ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಹಲಸಿನ ಮರದ ದಶಾವತಾರಗಳು

ಹಲಸಿನ ಮರದ ಮಹಿಮೆಯನ್ನು ಪೂರ್ತಿಯಾಗಿ ಅರಿಯಬೇಕೆಂದರೆ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ಸುತ್ತಾಡಬೇಕು. ಬಯಲು ಸೀಮೆಯಲ್ಲಿ, ಮೈಸೂರು ಸೀಮೆಯಲ್ಲಿ ಹಲಸಿನ ಹಣ್ಣು ಸಾಕಷ್ಟು ಪ್ರಸಿದ್ಧ ನಿಜ; ಹಣ್ಣಿನ ರುಚಿಗೆ ಸಹ ಬಯಲುಸೀಮೆಯೇ ಹೆಸರುವಾಸಿ. ಆದರೆ ಹಲಸಿನ ಮರದ ಮೋಪು, ಅದರ ಎಲೆಯೂ ಸೇರಿದಂತೆ, ಹಲಸನ್ನು ಸಂಪೂರ್ಣವಾಗಿ ತಮ್ಮ ದಿನಚರಿಯಲ್ಲಿ ಆವಾಹಿಸಿಕೊಂಡ ಪರಿಯನ್ನು ನೋಡಬೇಕೆಂದರೆ ಮಲೆನಾಡು ಮತ್ತು ಕರಾವಳಿಯೇ ಸೂಕ್ತ ಪ್ರದೇಶ. ಹಲಸಿನಹಣ್ಣಿನ ರುಚಿಯ ವಿಚಾರಕ್ಕೆ ಬಂದರೆ ಬಯಲುಸೀಮೆಯದೇ ಮೇಲುಗೈ ಎಂದು ನನ್ನ ಅನುಭವ.

Shashidhara Halady Column: ಹಲಸಿನ ಮರದ ದಶಾವತಾರಗಳು

-

ಶಶಾಂಕಣ

ಕೇಳಿದ್ದನ್ನೆಲ್ಲ ಕೊಡುವ ಮರವನ್ನು ಕಲ್ಪವೃಕ್ಷ ಎಂದು ಕರೆಯುವುದು ಎಲ್ಲರಿಗೂ ಗೊತ್ತೇ ಇದೆ. ತೆಂಗಿನ ಮರವು ನಮ್ಮ ನಿಮ್ಮೆಲ್ಲರ ಮೆಚ್ಚಿನ ಕಲ್ಪವೃಕ್ಷ; ಅದನ್ನು ಮೀರುವ ಇನ್ನೊಂದು ಮರವಿಲ್ಲ ಎನ್ನಬಹುದು. ತೆಂಗು ತನ್ನಷ್ಟಕ್ಕೆ ತಾನೇ ಚೆನ್ನಾಗಿ ಬೆಳೆಯುವ ಅರಸಿಕೆರೆ ತಿಪಟೂರು ಪ್ರದೇಶದವರು ತಮ್ಮನ್ನು ಕಲ್ಪವೃಕ್ಷದ ನಾಡು ಎಂದೂ ಕರೆದುಕೊಳ್ಳುವುದುಂಟು. ಇಂತಹ ಕಲ್ಪವೃಕ್ಷಕ್ಕೆ ತುಸು ವಾದರೂ ಹೋಲಿಸಬಹುದಾದ ಒಂದು ಮರವೆಂದರೆ ಹಲಸಿನ ಮರ ಎಂದು ನನ್ನ ಅಭಿಪ್ರಾಯ. ಮೂಲತಃ ಕಾಡುಮರವಾದ ಹಲಸಿನ ಇಂತಹದೊಂದು ದೊಡ್ಡ ಸ್ಥಾನವನ್ನು ನೀಡಿದ್ದನ್ನು ಕಂಡು, ಆರಂಭದಲ್ಲಿ ಕೆಲವರಾದರೂ ತುಸು ಅಸಮ್ಮತಿ ಸೂಚಿಸಿಯಾರೇನೋ! ಅದಕ್ಕೆ ಪುರಾವೆಯಾಗಿ ಹಲಸಿನ ಹಲವು ರೂಪಗಳನ್ನೇ ಪಟ್ಟಿ ಮಾಡಬಹುದು. ಆದರೆ ಒಂದಂತೂ ನಿಜ.

