ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr D C Nanjunda Column: ಸಾಮಾಜಿಕ ಮಾಧ್ಯಮದಲ್ಲಿ ಹೊಸ ಡಿಜಿಟಲ್‌ ಜಾತಿಗಳ ಸದ್ದು !

ಒಂದು ಉದ್ಯೋಗದ ಮಾಹಿತಿ, ವಿದ್ಯಾರ್ಥಿವೇತನ, ಸರಕಾರಿ ನೇಮಕಾತಿಯ ಮಾಹಿತಿ ಅಥವಾ ತರಬೇತಿ ಅವಕಾಶ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ ಇಂತಹ ಜಾಲಗಳ ಪರಿಣಾಮ ಸದಾ ಸಕಾರಾತ್ಮಕ ವಾಗಿರುವುದಿಲ್ಲ. ಒಂದು ಕಡೆ ಜಾತಿ ಆಧಾರಿತ ಡಿಜಿಟಲ್ ಜಾಲಗಳು ಬಡ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ, ವಿದ್ಯಾರ್ಥಿವೇತನದ ಮಾಹಿತಿ, ಉದ್ಯೋಗದ ಮಾಹಿತಿ ಮತ್ತು ವೃತ್ತಿಪರ ಸಂಪರ್ಕಗಳನ್ನು ಒದಗಿಸಿ ಸಾಮಾಜಿಕ ಚಲನೆಗೆ ಸಹಾಯ ಮಾಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹೊಸ ಡಿಜಿಟಲ್‌ ಜಾತಿಗಳ ಸದ್ದು !

-

Profile
Ashok Nayak Aug 16, 2026 6:02 AM

ಜಾತಿ ಜಾಲ

ಡಾ.ಡಿ.ಸಿ.ನಂಜುಂಡ

ಭಾರತದಲ್ಲಿ ಜಾತಿಯು ಶತಮಾನಗಳಿಂದ ವ್ಯಕ್ತಿಯ ಸಾಮಾಜಿಕ ಆದರೆ ಅಂತರ್ಜಾಲ, ಸ್ಮಾರ್ಟ್ಫೋ ನ್ ಮತ್ತು ಸಾಮಾಜಿಕ ಮಾಧ್ಯಮಗಳ ವೇಗದ ವಿಸ್ತರಣೆಯೊಂದಿಗೆ ಜಾತಿಯ ಅಭಿವ್ಯಕ್ತಿಯ ಸ್ಥಳ ಮತ್ತು ವಿಧಾನವೂ ಬದಲಾಗುತ್ತಿದೆ.

ಹಿಂದೆ ಜಾತಿ ಸಂಘಗಳು, ಸಮುದಾಯ ಭವನಗಳು, ಗ್ರಾಮೀಣ ಸಭೆಗಳು, ಸ್ಥಳೀಯ ಸಂಘಟನೆಗಳು ಮತ್ತು ಬಂಧುತ್ವದ ಜಾಲಗಳು ಜಾತಿ ಆಧಾರಿತ ಸಂಪರ್ಕದ ಪ್ರಮುಖ ಕೇಂದ್ರ ಗಳಾಗಿದ್ದರೆ, ಇಂದು ವಾಟ್ಸ್ಯಾಪ್, ಫೇಸ್‌ಬುಕ್, ಇನ್ ಸ್ಟಾಗ್ರಾಂ, ಟೆಲಿಗ್ರಾಂ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆ ಗಳು ಅಂತಹ ಸಂಪರ್ಕಗಳಿಗೆ ಹೊಸ ಡಿಜಿಟಲ್ ಸ್ಥಳಗಳನ್ನು ನಿರ್ಮಿಸುತ್ತಿವೆ.

