Harish Kera Column: ಬಾಲ ಕುಣಿಸುವ ಹಕ್ಕಿ ಮತ್ತು ಅಮುರ್ ಫಾಲ್ಕನ್
ಎಷ್ಟು ಪುಟ್ಟದು ಎಂದರೆ, ಮುಚ್ಚಿದ ಅಂಗೈಯೊಳಗೆ ಅವುಗಳನ್ನು ಕೂರಿಸಬಹುದು. ಹನಿಯುತ್ತಿರುವ ಮಳೆಯಲ್ಲಿ, ಅಂಗಳದಲ್ಲಿ ನಿಂತ ನೀರಿನಲ್ಲಿ ಇರಬಹುದಾದ ಹುಳ ಕ್ರಿಮಿ ಕೀಟಗಳನ್ನು ಕುಕ್ಕಿ ಹೆಕ್ಕಿ ಗುಳುಂಕಾಯಿಸುತ್ತಿವೆ. ಬಾಲವನ್ನು ಮೇಲಕ್ಕೂ ಕೆಳಕ್ಕೂ ಒಂದೇ ಸಮನೆ ಆಡಿಸುತ್ತಿವೆ. ಟೇಲರಿಂಗ್ ಯಂತ್ರದ ಸೂಜಿಯಂತೆ ಅದು ಮೇಲೂ ಕೆಳಕ್ಕೂ ಓಡಿಯಾಡುತ್ತಿದೆ. ಬಣ್ಣ ಹಳದಿ ಕಪ್ಪು ಅಥವಾ ಕಪ್ಪು ಬಿಳಿ.
-
ಕಾಡುದಾರಿ
ಹಕ್ಕಿಗಳು ವಿಶ್ವಕುಟುಂಬಿಗಳು. ಅವುಗಳ ಹಿಡಿಯಷ್ಟು ದೇಹದಲ್ಲಿ, ಪುಟ್ಟ ರೆಕ್ಕೆಗಳಲ್ಲಿ ಎಷ್ಟೊಂದು ಶಕ್ತಿ ಇದೆ ಎಂದು ನಮಗೆ ಗೊತ್ತೇ ಇರುವುದಿಲ್ಲ. ಆಹಾರ, ನಿದ್ರೆ ಇಲ್ಲದೆ ವಾರಗಟ್ಟಲೆ ಹಾರಬಲ್ಲ ಅಮುರ್ ಫಾಲ್ಕನ್ ಇದಕ್ಕೆ ಉದಾಹರಣೆ. ಹಕ್ಕಿಗಳು ನಮ್ಮಿಂದ ಮೊದಲೇ ಈ ಭೂಮಿಯಲ್ಲಿದ್ದಂಥವು. ನಮಗೆ ಈ ಭೂಮಿಯ ಚೆಲುವನ್ನು ನೆನಪಿಸು ವಂಥವು. ಮನುಷ್ಯ ಹಕ್ಕಿಯಂತೆ ಅನಿಕೇತನ ಆಗುವುದು ಸಾಧ್ಯವಿದ್ದರೆ ಎಷ್ಟು ಚೆನ್ನಾಗಿತ್ತು. ಹಕ್ಕಿಯಂತೆ ಹಗುರವಾಗಿ, ಎಲ್ಲಿಗೂ ಎಂಟಿಕೊಳ್ಳದೆ!
ಕೇರಳದ ಕಡೆಯಿಂದ ಮಳೆಗಾಲದ ಮೊದಲ ಮೋಡಗಳು ಆಗಮಿಸತೊಡಗಿದ ಕೂಡಲೆ ಕರ್ನಾಟಕ ಪಶ್ಚಿಮ ಕರಾವಳಿಯಲ್ಲಿ ಮನುಷ್ಯ ಬದುಕಿನ ನಾನಾ ಘಟನೆಗಳು ಬಿಚ್ಚಿಕೊಳ್ಳ ತೊಡಗುತ್ತವೆ. ಹಾಗೆಯೇ ಕಾಡು ಗುಡ್ಡಗಳಲ್ಲಿ, ಮಲೆಯ ತುದಿಗಳಲ್ಲಿ, ಶೋಲಾ ಅರಣ್ಯಗಳಲ್ಲಿ, ನದಿ ತೊರೆ ಗಳಲ್ಲಿರುವ ಲಕ್ಷಾಂತರ ಜೀವಿಗಳ ಜೀವನ ಕೂಡ ರಂಗು ಪಡೆದುಕೊಳ್ಳತೊಡಗುತ್ತದೆ. ಹಾಗೆ ಮಳೆ ಕಚ್ಚಿಕೊಂಡ ಒಂದು ಹಗಲು ಮನೆಯ ಹೊರಚಾವಡಿಯ ಹೊಸ್ತಿಲ ಮೇಲೆ ಕುಳಿತು ಅಂಗಳದ ಕಡೆ ಚೂಪುಗಣ್ಣಾಗಿ ನೋಡುತ್ತಿದ್ದರೆ... ಒಂದೆರಡು ಪುಟ್ಟ ಜೀವಗಳು ಅಲ್ಲಿ ಓಡಾಡುತ್ತಿರುವುದು ಕಾಣಿಸುತ್ತದೆ.
