ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

M J Akbar Column: ಮೆಕ್ಕಾದಲ್ಲಿ ಮೂಡಿದ ಇಸ್ಲಾಮಿಕ್‌ ನ್ಯಾಟೋ ಎಂಬ ಮರೀಚಿಕೆ

ಅಮೆರಿಕದ ವ್ಯೂಹಾತ್ಮಕ ಹಿತಾಸಕ್ತಿಗಳು ಇಸ್ರೇಲ್‌ನ ಉಳಿವಿನ ಜೊತೆಗೆ ಗಾಢ ನಂಟು ಹೊಂದಿವೆ. ಸಾಮಾಜಿಕ ಜಾಲತಾಣ ಮತ್ತು ಸಮಾಜವಿರೋಧಿ ಜಾಲತಾಣಗಳಲ್ಲಿ ಎಲ್ಲೂ ಈ ವಿಷಯದಲ್ಲಿ ಇಸ್ರೇಲ್‌ನ ಗಾಢ ಮೌನದ ಬಗ್ಗೆ ಹೆಡ್‌ಲೈನ್‌ಗಳು ಕಾಣಿಸುತ್ತಿಲ್ಲ. ಇಸ್ರೇಲ್ ಬದುಕಬೇಕು ಅಂದರೆ ಅದು ಭ್ರಮೆಯಿಂದ ಹೊರಬಂದು ವಾಸ್ತವದಲ್ಲೇ ಬದುಕಬೇಕು.

ಮೆಕ್ಕಾದಲ್ಲಿ ಮೂಡಿದ ಇಸ್ಲಾಮಿಕ್‌ ನ್ಯಾಟೋ ಎಂಬ ಮರೀಚಿಕೆ

-

Profile
Ashok Nayak Sep 7, 2026 10:38 AM

ಅಕ್ಬರ್‌ʼನಾಮಾ (ಭಾಗ-1)

ಎಂ.ಜೆ.ಅಕ್ಬರ್

ಮರುಭೂಮಿಯನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಎರಡು ಚಿತ್ರಗಳು ಮೂಡುತ್ತವೆ. ಒಂದು ಓಯಸಿಸ್, ಇನ್ನೊಂದು ಮರೀಚಿಕೆ. ಓಯಸಿಸ್ ಅಸ್ತಿತ್ವದಲ್ಲಿ ಇರುವಂಥದ್ದು, ಆದರೆ ಅಪರೂಪ. ಮರೀಚಿಕೆ ಅಥವಾ ಬಿಸಿಲ್ಗುದುರೆ ಅಪ್ಪಟ ಭ್ರಮೆ. ಮೆಕ್ಕಾದಲ್ಲಿ ಇತ್ತೀಚೆಗೆ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನಗಳು ಮಾಡಿಕೊಂಡ ಒಪ್ಪಂದ ಓಯಸ್ಸಿಸ್ಸೋ ಅಥವಾ ಮರೀಚಿಕೆಯೋ? ಮರೀಚಿಕೆ ಕೂಡ ಓಯಸಿಸ್‌ನಂತೆಯೇ ತೋರುವುದರಿಂದ ನೀರಿಗಾಗಿ ತಹತಹಿಸುತ್ತಿದ್ದವರಲ್ಲಿ ಭರವಸೆ ಮೂಡಿಸುತ್ತದೆ. ಆದರೆ ಹತ್ತಿರ ಹೋಗಿ ರಿಯಾಲಿಟಿ ಚೆಕ್ ಮಾಡಿದಾಗ ಭ್ರಮೆಯೆಂಬುದು ಸಾಬೀತಾಗುತ್ತದೆ. ಸ್ಪಷ್ಟವಾದ ಶತ್ರುವೊಬ್ಬ ಇಲ್ಲದಿದ್ದರೆ ಯಾವುದೇ ಮಿಲಿಟರಿ ಒಪ್ಪಂದ ಬಹಳ ಕಾಲ ಬಾಳುವುದಿಲ್ಲ. ಇದೊಂದು ರಕ್ಷಣಾ ಒಪ್ಪಂದ ಎಂದು ನೀವು ಟಾಂಟಾಂ ಹೊಡೆಯಬಹುದು. ಆದರೆ ಅದರಿಂದ ನಿಜವಾದ ಪ್ರಶ್ನೆಯನ್ನು ಅಡಗಿಸಲು ಸಾಧ್ಯವಿಲ್ಲ.

ಪ್ರಶ್ನೆ ಏನು ಗೊತ್ತಾ: ‘ನಿಮ್ಮ ಶತ್ರು ಯಾರು?’ ಅದು ಮಿಲಿಟರಿ ಒಪ್ಪಂದವೇ ಹೊರತು ವ್ಯಾಪಾರದ ಪಾಲುದಾರಿಕೆಯಲ್ಲ. ಮೆಕ್ಕಾದಲ್ಲಿ ಸೇರಿದ್ದ ಮೂರು ದೇಶಗಳ ಮುಖ್ಯಸ್ಥರು ‘ನಾವೆಲ್ಲರೂ ಒಂದು’ ಮತ್ತು ‘ನಿಮಗಾಗಿ ನಾವು’ ಎಂಬ ಒಪ್ಪಂದಕ್ಕೆ ದೇವರ ಸಮ್ಮುಖದಲ್ಲಿ ಸಹಿ ಹಾಕಿದರೇ ಹೊರತು, ತಮ್ಮನ್ನು ಒಟ್ಟಿಗೇ ತಂದು ನಿಲ್ಲಿಸಿದ ಆ ಬೆದರಿಕೆ ಯಾವುದು ಎಂಬುದನ್ನು ಬಹಿರಂಗವಾಗಿ ಹೇಳ ಲಿಲ್ಲ. ಈ ಮೂರು ಪರಸ್ಪರ ಗಡಿ ಹಂಚಿಕೊಂಡಿರುವ ದೇಶಗಳಲ್ಲ ಮತ್ತು ಐತಿಹಾಸಿಕ ಭಿನ್ನಾಭಿ ಪ್ರಾಯ ಹೊಂದಿರುವ ದೇಶಗಳು ಎಂಬುದು ಗಮನಾರ್ಹ.

ಹಾಗಿದ್ದರೆ, ಅಮೆರಿಕದ ದೀರ್ಘಕಾಲೀನ ಸ್ನೇಹಿತರಾಗಿರುವ ಸೌದಿ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಈಗ ಇರಾನ್‌ನಲ್ಲಿರುವ ಶಿಯಾ ಮುಸ್ಲಿಂ ಆಳ್ವಿಕೆಯ ವಿರುದ್ಧ ಮಾಡು ಇಲ್ಲವೇ ಮಡಿ ಸಮರಕ್ಕೆ ಇಳಿದವೇ? ಬಹುಶಃ ಇದೇ ನಿಜ ಅನ್ನಿಸುತ್ತದೆ. ಏಕೆಂದರೆ ಇರಾನ್ ನಿಂದ ಅಮೆರಿಕ ಘಾಸಿಗೊಂಡಿದೆ. ಕೊಲ್ಲಿಯಿಂದ ಕುಂಟುತ್ತಾ ಹೊರಬಂದಿದೆ. ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಚೀನಾ ವಿರುದ್ಧ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ರಿಯಾಲಿಟಿ ಚೆಕ್ ಏನು ಹೇಳುತ್ತದೆ? ಪಾಕಿಸ್ತಾನ ತನ್ನ ಒಬ್ಬನೇ ಒಬ್ಬ ಸೈನಿಕನನ್ನು ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ವಿರುದ್ಧ ಯುದ್ಧ ಮಾಡಲು ಕಳುಹಿಸಿದರೂ ಮೊದಲ ದಿನವೇ ಕರಾಚಿ ಹೊತ್ತಿ ಉರಿಯುತ್ತದೆ ಮತ್ತು ಮೂರನೇ ದಿನದ ಹೊತ್ತಿಗೆ ಇಸ್ಲಾಮಾಬಾದ್‌ನಲ್ಲಿ ಸರಕಾರ ಉರುಳುತ್ತದೆ.

ಇದನ್ನೂ ಓದಿ: M J Akbar Column: ತಿಹಾರ್ ಜೈಲಿನ ಥಾಲಿಯಿಂದ ಬ್ರಿಟನ್‌ನ ಡ್ರೋನ್ ಡ್ರಗ್ಸ್‌ವರೆಗೆ!

ಪಾಕಿಸ್ತಾನದ ಜನರು ತಮ್ಮ ಅರ್ಧಕ್ಕರ್ಧ ರಾಷ್ಟ್ರೀಯ ಸಂಪತ್ತನ್ನು ರಕ್ಷಣಾ ಪಡೆಗಳಿಗೆ ಊಟ ಹಾಕಲು ಖರ್ಚು ಮಾಡುತ್ತಿರುವುದು ಇನ್ನೊಂದು ಮುಸ್ಲಿಂ ದೇಶದ ವಿರುದ್ಧ ಹೋರಾಡುವುದಕ್ಕಾಗಿ ಅಲ್ಲವೇ ಅಲ್ಲ. ಅದರಲ್ಲೂ ಭೂಮಿಯ ಮೇಲಿರುವ ತೈಲ ಮತ್ತು ನೀರಿನ ಸಂಪತ್ತಿನ ಮೇಲೆ ಅಮೆರಿಕ ಸಾಧಿಸಿದ್ದ ಪ್ರಾಬಲ್ಯವನ್ನೇ ಪರಿಣಾಮಕಾರಿಯಾಗಿ ಬಗ್ಗುಬಡಿದ ಇರಾನ್ ಎಂಬ ಮುಸ್ಲಿಂ ದೇಶದ ಮೇಲೆ ಪಾಕಿಸ್ತಾನ ಹೋರಾಡುವುದನ್ನು ಅಲ್ಲಿನ ಜನರು ಒಪ್ಪುತ್ತಾರೆಯೇ? ಮಜಾ ಏನೆಂದರೆ, ಈ ಒಪ್ಪಂದಕ್ಕೆ ನಾಲ್ಕನೇ ದೇಶವಾಗಿ ಇರಾನ್ ಕೂಡ ಸೇರಿಕೊಳ್ಳಬೇಕು ಎಂದು ಈಗಾಗಲೇ ಕೂಗೆದ್ದಿದೆ.

ಹಾಗಿದ್ದರೆ ಮೆಕ್ಕಾ ಒಪ್ಪಂದದ ನಿಜವಾದ ಶತ್ರು ಯಾರು? ಅಮೆರಿಕವೇ? ಇರಲಿಕ್ಕಿಲ್ಲ. ಯಾವ ದಿಕ್ಕಿ ನಿಂದ ಯೋಚಿಸಿದರೂ ಇಸ್ಲಾಮಿಕ್ ನ್ಯಾಟೋದ ಶತ್ರು ಅಮೆರಿಕ ಎಂಬ ವಾದಕ್ಕೆ ಪುಷ್ಟಿ ಸಿಗುವು ದಿಲ್ಲ. ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳು ಇಸ್ರೇಲ್ ಗೆ ಬೆದರಿಕೆಯೊಡ್ಡಿದರೆ ಆಗ ಮುಸ್ಲಿಂ ದೇಶಗಳ ಓಣಿಯಲ್ಲಿ ಹೆಚ್ಚು ಬೆಂಬಲ ಸಿಗಬಹುದು. ಆದರೆ, ಖುದ್ದು ಅಮೆರಿಕವೇ ಈ ದೇಶಗಳನ್ನು ಹೊಡೆದು ಹಾಕುತ್ತದೆ ಎಂಬುದು ವಾಸ್ತವ. ಏಕೆಂದರೆ, ಇಸ್ರೇಲ್‌ನ ರಕ್ಷಕನಾಗಿ ಅಮೆರಿಕ ನಿಂತಿದೆ.

ಅಮೆರಿಕದ ವ್ಯೂಹಾತ್ಮಕ ಹಿತಾಸಕ್ತಿಗಳು ಇಸ್ರೇಲ್‌ನ ಉಳಿವಿನ ಜೊತೆಗೆ ಗಾಢ ನಂಟು ಹೊಂದಿವೆ. ಸಾಮಾಜಿಕ ಜಾಲತಾಣ ಮತ್ತು ಸಮಾಜವಿರೋಧಿ ಜಾಲತಾಣಗಳಲ್ಲಿ ಎಲ್ಲೂ ಈ ವಿಷಯದಲ್ಲಿ ಇಸ್ರೇಲ್‌ನ ಗಾಢ ಮೌನದ ಬಗ್ಗೆ ಹೆಡ್‌ಲೈನ್‌ಗಳು ಕಾಣಿಸುತ್ತಿಲ್ಲ. ಇಸ್ರೇಲ್ ಬದುಕಬೇಕು ಅಂದರೆ ಅದು ಭ್ರಮೆಯಿಂದ ಹೊರಬಂದು ವಾಸ್ತವದಲ್ಲೇ ಬದುಕಬೇಕು. ಅಮೆರಿಕ ಯಾವತ್ತೂ ತನ್ನ ಬೆಂಬಲಿಗರಿಗೆ ಇಸ್ರೇಲ್ ಮೇಲೆ ದಾಳಿ ನಡೆಸಲು ಬಿಡುವುದಿಲ್ಲ ಎಂಬುದು ಅದಕ್ಕೆ ಗೊತ್ತಿದೆ. ಅಮೆರಿಕಕ್ಕೆ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ಈ ಮೂರೂ ದೇಶಗಳಲ್ಲಿ ಸೇನಾ ನೆಲೆಗಳಿವೆ. ಸೇನಾ ನೆಲೆಗಳು ಇವೆ ಅಂದರೆ ಅದು ಅಮೆರಿಕವು ಈ ದೇಶಗಳ ಮೇಲೆ ನಿಯಂತ್ರಣ ಸಾಧಿಸಿದೆ ಎಂದರ್ಥ.

72_ಓಕ

ಯಾವುದೇ ಮಿಲಿಟರಿ ಒಕ್ಕೂಟಕ್ಕೆ ಇರುವ ಅತಿದೊಡ್ಡ ಅಪಾಯವೆಂದರೆ ಗೊಂದಲ. ನ್ಯಾಟೋ ಏಕೆ ಯಶಸ್ವಿಯಾಯಿತು ಅಂದರೆ ಅದಕ್ಕೆ ಭೂರಾಜಕೀಯ ಒಗ್ಗಟ್ಟಿತ್ತು, ಶತ್ರುವಿನ ಬಗ್ಗೆ ಸ್ಪಷ್ಟತೆ ಯಿತ್ತು ಮತ್ತು ಗಡಿ ಗುರುತಿಸಿದ ಯುದ್ಧ ವಲಯವಿತ್ತು. ಅಂದರೆ ಅದು ಯುರೋಪಿನ ಸೋವಿ ಯತ್ ಯೂನಿಯನ್ ವಿರುದ್ಧ ಹುಟ್ಟಿಕೊಂಡ ಸಂಘಟನೆಯಾಗಿತ್ತು. ಕಮ್ಯುನಿಸಂ ವಿರುದ್ಧ ನ್ಯಾಟೋ ಇರಲಿಲ್ಲ. ಅದು ಕಮ್ಯುನಿಸ್ಟರ ಎರಡನೇ ಅತಿದೊಡ್ಡ ನೆಲೆಯಾಗಿರುವ ಚೀನಾವನ್ನು ಸೋಲಿಸಲು ಹುಟ್ಟಿದ್ದಾಗಿರಲಿಲ್ಲ.

