ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ನಾವು ಬಿಟ್ಟುಹೋಗುವ ಜಾಗವೇ ನಮ್ಮ ಅಸಲಿ ಮುಖದ ಕನ್ನಡಿ !

ನಾನು ಈ ವಿಷಯದಲ್ಲಿ ತುಸು ಅತಿ ಎನಿಸುವಷ್ಟು ಶುದ್ಧ. ಸ್ನಾನ ಮಾಡಿದ ನಂತರ ಇಡೀ ಬಾತ್ ರೂಮನ್ನು ಸ್ವಚ್ಛಗೊಳಿಸಿ ಬರುತ್ತೇನೆ. ಟೀ ಕುಡಿದ ಕಪ್‌ಗಳನ್ನು ಸಿಂಕ್‌ನಲ್ಲಿ ತೊಳೆದಿಡುವುದು, ಕಸವನ್ನೆಲ್ಲ ಮೂಲೆಯ ಬುಟ್ಟಿಗೆ ಹಾಕುವುದು, ಬಾತ್‌ರೂಮಿನ ನೆಲಕ್ಕೆ ಚೆಲ್ಲಿದ ನೀರನ್ನು ವೈಪರ್‌ನಿಂದ ಸರಿಸಿ ಒಣಗಿಸುವುದು ನನಗೆ ಹೆಚ್ಚುವರಿ ಕೆಲಸ ಅಲ್ಲವೇ ಅಲ್ಲ.

ನಾವು ಬಿಟ್ಟುಹೋಗುವ ಜಾಗವೇ ನಮ್ಮ ಅಸಲಿ ಮುಖದ ಕನ್ನಡಿ !

-

ನೂರೆಂಟು ವಿಶ್ವ

ಪ್ರಯಾಣದ ದಾರಿಯುದ್ದಕ್ಕೂ ನಮ್ಮೊಂದಿಗೆ ಬರುವುದು ಬರೀ ಸೂಟ್‌ಕೇಸ್‌ಗಳಲ್ಲ; ನಮ್ಮ ಮನೆಯ ಅಂಗಳದ ಸಂಸ್ಕಾರವೂ ನಮ್ಮ ನೆರಳಿನಂತೆ ಜತೆಗಿರುತ್ತದೆ. ಎಲ್ಲೋ ದೂರದ ಊರಿನ ಅಪರಿಚಿತ ಹೋಟೆಲಿನ ಹೊಸಿಲು ದಾಟುವಾಗ, ಕೈಯಲ್ಲೊಂದು ಎಲೆಕ್ಟ್ರಾನಿಕ್ ಕೀ ಕಾರ್ಡ್ ಸಿಕ್ಕಿದ ಕೂಡಲೇ, ಆ ಕ್ಷಣಕ್ಕೆ ಆ ನಾಲ್ಕು ಗೋಡೆಗಳ ಜಗತ್ತು ನಮ್ಮದೇ ಅನ್ನಿಸಿ ಬಿಡುತ್ತದೆ.

ಬಾಗಿಲು ತೆಗೆದಾಗ ಮುಖಕ್ಕೆ ರಾಚುವ ಹವಾ ನಿಯಂತ್ರಣದ ತಾಜಾ ಗಾಳಿ, ಹಾಸಿಗೆಯ ಮೇಲೆ ಅಲೆಯಿಲ್ಲದ ನೀರಿನಂತೆ ಹರಡಿದ ಬೆಳ್ಳನೆಯ ಬೆಡ್‌ಶೀಟ್, ಮೂಲೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟ ಎರಡು ನೀರಿನ ಬಾಟಲಿಗಳು- ಇವೆಲ್ಲವೂ ಅಪರಿಚಿತ ಜಾಗವೊಂದರಲ್ಲಿ ನಮಗಾಗಿ ಯಾರೋ ಕಾದಿರಿಸಿದ ಒಂದು ಪುಟ್ಟ ಶಾಂತಿಯ ತಾಣ. ಆದರೆ ಆ ಕ್ಷಣಿಕ ಅಧಿಕಾರವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮನುಷ್ಯನ ಅಸಲಿ ಗುಣ ಅಡಗಿರುತ್ತದೆ. ‌

ಅನೇಕರಿಗೆ ಹೋಟೆಲ್ ಕೋಣೆ ಎಂದರೆ ತಾವು ಹಣ ಕೊಟ್ಟಿದ್ದಕ್ಕೆ ಪ್ರತಿಯಾಗಿ ದಕ್ಕಿದ ಸ್ವಚ್ಛಂದದ ಜಾಗ. ಬಟ್ಟೆಗಳನ್ನು ಎಂದರಲ್ಲಿ ಎಸೆಯುವುದು, ಒದ್ದೆ ಟವೆಲ್‌ಗಳನ್ನು ಸೋಫಾದ ಮೇಲೋ ನೆಲದ ಮೇಲೋ ಮುದ್ದೆ ಮಾಡಿ ಬಿಸಾಡುವುದು, ಮೈ ಒರೆಸುವ ಟವೆಲ್‌ನಲ್ಲಿ ನೆಲ ಒರೆಸುವುದು, ಶೂಗಳನ್ನು ಸ್ವಚ್ಛಗೊಳಿಸುವುದು, ತಲೆದಿಂಬುಗಳನ್ನು ಬೇಕಾಬಿಟ್ಟಿ ಎಸೆಯುವುದು, ಟೇಬಲ್ ಮೇಲೆ ಕಾಫಿ ಕಲೆ ಮಾಡುವುದು, ಬಾತ್‌ರೂಮಿನ ಕನ್ನಡಿಯ ಮೇಲೆ ನೀರಿನ ಹನಿಗಳ ಸಿಂಪಡಣೆ ಮಾಡಿ ಹೊರಟು ಬಿಡುವುದು-ಇವೆಲ್ಲವನ್ನೂ ‘ಇದನ್ನು ಸ್ವಚ್ಛ ಮಾಡಲೆಂದೇ ಸಿಬ್ಬಂದಿ ಇದ್ದಾರಲ್ಲ’ ಮತ್ತು ‘ಅಷ್ಟಕ್ಕೂ ನಾನು ಹಣ ಕೊಟ್ಟಿಲ್ಲವೇ?’ ಎಂಬ ಉಡಾಫೆಯ ಸಮರ್ಥನೆಯಲ್ಲಿ ಮಾಡುತ್ತಾರೆ.

ಆದರೆ, ನಾನು ಯಾವಾಗಲೂ ನಂಬುವುದು ಬೇರೆಯದೇ ಸಂಗತಿಯನ್ನು. ಪರರ ಮನೆಯ ಹಜಾರಕ್ಕೆ ಹೋದಾಗ ಕಾಲಿನ ಧೂಳು ಕೊಡವಿ ಕೂರುವ ಮುಗ್ಧತೆ ನಮಗೆ ಹೇಗೆ ಸಹಜವೋ, ಈ ತಾತ್ಕಾಲಿಕ ತಂಗುದಾಣಕ್ಕೂ ಅದೇ ಮರ್ಯಾದೆ ಸಲ್ಲಬೇಕು. ನಾವು ಉಳಿಯುವ ಕೋಣೆ ನಮ್ಮ ಮನಸ್ಸಿನ ವಿಸ್ತರಣೆ ಯಷ್ಟೇ. ಅದು ಗೋಜಲಾದರೆ ಒಳಮನಸ್ಸು ನಿರಾಳವಾಗಿರಲು ಹೇಗೆ ಸಾಧ್ಯ? ಹೋಟೆಲ್ ರೂಮಿನಲ್ಲಿ ಉಳಿದುಕೊಂಡಾಗಲೆಲ್ಲ, ಅದನ್ನು ಕೇವಲ ಬಳಸುವುದಷ್ಟೇ ಅಲ್ಲ, ಅದರ ಮೂಲ ಅಂದ ಕೆಡದಂತೆ ಕಾಪಾಡುವುದು ನನಗೆ ರಕ್ತಗತವಾಗಿ ಬಂದ ಒಂದು ಸಹಜ ಅಭ್ಯಾಸ.

ಇದನ್ನೂ ಓದಿ: Vishweshwar Bhat Column: ಇಲ್ಲಿ ಕ್ರಿಶ್ಚಿಯನ್ನರೇ ಇಲ್ಲ !

ಬಂದ ಕೂಡಲೇ ಧರಿಸಿದ ಬಟ್ಟೆಗಳನ್ನು ಬಿಚ್ಚಿ ನೀಟಾಗಿ ಹ್ಯಾಂಗರಿಗೆ ನೇತು ಹಾಕುವುದು, ಇಡೀ ರೂಮನ್ನು ಮುಂದೆ ನಾನು ಉಳಿಯುವಷ್ಟು ದಿನ ನನ್ನದಾಗಿ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧವಾಗುವುದು ಎಂದಿನ ಕ್ರಮ. ಬೆಳಗ್ಗೆ ಎದ್ದ ತಕ್ಷಣ ಮಲಗಿದ ಹಾಸಿಗೆಯ ಸುಕ್ಕುಗಳನ್ನು ಕೈಯಾರೆ ಸವರಿ, ಹೊದಿಕೆಯನ್ನು ಮಡಿಚಿ, ತಲೆದಿಂಬುಗಳನ್ನು ಸಾಲಾಗಿ ಜೋಡಿಸಿಡುವ ಆ ಪುಟ್ಟ ಕ್ರಿಯೆಯಲ್ಲಿ ಒಂದು ಬಗೆಯ ಧ್ಯಾನಸ್ಥ ಸಮಾಧಾನವಿದೆ.

ನಾನು ಈ ವಿಷಯದಲ್ಲಿ ತುಸು ಅತಿ ಎನಿಸುವಷ್ಟು ಶುದ್ಧ. ಸ್ನಾನ ಮಾಡಿದ ನಂತರ ಇಡೀ ಬಾತ್ ರೂಮನ್ನು ಸ್ವಚ್ಛಗೊಳಿಸಿ ಬರುತ್ತೇನೆ. ಟೀ ಕುಡಿದ ಕಪ್‌ಗಳನ್ನು ಸಿಂಕ್‌ನಲ್ಲಿ ತೊಳೆದಿಡುವುದು, ಕಸವನ್ನೆಲ್ಲ ಮೂಲೆಯ ಬುಟ್ಟಿಗೆ ಹಾಕುವುದು, ಬಾತ್‌ರೂಮಿನ ನೆಲಕ್ಕೆ ಚೆಲ್ಲಿದ ನೀರನ್ನು ವೈಪರ್‌ ನಿಂದ ಸರಿಸಿ ಒಣಗಿಸುವುದು ನನಗೆ ಹೆಚ್ಚುವರಿ ಕೆಲಸ ಅಲ್ಲವೇ ಅಲ್ಲ.

ಇವೆಲ್ಲಕ್ಕೂ ದಿನಕ್ಕೆ ಏಳೆಂಟು ನಿಮಿಷವೂ ಬೇಕಿಲ್ಲ. ಇದಕ್ಕಾಗಿ ನಯಾ ಪೈಸೆ ಖರ್ಚಾಗುವುದಿಲ್ಲ, ಮೈ ಬಗ್ಗಿಸಿ ಬೆವರು ಹರಿಸುವ ಶ್ರಮವೂ ಇರುವುದಿಲ್ಲ. ಬೇಕಿರುವುದು ಮನಸ್ಥಿತಿ ಮತ್ತು ಆ ಜಾಗವನ್ನು ಒಪ್ಪವಾಗಿ ಇಟ್ಟುಕೊಳ್ಳಬೇಕೆಂಬ ಆಸ್ಥೆ ಅಷ್ಟೇ. ಹಲವು ಹೋಟೆಲುಗಳಲ್ಲಿ ಚೆಕ್-ಔಟ್ ಮಾಡುವಾಗ ಹೌಸ್ ಕೀಪಿಂಗ್ ಮುಖ್ಯಸ್ಥರು ನನ್ನೆದುರು ಬಂದು ನಿಂತು ಬೆರಗಿನಿಂದ ಕಣ್ಣರಳಿಸಿದ್ದಿದೆ.

61 ok

‘ಸರ್, ನೀವು ನಿಜವಾಗಿಯೂ ನಮ್ಮ ರೂಮನ್ನು ಬಳಸಿದ್ದೀರಾ? ನೀವು ಬಂದಾಗ ಹೇಗಿತ್ತೋ ಈಗಲೂ ಹಾಗೆಯೇ ಇದೆಯಲ್ಲ!’ ಎಂದು ಅವರು ಹೇಳುವಾಗ ಅವರ ಮುಖದಲ್ಲಿ ಅರಳುವ ನಗು ಎಂಥ ಪ್ರಶಸ್ತಿಗಿಂತಲೂ ದೊಡ್ಡದು ಎಂದು ನನಗೆ ಅನಿಸಿದ್ದಿದೆ. ದಿನವಿಡೀ ಇನ್ನೊಬ್ಬರ ಎಂಜಲು, ಕೊಳೆ, ಹರಡಿದ ಕಸವನ್ನು ಗುಡಿಸಿ ಬೇಸತ್ತ ಅವರ ದಿನಚರಿಯಲ್ಲಿ, ಒಂದು ಕೋಣೆ ಅವರಿಗೆ ಶ್ರಮ ವಿಲ್ಲದೆ ಸ್ವಚ್ಛವಾಗಿ ಸಿಗುವುದೆಂದರೆ ಅದೊಂದು ಸಣ್ಣ ನೆಮ್ಮದಿಯ ಉಸಿರು. ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ತೋರಬಹುದಾದ ಅತಿ ದೊಡ್ಡ ಗೌರವವೆಂದರೆ ಅವನ ಕೆಲಸದ ಹೊರೆಯನ್ನು ಕೊಂಚ ತಗ್ಗಿಸುವುದು ಮತ್ತು ಅವನ ಕೆಲಸವನ್ನು ಗೌರವಿಸುವುದು.

ಮೊನ್ನೆ ದುಬೈನ ಭವ್ಯವಾದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆದ ಘಟನೆಯಂತೂ ನನ್ನ ಎದೆಯೊಳಗೆ ಹಿತವಾದ ಅಲೆಯೊಂದನ್ನು ಎಬ್ಬಿಸಿತು. ಮರುಭೂಮಿಯ ನಗರದ ಗಾಜಿನ ಸೌಧಗಳ ನಡುವೆ ತಲೆಯೆತ್ತಿ ನಿಂತ ಆ ಐಷಾರಾಮಿ ಹೋಟೆಲ್‌ನಿಂದ ಹೊರಡಲು ನಾನು ಸಿದ್ಧನಾಗಿದ್ದೆ. ಎಂದಿನಂತೆ ಕೋಣೆಯ ಪ್ರತಿಯೊಂದು ವಸ್ತುವನ್ನು ಮೊದಲ ದಿನದ ಅಚ್ಚುಕಟ್ಟಿಗೆ ತಂದು ನಿಲ್ಲಿಸಿ, ಬಾಗಿಲು ಎಳೆದು ಬೀಗ ಹಾಕಿ, ಲಿಫ್ಟ್ ಇಳಿದು ಕೆಳಗಿನ ಕೌಂಟರ್‌ಗೆ ಬಂದೆ. ಕೈಯಲ್ಲಿದ್ದ ಕೀ ಕಾರ್ಡ್ ಮರಳಿಸಿ, ಬಿಲ್ ಪಾವತಿಗೆ ಕಾಯುತ್ತಿದ್ದಾಗ ಹೋಟೆಲ್ ಮ್ಯಾನೇಜರ್ ಸ್ವತಃ ಹೆಜ್ಜೆ ಹಾಕಿ ನನ್ನತ್ತ ಬಂದ. ಅವರ ಮುಖದಲ್ಲಿ ಕೇವಲ ಔಪಚಾರಿಕ ವೃತ್ತಿಪರತೆಯಿರಲಿಲ್ಲ,

ಬದಲಾಗಿ ಅಚ್ಚರಿಯೊಂದು ಮಿನುಗುತ್ತಿತ್ತು. ‘ಸರ್, ನೀವು ನಿಮ್ಮ ರೂಮನ್ನು ಎಷ್ಟು ಅಚ್ಚು ಕಟ್ಟಾಗಿ, ಎಷ್ಟು ಸುಂದರವಾಗಿ ಇಟ್ಟುಕೊಂಡಿದ್ದೀರಿ ಎಂದು ನಮ್ಮ ಹೌಸ್ ಕೀಪಿಂಗ್ ಮುಖ್ಯಸ್ಥರು ವಾಕಿಟಾಕಿಯಲ್ಲಿ ಈಗಷ್ಟೇ ತಿಳಿಸಿದರು. ಇಷ್ಟು ದೊಡ್ಡ ಹೋಟೆಲ್‌ನಲ್ಲಿ ಇಂಥ ದೃಶ್ಯ ನಮಗೆ ಅಪರೂಪ. ನಿಮ್ಮ ಈ ನಡೆವಳಿಕೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳು’ ಎಂದ.

ಅಷ್ಟು ದೊಡ್ಡ ಅಂತಾರಾಷ್ಟ್ರೀಯ ಹೋಟೆಲ್‌ನ ನಡುಹಜಾರದಲ್ಲಿ, ಆ ಸಿಬ್ಬಂದಿಯ ಕಣ್ಣಂಚಿನ ಮೆಚ್ಚುಗೆಯ ಎದುರು ನಿಂತಾಗ, ನನಗನ್ನಿಸಿದ್ದು ಇಷ್ಟೇ- ಒಳ್ಳೆಯತನಕ್ಕೆ ಯಾವುದೇ ಭಾಷೆಯಿಲ್ಲ, ಅದಕ್ಕೊಂದು ಮೌನವಾದ ಸ್ಪರ್ಶವಿದೆ, ಅದು ಗಡಿಯನ್ನು ಮೀರಿ ಹೃದಯ ತಲುಪುತ್ತದೆ. ನನ್ನ ಈ ಸಣ್ಣ ಅಭ್ಯಾಸ ನನ್ನ ವೈಯಕ್ತಿಕ ವಲಯದಲ್ಲೂ ನಿಧಾನವಾಗಿ ಬೇರು ಬಿಡತೊಡಗಿದೆ.

ನನ್ನೊಂದಿಗೆ ಪ್ರವಾಸ ಬರುವ ಗೆಳೆಯರು, ಸಹೋದ್ಯೋಗಿಗಳು ಆರಂಭದಲ್ಲಿ ಇದನ್ನು ನೋಡಿ ‘ಏನೋ ಇವನ ಅತಿಯಾದ ಶುಚಿತ್ವದ ಹುಚ್ಚು’ ಎಂದು ತಮಾಷೆ ಮಾಡುತ್ತಿದ್ದರು. ಆದರೆ ಹೋಟೆಲ್ ಸಿಬ್ಬಂದಿ ಕೊಡುವ ಗೌರವ, ಮ್ಯಾನೇಜರ್ ಬಂದು ಕೈಕುಲುಕುವ ಆ ಕ್ಷಣಗಳನ್ನು ಕಣ್ಣಾರೆ ಕಂಡ ಮೇಲೆ ಅವರಲ್ಲೂ ಬದಲಾವಣೆ ಶುರುವಾಯಿತು. ಈಗ ಅವರೂ ಕೂಡ ಹೋಟೆಲ್ ಕೋಣೆ ಯಿಂದ ಹೊರಡುವ ಮುನ್ನ ತಮ್ಮ ಬೆಡ್ ಸರಿಪಡಿಸುತ್ತಾರೆ, ಟವೆಲ್ ಮಡಚಿಡುತ್ತಾರೆ.