ಎಷ್ಟು ಪುಟ್ಟದು ಎಂದರೆ, ಮುಚ್ಚಿದ ಅಂಗೈಯೊಳಗೆ ಅವುಗಳನ್ನು ಕೂರಿಸಬಹುದು. ಹನಿಯು ತ್ತಿರುವ ಮಳೆಯಲ್ಲಿ, ಅಂಗಳದಲ್ಲಿ ನಿಂತ ನೀರಿನಲ್ಲಿ ಇರಬಹುದಾದ ಹುಳ ಕ್ರಿಮಿ ಕೀಟಗಳನ್ನು ಕುಕ್ಕಿ ಹೆಕ್ಕಿ ಗುಳುಂಕಾಯಿಸುತ್ತಿವೆ. ಬಾಲವನ್ನು ಮೇಲಕ್ಕೂ ಕೆಳಕ್ಕೂ ಒಂದೇ ಸಮನೆ ಆಡಿಸುತ್ತಿವೆ. ಟೇಲರಿಂಗ್ ಯಂತ್ರದ ಸೂಜಿಯಂತೆ ಅದು ಮೇಲೂ ಕೆಳಕ್ಕೂ ಓಡಿಯಾಡುತ್ತಿದೆ. ಬಣ್ಣ ಹಳದಿ ಕಪ್ಪು ಅಥವಾ ಕಪ್ಪು ಬಿಳಿ.
ಬಾಲ್ಯದಲ್ಲಿ, ಇದನ್ನು ನೋಡುತ್ತ ಕುಳಿತಿದ್ದರೆ ಹೊತ್ತು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಅದರಷ್ಟು ಒಳ್ಳೇ ಮನರಂಜನೆ ಇನ್ನೊಂದಿರಲಿಲ್ಲ. ಮಧ್ಯಾಹ್ನದ ನಂತರ ದಟ್ಟೈಸಿದ ಮೋಡಗಳು ಮಳೆ ತಂದರೆ, ಆ ಮಳೆಗೆ ಅಂಗಳದಲ್ಲಿ ಹರಿವ ನೀರಿನಲ್ಲಿ ನಾನಾ ಬಗೆಯ ಕ್ರಿಮಿಕೀಟ ಪ್ರತ್ಯಕ್ಷ ವಾಗುತ್ತಿದ್ದವು ಅಥವಾ ಕೊಚ್ಚಿಕೊಂಡು ಹೋಗುತ್ತಿದ್ದವು. ಅವುಗಳನ್ನು ಹಿಡಿದು ಲಬಕಾಯಿಸಲು ಈ ಹಕ್ಕಿಗಳು ಹಾಜರು. ಆಕಾಶಕ್ಕೂ ನೆಲಕ್ಕೂ ಹೊಲಿಗೆ ಹಾಕುವಂತೆ ಇವು ಬಾಲು ಕುಣಿಸುತ್ತಾ ಜಿಗಿಯುತ್ತಾ ಹುಳ ಹೆಕ್ಕುತ್ತಿದ್ದವು.
ಒಂದು ಹುಳಕ್ಕೆ ಒಂದು ರನ್ ಥರ ಎಷ್ಟು ಸ್ಕೋರ್ ಮಾಡಿದವು ಎಂದು ಲೆಕ್ಕ ಹಾಕುತ್ತಿದ್ದೆವು. ಕೆಲವೊಮ್ಮೆ ಇಬ್ಬರು ನೋಡುತ್ತಾ ಕುಳಿತರೆ, ಒಂದು ನಿಮಿಷದ ಅವಧಿಯಲ್ಲಿ ಎಷ್ಟು ಸಲ ಬಾಲ ಮೇಲೆ ಕೆಳಗೆ ಮಾಡಿದವು ಎಂದು ಲೆಕ್ಕ ಇಡುವ ಸ್ಪರ್ಧೆ. ಎರಡು ಹಕ್ಕಿಗಳಿದ್ದರೆ ನನಗೊಂದು ನಿನಗೊಂದು- ಯಾವುದು ಹೆಚ್ಚು ಸಲ ಕುಂಡೆ ಕುಣಿಸುತ್ತದೆ ಎಂಬ ಪೈಪೋಟಿ.