ಹಲಸಿನ ಮರದ ಮಹಿಮೆಯನ್ನು ಪೂರ್ತಿಯಾಗಿ ಅರಿಯಬೇಕೆಂದರೆ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ಸುತ್ತಾಡಬೇಕು. ಬಯಲು ಸೀಮೆಯಲ್ಲಿ, ಮೈಸೂರು ಸೀಮೆಯಲ್ಲಿ ಹಲಸಿನ ಹಣ್ಣು ಸಾಕಷ್ಟು ಪ್ರಸಿದ್ಧ ನಿಜ; ಹಣ್ಣಿನ ರುಚಿಗೆ ಸಹ ಬಯಲುಸೀಮೆಯೇ ಹೆಸರುವಾಸಿ. ಆದರೆ ಹಲಸಿನ ಮರದ ಮೋಪು, ಅದರ ಎಲೆಯೂ ಸೇರಿದಂತೆ, ಹಲಸನ್ನು ಸಂಪೂರ್ಣವಾಗಿ ತಮ್ಮ ದಿನಚರಿಯಲ್ಲಿ ಆವಾಹಿಸಿಕೊಂಡ ಪರಿಯನ್ನು ನೋಡಬೇಕೆಂದರೆ ಮಲೆನಾಡು ಮತ್ತು ಕರಾವಳಿಯೇ ಸೂಕ್ತ ಪ್ರದೇಶ. ಹಲಸಿನಹಣ್ಣಿನ ರುಚಿಯ ವಿಚಾರಕ್ಕೆ ಬಂದರೆ ಬಯಲುಸೀಮೆಯದೇ ಮೇಲುಗೈ ಎಂದು ನನ್ನ ಅನುಭವ.

ಚನ್ನಪಟ್ಟಣ ಸನಿಹದ ಹಲಸಿನಹಳ್ಳಿ ಎಂಬ ಊರಿನಲ್ಲಿ ಬೆಳೆದಿದ್ದ ಹಲಸಿನ ಹಣ್ಣನ್ನು ಒಂದೆರಡು ಬಾರಿ ತಿಂದಿದ್ದೆ: ಅದೆಷ್ಟು ರುಚಿ ಎಂದರೆ, ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ ಮತ್ತು ಇನ್ನಷ್ಟು ತಿನ್ನಬೇಕು ಎನಿಸುತ್ತದೆ. ‘ಕೊಬ್ಬರಿ ಕಾಯಿ’ ಎಂದು ಕರೆಯುವ ಆ ಸುತ್ತಮುತ್ತಲಿ ನಲ್ಲಿ ಬೆಳೆಯುವ ಹಲಸಿನ ಹಣ್ಣಿನ ತೊಳೆಯ ಸಮಾನ ರುಚಿಯನ್ನು ನಾನು ಬೇರೆ ಎಲ್ಲೂ ಕಂಡಿಲ್ಲ. ಅದೇ ರೀತಿ ಅರಕಲಗೂಡು ಹತ್ತಿರದ ಮುತ್ತಿಗೆ ಎಂಬ ಊರಿನ ಹಲಸಿನ ಹಣ್ಣು ಸಹ ಸಾಕಷ್ಟು ಪ್ರಸಿದ್ಧವಾಗಿದೆ.

ಇದನ್ನೂ ಓದಿ: Shashidhara Halady: Column: ಕರಗಿದ ಹಿಮನದಿ, ಮರುಗಿದ ಮನ

ಹಿಂದೆ ಮೈಸೂರು ಮಹಾರಾಜರ ಅರಮನೆಗೆ ಪ್ರತಿವರ್ಷ ಮುತ್ತಿಗೆಯಿಂದ ಹಲಸಿನ ಹಣ್ಣನ್ನು ತರಿಸಿಕೊಳ್ಳುತ್ತಿದ್ದರು ಎಂದು ಆ ಊರಿನವರು ಹೆಮ್ಮೆಯಿಂದ ಹೇಳುವುದನ್ನು ಕೇಳಿಸಿಕೊಂಡಿದ್ದೆ ಮತ್ತು ಅಲ್ಲಿನ ಹಣ್ಣನ್ನು ತಿನ್ನುವ ಅವಕಾಶ ನನಗೂ ದೊರಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಹಲಸಿನ ಹಣ್ಣು ಸಕ್ಕರೆಯ ರೀತಿ ರುಚಿ ಎಂದು ಹೇಳುವುದುಂಟು. ಇದೇ ರೀತಿ ಚೇಳೂರು ಹಲಸು ಸಹ ಪ್ರಸಿದ್ಧ. ಹಾಸನ, ಕನಕಪುರ ಮೊದಲಾದ ಕಡೆಗಳ ಹಣ್ಣುಗಳು ನಿಜಕ್ಕೂ ಬಲು ರುಚಿ.

