ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shishir Hegde Column: ಇನ್ನೆರಡು ವಾರದಲ್ಲಿ ಅಮೆರಿಕಾದ ಮಧ್ಯಂತರ ಚುನಾವಣೆ !

ಮಸೂದೆ ಲೋಕಸಭೆಯ ನಂತರ ರಾಜ್ಯಸಭೆಗೆ ಬಂದು- ಅಲ್ಲಿಂದ ಅಧ್ಯಕ್ಷರಲ್ಲಿ ಹೋಗಿ ಕೊನೆಗೆ ಅದು ಕಾನೂನು ಆಗುತ್ತದೆ- ಬಿಲ್ ಪೂರ್ಣ ‘ಪಾಸ್’ ಆಗುತ್ತದೆ. ಇದು ನಮ್ಮಲ್ಲಿ. ಹಾಗೆಯೇ ಅಮೆರಿಕಾದಲ್ಲೂ ಎರಡು ಸದನಗಳಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಹೌಸ್) ಮತ್ತು ಸೆನೆಟ್. ಹೌಸ್ ರೆಪ್ರೆಸೆಂಟೇಟಿವ್ಸ್ 435 ಸೀಟುಗಳು. ನಮ್ಮಲ್ಲಿ ಲೋಕಸಭಾ ಸದಸ್ಯರಿದ್ದಂತೆ- ಕೆಳಮನೆ. ಇನ್ನು ಸೆನೆಟರ್ಸ್ 100 ಸೀಟು- ಪ್ರತೀ ರಾಜ್ಯಕ್ಕೆ ಎರಡು. ‌

ಇನ್ನೆರಡು ವಾರದಲ್ಲಿ ಅಮೆರಿಕಾದ ಮಧ್ಯಂತರ ಚುನಾವಣೆ !

-

ಶಿಶಿರಕಾಲ

ಟ್ರಂಪ್‌ನಿಗೆ ಉಚ್ಚಾಟನೆಯ ಪ್ರಯತ್ನ ಹೊಸತಲ್ಲ. ಆದರೆ ಈ ಬಾರಿಯ ಲೆಕ್ಕಾಚಾರ ಸ್ವಲ್ಪ ವಿಭಿನ್ನ. ಈಗ ನಡೆಯಲಿರುವ ಚುನಾವಣೆಯಲ್ಲಿ ಟ್ರಂಪ್‌ನ ಪಕ್ಷ ಕೆಳಮನೆಯಲ್ಲಿ, ಅಥವಾ ಮೇಲ್ಮನೆಯಲ್ಲಿ ಅಥವಾ ಎರಡರಲ್ಲೂ ಬಹುಮತ ಕಳೆದುಕೊಳ್ಳಬಹುದು ಎಂದು ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಅವರ ಪಕ್ಷ ಸೋತರೆ ಟ್ರಂಪ್ ಇಸ್ತಿ- ಕೊಡುತ್ತಾನೆಯೇ? ಇಲ್ಲ. ಹಾಗಾದರೆ ಈ ಚುನಾವಣೆಯ ಮಹತ್ವ ಏನು?

ಅಮೆರಿಕಾ ದೇಶ ಮತ್ತೊಮ್ಮೆ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಅಲ್ಲಾ, ಟ್ರಂಪ್ ಈಗಿತ್ತಲಾಗೆ ಅಧ್ಯಕ್ಷನಾದದ್ದಲ್ಲವೇ? ಹೌದು- ಟ್ರಂಪ್ ಆಡಳಿತಕ್ಕೆ ಬಂದು ಈಗಿನ್ನೂ ಭರ್ತಿ ಎರಡು ವರ್ಷ ಕಳೆದಿಲ್ಲ. ಹಾಗಿರುವಾಗ ಈಗ ಏನಿದು ಇಲೆಕ್ಷನ್? ಏನಿದು ಅಮೆರಿಕಾದ ಮಧ್ಯಂತರ ಚುನಾವಣೆ, ಅದರ ಹಕೀಕತ್ತು? ಇದು ನಮ್ಮಲ್ಲಿ ಖಾಲಿ ಆದ ಜಾಗ ತುಂಬಿಸುವ ಉಪ ಚುನಾವಣೆ ಮಾಡುತ್ತಾರಲ್ಲ, ಅದಲ್ಲ. ಇದು ಒಂದು ಇಡೀ ದೇಶ ಅಧ್ಯಕ್ಷರ ಅಧಿಕಾರಾವಧಿಯ ಮಧ್ಯದಲ್ಲಿ ಜನನಾಯಕರನ್ನು ಆಯ್ಕೆ ಮಾಡುವ ಮರುಚುನಾವಣೆ.

ಯಾರಿಗೆ? ಇಂತಹ ವ್ಯವಸ್ಥೆ ನಮ್ಮಲ್ಲಿಲ್ಲ. ಇದೊಂದು ಭಿನ್ನ ಪ್ರಜಾಪ್ರಭುತ್ವ ವ್ಯವಸ್ಥೆ. ಬಹಳ ಮಜವಾಗಿದೆ- ಸ್ವಲ್ಪ ಸುಲಭವಾಗಿಸಿ, ಸರಳೀಕರಿಸಿ, ಹೋಲಿಸಿ ವಿವರಿಸುತ್ತೇನೆ. ಸದ್ಯಕ್ಕಂತೂ ಹಲವು ಕಾರಣಗಳಿಂದ ಇದು ಜಗತ್ತಿಗೇ ಅತ್ಯಂತ ಮಹತ್ವದ ಚುನಾವಣೆ. ಇಂದಿನ ಅಂತಾರಾಷ್ಟ್ರೀಯ ಸನ್ನಿವೇಶ, ಪೆಟ್ರೋಲ್ ಬೆಲೆ, ತುಟ್ಟಿ- ಹಣದುಬ್ಬರ, ಯುದ್ಧ, ಟ್ರಂಪ್, ಎಐ ಇತ್ಯಾದಿ ಕಾರಣಗಳಿಂದ ಈಗ ಇದಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ.

ಇದನ್ನೂ ಓದಿ: Shishir Hegde Column: ಉತ್ತರಗಳಿಗಿಂತ ಪ್ರಶ್ನೆಗಳೇ ನಮ್ಮ ಬಂಡವಾಳ ಬಿಚ್ಚಿಡುತ್ತವೆ

ಹಾಗಾಗಿ ಈ ಚುನಾವಣೆ, ಏನು ಎತ್ತ ಇತ್ಯಾದಿ ಸ್ವಲ್ಪ ಅರ್ಥ ಮಾಡಿಕೊಳ್ಳೋಣ. ಮೊದಲು- ನಮ್ಮಲ್ಲಿ ಹೇಗೆ? ಲೋಕಸಭೆ ಚುನಾವಣೆ ಆಗುತ್ತದೆ. ಬಹುಮತ ಪಡೆದವರು ಪ್ರಧಾನಿಯಾಗುತ್ತಾರೆ. ಲೋಕಸಭೆಯಲ್ಲಿ ಬಹುಮತ ಇರುವಲ್ಲಿಯವರೆಗೆ ಪ್ರಧಾನಿಯಾಗಿಯೇ ಐದು ವರ್ಷ ಮುಗಿಸುತ್ತಾರೆ. ಸಂಸತ್ತಿನಲ್ಲಿ ಆಡಳಿತ ಪಕ್ಷಕ್ಕೆ ಬಹುಮತವಿದ್ದರೆ ಪ್ರಧಾನಿಗೆ ಸುಲಭ. ಕಾನೂನು- ಬಿಲ್ ಸುಲಭದಲ್ಲಿ ಅಂಗೀಕಾರವಾಗುತ್ತದೆ. ಬಹುಮತವಿಲ್ಲದ ಸಮ್ಮಿಶ್ರ ಸರಕಾರವಾದರೆ ಇಡೀ ವ್ಯವಸ್ಥೆ- ಮಶೀನ್ ಹೇಗೆ ತೆವಳಿ ಒದ್ದಾಡುತ್ತದೆ ಎನ್ನುವುದೆಲ್ಲ ಗೊತ್ತಿದ್ದದ್ದೇ ಬಿಡಿ.

ಮಸೂದೆ ಲೋಕಸಭೆಯ ನಂತರ ರಾಜ್ಯಸಭೆಗೆ ಬಂದು- ಅಲ್ಲಿಂದ ಅಧ್ಯಕ್ಷರಲ್ಲಿ ಹೋಗಿ ಕೊನೆಗೆ ಅದು ಕಾನೂನು ಆಗುತ್ತದೆ- ಬಿಲ್ ಪೂರ್ಣ ‘ಪಾಸ್’ ಆಗುತ್ತದೆ. ಇದು ನಮ್ಮಲ್ಲಿ. ಹಾಗೆಯೇ ಅಮೆರಿಕಾದಲ್ಲೂ ಎರಡು ಸದನಗಳಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಹೌಸ್) ಮತ್ತು ಸೆನೆಟ್. ಹೌಸ್ ರೆಪ್ರೆಸೆಂಟೇಟಿವ್ಸ್ 435 ಸೀಟುಗಳು. ನಮ್ಮಲ್ಲಿ ಲೋಕಸಭಾ ಸದಸ್ಯರಿದ್ದಂತೆ- ಕೆಳಮನೆ. ಇನ್ನು ಸೆನೆಟರ್ಸ್ 100 ಸೀಟು- ಪ್ರತೀ ರಾಜ್ಯಕ್ಕೆ ಎರಡು. ‌