ಇದನ್ನೂ ಓದಿ:Harish Kera Column: ಗೆಜ್ಜೆ ಬಿಚ್ಚುವ ಸಮಯ, ಒಳಕೋಣೆಯಲ್ಲಿ ಮೌನ
ಹೀಗೇ ಕತ್ತಲಾಗಿ ಬಿಡುತ್ತಿತ್ತು. ಅವು ಅಂಗಳದಿಂದಾಚೆಗಿನ ದಟ್ಟ ಕಾನನದಲ್ಲಿ ಮರೆಯಾಗಿ ಬಿಡು ತ್ತಿದ್ದವು. ಅದರ ಹೆಸರು ಸಿಪಿಲೆ ಅಥವಾ ಬಾಲ ಕುಣಿಸುವ ಹಕ್ಕಿ. ಸ್ವಲ್ಪ ಮಜಾ ತೆಗೆದುಕೊಳ್ಳ ಬಯಸುವವರು ಅದನ್ನು ಕುಂಡೆ ಕುಣಿಸುವ ಹಕ್ಕಿ ಎಂದೂ ಕರೆಯುತ್ತಾರೆ.
ಇನ್ನೂ ಸ್ಥಳೀಯ ಹೆಸರಾದರೆ ಬಾಲಕುಸ್ಕ ಅಥವಾ ಕುಂಡೆಕುಸ್ಕ. ಹಕ್ಕಿಗೆ ಅದೆರಡೂ ಇರುವುದರಿಂದ ಏನಂತ ಕರೆದರೂ ಅಡ್ಡಿಯಿಲ್ಲ. ಇಂಗ್ಲಿಷ್‌ನಲ್ಲಿ ವ್ಯಾಗ್‌ಟೇಲ್ ಬರ್ಡ್. ಇದರಲ್ಲೇ ನಾಲ್ಕಾರು ಪ್ರಭೇದಗಳುಂಟು. ಎಲ್ಲದಕ್ಕೂ ಸಾಮಾನ್ಯವಾದ ಒಂದು ಸಂಗತಿ ಅಂದರೆ ಬಾಲವನ್ನು ಮೇಲಕ್ಕೂ ಕೆಳಕ್ಕೂ ಅಲ್ಲಾಡಿಸುವುದು. ಒಂದು ಪ್ರಭೇದ ಮಾತ್ರ ಎಡಕ್ಕೂ ಬಲಕ್ಕೂ ಅಲ್ಲಾಡಿಸುತ್ತದೆ.
ಇದ್ಯಾಕೆ ಹೀಗೆ ಬಾಲವನ್ನು ಮೇಲೆ ಕೆಳಗೆ ಅಲ್ಲಾಡಿಸುತ್ತದೆ? ಗೊತ್ತಿರಲಿಲ್ಲ. ಮನೆಗೆಲಸಕ್ಕೆ ಬರುತ್ತಿದ್ದ ಚಿತ್ತಣ್ಣ ಹೇಳಿದ ಕತೆಯನ್ನು ನಂಬಿದ್ದೆವು. ಹಕ್ಕಿಗಳನ್ನು ದೇವರು ಸೃಷ್ಟಿಸುವಾಗ ಒಂದೊಂದು ಕೆಲಸ, ವಾಸಸ್ಥಳ, ಸ್ವಭಾವ ಎಲ್ಲವನ್ನೂ ಕೊಟ್ಟಿದ್ದನಂತೆ. ಈ ಹಕ್ಕಿಗೆ ಹೊಳೆ ನೀರಿನ ಬದಿ ಇದ್ದು ಅಲ್ಲಿ ಸಿಗುವ ಎರೆಹುಳ ಇತ್ಯಾದಿ ಹಿಡಿದು ಭಕ್ಷಿಸುವ ಕೆಲಸ, ಆಹಾರ. ಆದರೆ ಈ ಹಕ್ಕಿ ದೇವರು ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳದೆ ಬೇರೆ ಹಕ್ಕಿಗಳ ಆಹಾರಕ್ಕೂ ಸದ್ದಿಲ್ಲದೆ ಬಾಯಿ ಹಾಕಿತಂತೆ. ಇತರೆ ಹಕ್ಕಿಗಳು ದೇವರಿಗೆ ದೂರಿದವು.