ಮಳೆ ಹದವಾಗಿ ಅಥವಾ ತುಸು ಕಡಿಮೆ ಬೀಳುವ ಪ್ರದೇಶದಲ್ಲಿ ಇರುವುದರಿಂದಲೇ ಬಯಲು ಸೀಮೆಯ ಹಲಸಿನ ರುಚಿ ಜಾಸ್ತಿ ಎಂದೆನ್ನಬಹುದು. ಇದರ ಹೋಲಿಕೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಹಲಸಿನ ಹಣ್ಣಿಗೆ ಸಿಹಿ ಕಡಿಮೆ. ಜೂನ್ ಜುಲೈನಲ್ಲಿ ಅಧಿಕವಾಗಿ ಸುರಿಯುವ ಮಳೆಯಿಂದಾಗಿ, ಅಲ್ಲಿನ ಹಲಸಿನ ಕಾಯಿಯ ಒಳಗೆ ನೀರು ಹೋಗಿ, ಸಪ್ಪಗೆ ಆಗುತ್ತವೆ. ನಮ್ಮೂರಿನ ಕೆಲವು ಹಲಸಿನ ಮರಗಳ ಹಣ್ಣುಗಳನ್ನು ಬಿಡಿಸಿದರೆ ತೊಳೆಯ ಒಳಗಿನ ಬೀಜ ಅದಾಗಲೇ ಬೇರು ಬಿಟ್ಟಿರುತ್ತದೆ!

ಅಂದರೆ ಮಳೆ ಜಾಸ್ತಿಯಾದ ಗುರುತು ಅದು. ಅಂತಹ ತೊಳೆಗಳ ರುಚಿ ಕಡಿಮೆ. ಹಾಗಂತ ನಮ್ಮ ಪ್ರದೇಶದಲ್ಲಿ ತುಂಬಾ ರುಚಿಯಾದ ಹಲಸಿನ ಹಣ್ಣುಗಳು ಇಲ್ಲವೇ ಎಂದು ನೀವು ಕೇಳಿದರೆ, ನಮ್ಮೂರಿನ ಹಣ್ಣುಗಳನ್ನು ಬಿಟ್ಟುಕೊಡಲು ನಾನಂತೂ ತಯಾರಿಲ್ಲ. ನಮ್ಮೂರಿನ ಸನಿಹದ ಅಬ್ಲಿಕಟ್ಟೆ ಎಂಬ ಹಳ್ಳಿಯ ‘ಬಿಳಿ ಬಕ್ಕೆ’ ಎಂಬ ಹಲಸಿನ ಮರದ ಹಣ್ಣುಗಳು ಭಾರಿ ರುಚಿಯಾಗಿ ದ್ದವು: ತೊಳೆಗಳ ಬಣ್ಣ ಬಿಳಿ, ರುಚಿಯಲ್ಲಿ ಅಪ್ರತಿಮ. ಈಗ ಆ ಮರ ಇಲ್ಲದಿದ್ದರೂ, ಅದರ ಪೀಳಿಗೆಯ ಮರಗಳು, ತುಸು ರುಚಿ ಬದಲಿಸಿಕೊಂಡು ಅಲ್ಲಲ್ಲಿ ಇವೆ.

jack

ನಮ್ಮೂರಿನ ಸುತ್ತಮುತ್ತಲು ತುಂಬಾ ವೈವಿಧ್ಯದ ಹಣ್ಣು ನೀಡುವ ಹಲವು ಹಲಸಿನ ಮರಗಳಿದ್ದವು. ಕೆಲವು ಮರಗಳ ಕಾಯಿಗಳು ಚಿಕ್ಕವು, ಆದರೂ ರುಚಿ ಜಾಸ್ತಿ. ಇನ್ನು ಕೆಲವು ಮರಗಳ ಕಾಯಿ ಗಳೆಂದರೆ ಒಂದಾಳು ಹೊರುವ ತೂಕ! ಒಮ್ಮೆ ಕತ್ತರಿಸಿದರೆ ಮನೆಮಂದಿಯಲ್ಲಾ ತಿನ್ನಬಹುದು ಮತ್ತು ಆ ದಿನ ಮಧ್ಯಾಹ್ನ ಅಡುಗೆ ಮಾಡುವ ಕೆಲಸವಿಲ್ಲ, ಅಷ್ಟು ತೊಳೆಗಳು! ಅಷ್ಟೇ ರುಚಿ. ಕೆಲವು ಹಣ್ಣುಗಳಲ್ಲಿ ಸೊನೆ ಅಥವಾ ಬಿಳಿ ಅಂಟು ಕಡಿಮೆ. ಅಂತ ಹಣ್ಣುಗಳಿಗೆ ಹೆಚ್ಚು ಬೇಡಿಕೆ. ಕರಾವಳಿ ಪ್ರದೇಶದಲ್ಲಿ ಇಂಬ ಎಂಬ ಮೆದು ತೊಳೆಯ ಹಲಸಿನ ಹಣ್ಣು ಸಿಗುತ್ತದೆ. (ತುಳುವೆ ಎಂದೂ ಕರೆಯುವುದುಂಟು).

