ಕರಾವಳಿ ಎಂದರೆ ಮಂಗಳೂರಷ್ಟೇ ಅಲ್ಲ !
1859ರಲ್ಲಿ ಬ್ರಿಟಿಷರು ಕೆನರಾ ಜಿಲ್ಲೆಯನ್ನು ಒಡೆದು 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ಮತ್ತು ದಕ್ಷಿಣ ಕನ್ನಡ (ಅವಿಭಜಿತ) ವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಿದರು. ಇಂದಿಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಹಳೆಯ ಸರಕಾರಿ ಕಾಗದ ಪತ್ರಗಳಿಗೆ ಹೊನ್ನಾವರಕ್ಕೆ ಬರುವುದುಂಟು. ಕರ್ನಾಟಕ ಕರಾವಳಿಯ ಉದ್ದ ಒಟ್ಟು 320 ಕಿ.ಮೀ ಎಂದು ಹೇಳಲಾಗುತ್ತದೆ.
-
ಪ್ರಸ್ತುತ
ನಾಗರಾಜ ನಾಯಕ
ಕರಾವಳಿಯೆಂದರೆ ಕೇವಲ ಮಂಗಳೂರು ಎನ್ನುವುದು ಹಲವು ಬೆಂಗಳೂರಿಗರ ಭ್ರಮೆ. ಕರ್ನಾಟಕದ ಕರಾವಳಿಯಲ್ಲಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಎಂದು ಮೂರು ಜಿಲ್ಲೆಗಳು ಇವೆ. 1859ಕ್ಕೆ ಮೊದಲು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡವನ್ನು ಕೆನರಾ (ಕನ್ನಡದ ತಪ್ಪು ಉಚ್ಛಾರ) ಜಿಲ್ಲೆ ಎಂತಲೇ ಕರೆಯುತ್ತಿದ್ದರು. ಅದಕ್ಕೆ ಇಂದಿನ ಉತ್ತರ ಕನ್ನಡದ ಹೊನ್ನಾವರ ಜಿಲ್ಲಾ ಕೇಂದ್ರವಾಗಿತ್ತು.
1859ರಲ್ಲಿ ಬ್ರಿಟಿಷರು ಕೆನರಾ ಜಿಲ್ಲೆಯನ್ನು ಒಡೆದು 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ಮತ್ತು ದಕ್ಷಿಣ ಕನ್ನಡ (ಅವಿಭಜಿತ) ವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಿದರು. ಇಂದಿಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಹಳೆಯ ಸರಕಾರಿ ಕಾಗದ ಪತ್ರಗಳಿಗೆ ಹೊನ್ನಾವರಕ್ಕೆ ಬರುವುದುಂಟು. ಕರ್ನಾಟಕ ಕರಾವಳಿಯ ಉದ್ದ ಒಟ್ಟು 320 ಕಿ.ಮೀ ಎಂದು ಹೇಳಲಾಗುತ್ತದೆ.
ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯದೇ ಸಿಂಹಪಾಲು. ಉತ್ತರ ಕನ್ನಡವು ಸುಮಾರು 160 ಕಿ.ಮೀ, ಉಡುಪಿ ಸುಮಾರು 95 ಕಿ.ಮೀ ಹಾಗೂ ದಕ್ಷಿಣ ಕನ್ನಡ ಸುಮಾರು 65 ಕಿ.ಮೀ ಉದ್ದವನ್ನು ಹೊಂದಿ ದೆ ಎಂದು ಹೇಳಲಾಗುತ್ತಿದೆ. ದುರ್ದೈವ ಎಂದರೆ ಈಗಲೂ ಕರಾವಳಿ ಎಂದರೆ ಬೆಂಗಳೂರಿ ಗರು ಒಂದೋ ಮಂಗಳೂರು ಎನ್ನುತ್ತಾರೆ, ಇಲ್ಲವೇ ಗೋವಾ ಎನ್ನುತ್ತಾರೆ.
ಇದನ್ನೂ ಓದಿ: Vinay Shirahattimath Column: ವೈಯಕ್ತಿಕ ನಿಂದನೆಯಾಚೆಗಿರಲಿ ವಚನ ಸಾಹಿತ್ಯದ ಸತ್ಯಶೋಧ
ಎಷ್ಟೋ ಬೆಂಗಳೂರಿಗರಿಗೆ ಗೋಕರ್ಣ, ಮಜಾಳಿಯ ಕಪ್ಪು ಮರಳಿನ ಸಮುದ್ರ ತೀರ ಇವೆ ಗೋವಾ ದಲ್ಲಿಯೇ ಬರುತ್ತದೆ ಎನ್ನುವ ಭ್ರಮೆ. ಉತ್ತರ ಕನ್ನಡ ಜಿಲ್ಲೆಯ ವಿಸ್ತೀರ್ಣ 10277 ಚದರ ಕಿಲೋ ಮೀಟರ್, ದಕ್ಷಿಣ ಕನ್ನಡ 4866 ಚ. ಕಿ.ಮೀ ಮತ್ತು ಉಡುಪಿಯ ವಿಸ್ತೀರ್ಣ 3582 ಚ. ಕಿ.ಮೀ. ಹೀಗಿರುವಾಗ ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಕ್ಕೆ ಉಚ್ಛ ನ್ಯಾಯಾಲಯದ ಪೀಠವನ್ನು ಕೊಡುವುದೆಂತಲೂ ಹಾಗೂ ಅದನ್ನು ಮಂಗಳೂರಿನಲ್ಲಿ ಸ್ಥಾಪಿಸ ಬೇಕೆಂತಲೂ ನಿರ್ಧಾರ ಮಾಡಿಯಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಅದು ಸತ್ಯವೇ ಆಗಿದ್ದಲ್ಲಿ ಇತ್ತೀಚೆಗೆ ನ್ಯಾಯ ಕೊಡುವ ದೃಷ್ಟಿಯಿಂದ ಎಸಗಿದ ದೊಡ್ಡ ಅನ್ಯಾಯ ಎಂತಲೇ ಇದನ್ನು ಬಣ್ಣಿಸಬಹುದು. ಉಚ್ಛ ನ್ಯಾಯಾಲಯದ ಪೀಠಗಳ ರಚನೆ ಇಡೀ ದೇಶದಲ್ಲಿ ಹೆಚ್ಚೆಚ್ಚು ಆಗುತ್ತಿವೆ. ಇದರ ಉದ್ದೇಶ ನ್ಯಾಯವನ್ನು ಮನೆ ಬಾಗಿಲಿಗೆ ತಂದು ಕೊಡುವುದೇ ಆಗಿದೆ. ಅದರ ಜೊತೆಗೆ ಸಮಯ, ಹಣದ ಉಳಿತಾಯ, ಸಾರ್ವಜನಿಕರಿಗೆ ಸುಲಭ ಲಭ್ಯತೆ ಇತ್ಯಾದಿ ಕಾರಣ ಗಳು. ಆದರೆ ಇವೆಲ್ಲವನ್ನೂ ಪರಿಗಣಿಸದೇ ಕೇರಳದ ಗಡಿಯ ಮಂಗಳೂರಿನಲ್ಲಿ ಉಚ್ಛ ನ್ಯಾಯಾಲ ಯದ ಪೀಠ ಸ್ಥಾಪಿಸುವುದು ಹೆಚ್ಚಿನ ಸಾರ್ವಜನಿಕರಿಗೆ ಅನನುಕೂಲ ಉಂಟು ಮಾಡುವಂತಹದು.
ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಧಾರವಾಡ ಉಚ್ಛ ನ್ಯಾಯಾಲಯದ ಪೀಠದ ನ್ಯಾಯಾಧೀಕರಣಕ್ಕೆ ಬರುತ್ತಿದೆ. ಉದಾಹರಣೆ ನೀಡಿ ಹೇಳುವುದಾದರೆ ಮುಂಚೆ ಕಾರವಾರದವರು ಉಚ್ಛ ನ್ಯಾಯಾಲಯ ಧಾರವಾಡಕ್ಕೆ ಮೂರು ತಾಸಿಗೆ ಹೋಗುತ್ತಿದ್ದರು. ಕ್ರಮಿಸಬೇಕಾದ ದೂರ ಅಂದಾಜು 170 ಕಿ.ಮೀ ಆಗುತ್ತಿತ್ತು. ಈಗ ಮಂಗಳೂರಿಗೆಹೋಗಬೇಕಾದರೆ 5.30 ತಾಸು ಬೇಕಾಗುತ್ತದೆ ಹಾಗೂ ಕ್ರಮಿಸ ಬೇಕಾದ ದೂರ 270 ಕಿ.ಮೀ. ಇದು ನ್ಯಾಯವೇ? ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ದವರು ಧಾರವಾಡಕ್ಕೆ ಹೋಗಲು ಅರ್ಧ ತಾಸು ತೆಗೆದುಕೊಳ್ಳುತ್ತಿದ್ದರು, ಈಗ ಮಂಗಳೂರಿಗೆ ಹೋಗಲು ಸುಮಾರು 7 ತಾಸು ಕ್ರಮಿಸಬೇಕಾಗುತ್ತದೆ.
