Yagati Raghu Naadig Column: ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವ ಕನ್ನಡ ಕಿಂಕರನಾದ
ಮತ ಪ್ರಚಾರಕ್ಕೆ ಬೇಕಾಗುವಷ್ಟು/ಸಾಕಾಗುವಷ್ಟು ಕನ್ನಡವನ್ನು ಅವರು ಕಲಿತಿದ್ದರೆ ಸಾಕಾಗಿತ್ತೇನೋ? ಆದರೆ ಕನ್ನಡದ ಸೊಗಡು ಅವರನ್ನು ಇನ್ನಿಲ್ಲದಂತೆ ಸೆಳೆದುಬಿಟ್ಟಿತು. ಹೀಗಾಗಿ ‘ವ್ಯಾವಹಾರಿಕ/ಧಾರ್ಮಿಕ’ ಅಗತ್ಯವನ್ನೂ ಮೀರಿ, ಕರ್ನಾಟಕದ ಕಲೆ-ಸಂಸ್ಕೃತಿ-ಪರಂಪರೆಗಳ ಅಧ್ಯಯನಕ್ಕೆ ಇಳಿದು ಅನನ್ಯ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಂಡರು, ಕನ್ನಡಿಗರೇ ಆಗಿಬಿಟ್ಟರು ಮೋಗ್ಲಿಂಗ್.
-
ಯಗಟಿ ರಘು ನಾಡಿಗ್
Nov 3, 2025 11:30 AM
ಕನ್ನಡಕ್ಕಾಗಿ ದುಡಿದ ವಿದೇಶಿ ಚೇತನ
ಅನ್ನಪೂರ್ಣ’ ಎಂಬ ಕನ್ನಡ ಚಲನಚಿತ್ರದಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ಅವರು ಹಾಡಿರುವ “ಕನ್ನಡವೇ ತಾಯ್ನುಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ" ಎಂಬ ಹಾಡನ್ನು ಕೇಳಿ ಆನಂದಿಸದ ಕನ್ನಡಿಗರಿಲ್ಲ. ಕನ್ನಡನಾಡಿನ ಸಂಸ್ಕೃತಿ-ಪರಂಪರೆಗಳನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಟ್ಟಿರುವ ಚಿ.ಉದಯಶಂಕರರ ಗೀತೆಯಿದು. ಕರುನಾಡಿನ ಇಂಥ ಭವ್ಯ ಇತಿಹಾಸಕ್ಕೆ ಅನನ್ಯ ಕೊಡುಗೆ ನೀಡಿದ ಮತ್ತು ಸಾಹಿತ್ಯ-ಸಂಗೀತ-ಶಿಲ್ಪಕಲೆ ಮುಂತಾದ ಕ್ಷೇತ್ರಗಳಿಗೆ ಸೇರಿದ ಗಣನೀಯ ಸಂಖ್ಯೆಯ ಕನ್ನಡಿಗರು ನಮ್ಮಲ್ಲಿ ಆಗಿ ಹೋಗಿದ್ದಾರೆ. ಆದರೆ, ಮೇಲೆ ಉಲ್ಲೇಖಿಸಿರುವ ಹಾಡಿನಲ್ಲಿರುವಂತೆ ಕನ್ನಡವು ತಾಯ್ನುಡಿಯಾಗಿಲ್ಲದ, ಕರುನಾಡು ತಾಯ್ನಾಡಾ ಗಿಲ್ಲದ, ಮೂಲತಃ ಕನ್ನಡಿಗರೂ ಆಗಿಲ್ಲದ ಸಾಕಷ್ಟು ವಿದೇಶಿ ಚೇತನಗಳು ಕೂಡ ಕನ್ನಡಕ್ಕಾಗಿ ದುಡಿದಿವೆ ಎಂಬುದು ಹೆಮ್ಮೆಯ ಸಂಗತಿ. ಅಂಥ ಒಂದು ಅನರ್ಘ್ಯ ರತ್ನದ ಕುರಿತಾದ ಪಕ್ಷಿನೋಟ ವಿದು.