ಇಂತಹ ತಳಿಯ ಕೆಲವು ಮರಗಳ ಹಣ್ಣುಗಳು ಬಲು ರುಚಿ; ಅದರಲ್ಲೂ, ಹಲ್ಲುಗಳು ಇಲ್ಲದ ಹಳಬ ರಿಗೆ ಇಂಬ ಎಂದರೆ ಬಹಳ ಇಷ್ಟ. ನಾಲಗೆಯಲ್ಲೇ ಅತ್ತಿತ್ತ ಮಾಡಿ ನೇರವಾಗಿ ನುಂಗಬಹುದಾದ ಇಂಬ ತೊಳೆಗಳ ಕುರಿತು ಒಂದು ಗಾದೆಯೇ ಇದೆ ‘ಇಂಬ ಕೊಟ್ಟರೆ ತಿಂಬ!’ ಅಂದ ಹಾಗೆ ಇಂಬ ತಳಿಯ (ಪೂರ್ತಿ ಮೆದು ತೊಳೆ) ಮರಗಳು ಬಯಲು ಸೀಮೆಯಲ್ಲಿ ಯಾಕೆ ಬೆಳೆಯುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದರೂ, ಸಮರ್ಪಕ ಉತ್ತರ ನನಗೆ ದೊರಕಿಲ್ಲ. ಇರಲಿ, ನಮ್ಮ ರಾಜ್ಯದ ಹಲಸು ಬಲು ರುಚಿ ಎಂಬುದರಲ್ಲಿ ಎರಡು ಮಾತಿಲ್ಲ. ಹಲಸಿನ ಹಣ್ಣಿನ ರುಚಿಯ ಕುರಿತು ಬರೆದ ಮಾತ್ರಕ್ಕೆ ಹಲಸಿನ ಹಿರಿಮೆಯನ್ನು ಪೂರ್ತಿ ವರ್ಣಿಸಿದಂತೆ ಆಗದು.

ಹಲಸಿನ ಮರದ ದಶಾವತಾರಗಳು ನಮ್ಮ ಹಳ್ಳಿಯ ಮನೆಯಲ್ಲಿ ತನ್ನ ಸ್ವಭಾವವನ್ನು ತೋರುವ ಪರಿ ಹೀಗಿದೆ. ಹಲಸಿನ ಹಣ್ಣನ್ನು ತಿಂದು ತೊಳೆಗಳೆಲ್ಲವೂ ಹೊಟ್ಟೆಗೆ ಸೇರಿದ ನಂತರ, ಹಲಸಿನ ದಶಾವ ತಾರದ ಒಂದು ಪ್ರಕಾರ ಶುರು. ಮೊದಲಿಗೆ ಹಲಸಿನ ಬೀಜ ಅಥವಾ ನಮ್ಮವರು ಕರೆಯುವಂತೆ ‘ದಾನಿ ಬೇಳೆ’ಯ ವಿಚಾರಕ್ಕೆ ಬರೋಣ. (ಈ ‘ದಾನಿ’ ಎಂಬುದು ಧಾನ್ಯದ ಅಪಭ್ರಂಶವೇ? ಭಾಷಾ ತಜ್ಞರು ತಿಳಿಸಬೇಕು). ಹಲಸಿನ ಬೀಜವನ್ನು ಒಣಗಿಸಿ ಡಬ್ಬಿಯಲ್ಲಿ ಹಾಕಿಟ್ಟರೆ ಹಲವು ತಿಂಗಳುಗಳ ತನಕ ರುಚಿಕರ ತಿನಿಸು ಆಗಬಲ್ಲದು. ದಾನಿ ಬೇಳೆಯನ್ನು ಮಡಕೆಯಲ್ಲಿ ಹುರಿದು ತಿನ್ನಲು ಸಾಧ್ಯ. ಅದೇ ರೀತಿ ನೀರಿನಲ್ಲಿ ಬೇಯಿಸಿಯೂ ತಿನ್ನಬಹುದು. ಬಣ್ಣದ ಸೌತೆಕಾಯಿ ಹುಳಿ ಮಾಡುವಾಗ ಒಂದೆರಡು ಮುಷ್ಟಿ ದಾನಿ ಬೇಳೆಯನ್ನು ಹಾಕಿ ಬೇಯಿಸಿದರೆ ಊಟದ ಜೊತೆ ಬಲು ರುಚಿ. ಹಲಸಿನ ಬೀಜವನ್ನು ಅರೆದು ರೊಟ್ಟಿ ಮತ್ತು ಹೋಳಿಗೆಯನ್ನು ಹೋಲುವ ತಿನಿಸನ್ನು ಮಾಡುವುದುಂಟು. ಹಸಿ ಹಲಸಿನ ಬೀಜಕ್ಕೆ ಉಪ್ಪು ಬೆರೆಸಿ ಬೇಯಿಸಿದರೆ ಒಂದು ಹೊತ್ತಿನ ಆಹಾರವೇ ಆದೀತು!

ಬಹು ಹಿಂದೆ ಮಳೆಗಾಲದಲ್ಲಿ, ಊಟಕ್ಕೆ ಕಷ್ಟವೆನಿಸಿದಾಗ ನಮ್ಮ ಹಳ್ಳಿಯ ಕೆಲವು ಕೃಷಿ ಕಾರ್ಮಿಕರು ಹಸಿವು ನೀಗಲು ಅನುಸರಿಸುತ್ತಿದ್ದ ಹಲವು ಉಪಾಯಗಳಲ್ಲಿ ಹಲಸಿನ ಬೀಜವನ್ನು ಸುಟ್ಟು ಅಥವಾ ಬೇಯಿಸಿ ತಿನ್ನುವುದೂ ಸೇರಿದೆ. ಹಲಸಿನ ಕಾಯಿಯನ್ನು ಒಂದು ಪ್ರಮುಖ ತರಕಾರಿಯಾಗಿ ಕರಾವಳಿ ಮತ್ತು ಮಲೆನಾಡಿನವರು ಬಳಸುವ ರೀತಿಯು ಬಹು ವಿಶೇಷ. ತರಕಾರಿಯಾಗಿ ಹಲಸು, ಹಸಿವನ್ನೂ ನೀಗಬಲ್ಲದು ಮತ್ತು ಆರೋಗ್ಯಕ್ಕೂ ಉತ್ತಮ. ಹಲಸಿನ ಕಾಯಿಯನ್ನು ಹೋಳುಗಳ ರೀತಿ ಕತ್ತರಿಸಿ ಸಾಂಬಾರು ಮಾಡಬಹುದು. ಹಲಸಿನ ಕಾಯಿಯ ಸಿಪ್ಪೆ ತೆಗೆದು ಚೆನ್ನಾಗಿ ಕೊಚ್ಚಿ ಪಲ್ಯ ಮಾಡಿದರೆ ಬಲು ರುಚಿ. ಇದು ‘ಕಡಗಿ ತಾಳ್ಳು’ ಎಂದೇ ನಮ್ಮೂರಿನಲ್ಲಿ ಹೆಸರುವಾಸಿ.

ಹಲವು ವಿಶೇಷದ ಅಡುಗೆಗೆ ‘ಕಡಗಿ ತಾಳ್ಳು’ ಕಾಯಂ ವ್ಯಂಜನ. ತುಸು ಬೆಳೆದ ಹಲಸಿನಕಾಯಿಯ ತೊಳೆಗಳನ್ನು ಮಾತ್ರ ಒಂದು ತರಕಾರಿಯಾಗಿ ಬಳಸಿ ಸಾಂಬಾರು ಮಾಡಬಹುದು; ಕಾಯಿ ಎಳೆಯದಿದ್ದರೆ ಕಾಯಿಯನ್ನೇ ತರಕಾರಿ ಹೋಳುಗಳನ್ನು ಕತ್ತರಿಸಿ ಸಾಂಬಾರು ಮಾಡಬಹುದು. (ಹೊರಗಿನ ಸಿಪ್ಪೆಯನ್ನು ಮಾತ್ರ ಬೇರ್ಪಡಿಸಿ ಬಿಸಾಕಬೇಕು) ಇಂತಹ ಸಾಂಬಾರಿನಲ್ಲಿ ಹಲಸಿನ ಕಾಯಿಯ ಸಾಡೆ ಅಥವಾ ಸಾರೆಯೂ ವಿಶೇಷ ರುಚಿಯನ್ನು ನೀಡಬಲ್ಲದು.

ಮಳೆಗಾಲದಲ್ಲಿ ವಿಶೇಷವಾಗಿ ತಯಾರಿಸುವ ಹುರುಳಿ ಸಾರಿನಲ್ಲಿ ಬೇಯುವ ಹಲಸಿನ ಬೀಜಗಳ ರುಚಿಯನ್ನು ತಿಂದವರೇ ಬಲ್ಲರು! ಹಲಸಿನ ಹಣ್ಣಿನ ತೊಳೆಗಳನ್ನು ಅಕ್ಕಿ ಹಿಟ್ಟಿನ ಜೊತೆ ಬೆರೆಸಿ, ಹಬೆಯಲ್ಲಿ ಬೇಯಿಸುವ ಹಲಸಿನ ಕಡುಬು (ಸಿಹಿ) ಹೆಚ್ಚಿನವರಿಗೆ ಗೊತ್ತೇ ಇದೆ. ಇದರಲ್ಲೂ ಕೆಲವು ವೈವಿಧ್ಯ ಉಂಟು! ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸುವುದು, ಅರಿಶಿನದ ಎಲೆಯಲ್ಲಿ ಸುತ್ತಿ ಬೇಯಿಸುವುದು, ನಾಗಸಂಪಿಗೆ ಎಲೆಯಲ್ಲಿ ಸುತ್ತಿ ಬೇಯಿಸುವುದು ಈ ರೀತಿ. ಎಳೆ ಹಲಸಿನ ಕಾಯಿಯ ಇನ್ನೊಂದು ತಯಾರಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಅದೆಂದರೆ ಹಲಸಿನ ಕಾಯಿಯ ಉಪ್ಪಿನಕಾಯಿ! ನಾನು ಇದುವರೆಗೆ ರುಚಿಕಂಡ ಯಾವುದೇ ರೀತಿಯ ಉಪ್ಪಿನಕಾಯಿಗಿಂತಲೂ, ಹಲಸಿನ ಕಾಯಿ ಉಪ್ಪಿನಕಾಯಿ ಹೆಚ್ಚಿನ ರುಚಿ ಹೊಂದಿದೆ. ಎಳೆ ಕಾಯಿಯನ್ನು ಕತ್ತರಿಸಿ, ಕಾಟು ಮಾವಿನ ಹೋಳುಗಳ ಜೊತೆ ಬೆರೆಸಿ ತಯಾರಿಸಿದ ಉಪ್ಪಿನಕಾಯಿಯ ರುಚಿಯನ್ನು ಪೂರ್ತಿಯಾಗಿ ವರ್ಣಿಸಲು ಪದಗಳಿಂದ ಸಾಧ್ಯವಿಲ್ಲ; ಅದನ್ನು ಚಪ್ಪರಿಸಿದ್ದ ನಾಲಿಗೆಯಿಂದಲೂ ಅಸಾಧ್ಯ; ನೀವೇ ಒಮ್ಮೆ ಅದರ ರುಚಿಯನ್ನು ಸವಿದರೆ ಮಾತ್ರ ಸಾಧ್ಯ.