ಒಂದು ಸಣ್ಣ ನಂದಾದೀಪ ಇನ್ನೊಂದು ಹಣತೆಯನ್ನು ಹೊತ್ತಿಸಿದಂತೆ, ಒಂದು ಒಳ್ಳೆಯ ನಡೆವಳಿಕೆ ಮೌನವಾಗಿಯೇ ಇನ್ನೊಬ್ಬರಲ್ಲಿ ಹರಡಿಕೊಳ್ಳುವ ಸೌಂದರ್ಯವೇ ಅನನ್ಯ. ಇಲ್ಲಿ ಇನ್ನೊಂದು ಕಹಿ ವಾಸ್ತವವನ್ನು ನಾವು ಮುಚ್ಚಿಡಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಪ್ರವಾಸಿ ತಾಣಗಳಿಗೆ ಹೋಗಿ ನೋಡಿ, ಭಾರತೀಯ ಪ್ರವಾಸಿಗರೆಂದರೆ ಅಲ್ಲಿನ ಆತಿಥ್ಯ ರಂಗದ ಹಲವರು ಒಳಗೊಳಗೇ ಮೂಗು ಮುರಿಯುವುದುಂಟು.

ಗುಂಪು ಗುಂಪಾಗಿ ಬಂದು ಹೋಟೆಲ್ ಲಾಬಿಗಳಲ್ಲಿ ಜೋರಾಗಿ ಗದ್ದಲ ಮಾಡುವುದು, ಬುಫೆ ಕೌಂಟರ್‌ಗಳಲ್ಲಿ ಬೇಕಾಬಿಟ್ಟಿ ಆಹಾರ ಚೆಲ್ಲುವುದು, ಕೋಣೆಗಳನ್ನು ಅತ್ಯಂತ ಅಸಹ್ಯವಾಗಿ ಗಲೀಜು ಮಾಡಿ ಹೊರಡುವುದು, ರೂಮಿನಲ್ಲಿದ್ದ ಸಾಮಾನು, ಪೀಠೋಪಕರಣಗಳನ್ನು ಚೆಲ್ಲಾಪಿಲ್ಲಿಯಾಗಿ, ಅಸ್ತವ್ಯಸ್ತ ವಾಗಿಡುವುದು, ಚಾದರ, ಬೆಡ್‌ಶೀಟ್‌ಗಳನ್ನು ಯದ್ವಾತದ್ವಾ ಕಿತ್ತೆಸೆಯುವುದು...ಇಂಥ ಕಹಿ ಅನುಭವಗಳಿಂದಾಗಿಯೇ ಹಲವು ವಿದೇಶಿ ಹೋಟೆಲುಗಳಲ್ಲಿ ಭಾರತೀಯರಿಗೆ ಸುಲಭವಾಗಿ ರೂಮು ಸಿಗುವುದಿಲ್ಲ.

ಕೊಟ್ಟರೂ ಕಾರಿಡಾರಿನ ಕೊನೆಯ, ಲಿಫ್ಟ್ ಪಕ್ಕದ ಅಥವಾ ದರ್ಜೆಯಲ್ಲಿ ಕೊಂಚ ಕೆಳಗಿರುವ ಕೋಣೆಗಳನ್ನು ಕೊಟ್ಟು ಕೈತೊಳೆದುಕೊಳ್ಳುವ ಪರಿಪಾಠವಿದೆ. ನಾವು ನಮ್ಮ ದೇಶದಲ್ಲಿ ‘ಅತಿಥಿ ದೇವೋ ಭವ’ ಎಂದು ಗೋಡೆಗಳ ಮೇಲೆ ಬರೆದುಕೊಳ್ಳುತ್ತೇವೆ ನಿಜ. ಆದರೆ ನಾವೇ ಇನ್ನೊಂದು ನೆಲಕ್ಕೆ ಅತಿಥಿಗಳಾಗಿ ಹೋದಾಗ ಆ ‘ದೈವತ್ವ’ದ ಘನತೆಯನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಸ್ವಾತಂತ್ರ್ಯ ಎಂದರೆ ಸ್ವಚ್ಛಂದವಲ್ಲ. ‌

ದುಡ್ಡು ಕೊಟ್ಟಿದ್ದೇವೆ ಎಂಬ ಒಂದೇ ಕಾರಣಕ್ಕೆ ಕೋಣೆಯ ಗೋಡೆಗಳಿಗೆ ಕಾಫಿ ಚೆಲ್ಲುವುದು, ಬೆಡ್‌ಶೀಟ್ ಮೇಲೆ ಬೂಟುಗಳನ್ನಿಟ್ಟು ಮಲಗುವುದು ನಮ್ಮ ಆಂತರಿಕ ಸಂಸ್ಕೃತಿಯ ಬಡತನ ವನ್ನು ಜಗಜ್ಜಾಹೀರು ಮಾಡುತ್ತದೆ. ನಮ್ಮ ಪಾಸ್‌ಪೋರ್ಟ್ ಕೇವಲ ಪೌರತ್ವದ ದಾಖಲೆಯಲ್ಲ, ನಾವು ಪ್ರತಿನಿಧಿಸುವ ಸಂಸ್ಕೃತಿಯ ಕನ್ನಡಿ ಕೂಡ.