ದೇವರು ಇದಕ್ಕೆ ಸದಾ ಬಾಲ ಅಲ್ಲಾಡಿಸುತ್ತ ಇರು ಎಂದು ಶಾಪ ಕೊಟ್ಟನಂತೆ. ಕಾರಣ? ಅದು ಬಾಲ ಅಲ್ಲಾಡಿಸುವಾಗ ಇತರೆ ಹಕ್ಕಿಗಳಿಗೆ ಅದರ ಇರುವಿಕೆ ಗೊತ್ತಾಗುತ್ತದೆ. ತಮ್ಮ ಆಹಾರ ರಕ್ಷಿಸಿಕೊಳ್ಳ ಬಹುದು. ನಾನಿದನ್ನು ನಿಜವೆಂದೇ ಬಹು ಕಾಲ ನಂಬಿದ್ದೆ.
ನಿಜಕ್ಕೂ ಇದೊಂದು ಇತರ ಹಕ್ಕಿಗಳ ತಂಟೆಗೆ ಹೋಗದ ಸಾಧು ಪಕ್ಷಿ. ಅದು ಕುಂಡೆ ಕುಸ್ಕ ನಾಗಿರುವುದಕ್ಕೆ ವೈಜ್ಞಾನಿಕ- ಪ್ರಾಕೃತಿಕ ಕಾರಣ ಇದೆ. ಸದಾ ಬಾಲ ಕುಣಿಸುತ್ತಲೇ ಇರುವ ಮೂಲಕ ಅದು ತನ್ನನ್ನು ಬೇಟೆಯಾಡಲು ಬರುವ ಪ್ರಾಣಿ- ಪಕ್ಷಿಗಳಿಗೆ ‘ನಾನು ಅಲರ್ಟ್ ಆಗಿ ಇದ್ದೇನೆ, ನಿಮಗೆ ಸಿಗಲಾರೆ’ ಎಂದು ಸೂಚನೆ ರವಾನಿಸುತ್ತಾ ಇರುತ್ತದೆ.
ಎರಡನೇ ಕಾರಣ, ಹಾಗೆ ಬಾಲ ಕುಣಿಸುವ ಮೂಲಕ ನೆಲದಲ್ಲಿರುವ ಕ್ರಿಮಿಗಳನ್ನು ಡಿಸ್ಟರ್ಬ್ ಮಾಡಿ ಅವು ಹೊರಗೆ ಬರುವಂತೆ, ಮಿಸುಕಾಡುವಂತೆ ಮಾಡುತ್ತದೆ. ಹೀಗೆ ಅವುಗಳನ್ನು ಪತ್ತೆ ಹಚ್ಚಿ ಗಬಕಾಯಿಸುತ್ತದೆ. ಬಹುಶಃ ದೇಹವನ್ನು ಬ್ಯಾಲೆನ್ಸ್ ಮಾಡುವ ಇನ್ನೊಂದು ಕಾರಣವೂ ಇರಬಹುದು. ಇದಲ್ಲದೇ ಜೀವವಿಕಾಸದ ಜೊತೆಗೆ ವಿಕಾಸವಾಗುತ್ತ ಬಂದ, ನಮಗರಿಯದ ಬೇರೆ ಕಾರಣಗಳೂ ಇರಬಹುದು.
ಇವು ನಮ್ಮೂರಿನ ಕಾಡುಗಳೆಲ್ಲೆಲ್ಲೋ ವಾಸಿಸುವ ಹಕ್ಕಿಗಳು, ಮಳೆ ಬಂದಾಗ ಅಂಗಳಕ್ಕೆ ಬರುತ್ತವೆ ಎಂದೇ ನಾನು ಅಂದುಕೊಂಡಿದ್ದೆ. ಪಕ್ಕದಲ್ಲೇ ದಟ್ಟವಾದ ಬಂಟಮಲೆ ಗುಡ್ಡವಿತ್ತು. ಆದರೆ ಸ್ವಲ್ಪ ದೊಡ್ಡವನಾದಾಗ ಇನ್ನೊಂದು ಸತ್ಯ ಗೊತ್ತಾಯಿತು. ಇವು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ನಿತ್ಯ ಹರಿಯುವ ತೊರೆ- ನದಿಗಳ ಬದಿಗಳಲ್ಲಿ, ಜವುಗು ತಾಣಗಳಲ್ಲಿ ವಾಸಿಸುತ್ತವೆ.
