ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Leena Joshi Column: ಮಧ್ಯವಯಸ್ಸಿನಲ್ಲಿ ಗಾಂಧಿಯನ್ನು ಕಾಡಿದವಳು

ರವೀಂದ್ರನಾಥ ಟಾಗೋರ್‌ರ ಸಹೋದರಿಯ ಮಗಳು, ಪ್ರಖರ ವಾಗ್ಮಿ, ಸಾಹಿತಿ ಹಾಗೂ ಕ್ರಾಂತಿಕಾರಿ ಮನೋಭಾವದ ಸರಳಾದೇವಿ ಚೌಧುರಾಣಿಯವರೊಂದಿಗೆ ಗಾಂಧೀಜಿಯವರಿಗಿದ್ದ ಸಂಬಂಧವು ಅತ್ಯಂತ ಕುತೂಹಲಕಾರಿ, ಗಾಢವಾದ ಹಾಗೂ ಐತಿಹಾಸಿಕವಾಗಿ ಹೆಚ್ಚು ಚರ್ಚೆಗೆ ಗ್ರಾಸವಾದ ಅಧ್ಯಾಯ. ಸರಳಾದೇವಿ, ರವೀಂದ್ರನಾಥ ಟಾಗೋರ್‌ರ ಸಹೋದರಿ ಸ್ವರ್ಣಕುಮಾರಿ ದೇವಿಯವರ ಪುತ್ರಿ.

Leena Joshi Column: ಮಧ್ಯವಯಸ್ಸಿನಲ್ಲಿ ಗಾಂಧಿಯನ್ನು ಕಾಡಿದವಳು

-

Profile
Ashok Nayak Oct 10, 2026 8:52 AM

ಅಮೃತಕಾಲ

ಲೀನಾ ಜೋಶಿ

ಗಾಂಧಿಯನ್ನು ನಾವು ಅಹಿಂಸೆಯ ರೂವಾರಿ, ಬಡಕಲು ದೇಹದ, ತುಂಡು ಬಟ್ಟೆಯ, ಬೊಚ್ಚ ಬಾಯಿಯ, ಗುಂಡಗಿನ ಕನ್ನಡಕದ ನಿರ್ಲಿಪ್ತ ಯೋಗಿಯಂತೆ ನೋಡುತ್ತೇವೆ. ಗಾಂಧಿಯ ಯವ್ವನದ, ಮಧ್ಯ ವಯಸ್ಸಿನ ಬದುಕಿನಲ್ಲಿಳಿದು ನೋಡಿದಾಗ, ಅವರೂ ಕೂಡ ಭಾವನೆಗಳು, ಆಕರ್ಷಣೆಗಳು, ತಲ್ಲಣಗಳು ಮತ್ತು ಆಂತರಿಕ ಸಂಘರ್ಷಗಳನ್ನು ಎದುರಿಸಿದ ಒಬ್ಬ ಸಾಮಾನ್ಯ ಮನುಷ್ಯರೇ ಆಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನಾವು ಅವಲೋಕಿಸಿದಾಗ, ಗಾಂಧಿಯ ಜೀವನವು ಒಂದು ಮುಕ್ತ ಪುಸ್ತಕದಂತಿತ್ತು. ಅವರ ಸತ್ಯಶೋಧನೆ, ಬ್ರಹ್ಮಚರ್ಯ ಪ್ರಯೋಗಗಳು, ಅಹಿಂಸಾ ಮಾರ್ಗ ಮತ್ತು ರಾಜಕೀಯ ಚಳವಳಿಗಳು ಇಂದಿಗೂ ಜಗತ್ತಿಗೆ ಮಾದರಿಯಾಗಿವೆ. ಇವಾಗ ನಾವು ಮಿಡ್‌ಲೈಫ್ ಕ್ರೈಸಿಸ್ ಎಂದು ಹೆಸರಿಟ್ಟಿರುವ ಭಾವನೆಗಳ ಮಹಾಪೂರದಲ್ಲಿ ಗಾಂಧಿ ಕೂಡ ಮಿಂದಿದ್ದರು. ‌

