ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

ಜಗತ್ತಿನ ಬದಲಾಗುವ ಸ್ವಭಾವವನ್ನು (ಮಿಥ್ಯೆ) ಒಪ್ಪಿಕೊಂಡು, ಅದರ ಹಿಂದಿರುವ ಶಾಶ್ವತ ಚೇತನವನ್ನು ಗುರುತಿಸುವುದೇ ನಿಜವಾದ ಜ್ಞಾನ. ಬದುಕನ್ನು ಒಂದು ಸುಂದರ ನಾಟಕದಂತೆ ನೋಡಿ, ಅದರ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿಯೇ ಜೀವನದ ನೆಮ್ಮದಿ ಅಡಗಿದೆ ಎಂದರು ನಗುತ್ತಾ. ಶಿಷ್ಯನಿಗೆ ಆಗ ಮಾಯೆಯ ಸತ್ಯದ ಅರಿವಾಗಿತ್ತು.

ಸತ್ಯ ಮತ್ತು ಅಸತ್ದದ ನಡುವಿನ ಮಾಯಾಲೋಕ

-

ಒಂದೊಳ್ಳೆ ಮಾತು

ಒಂದು ಮುಂಜಾನೆ, ನದೀತೀರದಲ್ಲಿ ಕುಳಿತಿದ್ದ ಶಿಷ್ಯನೊಬ್ಬ ಗುರುಗಳನ್ನು ಕೇಳಿದ: ಗುರುದೇವ, ಈ ಜಗತ್ತು ಕೇವಲ ‘ಮಾಯೆ’ ಅಥವಾ ‘ಸುಳ್ಳು’ ಎಂದು ವೇದಾಂತ ಹೇಳುತ್ತ ದಲ್ಲವೇ? ಆದರೆ ನನ್ನ ಕಣ್ಣಿಗೆ ಕಾಣುವ ಪ್ರಕೃತಿ, ನನ್ನ ಮನಸ್ಸಿಗೆ ಆಗುವ ಸುಖ-ದುಃಖಗಳು ಇಷ್ಟೊಂದು ನಿಜವಾಗಿರುವಾಗ, ಇದನ್ನು ಸಂಪೂರ್ಣ ಸುಳ್ಳು ಎನ್ನಲು ಹೇಗೆ ಸಾಧ್ಯ? ಗುರುಗಳು ಮುಗುಳ್ನಕ್ಕು, ನದಿಯ ನೀರಿನಲ್ಲಿ ಪ್ರತಿಫಲಿಸುತ್ತಿದ್ದ ಸೂರ್ಯನ ಬಿಂಬವನ್ನು ತೋರಿಸಿ ಕೇಳಿದರು: ‘ಮಗು, ಆ ನೀರಿನಲ್ಲಿ ಕಾಣುತ್ತಿರುವ ಸೂರ್ಯ ನಿಜವಾದ ಸೂರ್ಯ ನೇ?’ ಶಿಷ್ಯ ಉತ್ತರಿಸಿದ, ‘ಇಲ್ಲ ಗುರು ದೇವ, ನಿಜವಾದ ಸೂರ್ಯ ಆಕಾಶದಲ್ಲಿದ್ದಾನೆ, ಇದು ಕೇವಲ ಬಿಂಬ.’

ಗುರುಗಳು ತಕ್ಷಣವೇ, ‘ಹಾಗಾದರೆ ಆ ನೀರಿನಲ್ಲಿ ಏನೂ ಇಲ್ಲವೇ? ಅದು ಸಂಪೂರ್ಣ ಶೂನ್ಯವೇ?’ ಎಂದರು. ಶಿಷ್ಯ ಗೊಂದಲಕ್ಕೀಡಾಗಿ, ‘ಇಲ್ಲ, ಅದು ಶೂನ್ಯವಲ್ಲ. ನನ್ನ ಕಣ್ಣಿಗೆ ಸೂರ್ಯ ಅಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದಾನೆ, ನೀರಿನ ಅಲೆಗಳಿಗೆ ತಕ್ಕಂತೆ ಚಲಿಸುತ್ತಿದ್ದಾನೆ’, ಎಂದನು.

ಗುರುಗಳು ವಿವರಿಸಿದರು: ಇದೇ ಮಾಯೆಯ ರಹಸ್ಯ. ನೀರಿನಲ್ಲಿರುವ ಸೂರ್ಯ ಸಂಪೂರ್ಣ ಸತ್ಯವೂ ಅಲ್ಲ (ಏಕೆಂದರೆ ನಿಜವಾದ ಸೂರ್ಯ ಆಕಾಶದಲ್ಲಿದ್ದಾನೆ). ಹಾಗೆಂದು ಸಂಪೂರ್ಣ ಅಸತ್ಯವೂ ಅಲ್ಲ (ಏಕೆಂದರೆ ಅದು ನಿನಗೆ ಅನುಭವಕ್ಕೆ ಬರುತ್ತಿದೆ). ಇದನ್ನೇ ಆದಿ ಶಂಕರಾಚಾ ರ್ಯರು ‘ಮಿಥ್ಯೆ’ ಅಥವಾ ‘ಅನಿರ್ವ ಚನೀಯ’ ಎಂದು ಕರೆದಿದ್ದಾರೆ.

ಇದನ್ನೂ ಓದಿ: Roopa Gururaj Column: ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ಅಂದರೆ, ಇದನ್ನು ಪೂರ್ಣ ಸತ್ಯ ಎಂದೂ ಹೇಳಲಾಗದು, ಪೂರ್ಣ ಅಸತ್ಯ ಎಂದೂ ತಳ್ಳಿಹಾಕ ಲಾಗದು. ಇದು ಸತ್ಯ ಮತ್ತು ಅಸತ್ಯದ ನಡುವಿನ ಒಂದು ‘ಮಧ್ಯಂತರ ಸ್ಥಿತಿ’. ವೇದಾಂತವು ಸತ್ಯವನ್ನು ಮೂರು ಸ್ತರಗಳಲ್ಲಿ ವಿವರಿಸುತ್ತದೆ: ಪಾರಮಾರ್ಥಿಕ ಸತ್ಯ ಎಂದಿಗೂ ಬದಲಾಗದ, ಶಾಶ್ವತವಾದ ಬ್ರಹ್ಮನ್ ಅಥವಾ ಆತ್ಮಚೇತನ.

ವ್ಯಾವಹಾರಿಕ ಸತ್ಯ (ಮಿಥ್ಯೆ): ನಾವು ದಿನನಿತ್ಯ ಅನುಭವಿಸುವ, ಹೆಸರು ಮತ್ತು ರೂಪ ಗಳಿಂದ ಕೂಡಿದ ಈ ಜಗತ್ತು. ಇದು ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ, ಆದರೆ ಅನುಭವಕ್ಕೆ ಬರುತ್ತದೆ.

ತುಚ್ಛ (ಸಂಪೂರ್ಣ ಅಸತ್ಯ): ತಾರ್ಕಿಕವಾಗಿ ಅಸಾಧ್ಯವಾದ ಮತ್ತು ಎಂದಿಗೂ ಅನುಭವ ಕ್ಕೆ ಬಾರದ ವಿಷಯಗಳು.ಕತ್ತಲೆಯಲ್ಲಿ ಬಿದ್ದಿರುವ ಹಗ್ಗವನ್ನು ನೋಡಿ ನಾವು ಹಾವೆಂದು ಹೆದರಿದಾಗ, ಆ ‘ಹಾವು’ ಸೃಜಿಸಿದ ಭಯ ನಿಜವಾಗಿರುತ್ತದೆ. ಆದರೆ ಬೆಳಕು ಬಿದ್ದಾಗ ಹಾವಿನ ಭ್ರಮೆ ಅಳಿದು ಹಗ್ಗವಷ್ಟೇ ಕಾಣುತ್ತದೆ. ಇಲ್ಲಿ ಹಾವು ಎಲ್ಲಿಗೂ ಓಡಿಹೋಗುವುದಿಲ್ಲ, ಬದಲಿಗೆ ಹಾವಿನ ಜಾಗದಲ್ಲಿ ಹಗ್ಗದ ಸತ್ಯ ದರ್ಶನವಾಗುತ್ತದೆ.