ಯಾಕೆಂದರೆ ಇವುಗಳ ಆಹಾರ ಅಲ್ಲಿ ಹೆಚ್ಚು. ಮಳೆ ಬಂದಾಗ ಜನವಸತಿ ಪ್ರದೇಶಗಳಲ್ಲಿ ಮೇಲೆದ್ದು ಬರುವ ಕ್ರಿಮಿಗಳನ್ನು ಭಕ್ಷಿಸಲು ಅಲ್ಲಿಗೆ ಬರುತ್ತವೆ ಬಿಟ್ಟರೆ ದಟ್ಟ ಕಾಡೇ ಇವುಗಳ ಆವಾಸಸ್ಥಾನ.
ಇನ್ನೂ ಒಂದು ವಿಷಯ ತಿಳಿಯಿತು- ಇವುಗಳಲ್ಲಿ ಹಲವು ಪ್ರಭೇದಗಳು ಒಂದೇ ಊರಿನಲ್ಲಿ ನೆಲೆ ನಿಲ್ಲುವ ಹಕ್ಕಿಗಳೂ ಅಲ್ಲ. ಇವು ವಲಸೆ ಹಕ್ಕಿಗಳು. ಉದಾಹರಣೆಗೆ ಬೂದು ಬಾಲಕುಸ್ಕ ಹಕ್ಕಿಗಳು ಹಿಮಾಲಯದಲ್ಲಿರುತ್ತವೆ. ಬಿಳಿ ಮತ್ತು ಹಳದಿ ಹಕ್ಕಿಗಳು ಯುರೋಪ್, ಉತ್ತರ ಏಷ್ಯಾದಲ್ಲಿರುತ್ತವೆ. ಫಾರೆಸ್ಟ್ ವ್ಯಾಗ್‌ಟೇಲ್ ಚೀನಾ, ಪೂರ್ವ ಏಷ್ಯಾಕ್ಕೆ ಸೇರಿದ್ದು. ಅಲ್ಲಿ ದಟ್ಟ ಚಳಿಗಾಲ ಆವರಿಸುವ ಮೊದಲು ಹಾರಿಕೊಂಡು ದಕ್ಷಿಣ ಏಷ್ಯಾ,
ಕರ್ನಾಟಕ ಹಾಗೂ ಕೇರಳದ ಪಶ್ಚಿಮ ಘಟ್ಟಗಳಿಗೆ ಬರುತ್ತವೆ. ಮೇ ತಿಂಗಳಲ್ಲಿ ಹಿಮಾಚಲ ಮೊದಲಾದೆಡೆ ಗೂಡು ಕಟ್ಟಿ ಮರಿ ಮಾಡುತ್ತವೆ. ಪಾಕಿಸ್ತಾನ, ಬಲೂಚಿಸ್ತಾನಗಳಿಗೂ ಹೋಗುತ್ತವೆ. ಒಂದು ವರ್ಷದಲ್ಲಿ ಇವು ಹಾರಾಡುವ ದೂರ ಸುಮಾರು ಆರುಸಾವಿರ ಕಿಲೋಮೀಟರ್.
ಚಳಿಗಾಲದಲ್ಲಿ ನಮ್ಮೂರಿನ ಇವನ್ನು ಕಾಣಬಹುದು. ಹೀಗೆ ಇವು ನಮ್ಮೂರಿನವು ಹೌದು ಮತ್ತು ಅಲ್ಲ. ಅವು ವಿಶ್ವಕುಟುಂಬಿಗಳು. ಅವುಗಳ ಹಿಡಿಯಷ್ಟು ದೇಹದಲ್ಲಿ, ಪುಟ್ಟ ರೆಕ್ಕೆಗಳಲ್ಲಿ ಇಷ್ಟೊಂದು ಶಕ್ತಿ ಇದೆ ಎಂದು ನಮಗೆ ಗೊತ್ತೇ ಇರಲಿಲ್ಲ. ಮನುಷ್ಯ ಹಕ್ಕಿಯಂತೆ ಅನಿಕೇತನ ಆಗುವುದು ಸಾಧ್ಯವಿದ್ದರೆ ಎಷ್ಟು ಚೆನ್ನಾಗಿತ್ತು. ಹಕ್ಕಿಯಂತೆ ಹಗುರವಾಗಿ, ಎಲ್ಲಿಗೂ ಎಂಟಿಕೊಳ್ಳದೆ, ಎಲ್ಲಿ ಹೋದರೂ ಒಗ್ಗಿಕೊಂಡು ಬದುಕಿದರೆ ಮಾತ್ರ ಇದು ಸಾಧ್ಯವೇನೊ.