‘ಮಂಗಳೂರು ಸಮಾಚಾರ’ ಬಿತ್ತರಿಸಿದವರು
ಭಾರತದಲ್ಲಿ ಮೂಲಸೌಕರ್ಯಗಳ ಕೊರತೆಯು ಬೃಹದಾಕಾರದಲ್ಲಿ ತಾಂಡವವಾಡುತ್ತಿದ್ದಾಗ, ಮಾಹಿತಿ ಪ್ರಸರಣವು ಸವಾಲಿನ ಸಂಗತಿಯೇ ಆಗಿತ್ತು. ಇಷ್ಟಾಗಿಯೂ 1782ರ ಮಾರ್ಚ್ ೩೦ರಂದು ‘ದಿ ಬೆಂಗಾಲಿ ಗೆಜೆಟ್’ ಎಂಬ ಇಂಗ್ಲಿಷ್ ದಿನಪತ್ರಿಕೆಯು ಕಲ್ಕತ್ತದಲ್ಲಿ ಶುರುವಾಯಿತು. ಇದನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಎಂಬಂತೆ, ಕರ್ನಾಟಕದ ಮಂಗಳೂರಿನಲ್ಲಿ ‘ಮಂಗಳೂರು ಸಮಾಚಾರ’ ಹೆಸರಿನ ಕನ್ನಡದ ಮೊಟ್ಟಮೊದಲ ಪತ್ರಿಕೆ ಶುರುವಾಯಿತು. ಆದರೆ ಇದರ ಹಿನ್ನೆಲೆ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು; ಕಾರಣ, ಇದಕ್ಕೆ ಜನ್ಮವಿತ್ತವರು ಓರ್ವ ವಿದೇಶಿ ಪ್ರಜೆ. ಅವರೇ ಹರ್ಮನ್ ಮೋಗ್ಲಿಂಗ್!
ಮೂಲತಃ ಜರ್ಮನಿ ದೇಶದವರಾದ ಹರ್ಮನ್ ಮೋಗ್ಲಿಂಗ್, ಕ್ರೈಸ್ತ ಧರ್ಮದ ಪ್ರಚಾರದ ಉದ್ದೇಶಕ್ಕಾಗಿ ಭಾರತಕ್ಕೆ ಆಗಮಿಸಿ ಮಂಗಳೂರಿನಲ್ಲಿ ನೆಲೆಯಾಗಿದ್ದರು. ಧರ್ಮ ಪ್ರಚಾರಕ್ಕೆ ‘ಸಂವಹನ ಸಾಮರ್ಥ್ಯ’ ಬಹಳ ಮುಖ್ಯ; ಆದರೆ ಪರದೇಶ-ಪರಭಾಷೆಯ ಈ ವ್ಯಕ್ತಿ ಈ ನಿಟ್ಟಿನಲ್ಲೇ ಸವಾಲು ಎದುರಿಸಬೇಕಾಗಿ ಬಂತು. ಹಾಗಂತ ಸೋಲೊಪ್ಪದ, ಹಿಡಿದ ಪಟ್ಟು ಸಡಿಲಿಸದ ಮೋಗ್ಲಿಂಗ್, ದಿನಗಳೆದಂತೆ ಕನ್ನಡವನ್ನು ಮೈಗೂಡಿಸಿಕೊಳ್ಳಲು ಶುರು ಮಾಡಿದರು.
ಇದನ್ನೂ ಓದಿ: Yagati Raghu Naadig Column: ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ
ಮತ ಪ್ರಚಾರಕ್ಕೆ ಬೇಕಾಗುವಷ್ಟು/ಸಾಕಾಗುವಷ್ಟು ಕನ್ನಡವನ್ನು ಅವರು ಕಲಿತಿದ್ದರೆ ಸಾಕಾಗಿತ್ತೇನೋ? ಆದರೆ ಕನ್ನಡದ ಸೊಗಡು ಅವರನ್ನು ಇನ್ನಿಲ್ಲದಂತೆ ಸೆಳೆದುಬಿಟ್ಟಿತು. ಹೀಗಾಗಿ ‘ವ್ಯಾವಹಾರಿಕ/ಧಾರ್ಮಿಕ’ ಅಗತ್ಯವನ್ನೂ ಮೀರಿ, ಕರ್ನಾಟಕದ ಕಲೆ-ಸಂಸ್ಕೃತಿ-ಪರಂಪರೆಗಳ ಅಧ್ಯಯನಕ್ಕೆ ಇಳಿದು ಅನನ್ಯ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಂಡರು, ಕನ್ನಡಿಗರೇ ಆಗಿಬಿಟ್ಟರು ಮೋಗ್ಲಿಂಗ್.
