ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K Pruthvijit Column: ಭಾರತವನ್ನು ಅಖಂಡವಾಗುಳಿಸಿದ ಓ ತೀರ್ಥಗಳೇ...

ಬ್ರಿಟಿಷರು ಭಾರತವನ್ನು ತೊರೆದ ಮೇಲೆ ಈ ಆಧ್ಯಾತ್ಮಿಕ ಏಕತೆಯೇ ನಮ್ಮನ್ನು ಒಗ್ಗೂಡಿಸಿ, ಒಂದು ರಾಷ್ಟ್ರವಾಗಿಸಿತು. ಚೂರಾಗಿದ್ದ ಭೂಗೋಳವನ್ನು ಏಕವಾಗಿಸಲು ಮೊದಲ ಗೃಹಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಸೇನೆ ಬೇಕಾಯಿತು. ಅದು ಪಟೇಲರು ನಡೆಸಿದ ಅಸಾಮಾನ್ಯ ಕಾರ್ಯಾ ಚರಣೆ. ಆದರೆ ಅವರು ತಾವಂದುಕೊಂಡಿದ್ದನ್ನು ಸಾಧಿಸಲು ಬಹಳವೇನು ಹೋರಾಡಬೇಕಾಗಿಲ್ಲ

ಭಾರತವನ್ನು ಅಖಂಡವಾಗುಳಿಸಿದ ಓ ತೀರ್ಥಗಳೇ...

-

Profile
Ashok Nayak Oct 15, 2026 9:12 AM

ಒಡಲಾಳ

ನಿರೂಪ (ಕೆ.ಪೃಥ್ವಿಜಿತ್)

ತ ರತಿ ಇತಿ ತೀರ್ಥಃ...

ಯಾವುದು ನಮ್ಮನ್ನು ಕಷ್ಟಗಳಿಂದ ದಾಟಿಸುತ್ತದೋ ಅದೇ ತೀರ್ಥ. ಭಾರತೀಯರು ಸಾವಿರಾರು ವರ್ಷ ಗಳಿಂದ ತೀರ್ಥಯಾತ್ರೆ ಮಾಡಿಕೊಂಡೇ ಬಂದಿದ್ದಾರೆ. ನಮ್ಮ ವಂಶವಾಹಿಗಳಲ್ಲೇ ತೀರ್ಥ ಯಾತ್ರೆಯ ಬಗ್ಗೆ ಒಂದು ಗುಪ್ತ, ಸುಪ್ತ ಗೌರವವಿದೆ. ಅದು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಲೇ ಇದೆ. ಎಂತಹ ನಾಸ್ತಿಕನೂ ತೀರ್ಥಕ್ಷೇತ್ರಗಳನ್ನು ಕನಿಷ್ಠವೆಂದರೂ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ದೃಷ್ಟಿಯಿಂದ ಗೌರವಿಸುತ್ತಾನೆ. ಈ ಕ್ಷೇತ್ರಗಳು ಭಾರತದ ನಾಡಿಗಳನ್ನು, ಅದರ ಮಿಡಿತವನ್ನು ತಮ್ಮಲ್ಲಿ ಹಿಡಿದಿಟ್ಟುಕೊಂಡಿವೆ.

ಸಾವಿರಾರು ವರ್ಷಗಳ ಹಿಂದೆ ದೇಶ ಭೌಗೋಳಿಕವಾಗಿ ಚೂರುಚೂರಾಗಿದ್ದರೂ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಪ್ರಬಲ ಐಕ್ಯತೆಯನ್ನು ಹೊಂದಿತ್ತು. ಹಾಗಾಗಿಯೇ ಭಾರತವನ್ನು ವಿದೇಶೀಯರು ಆಳಿದರೂ, ಇಲ್ಲಿನ ಸಾಂಸ್ಕೃತಿಕ ಐಕ್ಯತೆಯನ್ನು ಛಿದ್ರವಾಗಿಸಲು ಸಾಧ್ಯವಾಗಲಿಲ್ಲ.

