Shishir Hegde Column: ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು
‘ಹಚ್ಚೆ ಸಮ್ಮೇಳನ’. ನಮ್ಮಲ್ಲಿ ಸಾಹಿತ್ಯೋತ್ಸವ ಮೊದಲಾದ ಕಾರ್ಯಕ್ರಮಗಳಾದಾಗ ಚಿಕ್ಕ ಬೂತ್ ಮಾದರಿಯಲ್ಲಿ ಹತ್ತಿಪ್ಪತ್ತು ಪುಸ್ತಕದ ಅಂಗಡಿಗಳು ತೆರೆದಿರುತ್ತಾರಲ್ಲ, ಅದೇ ರೀತಿಯಲ್ಲಿ ಹಚ್ಚೆಯ ಗುಡಾರ (ಬೂತ್) ಗಳು. ಏನಿಲ್ಲವೆಂದರೂ ಸುಮಾರು 300 ಗುಡಾರಗಳು; ಹಚ್ಚೆ ಹಾಕುವ ನುರಿತ ಕಲಾ ವಿದರು ಅಮೆರಿಕದ ಮೂಲೆಮೂಲೆಗಳಿಂದ ಅಲ್ಲಿಗೆ ಬಂದಿದ್ದರು.
-
ಶಿಶಿರ್ ಹೆಗಡೆ
Oct 24, 2025 9:08 AM
ಶಿಶಿರಕಾಲ
shishirh@gmail.com
ನಮಗೆ ನಮ್ಮ ನಿಯಂತ್ರಣದಲ್ಲಿರುವ, ನಿರೀಕ್ಷಿತ ನೋವು ಒಂದು ಪ್ರಮಾಣದಲ್ಲಿ ಇಷ್ಟ ವಾಗುತ್ತದೆ. ಇಷ್ಟವೆನ್ನುವುದಕ್ಕಿಂತ ಅದು ನಮ್ಮಲ್ಲಿ ಹಲವರ ಅವಶ್ಯಕತೆಯಾಗಿರುತ್ತದೆ. ನಾವು ನಿತ್ಯ ಬದುಕಿನಲ್ಲಿ ಹೆಚ್ಚಿನ ನೋವಾಗದಂತೆ ಎಚ್ಚರಿಕೆಯಿಂದ ಬದುಕಬೇಕು. ಆ ಎಚ್ಚರಿಕೆಗೆ ನೋವು ಎಂದರೇನು ಎಂಬ ಅನುಭವವಿರಬೇಕು. ಜೀವನದಲ್ಲಿ ಒಮ್ಮೆಯೂ ಬೀಳದವನಿಗೆ ನೋವೆಂದರೆ ಏನೆಂದೇ ಗೊತ್ತಿಲ್ಲದಿದ್ದರೆ?
ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರಕ್ಕೆ ಇತ್ತೀಚೆಗೆ ಕಾರ್ಯನಿಮಿತ್ತವಾಗಿ ಹೋಗಿದ್ದೆ. ಅಂದು ಬೃಹತ್ ಕಾನರೆನಲ್ಲಿ ಭಾಗಿಯಾಗುವುದಿತ್ತು. ಬಿಲ್ಡಿಂಗಿನ ಒಂದು ಅರ್ಧದಲ್ಲಿ ನಾನು ಭಾಗವಹಿಸುವ ಸಮ್ಮೇಳನದ ಏರ್ಪಾಡಾಗಿದ್ದರೆ, ಇನ್ನರ್ಧ ಭಾಗದಲ್ಲಿನ ವಿಶಾಲವಾದ ಹಜಾರದಲ್ಲಿ ಟ್ಯಾಟೂ ಕಾನರೆ ಏರ್ಪಡಾಗಿತ್ತು.
‘ಹಚ್ಚೆ ಸಮ್ಮೇಳನ’. ನಮ್ಮಲ್ಲಿ ಸಾಹಿತ್ಯೋತ್ಸವ ಮೊದಲಾದ ಕಾರ್ಯಕ್ರಮಗಳಾದಾಗ ಚಿಕ್ಕ ಬೂತ್ ಮಾದರಿಯಲ್ಲಿ ಹತ್ತಿಪ್ಪತ್ತು ಪುಸ್ತಕದ ಅಂಗಡಿಗಳು ತೆರೆದಿರುತ್ತಾರಲ್ಲ, ಅದೇ ರೀತಿಯಲ್ಲಿ ಹಚ್ಚೆಯ ಗುಡಾರ (ಬೂತ್) ಗಳು. ಏನಿಲ್ಲವೆಂದರೂ ಸುಮಾರು 300 ಗುಡಾರಗಳು; ಹಚ್ಚೆ ಹಾಕುವ ನುರಿತ ಕಲಾವಿದರು ಅಮೆರಿಕದ ಮೂಲೆಮೂಲೆಗಳಿಂದ ಅಲ್ಲಿಗೆ ಬಂದಿದ್ದರು. ಅಂತೆಯೇ ಹಚ್ಚೆ ಹಾಕಿಸಿ ಕೊಳ್ಳುವವರು ಕೂಡ. ಬಂದವರು ಗುಡಾರಗಳಿಗೆ ಭೆಟ್ಟಿ ನೀಡುತ್ತಿದ್ದರು ಮತ್ತು ತಮಗಿಷ್ಟವಾದ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು, ಮುಂದೆ ಹೋಗುತ್ತಿದ್ದರು.