‘ಕನ್ನಡ ತಪ’ವನ್ನು ಅಷ್ಟಕ್ಕೇ ನಿಲ್ಲಿಸದೆ ಕನ್ನಡದ ಜನಮಾನಸದಲ್ಲಿ ಮತ್ತು ಅನುಭವದಲ್ಲಿ ಕೆನೆಗಟ್ಟಿರುವ ಗಾದೆಗಳನ್ನು ಸಂಗ್ರಹಿಸಲು ಅಖಾಡಕ್ಕೆ ಇಳಿದರು. ಇದೂ ಸಾಲದೆಂಬಂತೆ ಕನ್ನಡ ದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದರು. ‘ನಿಮ್ಮೊಡನಿದ್ದೂ ನಾನು ನಿಮ್ಮಂತೆ ಆಗಲಿಲ್ಲ’ ಎಂದು ಅಸಹಾಯಕತೆಯಲ್ಲಿ ಕೈಚೆಲ್ಲುವವರ ಮಧ್ಯೆ ವಿಭಿನ್ನರಾಗಿ ನಿಂತರು ಹರ್ಮನ್ ಮೋಗ್ಲಿಂಗ್!
ಸಾಕಾರಗೊಂಡ ಕನಸು
ನಿರಂತರ ಅಧ್ಯಯನದ ಮೂಲಕ ದಕ್ಕಿಸಿಕೊಂಡ ‘ಕನ್ನಡ ಜ್ಞಾನಗಂಗೆ’ಯನ್ನು, ತಮಗೆ ಆಶ್ರಯ ವಿತ್ತ ಕನ್ನಡಿಗರಿಗೂ ವಿಭಿನ್ನ ರೀತಿಯಲ್ಲಿ ಹಂಚುವಂತಾಗಬೇಕು ಎಂದು ಕನಸು ಕಂಡರು ಮೋಗ್ಲಿಂಗ್. ಈ ತುಡಿತ ತೀವ್ರವಾಗುತ್ತಾ ಹೋದಂತೆ ಸ್ಪಷ್ಟ ರೂಪವನ್ನೂ ತಳೆಯತೊಡಗಿತು. ಆಗ ಹುಟ್ಟಿಕೊಂಡಿದ್ದೇ ‘ಮಂಗಳೂರು ಸಮಾಚಾರ’ ಎಂಬ ಕನ್ನಡದ ಮೊಟ್ಟಮೊದಲ ದಿನಪತ್ರಿಕೆ. 1843ರ ಜುಲೈ ೧ರಂದು ಪ್ರಕಟಗೊಂಡ ಈ ನಾಲ್ಕು ಪುಟಗಳ ಪತ್ರಿಕೆಯು, ಮೋಗ್ಲಿಂಗ್ ಅವರು ಅದುವರೆಗೂ ಮಾಡಿದ್ದ ತಪಸ್ಸಿನ ಫಲಶ್ರುತಿಯಾಗಿತ್ತು.
ಮುದ್ರಣವೆಂಬ ಪ್ರಸವ ವೇದನೆ
ಈಗ ಬಿಡಿ, ಛಾಯಾಕ್ಷರ ಜೋಡಣೆ (ಫೋಟೋಟೈಪ್ ಸೆಟಿಂಗ್) ಸೇರಿದಂತೆ ಮುದ್ರಣ ಮಾಧ್ಯಮ ದಲ್ಲಿ ಸಾಕಷ್ಟು ಕ್ರಾಂತಿಗಳಾಗಿವೆ. ಪುಟ ವಿನ್ಯಾಸವೆಂಬುದು ಸೃಜನಶೀಲತೆಗೆ ಹಿಡಿದ ಕೈಗನ್ನಡಿಯೇ ಆಗಿ ಬಿಟ್ಟಿದೆ. ಚಿತ್ತಾಕರ್ಷಕ ವಿನ್ಯಾಸವಿರುವ ವರ್ಣರಂಜಿತ ಪತ್ರಿಕೆಗಳು ಮತ್ತು ನಿಯತಕಾಲಿಕಗಳು ಮಾರುಕಟ್ಟೆಯ ಮಳಿಗೆಗಳಲ್ಲಿ ತೂಗಾಡುವುದು ವಾಡಿಕೆಯಾಗಿದೆ. ಆದರೆ ಮೋಗ್ಲಿಂಗ್ ಅವರ ಕಾಲಘಟ್ಟದಲ್ಲಿ ಇಂಥ ತಂತ್ರಜ್ಞಾನದ ಒತ್ತಾಸೆ ಇರಲಿಲ್ಲ, ಕಲ್ಲಚ್ಚುಗಳಿಂದ ಪತ್ರಿಕೆಯನ್ನು ಮುದ್ರಿಸ ಬೇಕಾಗುತ್ತಿತ್ತು. ತಮ್ಮದೇ ‘ಬಾಸೆಲ್ ಮಿಷನ್’ ಮುದ್ರಣಾಲಯಕ್ಕೆ ಈ ಹೊಣೆ ಹೊರಿಸಿ ‘ಮಂಗಳೂರು ಸಮಾಚಾರ’ ವನ್ನು ಮುದ್ರಿಸುತ್ತಿದ್ದ ಮೋಗ್ಲಿಂಗ್ ಅದಕ್ಕೆ ೧ ಕಾಸು ಬೆಲೆಯನ್ನು ನಿಗದಿಪಡಿಸಿದ್ದರು.
