ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

ಒಮ್ಮೆ ಕೌಶಿಕನೆಂಬ ಬ್ರಾಹ್ಮಣನು ಜ್ಞಾನದ ಹಂಬಲದಿಂದ ಹೆತ್ತವರನ್ನು, ಮನೆ-ಮಠಗಳನ್ನು ತೊರೆದು ಕಾಡಿಗೆ ತೆರಳಿ ಕಠಿಣ ತಪಸ್ಸು ಮಾಡತೊ ಡಗಿದನು. ಒಂದು ದಿನ ಮರದ ಕೆಳಗೆ ಆತ ಕುಳಿತಿದ್ದಾಗ, ಮರದ ಮೇಲಿದ್ದ ಹಕ್ಕಿಯೊಂದು ಅವನ ಮೇಲೆ ಹೇಸಿಗೆ ಮಾಡಿತು. ಕೋಪಗೊಂಡ ಕೌಶಿಕನು ಕೆಂಗಣ್ಣಿ ನಿಂದ ನೋಡಿದ್ದೇ ತಡ, ಆ ಪಕ್ಷಿ ಸುಟ್ಟು ಬೂದಿಯಾಯಿತು.

ಧರ್ಮದ ರಹಸ್ಯ: ಸ್ವಧರ್ಮಾಚರಣೆಯಿಂದ ಪರಮಸಿದ್ಧಿ ಗಳಿಸಿದ ಧರ್ಮವ್ಯಾಧ

-

ಒಂದೊಳ್ಳೆ ಮಾತು

ಮಹಾಭಾರತದ ವನಪರ್ವದಲ್ಲಿ ಬರುವ ಈ ಕಥೆಯು ‘ಸ್ವಧರ್ಮಾಚರಣೆ’ ಮತ್ತು ‘ಕರ್ಮ ನಿಷ್ಠೆ’ಯ ಗೂಢ ರಹಸ್ಯವನ್ನು ಬಹು ಮಾರ್ಮಿಕವಾಗಿ ತಿಳಿಸಿಕೊಡುತ್ತದೆ. ದ್ಯೂತದಲ್ಲಿ ಸೋತು ಕಾಡಿಗೆ ಬಂದ ಪಾಂಡವರಲ್ಲಿ ಧರ್ಮರಾಜ ಯುಧಿಷ್ಠಿರನು ತೀವ್ರ ಮನೋವೇದನೆಗೆ ಒಳಗಾಗಿ ದ್ದನು. ನನ್ನ ತಪ್ಪು ನಿರ್ಧಾರಗಳಿಂದಲೇ ಕುಟುಂಬ ಕಷ್ಟಕ್ಕೆ ಸಿಲುಕಿತೇ? ಎಂಬ ಅನುಮಾನ ಅವನನ್ನು ಕಾಡುತ್ತಿತ್ತು. ಅವನ ದ್ವಂದ್ವವನ್ನು ನಿವಾರಿಸಲು ಮಾರ್ಕಂಡೇಯ ಮಹರ್ಷಿಗಳು ‘ಧರ್ಮವ್ಯಾಧ’ನ ಕಥೆಯನ್ನು ವಿವರಿಸತೊಡಗಿದರು.

ಒಮ್ಮೆ ಕೌಶಿಕನೆಂಬ ಬ್ರಾಹ್ಮಣನು ಜ್ಞಾನದ ಹಂಬಲದಿಂದ ಹೆತ್ತವರನ್ನು, ಮನೆ-ಮಠಗಳನ್ನು ತೊರೆದು ಕಾಡಿಗೆ ತೆರಳಿ ಕಠಿಣ ತಪಸ್ಸು ಮಾಡತೊ ಡಗಿದನು. ಒಂದು ದಿನ ಮರದ ಕೆಳಗೆ ಆತ ಕುಳಿತಿದ್ದಾಗ, ಮರದ ಮೇಲಿದ್ದ ಹಕ್ಕಿಯೊಂದು ಅವನ ಮೇಲೆ ಹೇಸಿಗೆ ಮಾಡಿತು. ಕೋಪಗೊಂಡ ಕೌಶಿಕನು ಕೆಂಗಣ್ಣಿನಿಂದ ನೋಡಿದ್ದೇ ತಡ, ಆ ಪಕ್ಷಿ ಸುಟ್ಟು ಬೂದಿಯಾಯಿತು. ತಪಸ್ಸಿನ ಶಕ್ತಿಯಿಂದ ತಾನೀಗ ಸಿದ್ಧಪುರುಷನೆಂದು ಭಾವಿಸಿದ ಕೌಶಿಕನಿಗೆ ತೀವ್ರ ಅಹಂಕಾರ ಆವರಿಸಿತು. ನಂತರ ಆತ ಭಿಕ್ಷೆಗಾಗಿ ಒಂದು ಮನೆಗೆ ಬಂದು ‘ಭವತಿ ಭಿಕ್ಷಾಂದೇಹಿ’ ಎಂದನು.

