ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ಟೆನಿಸ್ ಆಟದ ಅಂಗಳ ನಿನ್ನಲ್ಲಿರುವ ಗುಣಗಳನ್ನು ಇನ್ನಷ್ಟು ಪರಿಷ್ಕರಿಸಿಕೊಳ್ಳಲು ವೇದಿಕೆ ಯಾಯಿತು. ನಿನ್ನ ವ್ಯವಹಾರ ಏನಿದ್ದರೂ ಕೃತಿಯಲ್ಲಿಯೇ ವಿನಾ ಮಾತಿನಲ್ಲಲ್ಲ. ನಿನ್ನ ಸಾಧನೆ ಯನ್ನು ಎಂದೂ ನಿರೂಪಿಸಿಕೊಂಡವಳಲ್ಲ, ಬದಲಾಗಿ ಏನೆಲ್ಲ ನಿರೂಪಿಸಿಕೊಂಡಿದ್ದೀಯೋ ಅದನ್ನೆಲ್ಲ ಸಾಽಸಿದವಳು. ಸದ್ದಿಲ್ಲದೇ ರಾಕೆಟ್ ಕೆಳಗಿಟ್ಟು, ಅಂದು ಟೆನಿಸ್ ಆಟದಲ್ಲಿ ತೋರಿಸುತ್ತಿದ್ದ ಉತ್ಸಾಹವನ್ನೇ ಇಂದು ಪ್ರೀತಿ ಮತ್ತು ತಾಯ್ತನದಲ್ಲಿ ತೋರಿಸುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ.

ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ವಿದೇಶವಾಸಿ

‘ನನ್ನ ಬಾಳಿನಲ್ಲಿ ಬೆಳಕು ತಂದ, ನಾನು ಪ್ರೀತಿಸುವ ಈ ಸ್ತ್ರೀಯನ್ನು ನನ್ನ ಹೃದಯ ಮತ್ತು ಆತ್ಮ ದಿಂದ ವರ್ಣಿಸುವಷ್ಟು ವರ್ಣರಂಜಿತವಾದ, ದೊಡ್ಡದಾದ ಪದಗಳು ಇನ್ನೂ ಹುಟ್ಟಿಕೊಂಡಿಲ್ಲ. ನಾನು ಆಕೆಯ ಕುರಿತು ಬಳಸಬಹುದಾದ ನಿಜವಾದ ಪದಗಳ ಅನ್ವೇಷಣೆಯಲ್ಲಿದ್ದೇನೆ. ನೀನು ಬದುಕಿದ ರೀತಿ, ನನ್ನ ಬದುಕಿನ ದಿಕ್ಕು ಬದಲಾಯಿಸಿದ ರೀತಿಯನ್ನು ನನ್ನ ಶಬ್ದಗಳಲ್ಲಿ ಹೇಳಿದರೆ ಬಹುಶಃ ಅದಕ್ಕೆ ನ್ಯಾಯ ಒದಗಿಸಿದಂತೆ ಆಗಲಿಕ್ಕಿಲ್ಲ. ಕೆಲವು ವರ್ಷಗಳಿಂದ ನಮ್ಮ ಅಡುಗೆ ಮನೆ ಯಲ್ಲಿರುವ ಫಲಕದಲ್ಲಿ ಬರೆಯುವುದನ್ನು ರೂಢಿಸಿ ಕೊಂಡಿದ್ದೇನೆ. ಪ್ರತಿನಿತ್ಯ ರಾತ್ರಿ ಬರೆಯುವ ಬರಹದಲ್ಲಿ ನನ್ನ ಬಾಳಿನಲ್ಲಿ ನಿನ್ನ ಕೊಡುಗೆಯನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಕೆಲವೊಮ್ಮೆ ನಿನ್ನ ಕುರಿತು ಒಂದು ಸಂಕ್ಷಿಪ್ತ ಸಾಲು ಬರೆದರೆ ಕೆಲವೊಮ್ಮೆ ಸಣ್ಣ ಕತೆಯ ರೂಪದಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಯತ್ನಿಸಿದ್ದೇನೆ.

ನನ್ನ ಬದುಕಿನಲ್ಲಿ ಬೆಳಕು ಚೆಲ್ಲಿದ ನಿನ್ನ ಕುರಿತು ಹೇಳಲು ನನಗೆ ಒಮ್ಮೆಯೂ ಆಯಾಸ ಎಂದೆನಿಸ ಲಿಲ್ಲ. ಆದರೆ ಇಂದು ಸಣ್ಣ ಅವಧಿಯಲ್ಲಿ ನಾನು ನಿನ್ನಲ್ಲಿ ಮೆಚ್ಚಿದ ಅಂಶಗಳನ್ನು ಪದಗಳಲ್ಲಿ ಕಟ್ಟಿಕೊಡಬೇಕಾಗಿರುವುದು ಒಂದು ವಿಪರ್ಯಾಸ ಎಂದೆನಿಸುತ್ತಿದೆ. ಸಂಕ್ಷಿಪ್ತವಾಗಿ ಹೀಗೆ ಹೇಳಬ; ಸ್ವಲ್ಪ ಸಮಯದ ಹಿಂದೆ ನಾನು ಉಳಿದುಕೊಂಡಿದ್ದ ಎತ್ತರದ ಹೋಟೆಲಿನ ಮೇಲಿನ ಕೋಣೆ ಯಿಂದ ಕೆಳಗೆ ನೋಡುತ್ತಿದ್ದಾಗ ಪಕ್ಕದ ಹಳೆಯ ಚರ್ಚಿನ ಮೇಲ್ಚಾವಣಿ ಕಂಡಿತು.