ಪತ್ರಿಕೆಯ ಪ್ರಸವವೇನೋ ಆಗುತ್ತಿತ್ತು, ಆದರೆ ಅದರ ಮಾರಾಟವೂ ಆಗಬೇಕಲ್ಲ?! ಸರಿ, ಅದಕ್ಕೂ ಟೊಂಕ ಕಟ್ಟಿದ ಮೋಗ್ಲಿಂಗ್ ಸ್ವತಃ ಕಾಲ್ನಡಿಗೆಯಲ್ಲೇ ಮನೆಮನೆಗೂ ತೆರಳಿ ‘ಮಂಗಳೂರು ಸಮಾ ಚಾರ’ ವನ್ನು ಓದುಗರಿಗೆ ಬಿತ್ತರಿಸಲು ಶುರುಮಾಡಿದರು. ಇಂಥ ನಿಸ್ವಾರ್ಥ ಪ್ರೀತಿಯು ಅವರಲ್ಲಿ ಮೊಳೆಯಲು ಕಾರಣ, ‘ಕನ್ನಡ’ ಎಂಬ ಮೂರಕ್ಷರ ಹಾಗೂ ಅದು ಏಕಪ್ರಕಾರವಾಗಿ ಬೀರುತ್ತಿದ್ದ ‘ಕಸ್ತೂರಿ ಪರಿಮಳ’. ಮೋಗ್ಲಿಂಗ್ ಅವರು ಅಂದು ಹೀಗೆ ಬೆವರು-ರಕ್ತವನ್ನು ಬಸಿದು ವಿನಿಯೋಗಿಸಿದ ಶ್ರಮವು ಕನ್ನಡದ ಪತ್ರಿಕಾರಂಗಕ್ಕೆ ಒಂದು ಭದ್ರವಾದ ತಳಹದಿಯನ್ನು ನೀಡಿತೆನ್ನ ಬೇಕು. ಹೀಗಾಗಿ, ರಾಜ್ಯದಲ್ಲಿ ಪ್ರತಿ ವರ್ಷವೂ ಜುಲೈ ೧ರಂದು ‘ಕನ್ನಡ ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ.
