ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

M J Akbar Column: ಪಾಕಿಸ್ತಾನವೆಂಬ ಇಸ್ಲಾಮಿಕ್‌ ದೇಶ ಮರಣ ಹೊಂದಿದ್ದು 1971ರಲ್ಲಿ !

ಮೋತಿಲಾಲರು ಐಷಾರಾಮಿ ಮನುಷ್ಯ. ಆದರೆ ಅವರ ವಿಸ್ತರಿತ ಕುಟುಂಬಗಳಿಗೆ ಅಂತಹುದೇ ಐಷಾರಾಮಿ ಬದುಕಿನ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ ಅವರು ಮೇಲ್ಮಟ್ಟದ ಜೀವನ ವಿಧಾನವನ್ನೇ ಅನುಸರಿಸುತ್ತಿದ್ದರು. ಬಿ.ಕೆ.ನೆಹರೂ ಅವರ ತಂದೆ ಬ್ರಜ್‌ ಲಾಲ್ ಆಕ್ಸ್ ಫರ್ಡ್‌ನ ಎಕ್ಸ್‌ಟರ್ ಕಾಲೇಜಿನಲ್ಲಿ ಎಂ.ಎ. ಪಡೆದು, ಬ್ಯಾರಿಸ್ಟರ್ ಆಗಲು ಯತ್ನಿಸಿ, ನಂತರ ಇಂಪೀರಿಯಲ್ ಸಿವಿಲ್ ಸರ್ವೀಸ್ ಆಯ್ಕೆ ಮಾಡಿಕೊಂಡು, ಬ್ರಿಟಿಷ್ ಸರಕಾರದ ಹಣಕಾಸು ಇಲಾಖೆಗೆ ನೇಮಕಗೊಂಡರು.

ಪಾಕಿಸ್ತಾನವೆಂಬ ಇಸ್ಲಾಮಿಕ್‌ ದೇಶ ಮರಣ ಹೊಂದಿದ್ದು 1971ರಲ್ಲಿ !

-

Profile
Ashok Nayak Jun 12, 2026 12:32 PM

ಅಕ್ಬರ್‌ʼನಾಮಾ (ಭಾಗ-೨)

ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಮದ್ಯಪಾನ ತ್ಯಜಿಸಿದ್ದ ಮೋತಿಲಾಲ್ ನೆಹರೂ ಅವರು 1925ರಲ್ಲಿ ಮತ್ತೆ ತಮಗೆ ಪ್ರಿಯವಾದ ಹೇಗ್ಸ್ ಡಿಂಪಲ್ ಸ್ಕಾಚ್‌ಗೆ ಮರಳಿದರು. ಅದಕ್ಕೆ ಅವರ ಜೀವದ ಗೆಳೆಯ ಸಿಆರ್ ದಾಸರ ಸಾವೇ ನೆಪವಾಯಿತು. ಗಾಂಧೀಜಿಯವರ ಕಾರಣದಿಂದ ಕುಡಿತ ಬಿಟ್ಟಿದ್ದ ದಾಸ್ ಅವರಿಗೆ ಏಕಾಏಕಿ ದೇಹಕ್ಕೆ ಆಲ್ಕೋಹಾಲ್ ಪೂರೈಕೆ ನಿಂತಿದ್ದರಿಂದಲೇ ಸಾವು ಬಂದೆರಗಿತು ಎಂದು ಸುದ್ದಿಯಾಗಿತ್ತು. ಮೋತಿಲಾಲರು ಅದನ್ನು ಸಂಪೂರ್ಣ ನಂಬಿದ್ದರು. ಅವರಿಗೂ ತಮ್ಮ ಗೆಳೆಯನ ರೀತಿಯಲ್ಲಿ ಸಾಯಲು ಇಷ್ಟವಿರ ಲಿಲ್ಲ.

ಮೋತಿಲಾಲರು ಐಷಾರಾಮಿ ಮನುಷ್ಯ. ಆದರೆ ಅವರ ವಿಸ್ತರಿತ ಕುಟುಂಬಗಳಿಗೆ ಅಂತ ಹುದೇ ಐಷಾರಾಮಿ ಬದುಕಿನ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ ಅವರು ಮೇಲ್ಮಟ್ಟದ ಜೀವನ ವಿಧಾನವನ್ನೇ ಅನುಸರಿಸುತ್ತಿದ್ದರು. ಬಿ.ಕೆ.ನೆಹರೂ ಅವರ ತಂದೆ ಬ್ರಜ್‌ಲಾಲ್ ಆಕ್ಸ್ ಫರ್ಡ್‌ನ ಎಕ್ಸ್‌ಟರ್ ಕಾಲೇಜಿನಲ್ಲಿ ಎಂ.ಎ. ಪಡೆದು, ಬ್ಯಾರಿಸ್ಟರ್ ಆಗಲು ಯತ್ನಿಸಿ, ನಂತರ ಇಂಪೀರಿಯಲ್ ಸಿವಿಲ್ ಸರ್ವೀಸ್ ಆಯ್ಕೆ ಮಾಡಿ ಕೊಂಡು, ಬ್ರಿಟಿಷ್ ಸರಕಾರದ ಹಣಕಾಸು ಇಲಾಖೆಗೆ ನೇಮಕಗೊಂಡರು.

