Roopa Gururaj Column: ಪಂಚತಂತ್ರ, ಹಿತೋಪದೇಶ, ವಿಕ್ರಮ ಕಥೆಗಳ ಪ್ರೇರಣೆ ಕಥಾಸರಿತ್ಸಾಗರ
ಗುಣಾಢ್ಯನ ಶಿಷ್ಯರಾದ ಗುಣದೇವ ಮತ್ತು ನಂದಿದೇವರಿಂದ ಕಥೆಯ ಸಂಪೂರ್ಣ ರಹಸ್ಯವನ್ನು ಕಲಿತ ಸಾತವಾಹನ ರಾಜನು, ಆ ಕೃತಿಯನ್ನು ಕೇವಲ ತನ್ನ ಆಸ್ಥಾನದ ಗ್ರಂಥಾಲಯಕ್ಕೆ ಸೀಮಿತಗೊಳಿಸಲಿಲ್ಲ. ಪೈಶಾಚೀ ಭಾಷೆಯಲ್ಲಿದ್ದ ಆ ಗ್ರಂಥವನ್ನು ವಿದ್ವಾಂಸರ ಮೂಲಕ ನಾಡಿನಾದ್ಯಂತ ಪಸರಿಸುವಂತೆ ಮಾಡಿದನು. ಆ ಮೂಲ ಗ್ರಂಥದಲ್ಲಿ ಆರಂಭವಾಗುವ ಮುಖ್ಯ ಕಥಾನಾಯಕನೇ ‘ನರವಾಹನದತ್ತ’.
-
ಒಂದೊಳ್ಳೆ ಮಾತು
‘ಕಥಾಸರಿತ್ಸಾಗರ’ದ ಕಥಾಪೀಠ ಮುಗಿದು ಮುಖ್ಯ ಕಥೆಗೆ ಕಾಲಿಡುವ ಸಂಧಿಕಾಲದಲ್ಲಿ, ಸಾಹಿತ್ಯ ಮತ್ತು ಪುರಾಣ ಎರಡರಲ್ಲೂ ಒಂದು ಅಪೂರ್ವವಾದ ಸಾಂಸ್ಕೃತಿಕ ಪರಂಪರೆ ತೆರೆದುಕೊಳ್ಳುತ್ತದೆ. ರಾಜ ಸಾತವಾಹನನು ಉಳಿದ ಒಂದು ಲಕ್ಷ ಶ್ಲೋಕಗಳ ‘ಬೃಹತ್ಕಥೆ’ಯನ್ನು ಲೋಕಕ್ಕೆ ತಂದ ನಂತರ, ಆ ಕಥಾನಿಧಿ ಕಾಲದ ಹೊಡೆತವನ್ನು ದಾಟಿ ಹೇಗೆ ಜಗತ್ತಿನ ಕಥಾಸಾಗರವಾಯಿತು ಎಂಬ ವಿವರವೇ ಒಂದು ರೋಚಕ ಸತ್ಯ.
ಗುಣಾಢ್ಯನ ಶಿಷ್ಯರಾದ ಗುಣದೇವ ಮತ್ತು ನಂದಿದೇವರಿಂದ ಕಥೆಯ ಸಂಪೂರ್ಣ ರಹಸ್ಯವನ್ನು ಕಲಿತ ಸಾತವಾಹನ ರಾಜನು, ಆ ಕೃತಿಯನ್ನು ಕೇವಲ ತನ್ನ ಆಸ್ಥಾನದ ಗ್ರಂಥಾಲಯಕ್ಕೆ ಸೀಮಿತ ಗೊಳಿಸಲಿಲ್ಲ. ಪೈಶಾಚೀ ಭಾಷೆಯಲ್ಲಿದ್ದ ಆ ಗ್ರಂಥವನ್ನು ವಿದ್ವಾಂಸರ ಮೂಲಕ ನಾಡಿನಾದ್ಯಂತ ಪಸರಿಸುವಂತೆ ಮಾಡಿದನು. ಆ ಮೂಲ ಗ್ರಂಥದಲ್ಲಿ ಆರಂಭವಾಗುವ ಮುಖ್ಯ ಕಥಾನಾಯಕನೇ ‘ನರವಾಹನದತ್ತ’.
ವತ್ಸ ದೇಶದ ಪ್ರಸಿದ್ಧ ದೊರೆ ಉದಯನ ಮತ್ತು ರಾಣಿ ವಾಸವದತ್ತೆಯರ ಮಗನಾದ ಈತ, ಹೇಗೆ ತನ್ನ ಶೌರ್ಯ, ಬುದ್ಧಿವಂತಿಕೆ ಹಾಗೂ ಸದ್ಗುಣಗಳಿಂದ ವಿದ್ಯೆಯಲ್ಲೂ ಸಾಹಸದಲ್ಲೂ ಪಾರಂಗತ ನಾಗಿ, ಇಡೀ ‘ವಿದ್ಯಾಧರ’ರ (ಪೌರಾಣಿಕ ಅತಿಮಾನುಷ ಶಕ್ತಿಯುಳ್ಳ ಜೀವಿಗಳು) ಚಕ್ರವರ್ತಿಯಾದ ಎಂಬುದು ಕಥೆಯ ಮುಖ್ಯ ಹಂದರ. ಆದರೆ ಈ ಮುಖ್ಯ ಕಥೆಯ ಜೊತೆಜೊತೆಗೆ ಸಾಗುವ ಉಪಕಥೆಗಳೇ ವಿಶ್ವದ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾದವು.
ಇದನ್ನೂ ಓದಿ: Roopa Gururaj Column: ಕಥಾಸರಿತ್ಸಾಗರ: ಸಾತವಾಹನ ರಾಜನ ಪಶ್ಚಾತ್ತಾಪ
ಮನುಷ್ಯನ ಪ್ರೀತಿ, ವಂಚನೆ, ತ್ಯಾಗ, ಧೈರ್ಯ, ಮಂತ್ರವಾದಿಗಳು, ಬುದ್ಧಿವಂತ ಹೆಣ್ಣುಮಕ್ಕಳು, ಪಶುಪಕ್ಷಿ ಗಳ ನೀತಿಕಥೆಗಳು- ಹೀಗೆ ಬದುಕಿನ ಪ್ರತಿಯೊಂದು ಆಯಾಮವೂ ಅದರಲ್ಲಿ ಹಾಸು ಹೊಕ್ಕಾಗಿತ್ತು. ದುರದೃಷ್ಟವಶಾತ್, ಶತಮಾನಗಳು ಉರುಳಿದಂತೆ ತಾಳೆಗರಿಗಳಲ್ಲಿದ್ದ ಆ ಮೂಲ ಪೈಶಾಚೀ ಭಾಷೆಯ ‘ಬೃಹತ್ಕಥೆ’ ಕಾಲದ ಪ್ರವಾಹದಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು. ಆದರೆ ಸತ್ಯ ಮತ್ತು ಸತ್ವ ಎಂದಿಗೂ ಶಾಶ್ವತವಾಗಿ ಅಳಿಸಿಹೋಗುವುದಿಲ್ಲ.
ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದ ರಾಜ ಅನಂತನ ಪತ್ನಿಯಾದ ರಾಣಿ ಸೂರ್ಯ ಮತಿಯು ತೀವ್ರವಾದ ರಾಜಕೀಯ ಅಸ್ಥಿರತೆ ಮತ್ತು ಕುಟುಂಬ ಕಲಹಗಳಿಂದಾಗಿ ಅಪಾರ ಮನೋವೇದನೆ ಅನುಭವಿಸುತ್ತಿದ್ದಳು. ಆಕೆಯ ಹಿರಿಯ ಮಗ ಕಲಶನು ದುರ್ವರ್ತನೆಗೆ ಇಳಿದು, ತಂದೆ-ತಾಯಿಗಳ ವಿರುದ್ಧವೇ ದಂಗೆಯೆದ್ದು ಅಧಿಕಾರ ಕಸಿದುಕೊಂಡಿದ್ದನು. ಈ ಅಧಿಕಾರ ದಾಹ ಮತ್ತು ಅರಮನೆಯ ಒಳಸಂಚುಗಳಿಂದಾಗಿ ರಾಜ ಅನಂತ ಹಾಗೂ ಮಗ ಕಲಶನ ನಡುವೆ ತೀವ್ರ ವೈರತ್ವ ಉಂಟಾಗಿ, ರಾಜ್ಯದಲ್ಲಿ ರಕ್ತಪಾತ ಮತ್ತು ಅಶಾಂತಿ ತಾಂಡವವಾಡತೊಡಗಿತು.
ಮಗನ ಅವಿಧೇಯತೆ ಹಾಗೂ ಪತಿಯ ಅಸಹಾಯಕತೆಯನ್ನು ಕಂಡ ರಾಣಿಯು ತೀವ್ರ ಮಾನಸಿಕ ಖಿನ್ನತೆ ಮತ್ತು ದುಃಖಕ್ಕೆ ಜಾರಿದ್ದಳು. ಆಕೆಯ ಈ ಕಳವಳ ಮತ್ತು ನೊಂದ ಮನಸ್ಸಿಗೆ ಸಾಂತ್ವನ ನೀಡಿ, ನೆಮ್ಮದಿ ತರಲೆಂದೇ ಆಸ್ಥಾನ ಕವಿ ಸೋಮದೇವನು ಪೈಶಾಚೀ ಭಾಷೆಯಲ್ಲಿದ್ದ ಆ ಅಮೂಲ್ಯ ಕಥಾರತ್ನಗಳನ್ನು ಸಂಸ್ಕೃತದ ಇಪ್ಪತ್ತೆರಡು ಸಾವಿರ ಲಲಿತ ಶ್ಲೋಕಗಳಲ್ಲಿ ಪೋಣಿಸಿ ‘ಕಥಾ ಸರಿತ್ಸಾಗರ’ (ಕಥೆಗಳೆಂಬ ನದಿಗಳು ಬಂದು ಸೇರುವ ಸಾಗರ) ಎಂದು ಮರುಸೃಷ್ಟಿಸಿದನು.
ಅತ್ತ ಅದೇ ಕಾಲದ ಕಾಶ್ಮೀರದ ಇನ್ನೊಬ್ಬ ವಿದ್ವಾಂಸ ಕ್ಷೇಮೇಂದ್ರನು ‘ಬೃಹತ್ಕಥಾಮಂಜರಿ’ ಯನ್ನೂ, ಬುಧಸ್ವಾಮಿಯು ‘ಬೃಹತ್ಕಥಾಶ್ಲೋಕಸಂಗ್ರಹ’ವನ್ನೂ ಬರೆದು ಆ ಪರಂಪರೆಯನ್ನು ಜೀವಂತವಾಗಿ ಟ್ಟರು. ಪರಿಣಾಮವಾಗಿ, ಕಾಡಿನಲ್ಲಿ ರಕ್ತದಿಂದ ಬರೆದ ಆ ಕಥೆಗಳು ಮುಂದೆ ಭಾರತದ ‘ಪಂಚತಂತ್ರ’, ‘ಹಿತೋಪದೇಶ’, ‘ವಿಕ್ರಮ-ಬೇತಾಳ’ ಕಥೆಗಳಿಗೂ, ಅತ್ತ ಅರಬ್ಬಿನ ‘ಆಲಫ್ ಲೈಲಾ’ (ಅರೇಬಿಯನ್ ನೈಟ್ಸ್) ನಂತಹ ಜಗದ್ವಿಖ್ಯಾತ ಕಥಾಸಂಚಯಗಳಿಗೂ ಜೀವಾಳವಾದವು.