ಹಳಿಯಾಳದವರು ಮಾಡಿದ ಪಾಪವಾದರೂ ಏನು? ಅದಕ್ಕಾಗಿ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆ ವಕೀಲರ ಸಂಘದವರು ತೀರ್ಮಾನ ಮಾಡಿ ಕರಾವಳಿ ಪೀಠವನ್ನು ಉತ್ತರ ಕನ್ನಡ ಜಿಲ್ಲೆಯ ಮಧ್ಯಂತರ ಸ್ಥಳದಲ್ಲಿ ಮಾಡಲು ಠರಾವು ಪಾಸು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದಲ್ಲಿ ಪೀಠವಾದರೆ ಶಿವಮೊಗ್ಗದವರು ಒಟ್ಟು 150 ಕಿ.ಮೀನ ಹೊನ್ನಾವರಕ್ಕೆ ಮೂರು ತಾಸಿನಲ್ಲಿ ಪ್ರಯಾಣಿಸಬಹುದು. ಶಿವಮೊಗ್ಗದವರು ಮಂಗಳೂರಿಗೆ ಹೋಗಲು 203 ಕಿ.ಮೀ ಚಲಿಸಲು 4.15 ತಾಸು ತೆಗೆದುಕೊಳ್ಳಬೇಕಾಗುತ್ತದೆ.
ಹೊನ್ನಾವರದಲ್ಲಿ ಪೀಠವಾದರೆ ಬೈಂದೂರಿನವರಿಗೆ ಮಂಗಳೂರು 124 ಕಿ.ಮೀ, ಅದೇ ಹೊನ್ನಾವರ ಕೇವಲ 56 ಕಿ.ಮೀ. ಕುಂದಾಪುರದವರಿಗೂ ಮಂಗಳೂರು ಮತ್ತು ಹೊನ್ನಾವರ ಸಮಾನ ದೂರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ತಾಲೂಕುಗಳಲ್ಲಿ 11 ವಕೀಲರ ಸಂಘಗಳು ಇವೆ. ಇದರ ಅರ್ಥ 11 ಕಡೆ ನ್ಯಾಯಾಲಯಗಳು ಇವೆ.
ಅದೇ ಉಡುಪಿಯಲ್ಲಿ 4 ಮತ್ತು ದಕ್ಷಿಣ ಕನ್ನಡದಲ್ಲಿ 6 ವಕೀಲರ ಸಂಘಗಳಿವೆ. ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳ ಸಂಖ್ಯೆ ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ಸಾಕಷ್ಟು ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಉದ್ದೇಶಗಳಿಗೆ ಭೂ ಸ್ವಾಧೀನ ಆಗಿರುವುದರಿಂದ ಆ ಪ್ರಕರಣಗಳು, ಸಿವಿಲ್, ಕ್ರಿಮಿನಲ್ ಪ್ರಕರಣಗಳು ಸಾಕಷ್ಟು ಉಚ್ಛ ನ್ಯಾಯಾಲಯದಲ್ಲಿ ಇವೆ.