ರವೀಂದ್ರನಾಥ ಟಾಗೋರ್‌ರ ಸಹೋದರಿಯ ಮಗಳು, ಪ್ರಖರ ವಾಗ್ಮಿ, ಸಾಹಿತಿ ಹಾಗೂ ಕ್ರಾಂತಿಕಾರಿ ಮನೋಭಾವದ ಸರಳಾದೇವಿ ಚೌಧುರಾಣಿಯವರೊಂದಿಗೆ ಗಾಂಧೀಜಿಯವರಿಗಿದ್ದ ಸಂಬಂಧವು ಅತ್ಯಂತ ಕುತೂಹಲಕಾರಿ, ಗಾಢವಾದ ಹಾಗೂ ಐತಿಹಾಸಿಕವಾಗಿ ಹೆಚ್ಚು ಚರ್ಚೆಗೆ ಗ್ರಾಸವಾದ ಅಧ್ಯಾಯ. ಸರಳಾದೇವಿ, ರವೀಂದ್ರನಾಥ ಟಾಗೋರ್‌ರ ಸಹೋದರಿ ಸ್ವರ್ಣಕುಮಾರಿ ದೇವಿಯವರ ಪುತ್ರಿ.

ಬಂಗಾಳವು ಆ ಸಮಯದಲ್ಲಿ ಭಾರತದ ನವೋದಯ ಮತ್ತು ಆಧುನಿಕ ಶಿಕ್ಷಣದ ಕೇಂದ್ರವಾಗಿತ್ತು. ಸರಳಾ ದೇವಿ ಪ್ರತಿಷ್ಠಿತ ಟಾಗೋರ್ ಕುಟುಂಬದವರು; ಅತ್ಯಂತ ತೀಕ್ಷ್ಣ ಬುದ್ಧಿಮತ್ತೆ, ಸಾಹಿತ್ಯಿಕ ಜ್ಞಾನ, ದಿಟ್ಟತನ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ಅಪರೂಪದ ಸ್ತ್ರೀ. ಲೇಖಕಿ, ಗಾಯಕಿ, ಸಂಘಟಕಿ ಮತ್ತು ರಾಷ್ಟ್ರವಾದಿ ಚಿಂತಕಿಯಾಗಿ ಅವರು ತಮ್ಮದೇ ಆದ ಸಾರ್ವಜನಿಕ ಬದುಕನ್ನು ಕಟ್ಟಿಕೊಂಡಿದ್ದರು.

ಇದನ್ನೂ ಓದಿ: Leena Joshi Column: ಬಕೆಟ್‌ ಹಿಡಿದವರ ಬಾಳು ಬಂಗಾರವಾ ?

ಮಹಿಳೆಯರ ಶಿಕ್ಷಣ ಮತ್ತು ಸಂಘಟನೆಗಾಗಿ ‘ಭಾರತ್ ಸ್ತ್ರೀ ಮಹಾಮಂಡಲ’ ಸ್ಥಾಪಿಸಿದ್ದರು. ಗಾಂಧೀಜಿ ಮತ್ತು ಸರಳಾದೇವಿ 1901ರ ಭೇಟಿಯಾಗಿದ್ದರೂ ಕೂಡ 1919ರ ನಂತರ ಅವರ ಸಂಬಂಧದಲ್ಲಿ ತೀವ್ರತೆ ಕಾಣಿಸಿಕೊಂಡಿತು. ಆ ಸಮಯದಲ್ಲಿ ಗಾಂಧಿಯನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ದೊಡ್ಡ ತಿರುವನ್ನು ಎದುರಿಸುತ್ತಿದ್ದರು. ರೌಲಟ್ ಕಾಯ್ದೆಯ ವಿರುದ್ಧದ ಹೋರಾಟ, ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ನಂತರದ ರಾಷ್ಟ್ರೀಯ ಆಕ್ರೋಶ ಮತ್ತು ಸ್ವಾತಂತ್ರ್ಯ ಚಳವಳಿಯ ವಿಸ್ತರಣೆ ಇವೆಲ್ಲವೂ ಅವರ ಜೀವನದ ಮೇಲೆ ಗಾಢ ಪರಿಣಾಮ ಬೀರಿದ್ದವು. ಈ ಸಂದರ್ಭದಲ್ಲಿ ಸರಳಾದೇವಿಯವರೊಂದಿಗೆ ಬೆಳೆದ ಆತ್ಮೀಯತೆ ಅವರಿಗೆ ಮಾನಸಿಕವಾಗಿ ಮಹತ್ವದ್ದಾಗಿತ್ತು.