ಇದರಿಂದ ಒಂದು ಮಹತ್ವದ ಸಮಾಜಶಾಸ್ತ್ರೀಯ ಪ್ರಶ್ನೆ ಉದ್ಭವಿಸುತ್ತದೆ: ಸಾಮಾಜಿಕ ಮಾಧ್ಯಮವು ಜಾತಿಯನ್ನು ದುರ್ಬಲಗೊಳಿಸುತ್ತಿದೆಯೇ, ಅಥವಾ ಜಾತಿಯನ್ನು ಹೊಸ ಡಿಜಿಟಲ್ ರೂಪದಲ್ಲಿ ಪುನರ್ ಸಂಘಟಿಸುತ್ತಿದೆಯೇ? ಉದಾಹರಣೆಗೆ, ಲಿಂಗಾಯತ ಕೆಎಎಸ್ ಆಕಾಂಕ್ಷಿಗಳ ಗುಂಪುಗಳು, ರೆಡ್ಡಿ ಇಂಜಿನಿಯರ್‌ಗಳ ಗುಂಪು, ಕೊಡವ ನೀಟ್ ಪರೀಕ್ಷಾ ಗುಂಪು, ಗೌಡ ವೈದ್ಯರ ಗುಂಪುಗಳು ಮುಂತಾದ ಉದಾಹರಣೆಗಳನ್ನು ಇಂದು ವಾಟ್ಸ್‌ಆಪ್‌ನಲ್ಲಿ ಹೆಚ್ಚಾಗಿ ಕಾಣಬಹುದು.

ಈ ಲೇಖನದ ಪ್ರಮುಖ ವಾದವೆಂದರೆ, ಸಾಮಾಜಿಕ ಮಾಧ್ಯಮವು ಜಾತಿಯನ್ನು ಸಂಪೂರ್ಣ ಅಳಿಸುವ ಬದಲು ಅದನ್ನು ಡಿಜಿಟಲ್ ಜಾತಿ ಜಾಲ ಎಂಬ ಹೊಸ ರೂಪದಲ್ಲಿ ಪುನರ್‌ ರಚಿಸುತ್ತಿದೆ. ಇಲ್ಲಿ ಡಿಜಿಟಲ್ ಜಾತಿ ಎಂಬ ಪದವನ್ನು ಹೊಸ ಜಾತಿಯ ಅರ್ಥದಲ್ಲಿ ಬಳಸುವುದಿಲ್ಲ.

ಇದನ್ನೂ ಓದಿ: Dr D C Nanjunda Column: ಇಂದಿಗೂ ಸಲ್ಲುವ ಡಾ.ಅಂಬೇಡ್ಕರ್‌ ಸಂಶೋಧನೆ

ಬದಲಾಗಿ ಜಾತಿ ಗುರುತಿನ ಆಧಾರದ ಮೇಲೆ ರೂಪುಗೊಳ್ಳುವ ಡಿಜಿಟಲ್ ಗುಂಪುಗಳು, ಪರಸ್ಪರ ಸಂಪರ್ಕ ಗಳು, ಮಾಹಿತಿ ಹಂಚಿಕೆ ಮತ್ತು ಸಂಪನ್ಮೂಲಗಳ ವಿನಿಮಯ ಎನ್ನಬಹುದು. ಅಂದರೆ ಭಾರತದಲ್ಲಿ ಜಾತಿಯ ಭೌತಿಕ ಸ್ಥಳ ಬದಲಾಗುತ್ತಿದ್ದು, ಅದರ ಸಾಮಾಜಿಕ ಸಂಬಂಧಗಳು ಹೊಸ ಡಿಜಿಟಲ್ ಸ್ಥಳದಲ್ಲಿ ಪುನರ್ ಸಂಘಟಿತವಾಗುತ್ತಿವೆ. ಇದನ್ನು ಕೆಲವು ಉದಾಹರಣೆಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಒಂದು ನಿರ್ದಿಷ್ಟ ಜಾತಿಯ ಐಎಎಸ್ ಪರೀಕ್ಷೆಯ ಆಕಾಂಕ್ಷಿಗಳು ವಾಟ್ಸ್ಯಾಪ್ ಗುಂಪನ್ನು ರಚಿಸಿಕೊಂಡಿ ದ್ದಾರೆ ಎಂದು ಕಲ್ಪಿಸಿಕೊಳ್ಳೋಣ.