ಆ ದಿನಗಳಲ್ಲಿ ಖಂಡಿತವಾಗಿಯೂ ಅದೇ ಎತ್ತರದ ಕಟ್ಟಡವಾಗಿತ್ತು. ಅದಕ್ಕಿಂತ ಮೇಲೆ ಹೋಗಿ ಯಾರೂ ಅದನ್ನು ನೋಡಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ ಅದನ್ನು ಅಮೃತ ಶಿಲೆಗಳಿಂದ ಸುಂದರವಾಗಿ ನಿರ್ಮಿಸಿದ್ದರು. ನಿರ್ಮಾಣದಗಲೀ, ಹೊರ ಮೇಲ್ಮೈಯಾಗಲೀ ಒಂದಿನಿತೂ ಡೊಂಕಿಲ್ಲ, ಕೊಂಕಿಲ್ಲ.

ಇದನ್ನೂ ಓದಿ: Kiran Upadhyay Column: ಕಣ್ಣುಕಟ್ಟುವ ವಿದ್ಯೆಯೇ ಇಂದು ಕೆಲಸಕ್ಕೆ ಬಂದಿದೆ !

ಮೇಲಿನಿಂದ ಯಾರೂ ನೋಡುವುದಿಲ್ಲವೆಂದು ತಿಳಿದೂ ಅವರು ಅಷ್ಟು ಸುಂದರವಾದ ಛಾವಣಿ ಕಟ್ಟಿದ್ದಾರೆ ಎಂದರೆ ಅದಕ್ಕೆ ಕಾರಣ ಕೆಲಸದವರ ಬದ್ಧತೆ. ಅದನ್ನು ನಿರ್ಮಿಸಲು ಅವರಿಗೆ ಎಷ್ಟು ಸಮಯ ಹಿಡಿದಿರಬಹುದು? ಅವರಲ್ಲಿ ಆ ಬದ್ಧತೆ ಬರಲು ಪ್ರೇರಣೆ ಏನು? ನನಗೆ ಅನ್ನಿಸಿದ್ದು, ಅವರೆಲ್ಲರೂ ತಮ್ಮ ಅಂತಃಸಾಕ್ಷಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಅಂತರಾತ್ಮಕ್ಕೆ ಕಿವಿಗೊಟ್ಟು ಸತ್ಯಸಂಧರಾಗಿ ಕೆಲಸ ಮಾಡಿದ್ದೇ ಅದಕ್ಕೆ ಕಾರಣ. ಅದೇ ಅವರಿಗೆ ಸಿಕ್ಕ ಅತಿ ದೊಡ್ಡ ಸನ್ಮಾನವೂ ಹೌದು. ಇದು ನಾನು ನಿನ್ನನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡಿತು. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ನೀನು ಪ್ರಶಂಸೆ, ಹೊಗಳಿಕೆಯನ್ನು ಬಯಸಿದವಳಲ್ಲ. ನಿನ್ನ ಕಾರ್ಯ ಏನಿದ್ದರೂ ತೋರಿಕೆಗಲ್ಲ, ನಿನ್ನ ಆತ್ಮ ತೃಪ್ತಿಗಾಗಿ. ಆಟದ ಮೈದಾನದ ನಡುವಿನ ಗರ್ಜನೆಯಿಂದ ಹಿಡಿದು, ಮಗು ಮಲಗುವ ಕೋಣೆಯ ಮೌನದವರೆಗೆ, ಉದಾರ ಆತ್ಮ, ಬಾಗದ-ಬಳುಕದ ಶಕ್ತಿ, ಮೃದುವಾಗಿ ಮಾತನಾಡುವ ಸಮಗ್ರತೆ ಒಮ್ಮೆಯೂ ವಿಚಲಿತಗೊಳ್ಳಲಿಲ್ಲ.