ಬ್ರಿಟಿಷರು ಭಾರತವನ್ನು ತೊರೆದ ಮೇಲೆ ಈ ಆಧ್ಯಾತ್ಮಿಕ ಏಕತೆಯೇ ನಮ್ಮನ್ನು ಒಗ್ಗೂಡಿಸಿ, ಒಂದು ರಾಷ್ಟ್ರವಾಗಿಸಿತು. ಚೂರಾಗಿದ್ದ ಭೂಗೋಳವನ್ನು ಏಕವಾಗಿಸಲು ಮೊದಲ ಗೃಹಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಸೇನೆ ಬೇಕಾಯಿತು. ಅದು ಪಟೇಲರು ನಡೆಸಿದ ಅಸಾಮಾನ್ಯ ಕಾರ್ಯಾ ಚರಣೆ. ಆದರೆ ಅವರು ತಾವಂದುಕೊಂಡಿದ್ದನ್ನು ಸಾಧಿಸಲು ಬಹಳವೇನು ಹೋರಾಡಬೇಕಾಗಿಲ್ಲ. ಇದಕ್ಕೆ ಕಾರಣ...

ಉತ್ತರಂ ಯತ್ ಸಮುದ್ರಸ್ಯ, ಹಿಮಾದ್ರೇಶ್ಬೈವ ದಕ್ಷಿಣಂ| ವರ್ಷಂ ತದ್ ಭಾರತಂ ನಾಮ, ಭಾರತೀಯತ್ರ ಸಂತತಿಃ||

ವಿಷ್ಣುಪುರಾಣದಲ್ಲಿರುವ ಈ ಶ್ಲೋಕ ಇತ್ತೀಚೆಗೆ ಭಾರತೀಯರಿಗೆ ಬಹಳ ಪರಿಚಿತ. ಅರ್ಥವಿಷ್ಟೇ ಸಮುದ್ರದ ಉತ್ತರದಲ್ಲಿ, ಹಿಮಾಲಯದ ದಕ್ಷಿಣದಲ್ಲಿ ಭಾರತ ಎಂಬ ಹೆಸರಿನ ಪ್ರದೇಶವಿದೆ. ಅಲ್ಲಿರುವುದು ಭರತನ ಸಂತತಿ...! ಸಾವಿರಾರು ವರ್ಷಗಳ ಹಿಂದೆಯೇ ರಚನೆಯಾದ ವಿಷ್ಣುಪುರಾಣ ದಲ್ಲಿ ಇಡೀ ಭಾರತದ ಅಖಂಡ ಸ್ವರೂಪದ ಮಾಹಿತಿಯಿದೆ ಎಂದರೆ, ಅದೇನು ಸಾಮಾನ್ಯ ವಿಷಯವೇ? ಭಾರತ ಎಂಬ ಹೆಸರೂ ನಮ್ಮ ದೇಶಕ್ಕಿತ್ತು, ಅಲ್ಲಿ ವಾಸಿಸುವ ಜನರು ಯಾರು ಎಂಬ ಬಗ್ಗೆಯೂ ಖಾತ್ರಿಯಿತ್ತು.

ಇದನ್ನೂ ಓದಿ: Pruthvi Bhat: ಗಾಯಕಿ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್, ಘಟಾನುಘಟಿಗಳು ಭಾಗಿ: PHOTOS

ಒಟ್ಟಾರೆ ಒಂದು ಭೌಗೋಳಿಕ ರಚನೆಯ ಬಗ್ಗೆಯೂ ಸ್ಪಷ್ಟತೆಯಿತ್ತು. ದಕ್ಷಿಣದಲ್ಲಿರುವ, ಈಗ ಹಿಂದೂ ಮಹಾಸಾಗರವೆಂದು ಕರೆಯಲ್ಪಡುತ್ತಿರುವ ಸಮುದ್ರದ ಮೇಲ್ಭಾಗ, ಹಾಗೆಯೇ ಹಿಮಾ ಲಯಪರ್ವತಗಳ ಕೆಳಭಾಗದ ನಡುವೆ ಹಬ್ಬಿಕೊಂಡಿರುವ ಈ ವಿಶಾಲ ಜಾಗವನ್ನೇ ಭರತಖಂಡ ಎಂದು ಸ್ಪಷ್ಟವಾಗಿ ಹೇಳುವುದರ ಹಿಂದೆ ಇರುವ ಭೌಗೋಳಿಕ, ಸಾಂಸ್ಕೃತಿಕ ಸ್ಪಷ್ಟತೆಯನ್ನು, ಅದರ ಆಳವನ್ನು ನಾವು ಅರಿಯಬೇಕು. ಗರುಡ ಪುರಾಣದಲ್ಲಿ ಭಾರತವರ್ಷವನ್ನು ಅಜನಾಭ ವರ್ಷವೆಂದು ಕರೆಯಲಾಗಿದೆ. ಈ ಅಜನಾಭವರ್ಷದ ನಾಲ್ಕೂ ದಿಕ್ಕುಗಳಲ್ಲಿ ಲವಣಸಮುದ್ರವಿದೆ ಎಂದು ವರ್ಣಿಸಲಾಗಿದೆ.

