ಕಮ್ಯುನಿಸ್ಟ್ ಸಿದ್ಧಾಂತ. ಇದು ಶೋಷಣೆ, ಅಸಮಾನತೆ ಮತ್ತು ಆದಿವಾಸಿಗಳ ಹಕ್ಕಿನ ರಕ್ಷಣೆಯನ್ನು ಬಂಡವಾಳ ಮಾಡಿ ಕೊಂಡು, ಸಮ ಸಮಾಜವನ್ನು ಕಟ್ಟಲು ಸಶಸ್ತ್ರ ದಂಗೆಯನ್ನು ಪ್ರತಿಪಾದಿಸುತ್ತದೆ.
ಸಮಾನಾಂತರ ಆಡಳಿತ ವ್ಯವಸ್ಥೆಯನ್ನು ರಚಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವಕ್ಕೆ ಸವಾಲು ಹಾಕುವುದು ಇದರ ಉದ್ದೇಶ. ನಕ್ಸಲೀಯರ ಕಾರ್ಯಚಟುವಟಿಕೆಯು ಹೆಚ್ಚಾಗಿ ನಡೆಯು ವುದು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ. ನಕ್ಸಲಿಸಂ/ ಎಡಪಂಥೀಯ ಉಗ್ರವಾದವು ಭಾರತದ ಅತ್ಯಂತ ಗಂಭೀರ ಆಂತರಿಕ ಭದ್ರತಾ ಸವಾಲುಗಳಲ್ಲಿ ಒಂದಾಗಿದೆ.
ನಕ್ಸಲಿಸಂ ಪ್ರತಿಪಾದಕರು ವಿಶೇಷವಾಗಿ ಶೋಷಿತ ಹಿನ್ನೆಲೆಯಿಂದ ಬಂದ ಯುವಕರನ್ನು ‘ಕ್ರಾಂತಿ ಕಾರಿ ಬದಲಾವಣೆ’ಯ ಭರವಸೆ ನೀಡಿ ಆಕರ್ಷಿಸುತ್ತಾರೆ, ತಮ್ಮ ನಿಯಂತ್ರಣಕ್ಕೆ ಬಂದ ಪ್ರದೇಶದಲ್ಲಿ ಸುಲಿಗೆ ಮಾಡುತ್ತಾರೆ ಹಾಗೂ ಜನರಿಂದ ತೆರಿಗೆ ಸಂಗ್ರಹಿಸುತ್ತಾರೆ. ತಮ್ಮ ಹಿಡಿತವಿರುವ ಪ್ರದೇಶದಲ್ಲಿ ನಕ್ಸಲರು ಸರಕಾರಿ ಕಾಮಗಾರಿಗಳಿಗೆ/ಅಭಿವೃದ್ಧಿ ಚಟುವಟಿಕೆಗಳಿಗೆ, ಶಾಲೆಗಳನ್ನು ತೆರೆಯುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ.
ರಸ್ತೆ/ಸೇತುವೆ ನಿರ್ಮಾಣಕ್ಕೆ ಇವರು ಅಡ್ಡಿಪಡಿಸುತ್ತಿದ್ದುದರಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು, ಮೊಬೈಲ್ ಟವರ್ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನಕ್ಸಲರ ನಿಯಂತ್ರಣದ ಹಳ್ಳಿಗಳು ಮೂಲಭೂತ ಸೌಕರ್ಯಗಳಿಲ್ಲದೆ ನೂರು ವರ್ಷದಷ್ಟು ಹಿಂದೆ ಉಳಿದುಬಿಟ್ಟಿದ್ದವು.
ಹೆಸರಿಗಷ್ಟೇ ಪೊಲೀಸ್ ಠಾಣೆಗಳು ಸ್ಥಾಪಿತವಾಗಿದ್ದವು. ಒಟ್ಟಾರೆ ಹೇಳುವುದಾದರೆ, ಶೋಷಣೆಯ ನಿರ್ಮೂಲನೆಯ ಹೆಸರಲ್ಲಿ ನಕ್ಸಲರೇ ಬಹುದೊಡ್ಡ ಶೋಷಕರು ಮತ್ತು ಪೀಡಕರಾಗಿದ್ದರು. ‘ಆದಿವಾಸಿಗಳ ಶೋಷಣೆಯನ್ನು ತಡೆಯುವ ಸಿದ್ಧಾಂತ ನಮ್ಮದು’ ಎಂದು ಕೊಚ್ಚಿಕೊಳ್ಳುತ್ತಿದ್ದ ನಕ್ಸಲರು, ಅದೇ ಆದಿವಾಸಿಗಳನ್ನು ಮೂಲಭೂತ ಸೌಲಭ್ಯಗಳಿಂದ, ಅಭಿವೃದ್ಧಿಯಿಂದ ವಂಚಿಸಿ, ಬಡತನದ ರೇಖೆಯಿಂದ ಮೇಲೇಳಲಾಗದಂತೆ ಆರ್ಥಿಕವಾಗಿ ಕುಗ್ಗಿಸಿ, ಆಧುನಿಕ ಭಾರತವನ್ನು ಅವರಿಂದ ದೂರ ಮಾಡಿದ್ದರು.
ಛತ್ತೀಸ್‌ಗಢ, ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ನಕ್ಸಲ್ ಪ್ರಭಾವಿತ ರಾಜ್ಯಗಳಲ್ಲಿ ಪ್ರಮುಖವಾದಂಥವು. ಅತಿಹೆಚ್ಚು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಛತ್ತೀಸ್‌ಗಢದ ಬಸ್ತಾರ್, ಮಹಾರಾಷ್ಟ್ರದ ಗೊಂಡಿಯಾ ಮತ್ತು ಗಢಚಿರೋಲಿ ಸೇರಿವೆ. ಕರ್ನಾಟಕದಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲರು ತಲೆಯೆತ್ತುವ ಪ್ರಯತ್ನ ನಡೆಸಿ ಸೋತರು.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಕ್ಸಲರ ಉಪಟಳಕ್ಕೆ ತೆರೆ ಬೀಳಲು ಆರಂಭವಾಯಿತು. 2019ರ ನಂತರ, ಅಮಿತ್ ಶಾ ಅವರು ಗೃಹ ಸಚಿವರಾದ ಮೇಲೆ, ನಕ್ಸಲ್ ಹಿಂಸಾಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಇದರ ಪರಿಣಾಮವಾಗಿ, 2014ರಲ್ಲಿ 126ರಷ್ಟಿದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯು 2025ರ ವೇಳೆಗೆ ಕೇವಲ 11ಕ್ಕೆ ಇಳಿದವು ಮತ್ತು ಅತಿಹೆಚ್ಚು ಪೀಡಿತ ಜಿಲ್ಲೆಗಳ ಸಂಖ್ಯೆ 36ರಿಂದ 3ಕ್ಕೆ ಇಳಿದವು. ಹೀಗಾಗಿ ‘ರೆಡ್ ಕಾರಿಡಾರ್’ ವಲಯ ಛಿದ್ರಛಿದ್ರ ವಾಗಿದೆ.
2014ರ ಮೇ ತಿಂಗಳಿಂದ 2025ರ ಅಂತ್ಯದವರೆಗೆ 8000ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ. 2004ರಿಂದ 2014ರವರೆಗೆ 16,463ರಷ್ಟು ಹಿಂಸಾತ್ಮಕ ಘಟನೆಗಳು ದಾಖಲಾಗಿದ್ದವು; ಆದರೆ 2014 ರಿಂದ 2025ರವರೆಗಿನ ಅವಧಿಯಲ್ಲಿ ಇವುಗಳ ಸಂಖ್ಯೆ 7744ಕ್ಕೆ ಇಳಿದವು. ಹಾಗೆಯೇ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಾವುಗಳು ಕ್ರಮವಾಗಿ 1851ರಿಂದ 509ಕ್ಕೆ ಮತ್ತು 4766 ರಿಂದ 1495ಕ್ಕೆ ಇಳಿದವು.
ಮತ್ತೊಂದೆಡೆ, 2014ರ ಮೇ ತಿಂಗಳಿಂದ 1800ಕ್ಕೂ ಹೆಚ್ಚು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ. ಕೇಂದ್ರ ಸರಕಾರದ ಕಠಿಣ ನಿಲುವಿನಿಂದಾಗಿ ನಕ್ಸಲ್ ಹಿಂಸಾಚಾರವು ಗಣನೀಯವಾಗಿ ಕುಸಿದಿದೆ. 2014ರ ಮುಂಚೆಯೂ ಇದೇ ಪೊಲೀಸರು, ಇದೇ ಸೇನಾಪಡೆ ಮತ್ತು ಅಧಿಕಾರಿಗಳೇ ಇದ್ದರು; ಆದರೂ ಹತ್ತು ವರ್ಷದ ಅವಧಿಯ ಯುಪಿಎ ಆಡಳಿತದಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗವನ್ನು ತಲುಪಿ ದ್ದವು.
ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಈ ವಿಷಯದ ಬಗ್ಗೆ ಒಮ್ಮತವಿರಲಿಲ್ಲ; ವೈಚಾರಿಕ ಅಸ್ಪಷ್ಟತೆ ಮತ್ತು ಆಂತರಿಕ ಭಿನ್ನಾಭಿಪ್ರಾಯ ತಾಂಡವ ವಾಡುತ್ತಿದ್ದವು. ಕಾಂಗ್ರೆಸ್ ಪಕ್ಷವು ಗಾಂಧಿವಾದವನ್ನು ತೊರೆದು, ನಿಧಾನವಾಗಿಯಾದರೂ ನಿಶ್ಚಿತವಾಗಿ ಮಾವೋವಾದದತ್ತ ಸಾಗತೊಡಗಿತ್ತು.