ಆ ಗುಂಪಿನಲ್ಲಿ ಪರೀಕ್ಷಾ ಅಧ್ಯಯನ ಸಾಮಗ್ರಿಗಳು, ಹಿಂದಿನ ಪ್ರಶ್ನೆಪತ್ರಿಕೆಗಳು, ಪರೀಕ್ಷಾ ವೇಳಾ ಪಟ್ಟಿಗಳು, ತರಬೇತಿ ಕೇಂದ್ರಗಳ ಮಾಹಿತಿ, ಸಂದರ್ಶನದ ಸಿದ್ಧತೆ, ವಸತಿ ಮಾಹಿತಿ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಂಚಿಕೊಳ್ಳಬಹುದು. ಇಲ್ಲಿ ಜಾತಿ ಕೇವಲ ಗುರುತಾಗಿ ಉಳಿಯದೆ, ಮಾಹಿತಿ ಪಡೆಯುವ ಮತ್ತು ಮಾರ್ಗದರ್ಶನ ಪಡೆಯುವ ಸಾಮಾಜಿಕ ಸಂಪರ್ಕದ ರಹದಾರಿ ಯಾಗುತ್ತದೆ.

ಇದೇ ರೀತಿಯಲ್ಲಿ ಒಂದು ಸಮುದಾಯದ ಕೆಎಎಸ್ ಹುದ್ದೆಯ ಆಕಾಂಕ್ಷಿಗಳು ವಾಟ್ಸ್ಯಾಪ್ ಗುಂಪು ಮಾಡಿಕೊಂಡು ಈಗಾಗಲೇ ಆಡಳಿತ ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳು ಅಥವಾ ಯಶಸ್ವಿ ಅಭ್ಯರ್ಥಿ ಗಳೊಂದಿಗೆ ಸಂಪರ್ಕ ಹೊಂದಿದ್ದರೆ, ಕಿರಿಯರಿಗೆ ಅಧ್ಯಯನದ ಮಾರ್ಗದರ್ಶನ, ಪರೀಕ್ಷಾ ಸಿದ್ಧತೆ ಮತ್ತು ವೃತ್ತಿ ಮಾಹಿತಿ ದೊರೆಯಬಹುದು.

72

ಮತ್ತೊಂದು ಉದಾಹರಣೆಯಲ್ಲಿ, ಒಂದು ಸಮುದಾಯದ ವೈದ್ಯರು ವಾಟ್ಸ್ಯಾಪ್ ಗುಂಪಿನಲ್ಲಿ ವೈದ್ಯಕೀಯ ಉದ್ಯೋಗ, ಆಸ್ಪತ್ರೆಗಳ ಮಾಹಿತಿ, ಸಂಶೋಧನಾ ಸಹಯೋಗ, ಸಮ್ಮೇಳನಗಳು, ವೃತ್ತಿ ಮಾರ್ಗದರ್ಶನ ಮತ್ತು ತುರ್ತು ಸಹಾಯದ ಮಾಹಿತಿಯನ್ನು ಹಂಚಿಕೊಳ್ಳಬಹುದು. ಇಲ್ಲಿ ಜಾತಿ ಮತ್ತು ವೃತ್ತಿ ಎರಡೂ ಸೇರಿ ಒಂದು ವೃತ್ತಿಪರ ಜಾತಿ ಜಾಲವಾಗಿ ರೂಪುಗೊಳ್ಳುತ್ತಿದೆ. ಇದರಿಂದ ಡಿಜಿಟಲ್ ಜಾತಿ ಬಂಡವಾಳ ಎಂಬ ಹೊಸ ಪರಿಕಲ್ಪನೆ ಉಂಟಾಗುತ್ತಿದೆ.