ಅಮೆರಿಕದ ತುಂಬೆಲ್ಲ ಲಕ್ಷಾಂತರ ಹಚ್ಚೆ ಅಂಗಡಿಗಳಿವೆ. ಕೆಲವು ನಗರಗಳಂತೂ ‘ಹಚ್ಚೆ ಹಾಕಿಸಿ ಕೊಳ್ಳುವವರ ಕಾಶಿ- ರಾಮೇಶ್ವರ’ ಇತ್ಯಾದಿ! ಆ ಊರುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಟ್ಯಾಟೂ ಅಂಗಡಿಗಳು. ಕೆಲವು ಅಂಗಡಿಗಳೆದುರು ಸರತಿ ಸಾಲು. ಮುಂಗಡ ಕಾದಿರಿಸಿ ಬರುವ ವ್ಯವಸ್ಥೆ ಇತ್ಯಾದಿ. ನಮ್ಮಲ್ಲಿ ಮೊಬೈಲ್ ಅಂಗಡಿಗಳಿರುವಂತೆ. ಕೆಲವು ತುಂಬಿರುತ್ತವೆ,
ಇದನ್ನೂ ಓದಿ: Shishir Hegde Column: ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!
ಇನ್ನು ಕೆಲವು ಖಾಲಿ. ಅಮೆರಿಕದವರಿಗೆ ಹಚ್ಚೆಯೆಂದರೆ ಎಲ್ಲಿಲ್ಲದ ಒಲವು. ಶೇ.೩೦ರಷ್ಟು ಅಮೆರಿಕ ನ್ನರು ಒಂದಿಂದು ಹಚ್ಚೆ ಹಾಕಿಸಿಕೊಂಡಿರುತ್ತಾರೆ! ಐದಾರು ವರ್ಷದಿಂದೀಚೆಗೆ ಈ ಫ್ಯಾಷನ್ ಇನ್ನಷ್ಟು ಪ್ರವರ್ಧಮಾನಕ್ಕೆ ಬರುತ್ತಿದೆ. ಈಗಂತೂ ೨೦-೩೦ ವಯಸ್ಸಿನ ಹಚ್ಚೆಯಿಲ್ಲ ದವರು ಅಪರೂಪ ಎಂಬಷ್ಟು.
೩ ಬಿಲಿಯನ್ ಡಾಲರ್ (26 ಸಾವಿರ ಕೋಟಿ ರುಪಾಯಿ) ವಾರ್ಷಿಕ ವ್ಯವಹಾರ! ಆದರೆ ಹಲವರು ಒಂದೇ ಹಚ್ಚೆಗೆ ನಿಲ್ಲುವುದಿಲ್ಲ. ಹಚ್ಚೆ ಎಂದರೆ ‘ಅಮ್ಮನ ಪ್ರೀತಿ’, ‘ಕಮಲ’, ‘ಕಲಾ ಐ ಲವ್ ಯು’ ಎಂದು ಹಾಕಿಸುವುದಲ್ಲ. ಅಥವಾ ಯಾವುದೋ ಒಂದು ದೇವರ ಚಿತ್ರ ಹಾಕಿಸಿ ಮುಗಿಯುವುದಲ್ಲ. ಇವರ ಟ್ಯಾಟೂ ಎಂದರೆ ಒಂದಾದ ಮೇಲೆ ಇನ್ನೊಂದು. ಮೈಯೆ ತುಂಬಿರುತ್ತದೆ. ಗುಪ್ತಾಂಗಗಳ ಮೇಲೆ, ಕಣ್ಣಿನ ರೆಪ್ಪೆಯಮೇಲೆ, ನಾಲಿಗೆಯ ಮೇಲೆ (ಕಾಳಿದಾಸರು), ಹೊಟ್ಟೆ, ಸೊಂಟ- ಥೋ, ಹೇಳಿ ತೀರದು!
ಇಂಥದ್ದೊಂದು ಜಾಗವೆಂದಿಲ್ಲ, ಅ ಹಚ್ಚೆ. ಪೇಟೆಯಲ್ಲಿ ನಡೆದಾಡುವಾಗ ಅಂಥ ಐದಾರು ‘ಹಚ್ಚೇಶ್ವರರು’ ಸಿಗುತ್ತಾರೆ. ಬಾಯಿ ತುಟಿಯಿಂದ ಹಿಡಿದು ಕಣ್ಣಿನ ಆಲಿಯ ಬಿಳಿ ಭಾಗದಲ್ಲಿಯೂ ಹಚ್ಚೆ. ಈ ಪಾಟಿ ಹಚ್ಚೆ ಮಂದಿ ಸುತ್ತಲಿರುವಾಗ ಹಚ್ಚೆ ಕಾನರೆ ಸುತ್ತಾಡುವಾಗ ನನಗಿದ್ದದ್ದು ಒಂದೇ ಪ್ರಶ್ನೆ. ಅಮ್ಮನ ಪ್ರೀತಿಗೋ, ದೇವರ ಪ್ರೀತಿಗೂ, ಏನೋ ಒಂದು ನೆನಪಿಗೋ ಒಂದು ಹಚ್ಚೆ ಹಾಕಿಸಿ ಕೊಳ್ಳುವುದರಲ್ಲಿ ಅರ್ಥ ಸಿಗಬಹುದು.
ಆದರೆ ಈ ರೀತಿ ದೆವ್ವ ಭೂತದ ಚಿತ್ರ, ರಕ್ತ ಸೋರಿದಂತೆ ಇತ್ಯಾದಿ ಚಿತ್ರವಿಚಿತ್ರಗಳನ್ನೆಲ್ಲ ಮೈತುಂಬ ಹಚ್ಚೆ ಹಾಕಿಸಿಕೊಳ್ಳುವ ಉದ್ದೇಶವಾದರೂ ಏನು? ಹಾಕಿಸಿಕೊಳ್ಳುವುದೇಕೆ ಎಂದು ಹಲವರಲ್ಲಿ ಕೇಳಿದ್ದೇನೆ. ಆಗ, “ಅದು ನಮ್ಮ ಗುರುತು, ನಮ್ಮ ಎಕ್ಸ್‌ಪ್ರೆಶನ್, ಅಭಿವ್ಯಕ್ತಿಸುವ ರೀತಿ" ಎಂದೆಲ್ಲ ಹೇಳುತ್ತಾರೆ.