ಹಾಗೆಯೇ, ಜ್ಞಾನದ ಬೆಳಕು ಮೂಡಿದಾಗ ಜಗತ್ತು ನಾಶವಾಗುವುದಿಲ್ಲ, ಬದಲಿಗೆ ಈ ಜಗತ್ತಿನ ಪ್ರತಿ ಕಣವೂ ಆ ಪರಮಾತ್ಮನ ರೂಪವೇ ಎಂಬ ಅರಿವು ಮೂಡುತ್ತದೆ. ನಮ್ಮ ಜೀವನದಲ್ಲಿ ಎದುರಾಗುವ ಏಳುಬೀಳುಗಳು, ಸಂಬಂಧಗಳು ಮತ್ತು ಭೌತಿಕ ಜಗತ್ತು ಸಂಪೂರ್ಣ ಸುಳ್ಳಲ್ಲ; ಅವು ತಾತ್ಕಾಲಿಕವಾದ ಮಧ್ಯಂತರ ಸ್ಥಿತಿಗಳು. ಈ ಜಗತ್ತನ್ನು ಶಾಶ್ವತ ಸತ್ಯವೆಂದು ನಂಬಿ ಅತಿಯಾಗಿ ಅಂಟಿಕೊಳ್ಳುವುದೇ ಅಜ್ಞಾನ.

ಜಗತ್ತಿನ ಬದಲಾಗುವ ಸ್ವಭಾವವನ್ನು (ಮಿಥ್ಯೆ) ಒಪ್ಪಿಕೊಂಡು, ಅದರ ಹಿಂದಿರುವ ಶಾಶ್ವತ ಚೇತನವನ್ನು ಗುರುತಿಸುವುದೇ ನಿಜವಾದ ಜ್ಞಾನ. ಬದುಕನ್ನು ಒಂದು ಸುಂದರ ನಾಟಕ ದಂತೆ ನೋಡಿ, ಅದರ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿಯೇ ಜೀವನದ ನೆಮ್ಮದಿ ಅಡಗಿದೆ ಎಂದರು ನಗುತ್ತಾ. ಶಿಷ್ಯನಿಗೆ ಆಗ ಮಾಯೆಯ ಸತ್ಯದ ಅರಿವಾಗಿತ್ತು.

ಇಂತಹ ಮಾಯೆಯ ಬದುಕಿನಲ್ಲಿ ನಾವೆಲ್ಲರೂ ಇದ್ದೇವೆ. ಶಾಶ್ವತ ಸತ್ಯವೆಂದು ನಂಬಿ ಕೊಂಡು ಅನೇಕ ವಿಷಯಗಳ ಬಗ್ಗೆ ನಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿರುತ್ತೇವೆ. ಆದರೆ ನಮ್ಮ ಜ್ಞಾನ ಹೆಚ್ಚಾದಂತೆಲ್ಲ ನಿಜವಾದ ಸತ್ಯ ನಮ್ಮ ಮುಂದೆ ಅನಾವರಣವಾಗುತ್ತಾ ಹೋಗುತ್ತದೆ. ಅದಕ್ಕೆ ಹಿರಿಯರು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು ಹೇಳುತ್ತಾರೆ.

ಯಾವುದೇ ವಿಷಯದ ಬಗ್ಗೆ ಖಂಡಿತವಾಗಿ ನಂಬಿಕೆ ಬೆಳೆಸಿಕೊಳ್ಳುವ ಮೊದಲು, ವಿತಂಡ ವಾದ ಮಾಡುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಜ್ಞಾನದ ಬೆಳಕಿನಲ್ಲಿ ನೋಡೋಣ. ಆಗ ನಮ್ಮ ನಡುವೆ ಇರುವಂತಹ ಅನೇಕ ಗೊಂದಲಗಳಿಗೆ ಆಸ್ಪದವೇ ಇರುವುದಿಲ್ಲ.