ವೈವಿಧ್ಯಮಯ ಮಾಹಿತಿಯ ಆಗರ
ಪತ್ರಿಕೆ ಎಂದಾಕ್ಷಣ ಕೇವಲ ಸುದ್ದಿಯನ್ನೇ ನೀಡಿದರೆ ಅದೊಂದು ‘ಶುಷ್ಕ ಪ್ರಸ್ತುತಿ’ ಆಗಿಬಿಡುತ್ತದೆ ಎಂದು ಗ್ರಹಿಸಿದ್ದ ಮೋಗ್ಲಿಂಗ್, ‘ಊರ ವರ್ತಮಾನ’, ‘ಸರ್ವರಾಜ್ಯ ವರ್ತಮಾನ’, ‘ಆಶ್ಚರ್ಯದ ಸುದ್ದಿ’ ಮುಂತಾದ ವಿವಿಧ ಸ್ಥಿರ ಶೀರ್ಷಿಕೆಗಳ ಅಡಿಯಲ್ಲಿ ರಸವತ್ತಾದ ಸಂಗತಿಗಳನ್ನು ಹಂಚಿ ಕೊಳ್ಳುತ್ತಿದ್ದರು. ಅಂದಿನ ಬ್ರಿಟಿಷ್ ಸರಕಾರ ಕಾಲಾನುಕಾಲಕ್ಕೆ ತರುತ್ತಿದ್ದ ಕಾನೂನುಗಳು, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪುರಾಣೇತಿಹಾಸದ ಮತ್ತು ಸಾಮಾಜಿಕ ಕಥೆಗಳು ಹೀಗೆ ವಿಷಯ ವೈವಿಧ್ಯಕ್ಕೆ ಒತ್ತು ನೀಡುತ್ತಿದ್ದರು. ಸ್ವತಃ ಒಬ್ಬ ಕ್ರೈಸ್ತ ಮಿಷನರಿ ಆಗಿದ್ದರೂ ಮತ ಪ್ರಚಾರಕ್ಕೆ ಸಂಬಂಧಿಸಿದ ವಿಷಯಗಳ ಅಥವಾ ಯೇಸುಕ್ರಿಸ್ತರ ಬೋಧನೆಗಳ ಬದಲಿಗೆ, ಪುರಂದರ ದಾಸರ ಗೀತೆಗಳನ್ನು ಪ್ರಕಟಿಸುತ್ತಿದ್ದರು ಮೋಗ್ಲಿಂಗ್. ಕನ್ನಡದ ಸಾಹಿತ್ಯ-ಸಂಸ್ಕೃತಿಗಳ ಮೇಲೆ ಅವರಿಗೆ ಇದ್ದ ಒಲವನ್ನು ಇದು ದರ್ಶಿಸುತ್ತದೆ.
ಬಹುಮುಖಿ ಪ್ರತಿಭೆ
ಪತ್ರಿಕಾ ಕೃಷಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಬರಹಗಾರಿಕೆಯ ವಿವಿಧ ಮಗ್ಗುಲುಗಳಿಗೂ ಒಡ್ಡಿಕೊಂಡ ಕಾರಣಕ್ಕೆ ಸಾಹಿತಿ, ಶಿಕ್ಷಕ, ಗಾದೆಗಳ ಸಂಗ್ರಹಕಾರ ಹೀಗೆ ವಿವಿಧ ಪಾತ್ರಗಳಲ್ಲಿ ಮೋಗ್ಲಿಂಗ್ ಕಾಣಿಸಿಕೊಂಡರು. ಗದಗ, ಹುಬ್ಬಳಿ, ಮಡಿಕೇರಿ, ಮಂಗಳೂರು ಮುಂತಾದ ಪ್ರದೇಶಗಳನ್ನು ತಮ್ಮ ಪ್ರಮುಖ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡಿದ್ದ ಮೋಗ್ಲಿಂಗ್, ಸುಮಾರು ೨೫ ವರ್ಷಗಳವರೆಗೆ ಕನ್ನಡಮ್ಮನ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರೆ, ಅವರಲ್ಲಿ ಕೆನೆಗಟ್ಟಿದ್ದ ಕನ್ನಡ ಪ್ರೇಮವನ್ನು ಊಹಿಸಿಕೊಳ್ಳಿ. ಈ ಮಾತಿಗೆ ಪುಷ್ಟಿ ನೀಡುವಂತೆ, ೧೮೪೩ರಲ್ಲಿ ತಾವು ಪ್ರಕಟಿಸಿ ಜನಪ್ರಿಯತೆಯನ್ನು ದಕ್ಕಿಸಿಕೊಂಡ ‘ಮಂಗಳೂರು ಸಮಾಚಾರ’ ಪತ್ರಿಕೆಯು ಹೊರಗಿನ ಕನ್ನಡ ಭಾಷಿಕ ಜನರಿಗೂ ತಲುಪುವಂತಾಗಬೇಕೆಂದು ಸಂಕಲ್ಪಿಸಿ, ಪತ್ರಿಕೆಯ ಹೆಸರನ್ನು ‘ಕನ್ನಡ ಸಮಾಚಾರ’ ಎಂದು ಬದಲಾಯಿಸಿದರು ಹಾಗೂ ಅಚ್ಚುಮೊಳೆ ಗಳಿಂದ ಮುದ್ರಿಸಿ ಪ್ರಕಟಿಸುವಂತಾಗಲೆಂದು ಬಳ್ಳಾರಿಯಲ್ಲಿದ್ದ ಮತ್ತೊಬ್ಬ ಮಿಷನರಿಯ ಸುಪರ್ದಿಗೆ ಅದನ್ನು ವಹಿಸಿದರು (ಆದರೆ ಅದರ ೩ ಸಂಚಿಕೆಗಳು ಮಾತ್ರ ಪ್ರಕಟಗೊಂಡು ಕಾರಣಾಂತರಗಳಿಂದ ನಿಂತುಹೋಯಿತು). ಪಟ್ಟುಬಿಡದ ಮೋಗ್ಲಿಂಗ್ ತರುವಾಯದಲ್ಲಿ ‘ಕನ್ನಡ ವಾರ್ತಿಕ’ ಎಂಬ ಮತ್ತೊಂದು ಪತ್ರಿಕೆಯನ್ನು ಪ್ರಕಟಿಸಿದರು.
