Rangaswamy Mookanahalli Column: ಬಯಸದೇ ಬಂದುಬಿಡುವುದಿಲ್ಲ ಭಾಗ್ಯ !
ಒಂದು ಪುಸ್ತಕ-ಪೆನ್ನು ತೆಗೆದುಕೊಂಡು, ನಿಮಗೇನು ಬೇಕು ಅಥವಾ ಬದುಕಿನಲ್ಲಿ ಏನಾಗಬೇಕು ಎನ್ನುವು ದನ್ನು ಬರೆದಿಟ್ಟುಕೊಳ್ಳಿ. ನಿಖರವಾಗಿ ಇಂಥದ್ದೇ ಎನ್ನುವ ಸಂಶಯವಿದ್ದಾಗ, ಕಡೇಪಕ್ಷ ಮೂರು ಅಂಥ ನಿರೀಕ್ಷೆಗಳನ್ನು ಬರೆದಿಟ್ಟುಕೊಳ್ಳಿ. ನಿಮಗೆ ಗೊತ್ತಿರಲಿ, ಬದುಕು ಪೂರ್ತಿ ‘ವೈ?’ ಎನ್ನುವುದರ ಮೇಲೆ ನಿಂತಿದೆ. ಇದು ನಿರ್ಧಾರವಾದರೆ ‘ಹೌ?’ ಹುಟ್ಟು! ‘ಏಕೆ?’ ಎನ್ನುವುದು ನಿರ್ಧಾರವಾದ ನಂತರ ‘ಹೇಗೆ?’ ಎನ್ನುವುದು ಬರುತ್ತದೆ. ‘ವೈ’ ಎನ್ನುವುದು ಅತ್ಯಂತ ಮುಖ್ಯ. ಆಗ ‘ಹೌ’ ಎನ್ನುವುದಕ್ಕೆ ನೂರು ದಾರಿ ತೆರೆದುಕೊಳ್ಳುತ್ತದೆ.


ವಿಶ್ವರಂಗ
ಈಗ ನಾನು ಹೇಳಲು ಹೊರಟಿರುವ ವಿಷಯವನ್ನು ನೀವು ಊಹಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಯಿಲ್ಲ ಎಂದುಕೊಳ್ಳಿ. ಜೀವನದಲ್ಲಿ ನೀವು ಬಯಸಿದ್ದನ್ನೆಲ್ಲಾ ಮಾಡುವ ಕ್ಷಮತೆಯಿದೆ ಎಂದುಕೊಳ್ಳಿ. ಒಂದು ಕ್ಷಣಕ್ಕೆ ನಿಮ್ಮ ಬಳಿ ಶಿಕ್ಷಣ, ಅನುಭವ, ಹಣ ಎಲ್ಲಕ್ಕೂ ಮುಖ್ಯವಾಗಿ ಆರೋಗ್ಯ, ವೇಳೆ, ಉತ್ತಮ ಸ್ನೇಹಿತರು, ಕುಟುಂಬ, ಬಂಧುಗಳು, ಅತ್ಯುತ್ತಮ ನೆಟ್‌ವರ್ಕ್, ಒಟ್ಟಾರೆ ಬದುಕಿನಲ್ಲಿ ಕೊರತೆ ಎನ್ನುವುದನ್ನು ಬಿಟ್ಟು ಮಿಕ್ಕೆಲ್ಲಾ ಸಂಪನ್ಮೂಲಗಳು ಕೂಡ ನಿಮ್ಮ ಬಳಿ ಇವೆ ಎಂದುಕೊಳ್ಳಿ. ಈಗ ಮನಸಾರೆ ಹೇಳಿ- ನೀವೇನು ಮಾಡಲು ಬಯಸುತ್ತೀರಿ? ಬದುಕಲ್ಲಿ ನೀವೇನಾಗಬೇಕು ಎಂದುಕೊಂಡಿದ್ದೀರಿ? ಬದುಕಿನಿಂದ ನಿಮ್ಮ ನಿರೀಕ್ಷೆಗಳೇನು?
ಒಂದು ಪುಸ್ತಕ-ಪೆನ್ನು ತೆಗೆದುಕೊಂಡು, ನಿಮಗೇನು ಬೇಕು ಅಥವಾ ಬದುಕಿನಲ್ಲಿ ಏನಾಗಬೇಕು ಎನ್ನುವುದನ್ನು ಬರೆದಿಟ್ಟುಕೊಳ್ಳಿ. ನಿಖರವಾಗಿ ಇಂಥದ್ದೇ ಎನ್ನುವ ಸಂಶಯವಿದ್ದಾಗ, ಕಡೇಪಕ್ಷ ಮೂರು ಅಂಥ ನಿರೀಕ್ಷೆಗಳನ್ನು ಬರೆದಿಟ್ಟುಕೊಳ್ಳಿ. ನಿಮಗೆ ಗೊತ್ತಿರಲಿ, ಬದುಕು ಪೂರ್ತಿ ‘ವೈ?’ ಎನ್ನುವುದರ ಮೇಲೆ ನಿಂತಿದೆ. ಇದು ನಿರ್ಧಾರವಾದರೆ ‘ಹೌ?’ ಹುಟ್ಟು! ‘ಏಕೆ?’ ಎನ್ನುವುದು ನಿರ್ಧಾರ ವಾದ ನಂತರ ‘ಹೇಗೆ?’ ಎನ್ನುವುದು ಬರುತ್ತದೆ. ‘ವೈ’ ಎನ್ನುವುದು ಅತ್ಯಂತ ಮುಖ್ಯ. ಆಗ ‘ಹೌ’ ಎನ್ನುವುದಕ್ಕೆ ನೂರು ದಾರಿ ತೆರೆದುಕೊಳ್ಳುತ್ತದೆ.
ನಿಮಗೆ ಗೊತ್ತಿರಲಿ- ಜಗತ್ತಿನಲ್ಲಿ 3 ಪ್ರತಿಶತ ಜನರಿಗೆ ಮಾತ್ರ ‘ಏನು ಬೇಕು’ ಎನ್ನುವುದರ ಬಗ್ಗೆ ನಿಖರತೆ ಇರುತ್ತದೆ. ಅಂದರೆ ಈ 3 ಪ್ರತಿಶತ ಜನರು ಮಾತ್ರ ಬದುಕಿನಿಂದ ತಮಗೇನು ಬೇಕು ಎನ್ನುವುದರ ಬಗ್ಗೆ ಆಲೋಚಿಸಿರುತ್ತಾರೆ. ಉಳಿದ 97 ಪ್ರತಿಶತ ಜನರಿಗೆ ಏನು ಬೇಕೆನ್ನುವುದೇ ಗೊತ್ತಿರುವುದಿಲ್ಲ. ಹುಟ್ಟು-ಸಾವಿನ ನಡುವಿನ ಜೀವನದ ಪ್ರತಿ ಕ್ಷಣವನ್ನೂ ಹೇಗೆ ಕಳೆಯಬೇಕು ಎನ್ನುವುದನ್ನು ನಾವು ಪ್ಲಾನ್ ಮಾಡಬಹುದು.
ಇದನ್ನೂ ಓದಿ: Rangaswamy Mookanahalli Column: ಬ್ರಾಂಡ್ ಗಳ ಮುಖವಾಡ ಕಳಚುತ್ತಿದೆ ಚೀನಾ !
ಅದನ್ನು ನಮ್ಮ ಒಳಿತಿಗೆ ದುಡಿಸಿಕೊಳ್ಳಬಹುದು. ಆದರೆ ಅಂಕಿ-ಅಂಶಗಳ ಪ್ರಕಾರ 97 ಪ್ರತಿಶತ ಜನ ಇದರ ಬಗ್ಗೆ ಯೋಚನೆ ಕೂಡ ಮಾಡಿರುವುದಿಲ್ಲ. ಉಳಿದ 3 ಪ್ರತಿಶತ ಜನರು ಗುಂಪಿನಿಂದ ಬೇರ್ಪ ಟ್ಟು ನಿಲ್ಲುವುದು ಕೇವಲ ಮತ್ತು ಕೇವಲ ‘ಏನು ಬೇಕು’ ಎನ್ನುವುದರ ಅರಿವಿನಿಂದ!
ಇದರಲ್ಲೂ ಒಂದಷ್ಟು ಪ್ರತಿಶತ ಜನರಿಗೆ ‘ಅಮೋಘ’ ಎನಿಸುವ ಮಟ್ಟಿನ ಯಶಸ್ಸು ಸಿಗುತ್ತದೆ. ಉಳಿದ 97 ಪ್ರತಿಶತ ಜನರು ಉತ್ತಮವಾದರೂ ಅಚ್ಚರಿಪಡುವ ಮಟ್ಟಿನ ಯಶಸ್ಸು ಕಾಣುವುದಿಲ್ಲ. ಇದಕ್ಕೂ ಕಾರಣ ಸೇಮ್- ಒಂದು ಹಂತದ ನಂತರ ‘ವೈ?’ ಎನ್ನುವುದನ್ನು ಬೇರೆ ರೀತಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಇಷ್ಟೆಲ್ಲಾ ಯಾರಿಗಾಗಿ ಮಾಡುವುದು? ಏತಕ್ಕಾಗಿ ಮಾಡುವುದು? ಏಕೆ? ಯಾರಿಗೆ? ಎನ್ನುವ ಪ್ರಶ್ನೆ ಹುಟ್ಟಿದರೆ ಅದು ಗೊತ್ತಿಲ್ಲದೇ ಅಧ್ಯಾತ್ಮದತ್ತ ಎಳೆದೊಯ್ಯುತ್ತದೆ. ಬದುಕಿಗೆ ಅಧ್ಯಾತ್ಮ ಬೇಕು, ಆದರೆ ಅದು ನಮ್ಮ ಸಾಧನೆಗಳಿಗೆ ಅಡ್ಡಿಯಾಗಬಾರದು. ಈ ಜಗತ್ತಿನಲ್ಲಿ ಮುಕ್ಕಾಲು ಪಾಲು ಜನರು ಸೋಮಾರಿಗಳು, ಅವರಿಗೆ ಮೈಬಗ್ಗಿಸಿ ಕೆಲಸ ಮಾಡುವುದು ಬೇಕಿರುವುದಿಲ್ಲ. ಅವರು ಅಧ್ಯಾತ್ಮದ ಹೆಸರಿನಲ್ಲಿ ತಮ್ಮ ಹುಳುಕನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ. ನೀವು ಯಾರಿಗೂ ಉತ್ತರಿಸಬೇಕಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳದೆ ಉತ್ತರಿಸಿಕೊಳ್ಳಿ.
ಮೇಲಿನ ಸಾಲುಗಳಲ್ಲಿ ನೀವಿಲ್ಲ ಎಂದು ನಿಮ್ಮ ಮನಸ್ಸು ಹೇಳಿದರೆ ಅಷ್ಟು ಸಾಕು. ಜಗತ್ತಿನ ಅನುಮೋದನೆಗೆ ಕಾಯುವ ಅವಶ್ಯಕತೆಯಿಲ್ಲ. ಮೇಲಿನ ಸಾಲುಗಳಲ್ಲಿ ಹೇಳಿದಂತೆ ಊಹೆ ಮಾಡಿ ಕೊಂಡಾಗ ಎಲ್ಲವೂ ಇದ್ದು ಕೂಡ ಬಹುಜನರು ಏನೂ ಏಕೆ ಮಾಡುವುದಿಲ್ಲ ಎನ್ನುವುದಕ್ಕೆ ಉತ್ತರ ಸಿಕ್ಕೀತು, ಅಲ್ಲವೇ? ಮೂಲವಾಗಿ ಬೇಕಿರುವುದು ಆತ್ಮಬಲ ಎನ್ನುವ ಇಂಧನ.
ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ನಮ್ಮ ದೇಶದ ಮತ್ತು ಜಾಗತಿಕ ವಾಗಿ ಕೂಡ ಬಹುತೇಕ ಜನರು ಈ ಪ್ರಶ್ನೆಯನ್ನು ಕೇಳಿಕೊಳ್ಳುವುದೇ ಇಲ್ಲ! ಈ ಪ್ರಶ್ನೆಯನ್ನು ಬೇರೆ ಯಾರಾದರೂ ಕೇಳಿದ್ದರೆ, ಆಗ ಇನ್ನಷ್ಟು ಜನ ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡು ತ್ತಿದ್ದರೋ ಏನೋ ತಿಳಿಯದು. ಒಂದು, ಈ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ, ನಮಗೆ ನಾವೇ ಈ ಪ್ರಶ್ನೆಯನ್ನು ಹಾಕಿಕೊಳ್ಳಬೇಕು.
ಎರಡು, ಇದಕ್ಕೆ ಸಿದ್ಧ ಉತ್ತರವಿಲ್ಲ, ಉತ್ತರ ಕೂಡ ನಮ್ಮ ಆತ್ಮದಲ್ಲಿ ಹುಟ್ಟಬೇಕು. ನಮಗೇನು ಬೇಕು ಎನ್ನುವುದು ನಮ್ಮನ್ನು ಬಿಟ್ಟು ಬೇರೆ ಯಾರಿಗಾದರೂ ಗೊತ್ತಾಗಲು ಹೇಗೆ ಸಾಧ್ಯ? ಆದರೆ ನಿಮಗೆ ಗೊತ್ತಿರಲಿ, ನೂರರಲ್ಲಿ 97 ಜನ ಬೇರೆಯವರ ಬದುಕನ್ನು ಬದುಕುತ್ತಿದ್ದಾರೆ. ತಮಗೇನು ಬೇಕು ಎಂಬುದು ಗೊತ್ತಾದ ದಿನದಿಂದ ಅವರು ತಮ್ಮ ಬದುಕನ್ನು ಬದುಕಲು ಸಾಧ್ಯ. ಇವೆಲ್ಲವೂ ಒಂದಷ್ಟು ಸಿನಿಕತೆಯನ್ನು, ಸಂಶಯವನ್ನು ಹುಟ್ಟುಹಾಕುವಂತೆ ನಿಮಗೆ ಓದುವಾಗ ಅನ್ನಿಸ ಬಹುದು.
ಆದರೆ ಪ್ರಾಮಾಣಿಕವಾಗಿ ಪ್ರಶ್ನಿಸಿಕೊಂಡು ನೋಡಿ- ನೀವು ಬಯಸಿದ ಜೀವನವನ್ನೇ ನೀವು ನಡೆಸು ತ್ತಿದ್ದೀರಾ? ನೀವು ಬಯಸಿದ ಓದು, ವೃತ್ತಿ, ಬದುಕು ನಿಮ್ಮದಾಗಿಯೇ? ಹೌದು ಎಂದಾದರೆ ಸರಿ. ಇಲ್ಲವೆಂದಾದರೆ ಪೇಪರ್ ಮತ್ತು ಪೆನ್ನು ಕೈಯಲ್ಲಿ ಹಿಡಿದು, ‘ಏನು ಬೇಕು’ ಎನ್ನುವುದನ್ನು ಬರೆದು ಕೊಳ್ಳಬೇಕು. ನೆನಪಿರಲಿ, ‘ವೈ’ ಎನ್ನುವುದಕ್ಕೆ ಉತ್ತರ ಸಿಕ್ಕರೆ, ‘ಹೌ’ಗೆ ಸಾವಿರ ದಾರಿ ತೆರೆದುಕೊಳ್ಳುತ್ತದೆ.
ಅವು ನನ್ನ ವಿದ್ಯಾರ್ಥಿ ಜೀವನದ ದಿನಗಳು, ಜೇಬಿನಲ್ಲಿ ನಯಾಪೈಸೆ ಇರದ ದಿನಗಳು. ಬಸ್ ಪಾಸ್ ಮಾಡಿಸುವ ತನಕ, ಶಾಲೆ ಮತ್ತು ಕಾಲೇಜಿಗೆ ನಡೆದುಹೋಗುತ್ತಿದ್ದೆ. ರುಪಾಯಿ ರುಪಾಯಿಗೂ ಪರದಾಡುತ್ತಿದ್ದ ದಿನಗಳವು. ಆದರೆ ಈ ಬದುಕಿನಿಂದ ನನಗೇನು ಬೇಕು ಎನ್ನುವುದರ ಸ್ಪಷ್ಟ ಚಿತ್ರಣ ವಿತ್ತು. ನನ್ನ ಮುಂದೆ ಇರುವ ಆಯ್ಕೆಗಳನ್ನು ಪಟ್ಟಿಮಾಡಿಕೊಂಡಿದ್ದೆ. ಅವುಗಳನ್ನು ಒಂದು ಪೇಪರ್‌ನಲ್ಲಿ ಬರೆದಿಟ್ಟುಕೊಂಡು, ಒಂದೊಂದೇ ಸಾಧಕ-ಬಾಧಕಗಳನ್ನು ಅವುಗಳ ಮುಂದೆ ಬರೆಯುತ್ತಾ ಬಂದೆ.
ಇದರ ಜತೆಗೆ ನನ್ನ ಇಷ್ಟಗಳ ಬಗ್ಗೆ ಕೂಡ ಬರೆಯುತ್ತ ಬಂದೆ. ಇಲ್ಲಿ ನನ್ನಿಷ್ಟ ಎಂದರೆ, ‘ಪರ್ಸನಲ್ -ವರಿಟ್’ ಅಥವಾ ‘ಆತ್ಮದ ಕೂಗು’ ಎಂದುಕೊಳ್ಳಲು ಅಡ್ಡಿಯಿಲ್ಲ. ನನಗೆ ಬಾಲ್ಯದಿಂದಲೂ ಬರಹದ ಹುಚ್ಚು, ಕಥೆ-ಕವನ ಬರೆಯುವ ಹುಚ್ಚು. ಆದರೆ ಅಂದಿನ ಭಾರತೀಯ ಸನ್ನಿವೇಶದಲ್ಲಿ ಬರಹದಿಂದ ಬದುಕನ್ನು ರೂಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆತ್ಮದ ಕೂಗನ್ನು ಅದುಮಿಡುವುದು ಕೂಡ ಒಳ್ಳೆಯದಲ್ಲ. ಆಗ ಅರ್ಥವಾದದ್ದು, ಬದುಕಿಗೆ ಹಣ ಬಹಳ ಮುಖ್ಯ ಎನ್ನುವ ಅಂಶ.
ಹಣಕಾಸು ಸಬಲತೆಯು ಬದುಕಿನ ಬಹಳಷ್ಟು ಸಮಸ್ಯೆಗಳನ್ನುದೂರ ಮಾಡುತ್ತದೆ ಎನ್ನುವುದು ಅರಿವಾದಾಗ ಒಂದು ದಿನ ಪೇಪರ್ ನಲ್ಲಿ, ‘ಈ ಬದುಕಿನಿಂದ ನನಗೆ ಹಣ ಬೇಕು, ಆರ್ಥಿಕ ಸಬಲತೆ ಬೇಕು. ಸಮಾಜದಲ್ಲಾಗುವ ಆರ್ಥಿಕ ಏರಿಳಿತಗಳು ನನ್ನನ್ನು ಘಾಸಿಗೊಳಿಸದ ಮಟ್ಟಕ್ಕೆ ಆರ್ಥಿಕವಾಗಿ ಬೆಳೆಯಬೇಕು’ ಎಂದು ಬರೆದಿಟ್ಟೆ. ನೀವು ನಂಬುವುದಿಲ್ಲ ಏಕೆಂದರೆ ಇದು ನಿಮ್ಮ ಅನುಭವಕ್ಕೆ ಬಂದಿರುವುದಿಲ್ಲ. ಅಪಾರ್ಥ ಮಾಡಿಕೊಳ್ಳಬೇಡಿ.
ಆಧುನಿಕ ವಿದ್ಯಾಭ್ಯಾಸ ಕಲಿಸಿರುವುದು ಇದನ್ನೇ- ಕಣ್ಣಿಗೆ ಕಾಣದ್ದನ್ನು ಇಲ್ಲ ಎನ್ನುವುದು. ಹೀಗಾಗಿ ನಾನು ನಿಮ್ಮನ್ನು ‘ನಂಬಿ’ ಎಂದು ಕೇಳುವುದಿಲ್ಲ. ನಿಮ್ಮ ಮೇಲೆ ನೀವೇ ಪ್ರಯೋಗ ಮಾಡಿಕೊಳ್ಳಿ. ಹಣ ಅಂತಲ್ಲ, ನಿಮಗೇನು ಬೇಕು, ನಿಮ್ಮ ಆತ್ಮದ ಕೂಗೇನು ಅದನ್ನು ಬರೆದಿಟ್ಟುಕೊಳ್ಳಿ. ಅದಕ್ಕೆ ಬೇಕಾದ ದಾರಿಗಳು ನಿಮ್ಮ ಬಳಿ ತಾವಾಗೇ ಬರುತ್ತವೆ. ಬಂದ ಅವಕಾಶವನ್ನು ಬಳಸಿಕೊಳ್ಳುವುದು, ಉನ್ನತಿಯ ಕಡೆಗೆ ಸಾಗುವುದು ಇನ್ನೊಂದು ಕಥೆ.
ಕನ್ನಡ ನಾಡಿನಲ್ಲಿ ‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿವಿಜಿಯವರನ್ನು ಬಲ್ಲದವರಾರು? ಅವರ ಕಗ್ಗಗಳು ಯಾವ ವೇದ ಮತ್ತು ಗೀತೆಗೂ ಕಡಿಮೆಯಿಲ್ಲ. ಒಂದು ಕಗ್ಗದಲ್ಲಿ ಅವರು ಹೀಗೆ ಬರೆಯು ತ್ತಾರೆ: ಬೇಡಿದುದನೀವನೀಶ್ವರನೆಂಬ ನೆಚ್ಚಿಲ್ಲ | ಬೇಡಲೊಳಿತಾವುದೆಂಬುದರರಿವುಮಿಲ್ಲ || ಕೂಡಿ ಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ | ನೀಡುಗೆದೆಗಟ್ಟಿಯನು- ಮಂಕುತಿಮ್ಮ ||. “ನಾವು ಬೇಡಿಕೊಂಡಿದ್ದನ್ನೆಲ್ಲಾ ಆ ಭಗವಂತ ನೀಡುತ್ತಾನೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ.
ನಮಗೂ ಸರಿಯಾಗಿ ಏನು ಕೇಳಬೇಕು ಎನ್ನುವ ಅರಿವಿಲ್ಲ. ಹೀಗಾಗಿ, ಪಾಲಿಗೆ ಬಂದದ್ದು ಪಂಚಾ ಮೃತ ಎಂದುಕೊಂಡು ಅದನ್ನು ಸ್ವೀಕರಿಸಲು ಗಟ್ಟಿಯಾದ ಮನಸ್ಸು ನೀಡು" ಎನ್ನುತ್ತಾರೆ ಡಿವಿಜಿ. ಇದನ್ನು ನಾವು ಹೀಗೆ ಪರಾಮರ್ಶಿಸಿ ನೋಡೋಣ: ನಾವು ಮನಸ್ಸಿನಲ್ಲಿ ಅಂದುಕೊಂಡ ದ್ದೆಲ್ಲಾ ಆಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ.
ಏಕೆಂದರೆ ನಾವು ಸರಿಯಾಗಿ ಏನು ಬೇಕು ಎಂದು ಕೇಳಿರುವುದಿಲ್ಲ. ನಾವು ಯಾವಾಗ ಸರಿಯಾಗಿ ಕೇಳುವುದಿಲ್ಲ, ಆಗ ಅದೇನು ಸಿಗುತ್ತದೆ ಅದನ್ನು ಸ್ವೀಕರಿಸುವ ಮನಸ್ಸು ನೀಡು. ಮೇಲಿನ ಸಾಲು ಗಳಲ್ಲಿ ಹೇಳಿರುವುದು ಹೆಚ್ಚು ಕಡಿಮೆ ಇದನ್ನೇ! 97 ಪ್ರತಿಶತ ಜನರಿಗೆ ಏನು ಕೇಳಬೇಕು ಎನ್ನುವ ಅರಿವಿಲ್ಲ. ಆ ಅರಿವಿರುವ ಜನರ ಸಂಖ್ಯೆ ಕೇವಲ 3 ಪ್ರತಿಶತ!
ಏನು ಬೇಕು ಎನ್ನುವುದು ನಮ್ಮ ಸುಪ್ತಮನಸ್ಸಿಗೆ ನಾವು ನೀಡುವ ಆದೇಶ. ಇದಕ್ಕೆ ಹೊರಜಗತ್ತಿನ ಭೌತಿಕ ಉದಾಹರಣೆಯನ್ನು ನೋಡೋಣ. ನಾವು ಮೈಸೂರಿಗೆ ಹೋಗಬೇಕು ಎಂದರೆ ಅಲ್ಲಿಗೆ ಹೋಗುವ ಬಸ್ಸನ್ನೇ ಹತ್ತಬೇಕು. ಅದನ್ನು ಬಿಟ್ಟು ತುಮಕೂರಿಗೆ ಹೋಗುವ ಬಸ್ಸು ಹತ್ತಿದರೆ? ಅಥವಾ ಮೈಸೂರಿಗೆ ಹೋಗಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡು, ಇರುವ ಹತ್ತಾರು ಬಸ್ಸುಗಳಲ್ಲಿ ಯಾವುದು ಮೈಸೂರಿಗೆ ಹೋಗುತ್ತದೆ ಎನ್ನುವ ಅರಿವಿಲ್ಲದೆ, ಸಂಶಯದಲ್ಲಿ ಯಾವ ಬಸ್ಸನ್ನೂ ಹತ್ತದೆ ನಿಂತರೆ Pಲಿತಾಂಶ ಏನಾಗುತ್ತದೆ? ನಾವು ಮೈಸೂರು ತಲುಪುವುದಿಲ್ಲ.
ಹೀಗಾಗಿ ‘ಏನು ಬೇಕು’ ಎನ್ನುವುದರ ಜತೆಗೆ ‘ಹೇಗೆ’ ಎನ್ನುವುದನ್ನು ಕೂಡ ನಾವು ನಿಗದಿ ಮಾಡಿ ಕೊಳ್ಳಬೇಕು. ಆಗ ಬಯಸಿದ Pಲಿತಾಂಶ ಸಿಗುತ್ತದೆ. ‘ಬೇಕು’ ಎನ್ನುವುದು ಬದುಕಿಗೆ ಬೇಕು. ಬದುಕನ್ನು ಮುಂದಕ್ಕೆ ಸಾಗಿಸಲು ಅದು ಅವಶ್ಯಕ. ಜಗತ್ತು ಇಂದು ಈ ಮಟ್ಟಿಗೆ ಇರುವುದಕ್ಕೆ ಒಂದು ಪ್ರತಿಶತ ಜನರಲ್ಲಿ ಇರುವ ನಿಖರತೆ ಕಾರಣ. ಇವತ್ತಿಗೂ ನೀವು ಮಕ್ಕಳನ್ನು, ಯುವಕರನ್ನು ಕಂಡಾಗ ಕೇಳುವ ಮೊದಲ ಪ್ರಶ್ನೆ ‘ಮುಂದೇನು ಮಾಡಬೇಕು ಎಂದಿದ್ದೀಯಾ?’ ಅಂತ.
ಮುಕ್ಕಾಲು ಪಾಲು ಉತ್ತರಗಳು ಒಂದೇ ರೀತಿಯಾಗಿ ಇರುತ್ತವೆ. ಇದಕ್ಕೆ ಕಾರಣ ನಮ್ಮ ಬೇಕುಗಳು ನಮ್ಮವಲ್ಲ, ಅವು ಬಹುತೇಕ ಸಮಾಜದಲ್ಲಿನ ಇತರರನ್ನು ನೋಡಿ ಪ್ರಭಾವದಿಂದ ರೂಪು ಗೊಂಡಂಥವು. ನಿಜವಾಗಿ ನಮ್ಮ ಆತ್ಮದ ‘ಬೇಕು’ ಎನ್ನುವ ಕೂಗಿಗೆ ಎಂದೂ ಸೋಲಿಲ್ಲ. ‘ಬಯಸಿ ದ್ದೆಲ್ಲಾ ಸಿಗುವುದಿಲ್ಲ, ಇದ್ದುದರಲ್ಲಿ, ಸಿಕ್ಕಿದ್ದುದರಲ್ಲಿ ತೃಪ್ತಿಯಾಗಿರಬೇಕು’ ಎನ್ನುವುದು ಏನು ಬೇಕು ಎಂದು ಸರಿಯಾಗಿ ಕೇಳದೆ ಹೋದುದರಿಂದ ಮತ್ತು ಅಂಥವರ ಸಂಖ್ಯೆಯೇ ಅಸಂಖ್ಯ ವಾಗಿರುವ ಕಾರಣದಿಂದ ಹುಟ್ಟಿರುವ ತತ್ವಜ್ಞಾನ.
ಸಮಾಜದಲ್ಲಿ ಬಹುತೇಕರ ಮತ್ತು ಪ್ರಸಿದ್ಧ ಅಭಿಪ್ರಾಯಗಳ ವಿರುದ್ಧ ಸೆಣಸಿ ಗೆಲ್ಲುವುದು ಬಹಳ ಕಷ್ಟ. ಹೀಗಾಗಿ ಇದನ್ನು ಇಲ್ಲಿಗೇ ನಿಲ್ಲಿಸುವೆ. ಆದರೆ ಹೋಗುವ ಮುನ್ನ ಒಂದು ಮಾತನ್ನು ನೆನಪಿಸುವೆ. ಜಗತ್ತಿನ 1 ರಿಂದ 3 ಪ್ರತಿಶತ ಜನರಿಗೆ ಬಯಸಿದ್ದೆಲ್ಲಾ ಸಿಗುತ್ತದೆ. ಅವರಿಗೆ ಸಿಕ್ಕಿದ್ದು ನಿಮಗೇಕೆ ಸಿಗುತ್ತಿಲ್ಲ. ನೀವು ಗೂಗಲ್‌ನಲ್ಲಿ ಸರಿಯಾದ ‘ಕೀ ವರ್ಡ್’ ಹಾಕಿ ಹುಡುಕಿದರೆ, ನೀವು ಹುಡುಕಲು ಹೊರಟಿರುವುದು ಸಿಗುತ್ತದೆ.
ಸಿಗುತ್ತಿಲ್ಲ ಎಂದರೆ ನೀವು ಸರಿಯಾಗಿ ಹುಡುಕಿಲ್ಲ ಎಂದರ್ಥ. ಬಯಸಿದ್ದೆಲ್ಲಾ ಸಿಗುವುದಿಲ್ಲ ಎನ್ನುವುದು ಮೆಜಾರಿಟಿ ಜನರ ಮೆಂಟಾಲಿಟಿ. You always get what you want ಎನ್ನುವುದು ಕೆಲವೇ ಕೆಲವು ಜನರ ನಂಬಿಕೆ. ಮೆಜಾರಿಟಿ ಜನರು ಮಾಡಿದ್ದನ್ನು ನೀವು ಮಾಡಿದರೆ ಅಥವಾ ಮಾಡುತ್ತಿದ್ದರೆ, ಮೆಜಾರಿಟಿ ಜನರಿಗೆ ಸಿಕ್ಕಿದ ಫಲಿತಾಂಶ ಸಿಗುತ್ತದೆ. ಬಯಸಿದ್ದೆಲ್ಲಾ ಸಿಗಬೇಕೆಂದರೆ ಮೆಂಟಾಲಿಟಿ ಬದಲಾಯಿಸಿಕೊಳ್ಳಬೇಕು. ಆ ಗುಣದಲ್ಲಿ ನಂಬಿಕೆಯಿಡಬೇಕು. ಒಂದು ದಿನದಲ್ಲಿ ಅದು ರಕ್ತಗತವಾಗುವುದಿಲ್ಲ. ಆದರೆ ಅಸಾಧ್ಯವಂತೂ ಅಲ್ಲ.