ಹಿಂದೆ ಸಾಂಪ್ರದಾಯಿಕ ಸಮಾಜದಲ್ಲಿ ಜಾತಿ ಬಂಡವಾಳವು ಕುಟುಂಬ, ಬಂಧುತ್ವ ಮತ್ತು ಸ್ಥಳೀಯ ಜಾತಿ ಸಂಘಟನೆಗಳ ಮೂಲಕ ಅವಕಾಶಗಳನ್ನು ಒದಗಿಸುತ್ತಿತ್ತು. ಆದರೆ ಇಂದು ಡಿಜಿಟಲ್ ಸಮಾಜದಲ್ಲಿ ಅದೇ ಪ್ರಕ್ರಿಯೆ ಜಾತಿ ಗುರುತು, ಡಿಜಿಟಲ್ ಗುಂಪು, ನಂಬಿಕೆ, ಮಾಹಿತಿ ಹಂಚಿಕೆ, ಮಾರ್ಗದರ್ಶನ ಮತ್ತು ಅವಕಾಶಗಳ ಮೂಲಕ ನಡೆಯಬಹುದು. ಇಲ್ಲಿ ಹಣಕ್ಕಿಂತ ಮಾಹಿತಿ, ಸಂಪರ್ಕ, ನಂಬಿಕೆ ಮತ್ತು ವೇಗ ಮುಖ್ಯ ಸಂಪನ್ಮೂಲಗಳಾಗುತ್ತವೆ.

ಒಂದು ಉದ್ಯೋಗದ ಮಾಹಿತಿ, ವಿದ್ಯಾರ್ಥಿವೇತನ, ಸರಕಾರಿ ನೇಮಕಾತಿಯ ಮಾಹಿತಿ ಅಥವಾ ತರಬೇತಿ ಅವಕಾಶ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ ಇಂತಹ ಜಾಲಗಳ ಪರಿಣಾಮ ಸದಾ ಸಕಾರಾತ್ಮಕ ವಾಗಿರುವುದಿಲ್ಲ. ಒಂದು ಕಡೆ ಜಾತಿ ಆಧಾರಿತ ಡಿಜಿಟಲ್ ಜಾಲಗಳು ಬಡ ವಿದ್ಯಾರ್ಥಿ ಗಳಿಗೆ ಮಾರ್ಗ ದರ್ಶನ, ವಿದ್ಯಾರ್ಥಿವೇತನದ ಮಾಹಿತಿ, ಉದ್ಯೋಗದ ಮಾಹಿತಿ ಮತ್ತು ವೃತ್ತಿಪರ ಸಂಪರ್ಕಗಳನ್ನು ಒದಗಿಸಿ ಸಾಮಾಜಿಕ ಚಲನೆಗೆ ಸಹಾಯ ಮಾಡಬಹುದು.

ವಿಶೇಷವಾಗಿ ಮೊದಲ ತಲೆಮಾರಿನ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಮುದಾಯದ ಹಿರಿಯ ರಿಂದ ದೊರೆಯುವ ಮಾರ್ಗದರ್ಶನ ಬಹಳ ಮುಖ್ಯವಾಗಬಹುದು. ಒಬ್ಬ ಗ್ರಾಮೀಣ ವಿದ್ಯಾರ್ಥಿಗೆ ತನ್ನ ಸಮುದಾಯದ ವೈದ್ಯ, ಪ್ರಾಧ್ಯಾಪಕ, ಆಡಳಿತಾಧಿಕಾರಿ ಅಥವಾ ಉದ್ಯಮಿಯೊಂದಿಗೆ ನೇರ ಸಂಪರ್ಕ ದೊರೆತರೆ, ಅದು ಅವರ ಶಿಕ್ಷಣದ ಆಶಯ ಮತ್ತು ವೃತ್ತಿ ಆಯ್ಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮತ್ತೊಂದು ಕಡೆ, ಇದೇ ಜಾಲಗಳು ಸಾಮಾಜಿಕ ಹೊರಗಿಡುವಿಕೆಯನ್ನು ಹೆಚ್ಚಿಸಬಹುದು. ಒಂದು ಸಮುದಾಯದ ಒಳಗಿನವರಿಗೆ ಮಾತ್ರ ಉದ್ಯೋಗ, ತರಬೇತಿ, ವಿದ್ಯಾರ್ಥಿವೇತನ ಅಥವಾ ವೃತ್ತಿಪರ ಸಂಪರ್ಕಗಳ ಮಾಹಿತಿ ವೇಗವಾಗಿ ದೊರೆತರೆ, ಆ ಜಾಲದ ಹೊರಗಿನವರು ಅದೇ ಅವಕಾಶದಿಂದ ವಂಚಿತರಾಗಬಹುದು. ಇಂದು ವಿವಾಹ ಕ್ಷೇತ್ರದಲ್ಲಿಯೂ ಜಾತಿ ಆಧಾರಿತ ಡಿಜಿಟಲ್ ಗುಂಪಿನ ಪರಿಣಾಮ ಗಮನಾರ್ಹವಾಗಬಹುದು.

ಭಾರತೀಯ ಜಾತಿ ವ್ಯವಸ್ಥೆಯ ಪ್ರಮುಖ ಲಕ್ಷಣಗಳಲ್ಲಿ ಜಾತಿಯೊಳಗಿನ ವಿವಾಹವೂ ಒಂದು. ಹಿಂದೆ ಜಾತಿ ಸಂಘಗಳು ಮತ್ತು ಬಂಧುಗಳ ಮೂಲಕ ವಧು-ವರರ ಪರಿಚಯ ನಡೆಯುತ್ತಿದ್ದರೆ, ಇಂದು ಸಮುದಾಯ ಆಧಾರಿತ ವಾಟ್ಸ್ಯಾಪ್ ಗುಂಪುಗಳು, ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ಡಿಜಿಟಲ್ ಪರಿಚಯ ವ್ಯವಸ್ಥೆಗಳು ಅದೇ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.

ಹೀಗಾಗಿ ಡಿಜಿಟಲ್ ತಂತ್ರಜ್ಞಾನವು ಜಾತಿಯೊಳಗಿನ ವಿವಾಹವನ್ನು ದುರ್ಬಲಗೊಳಿಸುವ ಬದಲು ಕೆಲವು ಸಂದರ್ಭಗಳಲ್ಲಿ ಅದನ್ನು ಹೆಚ್ಚು ಸಂಘಟಿತಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಡಿಜಿಟಲ್ ಜಾತಿ ಜಾಲಗಳ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಅವು ಭೌಗೋಳಿಕ ಗಡಿಗಳನ್ನು ಮೀರುತ್ತವೆ. ಒಂದೇ ಸಮುದಾಯದ ಮೈಸೂರು, ಬೆಂಗಳೂರು, ದೆಹಲಿ, ಮುಂಬೈ ಅಥವಾ ವಿದೇಶ ದಲ್ಲಿರುವ ಜನರು ಒಂದೇ ಗುಂಪಿನಲ್ಲಿ ಇರಬಹುದು. ಹೀಗಾಗಿ ಜಾತಿಯ ಸಂಪರ್ಕವು ಗ್ರಾಮ ಅಥವಾ ಪ್ರದೇಶಕ್ಕೆ ಸೀಮಿತವಾಗದೆ ವೃತ್ತಿ ಮತ್ತು ಡಿಜಿಟಲ್ ಜಾಲಗಳ ಮೂಲಕ ವಿಸ್ತರಿಸಿದೆ.