ನಂತರ 1908ರಲ್ಲಿ ಅಲಹಾಬಾದ್‌ಗೇ ಬ್ರಿಟಿಷ್ ನೌಕರರಿಗಾಗಿ ಆಗಮಿಸಿದರು. ಅಲ್ಲಿ ಆನಂದ ಭವನದಲ್ಲಿ ಪತ್ನಿ ರಾಮೇಶ್ವರಿ ಜೊತೆ ವಾಸಿಸುತ್ತಿದ್ದರು. ಆಕೆ ಲಾಹೋರ್‌ನ ದಿವಾನ್ ನರೇಂದ್ರನಾಥರ ಮಗಳು. ಬ್ರಜ್‌ಲಾಲ್‌ಗೆ ಅತ್ಯುನ್ನತ ಶ್ರೇಣಿಯ ಸಂಬಳ ಸಿಗುತ್ತಿತ್ತು. ಆದರೂ ಅದು ಸಂಬಳವಾಗಿತ್ತೇ ಹೊರತು ವಕೀಲಿ ವೃತ್ತಿಯ ಭರ್ಜರಿ ಕಮಾಯಿ ಆಗಿರಲಿಲ್ಲ.

ಇದನ್ನೂ ಓದಿ: M J Akbar Column: ಮೋತಿಲಾಲ್‌ -ಜವಾಹರ ನಡುವಿನ ಐಷಾರಾಮಿ ವ್ಯತ್ಯಾಸ

ಇಂಗ್ಲೆಂಡ್‌ಗೆ ಓದಲು ಹೊರಟಾಗ ಅವರಿಗೆ ಉಡುಗೆ ಭತ್ಯೆಯಾಗಿ ನೂರು ಪೌಂಡ್ ಲಭಿಸಿತ್ತು. ಆದರೆ, ಮೋಜುಗಾರನಾಗಬಾರದು ಎಂಬ ಎಚ್ಚರಿಕೆಯಿಂದ ಆಕ್ಸ್‌ಬ್ರಿಜ್‌ಗೆ ಹೋಗಬಾರದೆಂದು ತಾಕೀತು ಮಾಡಲಾಗಿತ್ತು. ಉಡುಗೆಯ ಗುಣಮಟ್ಟದ ಜೊತೆಗೆ ರಾಜಿಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ತಲಾ 30 ಗಿನಿಯಾಗಳಿಗೆ ಒಂದರಂತೆ, ಬಹಳ ದುಬಾರಿಯಾ ಹೆನ್ರಿ ಪೂಲ್ ಅಂಗಡಿಯಿಂದ ಮೂರು ಜೊತೆ ಅತ್ಯುತ್ತಮ ಸೂಟ್ ಖರೀದಿಸಲು ಸೂಚಿಸಲಾಗಿತ್ತು.

ಆದರೆ ಸಾವೈಲ್ ರೋದಲ್ಲಿ ಅದೇ ರೀತಿ ಕಾಣಿಸುವ, ಅಷ್ಟೇ ಗುಣಮಟ್ಟದ ಸೂಟ್‌ಗಳನ್ನು ಬಹಳ ಕಡಿಮೆ ಬೆಲೆಗೆ ಹೊಲಿದು ಕೊಡುತ್ತಿದ್ದರು. ಹೀಗಾಗಿ ಆಸ್ಟಿನ್ ರೀಡ್‌ನಿಂದ ಬ್ರಜ್‌ ಲಾಲ್ ಸೋವಿ ದರದ ಸೂಟ್'ಗಳನ್ನು ಕೊಂಡರು. ಆದರೆ ಒಪೆರಾ ಹ್ಯಾಟ್ ಮತ್ತು ಲೆದರ್ ಶೂಗಳನ್ನು ದುಬಾರಿ ಬೆಲೆ ತೆತ್ತೇ ಕೊಳ್ಳಬೇಕಾಯಿತು.

ಬ್ರಜ್ ಕುಮಾರ್ ತಾಯಿಯ ಕಡೆಯವರು ಸಾಂಸ್ಕೃತಿಕವಾಗಿ ಹೆಚ್ಚು ಭಾರತೀಯರಾಗಿದ್ದರು, ಆದರೆ ರಾಜಕೀಯವಾಗಿ ಆಡಳಿತದ ಪರ ಇದ್ದರು. ಅವರ ಪೂರ್ವಜರಾದ ಪಂಡಿತ್ ಗಂಗಾ ರಾಮ್ ಎಂಬವರು ಕಾಶ್ಮೀರಿ ಪುರೋಹಿತರಾಗಿದ್ದರು. ಅವರು ಪಂಜಾಬ್‌ನ ಮಹಾರಾಜ ರಣಜಿತ್ ಸಿಂಗ್ ಅವರ ಸೇವೆಗಾಗಿ ಲಾಹೋರ್‌ನಲ್ಲಿ ಉಳಿದುಕೊಂಡಿದ್ದರು.

1813ರಲ್ಲಿ ಅವರಿಗೆ ರಾಜರು ಜಹಗೀರು ಬರೆದುಕೊಟ್ಟಿದ್ದರು. ಬ್ರಜ್ ಕುಮಾರ್ ಅವರ ತಾಯಿಯ ತಾತ ಲಾಹೋರ್‌ನಲ್ಲಿ ಬಹಳ ಪ್ರಸಿದ್ಧ ವ್ಯಕ್ತಿ. ಬ್ರಜ್ ಕುಮಾರ್ ಅವರ ತಂದೆ ಮತ್ತು ತಾಯಿ 1902ರಲ್ಲಿ ಮದುವೆಯಾದಾಗ ಅವರಿಗೆ ಕ್ರಮವಾಗಿ 18 ಮತ್ತು 15 ವರ್ಷ ವಯಸ್ಸು.

