ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಕಾರಿನ ಕೀ ಕೆಲಸ ಮಾಡದಿದ್ದ ಆ ದಿನ

ಸಹಾಯಕ್ಕಾಗಿ ಸರ್ವಿಸ್ ಸೆಂಟರ್‌ಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಯಾರೂ ಪೋನ್ ಎತ್ತಲಿಲ್ಲ. ನಂತರ, ಕಾರಿನ ಇನ್ನೊಂದು ಬದಿಗೆ ನಡೆದು ಹೋದಾಗ, ಕಾರಿನ ಹಿಂಬದಿಯ ಕಿಟಕಿ ತೆರೆದಿರುವುದು ನನ್ನ ಗಮನಕ್ಕೆ ಬಂತು. ಕಿಟಕಿಯ ಗಾಜು ಕೆಳಗಿಳಿದಿದ್ದರಿಂದಲೇ ಕಾರು ಲಾಕ್ ಆಗುತ್ತಿರಲಿಲ್ಲ! ಅಷ್ಟೇ ವಿಚಾರ. ನಾನು ಕಿಟಕಿಯ ಗಾಜನ್ನು ಮೇಲಕ್ಕೆತ್ತಿದೆ, ಅಷ್ಟೇ- ರಿಮೋಟ್ ತಕ್ಷಣ ಕೆಲಸ ಮಾಡಿತು. ಕಾರನ್ನು ಸುರಕ್ಷಿತವಾಗಿ ಲಾಕ್ ಮಾಡಿ, ನಾವಿಬ್ಬರೂ ಆಟಿಕೆ ಅಂಗಡಿಯತ್ತ ಹೆಜ್ಜೆ ಹಾಕಿದೆವು.

ಕಾರಿನ ಕೀ ಕೆಲಸ ಮಾಡದಿದ್ದ ಆ ದಿನ

-

ಸಂಪಾದಕರ ಸದ್ಯಶೋಧನೆ

ನನ್ನ ಬಳಿ ಒಂದು ಹಳೆಯ ಹೋಂಡಾ ಅಕಾರ್ಡ್ ಕಾರಿತ್ತು. ಅದು ಹಳತಾಗಿದ್ದರೂ ಉತ್ತಮವಾಗು ತ್ತಿದ್ದಂತೆ ತೋರುತ್ತಿತ್ತು. ಅದರಲ್ಲಿ ಒಂದು ಸಣ್ಣ ಸಮಸ್ಯೆ ಬಿಟ್ಟರೆ, ಕಾರು ಚೆನ್ನಾಗಿಯೇ ಓಡುತ್ತಿತ್ತು. ಕೀ ಹಾಕಿದರೆ ಕಾರಿನ ಬಾಗಿಲಿನ ಲಾಕ್ ತೆರೆಯುತ್ತಿರಲಿಲ್ಲ. ಅದಕ್ಕಾಗಿ ರಿಮೋಟ್ ಕೀಯನ್ನೇ ಬಳಸಬೇಕಿತ್ತು. ರಿಮೋಟ್ ಕೀ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರಿಂದ ಇದೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ನನ್ನ ಹೆಂಡತಿ ಅದನ್ನು ಸರಿಪಡಿಸುವಂತೆ ಪದೇಪದೆ ಹೇಳುತ್ತಿದ್ದಳು, ಆದರೆ ಆ ಕಾರು ನಮ್ಮ ಬಳಿ ಇನ್ನೂ ಎಷ್ಟು ದಿನ ಇರುತ್ತದೋ ಎಂಬ ಅನಿಶ್ಚಿತತೆಯಿಂದ ನಾನು ಅದನ್ನು ಮುಂದೂಡುತ್ತಲೇ ಬಂದಿದ್ದೆ.

‘ಯಾವುದಾದರೂ ಒಂದು ದಿನ ರಿಮೋಟ್ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ, ನೀನು ಎದರೂ ಸಿಲುಕಿಕೊಳ್ಳುತ್ತೀಯ’ ಎಂದು ಆಕೆ ಎಚ್ಚರಿಸುತ್ತಿದ್ದಳು. ಆದರೆ ಆ ದಿನವೊಂದು ಬರುತ್ತದೆ ಎಂದು ನಾನೆಂದೂ ಊಹಿಸಿರಲಿಲ್ಲ. ಆ ದಿನ ಬಂದೇ ಬಿಟ್ಟಿತು. ಒಂದು ದಿನ ಬೆಳಗ್ಗೆ, ಮನೆಗೆ ಬಂದಿದ್ದ ನನ್ನ ಸಹೋದರಿಯ ಮಗನೊಂದಿಗೆ ಹತ್ತಿರದ ಆಟಿಕೆ ಅಂಗಡಿಗೆ ಹೋದೆ. ಮಗು ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿತ್ತು, ನಾನೂ ಕೂಡ. ನಾವು ಕಾರನ್ನು ನಿಲ್ಲಿಸಿ ಕೆಳಗಿಳಿದೆವು. ಕಾರನ್ನು ಲಾಕ್ ಮಾಡಲು ನಾನು ರಿಮೋಟ್ ಬಟನ್ ಒತ್ತಿದೆ. ಆದರೆ ಅದು ಲಾಕ್ ಆಗಲಿಲ್ಲ. ಮತ್ತೆ ಪ್ರಯತ್ನಿಸಿದೆ, ಇನ್ನಷ್ಟು ಜೋರಾಗಿ ಒತ್ತಿದೆ. ಆದರೂ ಪ್ರಯೋಜನವಾಗಲಿಲ್ಲ.