ಮೋಗ್ಲಿಂಗ್ ಅವರು ಕನ್ನಡದ ಪತ್ರಿಕಾ ರಂಗಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿದ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯವು 1858ರಲ್ಲಿ ಅವರಿಗೆ ‘ಗೌರವ ಡಾಕ್ಟರೇಟ್’ನೊಂದಿಗೆ ಪುರಸ್ಕರಿಸಿತು. ಕನ್ನಡವನ್ನು ತಾಯ್ನುಡಿಯಾಗಿ ಹೊಂದಿಲ್ಲದ, ಕನ್ನಡಿಗರಲ್ಲದ ವಿದೇಶಿ ವ್ಯಕ್ತಿಯೊಬ್ಬರು ಹೀಗೆ ತಪಸ್ಸಿನ ರೀತಿಯಲ್ಲಿ ಕನ್ನಡದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಬೆರಗಿನ ಸಂಗತಿಯೇ ಸರಿ. ಕನ್ನಡ ಪತ್ರಿಕೋದ್ಯಮವು ಕಣ್ತೆರೆಯುವುದಕ್ಕೆ ಕಾರಣಕರ್ತರಾದ ಹರ್ಮನ್ ಮೋಗ್ಲಿಂಗ್‌ರನ್ನು ನಮ್ಮಂಥ ಪತ್ರಕರ್ತರು ನಿಜಕ್ಕೂ ತಂಪುಹೊತ್ತಿ ನಲ್ಲಿ ನೆನೆಯಬೇಕು...
ಹಳಗನ್ನಡಕ್ಕೆ ಮನಸೋತ ಹರ್ಮನ್
ಹಳಗನ್ನಡ ಕಾವ್ಯಗಳನ್ನು ಚಿರಸ್ಥಾಯಿಯಾಗಿಸಬೇಕೆಂದು ಸಂಕಲ್ಪಿಸಿದ ಮೋಗ್ಲಿಂಗ್, ಅದಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯನ್ನೇ ಹಮ್ಮಿಕೊಂಡರು. ಮೊದಲಿಗೆ ಹಳಗನ್ನಡದ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವನ್ನು ತಿದ್ದುಪಡಿ ಮಾಡಿಸಿ ಶುದ್ಧ ಹಸ್ತಪ್ರತಿಯನ್ನು ಸಜ್ಜುಗೊಳಿಸಿ, ನಂತರ ಕಲ್ಲಚ್ಚಿನ ಮುದ್ರಣಕ್ಕೆ ಅಣಿಗೊಳಿಸುವುದು ಮೋಗ್ಲಿಂಗ್ ಅವರ ಕನಸಾಗಿತ್ತು. ಕಲ್ಲಚ್ಚಿಗೆ ಬೇಕಾಗುವ ಗುಣಮಟ್ಟದ ಶಿಲೆಗಳನ್ನು ಜರ್ಮನಿಯಿಂದಲೇ ತರಿಸಿ, ಅದರ ಮೇಲೆ ದುಂಡಾಗಿ ಬರೆಯು ವವರನ್ನು ಗೊತ್ತುಮಾಡಿ, ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’, ‘ಕುಮಾರವ್ಯಾಸ ಭಾರತ’ದ ಒಂದಿಷ್ಟು ಪರ್ವಗಳು, ಕನಕದಾಸರ ‘ಹರಿಭಕ್ತಿಸಾರ’, ‘ತೊರವೆ ರಾಮಾಯಣ’, ೬೪೦ ಪುಟಗಳ ‘ಬಸವ ಪುರಾಣ’ ಮುಂತಾದ ಕಾವ್ಯಗಳಲ್ಲದೆ, ‘ರಾವಣ ದಿಗ್ವಿಜಯ’ ಎಂಬ ಯಕ್ಷಗಾನ ಪ್ರಸಂಗ ವನ್ನೂ ಕಲ್ಲಚ್ಚಿನಲ್ಲಿ ರೂಪಿಸಿದರು ಮೋಗ್ಲಿಂಗ್. ಸಾಲದೆಂಬಂತೆ, ಪುರಂದರದಾಸರು, ಕನಕ ದಾಸರು, ವಿಠಲದಾಸರು ಸೇರಿದಂತೆ ಅನೇಕ ಹರಿದಾಸರ ಕೀರ್ತನೆಗಳನ್ನೂ ಹೀಗೆ ಮುದ್ರಿಸಿದ್ದು ಹರ್ಮನ್ ಹೆಗ್ಗಳಿಕೆ.
ಸಾರಸ್ವತ ಸಾಂಗತ್ಯ
ಹಳಗನ್ನಡದ ಕಾವ್ಯಗಳ ಜತೆಗೆ ಒಡನಾಡಿದ್ದರ ಫಲವೆಂಬಂತೆ ಹರ್ಮನ್ ಮೊಗ್ಲಿಂಗ್‌ರಲ್ಲಿ ಸಾರಸ್ವತ ಪ್ರಜ್ಞೆ ಮತ್ತಷ್ಟು ಜಾಗೃತವಾಯಿತು. ಹೀಗಾಗಿ, ಕ್ರೈಸ್ತಗೀತೆಗಳನ್ನು ಕನ್ನಡಕ್ಕೆ ಅನುವಾದಿಸುವ ಒಲವು ಅವರಲ್ಲಿ ಮೂಡಿತು. ನಂತರ, ‘ಪಿಲಿಗ್ರಿಮ್ಸ್ ಪ್ರೋಗ್ರೆಸ್’ ಎಂಬ ಕಾದಂಬರಿಯ ಮೊದಲ ಭಾಗದಲ್ಲಿ ಬರುವ ೨೦ ಕ್ಲಿಷ್ಟ ಪದ್ಯಗಳನ್ನು ತಮ್ಮ ಒಡನಾಡಿಯ ನೆರವಿನೊಂದಿಗೆ ಮೋಗ್ಲಿಂಗ್ ಕನ್ನಡಕ್ಕೆ ಅನುವಾದಿಸಿದರು. ಸಾಲದೆಂಬಂತೆ, ಬದುಕಿನ ಉತ್ತರಾರ್ಧದಲ್ಲಿ ತಮಗೆ ನೆಲೆಯಿತ್ತ ಕೊಡಗು ಪ್ರದೇಶದ ಋಣವನ್ನು ತೀರಿಸಲೋ ಎಂಬಂತೆ, ಕೊಡಗರ ಜೀವನಶೈಲಿ, ಇತಿಹಾಸ, ಹಬ್ಬ-ಹರಿದಿನಗಳ ವಿವರಗಳನ್ನು ಒಳಗೊಂಡ ‘ಕೂರ್ಗ್ ಮೆಮೊಯರ‍್ಸ್’ ಎಂಬ ಕೃತಿಯನ್ನೂ ಮೋಗ್ಲಿಂಗ್ ರಚಿಸಿದರು. ಅನನ್ಯ ಇತಿಹಾಸ ಪ್ರಜ್ಞೆಯು ಢಾಳಾಗಿ ಹೊಮ್ಮುವ ಈ ಕೃತಿಯಲ್ಲಿ, ಕೊಡಗಿನ ಹಿರಿಯ ವೀರರಾಜೇಂದ್ರನ ಧೈರ್ಯ-ಶೌರ್ಯಗಳನ್ನೂ, ಚಿಕವೀರರಾಜೇಂದ್ರನ ನಿರ್ದಯ ಪ್ರವೃತ್ತಿಯನ್ನೂ ಮೋಗ್ಲಿಂಗ್ ಬಣ್ಣಿಸಿದ್ದಾರೆ. ‘ರಾಜೇಂದ್ರ ನಾಮಾ’ ಎಂಬುದು ಕೊಡಗು ಪ್ರದೇಶಕ್ಕೆ ಸಂಬಂಧಿಸಿದಂತೆ ಹರ್ಮನ್ ಮೋಗ್ಲಿಂಗ್ ಸಂಪಾದಿಸಿ ಪ್ರಕಟಿಸಿದ ಮತ್ತೊಂದು ಮಹೋನ್ನತ ಕೃತಿ. ಇದು ಒತ್ತಕ್ಷರ ಗಳಿಲ್ಲದ ಕೃತಿ (‘ರಾಜೇಂದ್‌ರ ನಾಮಾ’ ಎಂಬ ರೀತಿಯಲ್ಲಿ!) ಎಂಬುದು ಗಮನಿಸಬೇಕಾದ ಸಂಗತಿ.
