Rangaswamy Mookanahalli Column: ಋಣಾತ್ಮಕ ಮಾತನ್ನಾಡದ ವ್ಯಕ್ತಿಯ ಯಶೋಗಾಥೆ !
ಬಾಲಕ ಬ್ರಾಸನ್ ನಡೆದು ಮನೆಗೆ ಸುರಕ್ಷಿತವಾಗಿ ತಲುಪಿದಾಗ ಕಂಡದ್ದು ಆತಂಕಗೊಂಡಿದ್ದ ಅಮ್ಮನ ಮುಖ. ಬ್ರಾಸನ್ ಓದಿನಲ್ಲಿ ಅಂಥ ಚುರುಕು ವಿದ್ಯಾರ್ಥಿ ಆಗಿರಲಿಲ್ಲ. ಅವರನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳುಹಿಸುತ್ತಾರೆ. ಅಲ್ಲಿ ಮನೆಯಿಂದ ದೂರವಿರುವ ದುಃಖದ ಜತೆಗೆ ಶೈಕ್ಷಣಿಕವಾಗಿ ಅಂಕಗಳು ಕೂಡ ಕಡಿಮೆ ಬಂದು ಅವರ ದುಃಖವನ್ನು ಇಮ್ಮಡಿಗೊಳಿಸುತ್ತದೆ.


ವಿಶ್ವರಂಗ
ಜುಲೈ 18, 1950ರಂದು ಲಂಡನ್ ನಗರದಲ್ಲಿ ಜನಿಸಿದ ರಿಚರ್ಡ್ ಬ್ರಾಸನ್ ಬೆಳೆದದ್ದು ಸರ್ರೆ ಕೌಂಟಿಯ ಬಳಿಯ ಪುಟಾಣಿ ಹಳ್ಳಿಯೊಂದರಲ್ಲಿ! ಅಪ್ಪ ಅಂದಿನ ಕಾಲಕ್ಕೆ ಬ್ಯಾರಿಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ವಿಮಾನದಲ್ಲಿ ಅಟೆಂಡೆಂಟ್ ಆಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಬಾಲಕ ರಿಚರ್ಡ್‌ನನ್ನು ರೂಪಿಸುವಲ್ಲಿ ಅವರ ತಾಯಿಯ ಪಾತ್ರ ಬಹಳ ದೊಡ್ಡದು. ಆಕೆ ಮೂಲತಃ ಸಾಹಸಿಯಾಗಿದ್ದವರು. ಹೀಗಾಗಿ ಮಕ್ಕಳು ಕೂಡ ಸ್ವಂತಂತ್ರವಾಗಿ, ಭಯವಿಲ್ಲದೆ ಬದುಕುವುದನ್ನು ಕಲಿಯಬೇಕು ಎನ್ನುವುದು ಆಕೆಯ ನಿಲುವಾಗಿರುತ್ತದೆ. ಬ್ರಾಸನ್ ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗ ಹೇಳಿದಂತೆ ಕೇಳದೆ ಕೆಟ್ಟ ಹಠ ಮಾಡಿದ ಎನ್ನುವ ಕಾರಣಕ್ಕೆ ಕಾರಿನಿಂದ ಮಗುವನ್ನು ಇಳಿಸಿ ಒಂದೆರಡು ಕಿಲೋಮೀಟರ್ ನಡೆದು ಬರುವಂತೆ ಹೇಳಿದ್ದರಂತೆ!
ಬಾಲಕ ಬ್ರಾಸನ್ ನಡೆದು ಮನೆಗೆ ಸುರಕ್ಷಿತವಾಗಿ ತಲುಪಿದಾಗ ಕಂಡದ್ದು ಆತಂಕಗೊಂಡಿದ್ದ ಅಮ್ಮನ ಮುಖ. ಬ್ರಾಸನ್ ಓದಿನಲ್ಲಿ ಅಂಥ ಚುರುಕು ವಿದ್ಯಾರ್ಥಿ ಆಗಿರಲಿಲ್ಲ. ಅವರನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳುಹಿಸುತ್ತಾರೆ. ಅಲ್ಲಿ ಮನೆಯಿಂದ ದೂರವಿರುವ ದುಃಖದ ಜತೆಗೆ ಶೈಕ್ಷಣಿಕವಾಗಿ ಅಂಕಗಳು ಕೂಡ ಕಡಿಮೆ ಬಂದು ಅವರ ದುಃಖವನ್ನು ಇಮ್ಮಡಿಗೊಳಿಸುತ್ತದೆ.