ಟೆನಿಸ್ ಆಟದ ಅಂಗಳ ನಿನ್ನಲ್ಲಿರುವ ಗುಣಗಳನ್ನು ಇನ್ನಷ್ಟು ಪರಿಷ್ಕರಿಸಿಕೊಳ್ಳಲು ವೇದಿಕೆ ಯಾಯಿತು. ನಿನ್ನ ವ್ಯವಹಾರ ಏನಿದ್ದರೂ ಕೃತಿಯಲ್ಲಿಯೇ ವಿನಾ ಮಾತಿನಲ್ಲಲ್ಲ. ನಿನ್ನ ಸಾಧನೆ ಯನ್ನು ಎಂದೂ ನಿರೂಪಿಸಿಕೊಂಡವಳಲ್ಲ, ಬದಲಾಗಿ ಏನೆಲ್ಲ ನಿರೂಪಿಸಿಕೊಂಡಿದ್ದೀಯೋ ಅದನ್ನೆಲ್ಲ ಸಾಽಸಿದವಳು. ಸದ್ದಿಲ್ಲದೇ ರಾಕೆಟ್ ಕೆಳಗಿಟ್ಟು, ಅಂದು ಟೆನಿಸ್ ಆಟದಲ್ಲಿ ತೋರಿಸುತ್ತಿದ್ದ ಉತ್ಸಾಹವನ್ನೇ ಇಂದು ಪ್ರೀತಿ ಮತ್ತು ತಾಯ್ತನದಲ್ಲಿ ತೋರಿಸುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ.

7 R

ನಿನ್ನೊಡನೆ ಮಾತನಾಡಿದವ ನೀನು ಮಾಡಿದ ಮಹತ್ಕಾರ್ಯಗಳನ್ನೆಲ್ಲ ಅರ್ಧ ನಿಮಿಷದಲ್ಲಿ ಮರೆಯಬಹುದು. ಆದರೆ ಅವರ ಬಗ್ಗೆ ನೀನು ತೋರಿಸಿದ ಕಾಳಜಿ, ತೊಡಗಿಸಿಕೊಂಡ ಭಾವನೆ ಗಳನ್ನು ಅವರು ಎಂದೂ ಮರೆಯಲಾರರು. ಅಷ್ಟೇ ಅಲ್ಲ, ಅವರ ಭಾವನೆಗಳಿಗೆ ನೀನು ಸ್ಪಂದಿಸಿದೆ ಯೆಂದು ಅವರಿಗೆ ಮನವರಿಕೆ ಮಾಡಿಯೇ ಕಳುಹಿಸುತ್ತೀಯ. ಎಂಥ ಪ್ರತಿಕೂಲ ಪರಿಸ್ಥಿತಿಯನ್ನೂ ಮೀರಿ ನಿಲ್ಲಬಹುದಾದ ಸಾಮರ್ಥ್ಯ, ಆಗಾಗ ಗಾಯದಿಂದ ಘಾಸಿಗೊಂಡರೂ ಮತ್ತೆ ಮತ್ತೆ ಚೇತರಿಸಿ ಕೊಂಡು ಗೆಲುವು ಸಾಧಿಸಿದ ನಿನ್ನ ಯಶೋಗಾಥೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿ, ಮುಂದಿನ ಪೀಳಿಗೆಗೆ ಮಾದರಿಯಾಗಿವೆ.

ಭವಿಷ್ಯದಲ್ಲಿಯೂ ಬಹಳ ಕಾಲದವರೆಗೆ ಜನರು ನೀನು ಈ ಕ್ಷೇತ್ರದಲ್ಲಿದ್ದ ಸಮಯವನ್ನು ಶ್ರೇಷ್ಠ ಸಮಯವೆಂದು ಚರ್ಚಿಸುತ್ತಾರೆ, ವಿಶ್ಲೇಷಿಸುತ್ತಾರೆ. ಮುಂದೊಂದು ದಿನ ನಿನ್ನ ವಿಷಯ ಕೇಳಿದ, ಓದಿದ, ನೋಡಿದ ಜನರು ನಿನ್ನನ್ನು ಅರಿತೆವೆಂದು ತಿಳಿಯಬಹುದು. ಅವರಿಗೆ ನೀನು ಆಪ್ತವಾಗ ಬಹುದು. ಆದರೆ ನಮ್ರತೆಯಿಂದ, ಶಾಂತತೆಯಿಂದ, ಆಟದ ಘನತೆಗೆ ಕುಂದು ತರದ, ಕ್ರೀಡೆಯ ಗರಿಮೆಯನ್ನು ನೀನು ಎತ್ತಿ ಹಿಡಿದ ಪರಿಯನ್ನು ಖುದ್ದಾಗಿ ಕಂಡ ಜನರು ಅದೃಷ್ಟವಂತರು.

ಅದರಲ್ಲೂ ಯಾರನ್ನೂ ಒಂದು ಅಂತಸ್ತು ಮೇಲಕ್ಕೆತ್ತಬಲ್ಲ ನಿನ್ನ ನಗುವನ್ನು ಕಂಡ, ನಿನ್ನ ಉದಾರ ಹೃದಯ ಶ್ರೀಮಂತಿಕೆಯನ್ನು ಉಂಡ ನನ್ನಂಥವರು ನಿಜಕ್ಕೂ ಭಾಗ್ಯಶಾಲಿಗಳು. ನೀನು ನಮ್ಮ ಹೃದಯವನ್ನು ಸ್ಪರ್ಶಿಸಿದ್ದೀಯ, ನಮ್ಮನ್ನು ಉತ್ತಮರನ್ನಾಗಿಸಿದ್ದೀಯ, ನಮ್ಮ ಒಡಲಲ್ಲಿ ನಿನ್ನ ಹೆಸರನ್ನು ಶಾಶ್ವತವಾಗಿ ಕೆತ್ತಿದ್ದೀಯ. ನಿನ್ನ ಜೀವನದ ಹಲವು ವರ್ಷ ನೀನು ಸ್ಪರ್ಧಿಸಿದೆ, ನಿನಗೆ ಪ್ರತಿಸ್ಪರ್ಧಿಗಳಿದ್ದರು.

ಇಂದು ನನ್ನ ಹೃದಯದಲ್ಲಿ ನಿನಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. Ladies and gentlemen, I introduce to you the greatest person I have ever known'' -ಟೆನಿಸ್ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡ ನಕ್ಷತ್ರ ಮತ್ತು ದಿಕ್ಕಿಲ್ಲದೆ ಅಲೆಯುತ್ತಿದ್ದ ತನ್ನ ಬಾಳನೌಕೆಗೆ ದಿಕ್ಕು ತೋರಿದ ಸಂಗಾತಿಯನ್ನು ಅಂದು ಸಾವಿರಾರು ಜನರಿಗೆ ಆತ ಈ ರೀತಿ ಪರಿಚಯಿಸಿದ್ದ. ವಯಸ್ಸಿನಲ್ಲಿ ಆಕೆಗಿಂತ ಹತ್ತು ತಿಂಗಳು ಕಿರಿಯನಾದ ಆತ ಅಂದು ತನ್ನ ನುಡಿಗಳಿಂದ ಹಿರಿಯನಾಗಿದ್ದ. ಭಾವೋದ್ವೇಗದಿಂದ ಆತನ ಕೊರಳ ಸೆರೆ ಉಬ್ಬಿತ್ತು,

ಕಣ್ಣಂಚಿನಲ್ಲಿ ಉದಕ ಇಣುಕಿತ್ತು. ಆತನ ನುಡಿಗೆ ಆಕೆಯೂ ಕರಗಿ ಹೋಗಿದ್ದಳು. ಅಷ್ಟು ಹೊತ್ತು ಹೇಗೋ ಹಿಡಿದಿಟ್ಟಿದ್ದ ಅಶ್ರುಬಿಂದು ಒಮ್ಮೆಲೇ ಹೊರಚಿಮ್ಮಿತ್ತು. ನೆರೆದವರ ಭಾವೋದ್ಘೋಷ ಮುಗಿಲು ಮುಟ್ಟಿತ್ತು. ಆಕೆಯ ವ್ಯಕ್ತಿತ್ವವೇ ಹಾಗೆ. ವೆಸ್ಟ್ ಜರ್ಮನಿಯಲ್ಲಿ ಹುಟ್ಟಿದ ಆಕೆಗೆ ನಾಲ್ಕು ವರ್ಷವಾಗುತ್ತಿರುವಾಗಲೇ ಆಕೆಯ ಕೈಯಲ್ಲಿ ತಂದೆ ಟೆನಿಸ್ ರ‍್ಯಾಕೆಟ್ ಹಿಡಿಸಿದ್ದರು.

5ನೇ ವರ್ಷಕ್ಕೇ ಆಕೆ ಆಟದ ಅಂಗಳಕ್ಕಿಳಿದಿದ್ದಳು. ತನ್ನ 18ನೇ ವರ್ಷದಲ್ಲಿ ಮೊದಲ ಗ್ರ್ಯಾಂಡ್‌ ಸ್ಲ್ಯಾಮ್ ಜಯಿಸಿದಳು. ಹದಿಮೂರು ವರ್ಷಗಳ ಕಾಲ ನಡೆದ ಹಾದಿಯಲ್ಲಿ ಏಳು ವಿಂಬಲ್ಡನ್, ಆರು -ಂಚ್ ಓಪನ್, ಐದು ಯು.ಎಸ್. ಓಪನ್, ನಾಲ್ಕು ಆಸ್ಟ್ರೇಲಿಯನ್ಓ ಪನ್ ಸೇರಿ ಒಟ್ಟೂ ಇಪ್ಪತ್ತೆರಡು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಳು.

