Nagaraj Nayak Column: ತಿರುಗುಬಾಣವಾದ ರಾಹುಲ್ ಗಾಂಧಿ ಪ್ರಹಸನ
ಭಾಷಣದ ಶಕ್ತಿ ವಿರೋಧಿಯನ್ನು ತೋರಿಸಿ ನಗಿಸುವುದರಲ್ಲಿ ಅಲ್ಲ, ಕೇಳುವವನ್ನು ಯೋಚಿಸು ವಂತೆ ಮಾಡುವುದರಲ್ಲಿರುತ್ತದೆ. ಈ ದೇಶದ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ವಿರೋಧ ಪಕ್ಷದಲ್ಲಿ ಕುಳಿತಾಗ ವಿರೋಧಿಗಳನ್ನು, ಅಷ್ಟೇ ಏಕೆ ನೆಹರುರವರನ್ನು ಸಹ ಬಿಡಲಿಲ್ಲ. ಅವರು ಮಾತಿನ ಕತ್ತಿಯನ್ನು ಬಳಸಿದರು. ಆದರೆ ಅದು ವ್ಯಕ್ತಿಯ ಗೌರವವನ್ನು ಕತ್ತರಿಸುವಂತೆ ಇರಲಿಲ್ಲ.
-
ಸಕಾಲಿಕ
ನಾಗರಾಜ ನಾಯಕ
‘ಮಾಕೋಕುರ್ಸಿದೋ’ ಪ್ರಹಸನ ತಿರುಗು ಬಾಣವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಯಾವ ಪರಿ ಚುಚ್ಚುತ್ತಿದೆಯೆಂದರೆ ಭಾರತೀಯರು ತಾಯಿಯ ವಿಷಯದಲ್ಲಿ ಯಾವ ರಾಜಿಗೂ ಸಿದ್ಧವಿಲ್ಲ ಎನ್ನುವುದನ್ನು ಇನ್ನೊಮ್ಮೆ ರುಜುವಾತು ಪಡಿಸುತ್ತಿದ್ದಾರೆ. ಇದೇ ಸೆಪ್ಟೆಂಬರ್ 19ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂಕಿ ಕೀ ಗೂಂಜ್’ ಕಾರ್ಯಕ್ರಮದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ, ರಾಹುಲ್ ಗಾಂಧಿ ಜೊತೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಾವಭಾವವನ್ನು ಅನುಕರಿಸುತ್ತಾ ಹೇಳಿದ ಮಾತಿದು.
ಈ ಸಾಲು ಪ್ರಧಾನಿ ಮೋದಿಯವರು ಈ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯೊಬ್ಬರಿಗೆ ಕುರ್ಚಿ ಕೊಡಲು ಹೇಳಿದ ಘಟನೆಯನ್ನು ಉಲ್ಲೇಖಿಸುತ್ತಿತ್ತು. ಮೋದಿ ಯವರನ್ನು ಟೀಕಿಸಬಾರದು ಎಂದು ಯಾರೂ ಹೇಳುವುದಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಮರ್ಶೆ ಮತ್ತು ಟೀಕೆಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಸಹಾಯಕಾರಿಯಾಗಿರುತ್ತದೆ.