ಇಡೀ ಪ್ರವರ ಇವರ ಮೈಮೇಲೆ. ಅಲ್ಲ, ಅನ್ಯರಿಗೆ ಕಾಣಿಸದ ಜಾಗದಲ್ಲ ಹಚ್ಚೆ ಹಾಕಿಕೊಂಡರೆ ಯಾವ ಅಭಿ ವ್ಯಕ್ತಿ, ಅದು ಕಾಣುವುದಾದರೂ ಯಾರಿಗೆ? ಕುಂಡೆ ಮೇಲೆ ಹಾಕಿಸಿಕೊಂಡರೆ ಹಾಕಿಸಿ ಕೊಂಡವರು ಅದನ್ನು ಕನ್ನಡಿಯ ನೋಡಿಕೊಳ್ಳಬೇಕು, ಅದೂ ತಿರುಗಾಮುರುಗಾ ಆಗಿ ಕಾಣುತ್ತದೆ!
ಈ ವ್ಯಂಗ್ಯಗಳನ್ನು ಪಕ್ಕಕ್ಕಿಟ್ಟು ‘ಹಚ್ಚೇಶ್ವರರು’ ಕೊಡುವ ಕಾರಣಗಳ ಪಟ್ಟಿಯನ್ನು ನೋಡಿದರೆ ಎರಡು ಸ್ಥೂಲ ಕಾರಣಗಳು ಗೊತ್ತಾಗುತ್ತವೆ. ಮೊದಲನೆಯದು ನಮಗೊಂದು ಪ್ರತ್ಯೇಕ ಗುರುತಿರ ಬೇಕೆಂಬ ಹಂಬಲ, ಪ್ರೀತಿಯ ದ್ಯೋತಕ, ಧಾರ್ಮಿಕ ಕಾರಣ ಇತ್ಯಾದಿ. ಹೆಚ್ಚಿನವರು ಈ ವರ್ಗಕ್ಕೆ ಸೇರಿದವರು. ಆದರೆ ಈ ಇಡೀ ಮೈಗೆ- ಮಕದಿಂದ ತಿಕದವರೆಗೆ ಹಾಕಿಸಿಕೊಳ್ಳುವವರಿದ್ದಾರಲ್ಲ ಅವರಿಗೆ ಅದೊಂದು ಅಡಿಕ್ಷನ್- ಚಟ. ತಮಾಷೆಗೆ ಹೇಳುತ್ತಿಲ್ಲ, ಪ್ರತ್ಯೇಕತೆ, ಅಭಿವ್ಯಕ್ತಿಯ ಜತೆಯಲ್ಲಿ ಆ ಹಾಕಿಸಿಕೊಳ್ಳುವಾಗಿನ ಆ ಚಿಕ್ಕ ಚಿಕ್ಕ ಸೂಜಿಗಳು ಚರ್ಮವನ್ನು ಚುಚ್ಚಿ ಆ ಇಂಕ್- ಶಾಯಿ ಯನ್ನು ಚರ್ಮದಲ್ಲಿ ಶಾಶ್ವತವಾಗಿಸುತ್ತವೆಯಲ್ಲ,
ಆ ನೋವಿನ ಅನುಭವಕ್ಕೆ!! ಇದೆಂಥ ನೋವಿನ ಚಟ? ನೋವು ಹೇಗೆ ಒಂದು ಖಯಾಲಿಯಾಗಿ ದೇಹದ ಮೇಲೆ ಅಳಿಸಲಾಗದ ಹಚ್ಚೆ ಹಾಕಿಸಿಕೊಳ್ಳುವ ಮಟ್ಟಿಗೆ ಪ್ರೇರಣೆಯಾಗುತ್ತದೆ? ಕೆಲವರಲ್ಲಿ ಈ ಪ್ರಶ್ನೆಯನ್ನು ಕಾಲೆಳೆದು ಕೇಳಿದ್ದೇನೆ. “ನೀನು ಹಾಕಿಸಿಕೊಂಡು ನೋಡು, ಆಗ ಅದರ ಮಜಾ ತಿಳಿಯುತ್ತದೆ" ಎನ್ನುತ್ತಾರೆ.
ಸಾಮಾನ್ಯವಾಗಿ ಮೂರು ಹಚ್ಚೆ ಹಾಕಿಸಿಕೊಂಡ ಮೇಲೆ ಇನ್ನಷ್ಟು ಹಾಕಿಸಿಕೊಳ್ಳಬೇಕೆಂದು ಅನಿಸುತ್ತದೆಯಂತೆ. ನಾನು ಸಿನ್ಸಿನಾಟಿಯ ಹಚ್ಚೆ ಕಾನರೆನಲ್ಲಿ ಓಡಾಡುವಾಗ ಒಬ್ಬ ಹಚ್ಚೆ ಹಾಕುವ ವನಂತೂ ನನ್ನನ್ನು ಹತ್ತಿರ ಕರೆದು, “ಒಂದು ಹಚ್ಚೆಯಿಲ್ಲವೆಂದರೆ ಬದುಕಿದಂತೆಯೇ ಅಲ್ಲ, ಒಂದಾ ದರೂ ಹಾಕಿಸಿಕೊ" ಎಂದು ಒತ್ತಾಯಿಸಿದ್ದ. “ಹಾಕಿಸಿಕೊಂಡು ನೋಡು, ಮತ್ತೆ ನೀನೇ ಇನ್ನಷ್ಟು ಹಚ್ಚೆ ಹಾಕಿಸಿಕೊಳ್ಳುತ್ತೀ" ಎನ್ನುತ್ತಿದ್ದ.