771

ದಿವಾನ್ ನರೇಂದ್ರನಾಥರನ್ನು ಭಾಯಿಜಾನ್‌ಜೀ ಎಂದೇ ಎಲ್ಲರೂ ಕರೆಯುತ್ತಿದ್ದರು. ಅಂದರೆ ಅಣ್ಣ ಎಂದರ್ಥ. ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ಪಂಡಿತರು. ಕುರಾನನ್ನು ಎಷ್ಟು ಚೆನ್ನಾಗಿ ಓದಿಕೊಂಡಿದ್ದರೋ ಅಷ್ಟೇ ಚೆನ್ನಾಗಿ ಸಂಸ್ಕ ತದ ಧಾರ್ಮಿಕ ಗ್ರಂಥಗಳನ್ನೂ ಓದಿಕೊಂಡಿದ್ದರು. ಅವರಿಗೆ ಇಂಗ್ಲಿಷ್ ಚೆನ್ನಾಗಿ ಗೊತ್ತಿತ್ತು. ಲಾಹೋರ್‌ನ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು.

ಪಂಜಾಬ್‌ನ ಭೂಮಾಲೀಕರ ಪ್ರತಿನಿಧಿಯಾಗಿ 1930 ಮತ್ತು 1931ರಲ್ಲಿ ದುಂಡು ಮೇಜಿನ ಸಭೆಗೆ ಲಂಡನ್ನಿಗೆ ಹೋಗಿದ್ದರು. ಪಂಜಾಬಿನ ಶ್ರೀಮಂತರು ಬ್ರಿಟಿಷ್ ಅಧಿಕಾರಶಾಹಿಯ ಪರವಾಗಿಯೇ ಇದ್ದಿರಬಹುದು, ಆದರೆ ಅವರು ಬ್ರಿಟಿಷರ ಮುಂದೆ ತಲೆಯೆತ್ತಿ ಮಾತನಾಡು ತ್ತಿದ್ದರು. ಭಾರತದ ರಾಜರ ವಿಷಯದಲ್ಲಿ ಇದು ಯಾವಾಗಲೂ ನಿಜವಾಗಿರಲಿಲ್ಲ. ‌

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಬ್ರಜ್ ಕುಮಾರ್ ಅವರ ಪ್ರೊಫೆಸರ್ ಆಗಿದ್ದ ಹರೋಲ್ಡ್ ಲಸ್ಕಿ ಎಂಬವರು ಆ ಕಾಲಕ್ಕೆ ಸಂಬಂಧಿಸಿದ ಒಂದು ದಂತಕತೆ ಹೇಳಿದ್ದರಂತೆ. ಅದು ಆವತ್ತಿನ ಸಂದರ್ಭವನ್ನು ಚೆನ್ನಾಗಿ ಅರ್ಥ ಮಾಡಿಸುವಂತಿದೆ ದರ್ಭಾಂಗದ ಮಹಾ ರಾಜರು ಒಮ್ಮೆ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ಪ್ರಧಾನಿ ರಾಮ್‌ಸೆ ಮೆಕ್‌ ಡೊನಾಲ್ಡ್ ಅವರು ಮಹಾರಾಜರ ಬಲಬದಿಯಲ್ಲಿ ಹಾಗೂ ಲಸ್ಕಿಯವರು ಎಡಬದಿಯಲ್ಲಿ ಕುಳಿತಿದ್ದರು.

ಮಹಾರಾಜರು ಆ ಔತಣದಲ್ಲಿ ಆಡಿದ ಒಂದೇ ಒಂದು ಮಾತೆಂದರೆ ‘ನಿಮಗೆ ಊಟ ಇಷ್ಟ ವಾಗುತ್ತದೆ ಎಂದು ಭಾವಿಸಿದ್ದೇನೆ.’ ಬ್ರಿಟಿಷ್ವ ಸಾಹತುಶಾಹಿಗೆ ಭಾರತದಿಂದ ಬೇಕಿದ್ದುದು ಅಷ್ಟೆ. ಬಿಕೆ ನೆಹರೂ ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳನ್ನು ತಾಯಿಯಿಂದ ಕಲಿತಿದ್ದರು. ಅತಿ ದೊಡ್ಡ ಪಾಪದ ಕೆಲಸವೆಂದರೆ ಸುಳ್ಳು ಹೇಳುವುದು ಎಂದು ಆ ತಾಯಿ ತನ್ನ ಮಗನಿಗೆ ಕಲಿಸಿದ್ದರು.

ಗೌರವದ ಅತ್ಯುತ್ತಮ ವ್ಯಾಖ್ಯಾನವೆಂದರೆ ತುಳಸೀದಾಸರ ರಾಮಚರಿತ ಮಾನಸದಲ್ಲಿ ಹೇಳಿದ ರಘುಕುಲ ತಿಲಕನ ಬದುಕಿನ ರೀತಿಯೆಂದೂ, ‘ಪ್ರಾಣ ಜಾಯೇ ಪರ್ ವಚನ್ ನ ಜಾಯೇ (ಜೀವ ಹೋದರೂ ಮಾತು ಉಳಿಸಿಕೊಳ್ಳಬೇಕು) ಎಂಬಂತೆ ಬದುಕಬೇಕೆಂದೂ ಹೇಳಿಕೊಟ್ಟಿದ್ದರು.