ಇವೆರಡೂ ಸೇರಿದರೆ ಅದು ಸಂಸತ್ತು- ‘ಕಾಂಗ್ರೆಸ್’. ಇಲ್ಲಿ ಕೂಡ ಮಸೂದೆಗಳು, ಕಾನೂನು ಎಲ್ಲವೂ ಇವೆರಡು ಸದನಗಳಲ್ಲಿ ಪಾಸ್ ಆಗಬೇಕು- ನಂತರ ಅಧ್ಯಕ್ಷರಲ್ಲಿ ಹೋಗಿ ಅಲ್ಲಿ ಸಹಿಯಾಗಬೇಕು. ವ್ಯತ್ಯಾಸ ಇರುವುದೇ ಇವರೆಲ್ಲರ ಅವಧಿಗಳಲ್ಲಿ. ನಮ್ಮಲ್ಲಿ ಪ್ರಧಾನಿ, ಎಂಪಿಗಳದ್ದು ಒಂದೇ ಅವಧಿ- ಐದು ವರ್ಷ. ಆದರೆ ಅಮೆರಿಕಾದಲ್ಲಿ ಅಧ್ಯಕ್ಷನದು ನಾಲ್ಕು ವರ್ಷ, 435 ರೆಪ್ರೆಸೆಂಟೇಟಿವ್ಸ್‌ʼಗಳದ್ದು ಎರಡೇ ವರ್ಷ ಅವಧಿ. ನೂರು ಸೆನೆಟರ್‌ಗಳದ್ದು- ಮೇಲ್ಮನೆಯವರದ್ದು ಆರು ವರ್ಷದ ಅವಧಿ. ಎಲ್ಲವೂ ಪ್ರತ್ಯೇಕ.

S H 2310

ಅಧ್ಯಕ್ಷರ ಚುನಾವಣೆ ನಾಲ್ಕು ವರ್ಷಕ್ಕೊಮ್ಮೆ. ನೇರ ಮತದಾರರಿಂದ ಆಯ್ಕೆ. ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮಂಗಳವಾರ ಚುನಾವಣೆ. ಜನವರಿ 20ಕ್ಕೆ ಪ್ರಮಾಣ ವಚನ. ಈ ದಿನಗಳು ಫಿಕ್ಸ್- ಆಚೀಚೆ ಇಲ್ಲ. ಅಧ್ಯಕ್ಷೀಯ ಚುನಾವಣೆಯ ಜೊತೆಯಲ್ಲಿ 435 ರೆಪ್ರೆಸೆಂಟೇಟಿವ್ಸ್‌ʼಗಳದ್ದು ಮತ್ತು ಅವಧಿ ಮುಗಿಸಿ ನಿರ್ಗಮಿಸುವ ಮೇಲ್ಮನೆಯ ನೂರು ಸ್ಥಾನಗಳಲ್ಲಿ 1/3 ಭಾಗ (33/34) ಸ್ಥಾನಗಳಿಗೆ ಚುನಾವಣೆ. ಅದಾಗಿ ಸರಿಯಾಗಿ ಎರಡು ವರ್ಷಕ್ಕೆ ಈ ಎಲ್ಲಾ 435 ರೆ (ಸಂಸದರು) ಪುನಃ ಸ್ಪರ್ಧೆಗಿಳಿಯಬೇಕು. ಅವರ ಜೊತೆ ಮೇಲ್ಮನೆಯ 1/3 ಭಾಗ. ಮತ್ತೆ ಚುನಾವಣೆ. ಈಗ ಆ ಅಮೆರಿಕಾದ ಮಧ್ಯಂತರ ಚುನಾವಣೆ. ಇಲ್ಲಿ ಹೇಗೆಂದರೆ ಮೇಲ್ಮನೆ ಮತ್ತು ಕೆಳಮನೆ ಎರಡೂ ಸದನಗಳು ವಿಪಕ್ಷದವರ ಬಹುಮತವಿರಬಹುದು.

ಅಧ್ಯಕ್ಷರು ಮಾತ್ರ ಬೇರೆ ಪಕ್ಷದವರಾಗಿರಬಹುದು. ಟ್ರಂಪ್ ಸರಕಾರವೇ ಮುಂದುವರಿಯುತ್ತದೆ ಎಂದಾದರೆ ಇದೆಂತಹ ನಾನ್ಸೆನ್ಸ್ ಚುನಾವಣೆ? ಪ್ರಶ್ನೆ ಸಹಜ. ಈಗ ಏಕೆ ಮಹತ್ವ ಎಂದರೆ ಇಷ್ಟು ಕಾಲ- ಡೊನಾಲ್ಡ್ ಟ್ರಂಪ್ ಅಧ್ಯಕ್ಷನಾದಾಗಿನಿಂದ ಇಲ್ಲಿಯ ವರೆಗೆ- ಕಳೆದ ಎರಡು ವರ್ಷ ಹೌಸ್ ಮತ್ತು ಸೆನೆಟ್ ಎರಡೂ ಸದನಗಳಲ್ಲಿ (ಒಟ್ಟಾಗಿ ಕಾಂಗ್ರೆಸ್) ಟ್ರಂಪ್‌ನ ಪಕ್ಷ ರಿಪಬ್ಲಿಕನ್ ಪಕ್ಷದ ಬಹುಮತವಿದೆ. ‌

ಹೇಗೆಂದರೆ- ಟ್ರಂಪ್ ಇಂಥದ್ದೊಂದು ಕಾನೂನು ಮಾಡಬೇಕು ಎಂದರೆ ಎರಡೂ ಸದನಗಳು ಅದನ್ನು ಪಾಸ್ ಮಾಡಿ ಟ್ರಂಪ್‌ನ ಟೇಬಲ್ಲಿಗೆ ತಂದಿಡುತ್ತವೆ. ಸದ್ಯ ಇಡೀ ಸರಕಾರಿ ಯಂತ್ರ ಅವರದೇ ಪಕ್ಷದ ಕೈಯಲ್ಲಿದೆ. ಆದರೆ ಈಗ ಈ ಚುನಾವಣೆಯಲ್ಲಿ ಅದೆಲ್ಲ ಬದಲಾಗಬಹುದು ಎನ್ನಲಾಗುತ್ತಿದೆ. ಅದರರ್ಥ ಟ್ರಂಪ್ ಪಕ್ಷ ಕೆಳಮನೆಯಲ್ಲಿ, ಅಥವಾ ಮೇಲ್ಮನೆಯಲ್ಲಿ ಅಥವಾ ಎರಡರಲ್ಲೂ ಬಹುಮತ ಕಳೆದುಕೊಳ್ಳಬಹುದು.

ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಟ್ರಂಪ್‌ನ ರಿಪಬ್ಲಿಕನ್ ಪಕ್ಷ ಎರಡೂ ಸದನಗಳಲ್ಲಿ ಬಹುಮತ ಕಳೆದುಕೊಳ್ಳಬಹುದು ಎನ್ನುತ್ತವೆ. ಹಾಗಾದರೆ ಅವರ ಪಕ್ಷ ಸೋತರೆ ಟ್ರಂಪ್ ಇಸ್ತಿ- ಕೊಡುತ್ತಾನೆಯೇ? ಇಲ್ಲ. ಅದಾದರೂ ಟ್ರಂಪ್ ಅಧ್ಯಕ್ಷನಾಗಿಯೇ ಮುಂದುವರಿಯು ತ್ತಾನೆ- ಇನ್ನೆರಡು ವರ್ಷ. ಆದರೆ ಎರಡರಲ್ಲಿ ಒಂದು ಸದನ ಕೈ ತಪ್ಪಿದರೂ ಟ್ರಂಪ್ ಪಕ್ಷಕ್ಕೆ ಹಿನ್ನಡೆ. ಪಕ್ಷಕ್ಕಷ್ಟೇ ಅಲ್ಲ. ಟ್ರಂಪ್ ತರಬೇಕೆನ್ನುವ ಮಸೂದೆಗಳಿಗೆ ತಡೆ ಬೀಳುತ್ತದೆ. ಖುದ್ದು ಟ್ರಂಪ್‌ನಿಗೂ ಸರಪಳಿ ಕಟ್ಟಿದ ಹಾಗಾಗುತ್ತದೆ.

ತಡೆ ಎಂದರೆ ಯಾವುದೇ ಒಂದು ಮಸೂದೆಯೂ ಪಾಸ್ ಆಗುವುದಿಲ್ಲ ಎಂದಲ್ಲ. ಸರಕಾರಿ ವ್ಯವಸ್ಥೆ ಕೆಲಸ ಹಾಗೆಯೇ ಮಾಡುತ್ತದೆ- ಆದರೆ ಮಸೂದೆ ಒಪ್ಪಿಗೆ ವಿಷಯ ಬಂದಾಗ ಎಲ್ಲವೂ ವಿರೋಧ ಪಕ್ಷ- ಡೆಮಾಕ್ರಟಿಕ್ ಪಕ್ಷದ ಅಣತಿಯಂತೆ ನಡೆಯಬೇಕು. ಇದು ಕೇವಲ ಮಸೂದೆ- ಬಹುಮತದ ವಿಷಯ ಮಾತ್ರವಲ್ಲ.

ಒಂದು ವೇಳೆ ಟ್ರಂಪ್‌ನ ವಿರೋಧ ಪಕ್ಷ ಎರಡೂ ಸದನದಲ್ಲಿ ಬಹುಮತ ಪಡೆದರೆ- ಕಾನೂನು, ಮಸೂದೆ ಮಂಡಿಸುವ ಕಮಿಟಿಗಳು ಕೂಡ ಅವರ ನಿಯಂತ್ರಣಕ್ಕೆ ಬಂದುಬಿಡುತ್ತದೆ. ಅಂಕುಶ ಎಂದರೆ ಹೆಚ್ಚು ಕಡಿಮೆ ಸರಕಾರವೇ ವಿರೋಧಪಕ್ಷದ್ದಾಗಿ ಬಿಡುತ್ತದೆ ಎಂದರೂ ತಪ್ಪಲ್ಲ. ಅಧ್ಯಕ್ಷ ರಿಪಬ್ಲಿಕನ್ ಪಕ್ಷದವರು- ಸರಕಾರದ ನಿಯಂತ್ರಣ ಡೆಮಾಕ್ರಟಿಕ್ ಪಕ್ಷಕ್ಕೆ.