ನನಗೆ ಆಗ ಒಂದು ಕಥೆ ನೆನಪಾಗಿತ್ತು. ಒಂದು ಕಾಡಿನಲ್ಲಿ ಒಂದು ನರಿಯಿತ್ತಂತೆ. ಆ ನರಿ ಕಾಡಿನ ಪಕ್ಕದ ಹೊಲಕ್ಕೆ ಹೋದಾಗ, ಅಲ್ಲಿ ಬೇಲಿ ದಾಟುವಾಗ ಅದರ ಬಾಲ ಸಿಕ್ಕಿ ತುಂಡಾಗಿ ಹೋಯಿ ತಂತೆ. ಕಾಡಿಗೆ ಮರಳಿ ಬಂದದ್ದೇ ಉಳಿದ ನರಿಗಳೆಲ್ಲ ಆ ನರಿಯನ್ನು ಕಂಡು ನಕ್ಕು ಅಪಹಾಸ್ಯ ಮಾಡಿದವಂತೆ.
ಬಲ ಕತ್ತರಿಸಿಕೊಂಡ ನರಿ ಯೋಚಿಸಿತು. ನರಿಗಳನ್ನೆಲ್ಲ ಸಭೆ ಕರೆದು “ನೋಡಿ, ನನ್ನ ಬಾಲ ಕತ್ತರಿಸಿದ್ದಕ್ಕೆ ಅಪಹಾಸ್ಯಮಾಡುತ್ತಿದ್ದೀರಿ. ಆದರೆ ಅಸಲಿಯತ್ತೇನೆಂದರೆ ಬಾಲ ಒಂದು ಕೆಲಸಕ್ಕೆ ಬಾರದ ಅಂಗ. ನಿಷ್ಪ್ರಯೋಜಕ. ಅದನ್ನು ಕತ್ತರಿಸಿಕೊಂಡರೆ ವೇಗವಾಗಿ ಓಡಬಹುದು. ಬಹಳ ಅನುಕೂಲ". ಉಳಿದ ನರಿಗಳಿಗೆ ಹೌದೆನಿಸಿತು.
“ಬೇಕಿದ್ದರೆ ಕತ್ತರಿಸಿಕೊಂಡು ನೋಡಿ" ಎಂದು ನರಿ ಮೇಲಿಂದ ಹೇಳಿತಂತೆ. ಆಗ ಉಳಿದ ನರಿಗಳು ಬಾಲವನ್ನು ಕತ್ತರಿಸಿಕೊಂಡವಂತೆ. “ತಿಳಿಯಬೇಕೆಂದು ನರಿಯು ಬಾಲ ಕತ್ತರಿಸಿಕೊಂಡಂತಾ ಗುತ್ತದೆ" ಎಂದು ಹೇಳಿದೆ. ಇಬ್ಬರೂ ನಕ್ಕೆವು.
ಸಾಮಾನ್ಯವಾಗಿ ನೋವು, ಅಲವರಿಕೆ, ದೇಹದ ಅಥವಾ ಮಾನಸಿಕ ತ್ರಾಸು, ಯಾವುದೇ ಹಿಂಸಾ ಪ್ರವರ್ಗಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ನಾವು ಅತಿ ಖಾರದ ಆಹಾರವನ್ನು ಆಗೀಗ ಇಷ್ಟಪಡುತ್ತೇವೆ. ನಮಗೆಲ್ಲರಿಗೂ ಈ ಅನುಭವವಾಗಿರುತ್ತದೆ. ಅತಿಯಾದ ಖಾರವಾದ ಆಹಾರ ವನ್ನು ತಿನ್ನುವಾಗ ಕಣ್ಣಲ್ಲಿ ಮೂಗಲ್ಲಿ ನೀರು ಬರುತ್ತಿರುತ್ತದೆ. ಆದರೂ ತಿನ್ನುವುದು ನಿಲ್ಲಿಸಲಿ ಕ್ಕಾಗುವುದಿಲ್ಲ. ಏಕೆ? ಕೆಲವರಿಗೆ ಪ್ಯಾಥೋ ಹಾಡುಗಳು- ದುಃಖದ, ವಿರಹದ, ಬೇಸರದ ಹಾಡುಗಳು ಇಷ್ಟ.
ಮತ್ತೆ ಮತ್ತೆ ಕೇಳುತ್ತಾರೆ. ಅವರದ್ದೇನೂ ಪ್ರೀತಿ ಮುರಿದುಬಿದ್ದಿರುವುದಿಲ್ಲ, ಹಾಯಾದ ಜೀವನವೇ ಇರುತ್ತದೆ. ಆದರೆ ಆಗೀಗ ಮುಖೇಶನ ‘ಗಮ್ ಕೆ ಗಾನೆ’, ಪಿಬಿಎಸ್ ಅವರ ವಿರಹ ಗೀತೆ ಕೇಳಬೇಕೆನ್ನಿ ಸುತ್ತದೆ. ಇನ್ನು ಕೆಲವರಿಗೆ, ಹೆದರಿಕೆಯಾಗುವ ಹಾರರ್ ಚಲನಚಿತ್ರಗಳು. ನನ್ನ ಸ್ನೇಹಿತನೊಬ್ಬನಿzನೆ. ಅವನು ಹಾರರ್ ಚಿತ್ರಗಳನ್ನಷ್ಟೇ ನೋಡುವುದು.
ಅದುವೇ ಅವನಿಗೆ ಕಿಕ್. ಜಿಮ್‌ಗೆ ಹೋದಾಗಿನ ಮೈಕೈ ನೋವು ಇದೆಯಲ್ಲ, ಅದು ಎಂದೂ ಉಳಿದ ನೋವಿನಂತೆ ಬಾಧಿಸುವುದಿಲ್ಲ. ಆ ನೋವಿನಲ್ಲೂ ಸುಖವಿದೆ. ‘ಮುಂಗಾರು ಮಳೆ’ಯ ‘ಹೃದಯ ಪರಪರ ಕೆರೆದುಕೊಳ್ಳುವುದರಲ್ಲೂ ಸುಖವಿದೆ’ ಎಂದಂತೆ. ಸ್ಟಾನರ್ಡ್ ಯೂನಿವರ್ಸಿಟಿಯವರ ಒಂದು ಪ್ರಸಿದ್ಧ ಮನಃಶಾಸದ ಪ್ರಯೋಗವಿದೆ. ಒಂದಿಷ್ಟು ವಿದ್ಯಾರ್ಥಿಗಳನ್ನು ಒಂದು ಕೋಣೆಯಲ್ಲಿ ಕೂರಿಸಲಾಯಿತು.
ಅವರು ಒಬ್ಬರ ಜತೆ ಇನ್ನೊಬ್ಬರು ಮಾತನಾಡುವಂತಿಲ್ಲ, ಮೊಬೈಲ್ ಬಳಸುವಂತಿಲ್ಲ, ಪುಸ್ತಕ ಓದುವಂತಿಲ್ಲ ಇತ್ಯಾದಿ. ಏನೆಂದರೆ ಏನೂ ಮಾಡುವಂತಿಲ್ಲ. ಆದರೆ ಪ್ರತಿಯೊಬ್ಬರ ಕೈಗೆ ಒಂದು ಚಿಕ್ಕ ರಿಮೋಟ್ ಬಟನ್ ಕೊಡಲಾಗಿತ್ತು. ಆ ಬಟನ್ ಒತ್ತಿದರೆ ಅವರು ಕೂತಿದ್ದ ಕುರ್ಚಿಗೆ ಹದವಾದ ಇಲೆಕ್ಟ್ರಿಕ್ ಶಾಕ್ ಹೊಡೆಯುತ್ತಿತ್ತು. ಅವರಿಗೆ ನಿರ್ದೇಶನವೇನೆಂದರೆ ಸುಮ್ಮನೆ ಕೂತಿರಬೇಕು, ಬೇಕಾದರೆ ಬಟನ್ ಒತ್ತಿ ಆ ಚಿಕ್ಕ ಶಾಕ್ ಹೊಡೆಸಿಕೊಳ್ಳಬಹುದು.
ನೂರೋ, ಇನ್ನೂರೋ ಜನರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಎಲ್ಲರೂ ಈ ಶಾಕ್ ಹೊಡೆಸಿಕೊಂಡರಂತೆ. ಒಂದೆರಡು ಬಾರಿಯಲ್ಲ, ಮೂರು ತಾಸಿನಲ್ಲಿ ಸರಾಸರಿ ಐದು ನಿಮಿಷಕ್ಕೊಮ್ಮೆ ಬಹುತೇಕ ಎಲ್ಲರೂ ಶಾಕ್ ಹೊಡೆಸಿಕೊಂಡಿದ್ದರಂತೆ.
ನಮಗೆ ನಮ್ಮ ನಿಯಂತ್ರಣದಲ್ಲಿರುವ, ನಿರೀಕ್ಷಿತ ನೋವು ಒಂದು ಪ್ರಮಾಣದಲ್ಲಿ ಇಷ್ಟವಾಗುತ್ತದೆ. ಇಷ್ಟವೆನ್ನುವುದಕ್ಕಿಂತ ಅದು ನಮ್ಮಲ್ಲಿ ಹಲವರ ಅವಶ್ಯಕತೆಯಾಗಿರುತ್ತದೆ. ನಾವು ನಿತ್ಯ ಬದುಕಿ ನಲ್ಲಿ ಹೆಚ್ಚಿನ ನೋವಾಗದಂತೆ ಎಚ್ಚರಿಕೆಯಿಂದ ಬದುಕಬೇಕು. ಆ ಎಚ್ಚರಿಕೆಗೆ ನೋವು ಎಂದರೇನು ಎಂಬ ಅನುಭವವಿರಬೇಕು.
ಜೀವನದಲ್ಲಿ ಒಮ್ಮೆಯೂ ಬೀಳದವನಿಗೆ ನೋವೆಂದರೆ ಏನೆಂದೇ ಗೊತ್ತಿಲ್ಲದಿದ್ದರೆ? ನಮ್ಮ ವಿಕಸನದ ಉದ್ದಕ್ಕೂ ನೋವು ಅತ್ಯಂತ ಸಾಮಾನ್ಯ ಅನುಭವವಾಗಿತ್ತು. ನಮಗೆ ಈಗ ವಾರಕ್ಕೊಮ್ಮೆ ಮೇಜಿಗೆ, ಕುರ್ಚಿಗೆ ಕಾಲು ಬಡಿಯುತ್ತದೆ. ಜೀವ ಹೋಗುವಷ್ಟು ನೋವಾಗುತ್ತದೆ. ಆದರೆ ಇಂಥ ನೋವುಗಳ ಸಾಧ್ಯತೆ ಹಿಂದೆ ಜಾಸ್ತಿಯಿತ್ತು.ಚಿಕ್ಕಪುಟ್ಟ ನೋವು-ಗಾಯ ಸಾಮಾನ್ಯವಾಗಿತ್ತು. ದೇಹ ಹೇಗೆಂದರೆ ಈ ಚಿಕ್ಕಪುಟ್ಟ ನೋವಿನ ಸುತ್ತಲೂ ವಿಕಸನವಾಗಿದೆ.