1925ರಲ್ಲಿ ಅವರ ಉಪನಯನ ಸಮಾರಂಭ ಅದ್ಧೂರಿಯಾಗಿ, ಬಹಳ ದೀರ್ಘವಾಗಿ ನಡೆದಿತ್ತು. ದೂರದ ಊರುಗಳಿಂದ ಎಲ್ಲಾ ಸಂಬಂಧಿಕರು ಬಂದಿದ್ದರು. ರಂಗೂನ್‌ನಿಂದ ಸಲೇಹ್ ತ್ಯಾಬ್ಜಿ ಆಗಮಿಸಿದ್ದರು. ಇಡೀ ದಿನ ಪೂಜೆಗಳು ನಡೆದಿದ್ದವು. ‘ಬರದಾರಿ ಔತಣ’ ಅದಕ್ಕಿಂತ ದೀರ್ಘವಾಗಿ ನಡೆದಿತ್ತು. ಪುರೋಹಿತರು ಬಿಕೆ ನೆಹರೂ ಕಿವಿಯಲ್ಲಿ ಗಾಯತ್ರಿ ಮಂತ್ರವನ್ನು ರಹಸ್ಯವಾಗಿ ಉಪದೇಶಿಸಿ, ಅದನ್ನು ಯಾವುದೇ ಕಾರಣಕ್ಕೂ ಮಹಿಳೆಯರ ಅಥವಾ ಬೇರೆ ಜಾತಿಯವರ ಮುಂದೆ ಹೇಳಬಾರದೆಂದು ಸೂಚಿಸಿದ್ದರು.

ಮರುದಿನವೇ ಅವರಲ್ಲಿದ್ದ ಮೂರ್ತಿಭಂಜಕನು ಜನಿವಾರದ ಬ್ರಹ್ಮಗಂಟನ್ನು ಕತ್ತರಿಸಿ ಜಾತಿ ಹಿರಿಮೆಯಿಂದ ಮುಕ್ತಿ ಹೊಂದಿದ್ದನು. 10ರಿಂದ 16ನೇ ವರ್ಷದ ನಡುವೆ ಬಿಜ್ಜುಗೆ ಅವನ ತಂದೆಯವರು ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಕೊಳ್ಳುವಾಗ ಸಾಕಷ್ಟು ವಿದ್ಯೆಗಳನ್ನು ಹೇಳಿಕೊಟ್ಟಿದ್ದರು. ಪುಟ್ಟ ಕನ್ನಡಿಯ ಮುಂದೆ ಎರಡು ಬೌಲ್‌ಗಳಲ್ಲಿ ಬಿಸಿ ನೀರು ಇರಿಸಿಕೊಂಡು ಬಹಳ ದೀರ್ಘವಾಗಿ ಶೇವಿಂಗ್ ಕಾರ್ಯಕ್ರಮ ನಡೆಯುತ್ತಿತ್ತು.

ಬಾಹ್ಯಾಕಾಶದ ಅಟ್ಲಾಸ್, ರೇಖಾಗಣಿತ, ಬೀಜಗಣಿತ, ಸಾಮಾನ್ಯ ಗಣಿತ, ಟ್ರಿಗ್ನಾಮೆಟ್ರಿ, ಡೈನಾಮಿಕ್ಸ್, 19ನೇ ಶತಮಾನದ ಇಂಗ್ಲಿಷ್ ಕವಿಗಳು, ಕಾದಂಬರಿಗಳು, ಪಾಣಿನಿಯ ಸೂತ್ರಗಳು, ಹಿತೋಪದೇಶ, ಕಾಳಿದಾಸನ ರಘುವಂಶ, ಲ್ಯಾಟಿನ್, ಫ್ರೆಂಚ್, ಪರ್ಷಿಯನ್, ದಿವಾನ್ ಇ ಹಫೀಜ್ ಇವೆಲ್ಲವನ್ನೂ ಬಿಜ್ಜುಗೆ ಕಲಿಸಿದ್ದು ತಂದೆಯವರೇ. ಆ ಕಾಲದ ಶಿಕ್ಷಣವೆಂದರೆ ಹೀಗೇ ಇರುತ್ತಿತ್ತು.

ಲೇಖಕರ ಪ್ರಕಾರ, ಹಿಂದೂಗಳು ಉರ್ದು ಕಲಿಯುವುದನ್ನು ನಿಲ್ಲಿಸಿದ್ದು ಮುಸ್ಲಿಂ ಲೀಗ್ ಬಂದ ನಂತರ. ಅದೊಂದು ಮೂರ್ಖತನದ ನಡೆ. ಭಾರತೀಯ ಮುಸ್ಲಿಮರ ಭಾಷೆಯಾಗಿ ಉರ್ದು ಬಳಕೆಯಾಗಲಿದೆ ಎಂದು ಭಾವಿಸಿ ಹಿಂದೂಗಳು ಉರ್ದುವನ್ನು ತ್ಯಜಿಸಿದ್ದರು. ಅವರು ಬಂಗಾಳಿ ಅಥವಾ ತಮಿಳು ಅಥವಾ ಮಲಯಾಳಿ ಮುಸ್ಲಿಮರ ಬಗ್ಗೆ ಯೋಚಿಸಲೇ ಇಲ್ಲ. ಭಾಷೆ ಕೂಡ ಸಂಸ್ಕೃತಿಯಂತೆ ಯಾವುದೇ ಧರ್ಮಕ್ಕಿಂತ ಹಳೆಯದು.

ಬಿಕೆ ನೆಹರೂ ಅವರ ತಾಯಿ ಸಮಾಜ ಸುಧಾರಕಿಯಾಗಿದ್ದರು. ಅಲಹಾಬಾದ್‌ಗೆ ಅವರು ಹೊಸ ಪ್ರತಿಭೆ ಹಾಗೂ ಸ್ಪೂರ್ತಿಯನ್ನು ಪರಿಚಯಿಸಿದ್ದರು. ಆಕೆ ಕೆಲ ಕಾಲ ಮಹಿಳೆಯ ಹಿಂದಿ ನಿಯತಕಾಲಿಕೆ ‘ಸ್ತ್ರೀ ದರ್ಪಣ’ದ ಸಂಪಾದಕಿಯಾಗಿದ್ದರು. ಮದನ ಮೋಹನರ ಹಿರಿಯ ಮಗ ರಮಾಕಾಂತ ಮಾಳವೀಯರು ಆಕೆಗೆ ಸಹಾಯ ಮಾಡುತ್ತಿದ್ದರು.

ಮಾಳವೀಯರು ಅವರ ಕುಟುಂಬದ ಆಪ್ತ ಸ್ನೇಹಿತರಾಗಿದ್ದರು. ಆದರೆ ಜಾತಿಯ ಕಾರಣಕ್ಕೆ ಅವರು ಕಾಶ್ಮೀರಿ ಪಂಡಿತರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಬ್ರಿಟಿಷ್ ರಿವಾಜು ಗಳಲ್ಲಿದ್ದ ಒಳ್ಳೆಯ ಆಚರಣೆಗಳೆಲ್ಲ ಅವರ ವ್ಯವಹಾರಗಳಲ್ಲಿ ಸೇರ್ಪಡೆಯಾಗಿದ್ದವು.

ಉದಾಹರಣೆಗೆ, ಅಲಹಾಬಾದ್ ಯೂನಿವರ್ಸಿಟಿ ಯೂನಿಯನ್‌ನಲ್ಲಿ ಚುನಾಯಿತ ಪ್ರತಿನಿಧಿಯಿದ್ದರೆ ಬಿಜ್ಜು ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಏಕೆಂದರೆ ಆಕ್ ಬ್ರಿಜ್‌ನಲ್ಲಿ ಅಂತಹ ಸಂಪ್ರದಾಯವಿತ್ತು. ಅರ್ಧಶತಮಾನದ ಬಳಿಕ ಆಕ್ಸ್ʼಫರ್ಡ್ ಯೂನಿಯನ್‌ಗೆ ಆಯ್ಕೆಯಾದ ಖುಷಿಗೆ ಬೆನಜೀರ್ ಭುಟ್ಟೋ ಅವರು ಸ್ನೇಹಿತರಿಗೆ ಪಾರ್ಟಿ ನೀಡಿದ ಕಾರಣಕ್ಕೆ ಹೆಚ್ಚುಕಮ್ಮಿ ಸದಸ್ಯತ್ವ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದರು ಎಂದು ಅವರು ಬರೆಯುತ್ತಾರೆ.

1930ರಲ್ಲಿ ಬ್ರಜ್ ಕುಮಾರ್ ಜೊತೆಗೆ ಓದುತ್ತಿದ್ದ ಹಂಗೇರಿಯ ಯಹೂದಿ ಯುವತಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಾಗ ಇನ್ನಷ್ಟು ಕುತೂಹಲಕರ ಘಟನೆಗಳು ನಡೆದವು. ಅವಳ ಹೆಸರು ಫೋರಿ. ಬಿಕೆಯ ತಾಯಿಗಿಂತ ಹೆಚ್ಚಾಗಿ ತಂದೆಯೇ ಆ ಪ್ರೀತಿಯನ್ನು ಹೆಚ್ಚು ವಿರೋಧಿಸಿ ದ್ದರು. ಅವರನ್ನು ಒಪ್ಪಿಸಲು ಹಲವು ವರ್ಷಗಳ ಕಾಲ ‘ರಾಜತಾಂತ್ರಿಕ ಮಾತು ಕತೆ’ಯನ್ನೇ ನಡೆಸಬೇಕಾಯಿತು. ಆದರೆ ನಂತರ ಬಂದಿದ್ದು ಹಿಂದೆಂದೂ ಯೋಚನೆ ಮಾಡಿರದಿದ್ದ ಸಮಸ್ಯೆ. ಮದುವೆಯನ್ನು ಯಾವ ಸಂಪ್ರದಾಯದಲ್ಲಿ ಮಾಡಬೇಕು? ವರನಾಗಲೀ, ವಧುವಾಗಲೀ ಧರ್ಮವನ್ನು ಬದಲಿಸುವ ಪ್ರಶ್ನೆಯೇ ಇರಲಿಲ್ಲ.