ಹಲಸಿನ ಕಾಯಿಯ ಉಪ್ಪಿನಕಾಯಿಯನ್ನು ತಿನ್ನುವ ಭಾಗ್ಯ ಈಚಿನ ವರ್ಷಗಳಲ್ಲಿ ಮರೀಚಿಕೆ ಎನಿಸಿದೆ, ಏಕೆಂದರೆ ಹಿಂದೆ ನಮ್ಮ ಅಜ್ಜಿ ತಯಾರಿಸಿದ್ದು, ಆಗಿ ತಿಂದದ್ದು ಮಾತ್ರ ಗೊತ್ತು. ನಂತರ ಇದನ್ನು ನಮ್ಮ ಮನೆಯಲ್ಲಿ ತಯಾರಿಸುವ ಪದ್ಧತಿ ಬಿಟ್ಟು ಹೋಗಿದೆ! ಮುಂದಿನ ವರ್ಷವಾದರೂ, ಒಂದು ಎಳೆಯ ಹಲಸಿನ ಕಾಯಿ ತಂದು ಅದರ ಉಪ್ಪಿನಕಾಯಿ ತಯಾರಿಸುವ ಸಾಹಸಕ್ಕೆ ಕೈಹಾಕಬೇಕು ಎಂದುಕೊಂಡಿದ್ದೇನೆ! ಹಲಸಿನ ಕಾಯಿಯ ಇನ್ನೊಂದು ಬಹು ಪ್ರಸಿದ್ಧ ಉಪಯೋಗ ವೆಂದರೆ ಹಪ್ಪಳ. ಇದು ಬಹಳ ರುಚಿಯೂ ಹೌದು. ಹದವಾಗಿ ಕರಿದ ಹಲಸಿನ ಹಪ್ಪಳವನ್ನು ಕರಿದ ಗೋಡಂಬಿಯ ಜೊತೆ ತಿಂದರೆ ಆ ರುಚಿಗೆ ಸರಿ ಸಾಟಿ ಎನಿಸುವ ಬೇರೆ ರುಚಿ ಇಲ್ಲ.

ಚೆನ್ನಾಗಿ ಬಲಿತ ಹಲಸಿನ ತೊಳೆಗಳನ್ನು ಹಬೆಯಲ್ಲಿ ಬೇಯಿಸಿ, ಕಲ್ಲಿನಲ್ಲಿ ಅರೆದು ಉಂಡೆ ಮಾಡಿ, ಎರಡು ಮರದ ಮಣೆಗಳ ನಡುವೆ ಇಟ್ಟು ಒತ್ತಿ ಹಪ್ಪಳದ ಸ್ವರೂಪಕ್ಕೆ ತಂದು, ಬಿರು ಬಿಸಿಲಿನಲ್ಲಿ ಎರಡು ದಿನ ಒಣಗಿಸಿ ಇಟ್ಟರೆ ಹಲಸಿನ ಹಪ್ಪಳ ಸಿದ್ಧ. ಇದನ್ನು ತುಸು ವಿಭಿನ್ನವಾಗಿ ತಯಾರಿಸುವ ಪದ್ಧತಿ ಮಲೆನಾಡಿನಲ್ಲಿದೆ. ಹಲಸಿನ ಹಪ್ಪಳವನ್ನು ಆರೆಂಟು ತಿಂಗಳುಗಳ ಕಾಲ ಉಪಯೋಗಿಸ ಬಹುದು.

ಕೆಂಡದಲ್ಲಿ ಸುಟ್ಟು ಸಹ ತಿನ್ನಬಹುದು, ಎಣ್ಣೆಯಲ್ಲಿ ಕರಿಯಲೂಬಹುದು. ಊಟದ ಜೊತೆ ವ್ಯಂಜನಕ್ಕೂ ಸೈ, ತುರ್ತು ದಿನಗಳಲ್ಲಿ ಬೆಳಗಿನ ಉಪಹಾರವಾಗಿಯೂ ಸೈ. ಹಲಸಿನ ಕಾಯಿಯ ತೊಳೆಗಳನ್ನು ವ್ಯಾಲ್ಯೂ ಎಡಿಷನ್ ರೂಪದಲ್ಲಿ ಹಲವು ತಿಂಗಳುಗಳ ಕಾಲ ರಕ್ಷಿಸಿ ಇಟ್ಟುಕೊಂಡು, ಆಹಾರದ ರೀತಿ ಸೇವಿಸುವ ವಿಧಾನವೇ ಹಲಸಿನ ಹಪ್ಪಳ ಎಂದು ಗುರುತಿಸಬಹುದು.

ಕರಾವಳಿಯವರು ಹಲಸಿನ ತೊಳೆಗಳನ್ನು ಇನ್ನೂ ಹಲವು ಅಡುಗೆಗೆ ಪಕ್ಕಾಗಿಸಿದ್ದಾರೆ. ಹಲಸಿನ ತೊಳೆ ತೆಗೆದ ನಂತರ, ತಳಭಾಗದ ದಪ್ಪನೆಯ ‘ಮಗಡ’ದಿಂದ ಪಲ್ಯ ತಯಾರಿಸುವುದುಂಟು. ಹಣ್ಣಿನ ತೊಳೆಗಳನ್ನು ಅರೆದು ಪಕೋಡದ ರೀತಿ ತಯಾರಿಸುವ ಮುಳಕ, ಹಣ್ಣಿನ ತೊಳೆ ಹಾಕಿ ತಯಾರಿಸುವ ಬಿಸಿ ಪಾಯಸ, ಕಾಯಿಯ ತೊಳೆಗಳನ್ನು ಅರೆದು ತಯಾರಿಸ ಬಹುದಾದ ಅಪ್ಪ (ಅಂಬೋಡೆ ಹೋಲಿಕೆ), ಕಾಯಿ ತೊಳೆಗಳ ಚಿಪ್ಸ್, ಹಲಸಿನ ಹಣ್ಣಿನ ತೊಳೆಗಳ ಹಪ್ಪಳ ಹೀಗೆ ಪಟ್ಟಿ ಬೆಳೆಯುತ್ತದೆ. ಹಲಸಿನ ಕಾಯಿಯ ತೊಳೆಗಳನ್ನು ಉಪ್ಪು ನೀರಿನಲ್ಲಿ ನೆನೆಸಿ ನಾಲ್ಕಾರು ತಿಂಗಳು ಕಾಪಿಟ್ಟು ಅದರಿಂದ ಪಲ್ಯ ತಯಾರಿಸುವುದುಂಟು. ಈಗ ಓದುಗರಿಗೆ ಸ್ವಲ್ಪವಾದರೂ ಅರ್ಥವಾಗಿರ ಬೇಕು, ಹಲಸಿನ ಮರದ ‘ದಶಾವತಾರ’ ಎಂಬ ಪದವನ್ನು ಬಳಸಲಾಗಿದೆ ಎಂದು!

ಇನ್ನೂ ಮುಗಿದಿಲ್ಲ ಹಲಸಿನ ವಿಶ್ವರೂಪ! ಹಲಸಿನ ಎಲೆಗಳ ಕೊಟ್ಟೆ ಕಡುಬು ಕರಾವಳಿಯ ಮತ್ತು ಮಲೆನಾಡಿನ ವಿಶೇಷ. ನಾಲ್ಕು ಎಲೆಗಳನ್ನು ಕಡ್ಡಿಯ ಸಹಾಯದಿಂದ ಒಂದು ಲೋಟದ ರೂಪಕ್ಕೆ ‘ಸೆಡ’ಬೇಕು- ಅದರೊಳಗೆ ಇಡ್ಲಿ ಹಿಟ್ಟನ್ನು ಹಾಕಿ, ಹಬೆಯಲ್ಲಿ ಬೇಯಿಸಿದರೆ ಮೃದುವಾದ ಕೊಟ್ಟೆ ಕಡುಬು ಸಿದ್ಧ. ಚಟ್ನಿ ಮತ್ತು ಸಾಂಬಾರ್ ಜೊತೆ ಸೇವನೆ. ಇದು ಬಹುಮಟ್ಟಿಗೆ ಇಡ್ಲಿಯನ್ನು ಹೋಲಿದರೂ, ಇಡ್ಲಿಗಿಂತ ಹೆಚ್ಚು ರುಚಿ. ಎಲೆಯ ಜತೆ ಹಬೆಯಲ್ಲಿ ಬೇಯಿಸಿದಾಗ, ಮೃದುವಾಗಿ ಬೇಯುವುದಲ್ಲದೇ, ಹಲಸಿನ ಎಲೆಯ ಪರಿಮಳವು ಬೆರೆತು ರುಚಿ ಹೆಚ್ಚುತ್ತದೆ ಎಂದು ತಿಂದವರ ಅನುಭವ. ಇಂತಹ ಹಲಸಿನ ಎಲೆಯ ಕೊಟ್ಟೆಗಳು (ಖಾಲಿ) ಈಗ ಆನ್‌ಲೈನ್‌ನಲ್ಲೂ ಖರೀದಿಗೆ ಲಭ್ಯ! ಹಲಸಿನ ಮರವನ್ನು, ಅದಕ್ಕೆ ವಯಸ್ಸಾದ ನಂತರ, ಕತ್ತರಿಸಿದರೆ ದೊರಕುವ ಮೋಪು, ಒಂದು ವಿಶೇಷ ಬಣ್ಣವನ್ನು ನೈಸರ್ಗಿಕವಾಗಿಯೇ ಪಡೆದಿದೆ.

ಹೊಳೆಯುವ ಹಳದಿ ಬಣ್ಣದ ಹಲಸಿನ ಮೋಪು ಮತ್ತು ಹಲಗೆಗಳಿಂದ ಚಂದದ ಪೀಠೋಪಕರಣ ಗಳ ತಯಾರಿ ಸಾಧ್ಯ. ಆ ಮರವು ಒಳ್ಳೆಯ ಪಾಲಿಶ್ ಪಡೆದು ಹೊಳೆವ ಹಳದಿ ಬಣ್ಣದಲ್ಲಿ ಮಿಂಚುವುದುಂಟು. ಮನೆ ಬಾಗಿಲಿಗೆ, ಬಾಗಿಲಿನ ಮೇಲಿನ ಕೆತ್ತನೆಗಳಗೆ ಹಲಸಿನ ಮರ ಹೇಳಿ ಮಾಡಿಸಿದ್ದು. ಹಲಸಿನ ಮರವನ್ನು ಉಪಯೋಗಿಸಿ ವೀಣೆಯನ್ನು ಸಹ ತಯಾರಿಸುತ್ತಾರಂತೆ!

ಹಲಸಿನ ಮರದಿಂದ ಹೊಳೆಯುವ ಹಳದಿ ಬಣ್ಣದ ಮಂಚವನ್ನು ಮಾಡಲು ಸಾಧ್ಯವಿದ್ದರೂ, ಅದೇಕೋ ಹಲಸಿನ ಮರದ ಮಂಚವು ಉತ್ತಮವಲ್ಲ ಎಂಬ ನಂಬಿಕೆ ಕರಾವಳಿಯ ಕೆಲವು ಪ್ರದೇಶಗಳಲ್ಲಿದೆ. ಅಕಸ್ಮಾತ್ ಅದರ ಹಳದಿ ಹಲಗೆಯ ಮಂಚ ಮಾಡಿಸಿ, ಅದರ ಮೇಲೆ ಯಾರಾದರೂ ಮಲಗಿದರೆ, ಅವರಿಗೆ ಹಳದಿ ಕಾಮಾಲೆ ರೋಗ ಬರುತ್ತದೆ ಎಂಬ ಗುಸುಗುಸು ಇದೆ. ಹಿಂದೆ ಅಂತಹ ಕೆಲವು ಅಪರೂಪದ ಘಟನೆಗಳು ನಡೆದಿದ್ದನ್ನು ನಮ್ಮ ಹಳ್ಳಿಯವರು ನೆನಪಿಸಿಕೊಳ್ಳುವುದುಂಟು.

ಇದು ಶುದ್ಧ ಮೂಢ ನಂಬಿಕೆಯೇ ಇರಬಹುದು, ಹೊರತು, ವೈಜ್ಞಾನಿಕವಾಗಿ ಯೋಚಿಸಿದರೆ ಅಂತಹ ಸಾಧ್ಯತೆ ಇಲ್ಲ. ಆಹಾರವಾಗಿ, ಉತ್ತಮ ಹಣ್ಣಿನ ರೂಪದಲ್ಲಿ, ಪೀಠೋಪಕರಣಗಳ ತಯಾರಿಕೆಗೆ, ಸಂಗೀತ ವಾದ್ಯ ತಯಾರಿಕೆಗೆ ಹೀಗೆ ಹಲವು ಆಯಾಮಗಳಲ್ಲಿ ಉಪಯೋಗವಾಗುವ ಹಲಸಿನ ಲಾಭಗಳನ್ನು ‘ದಶಾವತಾರ ಗಳು’ ಎಂದು ಕರೆದರೆ, ತಪ್ಪೇನಿಲ್ಲ ಅಲ್ಲವೆ?