ತನ್ನ ಅವಧಿಯಲ್ಲಿ ಆಕೆ ಒಟ್ಟೂ 107 ಸಿಂಗಲ್ಸ್ ಪ್ರಶಸ್ತಿ ಗೆದ್ದಳು. 1988ರಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿ ಪಡೆಯುವುದ ರೊಂದಿಗೆ ಒಲಿಂಪಿಕ್ ಪಂದ್ಯದಲ್ಲೂ ಚಿನ್ನದ ಪದಕಗಳಿಸಿ ಗೋಲ್ಡನ್ ಸ್ಲ್ಯಾಮ್ ಸಾಧಿಸಿದ ಕೀರ್ತಿಗೆ ಪಾತ್ರಳಾದ ಮೊದಲ ಮತ್ತು ಏಕೈಕ ಟೆನಿಸ್ ಆಟಗಾರ್ತಿ ಯಾದಳು. ತಾನು ಆಡಿದ ಪಂದ್ಯಗಳ ಪೈಕಿ ಶೇಕಡಾ ಎಂಬತ್ತೊಂಬತ್ತರಷ್ಟನ್ನು ಜಯಿಸಿದಳು. ವುಮೆನ್ಸ್ ಟೆನಿಸ್ ಅಸೋಸಿಯೇಷನ್ ಪಟ್ಟಿಯಲ್ಲಿ 377 ವಾರಗಳ ಕಾಲ ಅಗ್ರಶ್ರೇಯಾಂಕದಲ್ಲಿದ್ದು, ಅತಿ ಹೆಚ್ಚು ಸಮಯ ಅಗ್ರಶ್ರೇಯಾಂಕದಲ್ಲಿದ್ದ ಆಟಗಾರ್ತಿಯೆಂಬ ಕೀರ್ತಿಗೆ ಪಾತ್ರಳಾದಳು.

ಆಗಾಗ ಅನಾರೋಗ್ಯ, ಗಾಯಗಳಾಗುತ್ತಿದ್ದರೂ ಚೇತರಿಸಿಕೊಂಡು ಸಿಡಿಲಮರಿಯಂತೆ ಎಗರಿ ಬರುತ್ತಿದ್ದಳು. ಇಪ್ಪತ್ತನೇ ಶತಮಾನದ ಅತ್ಯುತ್ತಮ ಟೆನಿಸ್ ಆಟಗಾರ್ತಿ ಎಂದು ಕರೆಸಿಕೊಂಡಳು. ನಿವೃತ್ತಿ ಘೋಷಿಸುವಾಗ ಆಕೆ ಮೂರನೆಯ ಶ್ರೇಯಾಂಕದಲ್ಲಿದ್ದಳು.

ಆತನೂ ಕಮ್ಮಿ ಆಸಾಮಿಯಲ್ಲ. ತನ್ನ ಹದಿನಾರನೆಯ ವರ್ಷದಿಂದಲೇ ಪ್ರಶಸ್ತಿ ಗೆಲ್ಲಲು ಆರಂಭಿಸಿದ್ದ. ಆದರೆ ಹದಿನೇಳನೆಯ ವರ್ಷದಲ್ಲಿ ಮೊದಲ ಬಾರಿ ವಿಂಬಲ್ಡನ್ ಪ್ರವೇಶಿಸಿದ ಆತ ಆಡಿದ ಮೊದಲ ಪಂದ್ಯದಲ್ಲಿ ಒಂದು ತಾಸಿನೊಳಗೆ ಸೋತು ಹಿಂತಿರುಗಿದ್ದ. ಹಲವು ವರ್ಷದ ಆತನ ಕನಸು ಚೂರುಚೂರಾಗಿ ಚದುರಿಹೋಗಿದ್ದವು. ಅಲ್ಲಿಯ ವಾತಾವರಣ, ಅಲ್ಲಿಯ ಜನ, ತಿನಿಸುಗಳು, ಎಲ್ಲಕ್ಕಿಂತ ಮಿಗಿಲಾಗಿ ಆಟ ಆಡುವ ಹುಲ್ಲಿನ ಅಂಗಳ ಯಾವುದೂ ಆತನಿಗೆ ಇಷ್ಟವಾಗಿರಲಿಲ್ಲ.

ಅಲ್ಲಿಯವರೆಗೆ ಮಣ್ಣಿನ ಅಂಗಳದಲ್ಲಿಯೇ ಆಡಿದ ಆತನಿಗೆ ಅದೊಂದು ಅಸಹನೀಯ ಅನುಭವ ವಾಗಿತ್ತು. ಇನ್ನೆಂದೂ ಈ ಅಂಗಳಕ್ಕೆ ಕಾಲಿಡುವುದಿಲ್ಲವೆಂದು ಅಂದುಕೊಂಡ. ಆದರೂ ಮರಳಿ ಪ್ರಯತ್ನಿಸಿ, ಐದು ವರ್ಷದ ನಂತರ ಅದೇ ಪ್ರಶಸ್ತಿಯನ್ನು ತನ್ನ ಮಡಿಲಲ್ಲಿ ಹಾಕಿಕೊಂಡ. ಅಮೆರಿಕದಲ್ಲಿ ಹುಟ್ಟಿ, ಅಲ್ಲಿಯೇ ಆಡಲು ಆರಂಭಿಸಿದರೂ, ಬ್ರಿಟಿಷರ ಆಲ್ ಇಂಗ್ಲೆಂಡ್ ಕ್ಲಬ್‌ನ ಪ್ರಶಸ್ತಿಯೇ ಅವನ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯಾಯಿತು. ನಂತರದ ಹನ್ನೊಂದು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್, ಎರಡು ಬಾರಿ ಯು.ಎಸ್. ಓಪನ್, ಒಮ್ಮೆ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ.

ತಾನು ಆಡಿದ 277 ಆಟಗಳ ಪೈಕಿ ೨೨೪ರಲ್ಲಿ ಜಯಗಳಿಸಿದ. ಆಡುವುದನ್ನು ನಿಲ್ಲಿಸಿ ಹದಿನೈದು ವರ್ಷವಾದರೂ, ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ವಿಜೇತರಾದವರ ಪಟ್ಟಿಯಲ್ಲಿ ಇಂದಿಗೂ ಆತನಿಗೆ ಐದನೆಯ ಸ್ಥಾನ. ತಾನು ಆಡಿದ ಒಟ್ಟೂ ಪಂದ್ಯಗಳಲ್ಲಿ ಶೇಕಡಾ ಎಪ್ಪತ್ತಾರರಷ್ಟು ಪಂದ್ಯ ಗೆದ್ದದ್ದಷ್ಟೇ ಅಲ್ಲ, ವೃತ್ತಿ ಜೀವನದಲ್ಲಿ ಒಟ್ಟೂ ಅರವತ್ತು ಸಿಂಗಲ್ಸ್ ಪ್ರಶಸ್ತಿ ಗೆದ್ದ ಹಿರಿಮೆ ಆತನದ್ದು. ಆತ 1994ರಲ್ಲಿ ಶ್ರೇಯಾಂಕರಹಿತನಾಗಿ ಯು.ಎಸ್. ಓಪನ್ ಪಂದ್ಯಾಟದಲ್ಲಿ‌ ಪ್ರವೇಶ ಪಡೆದು ಜಯಶಾಲಿಯಾದದ್ದು ಇಂದಿಗೂ ದಾಖಲೆಯೇ. ಆ ಪಂದ್ಯಾಟದಲ್ಲಿ ಆತ ಮಣಿಸಿದ್ದು ತನಗಿಂತಲೂ ಅಗ್ರ ಶ್ರೇಯಾಂಕಿತರಾದ ಘಟಾನುಘಟಿಗಳನ್ನು. ಅದಕ್ಕೂ ಮೊದಲು ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಒಂದು ವರ್ಷ ಆತ ಆಟವನ್ನೇ ನಿಲ್ಲಿಸಿದ್ದ!

ಆಟದೊಂದಿಗೆ ತನ್ನ ತಲೆ ಕೂದಲಿನೊಂದಿಗೆ ಜನರ ಗಮನಸೆಳೆಯುತ್ತಿದ್ದವ ಆತ. ಆರಂಭದ ದಿನಗಳಲ್ಲಿ ತಲೆ ತುಂಬ ಕೂದಲು, ನಂತರದ ದಿನಗಳಲ್ಲಿ ಬೋಳು ಮಂಡೆ. ಸಾಮಾನ್ಯವಾಗಿ ಆತ ಧರಿಸುತ್ತಿದ್ದುದು ನೈಕಿ ಕಂಪನಿಯ ಕ್ಯಾಪ್. ಕಿವಿಗೊಂದು ಕುಡುಕು, ಕ್ಯಾಪ್‌ನ ಮುಂದೊಂದು ರೈಟ್ ಮಾರ್ಕು, ಕ್ಯಾಪ್‌ನ ಹಿಂದಿನ ಜುಟ್ಟು, ಆತನ ಟ್ರೇಡ್ಮಾರ್ಕು. ರಂಗುರಂಗಿನ ಉಡುಗೆ, ಮುಗ್ಧ ನಗು, ಅಬ್ಬರದ ಆಟದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ. ದೊಡ್ಡ ವರ್ಚಸ್ಸಿನೊಂದಿಗೆ ಸಣ್ಣ ವಿವಾದ ವನ್ನು ಒಟ್ಟಿಗೇ ಹೊತ್ತು ತಿರುಗುತ್ತಿದ್ದ.

ಆ ದಿನಗಳಲ್ಲಿ ಆತ ಯಾವ ರಾಕ್ ಸ್ಟಾರ್‌ಗೂ ಕಡಿಮೆ ಇರಲಿಲ್ಲ. ತನ್ನ ಸೌಂದರ್ಯದಿಂದ ಸಾಕಷ್ಟು ಹೆಂಗೆಳೆಯರ ನಿದ್ದೆ ಕೆಡಿಸಿದ್ದ. ಹರೆಯ, ಹೆಸರು, ಹಣ ಎಲ್ಲವೂ ಒಟ್ಟಿಗೇ ಸೇರಿದ್ದರಿಂದಲೋ ಏನೋ, ಮನಸು ಮಾರ್ಗ ತಪ್ಪಿತ್ತು. ಒಂದಿಬ್ಬರು ಗೆಳತಿಯರೊಂದಿಗೆ ಕೆಲ ಕಾಲ ಸುತ್ತಾಡಿದ ನಂತರ ಹಾಲಿವುಡ್‌ನ ಚಿತ್ರನಟಿ ಬ್ರೂಕ್ ಶೀಲ್ಡ್‌ಳನ್ನು ಮದುವೆಯಾದ. ಆದರೆ ವಿವಾಹ ಬಂಧನ ಎರಡು ವರ್ಷದ ಕಳಚಿಕೊಂಡಿತು. ಈ ನಡುವೆ ಮಾದಕ ದ್ರವ್ಯವನ್ನೂ ತನ್ನ ಸಂಗಾತಿಯನ್ನಾಗಿಸಿ ಕೊಂಡಿದ್ದ.