ಮುಖ್ಯವಾಗಿ ಅಮೆರಿಕಾದ ಕೇಂದ್ರ ಸರಕಾರದ ಎಲ್ಲಾ ಖರ್ಚು ವೆಚ್ಚ, ಇಲಾಖೆಗೆ ಕೊಡುವ ಹಣ, ಆ ಮೂಲಕ ಸರಕಾರಿ ಇಲಾಖೆಗಳ ಕೆಲಸದ ಮೇಲಿನ ನಿಯಂತ್ರಣ ವಿರೋಧ ಪಕ್ಷಕ್ಕೆ. ಹುಲ್ಲು ಕೊಡೋದು ಒಬ್ಬರು- ಹಾಲು ಕರೆಯೋದು ಇನ್ನೊಬ್ಬರು ಎಂಬಂತೆ. ಆ ಕಾರಣಕ್ಕೆ ಈ ಚುನಾವಣೆ ಮಹತ್ವದ್ದು. ಅಮೆರಿಕಾದಲ್ಲಿ ಇನ್ನೊಂದು ಮಜಬೂತ್ ಕಮಿಟಿ ವ್ಯವಸ್ಥೆ ಇದೆ. ಅದರ ಹೆಸರು ಗವರ್ನಮೆಂಟ್ ಓವರ್ಸೈಟ್ ಕಮಿಟಿ- ಸರಕಾರ ಸರಿಯಾಗಿ ಕೆಲಸ ಮಾಡುತ್ತದೆಯೇ ಇಲ್ಲವೇ ಎಂದು ನೋಡಿಕೊಳ್ಳುವ ಕಮಿಟಿ ಅದು. ಆ ಕಮಿಟಿಗೆ ಎಲ್ಲಿಲ್ಲದ ಪ್ರಶ್ನಿಸುವ, ಸರಕಾರದ ಯಾವುದೇ ವಿಭಾಗವನ್ನು ಬೇಕಾದರೂ ತನಿಖೆ ಮಾಡುವ ಶಕ್ತಿ ನೀಡಲಾಗಿದೆ. ಈ ಕಮಿಟಿ ಅಕ್ಷರಶಃ ಅಮೆರಿಕಾದ ಯಾರನ್ನೇ, ಯಾವುದೇ ರಾಜಕಾರಣಿ, ಅಧಿಕಾರಿಗಳು, ಮಂತ್ರಿಗಳು, ಕಂಪನಿಯ ಸಿಇಒ ಹೀಗೆ ಯಾರನ್ನೇ ಸಕಾರಣ ಕೊಟ್ಟು ಕರೆಸಿ ಪ್ರಶ್ನಿಸಬಹುದು.

ಖುದ್ದು ಅಮೆರಿಕಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಬೇಕಾದರೂ ಪ್ರಶ್ನೆಗೆ ಕರೆಸಬಹುದು. ಆದರೆ ರಾಜತಾಂತ್ರಿಕ ಕಾರಣಕ್ಕೆ ಅವರಿಬ್ಬರನ್ನು ಕರೆಸುವುದಿಲ್ಲ. ಬಿಟ್ಟರೆ ಇನ್ನು ಯಾರನ್ನು ಬೇಕಾದರೂ. ಸದ್ಯ ಆ ಕಮಿಟಿಯ ಮುಖ್ಯಸ್ಥ- ಟ್ರಂಪ್ ಪಕ್ಷದವರ ಕೈಯಲ್ಲಿದೆ. ಹಾಗಾಗಿ ಟ್ರಂಪ್ ಆಡಳಿತವನ್ನು, ಮಸೂದೆಗಳನ್ನು, ಸರಕಾರಿ ನಡೆ, ಖರ್ಚು ವೆಚ್ಚ ಹೀಗೆ ಯಾವುದನ್ನೂ ಈ ಕಮಿಟಿ ಪ್ರಶ್ನಿಸುವುದಿಲ್ಲ.

ಎರಡೂ ಸದನ ಟ್ರಂಪ್ ಪಕ್ಷದವರ ಕೈ ತಪ್ಪಿದರೆ ಇದು ಬದಲಾಗಿಬಿಡುತ್ತದೆ. ಸುದ್ದಿಗಳ ಪ್ರಕಾರ ಡೆಮೋಕ್ರೆಟಿಕ್ ಪಕ್ಷ ಈಗ ಬಹುಮತ ಪಡೆಯಬಹುದು. ಹಾಗಾಗಿ ಟ್ರಂಪ್ ಮತ್ತು ಅವನ ಸರಕಾರೀ ಇಲಾಖೆಗಳ ತನಿಖೆಗೆ ಈ ಡೆಮೋಕ್ರೆಟಿಕ್ ಪಕ್ಷದವರು ತಯಾರಿ ಆರಂಭಿಸಿಬಿಟ್ಟಿದ್ದಾರಂತೆ.

ಒಟ್ಟಾರೆ- ಒಂದು ವೇಳೆ ಎರಡೂ ಸದನ ಕೈ ತಪ್ಪಿ ಹೋಯ್ತು ಎಂದಾದರೆ ಟ್ರಂಪ್ ಮತ್ತು ಅವನ ಆಡಳಿತದ ಸುತ್ತ ತನಿಖೆಗಳು ಮುತ್ತಿಕೊಂಡು ಬಿಡುತ್ತವೆ. ಇದೆಲ್ಲದರ ಜೊತೆಯಲ್ಲಿ ವಿರೋಧಪಕ್ಷಕ್ಕೆ ಟ್ರಂಪ್‌ನನ್ನು ಉಚ್ಚಾಟಿಸಲು ಅನುಮೋದಿಸುವ ಶಕ್ತಿಯೂ ಬಂದುಬಿಡುತ್ತದೆ!

