Vishweshwar Bhat Column: ಮನೆಯಲ್ಲಿ ಪತಿಯೇ ಪರಾಧೀನ
ಪತಿಯು ತಿಂಗಳ ಕೊನೆಯಲ್ಲಿ ‘ಒಕೊಡುಕಿ’ ಎಂಬ ರೂಪದಲ್ಲಿ ನಿಗದಿತ ಮೊತ್ತವನ್ನು ಮಾತ್ರ ಪಡೆಯು ತ್ತಾನೆ. ಈ ಹಣವನ್ನು ಆತ ತನ್ನ ಸುತ್ತಾಟ, ಹವ್ಯಾಸ, ಸ್ನೇಹಿತರೊಂದಿಗೆ ಕೂಟ ಮತ್ತು ಇತರೆ ವೈಯಕ್ತಿಕ ವೆಚ್ಚಗಳಿಗೆ ಬಳಸುತ್ತಾನೆ. ಪತಿಯ ಖರ್ಚಿನಲ್ಲಿ ನಿಯಂತ್ರಣ ತರಲು ಮತ್ತು ನಿಯಮಿತ ವೆಚ್ಚದ ಗಡಿ ದಾಟದೇ, ಅನವಶ್ಯಕ ಖರ್ಚುಗಳನ್ನು ಕಡಿತಗೊಳಿಸಲು ಈ ಪದ್ಧತಿ ಸಹಾಯಕ ಎಂಬ ಭಾವನೆ ಜಪಾನಿ ಯರಲ್ಲಿದೆ


ಸಂಪಾದಕರ ಸದ್ಯಶೋಧನೆ
ಜಗತ್ತಿನ ಉಳಿದೆಲ್ಲ ದೇಶಗಳಿಗಿಂತ ಜಪಾನಿನಲ್ಲಿ ಹೆಂಡತಿಯಾಗುವುದು ಸುಲಭವಂತೆ. ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ ಈ ಮಾತು ಚಾಲ್ತಿಯಲ್ಲಿರುವುದಂತೂ ಸತ್ಯ. ಇದನ್ನು ತಮಾಷೆಗೆ ಹೇಳಬಹುದು ಎಂದು ನಾನು ಭಾವಿಸಿದ್ದೆ. ಆದರೆ ಇದು ವಾಸ್ತವ ಕೂಡ ಎಂದು ಅರಿ ವಾಗಿದ್ದು ಆ ದೇಶದಲ್ಲಿ ಅನೇಕ ವರ್ಷಗಳ ಕಾಲ ವಾಸಿಸಿದ ಕನ್ನಡಿಗ ಮಿತ್ರರೊಬ್ಬರು ಹೇಳಿದಾ ಗಲೇ. ಕಾರಣ ಇಷ್ಟೇ, ಆ ದೇಶದಲ್ಲಿ ಗಂಡ ದುಡಿದು ತಂದ ಹಣವನ್ನು ಹೆಂಡತಿ ಕೈಗೆ ನೀಡಬೇಕು. ಜಪಾನ್ ದೇಶವು ತನ್ನ ಶಿಸ್ತು, ಸಂಸ್ಕೃತಿ ಮತ್ತು ವಿಶಿಷ್ಟ ಸಮಾಜ ಘಟನೆಗಾಗಿ ಪ್ರಸಿದ್ಧ. ಈ ದೇಶದಲ್ಲಿ ಕುಟುಂಬ ಬದುಕಿನ ಬಗ್ಗೆ ಇರುವ ದೃಷ್ಟಿಕೋನ ಅನೇಕ ಪಶ್ಚಿಮ ರಾಷ್ಟ್ರಗಳಿಗಿಂತ ವಿಭಿನ್ನವಾಗಿದೆ. ಜಪಾನಿನ ವೈವಾಹಿಕ ಜೀವನದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಅಂಶ ವೆಂದರೆ, ಬಹುತೇಕ ಗಂಡಂದಿರು ತಮ್ಮ ಸಂಪೂರ್ಣ ವೇತನವನ್ನು ಪತ್ನಿಗೆ ನೀಡುತ್ತಾರೆ ಮತ್ತು ತಾವು ಖರ್ಚು ಮಾಡುವ ಹಣವನ್ನು ಪತ್ನಿಯಿಂದ ಭತ್ಯೆ ( allowance) ರೂಪದಲ್ಲಿ ಸ್ವೀಕರಿಸುತ್ತಾರೆ.