ಒಂದು ನಿಸ್ವಾರ್ಥ ಶ್ರಮ ಮತ್ತು ಸತ್ಯವಾದ ಸೃಜನಶೀಲತೆ ಎಂದಿಗೂ ವ್ಯರ್ಥವಾಗುವುದಿಲ್ಲ. ಗುಣಾಢ್ಯನು ರಕ್ತ ಸುರಿಸಿ ಬರೆದಾಗ ಆರು ಲಕ್ಷ ಶ್ಲೋಕಗಳು ಸುಟ್ಟುಹೋದವು; ಉಳಿದ ಆ ಒಂದು ಲಕ್ಷ ಶ್ಲೋಕಗಳ ಮೂಲ ಪ್ರತಿಯೂ ಕಾಲಕ್ರಮೇಣ ನಷ್ಟವಾಯಿತು. ಆದರೂ ಆ ಕಥೆಗಳು ಸಾಯಲಿಲ್ಲ. ಏಕೆಂದರೆ ಆ ಕೃತಿಯಲ್ಲಿ ಶುದ್ಧ ಪ್ರತಿಭೆ ಮತ್ತು ಜ್ಞಾನದ ಅಂತಃಸತ್ವವಿತ್ತು.
ಯಾರೋ ಒಬ್ಬರು ಮಾಡಿದ ಪ್ರಾಮಾಣಿಕ ಕೆಲಸವನ್ನು ಕಾಲವು ಮತ್ತೊಬ್ಬರ ಕೈಯಿಂದ ಎತ್ತಿ ಹಿಡಿಸು ತ್ತದೆ; ಸೋಮದೇವ, ಕ್ಷೇಮೇಂದ್ರರ ರೂಪದಲ್ಲಿ ಹೊಸ ಜೀವ ತಂದುಕೊಡುತ್ತದೆ. ನಮ್ಮ ಬದುಕಿನಲ್ಲೂ ಅಷ್ಟೇ; ನಾವು ಮಾಡುವ ಒಳ್ಳೆಯ ಕೆಲಸಗಳು, ಸಮಾಜಕ್ಕೆ ನೀಡುವ ನಿಸ್ವಾರ್ಥ ಕೊಡುಗೆಗಳು ಅಥವಾ ಸಂಬಂಧಗಳಲ್ಲಿ ತೋರುವ ಪ್ರಾಮಾಣಿಕ ಪ್ರೀತಿ ಕೆಲವೊಮ್ಮೆ ತಾತ್ಕಾಲಿಕ ವಾಗಿ ಕಡೆಗಣಿಸಲ್ಪಡಬಹುದು ಅಥವಾ ಕಳೆದುಹೋದಂತೆ ಕಾಣಬಹುದು. ಆದರೆ ಆಂತರಿಕ ಮೌಲ್ಯವಿರುವ ಯಾವುದೂ ಬೂದಿ ಯಾಗುವುದಿಲ್ಲ. ಫಲಿತಾಂಶದ ಚಿಂತೆಯಿಲ್ಲದೆ ನಮ್ಮ ಕರ್ತವ್ಯವನ್ನು ಸಂಪೂರ್ಣ ಶ್ರದ್ಧೆಯಿಂದ ನಿರ್ವಹಿಸುತ್ತಾ ಹೋದರೆ, ಕಾಲವೇ ಅದಕ್ಕೆ ಯೋಗ್ಯ ವಾದ ಮನ್ನಣೆಯನ್ನು ತಂದು ಕೊಡುತ್ತದೆ. ನೈಜ ಗುಣಕ್ಕೆ ಸಾವಿಲ್ಲ ಎಂಬುದೇ ಪ್ರಕೃತಿಯ ಅಂತಿಮ ನಿಯಮ.