ಇದನ್ನೂ ಓದಿ: Roopa Gururaj Column: ಗೀತಾ ಕರ್ಮಾಕರ್:‌ ಟೀ ತೋಟಗಳ ದೀದಿ ಮೋನಿ

ಒಳಗಿದ್ದ ಗೃಹಿಣಿಯು ತನ್ನ ಪತಿಗೆ ಉಪಚಾರ ಮಾಡುತ್ತಿದ್ದರಿಂದ, ಭಿಕ್ಷೆ ತರಲು ಕೊಂಚ ತಡವಾಯಿತು. ಕಾಯಲಾರದೆ ಕೋಪದಿಂದ ಬುಸುಗುಡುತ್ತಿದ್ದ ಕೌಶಿಕ ಆಕೆಯನ್ನು ದೃಷ್ಟಿಸಿ ನೋಡಿದನು. ಆದರೆ ಆ ಸಾಧ್ವಿ ನಗುನಗುತ್ತಾ, ‘ಅಯ್ಯಾ! ನಿನ್ನ ಕೆಂಗಣ್ಣಿಗೆ ಸುಟ್ಟು ಬೂದಿಯಾಗಲು ನಾನೇನು ಆ ಕಾಡಿನ ಪಕ್ಷಿಯಲ್ಲ!’ ಎಂದಳು. ಕೌಶಿಕ ಬೆರಗಾದನು. ಆಕೆ ಮುಂದುವರಿದು, ‘ನಾನು ಯಾವುದೇ ತಪಸ್ಸು ಮಾಡಿಲ್ಲ, ಕೇವಲ ನನ್ನ ಪತಿ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ. ನಿಮಗೆ ಇಷ್ಟೊಂದು ತಪಸ್ಸಿನ ಫಲವಿದ್ದರೂ ಧರ್ಮದ ಪೂರ್ಣ ರಹಸ್ಯ ತಿಳಿದಿಲ್ಲ. ಅದನ್ನು ತಿಳಿಯಲು ಮಿಥಿಲಾ ನಗರದ ಧರ್ಮವ್ಯಾಧನಲ್ಲಿಗೆ ಹೋಗಿ’ ಎಂದಳು. ಗೃಹಿಣಿಯ ಮಾತು ಕೇಳಿ ಮಿಥಿಲೆಗೆ ಬಂದ ಕೌಶಿಕನಿಗೆ ಅಲ್ಲಿ ಕಂಡ ದೃಶ್ಯ ದಿಗ್ಭ್ರಮೆ ಹುಟ್ಟಿಸಿತು.

ಜ್ಞಾನಿಯೆಂದು ಆಕೆ ಹೇಳಿದ್ದ ಧರ್ಮವ್ಯಾಧನು ಮಾಂಸದ ಅಂಗಡಿಯಲ್ಲಿ ಪ್ರಾಣಿಗಳ ಮಾಂಸ ಮಾರುತ್ತಿದ್ದ! ವ್ಯಾಧನು ಕೌಶಿಕನನ್ನು ನೋಡಿ, ‘ನಿನ್ನನ್ನು ಆ ಪತಿವ್ರತೆಯು ಕಳುಹಿಸಿದಳೇ?’ ಎಂದು ಕೇಳಿದಾಗ ಕೌಶಿಕನಿಗೆ ಆಶ್ಚರ್ಯಕ್ಕೆ ಮಿತಿಯೇ ಇರಲಿಲ್ಲ. ವ್ಯಾಧನು ತನ್ನ ಕಥೆಯನ್ನು ಹೇಳುತ್ತಾ, ‘ಪೂರ್ವಜನ್ಮದಲ್ಲಿ ವೇದ ಪಾರಂಗತನಾಗಿದ್ದ ನಾನು, ಬೇಟೆಯಾಡುವಾಗ ಅಕಸ್ಮಾತ್ತಾಗಿ ಬಾಣ ಬಿಟ್ಟು ಋಷಿಯೊಬ್ಬರ ಸಾವಿಗೆ ಕಾರಣನಾಗಿದ್ದೆ. ಆ ಶಾಪದಿಂದಾಗಿ ಈ ಜನ್ಮದಲ್ಲಿ ಕಟುಕನಾಗಿ ಹುಟ್ಟಿದೆನು. ಆದರೆ, ನನ್ನ ಕುಲವೃತ್ತಿಯಾದ ಮಾಂಸ ಮಾರಾಟವನ್ನು ಕೇವಲ ವೃತ್ತಿಧರ್ಮವಾಗಿ, ಲಾಭದ ಆಸೆಯಿಲ್ಲದೆ ಮಾಡುತ್ತಿರುವೆ.