ತೊಂಬತ್ತರ ದಶಕದ ಟೆನಿಸ್ ತಾರೆ ಎಂದು ಕರೆಸಿಕೊಂಡವನ ಪ್ರಯಾಣ ಮಾತ್ರ ರೋಲರ್ ಕೋಸ್ಟರ್‌ನಲ್ಲಿ ಕುಳಿತಂತಿತ್ತು. ಒಂದು ದಶಕದಲ್ಲಿ ಅಷ್ಟೊಂದು ಏರಿಳಿತಗಳನ್ನು ಬಹುಶಃ ಯಾವ ಆಟಗಾರನೂ ಕಂಡಿರಲಿಕ್ಕಿಲ್ಲ. ಆದರೆ ಪರಿವರ್ತನೆಯೆಂಬ ಜಗದ ನಿಯಮ ಆತನನ್ನೂ ಬದಲಾಯಿಸಿತ್ತು. ಇದ್ದಕ್ಕಿದ್ದಂತೆ ಒಂದು ದಿನ ತಾನು ಬದಲಾಗಬೇಕೆಂದು ನಿರ್ಣಯಿಸಿದ. ಉತ್ತಮ ಕ್ರೀಡಾಪಟುವಷ್ಟೇ ಅಲ್ಲ, ಒಳ್ಳೆಯ ಮನುಷ್ಯನೂ ಆಗಬೇಕು ಅಂದುಕೊಂಡ.

ಚಿಕಿತ್ಸಕರನ್ನು ಕಂಡು ಮಾನಸಿಕವಾಗಿ, ದೈಹಿಕವಾಗಿ ಬೇಕಾದ ಚಿಕಿತ್ಸೆ ಪಡೆದ. ತನ್ನ ಬಾಲ್ಯದ ಆತ್ಮೀಯ ಸ್ನೇಹಿತನನ್ನು ಹಣ ಕಾಸಿನ ವ್ಯವಹಾರಕ್ಕೆ ವ್ಯವಸ್ಥಾಪಕನನ್ನಾಗಿ ನೇಮಿಸಿಕೊಂಡ. ಅಷ್ಟೇ ಅಲ್ಲ, ತನ್ನದೇ ಹಣವನ್ನು ಅವಶ್ಯಕತೆಗಳ ಸತ್ಯಾಸತ್ಯತೆಯನ್ನು ನೋಡಿ ತನಗೆ ನೀಡುವಂತೆ ಆತನಿಗೆ ಆದೇಶಿಸಿದ್ದ!

ಮೈದಾನಕ್ಕಿಳಿದು ಹದಿಮೂರು ವರ್ಷದಲ್ಲಿ ಮೂರು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಮಾತ್ರ ಗೆದ್ದಿದ್ದ ಆತ ನಂತರದ ಐದು ವರ್ಷಗಳಲ್ಲಿ ಐದು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾಟವನ್ನು ಜಯಿಸಿದ. 2001ರಲ್ಲಿ ತನ್ನದೇ ಕ್ರೀಡಾ ಜಗತ್ತಿನಲ್ಲಿ ತಾರೆಯಾಗಿದ್ದ ಆಕೆಯನ್ನು ಮದುವೆಯಾದ. ಆ ವೇಳೆಗೆ ಆಕೆ ಆಡುವುದನ್ನು ನಿಲ್ಲಿಸಿ ಎರಡು ವರ್ಷವಾಗಿತ್ತು. ಆತ ಮದುವೆಯಾಗಿ ಐದು ವರ್ಷದವರೆಗೂ ಆಟ ಮುಂದುವರಿಸಿದ್ದ. 2006ರಲ್ಲಿ ನಿವೃತ್ತಿಯ ನಂತರ ಫಿಟ್ನೆಸ್ ಇಕ್ವಿಪ್ಮೆಂಟ್ ತಯಾರಿಸುವ ಕಾರ್ಯಕ್ಕಿಳಿದ. ಲೋಕೋಪಯೋಗಿ ಕಾರ್ಯಗಳಲ್ಲಿ, ದಾನ-ಧರ್ಮದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತನ್ನ ಆತ್ಮಕಥೆಯನ್ನು ‘ಓಪನ್’ ( OPEN) ಎಂಬ ಪುಸ್ತಕದಲ್ಲಿ ದಾಖಲಿಸಿದ.