ಇದನ್ನೂ ಓದಿ: Shashidhara Halady Column: ನಮ್ಮ ಮನೆಗೆ ಬಂದ ಸಲೀಂ ಅಲಿ
ಪ್ರಜಾಪ್ರಭುತ್ವಕ್ಕೆ ಹಾಸ್ಯ ಮತ್ತು ವ್ಯಂಗ್ಯಗಳೂ ಸಹ ಬೇಕಾಗುತ್ತದೆ. ಅವುಗಳಿಗಿಂತ ಮುಖ್ಯ ಸಂಸ್ಕಾರಯುತ ಭಿನ್ನಾಭಿಪ್ರಾಯ. ವೃದ್ಧ ಹೆಣ್ಣು ಮಗಳಿಗೆ ಕುರ್ಚಿ ಕೊಡಲು ಹೇಳಿದರೆ ಅದರಲ್ಲಿ ಮೋದಿಯವರ ಆಡಳಿತದ ವಿಫಲತೆ ಇದೆಯೇ? ವಯಸ್ಸಾದವರಿಗೆ, ಹೆಣ್ಣುಮಕ್ಕಳಿಗೆ ಕುಳಿತುಕೊಳ್ಳಿ ಎಂದು ಹೇಳುವುದು ಟೀಕೆಯ ಅಥವಾ ವಿಮರ್ಶೆಯ ವಸ್ತು ಆಗುತ್ತದೆಯೇ? ವೃದ್ಧೆಗೆ ಕುರ್ಚಿ ಕೊಡಲು ಹೇಳುವುದು ಮಾನವೀಯತೆ ಎನಿಸುತ್ತದೆಯಾ, ನೈತಿಕ ಜವಾಬ್ದಾರಿ ಎನಿಸುತ್ತದೆಯಾ, ಈ ನೆಲದ ಸಂಸ್ಕೃತಿ ಎನಿಸುತ್ತದೆಯಾ, ಕಾಳಜಿ ಎನಿಸುತ್ತದೆಯಾ? ಅಷ್ಟೆ ಜನರ ನಡುವೆ ಕುರ್ಚಿ ಇಲ್ಲದೇ ನಿಂತ ಮಹಿಳೆಯನ್ನು ಗುರುತಿಸಿದ ಸೂಕ್ಷ್ಮತೆ ಎನಿಸುತ್ತದಯಾ, ಇಲ್ಲಾ ಪುಲ್ಕಿತ್ ಮಣಿಯ ಅಸಹ್ಯ ವರ್ತನೆಗೆ ವಿಷಯ ವಸ್ತುವಾಗುತ್ತದೆಯಾ ಎನ್ನುವುದನ್ನು ಈ ದೇಶದ ಜನ ಸೂಕ್ಷ್ಮವಾಗಿ ನೋಡು ತ್ತಿದ್ದಾರೆ.
1977ರಲ್ಲಿ ಇಂದಿರಾ ಗಾಂಧಿಯವರು ಅಧಿಕಾರದಲ್ಲಿ ಇರದೇ ಇದ್ದ ಸಂದರ್ಭದಲ್ಲಿ ಬಿಹಾರ ರಾಜ್ಯದ ಬೆಲ್ಜಿ ಎಂಬಲ್ಲಿ ದಲಿತರ ಮೇಲೆ ದೌರ್ಜನ್ಯವಾಗಿತ್ತು. ಆಗ ರಸ್ತೆ ಸರಿ ಇಲ್ಲದೇ ಇರುವುದರಿಂದ ಇಂದಿರಾ ಗಾಂಧಿ ಆನೆಯ ಮೇಲೆ ಕುಳಿತು ದೌರ್ಜನ್ಯ ನಡೆದ ಸ್ಥಳಕ್ಕೆ ತಲುಪಿದ್ದರು. ದೌರ್ಜನ್ಯ ನಡೆದ ಸ್ಥಳಕ್ಕೆ ಆನೆಯ ಮೇಲೆ ಕುಳಿತು ತಲುಪುವುದಕ್ಕಿಂತ ಕಾಲ್ನಡಿಗೆಯಲ್ಲಿಯೇ ಹೋಗಬಹುದಿತ್ತಲ್ಲ ಎಂದು ಬೇರೆ ಬೇರೆ ರೀತಿಯಲ್ಲಿ ಚೇಷ್ಟೆ ಮಾಡಿ ಹಲ್ಲು ಕಿಸಿಯಲು ಬರುವುದಿಲ್ಲವೇ? 1987ರಲ್ಲಿ ಅಮೇಥಿಗೆ ಹೋಗಿದ್ದ ರಾಜೀವ್ ಗಾಂಧಿ ಅಭಿವೃದ್ಧಿಯ ಕುರಿತು ಅಲ್ಲಿನ ಜನರಿಗೆ ಕೇಳಿದಾಗ ರಸ್ತೆಯ ಗುಣಮಟ್ಟ ಸರಿ ಇಲ್ಲದ ಬಗ್ಗೆ ಜನ ನೇರವಾಗಿ ರಾಜೀವ್ ಗಾಂಧಿಯವರ ಮುಖದ ಮೇಲೆಯೇ ಹೇಳಿದ್ದರು.