ಪೂರ್ವದಲ್ಲಿ ಅಗ್ನೀಂದ್ರ ಎಂಬ ರಾಜ ಜಂಬೂದ್ವೀಪವನ್ನು ಒಂಬತ್ತು ಭಾಗಗಳಾಗಿ ವಿಂಗಡಿಸಿ, ಒಂಬತ್ತು ಮಕ್ಕಳಿಗೆ ಹಂಚುತ್ತಾನೆ. ಅದರಲ್ಲಿ ಅಜನಾಭನಿಗೆ ಬರುವ ಜಾಗವೇ ಮುಂದೆ ಅಜನಾ ಭವರ್ಷ ಎಂದಾಯಿತು. ಮುಂದೆ ಇದೇ ಸಂತತಿಯಲ್ಲಿ ಬರುವ ಋಷಭದೇವ ಮತ್ತು ಜಯಂತಿ ಯಲ್ಲಿ ಭರತ ಎಂಬಾತ ಹುಟ್ಟುತ್ತಾನೆ. ಈತನಿಂದ ಈ ಪ್ರದೇಶ ಭಾರತವರ್ಷ ಎಂದು ಕರೆಯ ಲ್ಪಡುತ್ತದೆ. ಇಂತಹ ಅಜನಾಭವರ್ಷದ ನಾಲ್ಕು ದಿಕ್ಕುಗಳನ್ನು ಲವಣಸಮುದ್ರ ಆವರಿಸಿಕೊಂಡಿದೆ ಎಂಬ ವಾಕ್ಯವನ್ನು ನೋಡುವಾಗ ಹುಟ್ಟುವ ಪ್ರಶ್ನೆಯೆಂದರೆ... ದಕ್ಷಿಣದಲ್ಲಿ ಹಿಂದೂ ಮಹಾ ಸಾಗರವಿದೆ.

ಪೂರ್ವ, ಪಶ್ಚಿಮದಲ್ಲಿ ಗಂಗಾ ಸಾಗರ, ಸಿಂಧೂ ಸಾಗರವಿದೆ (ಸಾವರ್ಕರ್ ವರ್ಣಿಸಿದಂತೆ). ಆದರೆ ಉತ್ತರಭಾಗವನ್ನು ಈಗ ನಿಂತು ನೋಡಿದರೆ ಅಲ್ಲಿ ಲವಣ ಸಮುದ್ರವಿರುವುದಕ್ಕೆ ಯಾವುದೇ ಕುರುಹುಗಳು ಕಾಣುತ್ತಿಲ್ಲ. ಒಂದು ವೇಳೆ ಈಗ ಹಿಮಗಡ್ಡೆಯಾಗಿರುವ ಹಿಮಾಲಯಪರ್ವತ ಹಿಂದೊಂದು ಕಾಲದಲ್ಲಿ ಲವಣಸಮುದ್ರ ವಾಗಿದ್ದಿರಬಹುದೇ? ಹಿಮಾಲಯ ಪರ್ವತ ಎಷ್ಟು ವಿಸ್ತಾರವಾಗಿದೆಯೆಂದರೆ ಪಾಕಿಸ್ತಾನದಿಂದ, ಚೀನಾದವರೆಗೂ ಹರಡಿಕೊಂಡಿದೆ. ಇಲ್ಲಿ ಹಲವು ಕಡೆ ದಟ್ಟ ಹಿಮ ಆವರಿಸಿ, ಜನರನ್ನು ಗಡ್ಡೆಗಳನ್ನಾಗಿಸುತ್ತದೆ. ಈಗಲೇ ಹಾಗಿರಬೇಕಾದರೆ, ಲಕ್ಷಾಂತರ ವರ್ಷಗಳ ಹಿಂದೆ ಅಲ್ಲಿ ವಿಶಾಲ ಸಮುದ್ರವೇ ಇದ್ದು, ಅದು ಕಾಲನ ಹೊಡೆತಕ್ಕೆ ಸಿಕ್ಕಿ ಗಡ್ಡೆಕಟ್ಟಿ ಹಿಮಾಲಯವಾಗಿರಬೇಕು.