ಈ ಪದ್ಧತಿ ಕುರಿತು ಕೇಳಿದಾಗ ಪ್ರಪಂಚದ ಅನೇಕ ಭಾಗಗಳ ಜನರಿಗೆ ಅಚ್ಚರಿಯಾಗಬಹುದು. ಆದರೆ ಜಪಾನಿನ ಸಮಾಜದಲ್ಲಿ ಇದು ಸಾಮಾನ್ಯವಾಗಿದೆ. ಈ ವ್ಯವಸ್ಥೆಗೆ ‘ಒಕೊಡುಕಿ ಸೆಡಾಯಿ’ ಎಂದು ಕರೆಯುತ್ತಾರೆ. ‘ಒಕೊಡುಕಿ’ ಎಂದರೆ ಖರ್ಚಿಗೆ ನೀಡುವ ಹಣ ಮತ್ತು ‘ಸೆಡಾಯಿ’ ಎಂದರೆ ಸಂಪ್ರದಾಯ ಅಥವಾ ಪದ್ಧತಿ. 1960ರ ದಶಕದಲ್ಲಿ ಈ ಪದ್ಧತಿ ಆರಂಭವಾಯಿತಂತೆ.
ಇದನ್ನೂ ಓದಿ: Vishweshwar Bhat Column: ಸೆಂಚಾ ಚಹಾದ ಗಮ್ಮತ್ತು ಗೊತ್ತಾ ?
ಆ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಿದ್ದರು. ಅವರು ಹೊರಗಿನ ಕೆಲಸದಲ್ಲಿ ಭಾಗವಹಿಸದಿದ್ದರೂ, ಮನೆಗೆಲಸ, ಮಕ್ಕಳ ಪಾಲನೆ ಮತ್ತು ಮನೆಯ ಹಣಕಾಸಿನ ನಿರ್ವಹಣೆಯಂಥ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತಿ ತಮ್ಮ ಸಂಪೂರ್ಣ ವೇತನವನ್ನು ಪತ್ನಿಗೆ ನೀಡುತ್ತಿದ್ದರು, ಏಕೆಂದರೆ ಅವಳೇ ಮನೆಗೆಲಸದ ಪೂರ್ಣ ಆಯವ್ಯಯವನ್ನು ನಿರ್ವಹಿಸುತ್ತಿದ್ದಳು.
ಈ ವ್ಯವಸ್ಥೆಯು ಪತಿಯ ಮೇಲೆ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವ ಮತ್ತು ಪತ್ನಿಗೆ ತನ್ನ ಕುಟುಂಬದ ಹಣಕಾಸಿನ ನಿರ್ವಹಣೆಯ ಮೇಲಿನ ದೃಢಸ್ಥಾನ ನೀಡುವ ಉದ್ದೇಶದಿಂದ ರೂಪು ಗೊಂಡಿತ್ತು. ಪತಿ ಪತ್ನಿಯ ನಿರ್ಧಾರಗಳ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದರಿಂದ ಈ ವಿಧಾನ ಪರಿಣಾಮಕಾರಿಯಾಗಿ ಮುಂದುವರಿದುಕೊಂಡು ಬಂದಿತು. ಜಪಾನಿನಲ್ಲಿ ಪತ್ನಿಯನ್ನು ಅರ್ಥಪೂರ್ಣವಾಗಿ ‘ಹಣಕಾಸು ಸಚಿವೆ’ ಅಥವಾ ‘ಗೃಹ ಸಚಿವೆ’ ಎಂದೂ ಕರೆಯಲಾಗುತ್ತದೆ.
ಆಕೆ ಕುಟುಂಬದ ಎಲ್ಲ ಖರ್ಚು, ಬಿಲ್ ಪಾವತಿ, ಮಕ್ಕಳ ವಿದ್ಯಾಭ್ಯಾಸ, ದಿನಸಿ ಖರೀದಿ, ಉಡುಪು, ಸಂಚಯ ಮುಂತಾದ ಎಲ್ಲ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುತ್ತಾಳೆ. ಪತಿ ತಿಂಗಳಲ್ಲಿ ತನ್ನ ಖರ್ಚುಗಳಿಗೆ ಬೇಕಾದ ಹಣವನ್ನು ಹೆಂಡತಿ ಮುಂದೆ ಕೇಳುತ್ತಾನೆ. ಎಷ್ಟು ಹಣ ಕೊಡಬೇಕೆಂಬ ನಿರ್ಧಾರವನ್ನು ಪತ್ನಿಯೇ ತೆಗೆದುಕೊಳ್ಳುತ್ತಾಳೆ.
ಪತಿಯು ತಿಂಗಳ ಕೊನೆಯಲ್ಲಿ ‘ಒಕೊಡುಕಿ’ ಎಂಬ ರೂಪದಲ್ಲಿ ನಿಗದಿತ ಮೊತ್ತವನ್ನು ಮಾತ್ರ ಪಡೆಯುತ್ತಾನೆ. ಈ ಹಣವನ್ನು ಆತ ತನ್ನ ಸುತ್ತಾಟ, ಹವ್ಯಾಸ, ಸ್ನೇಹಿತರೊಂದಿಗೆ ಕೂಟ ಮತ್ತು ಇತರೆ ವೈಯಕ್ತಿಕ ವೆಚ್ಚಗಳಿಗೆ ಬಳಸುತ್ತಾನೆ. ಪತಿಯ ಖರ್ಚಿನಲ್ಲಿ ನಿಯಂತ್ರಣ ತರಲು ಮತ್ತು ನಿಯಮಿತ ವೆಚ್ಚದ ಗಡಿ ದಾಟದೇ, ಅನವಶ್ಯಕ ಖರ್ಚುಗಳನ್ನು ಕಡಿತಗೊಳಿಸಲು ಈ ಪದ್ಧತಿ ಸಹಾಯಕ ಎಂಬ ಭಾವನೆ ಜಪಾನಿಯರಲ್ಲಿದೆ.
ಇದು ಪತ್ನಿಯ ಸಬಲೀಕರಣವನ್ನು ಉತ್ತೇಜಿಸುತ್ತದೆ ಮತ್ತು ಆಕೆ ಕುಟುಂಬದ ಹಣಕಾಸಿನ ನಿರ್ಧಾರ ಗಳಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಅವಳಿಗೆ ಜವಾಬ್ದಾರಿ ಹಾಗೂ ಗೌರವ ಸಿಗುತ್ತದೆ ಎಂಬ ಭಾವನೆಯೂ ಅವರಲ್ಲಿದೆ. ಹಣಕಾಸಿನ ನಿರ್ವಹಣೆಯಲ್ಲಿ ಗಂಡಸಿಗಿಂತ ಹೆಂಗಸೇ ಹೆಚ್ಚು ಬುದ್ಧಿ ವಂತೆ ಎಂಬುದು ಜಪಾನಿಯರ ನಂಬಿಕೆ. ಈ ಪದ್ಧತಿಯಲ್ಲಿ ಕೆಲವು ಅನನುಕೂಲಗಳೂ ಇವೆ. ಕೆಲವೊಮ್ಮೆ ಪತಿಗೆ ನೀಡುವ ಭತ್ಯೆ ವಿಷಯದಲ್ಲಿ ವಿವಾದವಾಗುವುದುಂಟು.
ತಾನು ದುಡಿದ ಹಣವನ್ನು ಬೇರೆಯವರಿಗೆ ಕೊಟ್ಟು, ಅವರಿಂದ ಭತ್ಯೆ ರೂಪದಲ್ಲಿ ಹಣ ಪಡೆಯು ವುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಭಾವನೆ ಪುರುಷರಲ್ಲಿ ಇದೆಯಾದರೂ, ಅದಕ್ಕೆ ಮಾನ್ಯತೆ ಕಮ್ಮಿಯೇ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿಯು ಸ್ವಲ್ಪ ಮಟ್ಟಿನ ಬದಲಾವಣೆ ಕಾಣು ತ್ತಿದೆ. ಜಪಾನಿನ ಮಹಿಳೆಯರು ಈಗ ಉದ್ಯೋಗ ಸ್ಥೆಯರಾಗುತ್ತಿದ್ದಾರೆ.
‘ಡಬಲ್ ಇನ್‌ಕಮ್ ಫ್ಯಾಮಿಲಿ’ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಇಬ್ಬರೂ ತಮ್ಮ ಸಂಪಾದನೆಯ ಬಗ್ಗೆ ಸಮಾನವಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಕಾಣಿಸುತ್ತಿದೆ. ಆದರೆ ‘ಒಕೊಡುಕಿ ಸೆಡಾಯಿ’ ಪದ್ಧತಿ ಇಂದಿಗೂ ಹಲವು ಕುಟುಂಬಗಳಲ್ಲಿ ಅಸ್ತಿತ್ವದಲ್ಲಿದೆ.