ಇದನ್ನೂ ಅಪಹಾಸ್ಯದ ಮೂಲಕ ಹಳಿದು ಹಳಿದು ಹೇಳಬಹುದಲ್ಲವೇ? ಪ್ರಿಯಾಂಕ ಗಾಂಧಿ ಲಖಿಂಪುರ ಖೇರಿ ಮತ್ತು ಹತ್ರಾಸ್‌ದಲ್ಲಿ ನಡೆದಿದೆ ಎಂದು ಹೇಳಲಾದ ದೌರ್ಜನ್ಯದ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಹೋದಾಗ ಕೈಯಲ್ಲಿ ಪೊರಕೆ ಹಿಡಿದು ಕೊಠಡಿ ಗುಡಿಸಿದ್ದು ರಾಜಕೀಯದ ಪ್ರವಾಸೋದ್ಯಮ ಎಂದು ವೇದಿಕೆಯಲ್ಲಿ ಅಪಹಾಸ್ಯ ಮಾಡಿ ಚಪ್ಪಾಳೆ ತೆಗೆದುಕೊಳ್ಳಲು ಆಗುವುದಿಲ್ಲವೇ? ಸಂಸತ್ತಿನಲ್ಲಿ ಇದೇ ರಾಹುಲ್ ಗಾಂಧಿ, ನರೇಂದ್ರ ಮೋದಿ ಯವರನ್ನು ತಬ್ಬಿಕೊಂಡು ಕಣ್ಣು ಮಿಟುಕಿಸಿದ್ದನ್ನು ಕ್ಯಾಮೆರಾ ಪ್ರಚಾರದ ನಾಟಕ ಎಂದು ಇನ್ನೊಂದು ಕಾಮೆಡಿಯನ್ ತಂದು ಅವನ ಜೊತೆ ಗಹಗಹಿಸಿ ನಗಬಹುದಲ್ಲವೇ? ವ್ಯಕ್ತಿಯನ್ನು ಅವಮಾನಿಸುವುದಕ್ಕಿಂತ, ಆತನು ಪ್ರತಿನಿಧಿಸುವ ತಪ್ಪು ನೀತಿಗಳನ್ನು ಬಯಲಿಗೆಳೆಯುವುದು ರಾಜಕೀಯ ಕೆಲಸವಾಗಿರಬೇಕು.
ಭಾಷಣದ ಶಕ್ತಿ ವಿರೋಧಿಯನ್ನು ತೋರಿಸಿ ನಗಿಸುವುದರಲ್ಲಿ ಅಲ್ಲ, ಕೇಳುವವನ್ನು ಯೋಚಿಸು ವಂತೆ ಮಾಡುವುದರಲ್ಲಿರುತ್ತದೆ. ಈ ದೇಶದ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿ ಯವರು ವಿರೋಧ ಪಕ್ಷದಲ್ಲಿ ಕುಳಿತಾಗ ವಿರೋಧಿಗಳನ್ನು, ಅಷ್ಟೇ ಏಕೆ ನೆಹರುರವರನ್ನು ಸಹ ಬಿಡಲಿಲ್ಲ. ಅವರು ಮಾತಿನ ಕತ್ತಿಯನ್ನು ಬಳಸಿದರು. ಆದರೆ ಅದು ವ್ಯಕ್ತಿಯ ಗೌರವವನ್ನು ಕತ್ತರಿಸುವಂತೆ ಇರಲಿಲ್ಲ.
ಬದಲಿಗೆ ಅನ್ಯಾಯದ ಮುಖವಾಡವನ್ನು ಕಳಚಲು ಬಳಸಿದರು. ಕರ್ನಾಟಕದಲ್ಲಿ ಶಾಂತವೇರಿ ಗೋಪಾಲ ಗೌಡರು ಮಾತನಾಡುವಾಗ ಅವರ ಭಾಷಣಕ್ಕೆ ಅಧ್ಯಯನದ ಆಧಾರವಿತ್ತು. ಗೋಪಾಲ ಕೃಷ್ಣ ಅಡಿಗ, ಕುವೆಂಪು ಮೊದಲಾದವರ ಸಾಹಿತ್ಯವನ್ನು ಭಾಷಣಗಳಲ್ಲಿ ಬಳಸುತ್ತಿದ್ದರು. ಪುಲ್ಕಿತ್ ಮಣಿಯಂತಹ ಕಾಮೆಡಿಯನ್ ಅನ್ನು ಬಳಸುತ್ತಿರಲಿಲ್ಲ. ಯಾಕೆಂದರೆ ಅವರಿಗೆ ತಮ್ಮ ಸ್ವಂತ ಶಕ್ತಿಯ ಮೇಲೆ ವಿಶ್ವಾಸವಿತ್ತು.