ಟ್ರಂಪ್ ಹಿಂದಿನ ಬಾರಿ ಅಧ್ಯಕ್ಷನಾದಾಗ ಕೂಡ ಮೊದಲೆರಡು ವರ್ಷ ಅವನದೇ ರಿಪಬ್ಲಿಕನ್ ಪಕ್ಷದ ಬಹುಮತವಿತ್ತು. ಆಮೇಲೆ ಕೆಳಮನೆ (ಹೌಸ್) ವಿರೋಧಪಕ್ಷದವರ ಪಾಲಾಗಿತ್ತು. ಆಗ 2019ರಲ್ಲಿ ಯುಕ್ರೇನ್‌ಗೆ ಹಣ ಕೊಡುವ ವಿಷಯದಲ್ಲಿ ಆತ ಅಧಿಕಾರ ದುರುಪಯೋಗಪಡಿಸಿಕೊಂಡ ಎಂಬ ಕಾರಣವಿಟ್ಟು ಡೆಮಾಕ್ರಟಿಕ್ ಪಕ್ಷ ಟ್ರಂಪ್‌ನನ್ನು ಅಧ್ಯಕ್ಷ ಪದವಿಯಿಂದ ಉಚ್ಚಾಟಿಸಲು ಅನುಮೋದಿಸಿತು.

ಮೇಲ್ಮನೆ- ಸೆನೆಟ್‌ನಲ್ಲಿ ಟ್ರಂಪ್ ಪಕ್ಷದ್ದೇ ಬಹುಮತ ಇದ್ದದ್ದರಿಂದ ಅಲ್ಲಿ ಉಚ್ಚಾಟನೆ ಅರ್ಧಕ್ಕೇ ನಿಂತಿತು. ಹಿಂದಿನ ಬಾರಿ ಬೈಡನ್ ಅಧ್ಯಕ್ಷನಾಗಿ ಗೆದ್ದು- ಆಡಳಿತದಲ್ಲಿದ್ದ ಟ್ರಂಪ್ ಎಲೆಕ್ಷನ್‌ನಲ್ಲಿ ಸೋತು- ಅಲ್ಲಿ ವಾಷಿಂಗ್ಟನ್ ಡಿಸಿನಲ್ಲಿ ಗಲಾಟೆಯಾಯಿತಲ್ಲ. ಅದಾದ ಮೇಲೆ ಕೂಡ ಎರಡನೇ ಬಾರಿ ಟ್ರಂಪ್‌ನನ್ನ ಉಚ್ಚಾಟಿಸುವ ಪ್ರಯತ್ನವಾಗಿತ್ತು.

ಟ್ರಂಪ್ ಹಿಂದಿನ ಆಡಳಿತದ ಕೊನೆಯ ಏಳು ದಿನ ಇರುವಾಗ ನಡೆದಿತ್ತು. ಅವನನ್ನು ಉಚ್ಚಾಟಿಸಲು ಆಗ ಕೆಳಮನೆಯಲ್ಲಿ ಬಹುಮತದಿಂದ ಮತ್ತು ಮೇಲ್ಮನೆಯ 57/43 ವೋಟ್ ಬಿದ್ದಿತ್ತು. ಮೇಲ್ಮನೆಯ ಹತ್ತು ವೋಟ್‌ಗಳಿಂದ (ಅಧ್ಯಕ್ಷರನ್ನು ಉಚ್ಚಾಟಿಸಲು ಮೇಲ್ಮನೆಯ 67/100 ವೋಟ್ ಬೇಕು) ಕೊನೆಯ ವಾರ ಉಚ್ಚಾಟನೆಯಾಗುವುದು ತಪ್ಪಿತ್ತು. ಟ್ರಂಪ್‌ನಿಗೆ ಉಚ್ಚಾಟನೆಯ ಪ್ರಯತ್ನ ಹೊಸತಲ್ಲ. ಆದರೆ ಈ ಬಾರಿಯ ಲೆಕ್ಕಾಚಾರ ಸ್ವಲ್ಪ ವಿಭಿನ್ನ.

ಒಂದು ವೇಳೆ ಎರಡೂ ಸದನದಲ್ಲಿ ವಿರೋಧ ಪಕ್ಷ- ಡೆಮಾಕ್ರಟಿಕ್ ಪಕ್ಷವೇ ಬಹುಮತ ಪಡೆದರೂ ಮೇಲ್ಮನೆ ಯಲ್ಲಿ 67 ಜನ ವೋಟ್ ಮಾಡಬೇಕು. ಡೆಮಾಕ್ರಟಿಕ್ ಪಕ್ಷಕ್ಕೆ ಸೆನೆಟ್- ಮೇಲ್ಮನೆಯಲ್ಲಿ ಅಷ್ಟು ಸ್ಥಾನ ಇರುವುದಿಲ್ಲ. ಹಾಗಾಗಿ ಟ್ರಂಪ್ ಉಚ್ಚಾಟನೆ ಸಾಧ್ಯವಿಲ್ಲದಿದ್ದರೂ ಪ್ರಯತ್ನವಂತೂ ನಡೆಯುತ್ತದೆ ಎನ್ನುವುದು ರಾಜಕೀಯ ವಿಶ್ಲೇಷಕರ ಭವಿಷ್ಯವಾಣಿ.