ರಿಚರ್ಡ್ ಬ್ರಾಸನ್ ಕಲಿಕೆಗೆ ಸಂಬಂಧಿಸಿದ ‘ಡಿಸ್ಲೆಕ್ಸಿಯಾ’ ಎನ್ನುವ ನ್ಯೂನತೆಯಿಂದ ಬಳಲು ತ್ತಿರುತ್ತಾರೆ. ಅಂದಿನ ದಿನದಲ್ಲಿ ಇದರ ಬಗ್ಗೆ ಯಾರೂ ಹೆಚ್ಚಿನ ಗಮನವನ್ನು ಕೊಡುವುದಿಲ್ಲ. ಅದು ಅವರ ಉದ್ಯಮಶೀಲತೆಗೆ ಅಡ್ಡಿ ಕೂಡ ಆಗಲಿಲ್ಲ.
ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ಕಾಣದ ರಿಚರ್ಡ್ ವ್ಯಾಪಾರದಲ್ಲಿ ಏನಾದರೂ ಮಾಡಬೇಕು ಎನ್ನುವ ತವಕದಲ್ಲಿ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಆಪ್ತಮಿತ್ರ ನಿಕ್ ಪೊವೆಲ್ ಜತೆಗೂಡಿ ಉದ್ದ ಬಾಲವುಳ್ಳ ಗಿಣಿಯನ್ನು ಸಾಕಿ ಅದನ್ನು ಮಾರುವ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ಗಿಳಿಗಳ ಸಂತಾ ತ್ಪತ್ತಿ ಬಹಳ ಹೆಚ್ಚಾಗುತ್ತದೆ. ಅವುಗಳ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ.
ಇದನ್ನೂ ಓದಿ: Rangaswamy Mookanahalli Column: ಬಯಸದೇ ಬಂದುಬಿಡುವುದಿಲ್ಲ ಭಾಗ್ಯ !
ಹೀಗಾಗಿ ಬ್ರಾಸನ್ ಅವರ ತಾಯಿ ಎಲ್ಲಾ ಗಿಳಿಗಳನ್ನು ಹಾರಿಬಿಡುತ್ತಾರೆ. ರಿಚರ್ಡ್ ಬ್ರಾಸನ್ ತಮ್ಮ ಮೊದಲ ವೆಂಚರ್‌ನಲ್ಲಿ ಸೋಲು ಕಾಣುತ್ತಾರೆ. ಸೋಲಿಗೆ ಹೆದರುವ ವ್ಯಕ್ತಿತ್ವ ರಿಚರ್ಡ್ ಅವರದ್ದಲ್ಲ ಎನ್ನುವುದು ಬಾಲ್ಯದ ಗೊತ್ತಾಗುತ್ತದೆ. ತಕ್ಷಣ ಎರಡನೇ ವೆಂಚರ್‌ಗೆ ಕೈ ಹಾಕುತ್ತಾರೆ. ಈ ಬಾರಿ ಕ್ರಿಸ್ಮಸ್ ಟ್ರೀಗಳನ್ನು ಉತ್ಪಾದಿಸಿ ಅದನ್ನು ಮಾರುವುದು ಎನ್ನುವ ಉದ್ದೇಶದಿಂದ ಶುರುಮಾಡು ತ್ತಾರೆ.
ಆದರೆ ಅದು ಕೂಡ ಯಶಸ್ಸು ಕಾಣುವುದಿಲ್ಲ. ಮೊಲಗಳು ಇವರ ಕ್ರಿಸ್ಮಸ್ ಟ್ರೀಗಳನ್ನು ತಿಂದು ತೇಗುತ್ತವೆ. ಹೀಗೆ ಸದ್ದಿಲ್ಲದೆ ಎರಡನೇ ಪ್ರಯತ್ನ ಕೂಡ ಹಳ್ಳ ಹಿಡಿಯುತ್ತದೆ. ಮೂರನೇ ವೆಂಚರ್ ಶುರುಮಾಡುವ ವೇಳೆಗೆ ರಿಚರ್ಡ್ 15ರ ಹರೆಯದ ಹುಡುಗ. ಬದುಕಿನಲ್ಲಿ ಆಗಲೇ ಒಂದಷ್ಟು ಅನುಭವ ಕೂಡ ಆಗಿತ್ತು. ಶಾಲೆಯಲ್ಲಿ ಸಮಾನ ವಯಸ್ಕ ಮಕ್ಕಳಿಗೆ ತಮ್ಮ ಮನಸ್ಸಿನ ಭಾವನೆ ಹೇಳಿಕೊಳ್ಳಲು ವೇದಿಕೆಯಿಲ್ಲ ಎನ್ನುವುದನ್ನು ಅರಿತುಕೊಂಡು ‘ಸ್ಟೂಡೆಂಟ್’ ಎನ್ನುವ ಒಂದು ಮ್ಯಾಗಜಿನ್ ಹೊರತರಲು ಮುಂದಾಗುತ್ತಾರೆ.
ಒಂದು ಪತ್ರಿಕೆ ತರಲು ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಹಣವನ್ನು ಹೊಂದಿಸಲು ಜಾಹೀರಾತಿನ ಅವಶ್ಯಕತೆ ಕೂಡ ಇರುತ್ತದೆ. ರಿಚರ್ಡ್ ಬ್ರಾಸನ್ ಯುವಕರಿಗೆ ಅಪೀಲ್ ಆಗುವ ವಸ್ತು, ವಿಷಯವಿರುವ ಸಂಸ್ಥೆಗಳಿಗೆ ಫೋನ್ ಮಾಡಿ ಜಾಹೀರಾತು ನೀಡಲು ಕೇಳುತ್ತಿದ್ದರಂತೆ. ಹೀಗೆ ಒಂದು ದಿನ ಕಾಯಿನ್ ಬೂತ್‌ನಿಂದ ಮಾಡುವಾಗ ಕಾಯಿನ್ ಬೂತಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ.

ರಿಚರ್ಡ್ ಆಪರೇಟರ್‌ಗೆ ಕರೆ ಮಾಡಿ ವಿವರಿಸಿದಾಗ ಆತ ರಿಚರ್ಡ್ ಹೇಳಿದ ಸಂಸ್ಥೆಗೆ ಕರೆ ಮಾಡಿ ಬ್ರಾಸನ್ ಲೈನ್ ನಲ್ಲಿದ್ದಾರೆ ಎಂದು ಹೇಳುತ್ತಾರೆ. ಅದು ಕೆಲಸ ಮಾಡುತ್ತದೆ. ರಿಚರ್ಡ್ ಬ್ರಾಸನ್ ವ್ಯವಹಾರದ ಡರ್ಟಿ ಟ್ರಿಕ್ ಕಲಿತು ಬಿಡುತ್ತಾರೆ. ಮುಂದೆ ಸದಾ ಅದೇ ಟ್ರಿಕ್ ಬಳಸಿ ಸಂಬಳ ನೀಡದೆ ಆಫೀಸ್ ಅಸಿಸ್ಟಂಟ್ ಕಾಲ್ ಮಾಡಿ ಕನೆಕ್ಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಬರುವಂತೆ ವ್ಯವಸ್ಥೆ ಯನ್ನು ಬಳಸಿಕೊಳ್ಳುತ್ತಾರೆ. ಇದರ ಜತೆಗೆ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಕರೆ ಮಾಡಿ ಅವರು ಪೂರ್ಣ ಪೇಜು ಜಾಹೀರಾತು ನೀಡುತ್ತಿದಾರೆ ಎಂದು ಹೇಳುವುದು, ನೀವು ಕೊಡದೆ ಹೋದರೆ ನಿಮಗೇ ನಷ್ಟ ಎನ್ನುವಂತೆ ಮಾತನಾಡುವುದು, ತನ್ಮೂಲಕ ಎರಡೂ ಕಡೆಗಳಿಂದ ಜಾಹೀರಾತು ಪಡೆಯುವುದು ಮಾಡುತ್ತಿದ್ದರಂತೆ!
ಇದು ಶಾಲೆಯ ಆಡಳಿತ ಮಂಡಳಿಗೆ ಗೊತ್ತಾಗುತ್ತದೆ. ಅವರು ರಿಚರ್ಡ್ ಬ್ರಾಸನ್ ಅವರನ್ನು ಕರೆದು ಶಾಲೆ ಅಥವಾ ಮ್ಯಾಗಜಿನ್ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಸೂಚನೆ, ಎಚ್ಚರಿಕೆ ನೀಡುತ್ತಾರೆ. ಬ್ರಾಸನ್ ಮರು ಮಾತನಾಡದೆ ಮ್ಯಾಗಜಿನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಷಯ ತಿಳಿದು ಅವರಪ್ಪ ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿ ಹೇಳುತ್ತಾರೆ.
ಕೊನೆಗೆ ಸ್ಟೂಡೆಂಟ್ ಮ್ಯಾಗಜಿನ್ ಮುಂದುವರಿಸುವುದು, ಅದರಲ್ಲಿ ಸೋತರೆ ಮತ್ತೆ ವಿದ್ಯಾಭ್ಯಾಸಕ್ಕೆ ಹೊರಳುವುದು ಎನ್ನುವ ಒಪ್ಪಂದವಾಗುತ್ತದೆ. 1968ರಲ್ಲಿ ಸ್ಟೂಡೆಂಟ್ ಮ್ಯಾಗಜಿನ್ ವಿಧ್ಯುಕ್ತವಾಗಿ ಚಾಲನೆಯಾಗುತ್ತದೆ. ದೇಶದಾದ್ಯಂತ ಇರುವ ಸ್ಟೂಡೆಂಟ್ ಕಮ್ಯುನಿಟಿಗೆ ಇದು ಒಂದು ವೇದಿಕೆ ಯಾಗುತ್ತದೆ. ಇಲ್ಲಿ ಮತ್ತೆ ಬ್ರಾಸನ್ ತಾಯಿಯ ಪಾತ್ರವನ್ನು ನೆನೆಯಬೇಕಾಗುತ್ತದೆ. ಆಕೆಗೆ ದಾರಿ ಯಲ್ಲಿ ಒಂದು ನೆಕ್ಲೆಸ್ ಸಿಕ್ಕಿರುತ್ತದೆ. ಅದನ್ನು ಪೊಲೀಸರಿಗೆ ನೀಡುತ್ತಾರೆ. ಹತ್ತಾರು ತಿಂಗಳು ಕಳೆದರೂ ಅದನ್ನು ಪಡೆಯಲು ಯಾರೂ ಬರುವುದಿಲ್ಲ.
ಹೀಗಾಗಿ ಪೊಲೀಸರು ಅದನ್ನು ಮರಳಿ ಬ್ರಾಸನ್ ತಾಯಿಗೆ ನೀಡುತ್ತಾರೆ. ಆಕೆ ಅದನ್ನು ಮಾರಿ ಬಂದ 100 ಪೌಂಡ್ ಹಣವನ್ನು ಬ್ರಾಸನ್‌ಗೆ ನೀಡುತ್ತಾರೆ. ಪತ್ರಿಕೆ ಚೆನ್ನಾಗಿ ನಡೆಯುತ್ತದೆ. 50 ಸಾವಿರಕ್ಕೂ ಮೀರಿದ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಆದರೆ ಲಾಭ ಅಷ್ಟಕಷ್ಟೇ. ಆಗ ಅವರಿಗೆ ಹೊಳೆಯುವ ಐಡಿಯಾ ಮೇಲ್ ಆರ್ಡರ್ ರೆಕಾರ್ಡ್ ಕಂಪನಿ. ಆ ಸಮಯದಲ್ಲಿ ಪಾಪ್ ಮ್ಯೂಸಿಕ್, ರಾಕ್ ಆಂಡ್ ರೋಲ್ ತರಹದ ಮ್ಯೂಸಿಕ್‌ಗೆ ಬೇಡಿಕೆ ಹೆಚ್ಚಾಗಿರುತ್ತದೆ.
ಮ್ಯಾಗಜಿನ್ ಚಂದಾದಾರರಿಗೆ ಡಿಸ್ಕೌಂಟ್ ಮೂಲಕ ಇದನ್ನು ಮಾರಾಟ ಮಾಡುವ ಹೊಸ ಬಿಸಿನೆಸ್ ಮಾಡುವುದು ಎಂದು ಸ್ನೇಹಿತರ ಜತೆ ಕುಳಿತು ನಿರ್ಧರಿಸುತ್ತಾರೆ. ಆಪ್ತಮಿತ್ರ ನಿಕ್ ಪೊವೆಲ್ ಕೂಡ ಇರುತ್ತಾರೆ. ಸಂಸ್ಥೆಗೆ ಏನು ಹೆಸರಿಡುವುದು ಎಂದಾಗ ನಾವೆ ಬ್ಯುಸಿನೆಸ್‌ಗೆ ಹೊಸಬರು ‘ವಿರ್ಜಿನ್’ ಹೆಸರು ಹೊಂದುತ್ತದೆ ಎಂದು ಹಾಸ್ಯಕ್ಕೆ ಹೇಳಿದ ಹೆಸರು ಪಕ್ಕಾ ಆಗುತ್ತದೆ. ಮುಂದೆ ವ್ಯಾಪಾರ ಜಗತ್ತಿನಲ್ಲಿ ಚಿರಸ್ಥಾಯಿ ಹೆಸರನ್ನು ಪಡೆದುಕೊಳ್ಳುತ್ತದೆ.
ಈ ರೀತಿ ಶುರುವಾದ ವಿರ್ಜಿನ್ ರೆಕಾರ್ಡ್ ತನ್ನ ಮೊದಲ ಭೌತಿಕ ಶಾಪ್ ಅನ್ನು ಲಂಡನ್ ನಗರದಲ್ಲಿ 1971ರಲ್ಲಿ ತೆರೆಯುತ್ತದೆ. ಒಂದು ದಿನ ಒಬ್ಬ ಹಾಡುಗಾರ ತನ್ನ ರೆಕಾರ್ಡ್ ತೆಗೆದುಕೊಂಡು ಬಂದು ಕೊಟ್ಟು ಅದನ್ನು ಹೆಚ್ಚು ಉತ್ಪಾದನೆ ಮಾಡಿ ಮಾರಲು ಕೇಳುತ್ತಾರೆ. ಆ ಹಾಡುಗಳು ಅವರಿಗೆ ಇಷ್ಟ ವಾಗುತ್ತವೆ. ಆದರೆ ಯಾರೊಬ್ಬರೂ ಅದನ್ನು ಉತ್ಪಾದಿಸಿ ಮಾರ್ಕೆಟ್ ಮಾಡಲು ಮುಂದೆ ಬರುವು ದಿಲ್ಲ. ಇದರಲ್ಲಿ ದೊಡ್ಡ ಬಿಸಿನೆಸ್ ಅವಕಾಶವಿರುವುದು ಬ್ರಾಸನ್ ಅವರಿಗೆ ಕಾಣಿಸುತ್ತದೆ. 1972ರಲ್ಲಿ ತಮ್ಮದೇ ಪ್ರೊಡಕ್ಷನ್ ಕಂಪನಿಯನ್ನು ಶುರು ಮಾಡುತ್ತಾರೆ. ಮೊದಲು ಬಂದಿದ್ದ ಕಲಾವಿದ ಮೈಕ್ ಜತೆಗೆ ಜನೆಟ್ ಜ್ಯಾಕ್ಸನ್ ಮತ್ತಿತರ ಕಲಾವಿದರ ಬೇರೆ ಬೇರೆ ರೆಕಾರ್ಡ್‌ಗಳನ್ನು ಮಾರುಕಟ್ಟೆಗೆ ತರುತ್ತಾರೆ.
ಅವುಗಳು ಯಶಸ್ಸು ಗಳಿಸುತ್ತವೆ. 23 ವರ್ಷ ತುಂಬುವ ಮುನ್ನವೇ ರಿಚರ್ಡ್ ಬ್ರಾಸನ್ ಮಿಲಿಯನೇರ್ ಆಗುತ್ತಾರೆ. ಮ್ಯೂಸಿಕ್ ಬಿಸಿನೆಸ್ ಅವರ ಕೈ ಹಿಡಿಯುತ್ತದೆ. ಇದರ ಸಲುವಾಗಿ ದೇಶ ವಿದೇಶಗಳಲ್ಲಿ ಸುತ್ತಾಟ ಸಾಮಾನ್ಯವಾಗಿರುತ್ತದೆ. ಅದು 1978ರ ಒಂದು ದಿನ. ರಿಚರ್ಡ್ ಬ್ರಾಸನ್ ಪೋರ್ತ ರಿಕೋ ಎನ್ನುವ ಜಾಗದಿಂದ ಬ್ರಿಟಿಷ್ ವಿರ್ಜಿನ್ ಐಲ್ಯಾಂಡ್‌ಗೆ ಹೋಗಲು ವಿಮಾನಕ್ಕೆ ಕಾಯುತ್ತಿರುತ್ತಾರೆ.
ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ವಿಮಾನವನ್ನು ರದ್ದು ಪಡಿಸಲಾಗುತ್ತದೆ. ಇದು ರಿಚರ್ಡ್ ಬ್ರಾಸನ್ ಅವರಿಗೆ ಬೇಸರ ತರಿಸುತ್ತದೆ. ಪ್ರೈವೇಟ್ ಚಾರ್ಟರ್ ಜೆಟ್ ಬುಕ್ ಮಾಡಿ ಕೊಂಡು ಪ್ರಯಾಣ ಮಾಡುತ್ತಾರೆ. ತಮ್ಮ ಜತೆಯಲ್ಲಿ ಪ್ರಯಾಣಿಸಿದ ಜನರ ನಡುವೆ ಒಟ್ಟು ಖರ್ಚನ್ನು ಸಮವಾಗಿ ಭಾಗಿಸುತ್ತಾರೆ. ಹೀಗೆ ಈ ಪ್ರಯಾಣದ ಮಧ್ಯೆ ಅವರಿಗೆ ಹೊಳೆದದ್ದು ನಾನ್ಯಾಕೆ ಒಂದು ವಿಮಾನಯಾನ ಸಂಸ್ಥೆ ತೆರೆಯಬಾರದು ಎನ್ನುವ ಚಿಂತನೆ.
ಒನ್ ವೇ ಟಿಕೆಟ್ ಚಾರ್ಜ್ ಕೂಡ ಹೊಳೆದದ್ದು ಈ ಕಾರಣದಿಂದ. ಅಂದು ಅವರು ಚೀಟಿಯಲ್ಲಿ ‘ಬ್ರಿಟಿಷ್ ವಿರ್ಜಿನ್ ಐಲ್ಯಾಂಡ್ ಒನ್ ವೇ ಟಿಕೆಟ್ 39 ಡಾಲರ್’ ಎಂದು ಬರೆದಿಟ್ಟುಕೊಳ್ಳುತ್ತಾರೆ. ರಿಚರ್ಡ್ ಮೀನ-ಮೇಷ ಎಣಿಸುತ್ತಾ ಕೂರುವ ಜಾಯಮಾನದವರಲ್ಲ; ಮರುದಿನವೇ ಬೋಯಿಂಗ್ ಸಂಸ್ಥೆಗೆ ಕಾಲ್ ಮಾಡುತ್ತಾರೆ.
ಬೋಯಿಂಗ್ 747 ಬಳಸಿದ ವಿಮಾನ ಇದೆಯೇ ಎಂದು ವಿಚಾರಿಸುತ್ತಾರೆ. ಅವರು ಇದೆ ಎಂದಾಗ “ಅದನ್ನು ಕೊಳ್ಳುವೆ, ಆದರೆ ಒಂದು ವರ್ಷದಲ್ಲಿ ಬಿಸಿನೆಸ್ ನಡೆಯಲಿಲ್ಲ ಎಂದರೆ ಅದನ್ನು ವಾಪಸ್ಸು ಕೊಳ್ಳಬೇಕು" ಎನ್ನುವ ಷರತ್ತು ವಿಧಿಸುತ್ತಾರೆ. ಈ ವಲಯಕ್ಕೆ ಔಟ್‌ಸೈಡರ್ ಒಬ್ಬ ಹೀಗೆ ಹೇಳಿದ್ದು ಕೇಳಿ ಅಂದಿನ ಬೋಯಿಂಗ್ ಅಧಿಕಾರಿಗಳು ನಗುತ್ತಾರೆ. “ಅಲ್ಲಪ್ಪ, ನೀನು ದೈತ್ಯ ಬ್ರಿಟಿಷ್ ಏರ್‌ಲೈನ್ ಮುಂದೆ ಪೈಪೋಟಿ ಹೇಗೆ ಮಾಡುತ್ತೀಯಾ ಹೇಳು?" ಎಂದು ಕೇಳುತ್ತಾರೆ.
ಬ್ರಾಸನ್ ಇದಕ್ಕೆ ಕಿವಿಗೊಡುವ ಮನುಷ್ಯರಲ್ಲ, ಲೆಕ್ಕಾಚಾರ ಮಾಡಿ 1984ರಲ್ಲಿ ಕೇವಲ ಒಂದು ಏರೋಪ್ಲೇನ್ ಮೂಲಕ ತಮ್ಮ ವೆಂಚರ್ ‘ವಿರ್ಜಿನ್ ಅಟ್ಲಾಂಟಿಕ್’ ಶುರು ಮಾಡಿಬಿಡುತ್ತಾರೆ. ಒಂದು ಏರೋಪ್ಲೇನ್ ಇದ್ದರು ಕೂಡ ಬೇರೆ ವಿಮಾನಗಳಿಗಿಂತ ಭಿನ್ನವಾಗಿರುತ್ತದೆ. ಫ್ಲೈಟ್‌ನಲ್ಲಿ ನೀಡುವ ಸೇವೆಗಳಿಂದ ಹಿಡಿದು ಎಲ್ಲವೂ ಉತ್ಕೃಷ್ಟವಾಗಿರುತ್ತವೆ. ನಿಧಾನವಾಗಿ ಸಂಸ್ಥೆಯ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. 1990ರ ವೇಳೆಗೆ ಬ್ರಿಟಿಷ್ ಏರ್‌ಲೈನ್ಸ್, ವಿರ್ಜಿನ್ ಅಟ್ಲಾಂಟಿಕ್ ವಿರುದ್ಧ ವ್ಯಾಪಾರದ ಪಟ್ಟುಗಳನ್ನು ಉಪಯೋಗಿಸಿ ವಿರ್ಜಿನ್ ಅಟ್ಲಾಂಟಿಕ್ ಲಾಭದಲ್ಲಿ ಕುಸಿತ ಉಂಟಾಗುವಂತೆ ಮಾಡುತ್ತದೆ.
ಹಣ ಎಲ್ಲದಕ್ಕೂ ಮೂಲ. ಬದುಕಿಗೆ ಉಸಿರಿದ್ದಂತೆ ಹಣ ಎನ್ನುವುದು ವ್ಯಾಪಾರಕ್ಕೆ ಬಹಳ ಮುಖ್ಯ. ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಮತ್ತು ಬ್ರಿಟಿಷ್ ಏರ್‌ಲೈನ್ಸ್‌ನಂಥ ಸಂಸ್ಥೆಯ ಮೇಲೆ ಕೇಸು ಹಾಕಬೇಕು ಎಂದರೆ ಹಣ ಬೇಕು. ಅದಿಲ್ಲದ ಕಾರಣ ಅತ್ಯಂತ ಶ್ರಮವಹಿಸಿ ತಾನು ಕಟ್ಟಿದ್ದ ವರ್ಜಿನ್ ರೆಕಾರ್ಡ್ಸ್ ಸಂಸ್ಥೆಯನ್ನು 1992ರಲ್ಲಿ ಒಂದು ಬಿಲಿಯನ್ ಡಾಲರ್‌ಗೆ ಮಾರುತ್ತಾರೆ.
ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ರಿಚರ್ಡ್ ಬ್ರಾಸನ್ ಬಿಲಿಯನೇರ್ ಆದ ಸುದ್ದಿ ಪ್ರಕಟವಾಗುತ್ತದೆ. ಈ ಹಣದಲ್ಲಿ ಆತ ಏನೆ ಮಾಡಬಹುದು ಎನ್ನುವ ಚರ್ಚೆಗಳು ಆಗುತ್ತವೆ. ಆದರೆ ಬ್ರಾಸನ್ ಆ ಹಣದಿಂದ ಖುಷಿಯಾಗಿರಲಿಲ್ಲ. ಕಷ್ಟಪಟ್ಟು ಕಟ್ಟಿದ ಸಂಸ್ಥೆಯನ್ನು ಮಾರಬೇಕಾಯಿತು ಎನ್ನುವ ನೋವು ಅವರನ್ನು ಕಾಡುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಬ್ರಿಟಿಷ್ ಏರ್‌ವೇಸ್ ಅನ್ನು ನ್ಯಾಯಾಲಯಕ್ಕೆ ಎಳೆಯುತ್ತಾರೆ.
ಬ್ರಿಟಿಷ್ ಇತಿಹಾಸದಲ್ಲಿ ಹಿಂದೆದೂ ಕೇಳಿರದ ಹಣವನ್ನು ಬ್ರಿಟಿಷ್ ಏರ್‌ವೇಸ್ ಅವರಿಂದ ಕೇಸನ್ನು ಗೆಲ್ಲುವುದರ ಮೂಲಕ ಪಡೆದುಕೊಳ್ಳುತ್ತಾರೆ. ಆ ನಂತರದ ದಿನಗಳಿಂದ ವಿರ್ಜಿನ್ ಅಟ್ಲಾಂಟಿಕ್ ಮುಖ್ಯವಾಹಿನಿ ಏರ್‌ಲೈನ್ಸ್ ಎಂದು ಗುರುತಿಸಿಕೊಳ್ಳುತ್ತದೆ. ಓದಿನಲ್ಲಿ ಚುರುಕಿಲ್ಲದ, ಕಲಿಕೆಗೆ ಸಂಬಂಧಿಸಿದ ಡಿಸ್ಲೆಕ್ಸಿಯಾ ಎನ್ನುವ ನ್ಯೂನತೆಯನ್ನು ಬಾಲ್ಯದಲ್ಲಿ ಹೊಂದಿದ್ದ ರಿಚರ್ಡ್ ಬ್ರಾಸನ್, ಗಿಳಿ ಸಾಕಾಣಿಕೆ ಮತ್ತು ಮಾರಾಟದ ವ್ಯಾಪಾರ, ಕ್ರಿಸ್ಮಸ್ ಟ್ರೀ ವ್ಯಾಪಾರಗಳನ್ನು ಮಾಡಿ ಕೈಸುಟ್ಟು ಕೊಂಡಿದ್ದ ಬ್ರಾಸನ್ ಇಂದಿಗೆ ಮಾಡದ ವ್ಯಾಪಾರವಿಲ್ಲ. ಮ್ಯೂಸಿಕ್, ಮೊಬೈಲ್ ಫೋನ್ಸ್, ಬ್ಯಾಂಕಿಂಗ್, ಏರ್‌ಲೈನ್, ಟ್ರೈನ್, ಸ್ಪೇಸ್ ಟ್ರಾವೆಲ್, ವಿರ್ಜಿನ್ ಕೋಲಾ, ವಿರ್ಜಿನ್ ಕಾರು ಹೀಗೆ ಒಟ್ಟಾರೆ ಹತ್ತಿರತ್ತಿರ 400 ಸಂಸ್ಥೆಗಳನ್ನು ಇಂದು ವಿರ್ಜಿನ್ ಸಮೂಹ ತನ್ನ ನಿಯಂತ್ರಣದಲ್ಲಿಟ್ಟು ಕೊಂಡಿದೆ.
ಜಗತ್ತಿನಾದ್ಯಂತ 35 ದೇಶಗಳಲ್ಲಿ 71 ಸಾವಿರಕ್ಕೂ ಅಧಿಕ ಕೆಲಸಗಾರರನ್ನು ಈ ಸಂಸ್ಥೆ ಹೊಂದಿದೆ. ಒಟ್ಟಾರೆ ಈ ಸಂಸ್ಥೆಗಳ ವಾರ್ಷಿಕ ವಹಿವಾಟು 20 ಬಿಲಿಯನ್ ಡಾಲರ್ ಸಮೀಪದಲ್ಲಿದೆ ಎನ್ನುವುದು ಇದೆಷ್ಟು ದೊಡ್ಡ ಉದ್ಯಮವಾಗಿದೆ ಎನ್ನವುದನ್ನು ಹೇಳುತ್ತದೆ. ರಿಚರ್ಡ್ ಬ್ರಾಸನ್ ವೈಯಕ್ತಿಕ ನಿವ್ವಳ ಆಸ್ತಿ 23 ಸಾವಿರ ಕೋಟಿ ರೂಪಾಯಿ, ಅಂದರೆ 3 ಬಿಲಿಯನ್ ಅಮೆರಿಕನ್ ಡಾಲರ್!
ಯಾವುದಕ್ಕೂ ‘ಇಲ್ಲ’ ಎನ್ನುವ ಋಣಾತ್ಮಕ ಮಾತನ್ನು ಆಡದ ಬ್ರಾಸನ್‌ಗೆ ಈತನ ಸಂಸ್ಥೆಯ ಜನರು ‘ಡಾ.ಯಸ್’ ಎನ್ನುವ ಅಡ್ಡ ಹೆಸರಿನಿಂದ ಕರೆಯುತ್ತಾರೆ. ವಿಶ್ವದ ಅತಿ ದೊಡ್ಡ ಸಾಹುಕಾರರ ಪಟ್ಟಿಯಲ್ಲಿ, ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ, ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ. ಬ್ರಿಟಿಷರ ಅತಿ ದೊಡ್ಡ ಗೌರವವಾದ ‘ನೈಟ್‌ಹುಡ್’ ಕೂಡ ಇವರಿಗೆ ಲಭಿಸಿದೆ. ಹೀಗಾಗಿ ಇವರೀಗ ‘ಸರ್ ರಿಚರ್ಡ್ ಬ್ರಾಸನ್’!