ಟೀಕಿಸುವ ಭರದಲ್ಲಿ ಏನೆ, ಯಾರನ್ನೆ ಮತ್ತು ಹೇಗೆ ಬಳಸಲಿಲ್ಲ. ರಾಹುಲ್ ಗಾಂಧಿ ‘ಮಾ ಕೋ ಕುರ್ಸಿ ದೋ’ ಸ್ವತಃ ಆಡಲಿಲ್ಲ, ಆದರೆ ಅಪಹಾಸ್ಯದ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ಮಾನವೀಯ ಕಾಳಜಿಯನ್ನು ರಾಜಕೀಯದ ಹಾಸ್ಯದ ವಸ್ತುವನ್ನಾಗಿ ಬಳಸಬಹುದೇ? ಚಪ್ಪಾಳೆಗಾಗಿ ರಾಜಕೀಯ ಮಟ್ಟವನ್ನು ಇಳಿಸಬಹುದೇ? ಎದುರಾಳಿಯ ವಾದವನ್ನು ಅತ್ಯಂತ ಗಂಭೀರವಾಗಿ ಎದುರಿಸಿ ತನ್ನ ವಾದದಿಂದ ಜನರನ್ನು ಯೋಚಿಸುವಂತೆ ಮಾಡುವವನೇ ನಿಜವಾದ ಮುತ್ಸದ್ದಿ.
ವಾಜಪೇಯಿಯವರಿಗೆ ಜವಾಹರಲಾಲ್ ನೆಹರು ಜೊತೆಗೆ ಭಿನ್ನಾಭಿಪ್ರಾಯ ಇದ್ದು, ನೆಹರು ನಿಧನ ರಾದಾಗ ಸಂಸತ್ತಿನಲ್ಲಿ ಮಾಡಿದ ಶ್ರದ್ಧಾಂಜಲಿ ಭಾಷಣ ವಿರೋಧಿಯ ಬಗ್ಗೆ ವೈಯಕ್ತಿಕ ಗೌರವವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆ. ಇದು ಭಾರತೀಯ ರಾಜಕೀಯದ ಒಂದು ಕಾಲಘಟ್ಟದ ಸಂಸ್ಕೃತಿಯ ಪ್ರತಿಬಿಂಬ.
ನೆಹರು ಪ್ರಬಲ ವಿಮರ್ಶಕರಾದ ವಾಜಪೇಯಿ, ನೆಹರುರವರು ದಿವಂಗತರಾದ ನಂತರ ‘ಭಾರತ ಮಾತೆ ತನ್ನ ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ’ ಎಂದು ವರ್ಣಿಸಿದರು. ಆದರೆ ಅದೇ ನೆಹರುವಿನ ಮರಿ ಮೊಮ್ಮಗ, ಮಹಿಳೆಗೆ ಕುರ್ಚಿ ಕೊಡು ಎನ್ನುವ ಪ್ರಧಾನಿಯನ್ನು ಅಪಹಾಸ್ಯ ಮಾಡುವ ಪುಲ್ಕಿತನ ಮಾತಿಗೆ ಖುಷಿ ಪಡುತ್ತಿದ್ದಾರೆ. ಟೀಕೆಯಲ್ಲಿ ತರ್ಕ ಮತ್ತು ಅಪಹಾಸ್ಯದಲ್ಲಿ ಕೇವಲ ಚಪ್ಪಾಳೆ ಬರಬಹುದು.