ಒಂದಿಷ್ಟು ರಾಜಕೀಯ ದೊಂಬರಾಟಗಳು. ಹಾಗೊಮ್ಮೆ ಬಹುಮತ ಬಂದು- ಅವನದೇ ಪಕ್ಷದ ಹತ್ತು ಹನ್ನೆರಡು ಮಂದಿ ಸೆನೆಟರ್‌ಗಳು ಅವನ ವಿರುದ್ಧ ತಿರುಗಿ ಬಿದ್ದರೆ ಆಗ ಮಾತ್ರ ಟ್ರಂಪ್ ಉಚ್ಚಾಟನೆ ಆಗಬಹುದು. ಇವೆಲ್ಲ ಹಾಗಾದರೆ- ಹೀಗಾದರೆ ಎಂಬ ಆದರೆಗಳ ಲೆಕ್ಕಾಚಾರ. ಆದರೆ ಟ್ರಂಪ್‌ನ ಪಕ್ಷ ಬಹುಮತ ಕಳೆದುಕೊಂಡರೆ ಅಂಕುಶ ಡೆಮಾಕ್ರಟಿಕ್ ಪಕ್ಷದ ಕೈ ಸೇರಲಿದೆ. ಅದಲ್ಲದೆ ಟ್ರಂಪ್ ಪಕ್ಷ ಎರಡರಲ್ಲೂ ಬಹುಮತ ಉಳಿಸಿಕೊಂಡರೆ ಇಂದಿನ ಸ್ಥಿತಿ ಮುಂದುವರಿಯುತ್ತದೆ- ಒಂದು ಚಿಕ್ಕ ಬ್ರೇಕ್‌ನ ನಂತರ. ಹಾಗಾದರೆ ಸದ್ಯದ ಸಮೀಕ್ಷೆಗಳಲ್ಲಿ ಟ್ರಂಪ್ ಪಕ್ಷ ಸೋಲಲಿದೆ ಎಂದೇಕೆ ಹೇಳಲಾಗುತ್ತಿದೆ? ಕಾರಣಗಳು ಹಲವಾರು.

ಆ ಸಾಲಿನಲ್ಲಿ ಮೊಟ್ಟ ಮೊದಲನೆಯ ಜಾಗದಲ್ಲಿ ನಿಲ್ಲುವುದು ಹಣದುಬ್ಬರ. ಸಾಂಕ್ರಾಮಿಕದ ನಂತರ ಗಗನಕ್ಕೇರಿದ್ದ ದಿನಸಿ ಬೆಲೆ- ಈಗಂತೂ, ಕಳೆದ ಎರಡು ವರ್ಷದಲ್ಲಿ ಇನ್ನಷ್ಟು ತಾರಕಕ್ಕೇರಿದೆ. ನಿಮಗೆ ಉದಾಹರಣೆ ಹೇಳಬೇಕೆಂದರೆ ನಮ್ಮ ಮನೆಯಲ್ಲಿ ಎರಡು ವಾರಕ್ಕೊಮ್ಮೆ ದಿನಸಿಗೆ ನೂರು ಡಾಲರ್ ಬೇಕಾಗುತ್ತಿತ್ತು. ಈಗ ಅಷ್ಟೇ ಸಾಮಾನು ಅಂಗಡಿಯಿಂದ ತರಬೇಕೆಂದರೆ ಇನ್ನೂರು ಡಾಲರ್ ಬೇಕು. ಅಷ್ಟು. ದಿನಸಿ ಮಾತ್ರವಲ್ಲ, ಬಹುತೇಕ ಖರ್ಚು ದುಪ್ಪಟ್ಟಾಗಿದೆ- ಈ ಬಿಸಿ ಅಮೆರಿಕನ್ನರಿಗೆಲ್ಲ ಅಂಗಡಿಯ ಕೌಂಟರಿನಲ್ಲಿ ನಿಂತಾಗ, ಕ್ರೆಡಿಟ್ ಕಾರ್ಡ್ ಎಳೆಯುವಾಗಲೆಲ್ಲ ಅನುಭವಕ್ಕೆ ಬರುತ್ತಿದೆ.

ಜೊತೆಯಲ್ಲಿ ಪೆಟ್ರೋಲ್ ಬೆಲೆ. ಇಲ್ಲಿ ಗ್ಯಾಲನ್ ಲೆಕ್ಕ. ಮೊದಲೆಲ್ಲ ಸುಮಾರು 2.5 ಡಾಲರ್‌ಗೆ ಒಂದು ಗ್ಯಾಲನ್ ಪೆಟ್ರೋಲ್ ಸಿಗುತ್ತಿತ್ತು. ಹೆಚ್ಚು ಕಡಿಮೆ ಏಳೆಂಟು ವರ್ಷಕ್ಕಿಂತ ಜಾಸ್ತಿ ಅದೇ ಬೆಲೆಯನ್ನು ನಾನು ನೋಡಿದ್ದೇನೆ. ಈಗ ಅದೆಲ್ಲ ಬದಲಾಗಿ ಒಂದು ಗ್ಯಾಲನ್‌ಗೆ 5 ಡಾಲರ್‌ಗೆ ಬಂದು ಮುಟ್ಟಿದೆ. ಇಂಧನ ಕೂಡ ದುಪ್ಪಟ್ಟು. ಚಳಿ ಪ್ರದೇಶದಲ್ಲಿ ಇಂಧನ ಎಂದರೆ ವಾಹನಕ್ಕಷ್ಟೇ ಅಲ್ಲ- ಮನೆ ಬಿಸಿಯಾಗಿಡಲು, ನೀರು ಬಿಸಿಯಾಗಿಸಲು, ಅಡುಗೆಗೆ- ಹೀಗೆ ಎಲ್ಲದಕ್ಕೂ ಇಂಧನವಿಲ್ಲದೆ ಬದುಕಿಲ್ಲ.

