ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಶ್ರೀಮಂತರ ದಸರಾ ವೈಭೋಗ

ಆರು ಸಾವಿರ ರೂ. ಕೊಟ್ಟು ಗೋಲ್ಡನ್ ಪಾಸ್ ಪಡೆದುಕೊಂಡವರು ಕೂಡ ಜಂಬೂಸವಾರಿ ನೋಡುವ ಅವಕಾಶದಿಂದ ವಂಚಿತರಾದರು. ಇನ್ನು ಅದಕ್ಕಿಂತ ಕಡಿಮೆ ಮೌಲ್ಯದ ಪಾಸ್ ಪಡೆದವರ ಸ್ಥಿತಿ ಹೇಳತೀರದು. ಇದು ಆಗಿರುವುದು ವಿಐಪಿ ಸಂಸ್ಕೃತಿಯಿಂದ. ಜನರ ತೆರಿಗೆಯ ಹಣದಲ್ಲಿ ಮೋಜು ಮಾಡುವ ವಿವಿಐಪಿಗಳೆಂಬ ಭೂಭಾರಕರು ಇತರ ಅರ್ಹ ಪಾಸ್‌ದಾರರ ಜಾಗವನ್ನು, ಅವಕಾಶವನ್ನು ಕಸಿದುಕೊಂಡರು.

Vishwavani Editorial: ಶ್ರೀಮಂತರ ದಸರಾ ವೈಭೋಗ

-

Profile
Ashok Nayak Oct 23, 2026 8:35 AM

ಈ ವರ್ಷದ ನಾಡಹಬ್ಬ ದಸರಾ, ಮೈಸೂರಿನಲ್ಲಿ ಪಾರಂಪರಿಕ ಜಂಬೂ ಸವಾರಿ ಮೆರವಣಿಗೆ ಯೊಂದಿಗೆ ಸಂಪನ್ನಗೊಂಡಿದೆ. ಆದರೆ, ಒಟ್ಟಾರೆ ದಸರಾ ಮಹೋತ್ಸವ ಸಾಕಷ್ಟು ಅವ್ಯವಸ್ಥೆ ಗಳಿಂದ ಕೂಡಿತ್ತು. ಒಂದು ವರ್ಷ ಕಂಡುಬಂದ ಅವ್ಯವಸ್ಥೆಯನ್ನು ಪರಿಶೀಲಿಸಿ, ಮುಂದಿನ ವರ್ಷಕ್ಕೆ ಅದು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ದಸರಾ ಸಮಿತಿ, ಅಧಿಕಾರಿಗಳು, ಜಿಲ್ಲಾಡಳಿತದ ಜವಾಬ್ದಾರಿ. ಆದರೆ ಅದಾಗಿಲ್ಲ. ಉದಾಹರಣೆಗೆ, ಪಾಸ್‌ಗಳ ಅವ್ಯವಸ್ಥೆ.

ಆರು ಸಾವಿರ ರೂ. ಕೊಟ್ಟು ಗೋಲ್ಡನ್ ಪಾಸ್ ಪಡೆದುಕೊಂಡವರು ಕೂಡ ಜಂಬೂಸವಾರಿ ನೋಡುವ ಅವಕಾಶದಿಂದ ವಂಚಿತರಾದರು. ಇನ್ನು ಅದಕ್ಕಿಂತ ಕಡಿಮೆ ಮೌಲ್ಯದ ಪಾಸ್ ಪಡೆದವರ ಸ್ಥಿತಿ ಹೇಳತೀರದು. ಇದು ಆಗಿರುವುದು ವಿಐಪಿ ಸಂಸ್ಕೃತಿಯಿಂದ. ಜನರ ತೆರಿಗೆಯ ಹಣದಲ್ಲಿ ಮೋಜು ಮಾಡುವ ವಿವಿಐಪಿಗಳೆಂಬ ಭೂಭಾರಕರು ಇತರ ಅರ್ಹ ಪಾಸ್‌ದಾರರ ಜಾಗವನ್ನು, ಅವಕಾಶವನ್ನು ಕಸಿದುಕೊಂಡರು.

ಇದನ್ನೂ ಓದಿ: Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

ಇಂಥವರ ರಕ್ಷಣೆಗೆ ಅಧಿಕಾರಿ ವರ್ಗವೂ ಟೊಂಕ ಕಟ್ಟಿ ನಿಲ್ಲುತ್ತದೆ. ದಸರೆ ನಡೆಯುವುದು ಜನಸಾಮಾನ್ಯರ ತೆರಿಗೆ ಹಣದಿಂದ, ಆದರೆ ಶ್ರೀಸಾಮಾನ್ಯ ಇಲ್ಲಿ ಅನಪೇಕ್ಷಿತ. ಇದರ ನಡುವೆ, ರಾಜ್ಯ ಸಂಪುಟದ ಸಚಿವರನ್ನು ಕೂಡ ಗುರುತಿಸಲಾಗದ ಪೊಲೀಸ್ ಅಧಿಕಾರಿಗಳು ಇಲ್ಲಿ ಸೆಕ್ಯುರಿಟಿಗೆ ನಿಲ್ಲುತ್ತಾರೆ ಎಂಬುದೊಂದು ಚೋದ್ಯವೇ ಸರಿ.

ಸಂಪ್ರದಾಯದ ಪ್ರಕಾರ ವಜ್ರಮುಷ್ಟಿ ಮಲ್ಲಕಾಳಗದ ನಂತರವೇ ಜಂಬೂಸವಾರಿ ಹೊರಡಬೇಕು. ಆದರೆ ಜಟ್ಟಿಕಾಳಗಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಜನಪದ ಕಲಾತಂಡಗಳ ಪರಿಸ್ಥಿತಿ ಪ್ರತೀ ವರ್ಷದಂತೆ ಈ ವರ್ಷವೂ ಶೋಚನೀಯವೇ ಆಗಿತ್ತು. ಅವರ ನೀರುನಿಡಿ ಕೇಳುವವರೂ ಇರಲಿಲ್ಲ. ರೈತ ದಸರಾದಲ್ಲಿಯೂ ರೈತರ ಪಾಡೂ ಅಷ್ಟೇ.

ಜಂಬೂಸವಾರಿ ವೀಕ್ಷಿಸಲು ಹೈವೇ ವೃತ್ತದಲ್ಲಿ ನಿಂತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ, ಮಗುವಿನ ತಲೆಗೆ ಗಂಭೀರ ಗಾಯವಾದ ವರದಿ ಇದೆ. ವಿಐಪಿಗಳ ಸುಖಕ್ಕಾಗಿ ಜನಸಾಮಾನ್ಯರ ಕೊಲೆ ಕೂಡ ಮಾಡಬಹುದೆ? ಇಷ್ಟೆಲ್ಲ ಅವ್ಯವಸ್ಥೆ ಆಗಿದ್ದರೂ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗೂ ಉತ್ತರ ಇಲ್ಲ.

ಮುಂದಿನ ವರ್ಷವೂ ಇದೇ ಮರುಕಳಿಸುತ್ತದೆ. ದಸರಾ ಮಹೋತ್ಸವ ಆಯೋಜನೆಗಾಗಿಯೇ ಒಂದು ಪ್ರಾಧಿಕಾರ ರಚಿಸಿ, ವ್ಯವಸ್ಥೆಗೂ ಅವ್ಯವಸ್ಥೆಗೂ ಅವರೇ ಹೊಣೆ ಎಂದು ಮಾಡಿದರೆ ಮಾತ್ರ ತುಸುವಾದರೂ ಅಚ್ಚುಕಟ್ಟು ನೋಡಬಹುದೇನೋ. ಹದಿನೈದು ದಿನಗಳಲ್ಲಿ ನಡೆಯುವ ದಸರಾ ಉತ್ಸವಗಳನ್ನು ವರ್ಷದುದ್ದಕ್ಕೂ ವಿಸ್ತರಿಸಬೇಕು. ಇದು ಶ್ರೀಮಂತರ ದಸರಾ ಆಗದಂತೆ, ಜನಸಾಮಾನ್ಯರಿಗೆ ವಂಚನೆಯಾಗದಂತೆ ವ್ಯವಸ್ಥೆ ನೋಡಿಕೊಳ್ಳಬೇಕು