ಆದರೆ ಈಗೀಗ ಬದುಕು ಹೇಗಾಗಿದೆಯೆಂದರೆ ಮೊದಲಿನಷ್ಟು ನಮಗೆ ದೈಹಿಕ ನೋವಾಗುತ್ತಿಲ್ಲ. ದೊಡ್ಡ ನೋವಾಗಬಾರದಂತೆ ಎಚ್ಚರಿಕೆಗೆ, ಚಿಕ್ಕ ನೋವು ಅವಶ್ಯಕತೆ. ಈಗ ನಿತ್ಯ ದೊಡ್ಡ ನೋವು ಗಳ ಪ್ರಮಾಣ ಕಡಿಮೆಯಾಗಿದೆ, ಅಂತೆಯೇ ಚಿಕ್ಕ ನೋವಿನ ಬಯಕೆ ಹಾಗೆಯೇ ಉಳಿದಿದೆ. ಆ ಕಾರಣಕ್ಕೇ ಟ್ಯಾಟೂ ನೋವು ಇಷ್ಟವಾಗುವುದು, ಅತಿಯಾದ ಖಾರ, ಕಹಿ ಆಗೀಗ ಬೇಕೆನಿಸುವುದು.
ಅಮ್ಮ ಬಿಸಿ ಬಂಡಿಯಿಂದ ದೋಸೆಯನ್ನು ಹುಟ್ಟು ಬಳಸದೆ, ಕೈಯಲ್ಲಿ ಎತ್ತುತ್ತಾಳೆ. ಕೆಲವರಿಗೆ ಅತಿಯಾದ ಬಿಸಿ ನೀರನ್ನು ಸ್ನಾನ ಮಾಡುವುದು ಅಭ್ಯಾಸವಾಗಿರುತ್ತದೆ. ಮೈ ಸುಟ್ಟುಹೋಗುವಷ್ಟು ಬಿಸಿಯಿರಬೇಕು. ಕೆಲವರಿಗೆ ಚಳಿಗಾಲದಲ್ಲೂ ತಣ್ಣೀರ ಸ್ನಾನವೇ ಇಷ್ಟ. ಕೆಲವರಿಗೆ ಚಹಾ ನಾಲಿಗೆ ಯನ್ನು ಸುಡಬೇಕು. ಕೆಲವರಿಗೆ ಜಾತ್ರೆಯಲ್ಲಿ ಸುತ್ತುವ ತೊಟ್ಟಿಲು, ಓಲಾಡುವ ದೋಣಿ, ವಂಡರ್ ಲಾ, ಡಿಸ್ನಿ ಮೊದಲಾದಲ್ಲಿ ಹೇಗೆ ಎತ್ತಾಡಿ ಬಿಸಾಡುವ ಶರವೇಗದ ರೈಡ್ ಗಳಲ್ಲಿ ಕಂಡಾಗಲೆಲ್ಲ ಕೂರುತ್ತಿರಬೇಕು.
ಕೆಲವರಿಗೆ ಅತ್ಯಂತ ವೇಗದಲ್ಲಿ ಬೈಕು, ಕಾರುಗಳನ್ನು ಓಡಿಸುವ ಥ್ರಿಲ್ ಕೂಡ ಅವಶ್ಯಕತೆ ಯೆನಿಸುವುದು ಇದರದೇ ಮುಂದುವರಿದ ಭಾಗ. ನೋವಿಗೂ ನಮಗೆ ನಮ್ಮ ಅಸ್ತಿತ್ವದ ಅರಿವಿಗೂ ಒಂದು ವಿಚಿತ್ರ ಸಂಬಂಧವಿದೆ. ಹಿಂದೆ ಏಕಾಂತ ಸೆರೆಯ ಬಗ್ಗೆ ಬರೆದಿದ್ದೆ. ಏಕಾಂತ ಸೆರೆಯಲ್ಲಿ ಇರುವ ಕೈದಿ ಒಂದೆರಡು ತಿಂಗಳಲ್ಲಿ, ಕೆಲವರು ಇನ್ನೂ ಮೊದಲೇ ತಮ್ಮ ದೇಹಕ್ಕೆ ಗಾಯ, ನೋವನ್ನು ಮಾಡಿಕೊಳ್ಳಲು ಶುರುಮಾಡುತ್ತಾರಂತೆ. ಹಾಗೆ ನೋವು/ಗಾಯ ಮಾಡಿಕೊಂಡಿಲ್ಲ ಎಂದರೆ ಆತ ಮಾನಸಿಕವಾಗಿ ಅಷ್ಟು ಬಲಿಷ್ಠನೇ ಇರಬೇಕು.