ನಕ್ಸಲ್ ಸಮಸ್ಯೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ನೋಡದೆ, ‘ಸಾಮಾಜಿಕ-ಆರ್ಥಿಕ ಅಸಮಾನತೆಯೇ ಇದಕ್ಕೆ ಕಾರಣ’ ಎಂಬ ಮೃದುಧೋರಣೆಯನ್ನು ಅದು ತಳೆದಿತ್ತು. ಮನಮೋಹನ್ ಸಿಂಗ್‌ರ ಸರಕಾರವನ್ನು ಸೂತ್ರದ ಗೊಂಬೆಯಂತೆ ಆಡಿಸುತ್ತಿದ್ದ ಸೋನಿಯಾ ಗಾಂಧಿಯವರ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯು, ನಕ್ಸಲಿಸಂ ಅನ್ನು ಮಾನವೀಯ ದೃಷ್ಟಿಕೋನದಿಂದ ನೋಡಲು ಬಯಸುತ್ತಿದ್ದ ಶಕ್ತಿಗಳಿಂದ ತುಂಬಿತ್ತು.
ಕಠಿಣ ಮಿಲಿಟರಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಈ ಮಂಡಳಿಯಲ್ಲಿದ್ದವರು ಅಡ್ಡಿಯಾಗಿದ್ದರು. ಅಂದಿನ ಗೃಹ ಸಚಿವ ಪಿ.ಚಿದಂಬರಂ ಅವರು ‘ಆಪರೇಷನ್ ಗ್ರೀನ್ ಹಂಟ್’ ಕಾರ್ಯಾಚರಣೆಯ ಮೂಲಕ ಕಠಿಣ ಕ್ರಮಕ್ಕೆ ಮುಂದಾದಾಗ, ಅವರದೇ ಪಕ್ಷದ ನಾಯಕರು ಮತ್ತು ನಗರ ನಕ್ಸಲರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪರಿಣಾಮವಾಗಿ ಕಾರ್ಯಾಚರಣೆಗೆ ಹಿನ್ನಡೆಯಾಯಿತು.
2006ರಲ್ಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನಕ್ಸಲಿಸಂ ಅನ್ನು, ‘ಭಾರತದ ಆಂತರಿಕ ಭದ್ರತೆಗೆ ಒದಗಿರುವ ಅತಿದೊಡ್ಡ ಸವಾಲು’ ಎಂದು ಕರೆದಿದ್ದರು. ಆದರೆ, ಸರಕಾರಕ್ಕೆ ಮತ್ತು ಕಾಂಗ್ರೆಸ್ ನಾಯಕರಿಗೆ ವಿವೇಕ ಬರಲಿಲ್ಲ; 2010ರಲ್ಲಿ ದಾಂತೇವಾಡದಲ್ಲಿ ಸಿಆರ್‌ಪಿಎ-ನ 76 ಯೋಧರ ಹತ್ಯೆಯಾಯಿತು.
2013ರಲ್ಲಿ, ಛತ್ತೀಸ್‌ಗಢದ ದರ್ಭಾ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 24 ನಾಯಕರು ಮತ್ತು ಕಾರ್ಯಕರ್ತರ ಹತ್ಯೆಯಾಗಿ, ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕತ್ವವು ಅಳಿಸಿಹೋಯಿತು. ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣದಿಂದಾಗಿ ಯುಪಿಎ ಸರಕಾರವು ಭದ್ರತಾ ಪಡೆಯ ನೂರಾರು ಸಿಬ್ಬಂದಿಯ ಸಾವಿಗೆ ಕಾರಣವಾಯಿತು.
ಆದರೆ, ನಕ್ಸಲರ ಬಗ್ಗೆ ಯಾವುದೇ ಸಹಾನುಭೂತಿಯನ್ನು ಹೊಂದಿರದ ಬಿಜೆಪಿಯು, ಯಾವುದೇ ಮುಲಾಜಿಲ್ಲದೆ ನಕ್ಸಲರನ್ನು ಬುಡಸಮೇತ ಮಟ್ಟಹಾಕುವ ಕೆಲಸಕ್ಕೆ ಮುಂದಾಯಿತು. ತತ್ಪರಿಣಾಮ ವಾಗಿ, ಕೋಟಿ ಕೋಟಿ ರುಪಾಯಿಗಳ ತಲೆದಂಡವಿದ್ದ ನಕ್ಸಲ್ ನಾಯಕರು ಪೊಲೀಸರ ಗುಂಡಿಗೆ ಬಲಿಯಾದರು ಅಥವಾ ಶರಣಾಗುವ ಸ್ಥಿತಿಯನ್ನು ತಲುಪಿದರು.