ಗಾಂಧಿ, ಸರಳಾದೇವಿಗೆ ಬರೆದ ಸುಮಾರು ನಲವತ್ತು (ಉಪಲಬ್ಧವಿರುವ) ಪತ್ರಗಳಲ್ಲಿ ತೀವ್ರವಾದ ಮೆಚ್ಚುಗೆ ಮತ್ತು ಭಾವನಾತ್ಮಕ ಆಪ್ತತೆಯನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ. ಇದೇ ಸಂಬಂಧ ಅವರೊಳಗೆ ಒಂದು ಸಂಘರ್ಷವನ್ನೂ ಹುಟ್ಟುಹಾಕಿತು. ಒಂದೆಡೆ ಅವರು ಬ್ರಹ್ಮಚರ್ಯ, ಆತ್ಮಸಂಯಮ ಮತ್ತು ಇಂದ್ರಿಯನಿಗ್ರಹದ ಆದರ್ಶಗಳನ್ನು ಪಾಲಿಸಲು ಬದ್ಧರಾಗಿದ್ದರು. ಮತ್ತೊಂದೆಡೆ, ಸರಳಾದೇವಿಯವರ ಮೇಲಿನ ತಮ್ಮ ಭಾವನಾತ್ಮಕ ಆಕರ್ಷಣೆಯನ್ನು ನಿರ್ಲಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಬ್ಬರ ನಡುವಿನ ಸಂಬಂಧದಲ್ಲಿ ಬೌದ್ಧಿಕ ಮೆಚ್ಚುಗೆ, ಭಾವನಾತ್ಮಕ ಅವಲಂಬನೆ, ಆಧ್ಯಾತ್ಮಿಕ ಭಾಷೆ ಮತ್ತು ವೈಯಕ್ತಿಕ ಆತ್ಮಪರಿಶೀಲನೆ ಪರಸ್ಪರ ಬೆರೆತಿದ್ದವು.

ಗಾಂಧಿಯ ಜೀವನದ ಈ ಅಧ್ಯಾಯವು ಅವರ ಆದರ್ಶಗಳು ಎಷ್ಟು ಉನ್ನತವಾಗಿದ್ದವು ಎಂಬುದನ್ನಷ್ಟೇ ಅಲ್ಲ, ಅವುಗಳನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಅವರು ಎದುರಿಸಿದ ಮಾನಸಿಕ ತುಮುಲಗಳನ್ನೂ ತೋರಿಸುತ್ತದೆ. ಸರಳಾದೇವಿಯವರು 1905ರಲ್ಲಿ ರಾಮಭುಜ್ ದತ್ ಚೌಧುರಿಯನ್ನು ವಿವಾಹವಾದರು. ಆಗ ಅವರಿಗೆ 33 ವರ್ಷ ವಯಸ್ಸಾಗಿತ್ತು. ಆ ಕಾಲದಲ್ಲಿ ಮಹಿಳೆಯರ ವಿವಾಹವು 9-13 ವಯಸ್ಸಿನಲ್ಲಿ ನಡೆಯುತ್ತಿತ್ತು.