ದೇವರೇ ಸಮಸ್ಯೆಯಾದಾಗ ಗಾಂಧೀಜಿ ನೆರವಿಗೆ ಬಂದರು. ಹಿಂದೂ ಧರ್ಮದಲ್ಲಿ ಯಾವ ಆಚರಣೆಗೂ ಮತಾಂತರ ಅಗತ್ಯವಿಲ್ಲ. ಹಾಗಾಗಿ ಹಿಂದೂ ಧರ್ಮ ಪ್ರಕಾರವೇ ಮದುವೆ ಮಾಡಬಹುದು ಎಂದರು. ನಂತರ 18942ರಲ್ಲಿ ನಡೆದ ಇದಕ್ಕಿಂತ ಹೆಚ್ಚು ಪ್ರಸಿದ್ಧ ಮದುವೆ ಯಲ್ಲೂ ಇದೇ ಸೂತ್ರವನ್ನು ಅನುಸರಿಸಲಾಯಿತು. ಅದು ಜವಾಹರಲಾಲ್ ಮಗಳು ಇಂದಿರಾ ಮತ್ತು ಫೇರ್ ದೂನ್ ಜಹಾಂಗೀರ್ ಘ್ಯಾಂಡಿಯ ಮಗ ಫಿರೋಜ್‌ ಘ್ಯಾಂಡಿ ಮದುವೆ. ಗಾಂಧೀಜಿ ಮತ್ತೊಮ್ಮೆ ಅನಿರೀಕ್ಷಿತ ರಕ್ಷಕನಾಗಿದ್ದರು.

ಇತಿಹಾಸದ ಅತ್ಯಂತ ಕ್ರೂರ ಸನ್ನಿವೇಶಗಳನ್ನು ಒಳಗೊಂಡ ವಿಭಜನೆಯ ನೋವನ್ನು ಕೂಡ ಬಿಕೆ ನೆಹರೂ ಈ ಪುಸ್ತಕದಲ್ಲಿ ಬಣ್ಣಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಭೂಮಿ ಹಾಗೂ ಸಂಸ್ಕೃತಿಯನ್ನು ಬುದ್ಧಿವಂತಿಕೆ, ಜಾತ್ಯತೀತ ಸ್ಪೂರ್ತಿ ಮತ್ತು ತೀಕ್ಷ್ಣವಾದ ಕಣ್ಣುಗಳನ್ನು ಬಳಸಿ ವಿಭಜನೆ ಮಾಡಲಾಗಿತ್ತು. ಅವರ ತಲೆಮಾರಿನ ಯುವಕರ ಕನಸು ಗಳನ್ನೆಲ್ಲ ಅದು ನುಚ್ಚುನೂರು ಮಾಡಿತ್ತು.

ದೇಶದ ವಿಭಜನೆಯ ಮೂಲಕ ಅಶಾಂತಿಯನ್ನು ಸೃಷ್ಟಿಸಿದ ವ್ಯಕ್ತಿ ಮೊಹಮ್ಮದ್ ಅಲಿ ಜಿನ್ನಾ. ಆತ ಒಬ್ಬ ರಾಜಕೀಯ ಮುಸ್ಲಿಂ ಆಗಿದ್ದರೇ ಹೊರತು ಇಸ್ಲಾಂ ಧರ್ಮವನ್ನು ಯಾವತ್ತೂ ನಂಬಿರಲಿಲ್ಲ. ಇಸ್ಲಾಂ ಬಗ್ಗೆ ಅವರಿಗೆ ಏನೂ ಗೊತ್ತಿರಲಿಲ್ಲ. ಒಂದು ಪುಟ್ಟ ಕತೆಯಲ್ಲಿ ಅವರ ಬಗ್ಗೆ ಬಹಳ ತಿಳಿದುಕೊಳ್ಳಬಹುದು.

ಒಮ್ಮೆ ಜಿನ್ನಾ ಅವರು ಸರ್ ತೇಜ್ ಬಹಾದೂರ್ ಸಪ್ರು ಜೊತೆ ಹಡಗಿನಲ್ಲಿ ಇಂಗ್ಲೆಂಡಿಗೆ ಪ್ರಯಾಣಿಸುತ್ತಿದ್ದರಂತೆ. ಎಂದಿನಂತೆ ಈಜಿಪ್ಟ್‌ನಲ್ಲಿ ಹಡಗು ನಿಂತಿತ್ತು. ಇಬ್ಬರೂ ಪಿರಾ ಮಿಡ್ ನೋಡಲು ಹೋದರು. ಅಲ್ಲಿದ್ದವರು ‘ನೀವು ಮುಸ್ಲಿಮರಾ’ ಎಂದು ಕೇಳಿದರು. ಇಬ್ಬರೂ ಹೌದು ಅಂದರು. ತೇಜ್ ಬಹಾದೂರ್ ಅವರು ತಮಾಷೆಗೆ ‘ಜಿನ್ನಾ ಸುಳ್ಳು ಹೇಳುತ್ತಿದ್ದಾರೆ’ ಅಂದರು. ನಂತರ ತಾನು ಮುಸ್ಲಿಂ ಎಂಬುದನ್ನು ಸಾಬೀತುಪಡಿಸಲು ‘ಇರುವುದೊಬ್ಬನೇ ಅಲ್ಲಾ, ಅವನ ಪ್ರವಾದಿ ಮೊಹಮ್ಮದ್’ ಎಂದು ಸಾರುವ ಕಲ್ಮಿಯಾ ವನ್ನು ಪಠಿಸಿದರು. ಆದರೆ ಜಿನ್ನಾಗೆ ಕಲ್ಮಿಯಾ ಗೊತ್ತಿರಲಿಲ್ಲ. ‘ಇದು ಇತಿಹಾಸದ ಕಹಿ ಚೋದ್ಯಗಳಲ್ಲಿ ಒಂದು.

ಅಷ್ಟೊಂದು ಆಧುನಿಕ ವ್ಯಕ್ತಿಯಾಗಿದ್ದ, ತನ್ನದೇ ಧರ್ಮದ ನಿಯಮಗಳನ್ನು ಉಲ್ಲಂಘಿಸಿ ಜೀವಿತದ ಕೊನೆಯ ದಿನದವರೆಗೂ ವಿಸ್ಕಿ ಕುಡಿಯುತ್ತಾ, ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಮತ್ತು ಒಣಗಿಸಿ ಉಪ್ಪು ಸವರಿದ ಹಂದಿಯ ಮಾಂಸ ಸೇವಿಸುತ್ತಾ, ಪಾಕಿಸ್ತಾನದ ಗವರ್ನರ್ ಜನರಲ್ ಆಗಿ ಅಧಿಕಾರ ನಡೆಸಿದ ವ್ಯಕ್ತಿಯು ಇಸ್ಲಾಮಿಕ್ ಮೂಲಭೂತವಾದಿ ಸಿದ್ಧಾಂತಗಳ ಮೇಲೆಯೇ ಜನಿಸಿದ ರಾಜಕೀಯ ಪಕ್ಷದ ನಾಯಕನಾಗಿ ಅಧಿಕಾರ ಚಲಾಯಿಸುವುದು ತಮಾಷೆಯಲ್ಲವೇ’ ಎಂದು ಬಿಕೆ ನೆಹರೂ ಬರೆಯುತ್ತಾರೆ.

1948ರಲ್ಲಿ ಜಿನ್ನಾ ಶ್ವಾಸಕೋಶದ ಕಾಯಿಲೆಯಿಂದ ಸಾಯದೆ ಇದ್ದಿದ್ದರೆ ಪಾಕಿಸ್ತಾನದ ಮೂಲಭೂತವಾದಿ ಉಗ್ರರು ಹಂದಿ ಮಾಂಸದ ಕಾರಣಕ್ಕಾದರೂ ಖಂಡಿತ ಅವರನ್ನು ಕೊಲ್ಲುತ್ತಿದ್ದರು. ಬಿಕೆ ನೆಹರೂ ಅವರು ಆಂಗ್ಲೀಕರಣ ಹೊಂದಿದ ‘ವಿರುದ್ಧ ಸಿದ್ಧಾಂತಗಳ ಪ್ರವರ್ತಕ’ರಾದ ಜವಾಹರಲಾಲ್ ಮತ್ತು ಜಿನ್ನಾರನ್ನು ಪರಸ್ಪರ ಹೋಲಿಸಿ ನೋಡುತ್ತಾರೆ: ಜವಾಹರಲಾಲ್ ಅವರಂತೆಯೇ ಜಿನ್ನಾ ಕೂಡ ಸಾಂಸ್ಕೃತಿಕವಾಗಿ ಒಬ್ಬ ಇಂಗ್ಲಿಷ್ ಮನುಷ್ಯ. ಬಹುಶಃ ನೆಹರೂ ಅವರಂತೆ ಆತ ಕೂಡ ನಾಸ್ತಿಕ.

ಪಾಕಿಸ್ತಾನದ ಗವರ್ನರ್ ಜನರಲ್ ಆದ ಮೇಲೂ ಬೆಳಗಿನ ತಿಂಡಿಗೆ ಅವರು ಮೊಟ್ಟೆ ಮತ್ತು ಹಂದಿ ಮಾಂಸ ಸೇವಿಸುತ್ತಿದ್ದರು. ಸಂಜೆ ಸ್ಕಾಚ್ ಹೀರುತ್ತಿದ್ದರು. ಅಂತಹ ಮನುಷ್ಯನಿಗೆ ತನ್ನ ದೇಶದ ಭವಿಷ್ಯ ಏನಾಗುತ್ತದೆ ಎಂಬ ಯಾವುದೇ ಕಲ್ಪನೆ ಇದ್ದಿರಲಿಕ್ಕಿಲ್ಲ.

ಬಹುಶಃ ನೆಹರೂ ಅವರಿಗೂ ಅಂತಹ ಕಲ್ಪನೆ ಇದ್ದಿರಲಿಕ್ಕಿಲ್ಲ. ಏಕೆಂದರೆ ಇಬ್ಬರಿಗೂ ತಮ್ಮ ತಮ್ಮ ಅನುಯಾಯಿಗಳ ಸ್ವಭಾವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಭಾರತವು ನಾಗರಿಕ ರಾಷ್ಟ್ರದ ಕಲ್ಪನೆಯನ್ನು ಆಯ್ಕೆ ಮಾಡಿಕೊಂಡಿತು.

ಪಾಕಿಸ್ತಾನ ಇಸ್ಲಾಂ ಧರ್ಮವೊಂದೇ ಪರಿಶುದ್ಧ ಎಂದು ನಂಬುವ ಮೂಲಭೂತವಾದಿ ಸಿದ್ಧಾಂತವನ್ನು ಆಯ್ಕೆ ಮಾಡಿಕೊಂಡಿತು. ಆದ್ದರಿಂದಲೇ 1947ರಲ್ಲಿ ಪಾಕಿಸ್ತಾನದಲ್ಲಿದ್ದ ಹಿಂದೂಗಳನ್ನು ಜನಾಂಗೀಯ ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸುವುದನ್ನು ಅಲ್ಲಿನವರು ತಮ್ಮ ರಾಷ್ಟ್ರೀಯ ಕರ್ತವ್ಯ ಎಂಬಂತೆ ಭಾವಿಸಿದರು. ಆ ವಿಷಯದಲ್ಲೂ ಭಾಯಿಜಾನ್‌ಜೀ ಅದೃಷ್ಟವಂತರು. ಏಕೆಂದರೆ ಅವರು ದೇಶದ ವಿಭಜನೆ ನೋಡಲು ಬದುಕಿರಲಿಲ್ಲ.