ವಲಸೆ ಹಕ್ಕಿಗಳ ಶಕ್ತಿಯ ಬಗ್ಗೆ ಮಾತನಾಡುವಾಗ ನೆನಪಾಗುವ ಇನ್ನೊಂದು ಹಕ್ಕಿ ಅಮುರ್ ಫಾಲ್ಕನ್. ಪಾರಿವಾಳದಷ್ಟು ಪುಟ್ಟದಾದರೂ ಇವುಗಳ ರೆಕ್ಕೆಗೆ ದೈತ್ಯ ಶಕ್ತಿ. ಇಲ್ಲಿ ಅವುಗಳಿಗೆ ಸಂಬಂಧಿಸಿದ ಒಂದು ಸುದ್ದಿ- ಕಳೆದ ವರ್ಷ ನವೆಂಬರ್‌ನಲ್ಲಿ ಮಣಿಪುರದಲ್ಲಿ ಮೂರು ಅಮುರ್ ಫಾಲ್ಕನ್‌ಗಳಿಗೆ ಸ್ಯಾಟ್‌ಲೈಟ್ ಟ್ಯಾಗ್ಮಾ ಡಲಾಯಿತು. ಇವು ನವೆಂಬರ್ ತಿಂಗಳಲ್ಲಿ ಮಣಿಪುರದಿಂದ ಹೊರಟು, ಭಾರತದ ಐದಾರು ರಾಜ್ಯಗಳನ್ನು ದಾಟಿ, ಪಶ್ಚಿಮ ಕರಾವಳಿಯ ಮೂಲಕ ಅರಬ್ಬಿ ಸಮುದ್ರವನ್ನು ಪ್ರವೇಶಿಸಿ, ಸಮುದ್ರದ ಮೇಲೆ ನಾನ್‌ಸ್ಟಾಪ್ ಹಾರುತ್ತಾ ಆಫ್ರಿಕದ ಸೊಮಾಲಿಯ ದೇಶವನ್ನು ಸೇರುತ್ತವೆ.
ಹೀಗೆ ಅಲ್ಲಿಗೆ ಸೇರಲು ಅದು ತೆಗೆದುಕೊಳ್ಳುವುದು ೬ ದಿನಗಳು ಮಾತ್ರ. ಮಣಿಪುರದಿಂದ ಹೊರಟರೆ ಎಲ್ಲಿಯೂ ರೆಸ್ಟ್ ತೆಗೆದುಕೊಳ್ಳಲು ಕೆಳಗಿಳಿಯುವುದೇ ಇಲ್ಲ! ಮರಳಿ ಬರುವಾಗಲೂ ಅಷ್ಟೆ. ಮೇ ತಿಂಗಳಲ್ಲಿ ಅವು ಸೊಮಾಲಿಯಾದಿಂದ ಹೊರಟು ಆರೇ ದಿನಗಳಲ್ಲಿ ಮಣಿಪುರ ಸೇರುತ್ತವೆ.
ಕತೆ ಇಲ್ಲಿಗೇ ಮುಗಿಯಲಿಲ್ಲ. ಇಲ್ಲಿಂದ ಆರಂಭವೂ ಅಲ್ಲ. ಯಾಕೆಂದರೆ ಅವು ಮಣಿಪುರದ ಪಕ್ಷಿಗಳೇ ಅಲ್ಲ. ಅವುಗಳ ನೆಲೆ ಮಂಗೋಲಿಯಾ, ಆಗ್ನೇಯ ರಷ್ಯಾ ಮತ್ತು ಉತ್ತರ ಚೀನಾ. ಅಲ್ಲಿ ಜೂನ್ ನಿಂದ ಆಗವರೆಗೆ ಬೇಸಿಗೆ. ಅವು ಬೇಸಿಗೆಯ ತಿಂಗಳುಗಳನ್ನು ಇಲ್ಲಿ ಕಳೆದು, ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ.
ಅಕ್ಟೋಬರ್- ನವೆಂಬರ್ ವೇಳೆಗೆ ಮರಿಗಳಿಗೆ ರೆಕ್ಕೆ ಬಲಿತಿರುತ್ತದೆ. ಆಗ ಅವುಗಳ ವಲಸೆ ಶುರು. ನವೆಂಬರ್ʼನಲ್ಲಿ ಅವು ಅಲ್ಲಿಂದ ನೈರುತ್ಯಕ್ಕೆ ಅಂದರೆ ಈಶಾನ್ಯ ಭಾರತದ ಕಡೆಗೆ ಹಾರತೊಡಗುತ್ತವೆ. ಒಂದು ವಾರದಲ್ಲಿ ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಬೃಹತ್ ಸಂಖ್ಯೆಯಲ್ಲಿ ಬಂದು ಸೇರುತ್ತವೆ.
ಇದು ಅವುಗಳು ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯುವ ತಾಣ. ಜೊತೆಗೆ ಸಮುದ್ರದ ಮೇಲಿನ ನಿಲ್ಲದ ಹಾರಾಟಕ್ಕೆ ಶಕ್ತಿ ತುಂಬಿಸಿಕೊಳ್ಳಲು ಕೀಟಗಳನ್ನು ಗಬಗಬನೆ ತಿನ್ನುತ್ತವೆ. ಎಷ್ಟೆಂದರೆ, ತಮ್ಮ ದೇಹದ ತೂಕದ ದುಪ್ಪಟ್ಟು. ನಂತರ ಸೊಮಾಲಿಯಾಕ್ಕೆ ಹಾರುವಿಕೆ ಶುರು.
ಒಮ್ಮೆ ಹಾರಲು ತೊಡಗಿತೆಂದರೆ ದಿಗ್ಭ್ರಮೆಗೊಳಿಸುವ ತಡೆರಹಿತ ಹಾರಾಟ ಇದರದು. ಇದರ ವಲಸೆ ಮೂರು ಖಂಡಗಳಿಗೆ, ಹತ್ತಾರು ದೇಶಗಳಿಗೆ ವ್ಯಾಪಿಸಿದ್ದು. ವರ್ಷಾವಧಿಯಲ್ಲಿ ಇವು ಹಾರಾಡುವ ದೂರ 20000 ಕಿಲೋಮೀಟರ್. ಹೋಗುವಾಗ ಮತ್ತು ಬರುವಾಗ ಇವುಗಳಿಗೆ ತುಸು ಸವಾಲು ನೀಡುವ ಜಾಗ ಎಂದರೆ ಅರಬ್ಬೀ ಸಮುದ್ರ. ಆಹಾರ, ವಿಶ್ರಾಂತಿ ಇಲ್ಲದೆ ಹಲವಾರು ದಿನಗಳವರೆಗೆ ನಿರಂತರ ಹಾರಾಡುವ ಇವು, ಗಾಳಿಯ ದಿಕ್ಕನ್ನು ಅನುಸರಿಸಿ ರೆಕ್ಕೆ ಬಡಿಯದೇ ಗಂಟೆಗಟ್ಟಲೆ ಗಾಳಿ ಯಲ್ಲಿ ತೇಲುತ್ತಲೇ ಇರಬಲ್ಲವು.
ಇವು ಯಾವುದೇ ಹೀರೋಗಿರಿಗಾಗಿ ಹೀಗೆ ಹಾರುವುದಲ್ಲ. ಅದು ಅವುಗಳ ಬದುಕುಳಿಯುವ ತಂತ್ರ, ವಿಕಾಸಗೊಂಡ ಕ್ರಮ ಮತ್ತು ಪ್ರಾಯೋಗಿಕ ಸಹಜ ಕ್ರಿಯೆ. ಪೂರ್ವ ಏಷ್ಯಾದಲ್ಲಿ ಬೇಸಿಗೆಯಲ್ಲಿ ಈ ಗಿಡುಗಗಳು ಸಂತಾನೋತ್ಪತ್ತಿ ಮಾಡುತ್ತವೆ. ಆ ಸಮಯದಲ್ಲಿ ಅವುಗಳ ಆಹಾರ ಕೀಟಗಳು ಹೇರಳ ವಾಗಿರುತ್ತವೆ ಮತ್ತು ದಿನಗಳು ದೀರ್ಘವಾಗಿರುತ್ತವೆ. ಆದರೆ ಅಲ್ಲಿನ ಚಳಿಗಾಲ ಕಠಿಣ. ಆ ಸಮಯ ದಲ್ಲಿ ಅವು ಅಲ್ಲಿರುವುದಿಲ್ಲ.