71

ಸರಳಾದೇವಿಯವರು ವಿದ್ಯಾವಂತ ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಕುಟುಂಬದಿಂದ ಬಂದವರು. ವಿವಾಹದ ನಂತರ ಪಂಜಾಬ್‌ನಲ್ಲಿ ಪತಿಯ ರಾಷ್ಟ್ರೀಯ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ಪತ್ರಿಕೋದ್ಯಮ, ರಾಷ್ಟ್ರೀಯತೆ ಮತ್ತು ಮಹಿಳಾ ಜಾಗೃತಿಗೆ ಸಂಬಂಧಿಸಿದ ಚಟುವಟಿಕೆ ಗಳಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಅವರ ಜೀವನವನ್ನು ಕೇವಲ ಗಾಂಧಿಯೊಂದಿಗಿನ ಸಂಬಂಧದ ಮೂಲಕ ಅರ್ಥಮಾಡಿಕೊಳ್ಳುವುದು ಅವರ ಸಾಧನೆಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವರು ತಮ್ಮ ಕಾಲದ ಪ್ರಮುಖ ಮಹಿಳಾ ರಾಷ್ಟ್ರೀಯತಾವಾದಿಗಳಲ್ಲಿ ಒಬ್ಬರಾಗಿದ್ದರು.

ಸರಳಾದೇವಿಯವರ ಬೌದ್ಧಿಕ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಸ್ವಾಮಿ ವಿವೇಕಾನಂದರೂ ಮೆಚ್ಚಿಕೊಂಡಿದ್ದರು ಹಾಗೂ ಬ್ರಿಟನ್‌ನಲ್ಲಿ ತಮ್ಮ ಕಾರ್ಯಕ್ಕೆ ಬೆಂಬಲ ನೀಡುವಂತೆ ಅವರಿಗೆ ಪತ್ರ ಬರೆದಿದ್ದರು. ಗಾಂಧೀಜಿ ಸರಳಾದೇವಿಯನ್ನು ‘ಆಧ್ಯಾತ್ಮಿಕ ಪತ್ನಿ’ ಎಂದು ಕರೆಯುತ್ತಿದ್ದರು. ಈ ಪದಗಳು ಇಂದಿನ ಓದುಗರಿಗೆ ವಿಚಿತ್ರವಾಗಿ ಕಾಣಬಹುದು. ಆದರೆ ಅವರ ಅರ್ಥದಲ್ಲಿ ಅದು ದೈಹಿಕ ದಾಂಪತ್ಯವಲ್ಲ. 1920ರ ಡಿಸೆಂಬರ್‌ನಲ್ಲಿ ಗಾಂಧೀಜಿ ‘ಆಧ್ಯಾತ್ಮಿಕ ವಿವಾಹ’ದ ಬಗ್ಗೆ ಬರೆದಾಗ, ದೈಹಿಕ ಸಂಬಂಧವಿಲ್ಲದ, ಆದರೆ ಎರಡು ವ್ಯಕ್ತಿಗಳ ಸಹಭಾಗಿತ್ವವನ್ನು ವಿವರಿಸಿದ್ದರು. ಅದೇ ಸಮಯದಲ್ಲಿ, ತಾನು ಅಂತಹ ಸಂಬಂಧಕ್ಕೆ ಯೋಗ್ಯನಾಗಿದ್ದೇನೆಯೇ ಎಂಬ ಆತ್ಮಸಂಶಯವೂ ಅವರ ಬರಹಗಳಲ್ಲಿ ಕಾಣುತ್ತದೆ. ಇಲ್ಲಿಯೇ ಈ ಸಂಬಂಧದ ಸಂಕೀರ್ಣತೆ ಆರಂಭವಾಗುತ್ತದೆ.