ಪಂಜಾಬಿಗಳು ಪರಸ್ಪರರನ್ನು ಕೊಚ್ಚಿ ಕೊಂದುಕೊಳ್ಳಬಲ್ಲರು ಎಂದು ಅವರು ಕಲ್ಪನೆ ಕೂಡ ಮಾಡಿರಲಿಲ್ಲ. ಆದರೆ ಜಿನ್ನಾ ಇಕ್ಕಿದ ವಿಷ ಪಂಜಾಬಿಗಳ ಆತ್ಮಕ್ಕೇ ನಂಜು ತುಂಬಿತ್ತು. ಭಾಯಿಜಾನ್‌ಜೀ 1945ರಲ್ಲಿ ತೀರಿಹೋದರು. ಇಲ್ಲದಿದ್ದರೆ 1937ರಲ್ಲಿ ಎದೆ ಒಡೆದುಕೊಂಡು ಜೀವ ಬಿಡುತ್ತಿದ್ದರು. ಬಿಕೆ ನೆಹರೂ ಆ ದುರಂತವನ್ನು ಒಬ್ಬ ಮಾನವತಾ ವಾದಿಯ ತಾತ್ವಿಕ ಶಾಂತ ಸ್ವಭಾವದಲ್ಲಿ ವಿವರಿಸುತ್ತಾರೆ. ಅವರು ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲೀ ಧ್ವನಿ ಎತ್ತರಿಸಿದ್ದೇ ಇಲ್ಲ.

1950ರಲ್ಲಿ ಅವರನ್ನು ವಾಷಿಂಗ್ಟನ್‌ಗೆ ವರ್ಗಾವಣೆ ಮಾಡಲಾಗಿತ್ತು. ಆ ವರ್ಷವೇ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ತಮ್ಮ ಮೊದಲ ಅಮೆರಿಕಾ ಭೇಟಿಗಾಗಿ ಆಗಮಿಸಿದ್ದರು. ಅವರ ಜೊತೆಗೆ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಇಕ್ರಾಮುಲ್ಲಾ ಮತ್ತು ಗುಲಾಮ್ ಅಹ್ಮದ್ ಕೂಡ ಬಂದಿದ್ದರು. ಅವರಿಬ್ಬರೂ ಬಿಕೆ ನೆಹರೂಗೆ ಹಳೆಯ ಸ್ನೇಹಿತರು. ಗುಲಾಮ್ ಅಹ್ಮದ್ ಅವರು ಕುಖ್ಯಾತ ಹಿಂದೂ ದ್ವೇಷಿ ಅಜೀಜ್ ಅಹ್ಮದ್‌ನ ಸಹೋದರ. ಇಬ್ಬರನ್ನೂ ಬಿಕೆ ನೆಹರೂ ‘ಗುಂಡು ಹಾಕಲು’ ಆಹ್ವಾನಿಸಿದರು.

ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಮದ್ಯ ಗುಲಾಮ್ ಅಹ್ಮದ್‌ರ ನಾಲಿಗೆಯನ್ನು ಸಡಿಲಗೊಳಿಸಿತ್ತು. ಅವರು ಬಿಕೆ ನೆಹರೂಗ ಭಯಾನಕ ಸಲಹೆಯೊಂದನ್ನು ನೀಡಿದ್ದರು. ‘ಭಾರತದಲ್ಲಿರುವ ನಾಲ್ಕು ಕೋಟಿ ಮುಸ್ಲಿಮರನ್ನು ನೀವು ನಿಭಾಯಿಸಬೇಕು ಅಂದರೆ ಒಂದಷ್ಟು ಮುಸ್ಲಿಮರನ್ನು ಕೊಲ್ಲಿ, ಇನ್ನೊಂದಷ್ಟು ಜನರನ್ನು ಅಲ್ಲಿಂದ ಓಡಿಸಿ, ಉಳಿದವ ರನ್ನು ಮತಾಂತರ ಮಾಡಿ. ಪಾಕಿಸ್ತಾನದಲ್ಲಿ ಉಳಿದುಕೊಂಡ ಹಿಂದೂಗಳಿಗೆ ನಾವು ಮಾಡಿದ್ದು ಇದನ್ನೇ!’ ಭಾರತೀಯರಿಗೆ ಭಾರತೀಯರನ್ನು ಕೊಲ್ಲುವುದು ಯಾವತ್ತೂ ಬೇಕಿರಲಿಲ್ಲ. ಆದರೆ ಪಾಕಿಸ್ತಾನೀಯರಿಗೆ 1947ರ ಜನಾಂಗೀಯ ಹತ್ಯೆ ಕೂಡ ಸಾಕಾಗಲಿಲ್ಲ.

1971ರಲ್ಲಿ ಮತ್ತೊಮ್ಮೆ ಅದನ್ನೇ ಮಾಡಿ ದೇಶದಲ್ಲಿದ್ದ ಲಕ್ಷಾಂತರ ಹಿಂದೂ ಮತ್ತು ಮುಸ್ಲಿಮರನ್ನು ಕೊಂದರು. ಆ ನರಮೇಧವು ಬಾಂಗ್ಲಾದೇಶದ ಜನನಕ್ಕೆ ಕಾರಣವಾಯಿತು. ಪಾಕಿಸ್ತಾನವೆಂಬ ದೇಶ ಮರಣ ಹೊಂದಿದ್ದು ಕೂಡ 1971ರಲ್ಲೇ.