ಕೆಲವರಂತೂ ಮಾರಣಾಂತಿಕ ಗಾಯವನ್ನು ಮಾಡಿಕೊಳ್ಳುವವರಿದ್ದಾರೆ. ಬೇರೆ ಮನುಷ್ಯರನ್ನು, ಪ್ರಾಣಿ ಪಕ್ಷಿ, ಆಕಾಶ, ರಸ್ತೆ, ಮರಗಿಡಗಳು ಇವು ಯಾವುದನ್ನೂ ನೋಡದೆ ಒಂದೆರಡು ವಾರ ಏಕಾಂತದಲ್ಲಿ ಕಳೆಯುವಾಗ ಬದುಕಿದ್ದೇವೆ ಎಂಬ ಅರಿವು ಇದ್ದರೂ ದೇಹಕ್ಕೆ, ಮನಸ್ಸಿಗೆ ಅದನ್ನು ಮೀರಿ ತನ್ನ ಅಸ್ತಿತ್ವವನ್ನು ತಿಳಿದುಕೊಳ್ಳಬೇಕಾದ ವಿಚಿತ್ರ ಅವಶ್ಯಕತೆ ಹುಟ್ಟಿಕೊಳ್ಳುತ್ತದೆ. ಹೇಗೆ ತನ್ನ ಅಸ್ತಿತ್ವವನ್ನು ದೃಢಪಡಿಸಿಕೊಳ್ಳಬಹುದು? ತತ್‌ಕ್ಷಣಕ್ಕೆ ಆಗಿಬರುವುದು ನೋವು. ಅದು ಎಲ್ಲಿಯೇ, ಯಾವುದೇ ಅವಸ್ಥೆಯಲ್ಲಿದ್ದರೂ ನಮ್ಮನ್ನು ವರ್ತಮಾನಕ್ಕೆ ತಂದು ನಿಲ್ಲಿಸಿ ಬಿಡುತ್ತದೆ.
ಆ ಕಾರಣಕ್ಕೆ ಏಕಾಂತದಲ್ಲಿರುವ ಕೈದಿಗಳು ದೇಹಕ್ಕೆ ಹಾನಿ ಮಾಡಿಕೊಳ್ಳುವುದು. ಅಷ್ಟೆಲ್ಲ ಏಕೆ, ಇದೆಲ್ಲ ಕನಸೋ ಅಥವಾ ನನಸೋ ಎಂಬ ಆಶ್ಚರ್ಯವನ್ನು ಹೇಳುವಾಗ ಚಿವುಟಿ ನೋಡಿ ಕೊಳ್ಳುವುದು- ಅದೇ. ನೀವು ಹಲ್ಲಿನ ಡಾಕ್ಟರ್ ಬಳಿ ಹೋದಾಗ ವಸಡಿಗೆ ಸ್ಥಳೀಯ ಅನಸ್ತೇಷಿಯಾ ಕೊಟ್ಟರೆ ಅವರೊಂದು ಎಚ್ಚರಿಕೆಯ ಮಾತು ಹೇಳುತ್ತಾರೆ.
ಆ ದಿನ ಹಲ್ಲಿನ ಸುತ್ತಮುತ್ತ ವಸಡು, ನಾಲಿಗೆ ಮತ್ತು ಕೆನ್ನೆಯ ಒಳಬಾಗ ಸಂವೇದನೆ ಕಳೆದು ಕೊಂಡಿರುತ್ತದೆ. ಸಂವೇದನೆ ‘ಕಳೆದುಕೊಳ್ಳುತ್ತಿದ್ದಂತೆ’ ದೇಹ ಅಯಾಚಿತ ಅಲ್ಲಿನ ದೇಹದ ಭಾಗದ ಅಸ್ತಿತ್ವವನ್ನು ಹುಡುಕುತ್ತದೆ. ಆ ಕಾರಣಕ್ಕೆ ಈ ರೀತಿ ಲೋಕಲ್ ಅನಸ್ತೇಷಿಯಾ ಪಡೆದ ದಿನ ಶುಶ್ರೂಷೆ ಪಡೆದ ಕೆಲವರು ನಾಲಿಗೆಯನ್ನು ನಿಧಾನಕ್ಕೆ ಕಚ್ಚಿಕೊಳ್ಳುತ್ತಾ, ನಾಲಿಗೆ ಗಾಯವಾಗು ವಷ್ಟು ಕಚ್ಚಿಕೊಳ್ಳುವವರಿದ್ದಾರಂತೆ.
ಒಂದೊಮ್ಮೆ ನಮ್ಮ ದೇಹದಲ್ಲಿ ನೋವಿನ ಪ್ರಜ್ಞೆಯೇ ಇಲ್ಲದಿರುತ್ತಿದ್ದರೆ ಹೇಗಿರುತ್ತಿತ್ತು? ಕೆಲ ವರ್ಷಗಳ ಹಿಂದೆ ‘ಸೈ’ ಮ್ಯಾಗಜಿನ್‌ನಲ್ಲಿ ಒಂದು ವರದಿ ಪ್ರಕಟವಾಗಿತ್ತು. ಪಾಕಿಸ್ತಾನದ ಲಾಹೋರಿನ ಒಂದು ಖುರೇಷಿ ಮನೆತನದಲ್ಲಿ ಹಲವರಿಗೆ ನೋವಿನ ಪ್ರeಯೇ ಸಂಪೂರ್ಣವಾಗಿ ಇಲ್ಲ ಎಂದು. ಅವರಿಗೆ ಸೂಜಿ ಚುಚ್ಚಿದರೆ, ಬೆಂಕಿ ಮುಟ್ಟಿದರೆ ಉರಿಯಾಗುತ್ತಿತ್ತು,
ಆದರೆ ಗಾಯವಾದರೆ ಅಥವಾ ಯಾವುದಾದರೂ ಒಂದು ಅಂಗಕ್ಕೆ ಪೆಟ್ಟು ಬಿದ್ದರೆ ಅಗುವ ನೋವಿನ ಅನುಭವ ಅವರಿಗಾಗುತ್ತಿರಲಿಲ್ಲ. ಅವರನ್ನು ಅಭ್ಯಾಸ ಮಾಡಲು ಒಂದಿಷ್ಟು ವಿಜ್ಞಾನಿಗಳ ದಂಡೇ ಅಲ್ಲಿಗೆ ಧಾವಿಸಿತ್ತು. ಅಲ್ಲಿ ನೋಡಿದಾಗ, ಅವರಬ್ಬ ತುಟಿಯನ್ನು ಕಚ್ಚಿಕೊಂಡು ಗಾಯ ಮಾಡಿ ಕೊಂಡಿದ್ದ. ಆ ಗಾಯವನ್ನೇ ಮತ್ತಷ್ಟು ಕಡಿಯುತ್ತಿದ್ದ.