ಉದಾಹರಣೆಗೆ ಒಂದೇ ಸಮುದಾಯದ ವೈದ್ಯರು ದೇಶದ ವಿವಿಧ ನಗರಗಳಲ್ಲಿ ಇದ್ದರೂ ಒಂದೇ ಗುಂಪಿನಲ್ಲಿ ಇರಬಹುದು. ಅದೇ ರೀತಿಯಲ್ಲಿ ಆಡಳಿತಾಧಿಕಾರಿಗಳು, ಶಿಕ್ಷಕರು, ವಕೀಲರು, ಉದ್ಯಮಿ ಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಮುದಾಯದ ಆಧಾರದ ಮೇಲೆ ಪ್ರತ್ಯೇಕ ಡಿಜಿಟಲ್ ಜಾಲಗಳನ್ನು ನಿರ್ಮಿಸಬಹುದು. ಇದರಿಂದ ಜಾತಿಯ ಸಾಮಾಜಿಕ ವ್ಯಾಪ್ತಿ ಭೌಗೋಳಿಕ ಸ್ಥಳವನ್ನು ಮೀರಿ ಜಾಲಬಂಧಿತವಾಗಿದೆ.

ಹೊಸ ರೀತಿಯ ಡಿಜಿಟಲ್ ಸಮಾಜದಲ್ಲಿ ಶಿಕ್ಷಣ, ವೃತ್ತಿ, ಡಿಜಿಟಲ್ ಸಂಪರ್ಕ ಮತ್ತು ಜಾಲದೊಳಗಿನ ಪ್ರಭಾವವೂ ಸೇರಬಹುದು. ಒಂದು ಸಮುದಾಯದ ಜಾಲದಲ್ಲಿ ಹಿರಿಯ ಆಡಳಿತಾಧಿಕಾರಿ, ವೈದ್ಯ, ಪ್ರಾಧ್ಯಾಪಕ ಅಥವಾ ಉದ್ಯಮಿ ಪ್ರಮುಖ ವ್ಯಕ್ತಿಯಾಗಿದ್ದರೆ, ಅವರ ಬಳಿ ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಗಳಿರಬಹುದು.

ಹೀಗಾಗಿ ಜಾತಿ ಬಂಡವಾಳದ ಜೊತೆಗೆ ವೃತ್ತಿಪರ ಬಂಡವಾಳ ಮತ್ತು ಡಿಜಿಟಲ್ ಬಂಡವಾಳ ಸೇರಿ ಹೊಸ ಸಾಮಾಜಿಕ ಬಂಡವಾಳವನ್ನು ನಿರ್ಮಿಸಬಹುದು. ಇದು ಭವಿಷ್ಯದಲ್ಲಿ ಡಿಜಿಟಲ್ ಜಾತಿ ಜಾಲ ಸೂಚ್ಯಂಕ ವನ್ನು ರೂಪಿಸಬಹುದು ಎನ್ನಲಾಗಿದೆ. ಇದರಲ್ಲಿ ಸದಸ್ಯತ್ವ, ಸಂವಹನ, ಮಾಹಿತಿ ವಿನಿಮಯ, ಸಾಮಾಜಿಕ ಬೆಂಬಲ ಮತ್ತು ಅವಕಾಶದ ಪ್ರವೇಶ ಎಂಬ ಐದು ಆಯಾಮಗಳನ್ನು ಅಳೆಯಬಹುದು.

ಒಬ್ಬ ವ್ಯಕ್ತಿ ಜಾತಿ ಆಧಾರಿತ ಡಿಜಿಟಲ್ ಗುಂಪಿನಲ್ಲಿ ಎಷ್ಟು ಸಕ್ರಿಯನಾಗಿದ್ದಾನೆ, ಆ ಗುಂಪಿನಲ್ಲಿ ಉದ್ಯೋಗ ಮತ್ತು ಶಿಕ್ಷಣದ ಮಾಹಿತಿ ಎಷ್ಟು ಬಾರಿ ಹಂಚಿಕೊಳ್ಳಲಾಗುತ್ತದೆ, ಹಿರಿಯರಿಂದ ಮಾರ್ಗ ದರ್ಶನ ದೊರೆಯುತ್ತದೆಯೇ ಮತ್ತು ಆ ಜಾಲದ ಮೂಲಕ ಆತನಿಗೆ ಜೀವನದಲ್ಲಿ ಹೊಸ ಅವಕಾಶ ಗಳು ದೊರೆಯುತ್ತವೆಯೇ ಎಂಬುದನ್ನು ಅಧ್ಯಯನ ಮಾಡಬಹುದು.