ನಕ್ಸಲರಿಗೆ ಗುರಾಣಿಯಂತೆ ನಿಂತಿದ್ದ ‘ನಗರ ನಕ್ಸಲರ ಪಡೆ’ಯ ವಿರುದ್ಧ ರಾಜಿಯಿಲ್ಲದ ಕ್ರಮ ಕೈಗೊಂಡಿದ್ದಕ್ಕೆ ಹಾಗೂ ಅಗತ್ಯ ಕಂಡರೆ ‘ಯುಎಪಿಎ’ ಕಾನೂನಿನ ಅಡಿಯಲ್ಲಿ ಬಂಧಿಸಿ ಸದೆಬಡಿದ ಪರಿಣಾಮವಾಗಿ, ನಕ್ಸಲರನ್ನು ಪರೋಕ್ಷವಾಗಿ ಬೆಂಬಲಿಸುವ ಶಕ್ತಿಗಳು ತಣ್ಣಗಾಗಿವೆ. ನಗರದಲ್ಲಿ ನೆಲೆಗೊಂಡಿದ್ದು, ನಕ್ಸಲ್ ಚಟುವಟಿಕೆಗಳ ಕಡೆಗೆ ಸಹಾನುಭೂತಿ ಹೊಂದಿರುವವರನ್ನು ‘ನಗರ ನಕ್ಸಲರು’ ಎಂದು ಕರೆಯಲಾಗುತ್ತದೆ.
ಮಹಾರಾಷ್ಟ್ರದಲ್ಲಿ, ನಕ್ಸಲರು ಹಿಂಸೆಯನ್ನು ತೊರೆದು ಶರಣಾದರೆ 2 ಲಕ್ಷದಿಂದ 20 ಲಕ್ಷ ರುಪಾಯಿ ವರೆಗೆ ಪರಿಹಾರವನ್ನು ನೀಡಲಾಗುತ್ತಿದೆ; ಆಕರ್ಷಕ ಪರಿಹಾರದ ಪ್ಯಾಕೇಜ್ ನೀಡಿಕೆ, ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಅವರಿಗೆ ನೆರವಾಗುವಿಕೆ, ವ್ಯಾಪಾರ ಅಥವಾ ವೃತ್ತಿಪರ ಕಸುಬು ಗಳಲ್ಲಿ ತೊಡಗಿಸಿಕೊಳ್ಳಲು ತರಬೇತಿ ಒದಗಿಸುವಿಕೆ ಮಾತ್ರವಲ್ಲದೆ, ಅಗತ್ಯ ಕಾನೂನಿನ ನೆರವು ನೀಡಿ, ಹಿಂಸಾಮಾರ್ಗದಿಂದ ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರಲಾಗುತ್ತಿದೆ.
ನಕ್ಸಲ್-ಮುಕ್ತ ಪ್ರದೇಶಗಳಲ್ಲಿ ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಗಳ ನಿರ್ಮಾಣ, ಪೊಲೀಸ್ ಠಾಣೆಗಳ ಸ್ಥಾಪನೆ, ಮೊಬೈಲ್ ಟವರ್ ಅಳವಡಿಕೆ ನೆರವೇರಿದೆ. ಆಶ್ಚರ್ಯದ ಸಂಗತಿಯೆಂದರೆ, ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯ ಮರ್ಕನಾರ್ ಮತ್ತು ಕಾಟೇಜ್ಹರಿ ಗ್ರಾಮಗಳು, ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಸಾರಿಗೆ ಬಸ್ ಸಂಪರ್ಕವನ್ನು ಕಾಣುವಂತಾಗಿದೆ.
ನಕಲ್‌ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಕ್ಸಲರ ಉಪಟಳವನ್ನು ಹತ್ತಿಕ್ಕುವ ಅಥವಾ ದಾರಿಗೆ ಬಾರದವರನ್ನು ಗುಂಡಿನ ಭಾಷೆಯ ಮೂಲಕ ಹುಟ್ಟಡಗಿಸುವ ತಂತ್ರಗಾರಿಕೆಯು ಯಶಸ್ವಿಯಾಗಿದೆ. 2026ರ ವರ್ಷದ ಮಾರ್ಚ್‌ನೊಳಗಾಗಿ ನಕ್ಸಲರ ಮೂಲೋತ್ಪಾಟನೆ ಮಾಡುವ ಕೇಂದ್ರ ಸರಕಾರದ ಗುರಿಯನ್ನು ಸಾಧಿಸುವತ್ತ ದೇಶವು ದಾಪುಗಾಲು ಹಾಕುತ್ತಿದೆ.
(ಲೇಖಕರು ಬಿಜೆಪಿಯ ವಕ್ತಾರರು)