ಸರಳಾದೇವಿಯವರ ವ್ಯಕ್ತಿತ್ವದಲ್ಲಿ ಗಾಂಧೀಜಿಯವರು ಕಂಡದ್ದು ಕೇವಲ ಸೌಂದರ್ಯವಲ್ಲ; ಬೌದ್ಧಿಕ ಚೈತನ್ಯ, ಆತ್ಮವಿಶ್ವಾಸ, ದೇಶಭಕ್ತಿ ಮತ್ತು ತಮ್ಮ ಆಲೋಚನೆಗಳನ್ನು ಪ್ರಭಾವಶಾಲಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯ. ರಾಮಚಂದ್ರ ಗುಹಾ ಅವರು Gandhi: The Years That Changed the World, 1914-1948 ಕೃತಿಯಲ್ಲಿ ಗಾಂಧೀಜಿ-ಸರಳಾದೇವಿ ಸಂಬಂಧವನ್ನು ತೀವ್ರವಾದ, ಭಾವನಾತ್ಮಕವಾಗಿ ತುಂಬಿದ ಮತ್ತು ಕೊನೆಯಲ್ಲಿ ದೈಹಿಕವಾಗಿ ನೆರವೇರದ ಸಂಬಂಧವೆಂದು ವಿವರಿಸುತ್ತಾರೆ.

ಗಾಂಧೀಜಿ ಸರಳಾದೇವಿಯ ಬಗ್ಗೆ ಆಕರ್ಷಿತರಾಗಿದ್ದರು; ಹಗಲು ರಾತ್ರಿ ಅವರ ಬಗ್ಗೆ ಯೋಚಿಸು ತ್ತಿದ್ದರು, ಕನಸುಗಳನ್ನೂ ಕಾಣುತ್ತಿದ್ದರು. ಸರಳಾದೇವಿಯವರಿಗೂ ಗಾಂಧೀಜಿಯವರ ಗಮನ ಮತ್ತು ಆತ್ಮೀಯತೆ ಮಹತ್ವದ್ದಾಗಿತ್ತು. ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗಗಳು, ಆತ್ಮನಿಗ್ರಹದ ಕಲ್ಪನೆ ಮತ್ತು ಭಾವನೆಗಳನ್ನು ಆಧ್ಯಾತ್ಮಿಕ ಶಕ್ತಿಯಾಗಿ ಪರಿವರ್ತಿಸಬೇಕೆಂಬ ಅವರ ನಿರಂತರ ಪ್ರಯತ್ನ ಇವೆಲ್ಲವೂ ಈ ಸಂಬಂಧದೊಳಗೆ ಬೆರೆತಿದ್ದವು. 1920ರ ಆರಂಭದಲ್ಲಿ ಸರಳಾದೇವಿ ಕೆಲಕಾಲ ಸಬರಮತಿ ಆಶ್ರಮದಲ್ಲಿಯೂ ಇದ್ದರು. ಅವರ ಮಗ ದೀಪಕ್ ಕೂಡ ಜೊತೆಗಿದ್ದ.

ಸರಳಾದೇವಿಯ ಆಶ್ರಮದಲ್ಲಿನ ವಾಸವು ಗಾಂಧೀಜಿಯವರ ಆಪ್ತ ವಲಯದಲ್ಲೂ ಚರ್ಚೆಗೆ ಮತ್ತು ಕಾರಣವಾಯಿತು. ಅವರ ಆಪ್ತ ಮಿತ್ರ ರಾಜಾಜಿಗೆ ಈ ಸಂಬಂಧದ ಬಗ್ಗೆ ಆತಂಕವಿತ್ತು. ಗಾಂಧೀಜಿಯವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಕಳಂಕ ಬರಬಹುದೆಂಬ ಭಯ ಸಹಜವಾಗಿತ್ತು.