ಇಲ್ಲವಾದರೆ ಗರುಡ ಪುರಾಣದಲ್ಲಿ ಹಾಗೊಂದು ವರ್ಣನೆಯಿರಲು ಹೇಗೆ ಸಾಧ್ಯ? ನೀವು ಪುರಾಣವನ್ನೆಲ್ಲ ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತೀರಾ ಎನ್ನಬೇಡಿ. ಪುರಾಣಗಳು ಕಾಲ್ಪನಿಕ ಕಥೆಗಳನ್ನು ಹೊಂದಿರ ಬಹುದು. ಆದರೆ ಅವು ಅಂದಿನ ಭೌಗೋಳಿಕ, ಜೈವಿಕ ಅನುಭವ ಗಳಿಂದಲೇ ಹುಟ್ಟಿರುವುದು. ಈ ಪುರಾಣ ಗಳು ಧ್ವನಿಯೆತ್ತಿ ಮಾತನಾಡುವಾಗ ಜಾಗಗಳು, ಸಂಸ್ಕೃತಿಗಳು, ಮನಸ್ಸುಗಳು, ಯೋಚನೆಗಳನ್ನು ಉಲ್ಲೇಖಿಸುತ್ತವೆ. ಹಾಗೆ ಉಲ್ಲೇಖಿಸುವ ಜಾಗಗಳು ಇಂದಿಗೂ ಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ತೀರ್ಥಕ್ಷೇತ್ರಗಳಾಗಿ ಜಾಗ ಪಡೆದಿವೆ. ಹಾಗಾಗಿ ಅಲ್ಲಿನ ವಿವರಗಳನ್ನು ಗಂಭೀರವಾಗಿ ಸ್ವೀಕರಿಸಬೇಕಾಗುತ್ತದೆ. ಕನಿಷ್ಠಪಕ್ಷ ಸುಳಿವುಗಳನ್ನಾಗಿಯಾದರೂ ನೋಡಬೇಕಾಗುತ್ತದೆ. ಆರಂಭದಲ್ಲಿ ಹಿಮಾಲಯ ಒಂದು ಸಮುದ್ರವಾಗಿರಬಹುದೇ ಎಂದು ಯೋಚಿಸುತ್ತಿದ್ದಾಗ, ಅಂತರ್ಜಾಲದಲ್ಲಿ ಸಿಕ್ಕಿದ ಉತ್ತರವೊಂದು ನನ್ನನ್ನು ಸ್ತಬ್ಧವಾಗಿಸಿತು. ಅದರ ಪ್ರಕಾರ 45 ಕೋಟಿ ವರ್ಷಗಳ ಹಿಂದೆ ಹಿಮಾಲಯಪರ್ವತಶ್ರೇಣಿ ಒಂದು ಸಮುದ್ರವೇ ಆಗಿತ್ತು!