ದಕ್ಷಿಣ ಆಫ್ರಿಕಾ ಆ ತಿಂಗಳುಗಳಲ್ಲಿ ಒಣಹವೆಯಿಂದಿದ್ದು, ಸುಲಭವಾಗಿ ಆಹಾರ ನೀಡುತ್ತದೆ. ಆದ್ದರಿಂದ ಅವು ಅಲ್ಲಿಂದಿಲ್ಲಿಗೆ ಹೋಗುತ್ತವೆ. ಹಾರುವ ಮಾರ್ಗ ಹಾಗೂ ಸಮಯ ಅವುಗಳಿಗೆ ಹೇಗೆ ಗೊತ್ತಾಗುತ್ತದೆ? ಅದು ಅವುಗಳ ಗುಣಾಣುಗಳಲ್ಲೇ ನೆಲೆಯೂರಿದೆ.
ತಲೆಮಾರಿನಿಂದ ತಲೆಮಾರಿಗೆ ಅದು ಹರಿದುಬಂದಿದೆ. ಈಶಾನ್ಯ ಭಾರತದ ಮಣಿಪುರ ಹಾಗೂ ನಾಗಾಲ್ಯಾಂಡ್‌ಗಳಲ್ಲಿ ಇವುಗಳ ಆಗಮನವನ್ನೇ ಜನ ನಿರೀಕ್ಷಿಸುತ್ತಿರುತ್ತಾರೆ. ಸಾಮಾನ್ಯವಾಗಿ ಅಕ್ಟೋಬರ್ಅಂ ತ್ಯ ಮತ್ತು ನವೆಂಬರ್ ಆರಂಭದ ನಡುವೆ ಇವು ಬರುತ್ತವೆ. ಇವು ಬಂತೆಂದರೆ ಚಳಿಗಾಲ ಬರುತ್ತಿದೆ ಎಂಬುದರ ಸೂಚನೆ.
ಕೆಲವು ವರ್ಷಗಳ ಹಿಂದೆ ಈ ಗಿಡುಗಗಳನ್ನು ಇಲ್ಲಿನ ಜನ ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರು. ಇದರಿಂದ ಈ ಪಕ್ಷಿಜಾತಿಯ ವಲಸೆ ಪದ್ಧತಿಗೆ ಆಗಬಹುದಾದ ವ್ಯಾಪಕ ಹಾನಿಯನ್ನು ಮನಗಂಡು ಭಾರತ ಸರಕಾರ ಈ ಹಕ್ಕಿಗಳನ್ನು ಕೊಲ್ಲುವುದನ್ನು ನಿಷೇಧಿಸಿ, ಶಿಕ್ಷಾರ್ಹ ಅಪರಾಧ ಎಂದು ಸಾರಿತು. ಜೊತೆಗೆ ಸ್ಥಳೀಯ ಜನರಿಗೂ ಈ ಬಗ್ಗೆ ಅರಿವು ಮೂಡಿಸಿತು. ಅವು ಬಂದು ತಂಗುವ ತಾಣಗಳಲ್ಲಿ ಆ ಸಮಯದಲ್ಲಿ ಬರ್ಡ್‌ವಾಚಿಂಗ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿತು.
ಇಂದು ಈ ಹಕ್ಕಿಗಳ ವಲಸೆ ಕಾಲವನ್ನೇ ಅಲ್ಲಿನ ಜನ ಕುತೂಹಲದ ಕಂಗಳಿಂದ ಕಾಯುತ್ತಿರುತ್ತಾರೆ. ಹಕ್ಕಿಗಳು ಮನುಷ್ಯನ ಬದುಕಿನ ಭಾಗವಾಗುವುದು ಹೀಗೆ. ಬಾಲ್ಯದಲ್ಲಿ ಕಾಣುವ ಬಾಲಕುಸ್ಕ ಹಕ್ಕಿ, ವಾರ ಕಾಲ ತಂಗುವ ಅಮುರ್ ಫಾಲ್ಕನ್, ಇನ್ನೆಷ್ಟೋ ಬಗೆಯ ಪಕ್ಷಿಗಳು. ನಮ್ಮಿಂದ ಮೊದಲೇ ಈ ಭೂಮಿಯಲ್ಲಿದ್ದಂಥವು. ನಮಗೆ ಈ ಭೂಮಿಯ ಚೆಲುವನ್ನು ನೆನಪಿಸುವಂಥವು.