ಈ ಪರಿಕಲ್ಪನೆಯು ಸಾಮಾಜಿಕ ಒಳಗೊಳ್ಳುವಿಕೆಯ ದೃಷ್ಟಿಯಿಂದಲೂ ಬಹಳ ಮುಖ್ಯ. ಡಿಜಿಟಲ್ ಭಾರತದಲ್ಲಿ ಎಲ್ಲರಿಗೂ ಅಂತರ್ಜಾಲದ ಪ್ರವೇಶವಿದೆಯೇ? ಎಂಬ ಪ್ರಶ್ನೆ ಮಾತ್ರ ಸಾಕಾಗುವುದಿಲ್ಲ. ಎಲ್ಲರಿಗೂ ಸಮಾನವಾದ ಮಾಹಿತಿ ಜಾಲಗಳು ಮತ್ತು ಅವಕಾಶದ ಜಾಲಗಳಿಗೆ ಪ್ರವೇಶವಿದೆಯೇ? ಎಂಬ ಪ್ರಶ್ನೆಯನ್ನೂ ಕೇಳಬೇಕು. ಎಲ್ಲರಿಗೂ ಸ್ಮಾರ್ಟ್ ಫೋನ್ ಇದ್ದರೂ ಎಲ್ಲರಿಗೂ ಒಂದೇ ರೀತಿಯ ಸಾಮಾಜಿಕ ಜಾಲ ಇರುವುದಿಲ್ಲ.

ಎಲ್ಲರಿಗೂ ಅಂತರ್ಜಾಲ ಇದ್ದರೂ ಎಲ್ಲರಿಗೂ ಒಂದೇ ರೀತಿಯ ಮಾಹಿತಿ ಸಿಗುವುದಿಲ್ಲ. ಎಲ್ಲರಿಗೂ ಮಾಹಿತಿ ಇದ್ದರೂ ಅದನ್ನು ಅವಕಾಶವಾಗಿ ಪರಿವರ್ತಿಸಲು ಬೇಕಾದ ಸಾಮಾಜಿಕ ಬಂಡವಾಳ ಎಲ್ಲರಲ್ಲೂ ಇರುವು ದಿಲ್ಲ. ಹೀಗಾಗಿ ಭವಿಷ್ಯದ ಡಿಜಿಟಲ್ ಅಸಮಾನತೆ ಕೇವಲ ಸಾಧನ ಅಥವಾ ಅಂತರ್ಜಾಲದ ಪ್ರವೇಶದ ಪ್ರಶ್ನೆಯಾಗಿರದೆ, ಯಾರು ಯಾವ ಡಿಜಿಟಲ್ ಜಾಲದಲ್ಲಿ ಇದ್ದಾರೆ? ಎಂಬ ಪ್ರಶ್ನೆಯಾಗಬಹುದು. ಇಂದಿನ ಭಾರತದಲ್ಲಿ ಸಾಮಾಜಿಕ ಮಾಧ್ಯಮವು ಜಾತಿಯನ್ನು ಸಂಪೂರ್ಣ ವಾಗಿ ಬಲಪಡಿಸುತ್ತಿದೆ ಎಂದು ಹೇಳುವುದೂ ಅಷ್ಟೇ ಸರಳೀಕರಣ.

ವಾಸ್ತವವಾಗಿ ಜಾತಿಯ ರೂಪ, ಸ್ಥಳ ಮತ್ತು ಸಂವಹನದ ವಿಧಾನ ಬದಲಾಗುತ್ತಿದೆ. ಒಮ್ಮೆ ಜಾತಿ ಸಂಘದ ಸಭೆಯಲ್ಲಿ ಭೇಟಿಯಾಗುತ್ತಿದ್ದ ಜನರು ಇಂದು ವಾಟ್ಸ್ಯಾಪ್ ಗುಂಪಿನಲ್ಲಿ ಭೇಟಿಯಾಗು ತ್ತಿದ್ದಾರೆ. ಒಮ್ಮೆ ಉದ್ಯೋಗದ ಮಾಹಿತಿ ಬಂಧುಗಳ ಮೂಲಕ ಹರಡುತ್ತಿದ್ದರೆ, ಇಂದು ಅದು ಡಿಜಿಟಲ್ ಗುಂಪಿನಲ್ಲಿ ಕೆಲವೇ ನಿಮಿಷಗಳಲ್ಲಿ ನೂರಾರು ಜನರಿಗೆ ತಲುಪಬಹುದು.

ಹೀಗಾಗಿ ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಜಾತಿಯನ್ನು ಹೊಸ ರೀತಿಯಲ್ಲಿ ಸಂಘಟಿಸಿ, ವೇಗಗೊಳಿಸಿ ಮತ್ತು ಜಾಲಬಂಧಿತ ರೂಪದಲ್ಲಿ ಪುನರ್‌ರಚಿಸುತ್ತಿದೆ. ಅಂತಿಮವಾಗಿ ಭವಿಷ್ಯದಲ್ಲಿ ಕೇವಲ ‘ಜಾತಿ ಎಲ್ಲಿದೆ?’ ಎಂದು ಕೇಳುವುದರಿಂದ ಮುಂದೆ ಸಾಗಬೇಕು. ಅದು ಜಾತಿ ಯಾವ ಡಿಜಿಟಲ್ ಜಾಲಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ? ಯಾರಿಗೆ ಮಾಹಿತಿ ಮೊದಲು ಸಿಗುತ್ತದೆ? ಯಾರಿಗೆ ಅವಕಾಶ ದೊರೆಯುತ್ತದೆ? ಯಾರು ಹೊರಗಿಡಲ್ಪಡುತ್ತಾರೆ? ಮತ್ತು ಡಿಜಿಟಲ್ ಜಾಲಗಳು ಜಾತಿ ಯನ್ನು ಇಲ್ಲವಾಗಿಸುತ್ತಿದೆಯೇ, ಪುನರುತ್ಪಾದಿಸುತ್ತಿವೆಯೇ ಅಥವಾ ಅದಕ್ಕೆ ಹೊಸ ಶಕ್ತಿಯನ್ನು ನೀಡುತ್ತಿವೆಯೇ? ಎಂಬ ಪ್ರಶ್ನೆಗಳನ್ನು ಕೇಳಬೇಕು.

2026ರ ಅಂತ್ಯದ ವೇಳೆಗೆ ಅಂತರ್ಜಾಲ ಬಳಕೆದಾರರ ಸಂಖ್ಯೆ ಸುಮಾರು 105 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾತಿ ನಾಶವಾಗುತ್ತಿದೆಯೇ ಅಥವಾ ರೂಪಾಂತರ ಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ, ನಾವು ಕೇವಲ ಭೌತಿಕ ಸಮಾಜವನ್ನು ನೋಡುವುದರಿಂದ ಸಾಲದು; ಜನರು ಯಾವ ಡಿಜಿಟಲ್ ಜಾಲಗಳಲ್ಲಿ ಸೇರಿದ್ದಾರೆ, ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಆ ಸಂಪರ್ಕಗಳ ಮೂಲಕ ಯಾವ ರೀತಿಯ ಮಾಹಿತಿ, ಸಹಾಯ ಮತ್ತು ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬುದನ್ನೂ ಗಮನಿಸಬೇಕು. ಇದೇ ದೃಷ್ಟಿಕೋನವು ಜಾತಿ, ಹೊಸ ರೂಪಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾಗಿದೆ.