Roopa Gururaj Column: ಕಸ್ತೂರಿಮೃಗದ ಭ್ರಮೆ ಮತ್ತು ಅಷ್ಟಾವಕ್ರರ ಉತ್ತರ
ನಾವು ಯಾವುದೋ ಹೊಸದನ್ನು ಪಡೆಯಬೇಕಿಲ್ಲ, ಬದಲಾಗಿ ನಾವು ಈಗಾಗಲೇ ಪೂರ್ಣ ರಾಗಿದ್ದೇವೆ ಎಂಬ ಅರಿವು ನಮಗೆ ಬೇಕಾಗಿದೆ. ಯಾವಾಗ ನಾವು ನನಗೆ ಏನೋ ಬೇಕು ಎಂಬ ಹಂಬಲವನ್ನು ಬಿಟ್ಟು ‘ನಾನು ಈಗಾಗಲೇ ಸುಖಿಯಾಗಿದ್ದೇನೆ’ ಎಂದು ಪ್ರಶಾಂತವಾಗಿ ಕುಳಿತುಕೊಳ್ಳುತ್ತೇವೆಯೋ, ಆಗಲೇ ನಮಗೆ ಸತ್ಯದ ದರ್ಶನವಾಗುತ್ತದೆ.
-
ಒಂದೊಳ್ಳೆ ಮಾತು
ಒಬ್ಬ ಶಿಷ್ಯನು ದೀರ್ಘಕಾಲ ಕಾಡು-ಮೇಡು ಅಲೆದು, ತಪಸ್ಸು ಮಾಡಿ, ಕೊನೆಗೆ ಅಷ್ಟಾವಕ್ರ ಮುನಿಗಳ ಆಶ್ರಮಕ್ಕೆ ಬಂದನು. ಅವನ ಕಣ್ಣುಗಳಲ್ಲಿ ಆಯಾಸವಿತ್ತು, ಆದರೆ ಮನಸ್ಸಿನಲ್ಲಿ ಏನನ್ನೋ ಸಾಧಿಸಬೇಕೆಂಬ ಹಂಬಲವಿತ್ತು. ಅವನು ಅಷ್ಟಾವಕ್ರರ ಪಾದಗಳಿಗೆ ನಮಸ್ಕರಿಸಿ ಒಂದು ಪ್ರಶ್ನೆ ಕೇಳಿದನು- “ಗುರುದೇವ, ನನಗೂ ಜ್ಞಾನೋದಯವಾಗಬೇಕು, ನನಗೂ ಆ ಪರಮಸುಖದ ಅನುಭವವಾಗಬೇಕು. ಮುಕ್ತಿ ಪಡೆಯಬೇಕೆಂಬ ಈ ಹಂಬಲ ಸರಿಯೇ?" ಅಷ್ಟಾವಕ್ರರು ಅವನನ್ನು ದಿಟ್ಟಿಸಿ ನೋಡಿ ನಸು ನಗುತ್ತಾ ಹೇಳಿದರು, “ಮಗನೇ, ಮುಕ್ತಿ ಯನ್ನು ಬಯಸುವುದು ಎಂದರೆ ನೀನು ಇನ್ನೂ ಗಾಢನಿದ್ರೆಯಲ್ಲಿದ್ದೀಯ ಎಂದೇ ಅರ್ಥ!
ಏಕೆಂದರೆ ಬಯಕೆ ಎನ್ನುವುದು ಯಾವಾಗಲೂ ‘ಭವಿಷ್ಯ’ಕ್ಕೆ ಸೇರಿದ್ದು. ಜ್ಞಾನೋದಯ ಎನ್ನುವುದು ‘ವರ್ತಮಾನ’ ದಲ್ಲಿದೆ. ಯಾವಾಗ ನೀನು ಅದನ್ನು ಪಡೆಯಬೇಕೆಂದು ಬಯಸುತ್ತೀಯೋ, ಆಗ ನೀನು ಅದನ್ನು ನಾಳೆಗೆ ಮುಂದೂಡುತ್ತಿದ್ದೀಯ ಎಂದೇ ಅರ್ಥ".
ಶಿಷ್ಯನಿಗೆ ಗೊಂದಲವಾಯಿತು. “ಪಡೆಯಬೇಕೆಂಬ ಹಂಬಲವಿಲ್ಲದೆ ಗುರಿ ಮುಟ್ಟುವುದು ಹೇಗೆ?" ಎಂದು ಕೇಳಿದನು. ಆಗ ಅಷ್ಟಾವಕ್ರರು ಒಂದು ಸುಂದರ ಉದಾಹರಣೆ ನೀಡಿದರು, “ಕಸ್ತೂರಿ ಮೃಗವು ತನ್ನದೇ ಹೊಕ್ಕುಳಿನಿಂದ ಬರುವ ಸುಗಂಧವನ್ನು ಗುರುತಿಸದೆ, ಆ ಪರಿಮಳ ಎಲ್ಲಿದೆ ಎಂದು ಹುಡುಕುತ್ತಾ ಕಾಡಿನ ತುಂಬೆ ಓಡುತ್ತದೆ.
ಇದನ್ನೂ ಓದಿ: Roopa Gururaj Column: ಬಿದಿರು ಕೃಷ್ಣನ ಕೈಯಲ್ಲಿ ಪವಿತ್ರ ವೇಣುವಾದ ಕಥೆ
ಅದು ಬೆಟ್ಟ-ಗುಡ್ಡಗಳನ್ನು ಅಲೆಯು ತ್ತದೆ, ಬಂಡೆಗಳಿಗೆ ಡಿಕ್ಕಿ ಹೊಡೆದು ರಕ್ತಸಿಕ್ತವಾಗುತ್ತದೆ, ಸುಸ್ತಾಗುತ್ತದೆ. ಆದರೆ ಆ ಸುಗಂಧ ಬೇರೆಲ್ಲಿಯೂ ಇಲ್ಲ, ತನ್ನೊಳಗೇ ಇದೆ ಎಂದು ತಿಳಿದಾ ಕ್ಷಣ ಅದರ ಓಟ ನಿಲ್ಲುತ್ತದೆ. ಆ ಓಟ ನಿಂತ ಕ್ಷಣವೇ ಅದು ಸುಗಂಧವನ್ನು ಆಸ್ವಾದಿಸಲು ಶುರು ಮಾಡುತ್ತದೆ. ನಿನ್ನ ಸ್ಥಿತಿಯೂ ಹಾಗೆಯೇ ಇದೆ".
ಆಧ್ಯಾತ್ಮಿಕ ಹಸಿವಿನಿಂದ ಕೂಡಿದ ಮನಸ್ಸು ಯಾವಾಗಲೂ ‘’ಒಂದು ದಿನ ನಾನು ಸಿದ್ಧ ನಾಗುತ್ತೇನೆ, ಒಂದು ದಿನ ನಾನು ಆ ಪರಮ ಸುಖದ ಗುರಿ ಮುಟ್ಟುತ್ತೇನೆ" ಎಂದು ಹೇಳುತ್ತಿರುತ್ತದೆ.
ಆದರೆ ಅಷ್ಟಾವಕ್ರರು ನೀಡುವ ಉತ್ತರ ಅತ್ಯಂತ ಸರಳ ಮತ್ತು ಮಾರ್ಮಿಕ: “ನೀನು ನಿನ್ನನ್ನು ಎಂದೂ ಬಿಟ್ಟು ಹೋಗಲೇ ಇಲ್ಲ, ಇನ್ನು ಮುಟ್ಟುವುದಾದರೂ ಎಲ್ಲಿಗೆ?". ನಾವೆಲ್ಲರೂ ಸುಖವನ್ನು ವಸ್ತುಗಳಲ್ಲಿ, ಹಣದಲ್ಲಿ ಅಥವಾ ಭವಿಷ್ಯದ ಸಾಧನೆಗಳಲ್ಲಿ ಹುಡುಕುತ್ತಿದ್ದೇವೆ. ಆದರೆ ಅಷ್ಟಾವಕ್ರರ ಪ್ರಕಾರ, ಸತ್ಯವು ಕಾಲಾತೀತವಾದುದು.
ನಾವು ಯಾವುದೋ ಹೊಸದನ್ನು ಪಡೆಯಬೇಕಿಲ್ಲ, ಬದಲಾಗಿ ನಾವು ಈಗಾಗಲೇ ಪೂರ್ಣ ರಾಗಿದ್ದೇವೆ ಎಂಬ ಅರಿವು ನಮಗೆ ಬೇಕಾಗಿದೆ. ಯಾವಾಗ ನಾವು ನನಗೆ ಏನೋ ಬೇಕು ಎಂಬ ಹಂಬಲವನ್ನು ಬಿಟ್ಟು ‘ನಾನು ಈಗಾಗಲೇ ಸುಖಿಯಾಗಿದ್ದೇನೆ’ ಎಂದು ಪ್ರಶಾಂತವಾಗಿ ಕುಳಿತುಕೊಳ್ಳುತ್ತೇವೆಯೋ, ಆಗಲೇ ನಮಗೆ ಸತ್ಯದ ದರ್ಶನವಾಗುತ್ತದೆ.
ನಾವೆಲ್ಲರೂ ಯಾವುದೋ ಒಂದರ ಹಿಂದೆ ಓಡುತ್ತಿದ್ದೇವೆ. ನೆಮ್ಮದಿ, ಯಶಸ್ಸು ಅಥವಾ ಆಧ್ಯಾತ್ಮಿಕ ಮುಕ್ತಿ- ಹೀಗೆ ನಮ್ಮ ಹುಡುಕಾಟ ನಿರಂತರ. ನಾವು ಪರಮಾತ್ಮನನ್ನು ಅಥವಾ ನೆಮ್ಮದಿಯನ್ನು ಹುಡುಕಿಕೊಂಡು ಜಗತ್ತನ್ನೆ ಸುತ್ತುತ್ತೇವೆ. ಆದರೆ ನಾವು ಎಲ್ಲಿಯವರೆಗೆ ಹುಡುಕಾಟದಲ್ಲಿ ಇರುತ್ತೇವೆಯೋ ಅಲ್ಲಿಯವರೆಗೆ ಸತ್ಯದಿಂದ ದೂರವಿದ್ದೀವಿ ಎಂದೇ ಅರ್ಥ.
ಹುಡುಕಾಟ ನಿಲ್ಲಿಸಿ, ನಮ್ಮ ಒಳಗೆ ಇಣುಕಿ ನೋಡಿದಾಗ, ಸುಖವು ಹೊರಗಿನ ಸಾಧನೆ ಯಲ್ಲಿಲ್ಲ, ಸುಖವು ನಮ್ಮ ಅಂತರಾತ್ಮದಲ್ಲಿದೆ ಎಂಬ ಸತ್ಯ ಅರಿವಾಗುತ್ತದೆ. ‘ಮುಕ್ತಾಭಿಮಾ ನೀ ಮುಕ್ತೋ ಹಿ ಬದ್ಧೋ ಬದ್ಧಾಭಿಮಾನಿನಃ, ಕಿಂವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್’ ಅಂದರೆ, ನಾನು ಮುಕ್ತನು ಎಂದು ಯಾರು ದೃಢವಾಗಿ ನಂಬುತ್ತಾರೋ, ಅವರು ನಿಜವಾಗಿಯೂ ಮುಕ್ತರೇ ಆಗಿರುತ್ತಾರೆ.
ನಾನು ಸಂಸಾರದಲ್ಲಿ ಸಿಲುಕಿಕೊಂಡಿದ್ದೇನೆ, ನಾನು ಬದ್ಧನು ಎಂದು ಯಾರು ಭಾವಿಸುತ್ತಾರೋ, ಅವರು ಬಂಧನದ ಇರುತ್ತಾರೆ. ಯಾವ ತರಹದ ಬುದ್ಧಿ ಅಥವಾ ಆಲೋಚನೆ ನಮ್ಮಲ್ಲಿರುತ್ತದೆಯೋ, ಅಂಥದ್ದೇ ಗತಿ (ಸ್ಥಿತಿ) ನಮಗೆ ಪ್ರಾಪ್ತವಾಗುತ್ತದೆ ಎಂಬುದು ಇಲ್ಲಿನ ಸತ್ಯ. ಸತ್ಯವನ್ನು ಪಡೆಯಬೇಕಿಲ್ಲ, ಅಸತ್ಯವನ್ನು ಬಿಟ್ಟರೆ ಸಾಕು. ಇಂಥ ಅಮೃತ ಸದೃಶ ಮಾತುಗಳು ನಮ್ಮ ಬದುಕಿಗೆ ದಾರಿದೀಪವಾಗಲಿ.