ಗರುಡಪುರಾಣದ ಆ ಸಾಲು ಹುಟ್ಟಿಸಿದ್ದ ಪ್ರಶ್ನೆ... ವರ್ತಮಾನದ ಈ ಉತ್ತರದವರೆಗೂ ತಂದು ನಿಲ್ಲಿಸಿತು. ಭಾರತೀಯರು ಯಾವ ಜಾಗಗಳನ್ನು ತೀರ್ಥಕ್ಷೇತ್ರ ವಾಗಿಸಿದ್ದಾರೋ, ಅಲ್ಲಿ ಸಿಗುವುದನ್ನು ತೀರ್ಥವೆಂದು ಸ್ವೀಕರಿಸಿದ್ದಾರೋ ಅಂತಹ ಕ್ಷೇತ್ರಗಳು ಪ್ರಾಚೀನ ಪರಂಪರೆಯನ್ನು ಹೊತ್ತುಕೊಂಡು ವರ್ತಮಾನಕ್ಕೆ ಹರಿದುಬಂದಿವೆ. ಅಂತಹ ಪ್ರದೇಶಗಳಲ್ಲಿ ನಮ್ಮ ಹೆಜ್ಜೆಗಳನ್ನಿಡುವಾಗ ಪ್ರತಿ ಕ್ಷಣದಲ್ಲೂ ಒಂದು ರೋಮಾಂಚನವಿರುತ್ತದೆ.

ಲಕ್ಷಾಂತರ ವರ್ಷಗಳ ಹಿಂದಿನ ನೆನಪುಗಳ ಮೇಲೆ ವರ್ತಮಾನದಲ್ಲಿ ಕಾಲಿಡುತ್ತಿರುವಂತಹ ವಿಸ್ಮಯವದು. ನಾವಿಡುವ ಪ್ರತಿಹೆಜ್ಜೆಯೂ ಅಸಂಖ್ಯಾತ ನೆನಪು ಗಳನ್ನು ಅಂತರಂಗದಲ್ಲಿ ಅರ್ಥವಾಗದಂತೆ ಹೊಮ್ಮಿಸಿ, ಅದೇನೋ ಒಂದು ಭಾವಸುರಣಕ್ಕೆ ಕಾರಣವಾಗುತ್ತದೆ. ಅದರಲ್ಲೂ ಹಳೆಯ ಜನ್ಮವನ್ನು ಗಂಭೀರವಾಗಿ ತೆಗೆದುಕೊಂಡವರಂತೂ ಈ ಜಾಗದಲ್ಲಿ ಎಂದೋ ಓಡಾಡಿ ದ್ದೇನಲ್ಲ, ಇಲ್ಲಿ ನನ್ನ ಉಸಿರ ತರಂಗಗಳು ಇನ್ನೂ ಜಾಗೃತವಾಗಿವೆಯಲ್ಲ, ಇಲ್ಲಿ ಕಾಣುವ ಮುಖಗಳನ್ನು ಹಿಂದೆಂದೋ ನೋಡಿದ್ದೇನಲ್ಲ ಎಂದು ಪ್ರಬಲವಾಗಿ ಭಾವಿಸುತ್ತಾರೆ.

ಅದು ಕೇವಲ ಭಾವನೆಯಲ್ಲ, ಅಂತರಂಗದ ಜಾಗೃತಿ, ಬರೀ ಅಷ್ಟು ಮಾತ್ರವಲ್ಲ, ಹಳೆಯ ನೆನಪು ಗಳ ವಾಪಸಾತಿ. ಇತ್ತೀಚೆಗೆ ಉತ್ತರಾಖಂಡದ ನೆಲದಲ್ಲಿ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದಾಗ ಎಂದಿನಂತೆ ಕೇದಾರನಾಥಪರ್ವತವನ್ನೇರಿ, ಅಲ್ಲಿನ ಸಂಕಷ್ಟಗಳನ್ನೆಲ್ಲ ಹಾದುಕೊಂಡು ಮೇಲು ಭಾಗಕ್ಕೆ ಮುಟ್ಟಿದ್ದೆವು. ಸಾವಿರಾರು ವರ್ಷಗಳಿಂದ ಈ ಭಾಗದಲ್ಲಿನ ರುದ್ರಪ್ರಯಾಗ ಜಿಲ್ಲೆಯ ಗೌರಿಕುಂಡದಿಂದ ಕೇದಾರನಾಥನ ತುದಿಯವರೆಗೆ ಜನರು ಹೋಗಿಬರುತ್ತಲೇ ಇದ್ದಾರೆ. ಅತ್ಯಂತ ದುರ್ಗಮಪ್ರದೇಶ. ಅರ್ಥಾತ್ ಗಮಿಸಲು ಈ ಕಾಲದಲ್ಲೂ ಬಹಳ ಕಷ್ಟಕರವಾದದ್ದು.