ಗಾಂಧೀಜಿಯವರ ಭಾವನೆಗಳು ಸರಳಾದೇವಿಯವರ ಕಡೆಗೆ ಹೆಚ್ಚು ತೀವ್ರವಾಗುತ್ತಿರುವುದನ್ನು ಗಮನಿಸಿದ ರಾಜಾಜಿ, ಆ ಸಂಬಂಧದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದರು. ರಾಜಾಜಿ ಯವರ ಈ ಎಚ್ಚರಿಕೆಯ ಹಿಂದೆ ಸ್ನೇಹಿತನ ಮೇಲಿನ ಕಾಳಜಿಯ ಜೊತೆಗೆ ಸಾರ್ವಜನಿಕ ಜೀವನದ ನೈತಿಕ ಹೊಣೆಗಾರಿಕೆಯ ಅರಿವೂ ಇತ್ತು. ಅಂತಿಮವಾಗಿ ಗಾಂಧಿ ಸರಳಾದೇವಿಯಿಂದ ಸ್ವಲ್ಪ ದೂರ ಸರಿಯಲು ಆರಂಭಿಸಿದರು. ಆದರೆ ಸಂಬಂಧ ಸಂಪೂರ್ಣವಾಗಿ ಮುರಿಯಲಿಲ್ಲ; ಆತ್ಮೀಯತೆ ಮತ್ತು ಪತ್ರವ್ಯವಹಾರ ಮುಂದುವರಿಯಿತು. ಸರಳಾದೇವಿ ಗಾಂಧಿಗೆ ಬರೆದ ಪತ್ರಗಳ ಪೈಕಿ ಕೇವಲ 4 ಪತ್ರಗಳು ಸಾಬರಮತಿ ಆಶ್ರಮದಲ್ಲಿವೆ.

Geraldine Forbes ಅವರ ಸಂಶೋಧನೆಯ ಪ್ರಕಾರ, ಸರಳಾದೇವಿ ಗಾಂಧೀಜಿಗೆ ಬರೆದ ಪತ್ರಗಳು ದೇವದಾಸ್ ಗಾಂಧಿಯವರ ವಶದಲ್ಲಿದ್ದವು. ದೇವದಾಸ್ ಅವರ ಮರಣದ ನಂತರ ಅವರ ಪತ್ನಿ ಲಕ್ಷ್ಮಿ ಗಾಂಧಿ ಅವುಗಳನ್ನು ನಾಶಮಾಡಿದರು ಎನ್ನಲಾಗುತ್ತದೆ. ಗಾಂಧೀಜಿ ಸರಳಾದೇವಿಗೆ ಬರೆದ ಅನೇಕ ಪತ್ರಗಳಿವೆ; ಆದರೆ ಸರಳಾದೇವಿಯ ಉತ್ತರಗಳು ಬಹಳ ಕಡಿಮೆ. ಅಂದರೆ ನಾವು ಒಂದು ಅರ್ಧ ಸಂಭಾಷಣೆ ಓದುತ್ತಿದ್ದೇವೆ.

ಗಾಂಧಿಯವರ ಧ್ವನಿ ಕೇಳಿಸುತ್ತದೆ; ಸರಳಾದೇವಿಯ ಧ್ವನಿ ಬಹುತೇಕ ಮೌನವಾಗಿದೆ. ನಂತರದ ವರ್ಷ ಗಳಲ್ಲಿ ಸರಳಾದೇವಿಯವರಿಂದ ಬಂದ ದೀಪಕ್-ಇಂದಿರಾ ವಿವಾಹದ ಪ್ರಸ್ತಾಪವನ್ನು ಗಾಂಧಿ ಜವಾಹರ ಲಾಲ್ ನೆಹರೂಗೆ ಕಳುಹಿಸಿದ್ದರು. ಆಗ ಇಂದಿರಾಗೆ ಸುಮಾರು 15 ವರ್ಷ; ದೀಪಕ್ ಅವರಿಗಿಂತ 10 ವರ್ಷ ದೊಡ್ಡವನಾಗಿದ್ದ. ನೆಹರೂ ಇದಕ್ಕೆ ಹೆಚ್ಚು ಆಸಕ್ತಿ ತೋರಲಿಲ್ಲ, ಆ ವಿವಾಹ ನಡೆಯಲಿಲ್ಲ. ಕೊನೆಗೆ ದೀಪಕ್ ಮದುವೆಯಾದದ್ದು ಗಾಂಧೀಜಿಯವರ ಕುಟುಂಬದ ಮತ್ತೊಬ್ಬ ಸದಸ್ಯೆ ರಾಧಾ ಗಾಂಧಿಯನ್ನು.

