ವಿನೇಶ್ ಫೋಗಟ್ ಆಯ್ಕೆ ಟ್ರಯಲ್ಸ್ ಸ್ಪರ್ಧೆಗೆ ಹೈಕೋರ್ಟ್ ನಕಾರ
Vinesh Phogat: ಫೋಗಟ್ 2025ರ ಜುಲೈನಲ್ಲಿ ತಾಯಿಯಾದರು ಮತ್ತು ತರುವಾಯ ತರಬೇತಿ ಹಾಗೂ ಸ್ಪರ್ಧೆಗಳಿಗೆ ಮರಳಿದರು. ಆಯ್ಕೆ ಟ್ರಯಲ್ಸ್‌ಗೆ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿ ಫೆಡರೇಷನ್ ಹೊರಡಿಸಿದ ಸುತ್ತೋಲೆಯ ಜಾರಿಗೆ ತಡೆ ನೀಡಬೇಕೆಂದು ಫೋಗಟ್ ಅರ್ಜಿಯಲ್ಲಿ ಕೋರಿದ್ದರು.
Vinesh Phogat -
ನವದೆಹಲಿ, ಸೆ. 11: ಹಿರಿಯರ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಿಸಲು ದೆಹಲಿ ಹೈಕೋರ್ಟ್ ಅನುಮತಿ ನಿರಾಕರಿಸಿದ ಪರಿಣಾಮ, ಅಂತಾರಾಷ್ಟ್ರೀಯ ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್ ಫೋಗಟ್ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ನಿಗದಿಪಡಿಸಿದ ಅರ್ಹತಾ ಮಾನದಂಡಗಳಿಂದ ಫೋಗಟ್ ಅವರಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು, ಗುರುವಾರ ತಡರಾತ್ರಿ ಅವರ ಮಧ್ಯಂತರ ಪರಿಹಾರದ ಮನವಿಯನ್ನು ವಜಾಗೊಳಿಸಿದರು. ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 14 ರಂದು ಆಯ್ಕೆ ಪ್ರಕ್ರಿಯೆ (ಟ್ರಯಲ್ಸ್) ನಡೆಯಲಿದೆ.
"ಮತ್ತೊಮ್ಮೆ ಹೇಳುವುದಾದರೆ, ಸೆಪ್ಟೆಂಬರ್ 7, 2026 ರ ಸುತ್ತೋಲೆಯ ಅಡಿಯಲ್ಲಿ ನಿಗದಿಪಡಿಸಲಾದ ಮಾನದಂಡಗಳು ಎಲ್ಲಾ ಕ್ರೀಡಾಪಟುಗಳಿಗೆ ಸಮಾನವಾಗಿ ಅನ್ವಯಿಸುತ್ತವೆ. ಯಾವುದೇ ಕಾರಣದಿಂದಾಗಿ ಪೂರ್ವನಿರ್ಧರಿತ ಸ್ಪರ್ಧೆ ಗಳಲ್ಲಿ ಭಾಗವಹಿಸದ ಕ್ರೀಡಾಪಟುಗಳು ಭಾರತ ಕುಸ್ತಿ ಫೆಡರೇಷನ್ ನಿಗದಿಪಡಿಸಿದ ಅರ್ಹತಾ ವರ್ಗಕ್ಕೆ ಒಳಪಡುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಹೆರಿಗೆ ರಜೆಯಿಂದ ಮರಳಿರುವ ವಿನೇಶ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳಾ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಹೈಕೋರ್ಟ್ ಈ ಆದೇಶ ನೀಡಿದೆ.
ವಿನೇಶ್ ಆಯ್ಕೆ ಪ್ರಕ್ರಿಯೆಯನ್ನು ಏಕೆ ಪ್ರಶ್ನಿಸಿದರು?
ಫೋಗಟ್ 2025ರ ಜುಲೈನಲ್ಲಿ ತಾಯಿಯಾದರು ಮತ್ತು ತರುವಾಯ ತರಬೇತಿ ಹಾಗೂ ಸ್ಪರ್ಧೆಗಳಿಗೆ ಮರಳಿದರು. ಆಯ್ಕೆ ಟ್ರಯಲ್ಸ್‌ಗೆ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿ ಫೆಡರೇಷನ್ ಹೊರಡಿಸಿದ ಸುತ್ತೋಲೆಯ ಜಾರಿಗೆ ತಡೆ ನೀಡಬೇಕೆಂದು ಫೋಗಟ್ ಅರ್ಜಿಯಲ್ಲಿ ಕೋರಿದ್ದರು.
Vinesh Phogat: ಏಷ್ಯನ್ ಕ್ರೀಡಾಕೂಟ; ವಿನೇಶ್‌ಗೆ ಅರ್ಹತೆ ನೀಡದ ಭಾರತೀಯ ಕುಸ್ತಿ ಒಕ್ಕೂಟ
ಫೋಗಟ್ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅಥವಾ ಸ್ವಯಂಚಾಲಿತ ಆಯ್ಕೆಯನ್ನು ಕೋರುತ್ತಿಲ್ಲ. ಬದಲಾಗಿ, ಅವರು ಆಯ್ಕೆ ಪ್ರಕ್ರಿಯೆಯ (ಟ್ರಯಲ್ಸ್) ಭಾಗವಾಗಲು ಅವಕಾಶವನ್ನು ಬಯಸುತ್ತಿದ್ದು, ಅಂತಿಮವಾಗಿ ತಮ್ಮ ಪ್ರದರ್ಶನದ ಆಧಾರದ ಮೇಲೆ ಭಾರತೀಯ ತಂಡದಲ್ಲಿ ತಮ್ಮ ಸ್ಥಾನ ನಿರ್ಧಾರವಾಗಬೇಕೆಂದು ಅವರು ಅಪೇಕ್ಷಿಸುತ್ತಿದ್ದಾರೆ. ಅವರು ಮೇ 30 ರಂದು ನಡೆದ ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ, ಕ್ವಾರ್ಟರ್-ಫೈನಲ್ ಪಂದ್ಯವನ್ನು ಗೆದ್ದು ಸೆಮಿ-ಫೈನಲ್ ತಲುಪಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ಗಳು ಕಝಾಕಿಸ್ತಾನ್‌ನ ಅಸ್ತಾನಾದಲ್ಲಿ ಅಕ್ಟೋಬರ್ 24 ರಿಂದ ನವೆಂಬರ್ 1 ರವರೆಗೆ ನಡೆಯಲಿವೆ.