ಒಂದು ಕಡೆ ಅತ್ಯಂತ ಆಳವಾದ ಪ್ರಪಾತ, ಮತ್ತೊಂದು ಕಡೆ ಅಗಾಧಪರ್ವತಶ್ರೇಣಿಯ ಭೌಮ ನೋಟ, ಅದಕ್ಕೂ ಮೇಲೆ ಕೊನೆಮೊದಲಿಲ್ಲದ ಮುಗಿಲು. ಅದಕ್ಕೂ ಮೇಲೆ ಎಲ್ಲವನ್ನೂ ವ್ಯಾಪಿಸಿ ಕೊಂಡಂತಿರುವ ಕೇದಾರನಾಥ. ರುದ್ರರಮಣೀಯ ಎಂದೇ ಸರಳವಾಗಿ ವ್ಯಾಖ್ಯಾನಿಸುವ ಈ ಜಾಗವನ್ನು ಉತ್ತರಾ ಖಂಡ ಸರ್ಕಾರ, ಅಂದಿನಿಂದ ಇಂದಿನವರೆಗೆ ಕೆಟ್ಟದಾಗಿಯೇ ನಿರ್ವಹಿಸಿದೆ. ಗೌರಿಕುಂಡದಿಂದ ಕೇದಾರನಾಥನನ್ನು ತಲುಪಲು 17 ಕಿಮೀ ಎಂದಿದ್ದರೂ ಅಲ್ಲಿಗೆ ಹೋಗಿ ಬಂದವರೆಲ್ಲ ಅದು 25 ಕಿಮೀಗಿಂತ ಜಾಸ್ತಿಯಿದೆ ಎಂದು ಮುಲಾಜಿಲ್ಲದೇ ಹೇಳುತ್ತಾರೆ. ಯಾವಾಗ ಭೂಕುಸಿತವಾಗುತ್ತದೆ, ಯಾವಾಗ ಪ್ರಾಣ ಹೋಗುತ್ತದೆ ಎಂಬ ಬಗ್ಗೆ ಮಾಹಿತಿಯಿರದ ಪ್ರದೇಶ. ದಿಢೀರ್ ಮಳೆ ಬರುತ್ತದೆ. ದಿಢೀರ್ ಜೋರು ಗಾಳಿ ಬೀಸುತ್ತದೆ. ಮೇಲೆಕ್ಕೇರುತ್ತ ಏರುತ್ತ ಆಮ್ಲಜನಕ ಪ್ರಮಾಣವೇ ಕಡಿಮೆಯಾಗುತ್ತದೆ.

ಹಲವರಿಗೆ ಉಸಿರಾಟ ಕಷ್ಟವಾಗಿ ಸುಸ್ತು ಅನಿಸುತ್ತದೆ. ಮೇಲೆ ಮೇಲೆ ಹೋದಂತೆ ಚಳಿ ತೀವ್ರವಾಗಿ ಎದೆಯೊಳಗಿಂದ ನಡುಕ ಶುರುವಾಗುತ್ತದೆ. ಕೈಗಳು ನಿಶ್ಶಕ್ತವಾಗುತ್ತದೆ. ಕಾಲುಗಳು ಸಹಕರಿಸುವು ದಿಲ್ಲ. ನಾವೇ ನಮಗೆ ಭಾರವಾಗುತ್ತೇವೆ. ಅಂತಹ ಭೀಕರ ಸ್ಥಿತಿಯಲ್ಲೂ ಮೇಲೆ ಕೇದಾರನಾಥ ನಿದ್ದಾನೆ, ಪ್ರಾಣ ಹೋದರೆ ಅವನ ದರ್ಶನವಾದ ಮೇಲೆ ಹೋಗಲಿ ಎಂದು ಪ್ರಯಾಣಿಕರು ಹತ್ತೇ ಹತ್ತುತ್ತಾರೆ. ಹಾಗೆ ಏರಿಹೋದ ಮೇಲೆ ಅಲ್ಲಿ ನಿಲ್ಲಲು ಸರಿಯಾದ ಜಾಗವಿಲ್ಲ!

ಮಳೆಬಂದರೆ ರಕ್ಷಣೆಗೆ ಒಂದು ಸೂರಿಲ್ಲ, ನಡುಕಹುಟ್ಟಿ ನೆಲಕ್ಕೆ ಬೀಳುತ್ತಿರುವ ಮೈಯನ್ನು ಬಿಸಿ ಮಾಡಿಕೊಳ್ಳಲು ಇಂತಹ ಕಾಲಘಟ್ಟದಲ್ಲೂ ಒಂದು ವ್ಯವಸ್ಥೆಯಿಲ್ಲ. ಪಕ್ಕದಲ್ಲೇ ಮಂದಾಕಿನಿ ನದಿ ಹರಿಯುತ್ತಿದ್ದರೂ ಅಲ್ಲಿನ ಶೌಚಾಲಯಗಳಲ್ಲಿ ನೀರಿರುವುದಿಲ್ಲ. ಅದೂ ಅತ್ತ ಇರಲಿ, ಸರಿಯಾಗಿ ಶೌಚಾಲಯವೇ ಇಲ್ಲ. ಒಂದು ಕಡೆ ನಮ್ಮೊಳಗೆ ಲಕ್ಷಾಂತರ, ಸಾವಿರಾರು ವರ್ಷಗಳ ನಮ್ಮದೇ, ನನ್ನದೇ ಎನ್ನುವ ನೆನಪುಗಳು ನುಗ್ಗಿಬರುತ್ತಿದ್ದರೂ, ಅಲ್ಲಿ ಕಂಡುಬರುವ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಅವ್ಯವಸ್ಥೆ, ಜನರ ಪಡಿಪಾಟಲು, ದರ್ಶನದ ಸಾಲುಗಳಲ್ಲಿ ಪುರೋಹಿತರು ಲಂಚಪಡೆದು ಆಡುವ ಆಟಗಳು, ಪಕ್ಕದಲ್ಲೇ ಇರುವ ಅಂಗಡಿಗಳಲ್ಲಿ ಭಕ್ತರ ಅಸಹಾಯಕತೆಯನ್ನು ಬಳಸಿಕೊಂಡು ನಡೆಯುವ ಸುಲಿಗೆಗಳು... ಈ ದೇಶ ಪರಕೀಯರ ಆಡಳಿತಕ್ಕೆ ತುತ್ತಾಗಿದ್ದೇಕೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡುತ್ತವೆ.

ಜನರನ್ನು ಧರ್ಮದ, ನ್ಯಾಯದ ನೀತಿಯ ಮಾರ್ಗದಲ್ಲಿ ನಡೆಸಬೇಕಾದ ಪರೋಹಿತರು ಅಲ್ಲಿಗೆ ಬರುವ ಪ್ರಯಾಣಿಕರಿಂದ ಸಾವಿರಾರು ರು. ಪಡೆದು ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಅಷ್ಟು ಕಷ್ಟಪಟ್ಟು ಬೆಟ್ಟವೇರಿ ಹೋಗುವ ಭಕ್ತರು, ಬೆಟ್ಟದ ತುದಿಯಲ್ಲಿ ಭ್ರಷ್ಟರಾಗುತ್ತಾರೆ. ಕೊನೆಯಲ್ಲಿ ಯಾಕೆ ಯಾರಿಗೋ ಲಂಚ ಕೊಟ್ಟು ಭಗವಂತನ ವಿಗ್ರಹದ ದರ್ಶನ ಮಾಡಬೇಕು? ಇಷ್ಟಾದ ಮೇಲೆ ಅಷ್ಟು ಸಾಧ್ಯವಿಲ್ಲವೇ? ಎಂಬ ವಿವೇಚನೆ ಅಲ್ಲಿ ಸತ್ತು ಬಿಡುತ್ತದೆ.