ಹೀಗಾಗಿಯೇ, ಈ ಸಣ್ಣ ನಡೆವಳಿಕೆ ಕೇವಲ ವೈಯಕ್ತಿಕ ಶಿಸ್ತಾಗಿ ಉಳಿಯದೇ, ಒಂದು ಮೌನ ಆಂದೋಲ ನವಾಗಬೇಕಿದೆ. ನಾವು ಉಳಿದುಕೊಂಡ ಜಾಗವನ್ನು ಬಿಟ್ಟು ಹೊರಡುವಾಗ, ಅದು ನಾವು ಬಂದಾಗ ಇದ್ದುದಕ್ಕಿಂತ ಒಂದು ಪಟ್ಟು ಹೆಚ್ಚು ಅಚ್ಚುಕಟ್ಟಾಗಿದ್ದರೆ, ಅಲ್ಲಿನ ಸಿಬ್ಬಂದಿಗೆ ನಮ್ಮ ಬಗ್ಗೆ ಸಹಜವಾಗಿ ಒಳ್ಳೆಯ ಭಾವನೆ ಮೂಡುವುದು ಸಹಜ.

ಇಂಥ ನಡೆವಳಿಕೆಯನ್ನು ಹೋಟೆಲ್ ಸಿಬ್ಬಂದಿ ಪ್ರಶಂಸಿಸುತ್ತಾರೆ. ನಾನು ರೂಮನ್ನು ಇಟ್ಟು ಕೊಳ್ಳುವ ರೀತಿ ನೋಡಿ, ಅನೇಕ ಹೊಟೇಲುಗಳ ಹೌಸ್ ಕೀಪಿಂಗ್ ಮುಖ್ಯಸ್ಥರು, ಹೋಟೆಲ್ ಜನರಲ್ ಮ್ಯಾನೇಜರ್ ಬಂದು ನನ್ನನ್ನು ಅಭಿನಂದಿಸಿದ್ದಿದೆ. ತಮ್ಮ ಮೆಚ್ಚುಗೆಯನ್ನು ಲಿಖಿತ ರೂಪದಲ್ಲಿ ಕೊಟ್ಟಿದ್ದಿದೆ.

ಕೆಲ ವರ್ಷಗಳ ಹಿಂದೆ, ಜ್ಯೂರಿಕ್‌ನ ಮೇರಿಯಟ್ ಹೋಟೆಲಿನಲ್ಲಿ ನಾನು ಮೂರು ದಿನ ತಂಗಿದ್ದಾಗ, ನಾನು ರೂಮನ್ನು ಒಪ್ಪವಾಗಿ ಬಳಸಿದ ರೀತಿ ನೋಡಿ, ಜನರಲ್ ಮ್ಯಾನೇಜರ್ ನನ್ನನ್ನು ಅಭಿನಂದಿ ಸಿದ್ದಲ್ಲದೇ, ಭಾರತದಲ್ಲಿನ ಅವರ ಶಾಖಾ ಹೋಟೆಲಿನಲ್ಲಿ ಎರಡು ದಿನ ಉಚಿತವಾಗಿ ಉಳಿದು ಕೊಳ್ಳುವ ವೋಚರುಗಳನ್ನು ನೀಡಿ ಅಚ್ಚರಿ ನೀಡಿದ್ದ!

ಬಳಸಿದ ಶಾಂಪೂ ಬಾಟಲಿ, ಸಾಬೂನಿನ ಕವರುಗಳನ್ನು ಕಸದ ಬುಟ್ಟಿಗೆ ಹಾಕುವುದು, ಹರಿದ ಕಾಗದಗಳನ್ನು ಚೆಲ್ಲಾಪಿಲ್ಲಿ ಮಾಡದಿರುವುದು, ಖಾಲಿಯಾದ ನೀರಿನ ಬಾಟಲಿಯನ್ನು ಕಸದ ಬುಟ್ಟಿಗೆ ಹಾಕುವುದು, ಬಳಸಿದ ಟವೆಲ್‌ನ್ನು ಬೇಕಾಬಿಟ್ಟಿ ಬಿಸಾಡದೇ ನೀಟಾಗಿ ಇಡುವುದು- ಇಂಥ ಸಣ್ಣ ಸಣ್ಣ ಕಾಳಜಿಗಳು ಹೋಟೆಲ್ ಸಿಬ್ಬಂದಿಯ ಮನಸ್ಸಿನಲ್ಲಿ ಭಾರತೀಯರ ಬಗ್ಗೆ ಇರುವ ಪೂರ್ವಗ್ರಹ ಪೀಡಿತ ಚಿತ್ರಣವನ್ನು ಅಳಿಸಿಹಾಕಬಲ್ಲವು.

ನಾವಾಡುವ ದೊಡ್ಡ ದೊಡ್ಡ ಮಾತುಗಳಿಗಿಂತ, ನಾವು ಬಿಟ್ಟು ಹೋಗುವ ಒಂದು ಚೊಕ್ಕಟವಾದ ಕೋಣೆ ನಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುತ್ತದೆ. ಪ್ರವಾಸ ಮುಗಿಸಿ ಹೊರಡುವ ಕ್ಷಣವೆಂದರೆ ಅದು ಬರೀ ಲಗೇಜು ಕಟ್ಟಿಕೊಳ್ಳುವುದಲ್ಲ, ನಾವು ಉಳಿದ ಜಾಗಕ್ಕೆ ಒಂದು ಕೃತಜ್ಞತೆ ಹೇಳುವ ಸಮಯ. ಆ ಕೋಣೆ ನಮಗೆ ಸುಸ್ತಾದ ರಾತ್ರಿಗಳಲ್ಲಿ ಆಶ್ರಯ ನೀಡಿತ್ತು, ತಣ್ಣನೆಯ ಗಾಳಿ ಕೊಟ್ಟಿತ್ತು, ಬೆಚ್ಚನೆಯ ನಿದ್ರೆ ನೀಡಿತ್ತು.

ಆ ಜಾಗವನ್ನು ತೊರೆಯುವಾಗ ಅಲ್ಲಿ ಕೊಳೆಯ ಬದಲು ಒಂದು ಸುವ್ಯವಸ್ಥೆಯನ್ನು ಬಿಟ್ಟು ಹೋಗುವುದು ನಾವು ಪ್ರಕೃತಿಗೆ, ಪರಿಸರಕ್ಕೆ, ನಮ್ಮನ್ನು ಸಲಹಿದ ಜಾಗಕ್ಕೆ ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಂಡ ಸಿಬ್ಬಂದಿಗೆ ಸಲ್ಲಿಸುವ ಕನಿಷ್ಠ ಗೌರವ. ಕೃತಜ್ಞತೆಯನ್ನು ಪದಗಳಲ್ಲಿ ಹೇಳುವು ದಕ್ಕಿಂತ ಇಂಥ ಪುಟ್ಟ ಕ್ರಿಯೆಗಳಲ್ಲಿ ತೋರಿಸುವುದು ಎಷ್ಟು ಅರ್ಥಪೂರ್ಣವಲ್ಲವೇ? ದುಬೈನಿಂದ ಹೊರಟು ವಿಮಾನವೇರಿ ಕುಳಿತಾಗಲೂ ಗ್ರ್ಯಾಂಡ್ ಹಯಾತ್‌ನ ಆ ಕಾರಿಡಾರು, ಆ ಮ್ಯಾನೇಜರ್‌ನ ಮುಖದಲ್ಲಿದ್ದ ಆಪ್ತ ನಗೆ ಕಣ್ಣೆದುರೇ ಸುಳಿಯುತ್ತಿತ್ತು.

ಜಗತ್ತನ್ನು ಬದಲಾಯಿಸಲು ನಾವು ಹಿಮಾಲಯವನ್ನು ಅಲುಗಾಡಿಸಬೇಕಿಲ್ಲ. ನಾವು ಬಳಸಿದ ಕಾಫಿ ಕಪ್ಪನ್ನು ತೊಳೆಯುವ, ಮಲಗಿದ ಹಾಸಿಗೆಯ ಸುಕ್ಕು ಸರಿಪಡಿಸುವ ಸಣ್ಣ ಬೆರಳುಗಳ ಜಗತ್ತಿನ ಕಲೆಗಳನ್ನು ತಿದ್ದುವ ಶಕ್ತಿಯಿದೆ. ಕಣ್ಣಿಗೆ ಕಾಣದ ಈ ಪುಟ್ಟ ನಡೆವಳಿಕೆಗಳು ನಮಗೆ ಅರಿವಿಲ್ಲ ದಂತೆಯೇ ದೇಶದ ಗಡಿಯನ್ನು ದಾಟಿ, ಮನುಷ್ಯತ್ವದ ವಾಸನೆಯನ್ನು ಎಡೆ ಪಸರಿಸುತ್ತವೆ.

ಪ್ರತಿಯೊಬ್ಬ ಭಾರತೀಯ ಪ್ರವಾಸಿಯೂ ತನ್ನ ಕೋಣೆಯನ್ನು ಒಂದು ಪುಟ್ಟ ದೇಗುಲದಂತೆ ಕಂಡು, ಹೊರಡುವಾಗ ಅದನ್ನು ಮತ್ತೊಬ್ಬರಿಗೆ ಮುದ ನೀಡುವಂತೆ ಬಿಟ್ಟು ಬಂದರೆ, ನಾಳೆ ಜಗತ್ತಿನ ಯಾವುದೇ ಮೂಲೆಯ ಹೋಟೆಲ್ ಕೂಡ ಭಾರತೀಯರಿಗೆ ಬಾಗಿಲು ತೆರೆಯಲು ಸಂಕೋಚ ಪಡುವುದಿಲ್ಲ. ಬದಲಿಗೆ, ಹಸನ್ಮುಖಿಯಾಗಿ ಎದುರಾಗುವ ಆತಿಥ್ಯದ ಕಣ್ಣುಗಳಲ್ಲಿ ‘ಇವರು ಬಂದರೆ ನಮ್ಮ ಮನೆ ಬೆಳಗಿದಂತೆ’ ಎಂಬ ಭಾವ ಮೂಡುತ್ತದೆ. ಪ್ರಯಾಣದ ನಿಜವಾದ ಸೊಗಸಿರುವುದೇ ಇಂಥ ಸಣ್ಣ, ನಿಶ್ಯಬ್ದ ಹೆಜ್ಜೆಗುರುತುಗಳನ್ನು ಅಚ್ಚುಕಟ್ಟಾಗಿ ಬಿಟ್ಟು ಬರುವುದರಲ್ಲಿ. ನಾವು ಅದಕ್ಕೆ ಹಣವನ್ನೇ ನೀಡಿರಬಹುದು, ಆ ಮಾತ್ರಕ್ಕೆ ನಾವು ಅದನ್ನು ಅಸ್ತವ್ಯಸ್ತವಾಗಿ ಇಡಬೇಕು ಎಂದೇನೂ ಇಲ್ಲ.

ನಾವು ತಂಗಿದ ರೂಮನ್ನು ಬಾಡಿಗೆಯ ಕೋಣೆಯೆಂದು ನೋಡದೇ, ದಾರಿಯ ನಡುವೆ ಸಿಕ್ಕ ಒಂದು ಪುಟ್ಟ ಆಶ್ರಯವೆಂದು ಭಾವಿಸಿದರೆ ಸಾಕು. ಹೊರಡುವಾಗ ಆ ಜಾಗವನ್ನು ಇನ್ನಷ್ಟು ಚೊಕ್ಕಟವಾಗಿ, ಮರುದಿನದ ಮುಂಜಾನೆಯಂತೆ ನಳನಳಿಸುವಂತೆ ಬಿಟ್ಟು ಬಂದರೆ, ಜಗತ್ತಿನ ಯಾವ ಹೋಟೆಲಿನ ಹೊಸ್ತಿಲೂ ನಮ್ಮನ್ನು ನೋಡಿ ಮುಖ ಸಿಂಡರಿಸುವುದಿಲ್ಲ. ‘ಇವರು ಬಂದರೆ ನಮ್ಮ ಹಜಾರ ಬೆಳಗಿದಂತೆ’ ಎಂಬ ಆಪ್ತತೆ ಅವರ ಕಣ್ಣುಗಳಲ್ಲಿ ತಾನಾಗಿಯೇ ಮಿಂಚುತ್ತದೆ. ಯಾಕೆಂದರೆ, ಪ್ರಯಾಣದ ನಿಜವಾದ ಅರ್ಥವಿರುವುದೇ ನಾವು ಎಲ್ಲಿಂದ ಬಂದೆವು ಎಂಬುದರಲ್ಲಿ ಅಲ್ಲ, ನಾವು ಹಾದುಹೋದ ದಾರಿಯಲ್ಲಿ ಎಂಥ ಮಧುರವಾದ, ಚೆಂದದ ಹೆಜ್ಜೆಗುರುತುಗಳನ್ನು ಬಿಟ್ಟು ಹೋದೆವು ಎಂಬುದರಲ್ಲಿ.

ಪ್ರಯಾಣ ಮುಗಿಯುವುದು ನಾವು ಮನೆ ತಲುಪಿದಾಗ ಅಲ್ಲ; ನಾವು ಉಳಿದುಕೊಂಡಿದ್ದ ಆ ಅಪರಿಚಿತ ಕೋಣೆಯ ಬಾಗಿಲು ಮೆಲ್ಲನೆ ಮುಚ್ಚಿಕೊಳ್ಳುವ ಆ ನಿಶ್ಯಬ್ದ ಕ್ಷಣದ. ಬೆಡ್‌ಶೀಟಿನ ಕೊನೆಯ ಸುಕ್ಕನ್ನೂ ಕೈಯಿಂದ ನೇವರಿಸಿ, ಕಿಟಕಿಯಾಚೆಯ ಬಿಸಿಲಿಗೆ ನಮಸ್ಕರಿಸಿ ಹೊರ ಬೀಳುವಾಗ, ಆ ನಾಲ್ಕು ಗೋಡೆಗಳೂ ನಮ್ಮ ಬೆನ್ನಿಗೆ ಒಂದು ಹಾರೈಕೆಯಂತೆ ನಿಂತಿರುತ್ತವೆ. ಹಣ ಕೊಟ್ಟಿದ್ದಕ್ಕೆ ಎಲ್ಲವನ್ನೂ ಕೊಳ್ಳಬಹುದು, ಆದರೆ ಬಿಟ್ಟು ಹೋಗುವ ಒಂದು ಚೊಕ್ಕಟವಾದ ಜಾಗದ ಮೂಲಕ ಇನ್ನೊಬ್ಬ ಅಪರಿಚಿತನ ಎದೆಯಲ್ಲಿ ಕೃತಜ್ಞತೆಯೊಂದು ಚಿಗುರುವಂತೆ ಮಾಡುವುದು ಇದೆಯಲ್ಲ-ಅದೇ ನೋಡಿ ಭಾರತೀಯತೆಯ ಅಸಲಿ ಕಂಪನ್ನು ಜಗತ್ತಿನ ಕಣ್ಣಂಚಿಗೆ ತಲುಪಿಸುವ ಒಂದು ಪುಟ್ಟ ಪವಾಡ!