ಅಪಹಾಸ್ಯ ಎಂದರೆ ವಿಚಾರವನ್ನು ಬಿಟ್ಟು ವ್ಯಕ್ತಿಯನ್ನೇ ನಗೆಯ ವಸ್ತುವನ್ನಾಗಿ ಮಾಡುವುದು. ನಾನು ನಿಮ್ಮ ನೀತಿಯನ್ನು ವಿರೋಧಿಸುತ್ತೇನೆ ಎಂಬ ಭಾವ ತೋರುವುದಕ್ಕೂ, ನಾನು ನಿಮ್ಮನ್ನು ದ್ವೇಷಿಸುತ್ತೇನೆ ಎಂಬ ಭಾವ ತೋರುವುದಕ್ಕೂ ವ್ಯತ್ಯಾಸವಿದೆ. ಟೀಕೆ ಇತಿಹಾಸದ ವಸ್ತುವಾಗುತ್ತದೆ. ಆದರೆ ಅಪಹಾಸ್ಯ ಆ ದಿನದ ರೀಲ್ಸ್ ವಿಷಯ ವಸ್ತುವಷ್ಟೇ ಆಗಿರುತ್ತದೆ. ರಾಜಕೀಯ ನಾಯಕರು ಜನರ ಕೋಪವನ್ನು, ಭಾವನೆಯನ್ನು ಪ್ರತಿನಿಧಿಸಬಹುದು. ಆದರೆ ಪ್ರತಿನಿಧಿತ್ವವನ್ನು ಕೀಳು ಮಟ್ಟಕ್ಕೆ ಕೊಂಡೊಯ್ಯಬೇಕೆಂದೇನಿಲ್ಲ.
‘ಮಾ ಕೋ ಕುರ್ಸಿ ದೋ’ ಎಂಬ ಕಾಳಜಿಯ ಅಪಹಾಸ್ಯದಿಂದ ಯಾರಿಗಾದರೂ ಏನಾದರೂ ಲಾಭ ಆಗಿದೆಯೇ? ಸರಿಯಾದ ವಿಚಾರಗಳ ಬಂಡವಾಳ ಇಲ್ಲದಿzಗ ಇಂತಹ ಅಪ್ರಬುದ್ಧ ನಡತೆಗಳನ್ನು ತೋರಿಸುವುದು ಸಾಮಾನ್ಯ. ವಿರೋಧ ಪಕ್ಷವಾಗಿ ಏನು ಮಾತಾಡಬೇಕು, ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾತನಾಡಬಾರದು, ಏನು ಮಾಡಬಾರದು ಎನ್ನುವುದನ್ನು ಸರಿಯಾಗಿ ತಿಳಿದಿರಬೇಕಿತ್ತು.
ಇಂದು ಪುಲ್ಕಿತ್ ಮಣಿ, ನಾಳೆ ಇನ್ನಾರದೋ ಜೊತೆಯಲ್ಲಿ ನಿಂತು ಅಪಹಾಸ್ಯ ಮಾಡಿದೊಡನೆ ಭಾರತ ಮೆಚ್ಚುತ್ತದೆ ಎಂದು ತಿಳಿದರೆ ಅದು ತಪ್ಪು ಕಲ್ಪನೆಯಲ್ಲದೇ ಮತ್ತೇನಿಲ್ಲ. ರಾಹುಲ್ ಗಾಂಧಿ ಯ ವರ್ತನೆಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬರುತ್ತಿವೆ. ಪ್ರಧಾನಿಯಾಗಬೇಕು ಎಂಬ ಆಸೆಯಲ್ಲಿ ಯಾವ ಮಟ್ಟಕ್ಕೂ ಇಳಿಯುವ ಸ್ವಭಾವಕ್ಕೆ ಭಾರತೀಯರು ಮೆಚ್ಚುವುದಿಲ್ಲ.
‘ಮಾ ಕೋ ಕುರ್ಸಿ ದೋ’ ಎಂಬುದು ಈಗ ‘ಸೋನಿಯಾ ಗಾಂಧಿಗೆ ಕುರ್ಚಿ ಕೊಡು’ ಎಂಬ ಮಟ್ಟಕ್ಕೆ ಬಂದು ನಿಂತಿದೆ. ಈ ದೇಶ ರಾಹುಲ್‌ನ ತಾಯಿಗೆ ಕುರ್ಚಿ (ಪ್ರಧಾನಿ) ಕೊಡಲಿಲ್ಲ. ಅದಕ್ಕೆ ವೃದ್ಧ ತಾಯಿಯೊಬ್ಬಳಿಗೆ ಕುರ್ಚಿ ಕೊಡು ಎಂದಿರುವುದು ರಾಹುಲ್‌ಗೆ ಹತಾಶೆಯ ಹೊರಹೊಮ್ಮಿಕೆ ಯಾಗಿದೆ.