ಅದರಲ್ಲಿ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟ. ಆ ಪುಸ್ತಕ ನ್ಯೂಯಾರ್ಕ್ ಟೈಮ್ಸ್‌ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿತು. 2010ರಲ್ಲಿ ಬ್ರಿಟಿಷ್ ಸ್ಪೋರ್ಟ್ಸ್ ಬುಕ್ ಪ್ರಶಸ್ತಿಗೆ ಪಾತ್ರವಾಯಿತು. ಕ್ರೀಡಾ ವಿಭಾಗಕ್ಕೆ ಸಂಬಂಧಿಸಿದ ಮೂವತ್ತು ಅತ್ಯುತ್ತಮ ಪುಸ್ತಕಗಳ ಪಟ್ಟಿಯಲ್ಲಿ ಆತನ ಪುಸ್ತಕ ಕೂಡ ಸ್ಥಾನ ಪಡೆದುಕೊಂಡಿತು.

ಆದರೆ ಆತ ಈ ಪರಿಚಯ ಭಾಷಣ ಮಾಡಿದ್ದು 2004ರ Hall of Fame ನಲ್ಲಿ ಆಕೆಯ ಹೆಸರು ದಾಖಲಾಗುವ ಸಮಾರಂಭದಲ್ಲಿ (2011ರಲ್ಲಿ ಆತನ ಹೆಸರೂ ಅವರೊಂದಿಗೆ ಸೇರಿಕೊಂಡಿತು).

ಅದೇ ಸಮಾರಂಭದ ತನ್ನ ಭಾಷಣದಲ್ಲಿ ಆಕೆ ಕಣ್ಣಲ್ಲಿ ಆನಂದಬಾಷ್ಪ ತುಂಬಿಕೊಂಡೇ ಹೇಳಿದಳು- “ಈ ಸಮಯ ಭಾವೋದ್ವೇಗಕ್ಕೆ ಒಳಗಾಗುವುದಲ್ಲ ಎಂದು ಗೊತ್ತು. ಆದರೂ ನಮ್ಮನ್ನು ಯಾರಾದರೂ ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿzರೆ ಎಂದು ತಿಳಿದಾಗ ಅದ್ಭುತ ಅನುಭವ ವಾಗುತ್ತದೆ. ಟೆನಿಸ್ ಆಟ ನನಗೆ ಜೀವನದಲ್ಲಿ ನಂಬಲಾಗದ ಅವಕಾಶಗಳನ್ನೆ ಒದಗಿಸಿಕೊಟ್ಟಿತು. ನನ್ನನ್ನು ನಿನ್ನಲ್ಲಿಗೆ ಕೊಂಡೊಯ್ದ ದಾರಿ ನನ್ನ ಪ್ರಯಾಣದಲ್ಲಿ ನನಗೆ ಸಿಕ್ಕ ಅತ್ಯುತ್ತಮ ಮಾರ್ಗ.

ಟೆನಿಸ್ ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಎಂದರೆ ನೀನು". ಆಕೆಯ ನುಡಿಗಳನ್ನು ಕೇಳಿದ ಆತನ ತುಟಿಗಳು ಬಿಗಿದುಕೊಳ್ಳುತ್ತವೆ. ಆ ಒಂದು ಕ್ಷಣದಲ್ಲಿ ಎರಡೂ ಹೃದಯಗಳು ಭಾರ. ನೋಡು ಗರ ಚಕ್ಷುಗಳು ತೇವ. ಆಕೆಯ ಭಾಷಣ ಮುಂದುವರಿಯುತ್ತದೆ; ತಂದೆ, ತಾಯಿ, ಸಹೋದರ, ತರಬೇತುದಾರರಿಗೆಲ್ಲ ಧನ್ಯವಾದ ಸಮರ್ಪಣೆ ಮತ್ತು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಗೊಳ್ಳುತ್ತದೆ.

ಒಟ್ಟಿನಲ್ಲಿ ಅದೊಂದು ಹೃದಯಸ್ಪರ್ಶಿ ಸಮಯ. ಎಷ್ಟೋ ವರ್ಷದ ನಂತರ ಯಾಕೋ ಆ ಸಮಾರಂಭದ ತುಣುಕನ್ನು ಮತ್ತೆ ನೋಡಬೇಕೆನಿಸಿತು, ನೋಡಿದೆ. ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನಿಸಿತು, ಹೇಳಿದೆ. ಅವರಿಬ್ಬರೂ ನನಗೆ ಅತ್ಯಂತ ಪ್ರಿಯರಾದ ಕ್ರೀಡಾಪಟುಗಳು.

ಅಂದಹಾಗೆ, ಆತ- ಆಂಡ್ರೆ ಅಗಾಸ್ಸಿ, ಆಕೆ- ಸ್ಟೆಫಿ ಗ್ರಾಫ್.