‘ಛೇ!’ ಎಂದು ನನಗೆ ನಾನೇ ಗೊಣಗಿಕೊಂಡೆ. ಇದು ಈಗಲೇ ಆಗಬೇಕಿತ್ತಾ? ಹೆಂಡತಿಯ ಮಾತು ಕೇಳಿ ಕೀ ಮತ್ತು ಲಾಕ್ ಸರಿಪಡಿಸಬೇಕಿತ್ತು. ಈಗೇನು ಮಾಡುವುದು? ಕಾರನ್ನು ಹಾಗೆಯೇ ಬಿಟ್ಟು ಹೋಗಲು ಸಾಧ್ಯವಿರಲಿಲ್ಲ. ರಿಮೋಟ್ ಕೀಯನ್ನು ಅಂಗೈಗೆ ಬಡಿದುಕೊಂಡೆ, ಅದರಲ್ಲಿದ್ದ ಧೂಳು ಹೋಗಲೆಂದು ಊದಿದೆ, ಆದರೆ ಯಾವುದೂ ಫಲ ನೀಡಲಿಲ್ಲ.

ಇದನ್ನೂ ಓದಿ: Vishweshwar Bhat Column: ಬೇಕಾದರೆ ತುತ್ತು ಅನ್ನಕ್ಕೆ ಬೇಡಬಹುದು, ಪ್ರಶಸ್ತಿಗೆ ಬೇಡಬಾರದು !

ಸಹಾಯಕ್ಕಾಗಿ ಸರ್ವಿಸ್ ಸೆಂಟರ್‌ಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಯಾರೂ ಪೋನ್ ಎತ್ತಲಿಲ್ಲ. ನಂತರ, ಕಾರಿನ ಇನ್ನೊಂದು ಬದಿಗೆ ನಡೆದು ಹೋದಾಗ, ಕಾರಿನ ಹಿಂಬದಿಯ ಕಿಟಕಿ ತೆರೆದಿರುವುದು ನನ್ನ ಗಮನಕ್ಕೆ ಬಂತು. ಕಿಟಕಿಯ ಗಾಜು ಕೆಳಗಿಳಿದಿದ್ದರಿಂದಲೇ ಕಾರು ಲಾಕ್ ಆಗುತ್ತಿರಲಿಲ್ಲ! ಅಷ್ಟೇ ವಿಚಾರ. ನಾನು ಕಿಟಕಿಯ ಗಾಜನ್ನು ಮೇಲಕ್ಕೆತ್ತಿದೆ, ಅಷ್ಟೇ- ರಿಮೋಟ್ ತಕ್ಷಣ ಕೆಲಸ ಮಾಡಿತು. ಕಾರನ್ನು ಸುರಕ್ಷಿತವಾಗಿ ಲಾಕ್ ಮಾಡಿ, ನಾವಿಬ್ಬರೂ ಆಟಿಕೆ ಅಂಗಡಿಯತ್ತ ಹೆಜ್ಜೆ ಹಾಕಿದೆವು.

ಅಂತಿಮವಾಗಿ, ಆ ಪುಟ್ಟ ಬಾಲಕನಿಗೆ ಅದೊಂದು ಅತ್ಯಂತ ಖುಷಿಯಾದ, ಮರೆಯಲಾಗದ ದಿನವಾಗಿತ್ತು. ನಡೆದ ಘಟನೆಯನ್ನು ಮೆಲುಕು ಹಾಕುತ್ತಿದ್ದ ನನಗೆ ಕೂಡ ಅದೊಂದು ಮರೆಯ ಲಾಗದ ದಿನವಾಗಿ ಉಳಿಯಿತು. ಸಾಮಾನ್ಯವಾಗಿ, ಯಾವುದಾದರೂ ಒಂದು ಕೆಲಸ ತಪ್ಪಾದಾಗ, ಅದಕ್ಕೆ ಕಾರಣ ಏನಿರಬಹುದು ಎಂದು ನಾವೇ ತಕ್ಷಣವೇ ಒಂದು ಊಹೆಯನ್ನು (ಹೈಪಾಥಿಸಿಸ್) ಮಾಡಿಕೊಳ್ಳುತ್ತೇವೆ. ನಮಗೆ ಸಮಸ್ಯೆಯ ಮೂಲ ತಿಳಿದಿದೆ ಎಂದೇ ನಾವು ಬಲವಾಗಿ ನಂಬಿ ಬಿಡುತ್ತೇವೆ. ನಿಜವಾಗಿ ಆ ಸಮಸ್ಯೆಗೆ ಕಾರಣವೇನು ಎಂದು ತಿಳಿಯಲು ಹೊಸ ಪುರಾವೆಗಳನ್ನಾಗಲಿ ಅಥವಾ ಮಾಹಿತಿಯನ್ನಾಗಲಿ ಹುಡುಕಲು ಹೋಗುವುದಿಲ್ಲ.

