ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

Delhi Building Collapse: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದು, NDRF, ಅಗ್ನಿಶಾಮಕ ದಳ ಹಾಗೂ ದೆಹಲಿ ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ದುರಸ್ತಿ ಕಾಮಗಾರಿ ವೇಳೆ ಕುಸಿದ ಕಟ್ಟಡ: ದೆಹಲಿಯಲ್ಲಿ 6 ಮಂದಿ ಬಲಿ

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: -

Profile
Sushmitha Jain Sep 7, 2026 11:10 AM

ನವದೆಹಲಿ: ದೆಹಲಿಯ ಸತ್ಯ ನಿಕೇತನ (Satya Niketan) ಪ್ರದೇಶದಲ್ಲಿ ಕಟ್ಟಡ ಕುಸಿದು (Building Collapse) ಆರು ಮಂದಿ ಮೃತಪಟ್ಟಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ (Debris) ಸಿಲುಕಿದ್ದವರನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಟ್ಟಡ ಕುಸಿದ ಕ್ಷಣದ ಸಿಸಿಟಿವಿ ದೃಶ್ಯಗಳು ಇದೀಗ ಲಭ್ಯವಾಗಿದ್ದು, ಕಟ್ಟಡ ಏಕಾಏಕಿ ಕುಸಿಯುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಕಟ್ಟಡ ಕುಸಿಯುವ ವೇಳೆ ಧೂಳು ಮತ್ತು ಅವಶೇಷಗಳು ಎಲ್ಲೆಡೆ ಹರಡಿದ್ದು, ಒಬ್ಬ ವ್ಯಕ್ತಿ ಸ್ಥಳದಿಂದ ವೇಗವಾಗಿ ಓಡಿಹೋಗುತ್ತಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ

ಭಾನುವಾರ ಈ ಘಟನೆ ಸಂಭವಿಸಿದ್ದು, ಕಟ್ಟಡದ ನೆಲಮಹಡಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಟ್ಟಡ ಕುಸಿದಿದೆ ಎನ್ನಲಾಗಿದೆ. ಐದು ಅಂತಸ್ತಿನ ಈ ಕಟ್ಟಡದಲ್ಲಿ ಮುಖ್ಯವಾಗಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಾಸಿಸುತ್ತಿದ್ದರು.



ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ದಳ, ದೆಹಲಿ ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ತಂಡಗಳು ಎರಡನೇ ದಿನವೂ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಭಾರೀ ಪ್ರಮಾಣದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.

LPG ಇ-ಕೆವೈಸಿ ಪೂರ್ಣಗೊಳಿಸಲು ಇಂದೇ ಕೊನೆ ದಿನ; ಮಾಡದಿದ್ದರೆ ದುಬಾರಿಯಾಗಲಿದೆ ಸಿಲಿಂಡರ್!

ತನಿಖೆಗೆ ಸಿಎಂ ಆದೇಶ

ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತನಿಖೆಗೆ ಆದೇಶಿಸಿದ್ದಾರೆ. ಕಟ್ಟಡ ಕುಸಿಯಲು ಕಾರಣವಾದ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದೇ ವೇಳೆ ದೆಹಲಿ ಪೊಲೀಸರು ಕಟ್ಟಡದ ಮಾಲೀಕ ಎನ್ನಲಾದ ಹರಿರಾಮ್ ಬನ್ಸಾಲ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಸೌತ್ ಕ್ಯಾಂಪಸ್ ಪೊಲೀಸ್ ಠಾಣೆಯಲ್ಲಿ BNS ಅಡಿಯಲ್ಲಿ FIR ದಾಖಲಾಗಿದೆ. ಈ ಕಟ್ಟಡವನ್ನು PG ವಸತಿ ವ್ಯವಸ್ಥೆಯಾಗಿ ಬಳಸಲಾಗುತ್ತಿತ್ತು. ಕಟ್ಟಡದ ನೆಲಮಹಡಿಯಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಅದರಿಂದಲೇ ಕಟ್ಟಡ ಕುಸಿದಿರಬಹುದು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ

ಘಟನೆಯ ಬೆನ್ನಲ್ಲೇ ದೆಹಲಿಯಲ್ಲಿನ PG ವಸತಿಗಳ ಸುರಕ್ಷತೆ ಹಾಗೂ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳ ಜಾರಿ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಭಾನುವಾರ ಸುಮಾರು 200 ABVP ಕಾರ್ಯಕರ್ತರು ದೆಹಲಿ ಸಿವಿಕ್ ಸೆಂಟರ್‌ನಲ್ಲಿ ಪ್ರತಿಭಟನೆ ನಡೆಸಿ, MCD ಆಯುಕ್ತರ ರಾಜೀನಾಮೆಗೆ ಆಗ್ರಹಿಸಿದರು. ವಿದ್ಯಾರ್ಥಿಗಳ ವಸತಿ ಪ್ರದೇಶಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ABVP ಆರೋಪಿಸಿದೆ.