ಇನ್ನೊಬ್ಬ ತನ್ನ ನಾಲಿಗೆಯ ತುದಿಯನ್ನು ತಾನೇ ಕಡಿದುಕೊಂಡು ಮೊಂಡು ಮಾಡಿಕೊಂಡಿದ್ದ. ಹೀಗೆ ನೋವಿನ ಅರಿವಾಗದ ಆ ಕುಟುಂಬದ ಎಲ್ಲರ ಒಂದಿಂದು ಅಂಗಕ್ಕೆ ಹತ್ತಾರು ಗಾಯಗಳಿದ್ದವು ಅಥವಾ ಊನವಿತ್ತು. ಅದೆಲ್ಲವೂ ಅವರೇ ಮಾಡಿಕೊಂಡದ್ದು. ಅವರೆಲ್ಲರಿಗೆ ನೋವಿನ ಪ್ರಜ್ಞೆ ಇಲ್ಲದುದರಿಂದ ಈ ಗಾಯದ ಬಗ್ಗೆ ಅವರಿಗೆ ವಿಶೇಷ ಗಮನವೇ ಇರಲಿಲ್ಲ. ನಂತರದಲ್ಲಿ ಅವರ ಮೇಲೆ ಅದೆಷ್ಟೋ ಪರೀಕ್ಷೆಗಳೆಲ್ಲ ನಡೆದವು.
ಕೊನೆಯಲ್ಲಿ ತಿಳಿದದ್ದೇನೆಂದರೆ ಜೀನದ ಒಂದು ಪರಾಮಶಿ ಮ್ಯುಟೇಷನ್ ನಿಂದಾಗಿ ಅವರೆಲ್ಲ ಇಂಥದ್ದೊಂದು ಸ್ಥಿತಿಗೆ ತಲುಪಿದ್ದರು. ಒಂದು ವೇಳೆ ಮನುಷ್ಯನಿಗೆ ನೋವಿನ ಪ್ರಜ್ಞೆಯೇ ಇಲ್ಲದಿರು ತ್ತಿದ್ದರೆ ನಾವೆ ಅಕರಾಳ ವಿಕಾರವಾಗಿರುತ್ತಿದ್ದೆವು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇನ್ನೊಂದು ಬೇಡವೆನ್ನಿಸುತ್ತದೆ.
ಬಹುಶಃ ನಾವೆಲ್ಲ ಈ ಖುರೇಷಿ ಖಾಂದಾನ್‌ನಂತೆ ಪ್ರತಿಯೊಬ್ಬರೂ ಒಂದೊಂದು ವಿಕಾರ ಮಾಡಿ ಕೊಳ್ಳುತ್ತಿದ್ದೆವು. ಈ ರೀತಿ ಋಣಾತ್ಮಕ ಸಂವೇದನೆಯನ್ನು ಆಗೀಗ ಬಯಸುವ ನಮ್ಮ ಗುಣಕ್ಕೆ benign masochism ಎಂದು ಹೆಸರು. ಇದು ಹಾನಿಮಾಡಿಕೊಳ್ಳುವ ದುರ್ಬುದ್ಧಿಯಲ್ಲ. ಸುರಕ್ಷಿತ ನೋವು- ಒಂದು ನಿರಂತರ ಅವಶ್ಯಕತೆ. ಆಗೀಗ ಮೇಜಿಗೆ, ಕುರ್ಚಿಗೆ ಕಾಲು ಬಡಿಯುತ್ತಿರ ಬೇಕು.
ಅಡುಗೆ ಮಾಡುವಾಗ ಚಿಕ್ಕದಾಗಿ ಕೈಸುಡುವುದು ಇತ್ಯಾದಿ ಆಗುತ್ತಿರಬೇಕೆನ್ನುತ್ತದೆ ಇಂದಿನ ಮನಃಶಾಸ್ತ್ರ. ನಮ್ಮ ಅದೆಷ್ಟೋ ಅರ್ಥವೇ ಕಾಣದ ಆಚರಣೆಗಳ, ನಡವಳಿಕೆಗಳ, ರೂಢಿ, ರೀತಿ-ರಿವಾಜುಗಳ ಹಿಂದೆ ಇಂಥ ಕೆಲವೊಂದಿಷ್ಟು ವಿಚಿತ್ರ ಅವಶ್ಯಕತೆಗಳಿರುತ್ತವೆ. ಅವನ್ನು ವಿವರಿಸಲು ಸಾಧ್ಯವಾಗದಾಗ ನಾವು ಅದನ್ನು ಉಳಿದ ಮೂಢನಂಬಿಕೆಗಳ ಅಥವಾ ಮಾನಸಿಕ ರೋಗಗಳ ಸಾಲಿಗೆ ಸೇರಿಸಿಬಿಡುತ್ತೇವೆ. ನೋವು ಒಂದು ಅವಶ್ಯಕತೆ!!