ನೋಡಿಬಿಡಬೇಕು ಎಂಬ ಧಾವಂತದಲ್ಲಿ ನಾವು ಭ್ರಷ್ಟರಾಗುತ್ತವೆ. ಈ ದೇಶವನ್ನು ಲಕ್ಷಾಂತರ ವರ್ಷಗಳಿಂದ ಅಖಂಡವಾಗುಳಿಸಿದ, ಆ ಆಧ್ಯಾತ್ಮಿಕ ನೆಲದಲ್ಲಿ ನಾವು ಆತ್ಮವಂಚನೆ ಮಾಡಿಕೊಳ್ಳು ತ್ತೇವೆ. ಮಾತ್ರವಲ್ಲ ಮುಂದಿನ ಪೀಳಿಗೆಗೆ ಕೆಟ್ಟ ಆದರ್ಶವೊಂದನ್ನು ದಾಟಿಸುತ್ತೇವೆ. ಯಮುನಾ ನದಿ ಹುಟ್ಟುವ ಯಮುನೋತ್ರಿ ಎಂಬ ತೀರ್ಥಕ್ಷೇತ್ರಕ್ಕೆ ಹೋಗುವಾಗ ನಾನು ಹತ್ತಿದ ಕುದುರೆಯನ್ನು ನಡೆಸುತ್ತಿದ್ದದ್ದು ರಾಣಾ ಎಂಬ ಒಬ್ಬ ರಜಪೂತ ವ್ಯಕ್ತಿ.

ಮಹಾರಾಣಾ ಪ್ರತಾಪನೆಂಬ ಅಸಾಮಾನ್ಯ ಮಹಾರಾಜನ ಪರಂಪರೆಗೆ ಸೇರಿದ ಆ ವ್ಯಕ್ತಿ ಈಗ ಹೊಟ್ಟೆಪಾಡಿ ಗಾಗಿ ಈಗ ಬಹುತೇಕ ಕೂಲಿ ಕೆಲಸ ಮಾಡುತ್ತಿದ್ದಾನೆ. ಒಂದು ಕಾಲದಲ್ಲಿ ಕುದುರೆಯ ಲಗಾಮು ಹಿಡಿದು ಹೇ... ಎಂಬ ಹೇಷಾರವದಲ್ಲಿ ಮುನ್ನುಗ್ಗಿ ಭಾರತವನ್ನು ಮೊಘಲರಿಂದ ಕಾಪಾಡಲು ದಟ್ಟಕಾಡುಗಳಲ್ಲಿ ಸೆಣೆಸಿದ ಆ ರಜಪೂತರು, ಇಂದು ದೈನ್ಯದಿಂದ ಅದೇ ಕುದುರೆಯ ಲಗಾಮು ಹಿಡಿದು ನಡೆದು ನಡೆದು ಹೋಗುತ್ತಾರೆ. ಅಂದು ನಮ್ಮನ್ನು ರಕ್ಷಿಸಿದ ಜನರು ಇಂದು ಹೀಗಿರುವುದನ್ನು ನೋಡಿ ನನ್ನೆದೆ ಉರಿದುಹೋಯಿತು. ಆದರೆ ಅವನಲ್ಲಿ ಅಂತಹ ವಿಶೇಷ ಭಾವವೇನು ಇರಲಿಲ್ಲ. ಹೊಟ್ಟೆಪಾಡು ಎಂದು ತಣ್ಣಗೆ ನುಡಿದ ಅಥವಾ ತನ್ನ ಮಹಾನ್ ಇತಿಹಾಸದ ಬಗ್ಗೆ ಅವನಿಗೆ ಗೊತ್ತೇ ಇರಲಿಕ್ಕಿಲ್ಲ!

ಕಷ್ಟಗಳಿಂದ ನಮ್ಮನ್ನು ದಾಟಿಸುವ ಓ ತೀರ್ಥಕ್ಷೇತ್ರಗಳೇ, ನಿಮ್ಮನ್ನು ಇಂತಹ ಕಷ್ಟದಲ್ಲಿ ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀವು ಮುಂದೆಯೂ ನಮ್ಮನ್ನು ಕಷ್ಟದಿಂದ ಪಾರು ಮಾಡಬೇಕಾದರೆ, ವರ್ತಮಾನದಲ್ಲಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕಾಗುತ್ತದೆ. ನಮ್ಮ ನಾಯಕರು ನಿಮ್ಮನ್ನು ರಕ್ಷಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಅವರಾದರೂ ಎಷ್ಟೆಂದು ಮಾಡುತ್ತಾರೆ? ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ! ತರತಿ ಇತಿ ತೀರ್ಥಃ... ನೀವು ತೀರ್ಥವಾಗಿ.