ಹೀಗಾಗಿ, ಮೆಕ್ಕಾ ಒಪ್ಪಂದಕ್ಕೆ ಸಹಿ ಹಾಕಿದ ಮೂರು ದೇಶಗಳಿಗೆ ಘೋಷಿತ ಶತ್ರು ಇಲ್ಲದೆ ಇರುವು ದರಿಂದ ಈ ಒಕ್ಕೂಟದಲ್ಲಿರುವ ಪ್ರತಿಯೊಂದು ದೇಶವೂ ತನ್ನ ವೈಯಕ್ತಿಕ ಶತ್ರುವಿನ ವಿರುದ್ಧವೇ ಇದನ್ನು ಬಳಸಿಕೊಳ್ಳಲು ಅಥವಾ ತನ್ನ ಭದ್ರತಾ ವಲಯವನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತದೆ. ಸಿರಿಯಾ ಮೇಲಿನ ಹಿಡಿತ ಉಳಿಸಿಕೊಳ್ಳಲು ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿ ಈಗಾಗಲೇ ತಾನು ಹೊಂದಿರುವ ಹಿಡಿತವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಹಾಗೂ ಕುರ್ದ್‌ಗಳನ್ನು ನಿಯಂತ್ರಿಸಲು ತನಗೆ ಸೌದಿಯ ಬೆಂಬಲವಿದೆ ಎಂದು ಟರ್ಕಿ ಹೇಳಿಕೊಳ್ಳುತ್ತದೆ ಅಥವಾ ಹಾಗೆ ತಿಳಿದುಕೊಳ್ಳುತ್ತದೆ.

ಇಸ್ಲಾಮಾಬಾದಿನ ಮಂತ್ರಿಗಳು ಈಗಾಗಲೇ ಸೌದಿ ಮತ್ತು ಟರ್ಕಿ ದೇಶಗಳು ಭಾರತದ ವಿರುದ್ಧ ಯುದ್ಧ ಸಾರಲು ತನಗೆ ಬೆಂಬಲ ನೀಡಿವೆ ಎಂದು ಪಾಕಿಸ್ತಾನೀಯರಿಗೆ ಹೇಳತೊಡಗಿದ್ದಾರೆ. ಸೌದಿ ದೊರೆಗಳು ಈಗಾಗಲೇ ಪಾಕಿಸ್ತಾನದ ಮನವೊಲಿಸಿ ಆಗಸ್ಟ್ 4, 2026ರಂದು ಸೋಮಾಲಿಯಾ ಜೊತೆಗೂ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿಸಿದ್ದಾರೆ. ಟ್ರಂಪ್ ಅವರ ಡಿಕ್ಷನರಿಯಲ್ಲಿ ವಿಶೇಷಣಗಳಿಗೆ ಕೊರತೆಯಿಲ್ಲ. ಮೆಕ್ಕಾ ಒಪ್ಪಂದ ಬಹಳ ದೊಡ್ಡದು, ಕೆಚ್ಚೆದೆಯದು ಮತ್ತು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ಇದೇ ಮೊದಲ ದೊಡ್ಡ ಹೆಜ್ಜೆಯಾಗಿದ್ದರೆ, ಎರಡನೇ ಹೆಜ್ಜೆ ಯಾವುದು? ಮೂರನೇ ಹೆಜ್ಜೆಯೂ ಇದೆಯೇ? ಅದರ ವೇಗ, ದಿಕ್ಕು ಮತ್ತು ಗುರಿ ಯಾವುದು? ಸುನ್ನಿ ದೇಶಗಳು ಯಾವತ್ತೂ ಅಮೆರಿಕದ ಇಶಾರೆಯ ಮೇಲೇ ನಡೆಯುತ್ತವೆ ಎಂಬ ಭ್ರಮೆಯಿಂದಾಗಿಯೇ ಇದು ‘ಇಸ್ಲಾಮಿಕ್ ನ್ಯಾಟೋ’ ಎಂದು ಪಾಕಿಸ್ತಾನ ಎಲ್ಲೆಡೆ ಪ್ರಚಾರ ಮಾಡುತ್ತಿದೆಯೇ? ಹೌದಾಗಿದ್ದರೆ ಅದು ಮುಗ್ಧತನವಷ್ಟೆ. ಇಸ್ಲಾಮಿಕ್ ನ್ಯಾಟೋ ಎಂಬುದೊಂದು ಮೂರ್ಖ ಕಲ್ಪನೆ. ಪಾಕಿಸ್ತಾನದ ಸೇನೆ ಮತ್ತು ಸರಕಾರಗಳು ಪಾಕಿಸ್ತಾನೀಯರಿಗೆ ದುಬಾರಿ ಹಾವಿನೆಣ್ಣೆ ಮಾರುವುದಕ್ಕೆ ಈ ಕಲ್ಪನೆಯನ್ನು ಬಳಸಿಕೊಳ್ಳುತ್ತವೆ, ಬೇಕಿದ್ದರೆ ನೋಡಿ!

ಸ್ಥಳೀಯ ಮಾಧ್ಯಮಗಳಿಗೆ ಇದು ಒಳ್ಳೆಯ ಹೆಡ್‌ಲೈನ್ ಸರಕು. ಜಕಾರ್ತಾ, ಬೋರ್ನಿಯೋ, ಸುಡಾನ್, ಕೈರೋ ಅಥವಾ ಮೊರಕ್ಕೋಗೆ ಹೋದರೆ ಇದರ ಆಕರ್ಷಣೆ ಕಡಿಮೆ. ಮುಸ್ಲಿಂ ಬ್ರದರ್‌ಹುಡ್‌ನಿಂದ ತನ್ನ ದೇಶವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿ ಬಂದಿದ್ದ ಈಜಿಪ್ಟ್‌ನ ಸೇನೆ ಇಸ್ಲಾಮಿಸಂನ ಹೆಸರಿ ನಲ್ಲಿ ಜಾರಿಯಾಗುವ ಯಾವುದೇ ಯೋಜನೆಯ ಹೆಸರು ಕೇಳಿದರೂ ಅಲರ್ಟ್ ಆಗುತ್ತದೆ. ಜಗತ್ತಿನಲ್ಲೇ ಅತಿಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾ ಈಗಾಗಲೇ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಕೊಳ್ಳುತ್ತಿದೆ.

ಅಮೆರಿಕದ ಪಾಲಿಗೆ ಮೆಕ್ಕಾ ಒಪ್ಪಂದವೆಂಬುದು ಮೊಹಮ್ಮದ್ ರೇಜಾ ಪಹ್ಲಾವಿಯ ಆಳ್ವಿಕೆ 1979 ರಲ್ಲಿ ಪತನಗೊಂಡ ನಂತರ ಇಮಾಮ್ ಖೊಮೇನಿಯಿಂದ ಸೃಷ್ಟಿಯಾದ ಇಸ್ಲಾಮಿಕ್ ಚಳವಳಿಯ ನಂತರ ರೂಪುಗೊಂಡ ಇರಾನ್-ವಿರೋಧಿ ಪ್ರಾದೇಶಿಕ ಒಪ್ಪಂದ. ಇರಾನ್‌ನ ಹೊಸ ವ್ಯವಸ್ಥೆ ಆಳವಾಗಿ ಬೇರು ಬಿಡುವುದಕ್ಕೆ ಮೊದಲೇ ಅದನ್ನು ನಾಶಪಡಿಸಬೇಕೆಂದು ಅಮೆರಿಕ ಮತ್ತು ಸೌದಿ ಅರೇಬಿಯಾ ಆಗ ಕೈಜೋಡಿಸಿದ್ದವು.

1980ರಲ್ಲಿ ಸೌದಿ ಅರೇಬಿಯಾವು ಇರಾಕ್‌ನ ಸುನ್ನಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಇರಾನ್ ಮೇಲೆ ದಾಳಿ ನಡೆಸಲು ಆರ್ಥಿಕ ನೆರವು ನೀಡಿತ್ತು. ಆ ಸಮಯದಲ್ಲಿ ಇರಾನ್‌ನ ಅಧಿಕೃತ ಸೇನಾಪಡೆ ವಿಭಜನೆಗೊಂಡಿತ್ತು. ಸೌದಿ-ಇರಾಕ್-ವಾಷಿಂಗ್ಟನ್‌ನ ದೊರೆಗಳು ಒಂದು ಅಥವಾ ಎರಡು ವಾರದಲ್ಲಿ ಇರಾನ್ ಪತನಗೊಳ್ಳುತ್ತದೆ ಎಂದು ಭಾವಿಸಿದ್ದರು. ಆದರೆ ಎಂಟು ವರ್ಷ ಕಳೆದ ಮೇಲೂ ಸಂಘರ್ಷ ಮುಂದುವರೆದಿತ್ತು.

ಸೌದಿ ದೊರೆಗಳನ್ನು ಅಯೋತೊಲ್ಲಾ ಖೊಮೇನಿ ‘ರಿಯಾಧ್‌ನ ಒಂಟೆ ಕಾಯುವವರು’ ಹಾಗೂ ‘ನಜ್ದ್‌ನ ಕಟುಕರು’ ಎಂದು ಕರೆಯುತ್ತಿದ್ದ. ಆ ಅವಧಿಯಲ್ಲಿ ಐಆರ್ ಜಿಸಿ ತನ್ನ ಶಕ್ತಿ ಹೆಚ್ಚಿಸಿಕೊಂಡು ಪ್ರಮುಖ ಸೇನಾಪಡೆಯಾಗಿ ಹೊರಹೊಮ್ಮಿತು. ಅವಮಾನಗೊಂಡ ಸದ್ದಾಂ ಹುಸೇನ್ ಖಾಲಿ ಯಾಗಿದ್ದ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಕುವೈತ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಅದು ಇನ್ನೊಂದು ಅಪಾಯಕಾರಿ ಅಧ್ಯಾಯಕ್ಕೆ ನಾಂದಿ ಹಾಡಿತ್ತು.

ಮೆಕ್ಕಾದ ಇಬ್ಬರು ಗಂಡುಗಲಿಗಳು ತಮ್ಮ ಇತಿಹಾಸದ ಇಕೋ ಚೇಂಬರ್‌ನೊಳಗಿರುವ ಎರಡು ವೈರುಧ್ಯಗಳನ್ನು ಮರೆತೇಬಿಟ್ಟಿದ್ದಾರೆ. ಶತಮಾನದ ಹಿಂದೆ ಅರಬ್ಬರು ಒಟ್ಟೋಮನ್ ಕ್ಯಾಲಿಫೇಟ್ ತೊರೆದು ಮೊದಲನೇ ವಿಶ್ವ ಮಹಾಯುದ್ಧದ ಮೈತ್ರಿಪಡೆಗಳ ಜೊತೆ ಕೈಜೋಡಿಸಿ, ಒಟ್ಟೋಮನ್ ಸಾಮ್ರಾಜ್ಯವನ್ನು ಸೋಲಿಸಿದ್ದರು. ಆಗ ಟರ್ಕಿ ವಿಭಜನೆಯಾಗುವುದನ್ನು ತಪ್ಪಿಸಿದ್ದು ಮುಸ್ತಫಾ ಕೆಮಾಲ್‌ನ ನಾಯಕತ್ವ ಮತ್ತು ಅಲ್ಲಿನ ಜನರ ಹೀರೋಯಿಸಂ.

ಟರ್ಕಿಗೆ 1918ರ ಬೆಳವಣಿಗೆ ಮರೆತು ಹೋಗಿರಬಹುದು. ಆದರೆ ಅಕ್ಟೋಬರ್ 2018ರ ನೆನಪು ಇರಲೇಬೇಕಲ್ಲವೇ? 2018ರಲ್ಲಿ ಅಮೆರಿಕದ ಬೆಂಬಲದೊಂದಿಗೆ ಟರ್ಕಿಯ ರಿಸೆಪ್ ತಯ್ಯಿಪ್ ಎರ್ಡೋಗನ್ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ರನ್ನು ಟರ್ಕಿ ರಾಜಧಾನಿ ಅಂಕಾರಾದಲ್ಲಿರುವ ಸೌದಿ ಅರೇಬಿಯಾದ ದೂತಾವಾಸದಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಸಿಲುಕಿಸಲು ಬಹಳ ಪ್ರಯತ್ನ ಮಾಡಿದ್ದರು. ಈಗ 2026ರಲ್ಲಿ ಎಂಬಿಎಸ್ ನಗಬಹುದು, ಆದರೆ ಹಳೆಯದನ್ನು ಮರೆಯಲು ಹೇಗೆ ಸಾಧ್ಯ? ಈಗಲೂ ನಿಗೂಢ ಪ್ರಶ್ನೆ ಹಾಗೇ ಇದೆ.

ಮೆಕ್ಕಾ ಒಕ್ಕೂಟದಿಂದ ಯುಎಇಯನ್ನು ಹೊರಗಿಟ್ಟಿರುವುದು ಏಕೆ? ಕೊಲ್ಲಿ ದೇಶಗಳು ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತವೆ. ಜಾಗತಿಕವಾಗಿ ಕುವೈತ್ ಮತ್ತು ಬಹರೇನ್ ನಿಷ್ಕ್ರಿಯವಾಗಿರುತ್ತವೆ. ಈಜಿಪ್ಟ್ ಮತ್ತು ಕತಾರ್ ದೇಶಗಳು ಸ್ವತಂತ್ರ ನೀತಿ ಅನುಸರಿಸುತ್ತವೆ. ಸೌದಿ ಅರೇಬಿಯಾ ಮತ್ತು ಯುಎಇಗಳು ವಿದೇಶಾಂಗ ನೀತಿ ಹಾಗೂ ರಕ್ಷಣಾ ನೀತಿಗಳ ವಿಷಯದಲ್ಲಿ ಒಂದಾಗಿ ಸಾಗುತ್ತಾ, ಏನೇ ಅಡ್ಡಿ ಆತಂಕಗಳು ಬಂದರೂ ಎಚ್ಚರಿಕೆಯಿಂದ ಎದುರಿಸುತ್ತವೆ.

ಮೆಕ್ಕಾ ಒಪ್ಪಂದ ಏಕ-ಆಯಾಮದ್ದಾಗಿದೆ ಎಂಬುದೇ ಸದ್ಯಕ್ಕೆ ಇನ್ನಿತರ ಮುಸ್ಲಿಂ ದೇಶಗಳು ಅದರಲ್ಲಿ ಸೇರಿಕೊಂಡಿಲ್ಲದೆ ಇರುವುದಕ್ಕೆ ಕಾಣಿಸುವ ಏಕೈಕ ಕಾರಣ. ಪಾಕಿಸ್ತಾನ ಇಲ್ಲಿ ಸೇನಾ ಪಡೆಯ ನೆರವು ನೀಡುವುದಕ್ಕಷ್ಟೇ ಸೀಮಿತವಾಗಿದೆ. ಅದರ ಸರ್ವಋತು ಸೇನಾ ಸಾಮರ್ಥ್ಯ ಕೂಡ ಪರೀಕ್ಷೆಗೆ ಒಳಗಾಗ ಬೇಕಿದೆ ಎಂಬುದು ಬೇರೆ ಪ್ರಶ್ನೆ. ಮುಸ್ಲಿಂ ನ್ಯಾಟೋ ದೇಶಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಅಂದರೆ ಭಾರತದ ಜೊತೆಗೆ ಆರ್ಥಿಕ ಸೇತುವೆ ನಿರ್ಮಿಸಿಕೊಳ್ಳಬೇಕು.

ಹೀಗಾಗಿ ದೆಹಲಿ ಜೊತೆಗೆ ಸಂಬಂಧ ವೃದ್ಧಿಸಿಕೊಳ್ಳುವ ಹೊಣೆಯನ್ನು ಯುಎಇಗೆ ಹೊರಗುತ್ತಿಗೆ ನೀಡ ಲಾಗಿದೆ. ಸೌದಿಯವರು ಭದ್ರತಾ ವಿಭಾಗವನ್ನು ನೋಡಿಕೊಳ್ಳುತ್ತಾರೆ. ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಾದ ಬದಲಾವಣೆಯ ಪ್ರಮುಖ ಅಂಶವೆಂದರೆ ಹಿಂದೂ ಮಹಾಸಾಗರ ಪ್ರದೇಶದ ಭದ್ರತೆಯ ವಿಷಯದಲ್ಲಿ ಭಾರತವನ್ನು ಹೊರಗಿಡುವುದಕ್ಕೆ ಪ್ರಯತ್ನಿ ಸಿದ್ದು.

ಪಶ್ಚಿಮ ಏಷ್ಯಾದಿಂದ ಮಲಕ್ಕಾ ಕೊಲ್ಲಿಯವರೆಗೂ ಟ್ರಂಪ್ ಈ ಪ್ರಯತ್ನ ಮಾಡಿದ್ದಾರೆ. ಆದ್ದರಿಂದಲೇ ‘ಇಂಡೋ-ಪೆಸಿಫಿಕ್’ ಪದದಿಂದ ಅವರು ಇಂಡೋ ಪದವನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೋ ಗೊರ್ ಹಾರಿಕೆಯ ಉತ್ತರ ನೀಡಿದ್ದಾರೆ. ಬಾಂಗ್ಲಾದೇಶದ ಚುನಾವಣೆಯಲ್ಲಿ ಜಮಾತ್ ಎ ಇಸ್ಲಾಮಿಗೆ ಅಮೆರಿಕದಿಂದ ದೊರೆತ ಬೆಂಬಲಕ್ಕೆ ಇದರಲ್ಲೇ ಕಾರಣ ಸಿಗಬಹುದು.

ಭಾರತ ಇಂದು ಹಿಂದೂ ಮಹಾಸಾಗರದಲ್ಲಿ ಬಹುದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾರತದ ನೌಕಾನೆಲೆಯನ್ನು ಬಲಪಡಿಸಿದ ನಂತರ ಹಾಗೂ ನಮ್ಮ ದೇಶದ ನೌಕಾಪಡೆಯ ಶಕ್ತಿಯನ್ನು 200 ಯುದ್ಧನೌಕೆಗಳಿಗೆ ಹೆಚ್ಚಿಸಿದ ನಂತರ ಶ್ವೇತಭವನಕ್ಕೆ ಚಡಪಡಿಕೆ ಆರಂಭವಾಗಿದೆ. ಭಾರತ ತನಗೆ ನಿಷ್ಠೆ ತೋರಬೇಕು ಎಂಬುದಷ್ಟೇ ಟ್ರಂಪ್ ಆಸೆ. ಹಿಂದೆ ಹೀಗಿರಲಿಲ್ಲ. ಬಿಲ್ ಕ್ಲಿಂಟನ್‌ರಿಂದ ಆರಂಭಿಸಿ ಟ್ರಂಪ್ ವರೆಗಿನ ಎಲ್ಲಾ ಅಮೆರಿಕದ ಅಧ್ಯಕ್ಷರೂ ಭಾರತ ಹಂತಹಂತವಾಗಿ ವಿಶ್ವಾಸಾರ್ಹ ಪ್ರಜಾಸತ್ತಾತ್ಮಕ, ಆರ್ಥಿಕ ಹಾಗೂ ಅಣ್ವಸ ದೇಶವಾಗಿ ಬೆಳೆದಿರುವುದನ್ನು ಗೌರವಿಸಿದ್ದಾರೆ. 1990ರ ದಶಕದವರೆಗೆ ಅಮೆರಿಕದ ದೃಷ್ಟಿಯಲ್ಲಿ ಭಾರತವೊಂದು ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಈಗ ಅದು ಬದಲಾಗಿದೆ.

ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ 9/11 ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತದ ವಿಷಯ ದಲ್ಲಿ ಅಮೆರಿಕಕ್ಕೆ ಹೊಸ ಆಸಕ್ತಿ ಮೂಡಿತ್ತು. ಹೀಗಾಗಿ ಅಲ್ಲಿನ ನಾಯಕರು ಭಾರತವನ್ನು ತಮ್ಮ ವ್ಯೂಹಾತ್ಮಕ ವಲಯದೊಳಗೆ ಸೇರಿಸಿಕೊಳ್ಳಲು ಯತ್ನಿಸಿದ್ದರು. ಎರಡನೇ ನ್ಯಾಟೋ ಎಂಬ ಯೋಚನೆ ಒರಿಜಿನಲ್ ಅಲ್ಲ. 9/11 ದಾಳಿಯ ಬಳಿಕ ಭಾರತದ ನೇತೃತ್ವದಲ್ಲಿ ಪೂರ್ವ ನ್ಯಾಟೋ ಎಂಬ ಸೇನಾ ಒಕ್ಕೂಟವನ್ನು ರಚಿಸಲು ಅಮೆರಿಕ ಪ್ರಯತ್ನಿಸಿತ್ತು.

ಭಾರತಸ್ನೇಹಿ ವಿದೇಶಾಂಗ ಅಧಿಕಾರಿ ನಿಕೋಲಸ್ ಬರ್ನ್ಸ್ ಈ ಪ್ರಯತ್ನದ ಮುಂಚೂಣಿಯಲ್ಲಿದ್ದರು. ಪಕ್ಷಾತೀತವಾಗಿ, ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಮಿಲಿಟರಿ ಒಕ್ಕೂಟ ಇರಬೇಕೆಂದು ಅವರು ಹೇಳಿದ್ದರು. ಇಸ್ಲಾಮಿಕ್ ಭಯೋತ್ಪಾದನೆಯನ್ನು ವ್ಯಾಖ್ಯಾನಿಸಿದ್ದು ವಾಷಿಂಗ್ಟನ್, ಪೆಂಟಗನ್ ಮತ್ತು ಲ್ಯಾಂಗ್ಲ್ದೆ. 2003ರಲ್ಲಿ ಸದ್ದಾಂ ಹುಸೇನ್ ವಿರುದ್ಧದ ಯುದ್ಧದಲ್ಲಿ ಭಾರತ ಪಾಲ್ಗೊಳ್ಳಬೇಕೆಂದು ಅಮೆರಿಕ ಬಯಸಿತ್ತು. ಆಗ ಹಿರಿಯ ಸಚಿವರಾಗಿದ್ದ ಜಸವಂತ್ ಸಿಂಗ್ ಮುಂತಾದವರು ಅದರ ಪರವಾಗಿ ಮಾತನಾಡಿದ್ದರು. ಆದರೆ ಪ್ರಧಾನಿ ವಾಜಪೇಯಿ ಒಪ್ಪಲಿಲ್ಲ.

ನಮ್ಮ ವಿದೇಶಾಂಗ ನೀತಿ ಹೇಗಿದೆಯೋ ಹಾಗೇ ಇರಲಿ ಎಂದರು. ಆದರೂ ಭಾರತದ ಮೇಲಿನ ಅಮೆರಿಕದ ವಿಶ್ವಾಸ ಕಡಿಮೆಯಾಗಲಿಲ್ಲ. ಮನಮೋಹನ ಸಿಂಗ್ ಅವರ ಸರ್ಕಾರದಲ್ಲೂ ಅದು ಮುಂದುವರೆಯಿತು. ಭಾರತದ ನೀತಿ ಈಗಲೂ ಹಾಗೇ ಉಳಿದಿದೆ. ಆದರೆ ಅಮೆರಿಕದ ವಿಶ್ವಾಸ ಹಾಗೆ ಉಳಿದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸೆರ್ಗಿಯೋ ಗೊರ್ ಇತ್ತೀಚೆಗೆ ಹೇಳಿದ್ದು ಸ್ವಾಗತಾರ್ಹವೇನೋ ಹೌದು. ಆದರೆ ಇದು ಊಟಕ್ಕಿಂತ ಮೊದಲು ಹಂಚುವ ಕೋಸಂಬರಿ ಇದ್ದಂತೆ. ಮುಖ್ಯವಾದ ಊಟವನ್ನು ಟ್ರಂಪ್ ಬೇರೆಲ್ಲೋ ಬಡಿಸುತ್ತಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಿಂತು ಈ ಮಾತು ಹೇಳಿದ್ದರೆ ಒಪ್ಪಬಹುದಿತ್ತು. ಏನೂ ಹೇಳದೆ ಇರುವು ದಕ್ಕಿಂತ ಭಾರತದ ಪರವಾಗಿ ಏನಾದರೂ ಹೇಳುವುದು ಒಳ್ಳೆಯದೇ. ಆದರೆ ಅದು ಮೇಲುಮೇಲಿನ ಮಾತಾಗಿ ಮಾತ್ರ ಉಳಿಯುತ್ತದೆ. ಕಾಶ್ಮೀರವೆಂಬುದು ಪಾಕಿಸ್ತಾನದ ಗೀಳು. ಅದಕ್ಕಾಗಿ ಭಾರತದ ವಿರುದ್ಧ ಎಲ್ಲಾ ಮುಸ್ಲಿಂ ದೇಶಗಳೂ ತನ್ನ ಪರ ನಿಲ್ಲಬೇಕೆಂದು ಅದು ಬಯಸುತ್ತದೆ. ದಕ್ಷಿಣ ಏಷ್ಯಾದಲ್ಲಿ ಭಾರತಕ್ಕೆ ಗಾಳ ಹಾಕಲು ನಿಂತವರಿಗೆಲ್ಲ ಮೆಕ್ಕಾ ಒಪ್ಪಂದ ಬಹಳ ಅನುಕೂಲಕರ ಸಂಚಾಗಿ ಹೊರಹೊಮ್ಮಿದೆ.

ಬಾಂಗ್ಲಾದೇಶವೂ ಮೀನು ಹಿಡಿಯಲು ಯತ್ನಿಸುತ್ತಿದೆ. ಅಲ್ಲಿನ ಪ್ರಧಾನಿ ತಾರೀಖ್ ರೆಹಮಾನ್‌ರ ಭಾರತ ಭೇಟಿಯನ್ನು ತಡೆದಿದ್ದು ಢಾಕಾದಲ್ಲಿರುವ ಭಾರತ-ವಿರೋಧಿ ಲಾಬಿಯೇ. ಆ ಲಾಬಿಯು ಪಾಕಿಸ್ತಾನದ ಜೊತೆಗೆ ಬಾಂಗ್ಲಾದ ಸಂಬಂಧ ವೃದ್ಧಿಸಿಕೊಳ್ಳಲು ಒತ್ತಡ ಹಾಕುತ್ತಿದೆ. ಪರಿಣಾಮ ವಾಗಿಯೇ ಆಗಸ್ಟ್ 15ರಂದು ಬಾಂಗ್ಲಾದೇಶದ ಗುಪ್ತಚರ ಪಡೆಗಳ ಪ್ರಧಾನ ನಿರ್ದೇಶಕರ ನೇತೃತ್ವ ದಲ್ಲಿ ಆರು ಜನರ ನಿಯೋಗ ಪಾಕಿಸ್ತಾನಕ್ಕೆ ಹೋಗಿತ್ತು.

(ಮುಂದುವರೆಯುವುದು)