ನಮ್ಮ ತಲೆಯಲ್ಲಿ ಯಾವ ಯೋಚನೆ ಮೊದಲಿಗೆ ಆವರಿಸಿಕೊಳ್ಳುತ್ತದೆಯೋ, ಆ ಯೋಚನೆಗೇ ನಾವು ಕಟ್ಟುಬಿದ್ದುಬಿಡುತ್ತೇವೆ. ಉದಾಹರಣೆಗೆ, ನಿಮ್ಮ ತಂಡವು ಹೊಸ ಉತ್ಪನ್ನವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದುಕೊಳ್ಳಿ. ಅದೊಂದು ಅತ್ಯುತ್ತಮ ಪ್ರಾಡಕ್ಟ್. ಎಲ್ಲರಿಗೂ ಅಪಾರ ಉತ್ಸಾಹ ವಿದೆ. ಆದರೆ ನಿಗದಿಪಡಿಸಿದ ಬೆಲೆಗೆ ಜನರು ಇದನ್ನು ಖರೀದಿಸುತ್ತಾರಾ ಎಂಬ ಅನುಮಾನ ನಿಮಗಿದೆ. ನೀವು ಬೆಲೆ ಕಡಿಮೆ ಮಾಡಲು ಒತ್ತಾಯಿಸುತ್ತೀರಿ. ಆದರೆ ನಿಮ್ಮ ಅಭಿಪ್ರಾಯವನ್ನು ತಳ್ಳಿಹಾಕಲಾಗುತ್ತದೆ. ಅತ್ಯಂತ ವಿಜೃಂಭಣೆಯಿಂದ ಉತ್ಪನ್ನ ಬಿಡುಗಡೆಯಾಗುತ್ತದೆ. ‌

ಆರು ತಿಂಗಳ ನಂತರ, ವ್ಯಾಪಾರದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದಾಗ, ‘ಇದು ಯಾಕೆ ನಡೆಯಲಿಲ್ಲ ಎಂಬುದು ನನಗೆ ಮೊದಲೇ ಗೊತ್ತಿತ್ತು’ ಎಂದು ನೀವು ಅಂದುಕೊಳ್ಳುತ್ತೀರಿ. ನಿಮಗೇನೂ ಆಶ್ಚರ್ಯ‌ ವಾಗುವುದಿಲ್ಲ. ‘ಖಂಡಿತವಾಗಿಯೂ ಇದಕ್ಕೆ ಬೆಲೆಯೇ ಕಾರಣ’ ಎಂದು ಕೊಳ್ಳುತ್ತೀರಿ. ಆದರೆ ನಿಜವೆಂದರೆ, ಸಮಸ್ಯೆ ಬೇರೆ ಇರಬಹುದು. ಸೇಲ್ಸ್ ತಂಡದವರಿಗೆ ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ವಿವರಿಸಲು ಸಾಧ್ಯವಾಗಿರಲಿಲ್ಲವೇ? ಅಥವಾ ಗ್ರಾಹಕ ಸೇವೆಯಲ್ಲಿ ( service ) ಏನಾದರೂ ಲೋಪವಿತ್ತೇ? ಆದರೆ, ‘ಬೆಲೆ ತಪ್ಪಾಗಿದೆ’ ಎಂಬ ಬಲವಾದ ಊಹೆ ನಿಮ್ಮ ಮನಸ್ಸಿನಲ್ಲಿ ಮೊದಲೇ ಬೇರೂರಿಬಿಟ್ಟಿರುತ್ತದೆ.

ಹೀಗಾಗಿ, ನೈಜ ಕಾರಣವು ನಿಮ್ಮ ಮುಂದೆ ಬರಲು ನೀವು ಅವಕಾಶವನ್ನೇ ನೀಡುವುದಿಲ್ಲ. ಗೊತ್ತಿರಲಿ. ಮುಂದಿನ ಬಾರಿ ‘ನನಗೆ ಸಮಸ್ಯೆಯ ಮೂಲ ತಿಳಿದಿದೆ’ ಎಂದು ನಿಮಗೆ ಅನ್ನಿಸಿದಾಗ, ಒಂದು ಕ್ಷಣ ನಿಲ್ಲಿ. ಆ ಸಮಸ್ಯೆಗೆ ಬೇರೆ ಯಾವ ಕಾರಣಗಳಿರಬಹುದು. ಯಾರೋ ಕಾರಿನ ಕಿಟಕಿಯನ್ನು ತೆರೆದಿಟ್ಟಿರಲೂಬಹುದು! ಹಾಗಂತ ಪ್ರಕಾಶ ಅಯ್ಯರ್ ತಮ್ಮ How come no one told me that? ಪುಸ್ತಕದಲ್ಲಿ ಬರೆದಿದ್ದಾರೆ.