ಒಟ್ಟಾರೆ ಹಣದುಬ್ಬರ ಕೇವಲ ಸಂಖ್ಯೆಯಾಗಿ ಉಳಿದಿಲ್ಲ. ಅಮೆರಿಕನ್ನರ ಕಿಸೆ ಸಿಕ್ಕಾಪಟ್ಟೆ ಬಿಸಿಯಾ ಗಿದೆ, ಮತದಾರರ ಅನುಭವಕ್ಕೆ ಬರುತ್ತಿದೆ. ಇರಾನ್ ಯುದ್ಧ, ಪೆಟ್ರೋಲ್ ಬೆಲೆ, ಹಣದುಬ್ಬರ, ಎಪ್‌ಸ್ಟೀನ್ ಫೈಲ್ಸ್, ವಿದೇಶಾಂಗ ನೀತಿ, ಅಧ್ಯಕ್ಷರ ನಡತೆ, ವಲಸಿಗರನ್ನು ನಡೆಸಿಕೊಂಡ ರೀತಿ ಇವೆಲ್ಲ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವ ಮುಖ್ಯ ವಿಚಾರಗಳು. ವಿದೇಶಿ ಆಮದಿನ ಮೇಲೆ ಹಾಕಿರುವ ಹೆಚ್ಚಿನ ಸುಂಕಗಳಿಂದಾಗಿ ಸಾಮಾಗ್ರಿಗಳು ತುಟ್ಟಿಯಾದದ್ದು ಒಂದು ಕಡೆ. ‌

ಆ ಹೊರದೇಶದವರು ಅಮೆರಿಕಾದ ಆಮದಿನ ಮೇಲೆ ಪ್ರತ್ಯುತ್ತರ ಸುಂಕ ಹಾಕಿರುವುದು ಇನ್ನೊಂದು ಕಡೆ. ಇದರಿಂದ ಅಮೆರಿಕಾದ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೊಡೆತ ಬಿದ್ದಿದೆ. ಹಾಗಾಗಿ ಕೃಷಿಕರೂ ದೇಶಾದ್ಯಂತ ಶಾಖ ಅನುಭವಿಸುತ್ತಿದ್ದಾರೆ. ಈ ಅಸಮಾಧಾನಗಳು ಹೌದೆನ್ನುವ ದಿಕ್ಕಿನಲ್ಲಿಯೇ ಸಮೀಕ್ಷೆಗಳು ಬೆರಳು ತೋರಿಸುತ್ತಿವೆ.

ರಾಯಿಟರ್ಸ್ ಮತ್ತು ಇನ್ನೊಂದಿಷ್ಟು ಸಮೀಕ್ಷೆಗಳ ಪ್ರಕಾರ- ಟ್ರಂಪ್ ಜನಪ್ರಿಯತೆ ಈಗ ಶೇ. 31ಕ್ಕೆ ಇಳಿದಿದೆ. ಶೇ. 70ಕ್ಕಿಂತ ಜಾಸ್ತಿ ಮತದಾರರು ಟ್ರಂಪ್ ಆಳ್ವಿಕೆಯನ್ನು ಮೆಚ್ಚುತ್ತಿಲ್ಲವಂತೆ. ಕೆಳಮನೆ ಯಲ್ಲಿ ಟ್ರಂಪ್ ಪಕ್ಷ ಸೋಲಬಹುದು, ಮೇಲ್ಮನೆಯಲ್ಲಿ ಬಹುಮತ ಉಳಿಯಬಹುದು ಎನ್ನುವುದು ಹೆಚ್ಚಿನವರ ಊಹೆ. ಟ್ರಂಪ್ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಬಹುದೇ? ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮಂಗಳವಾರ- ನವೆಂಬರ್ 3ಕ್ಕೆ ಚುನಾವಣೆ. ಅಂದೇ ಡ್ರಾಫ್ಟ್ ದಿನದೊಳಗೆ ಫಲಿತಾಂಶ!

ಅಮೆರಿಕಾ ರಾಜಕಾರಣಕ್ಕೂ ಕರ್ನಾಟಕದ, ಬೆಂಗಳೂರಿನ ಆದಾಯಕ್ಕೂ ನೇರ ಸಂಬಂಧ ಇರುವುದರಿಂದ- ಇದೆಲ್ಲ ಹಿನ್ನೆಲೆಗಳ ಜೊತೆ ಚುನಾವಣೆಯನ್ನು ಗಮನಿಸೋಣ.