ಅಷ್ಟೇ ಅಲ್ಲದೇ ಈ ಜಿಲ್ಲೆಯಲ್ಲಿ ಒಟ್ಟು ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಅನೇಕ ಎಂಎಫ್ಎ ಪ್ರಕರಣಗಳು ಸಾಕಷ್ಟು ಉಚ್ಛ ನ್ಯಾಯಾಲಯದ ಹಂತದಲ್ಲಿವೆ. ಮೇಲಾಗಿ ಉತ್ತರ ಕನ್ನಡದವರಿಗೆ ಬೆಳಗಾವಿ ರೆವಿನ್ಯೂ ವಿಭಾಗವಾಗಿರುತ್ತದೆ. ಗ್ರಾಹಕ ನ್ಯಾಯಾಲಯದ ಪೀಠ, ಕೆಎಟಿ ಪೀಠ, ರೆವಿನ್ಯೂ ಅರೆ ನ್ಯಾಯಿಕ ಪ್ರಾಧಿಕಾರಿಗಳು ಹೀಗೆ ಅನೇಕ ಕೆಲಸಗಳಿಗಾಗಿ ಬೆಳಗಾವಿಗೆ ಹೋಗ ಬೇಕಾಗುತ್ತದೆ. ಒಂದೇ ಪ್ರಕರಣದಿಂದ ಉದ್ಭವಿಸಿದ ರೆವಿನ್ಯೂ ಹಾಗೂ ಸಿವಿಲ್ ಪ್ರಕರಣಗಳಿಗೆ ಬೆಳಗಾವಿ ಹಾಗೂ ಮಂಗಳೂರಿಗೆ ಅಲೆಯುವುದೆಂದರೆ ಆ ಬಡ ಕಕ್ಷಿಗಾರನ ಪರಿಸ್ಥಿತಿ ಏನಾಗಬೇಡ.
ಆದ್ದರಿಂದ ಉತ್ತರ ಕನ್ನಡದ ಜಿಯ ವಕೀಲರು ಹಾಗೂ ನಾಗರಿಕರು ಎದ್ದು ನಿಂತು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ನ್ಯಾಯದ ಹೆಸರಿನಲ್ಲಿ ಅನ್ಯಾಯ ಆಗುವುದನ್ನು ತಪ್ಪಿಸಲು ಹೋರಾಡಲೇ ಬೇಕಿದೆ. ಉತ್ತರ ಕನ್ನಡದಲ್ಲಿ ಪೀಠ ಸ್ಥಾಪನೆ ಅಸಾಧ್ಯವಾದರೆ ಉತ್ತರ ಕನ್ನಡ ಧಾರವಾಡ ಪೀಠದ ನ್ಯಾಯಾಧೀಕರಣಕ್ಕೇ ಇರಲಿ, ಮತ್ತೆ ಮುಂದಿನ ದಿನಗಳಲ್ಲಿ ವಾರಕ್ಕೆ 2-3 ದಿನ ಸಂಚಾರಿ ಪೀಠವನ್ನು ಉತ್ತರ ಕನ್ನಡದಲ್ಲಿ ಸ್ಥಾಪಿಸಿದರೆ ಆಯಿತು ಎನ್ನುವುದು ಉತ್ತರ ಕನ್ನಡದವರ ಅಂಬೋಣವಾಗಿದೆ.
ಈಗಾಗಲೇ ಶಿವಮೊಗ್ಗದವರೂ ಸಹ ಮಂಗಳೂರಿನಲ್ಲಿ ಪೀಠ ಬೇಡ ಎಂದು ಹೋರಾಟಕ್ಕೆ ಇಳಿದಾ ಗಿದೆ. ಉತ್ತರ ಕನ್ನಡವೂ ಇಳಿಯಲೇಬೇಕಾದ ಅನಿವಾರ್ಯತೆ ಹೊಂದಿದೆ. ಸರ್ವೋಚ್ಛ ನ್ಯಾಯಾಲ ಯದ ನ್ಯಾಯಮೂರ್ತಿಗಳಾಗಿ, ಕರಾವಳಿ ಭಾಗದ ಭೌಗೋಳಿಕ ಪರಿಚಯವನ್ನು ಹೊಂದಿರುವ, ರಾಜ್ಯಪಾಲರೂ ಆಗಿರುವ ಗೌರವಾನ್ವಿತ ನ್ಯಾಯಮೂರ್ತಿ ನಜೀರ್‌ರವರು ಉತ್ತರ ಕನ್ನಡಿಗರ ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಂಡರೆ ಮತ್ತು ಅವರು ಮಧ್ಯ ಪ್ರವೇಶಿಸಿ ಉತ್ತರ ಕನ್ನಡಕ್ಕೆ ನ್ಯಾಯ ಒದಗಿಸಿದರೆ ಅವರಿಗೆ ಸದಾ ಉತ್ತರ ಕನ್ನಡ ಚಿರಋಣಿ.