ನಿವೃತ್ತಿಯಲ್ಲೂ ಬಿಡದ ಪ್ರವೃತ್ತಿ
ನಿಯೋಜಿತ ಕಾರ್ಯಭಾರದಿಂದ 1860ರಲ್ಲಿ ನಿವೃತ್ತರಾದ ಹರ್ಮನ್ ಮೋಗ್ಲಿಂಗ್ ಸ್ವದೇಶಕ್ಕೆ ಮರಳಬೇಕಾಯಿತು. ಆದರೆ, ‘ನಿವೃತ್ತಿ’ಯಾಗಿದ್ದು ‘ವೃತ್ತಿ’ಯಿಂದಲೇ ವಿನಾ ‘ಪ್ರವೃತ್ತಿ’ಯಿಂದಲ್ಲ! ಸ್ವದೇಶಕ್ಕೆ ಮರಳಿದ ನಂತರವೂ ಮೋಗ್ಲಿಂಗ್ ಅವರು ಕನ್ನಡ ಕಸ್ತೂರಿಯ ಕಂಪಿನಿಂದ ದೂರವಾಗ ಲಿಲ್ಲ. ತಮ್ಮಂತೆಯೇ ಮಿಷನರಿ ಕೆಲಸಕ್ಕೆ ಒಡ್ಡಿಕೊಂಡಿದ್ದ ಫರ್ಡಿನೆಂಟ್ ಕಿಟೆಲ್ ಅವರಿಗೆ ‘ಕನ್ನಡ ನಿಘಂಟು’ ಕೃತಿಯನ್ನು ಹೊರತರುವ ಕಾರ್ಯಭಾರವನ್ನು ಹೊರಿಸುವಂತೆ ಬ್ರಿಟಿಷ್ ಸರಕಾರಕ್ಕೆ ಮನವೊಲಿಸಿದರು ಮೋಗ್ಲಿಂಗ್.
ಹೀಗೆ ಕಿಟೆಲ್ಲರು ತಮ್ಮ ಧರ್ಮಪ್ರಚಾರದ ಕೆಲಸವನ್ನು ಬದಿಗಿಟ್ಟು ಕನ್ನಡ ನಿಘಂಟಿನ ರಚನೆಯಲ್ಲಿ ವ್ಯಸ್ತರಾಗುವಲ್ಲಿ ಹರ್ಮನ್ ಮೋಗ್ಲಿಂಗ್ ಅವರ ಯೋಗದಾನವಿದೆ. ಕಿಟೆಲ್ಲರು ಈ ಕೈಂಕರ್ಯವನ್ನು ಶುರುಮಾಡಿದ್ದು ಹರ್ಮನ್ ಮೋಂಗ್ಲಿಂಗ್ ಅವರ ಮನೆಯಿಂದಲೇ ಅಂತೆ!
ಕನ್ನಡದ ಹರಿದಾಸರ ೨೦ ಕೀರ್ತನೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಾಚ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಜರ್ಮನಿಯ ಪತ್ರಿಕೆಯೊಂದರಲ್ಲಿ ಟೀಕೆ-ಟಿಪ್ಪಣಿ ಸಹಿತ ಪ್ರಕಟಿಸಿದ್ದು, ತಾವು ಇನ್ನಿಲ್ಲದಂತೆ ಮೆಚ್ಚಿಕೊಂಡಿದ್ದ ‘ಜೈಮಿನಿ ಭಾರತ’ದ ಎರಡು ಸಂಧಿಗಳನ್ನು ಜರ್ಮನ್ ಭಾಷೆಗೆ ರೂಪಾಂತರಿಸಿದ್ದು ಹರ್ಮನ್ ಮೋಗ್ಲಿಂಗ್ ಅವರ ಕನ್ನಡ ಪ್ರೇಮಕ್ಕೆ ಮತ್ತಷ್ಟು ಪುರಾವೆಗಳಾಗುತ್ತವೆ.