ಜೊತೆಗೆ ತಂದೆ-ತಾಯಿಯರ ಸೇವೆಯನ್ನು ಶ್ರದ್ಧೆಯಿಂದ ನೆರವೇರಿಸುತ್ತಿದ್ದೇನೆ. ನನ್ನ ಕರ್ಮವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವುದರಿಂದಲೇ ನನಗೆ ಈ ಸಿದ್ಧಿ ದೊರಕಿದೆ’ ಎಂದನು. ವ್ಯಾಧನು ಕೌಶಿಕನಿಗೆ, ‘ತಪಸ್ಸನ್ನು ಬಿಟ್ಟು ಮಾಂಸ ಮಾರುವುದಾಗಲಿ ಅಥವಾ ವೃತ್ತಿಯನ್ನು ತೊರೆದು ತಪಸ್ಸು ಮಾಡುವುದಾಗಲಿ ಧರ್ಮವಲ್ಲ. ಭಗವಂತ ನೀಡಿದ ವೃತ್ತಿಯನ್ನು ಧರ್ಮ ಹಾಗೂ ನ್ಯಾಯ ದಿಂದ ನಿರ್ವಹಿಸುವುದರ ನಿಜವಾದ ಜ್ಞಾನವಿದೆ’ ಎಂದು ಬೋಧಿಸಿದನು.

ಕಥೆಯನ್ನು ಮುಗಿಸಿದ ಮಾರ್ಕಂಡೇಯರು ಯುಧಿಷ್ಠಿರನಿಗೆ ಹೀಗೆ ಹೇಳಿದರು: ಧಾರಣ ಶಬ್ದದಿಂದ ‘ಧರ್ಮ’ ಎಂಬ ಪದ ಬಂದಿದೆ. ಯಾವುದು ಸಮಾಜವನ್ನು ಮತ್ತು ಮನಸ್ಸನ್ನು ಒಂದುಗೂಡಿಸು ತ್ತದೆಯೋ ಅದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಧರ್ಮವನ್ನು ನಿಷ್ಠೆ ಯಿಂದ ಪಾಲಿಸುವುದೇ ಶ್ರೇಷ್ಠವಾದುದು. ಆದ್ದರಿಂದ, ರಾಜನಾಗಿ ನಿನ್ನ ಕರ್ತವ್ಯವನ್ನು ನೀನು ಧರ್ಮಮಾರ್ಗದ ನಡೆಸಿಕೊಂಡು ಹೋಗು ಎಂದು ಧರ್ಮರಾಜನಿಗೆ ಸ್ಪಷ್ಟತೆ ನೀಡಿದರು. ಈಗ ಧರ್ಮ ಎನ್ನುವ ಪದವನ್ನು ನಾವೆಲ್ಲರೂ ಮತ್ತೆ ಕೂಲಂಕಷವಾಗಿ ತಿಳಿದುಕೊಳ್ಳಬೇಕಿದೆ.

ಮನಸುಗಳನ್ನು ಒಂದುಗೂಡಿಸುವ ಕೆಲಸವೇ ನಿಜವಾದ ಧರ್ಮ. ಆದರೆ ಅದನ್ನು ನಾವು ಮಾಡುತ್ತಿದ್ದೇವೆಯೇ? ಎತ್ತ ನೋಡಿದರೂ ರೋಚಕ ವಿಷಯಗಳು, ಪಕ್ಷಪಾತಗಳಿಂದ ಮನಸ್ಸು ಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಒಡೆದ ಮನಸ್ಥಿತಿಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರೇ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಧರ್ಮ ಏನೆಂದು ತಿಳಿದು ನಮ್ಮ ಆತ್ಮಸಾಕ್ಷಿಗೆ ಸುಳ್ಳು ಹೇಳದಂತೆ ಪ್ರಾಮಾಣಿಕವಾಗಿ ಬದುಕಿ ತೋರಿಸಿ ದಾಗ ಮಾತ್ರ ಬೇರೊಬ್ಬರ ಮುಂದೆ ಅಲ್ಲದಿದ್ದರೂ ನಮ್ಮ ಕಣ್ಣಿನ ನಾವು ಚಿಕ್ಕವರಾಗುವುದಿಲ್ಲ.