ರಾಧಾ, ಗಾಂಧೀಜಿಯವರ ಆಪ್ತ ಸಹಚರ ಮಾಗನ್ಲಾಲ್ ಗಾಂಧಿಯವರ ಪುತ್ರಿ. ಸರಳಾದೇವಿ ಮತ್ತು ಗಾಂಧೀಜಿ ಇಬ್ಬರೂ ನಿಧನರಾದ ನಂತರ ದೀಪಕ್ ಮತ್ತು ರಾಧಾ ವಿವಾಹವಾಯಿತು. 1919-1920ರ ಅವಧಿಯಲ್ಲಿ ಗಾಂಧೀಜಿಯವರಿಗೆ ಐವತ್ತು ವರ್ಷಗಳಾಗಿದ್ದವು. ದೇಶದ ಸ್ವಾತಂತ್ರ್ಯ ಹೋರಾಟ, ರಾಜಕೀಯ ಒತ್ತಡಗಳು ಸೇರಿದಂತೆ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ, ಬೌದ್ಧಿಕವಾಗಿ ಸಂವಾದ ನಡೆಸುವ ಮತ್ತು ಭಾವನಾತ್ಮಕವಾಗಿ ಆಸರೆಯಾಗಬಲ್ಲ ಸಂಗಾತಿಯ ಅಗತ್ಯ ಅವರಿಗೆ ಇದ್ದಿರ ಬಹುದೇ? ಗಾಂಧೀಜಿ ಯವರ ಪತ್ನಿ ಕಸ್ತೂರಬಾ ಅವರಿಗಿಂತ ಸುಮಾರು ಆರು ತಿಂಗಳು ಹಿರಿಯರು.

ಕಸ್ತೂರಬಾರಲ್ಲಿರದ ವಿದ್ಯೆ, ಬೌದ್ಧಿಕ ಸಾಮರ್ಥ್ಯ ಮತ್ತು ರಾಷ್ಟ್ರೀಯ ಚಿಂತನೆಗಳು ಗಾಂಧೀಜಿಯ ವರನ್ನು ವಿಶೇಷವಾಗಿ ಆಕರ್ಷಿಸಿದ್ದಿರಬಹುದು. ಐವತ್ತು ವರ್ಷಗಳ ವಯಸ್ಸಿನಲ್ಲಿ, ದೇಶದ ಭಾರೀ ಜವಾಬ್ದಾರಿ ಗಳನ್ನು ಹೊತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಬಯಸುವುದು ಸಹಜವೇ. ಗಾಂಧೀಜಿಯವರು ಸರಳಾದೇವಿಯವರಲ್ಲಿ ಅಂತಹ ಮಾನಸಿಕ ಸಂಗಾತಿಯನ್ನು ಕಂಡಿರಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಗಾಂಧೀಜಿ-ಸರಳಾದೇವಿ ಸಂಬಂಧವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಬಹುಶಃ ಅದಕ್ಕೆ ಒಂದೇ ಉತ್ತರ ಇಲ್ಲ. ಅದು ಪ್ರೀತಿ ಇರಬಹುದು; ಬೌದ್ಧಿಕ ಆಕರ್ಷಣೆ ಇರಬಹುದು; ಆಧ್ಯಾತ್ಮಿಕ ಸಹಭಾಗಿತ್ವದ ಪ್ರಯತ್ನ ಇರಬಹುದು; ಇವೆಲ್ಲವೂ ಒಂದೇ ಸಮಯದಲ್ಲಿ ಇರಬಹುದು. ಗಾಂಧೀಜಿಯವರ ಜೀವನದ ಮಹತ್ವವೆಂದರೆ ಅವರು ತಪ್ಪುಗಳಿಲ್ಲದ ದೇವಮಾನವನಾಗಿದ್ದರೆಂದು ಅಲ್ಲ.

ತಮ್ಮ ಭಾವನೆಗಳನ್ನೂ, ಆಸೆಗಳನ್ನೂ, ದುರ್ಬ ಲತೆಗಳನ್ನೂ ನಿರಂತರವಾಗಿ ಪರೀಕ್ಷಿಸಿಕೊಂಡ ಮನುಷ್ಯ ರಾಗಿದ್ದರಿಂದ. ಇತಿಹಾಸದ ಮಹಾನ್ ವ್ಯಕ್ತಿಗಳನ್ನು ದೇವರನ್ನಾಗಿ ಮಾಡಿದಾಗ ಅವರ ಮಾನವೀ ಯತೆಯನ್ನು ಕಳೆದುಕೊಳ್ಳುತ್ತೇವೆ. ಅವರನ್ನು ಕೇವಲ ಹಗರಣದ ಪಾತ್ರಗಳನ್ನಾಗಿ ಮಾಡಿದಾಗ ಅವರ ಸಂಕೀ ರ್ಣತೆಯನ್ನು ಕಳೆದುಕೊಳ್ಳುತ್ತೇವೆ. ಗಾಂಽಜಿ ಮತ್ತು ಸರಳಾದೇವಿಯವರ ಕಥೆ ಈ ಎರಡರ ಮಧ್ಯದಲ್ಲಿದೆ. ಇಂದಿನ ಜಗತ್ತಿನಲ್ಲಿ ಸಾರ್ವಜನಿಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಬದುಕಿನ ಸೂಕ್ಷ್ಮ ವಿಚಾರ ಗಳನ್ನು ಇಷ್ಟು ಮುಕ್ತವಾಗಿ ಬಹಿರಂಗಪಡಿಸುವುದನ್ನು ನಿರೀಕ್ಷಿಸುವುದು ಕಷ್ಟ.

ಗಾಂಧೀಜಿಯವರ ವಿಶೇಷತೆಯೆಂದರೆ, ತಮ್ಮ ಆದರ್ಶಗಳಿಗೆ ಸವಾಲೊಡ್ಡಿದ ಭಾವನೆಗಳು ಮತ್ತು ಆಂತರಿಕ ಸಂಘರ್ಷಗಳ ಬಗ್ಗೆಯೂ ಆತ್ಮಪರಿಶೀಲನೆ ನಡೆಸಿ, ಅವುಗಳನ್ನು ತಮ್ಮ ಬರಹಗಳಲ್ಲಿ ದಾಖಲಿಸಲು ಅವರು ಸಿದ್ಧರಾಗಿದ್ದರು. ಅವರ ಪ್ರತಿಯೊಂದು ನಡೆಗೂ ಸಮರ್ಥನೆ ನೀಡಬೇಕೆಂದಲ್ಲ. ಬದಲಾಗಿ, ತಮ್ಮನ್ನು ಟೀಕೆಗೆ ಮೀರಿದ ವ್ಯಕ್ತಿಯೆಂದು ಬಿಂಬಿಸದೆ, ತಮ್ಮ ದೌರ್ಬಲ್ಯಗಳನ್ನೂ ಪರಿಶೀಲನೆಗೆ ಒಳಪಡಿಸಿದ ಅವರ ಮನೋಭಾವ ಶ್ಲಾಘನೀಯ.