ಅ.11ರಿಂದ ರಣಜಿ ಟ್ರೋಫಿ; ಕರ್ನಾಟಕ ತಂಡಕ್ಕೆ ಆಂಧ್ರ ಮೊದಲ ಎದುರಾಳಿ
Ranji Trophy 2026-27: ಟೂರ್ನಿಯಲ್ಲಿ ಬರೋಬ್ಬರಿ 138 ಪಂದ್ಯಗಳು ನಡೆಯಲಿವೆ. ಈ ಸುದೀರ್ಘ ಸರಣಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಇವೆರಡರ ನಡುವೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
Ranji Trophy 2026-27 -
ನವದೆಹಲಿ, ಅ.9: ದೇಶಿ ಕ್ರಿಕೆಟ್ ‘ರಾಜ’ ಎಂದೇ ಕರೆಸಿಕೊಳ್ಳುವ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಹೋದ ವರ್ಷದಂತೆ ಟೂರ್ನಿಯಲ್ಲಿ 38 ತಂಡಗಳು ಮತ್ತೆ ಕಣಕ್ಕಿಳಿಯಲಿದ್ದು, ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವು ಶ್ರೀನಗರದಲ್ಲಿ ನಡೆದ ಇರಾನಿ ಕಪ್ ಪಂದ್ಯದಲ್ಲಿ ಸೋಲು ಕಂಡ ಕೇವಲ ಒಂದು ವಾರದ ನಂತರ, ತಮ್ಮ ಆರಂಭಿಕ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶದ ಎದುರು ಕಣಕ್ಕಿಳಿಯಲಿದೆ.
ಈ ಪಂದ್ಯಾವಳಿಯು 'ಎಲೈಟ್ ಲೀಗ್' ಮತ್ತು 'ಪ್ಲೇಟ್ ಲೀಗ್' ಸ್ವರೂಪಗಳಲ್ಲಿ ನಡೆಯುತ್ತದೆ. ಇದರಲ್ಲಿ ಎಲೈಟ್ ಲೀಗ್ ತಲಾ ಎಂಟು ತಂಡಗಳ ನಾಲ್ಕು ಗುಂಪುಗಳನ್ನು ಒಳಗೊಂಡಿದ್ದರೆ, ಪ್ಲೇಟ್ ಲೀಗ್ ಆರು ತಂಡಗಳನ್ನು ಹೊಂದಿದೆ. ಪಾರಸ್ ಡೋಗ್ರಾ ಅವರ ನಾಯಕತ್ವದಲ್ಲಿ 2025-26ರ ಸಾಲಿನಲ್ಲಿ ತಮ್ಮ ಚೊಚ್ಚಲ ರಣಜಿ ಪ್ರಶಸ್ತಿಯನ್ನು ಗೆದ್ದಿದ್ದ ಜಮ್ಮು ಮತ್ತು ಕಾಶ್ಮೀರ ತಂಡವು, ಎಲೈಟ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
ಮತ್ತೊಂದೆಡೆ, ಪ್ಲೇಟ್ ಲೀಗ್‌ನಲ್ಲಿ ಜಯಗಳಿಸಿದ ಬಿಹಾರ ತಂಡವು ಎಲೈಟ್ ಲೀಗ್‌ಗೆ ಬಡ್ತಿ ಪಡೆದಿದೆ; ಅದೇ ವೇಳೆ, 2025-26ರ ಸಾಲಿನಲ್ಲಿ ಎಲೈಟ್ ಲೀಗ್‌ನಲ್ಲಿದ್ದ ನಾಗಾಲ್ಯಾಂಡ್ ತಂಡವು ಕೆಳ ಹಂತಕ್ಕೆ (ಪ್ಲೇಟ್ ಲೀಗ್‌ಗೆ) ಹಿಂಬಡ್ತಿ ಪಡೆದಿದೆ.
ಆಂತರಿಕ ಭಿನ್ನಮತದ ಮಧ್ಯೆ ಹಾಕಿ ಇಂಡಿಯಾ ಚುನಾವಣೆ
ಈ ಪೂರ್ತಿ ಟೂರ್ನಿಯಲ್ಲಿ ಬರೋಬ್ಬರಿ 138 ಪಂದ್ಯಗಳು ನಡೆಯಲಿವೆ. ಈ ಸುದೀರ್ಘ ಸರಣಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಇವೆರಡರ ನಡುವೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಎಲೈಟ್ ಗುಂಪು ಎ
ಬರೋಡಾ, ಬಿಹಾರ, ಗೋವಾ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಪುದುಚೇರಿ, ಉತ್ತರ ಪ್ರದೇಶ, ವಿದರ್ಭ.
ಎಲೈಟ್ ಗುಂಪು ಬಿ
ಆಂಧ್ರ, ಅಸ್ಸಾಂ, ಛತ್ತೀಸ್‌ಗಢ, ಹೈದರಾಬಾದ್, ಕರ್ನಾಟಕ, ಪಂಜಾಬ್, ಸೌರಾಷ್ಟ್ರ, ತ್ರಿಪುರ.
ಎಲೈಟ್ ಗುಂಪು ಸಿ
ಬಂಗಾಳ, ದೆಹಲಿ, ಗುಜರಾತ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಸರ್ವಿಸಸ್.
ಎಲೈಟ್ ಗುಂಪು ಡಿ
ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮುಂಬೈ, ರೈಲ್ವೇಸ್, ರಾಜಸ್ಥಾನ, ಉತ್ತರಾಖಂಡ.
ಪ್ಲೇಟ್ ಗುಂಪು
ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ.